ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಸರಗೋಡಿನಲ್ಲಿ ಮಾತನಾಡುತ್ತಾ ನಾ ದಾಮೋದರ ಶೆಟ್ಟಿ ಹೇಳಿದ್ದು

ನಾ ದಾಮೋದರ ಶೆಟ್ಟಿ

(ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಜಿಲ್ಲಾ ಸಮ್ಮೇಳನ, ಕುಂಬಳೆ)

ಕಾಸರಗೋಡು ಜಿಲ್ಲೆಯ ಕನ್ನಡದ ಸಮಸ್ತ ಸಾಂಸ್ಕೃತಿಕ ಬಂಧುಗಳೆ,
ಈ ಪ್ರದೇಶ ಬಿಟ್ಟು ಅದೆಷ್ಟು ಕಾಲವಾದರೂ ನಾನು ಹುಟ್ಟಿ ಬೆಳೆದ ನಾಯ್ಕಾಪು ದೇಸವನ್ನು, ತೊದಲು ಅಕ್ಷರ ಕಲಿತ ಸೂರಂಬೈಲು ಶಾಲೆಯನ್ನು, ಒಡನಾಡಿಗಳನ್ನು ಸಂಪಾದಿಸಿದ, ಬದುಕಿನ ಒಡನಾಡಿಯಾದ ರಂಗಭೂಮಿಗೆ ನಾಂದಿಹಾಡಿದ ಕುಂಬಳೆಯನ್ನು, ಉನ್ನತ ವಿದ್ಯಾಭ್ಯಾಸಕ್ಕೆ ನಡುಪಾಯ ಹಾಕಿಕೊಟ್ಟ ಕಾಸರಗೋಡನ್ನು ಮರೆತೆನೆಂದರೆ ಹೇಗೆ ಮರೆಯಲಿ?
‘ಕಾಸರಗೋಡು ಕನ್ನಡ ನಾಡು, ಚಿನ್ನತ ಗೂಡು ಎಂಕ್ಲೆಗ್ ಬೋಡು’ ಎಂಬ ಘೋಷಣೆ ಕೂಗುತ್ತಾ ಶಾಲೆ ಶಾಲೆಗಳಿಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಕಾಸರಗೋಡು ಕರ್ನಾಟಕಕ್ಕೆ ಸೇರಲೇಬೇಕು ಎಂಬ ಧ್ಯೇಯವಾಕ್ಯದೊಂದಿಗೆ ಮೆರವಣಿಗೆ ಹೊರಡಿಸುತ್ತಿದ್ದ ದಿನಗಳನ್ನು ಹೇಗೆ ತಾನೆ ಮರೆಯಲಿ?
ಕಾಸರಗೋಡಿನ ಕನ್ನಡಿಗರು ಪಟ್ಟ, ಪಡುತ್ತಿರುವ ಮಾನಸಿಕ ದುಗುಡಕ್ಕೆ ಪರಿಹಾರ ಕಾಣಲೆಂದು ಅಂದಿನಿಂದ ಹೋರಾಡುತ್ತ ಬಂದ ಕಳ್ಳಿಗೆ ಮಹಾಬಲ ಭಂಡಾರಿ, ಯು.ಪಿ.ಕುಣಿಕುಳ್ಳಾಯ, ಕಯ್ಯಾರ ಕಿಞ್ಞಣ್ಣ ರೈ ಮುಂತಾದವರು ಇಂದು ಬದಿಗೆ ಸರಿದಿದ್ದಾರೆ, ಸರಿಯುತ್ತಲೇ ಇದ್ದಾರೆ. ಹೋರಾಟವೋ ಮೂಲದ ಕಾವು ಕಳೆದು ಕೊಂಡಿದೆ, ಅದು ತಪ್ಪಲ್ಲ. ಎಂಥ ಹೋರಾಟವಾದರೂ ಸರಿಯೆ; ಅದಕ್ಕೂ ಒಂದು ಕಾಲಮಿತಿ ಎಂಬುದಿರುತ್ತದೆ. ಇಂದಿನ ಯುವ ತಲೆಮಾರು ಸ್ವಾತಂತ್ರ್ಯ ಹೋರಾಟದ ಕಾಠಿಣ್ಯದ ಅರಿವಿಲ್ಲದೆಯೇ ಸ್ವಾತಂತ್ರ್ಯ ಪಡೆದವರು. ಅದು ಎಷ್ಟೊಂದು ತ್ರಾಸದಾಯಕ ಹೋರಾಟ ಎಂಬುದರ ಅರಿವಾಗಲೀ ಪರಿವೆಯಾಗಲೀ ಅವರಿಗಿಲ್ಲ. ಅಂತೆಯೇ ಕಾಸರಗೋಡಿನ ಪ್ರಶ್ನೆ ಕೂಡ.
ಇಂದೀಗ ಕಾಸರಗೋಡಿನ ಕನ್ನಡಿಗರಿಗೆ -ಉದ್ಯೋಗ ನಿಮಿತ್ತವಾಗಿಯೋ ವಿದ್ಯಾಭ್ಯಾಸ ನಿಮಿತ್ತವಾಗಿಯೋ ಮಲಯಾಳ ಕಲಿಯಲೇಬೇಕೆಂಬ ಕೇರಳ ಸರಕಾರದ ಕಟ್ಟುಪಾಡು ನಿಮಿತ್ತವಾಗಿಯೋ- ಸಮಸ್ಯೆಗಳು ಉದ್ಭವಿಸಿದಾಗ ಮಾತ್ರ ನಮ್ಮತನವನ್ನು ಉಳಿಸಿಕೊಳ್ಳುವ ಕಾರಣಕ್ಕಾಗಿ ಹೋರಾಟ ಅನಿವಾರ್ಯ. ಕಾಸರಗೋಡು ಕೇರಳಕ್ಕೆ ಸೇರಿಹೋದ ಆ ದಿನಗಳಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಅದೊಂದು ಸ್ವಾತಂತ್ರ್ಯ ಹೋರಾಟವೇ ಆಗಿತ್ತು. ಇಂದೀಗ ಅಂಥ ಹೋರಾಟದ ಸೂಕ್ಷ್ಮತೆಗಳು ಕೂಡ ಸ್ವಾರ್ಥಪರರ ಕೈಗೆ ಸಿಲುಕಿ ನಲುಗಿ ಹೋಗಿವೆ.
ಕರ್ನಾಟಕವನ್ನು ವಿವಿಧ ಕಾರಣಗಳಿಗೆ ನಂಬಿಕೊಂಡು ಬಂದಿದ್ದ ಕಾಸರಗೋಡಿಗರು ಇನ್ನು ಮುಂದಿನ ದಿನಗಳಲ್ಲಿ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಕುರಿತಾದ ಘೋಷಣೆ ಕೂಗಲಾರರು. ‘ಮಹಾಜನ ವರದಿ ಜಾರಿಯಾಗಲೇಬೇಕು’ ಎಂಬುದು ಕರ್ನಾಟಕ ರಾಜ್ಯದ ಚುನಾವಣಾ ಘೋಷಣೆಗಳಲ್ಲಿ ಒಂದಾಗಿಯೂ ಬಹುಕಾಲ ಮೆರೆದಿತ್ತು. ಈಗ ಕರ್ನಾಟಕದ್ದು ಏನಿದ್ದರೂ ಗಡಿನಾಡ ಕನ್ನಡಿಗರ ಮೊಣಕೈಗೆ ಜೇನುತುಪ್ಪ ಸವರುವ ಪಾತ್ರ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಕಂಡಾಗ ಇಡಿಯ ಕರ್ನಾಟಕ ಸರಕಾರ ನಮ್ಮ ಜೊತೆ ಇದೆ ಎಂದು ಭಾವಿಸಿದರೆ ತಪ್ಪಾಗಬಹುದು. ಕರ್ನಾಟಕದ ಜಿಲ್ಲೆಜಿಲ್ಲೆಗಳಲ್ಲಿ ನಡೆಸುವ ಸಮ್ಮೇಳನಕ್ಕೆ ಸಾಹಿತ್ಯ ಪರಿಷತ್ತು ಎಷ್ಟು ಮೊತ್ತ ಬಿಡುಗಡೆ ಮಾಡುತ್ತದೋ ಅಷ್ಟು ಹೊರನಾಡ, ಗಡಿನಾಡ ಸಮ್ಮೇಳನಗಳಿಗೆ ಬಿಡುಗಡೆ ಮಾಡುವುದಿಲ್ಲ. ವಾಸ್ತವವಾಗಿ ಕನ್ನಡದ ಉಳಿವಿಗಾಗಿ ನಡೆಸುವ ಅಹರ್ನಿಶಿ ಹೋರಾಟವೆಂದೇ ಕರ್ನಾಟಕ ಸರಕಾರ ಕಾಸರಗೋಡು ಕನ್ನಡಿಗರ ಸಕಲ ಸಾಂಸ್ಕೃತಿಕ, ಸಾಹಿತ್ಯಕ ಚಟುವಟುವಟಿಕೆಗಳನ್ನು ಪರಿಭಾವಿಸಬೇಕು.
ಒಂದು ಅಕಾಡೆಮಿಯ ಸದಸ್ಯತ್ವವೋ ಒಂದು ಸಂಸ್ಕೃತಿ ಇಲಾಖೆಯ ಅನುದಾನವೋ ಗಡಿನಾಡಿಗಿರುವ ಯಾವುದಾದರೂ ಸ್ಕಾಲರ್ಶಿಪ್ಪೋ ಕೊಟ್ಟಮಾತ್ರಕ್ಕೆ ಕರ್ನಾಟಕ ಸರಕಾರ ನಮ್ಮ ಹಿಂದೆ ನಿಂತು ರಕ್ಷಣೆ ನೀಡುತ್ತದೆ ಎಂದು ತಿಳಿಯಬೇಕಾಗಿಲ್ಲ. ನಿಜವೆಂದರೆ 1956ರಲ್ಲೇ ಕಾಸರಗೋಡು ಅನಾಥವಾಯಿತು. ಅತ್ತ ಕೇರಳವೂ ಅಲ್ಲದ, ಇತ್ತ ಕರ್ನಾಟಕವೂ ಅಲ್ಲದ ಎಡೆಬಿಡಂಗಿ ಸ್ಥಿತಿ ಇಲ್ಲಿನ ಕನ್ನಡಿಗರದಾಯಿತು. ಬಹುಸಂಖ್ಯಾತರಾಗಿದ್ದ ಕನ್ನಡಿಗರು ನೋಡುನೋಡುತ್ತಿದ್ದಂತೆಯೇ ಅಲ್ಪಸಂಖ್ಯಾತರಾಗುವ ಹಂತಕ್ಕೆ ಬಂದುನಿಂತರು. ಇಂದೀಗ ಕೇರಳದ ದೃಷ್ಟಿಯಲ್ಲಿ ಕಾಸರಗೋಡು ಕನ್ನಡಿಗರು ಭಾಷಾ ಅಲ್ಪಸಂಖ್ಯಾತರು. ಸಾಂಸ್ಕೃತಿಕವಾಗಿ ಇಲ್ಲಿನ ಮೂಲವಾಸಿಗಳು ಕನ್ನಡದವರೆ ಆಗಿದ್ದರೂ ಭಾಷಾ ಅಲ್ಪ ಸಂಖ್ಯಾತರೆಂಬ ಹಣೆಪಟ್ಟಿಗೆ ಭಾಜನರಾದರು.
ಇಲ್ಲಿ ಹುಟ್ಟಿ ಬಳೆದವರಲ್ಲಿ ನನ್ನಂಥ ಮಲಯಾಳ ಮಾತೃಭಾಷೆಯವರಿರಲಿ, ತುಳು, ಕರಾಡ, ಕೊಂಕಣಿ, ಹವ್ಯಕ ಇತ್ಯಾದಿ ಯಾವುದೇ ಭಾಷೆಯನ್ನಾಡುವವರಿರಲಿ, ಸಾಂಸ್ಕೃತಿಕವಾಗಿ ನಾವೆಲ್ಲ ಕನ್ನಡಿಗರೆ. ನಮ್ಮ ಕಲಿಕೆ ಕನ್ನಡದಲ್ಲೆ. ಆಗೆಲ್ಲ ನಮ್ಮ ತನು ಕನ್ನಡ, ಮನ ಕನ್ನಡ. ಇಂದೀಗ ಮನೆಮಾತು ಮಲಯಾಳವಿದ್ದವರು ತಾವು ಕೇರಳಿಗರೂ ಆಗಿರುವುದರಿಂದ ತಮ್ಮ ಮಕ್ಕಳ ಭವಿಷ್ಯತ್ತಿಗೆ ಮಲಯಾಳವೇ ಸರಿ ಎಂದು ಯೋಚಿಸುವವರೂ ಕಂಡುಬರುತ್ತಾರೆ. ತುಳುವರಿಗೆ ಪ್ರತ್ಯೇಕ ಅಕಾಡೆಮಿಯನ್ನು ಕೊಟ್ಟು ಅವರಿಂದ ಕನ್ನಡಿಗರನ್ನು ಬೇರ್ಪಡಿಸುವ ಪ್ರಯತ್ನವನ್ನೂ ಕೇರಳ ಸರಕಾರ ಮಾಡಿದೆ. ಅಕಾಡೆಮಿ ಕೊಡುವುದಿದ್ದರೆ ಕನ್ನಡ ಅಕಾಡೆಮಿ ಕೊಡಬೇಕಿತ್ತು. ಆ ಅಕಾಡೆಮಿಯಡಿಯಲ್ಲಿ ಕನ್ನಡಿಗರು, ತುಳುವರು ಹಾಗೂ ಕನ್ನಡ ಸಂಸ್ಕೃತಿಯನ್ನು ನಚ್ಚಿಕೊಂಡು ಬಂದವರೆಲ್ಲ ಜೊತೆಗಿರುತ್ತಿದ್ದರು. ಆದರೆ ಕೇರಳ ಸರಕಾರ ‘ತುಳುವರು ಕನ್ನಡಿಗರಿಗಿಂತ ಬೇರೆ’ ಎಂಬೊಂದು ಹುಳಿ ತಂದು ಹಿಂಡಿದರು. ತುಳುವರನ್ನು ಕನ್ನಡಿಗರಿಂದ ಬೇರ್ಪಡಿಸಿದರೆ ಕನ್ನಡಿಗರು ಮತ್ತೂ ದುರ್ಬಲರಾಗುತ್ತಾರೆ ಎಂದಲ್ಲವೆ ಅದರ ಅರ್ಥ? ‘ತುಳು ಅಕಾಡೆಮಿಯ ಜೊತೆ ಕನ್ನಡವೂ ಸೇರಿಕೊಳ್ಳಬಹುದಲ್ಲ’ ಎಂದು ಯಾರಾದರೂ ಹೇಳಬಹುದು. ಸಾಗರದ ಜೊತೆ ನದಿ ಸೇರಿಕೊಳ್ಳುತ್ತದೆಯೇ ಹೊರತು ನದಿಯ ಜೊತೆ ಸಾಗರ ಸೇರಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಕೇರಳಿಗರ ದೃಷ್ಟಿಯಲ್ಲಿ ಇಲ್ಲಿನ ಕನ್ನಡವೊಂದು ಮುಳುಗುವ ದೋಣಿ. ಅದಕ್ಕಾಗಿ ಕಾಯುವವರೂ ಇದ್ದಾರೆ. ಅದರ ಜೊತೆಜೊತೆಗೆ ಬ್ರಿಟಿಷರ ಬಳುವಳಿಯಾದ ಇಂಗ್ಲೀಷು ಕನ್ನಡದ ಬುಡವನ್ನೇ ಅಲುಗಾಡಿಸುತ್ತಿದೆ.
ಕೇರಳದ ಕಡೆಯಿಂದ ಸರಕಾರಿ ಉದ್ಯೋಗ ನಿಮಿತ್ತವಾಗಿಯೋ ವ್ಯಾಪಾರಕ್ಕಾಗಿಯೋ ಇಲ್ಲಿ ಬಂದುಸೇರುವ ಮಲಯಾಳಿಗಳಿಗೆ ಲೆಕ್ಕವಿಲ್ಲ. ಇಂದೀಗ ‘ಎಲ್ಲರೂ ಬರಲೆಂದು ಸ್ವಾಗತಿಸಿದೆ’ ಎನ್ನುವುದೇ ನಮಗೆ ಉಳಿದಿರುವ ದಾರಿ. ಭಾಷಾ ಅಲ್ಪ ಸಂಖ್ಯಾತರಿಗಿರುವ ಸಮಗ್ರ ಸವಲತ್ತುಗಳನ್ನು ಇಲ್ಲಿನ ಸಾಂಸ್ಕೃತಿಕ ಕನ್ನಡಿಗರಿಗೆ ಕೇರಳ ಸರಕಾರ ಕೊಡಮಾಡಿದರೆ ಅಷ್ಟು ಸಾಕು; ನಮ್ಮನ್ನು ನಾವು ಇಲ್ಲೇ ಇದ್ದು ರಕ್ಷಿಸಿಕೊಳ್ಳಲು. ಆದರೆ ಭಾಷಾ ಅಲ್ಪಸಂಖ್ಯಾತರಿಗೆ ಯಾವೆಲ್ಲ ಸವಲತ್ತುಗಳನ್ನು ಕೇರಳ ಸರಕಾರ ಕೊಡುತ್ತಿದೆ, ಕೊಡಬೇಕು ಎಂಬುದರ ಸ್ಪಷ್ಟ ಕಲ್ಪನೆಯನ್ನು ಕೇರಳ ಸರಕಾರ ಕಾಸರಗೋಡು ಕನ್ನಡಿಗರಿಗೆ ನೀಡಿದೆಯೆ? ನೀಡಿದ್ದರೆ ಅವನ್ನು ನಾವು ಸಮಗ್ರವಾಗಿ ಅರ್ಥೈಸಿಕೊಂಡು ಬಳಸಿಕೊಂಡಿದ್ದೇವೆಯೆ? ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ನಿಜವಾಗಿಯೂ ಅಲ್ಪಸಂಖ್ಯಾತರಿಗೆ ವಿಶೇಷ ಸವಲತ್ತುಗಳಿವೆ. ಭಾರತದ ಸಂವಿಧಾನದಲ್ಲೂ ಮೈನಾರಿಟಿ ರೈಟ್ಸನ್ನು ಪ್ರತ್ಯೇಕವಾಗಿ ಹೇಳಲಾಗಿದೆ.
ಕರ್ನಾಟಕ ಸರಕಾರದಲ್ಲೂ ಹಾಗೇನೆ. ವಿವಿಧ ಇಲಾಖೆಗಳಲ್ಲಿ ಅನೇಕ ಸವಲತ್ತುಗಳನ್ನು ಹೊರನಾಡ, ಗಡಿನಾಡ ಕನ್ನಡಿಗರಿಗಾಗಿ ನೀಡಲಾಗುತ್ತಿದೆ. ಇವು ನೀಡುವ ಸವಲತ್ತುಗಳ ಬಗ್ಗೆ ಎಲ್ಲರಿಗೂ ಗೊತ್ತಿರುವುದಿಲ್ಲ. ಇಂಥ ಸವಲತ್ತುಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಷ್ಟೆ ಲಭಿಸುವುದೆಂದು ತಪ್ಪಾಗಿ ಭಾವಿಸಲಾಗಿದೆ. ‘ನಾವು ಇಂತಿಂಥ ಕಾರ್ಯಕ್ರಮಗಳನ್ನು ನೀಡಿದ್ದೇವೆ’ ಎಂದು ಸ್ಥಳೀಯ ಪತ್ರಿಕೆಗಳಲ್ಲಿ ದೊಡ್ಡದಾಗಿ ಪ್ರಕಟಿಸಿ ಅದರ ಪೇಪರ್ ಕಟ್ಟಿಂಗುಗಳ ಆಧಾರದಲ್ಲಿ ಗಡಿನಾಡಿನವರಿಗೆ ಹಂಚಿ ಕೊಡಬೇಕಾಗಿರುವ ಸವಲತ್ತನ್ನು ಕಬಳಿಸುವ ಸಂಸ್ಥೆಗಳು, ಪ್ರತಿಷ್ಠಾನಗಳು ಇಲ್ಲಿವೆ. ಈ ಕೆಲವರು ಕನರ್ಾಟಕ ಸರಕಾರದಿಂದ ಆಥರ್ಿಕ ಸವಲತ್ತು ಪಡೆದ ವಿವರ ಗಡಿನಾಡ ಕನ್ನಡಿಗರಿಗೆ ಕೆಲವೊಮ್ಮೆ ಗೊತ್ತೇ ಆಗುವುದಿಲ್ಲ. ಯಾವ್ಯಾವ ಸವಲತ್ತುಗಳನ್ನು ಕನರ್ಾಟಕ ಸರಕಾರ ಕೊಡುತ್ತದೆ ಹಾಗೂ ಯಾರ್ಯಾರು ಯಾವ್ಯಾವ ವರ್ಷಗಳಲ್ಲಿ ಅದನ್ನು ಬಳಸಿಕೊಂಡಿದ್ದಾರೆ ಎಂಬುದನ್ನು ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರ ಜನರಿಗೆ ತಿಳಿಯಪಡಿಸಬೇಕು.
ನಾವು ಗಡಿನಾಡ ಕನ್ನಡಿಗರು ಬಹುತೇಕ ಹೋರಾಟದ ಜಾಯಮಾನದವರಲ್ಲ. ಕರ್ನಾಟಕದ ಏಕೀಕರಣ ಚಳುವಳಿಯಿಂದ ಮೊದಲ್ಗೊಂಡು ಯಾವ ಚಳುವಳಿಯನ್ನೂ ನಾವು ಒಗ್ಗಟ್ಟಾಗಿ ನಿಂತು ನಿಭಾಯಿಸಿಯೇ ಇಲ್ಲ. ನಮ್ಮಲ್ಲಿ ಬುದ್ಧಿವಂತರಿಗೆ ಕೊರತೆಯಿಲ್ಲ. ಅವರೆಲ್ಲ ಕೈಲಾಸಂರ ‘ಟೊಳ್ಳು ಗಟ್ಟಿ’ ನಾಟಕದ ಪಾತ್ರಗಳಲ್ಲಿ ಗಟ್ಟಿ ಪಾತ್ರದ ಮಾಧುವಿನ ಹಾಗೆ. ಪುಟ್ಟು ಟೊಳ್ಳು ಎನ್ನಿಸಿಕೊಂಡರೂ ಪ್ರಯೋಜನಕ್ಕೆ ಬಂದ. ಮನೆಯವರನ್ನು ಬೆಂಕಿಯಿಂದ ಕಾಪಾಡಿದ. ಆದರೆ ಅವಿದ್ಯಾವಂತ, ನಿಷ್ಪ್ರಯೋಜಕನೆಂದು ಮನೆಮಾತಾದ. ಮಾಧು ಗಟ್ಟಿ. ಆದರೆ ಸ್ವಾರ್ಥಿ. ತನ್ನನ್ನು ತಾನು ಬದುಕಿಸಿಕೊಂಡ; ‘ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ’ ಎಂದ. ಕವಿ ಕಯ್ಯಾರರು ಪುಟ್ಟುವಿನ ಹಾಗೆ ‘ಬೆಂಕಿಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಎಂದು ಗಟ್ಟಿಯಾಗಿ ಕೂಗಿದ್ದು ಕರ್ನಾಟಕದ, ಕಾಸರಗೋಡಿನ ವಿದ್ಯಾವಂತ ‘ಗಟ್ಟಿ’ಗರ ಕಿವಿಗೆ ಕೇಳಿಸಲೇ ಇಲ್ಲ. ಈ ಗಟ್ಟಿಗರೇ ನಿಜ ಅರ್ಥದಲ್ಲಿ ಟೊಳ್ಳು. ಒಂದರ್ಥದಲ್ಲಿ ಗಟ್ಟಿಗರೆಲ್ಲ ಸೇರಿ ನಮ್ಮ ಹೋರಾಟವನ್ನು ಟೊಳ್ಳು ಮಾಡಿಬಿಟ್ಟರು.
ಕಾಸರಗೋಡಿನ ಕನ್ನಡಿಗರು ಅಪರಿಮಿತ ಸಜ್ಜನರು. ಹಂತ ಹಂತವಾಗಿ ಕೇರಳ ಸರಕಾರದ ಆಡಳಿತವನ್ನು ಒಪ್ಪಿಕೊಂಡು ಬಂದವರು. ಜೊತೆಗೆ ಕೇರಳದ ಸರಕಾರೀ ಉದ್ಯೋಗಿಗಳು ಅಧಿಕೃತವಾಗಿ ನಮ್ಮ ಜಿಲ್ಲೆಗೆ ಬಂದಾಗ ಅವರನ್ನು ಗೌರವಪೂರ್ವಕ ಸ್ವಾಗತಿಸಿದವರು. ರಾಷ್ಟೀಯ ಸ್ಮಾರಕವಾಗಬೇಕಾಗಿದ್ದ ಗೋವಿಂದ ಪೈಯವರ ‘ಗಿಳಿವಿಂಡ’ನ್ನೇ ಸರಕಾರಿ ಕಛೇರಿ ಮಾಡಿಕೊಳ್ಳಲೆಂದು ಕೇರಳ ಸರಕಾರಕ್ಕೆ ಉದಾರವಾಗಿ ಬಿಟ್ಟುಕೊಟ್ಟವರು. ಕನ್ನಡದ ಗಂಧಗಾಳಿಯೂ ಗೊತ್ತಿಲ್ಲದೆ ಒದ್ದಾಡುವ ಸ್ಥಿತಿಯಲ್ಲಿದ್ದ ಮಲಯಾಳದ ಬಂಧುಗಳಿಗೆ ನಾವೇ ನಮಗೆ ಗೊತ್ತಿರುವ ಮಲಯಾಳದ ಸಹಾಯದಿಂದ ಇಲ್ಲಿ ಸುಖವಾಸ ಕಲ್ಪಿಸಿಕೊಟ್ಟವರು. ಇಲ್ಲಿನ ಕನ್ನಡಿಗರಿಗೆ ಅನುಕೂಲವಾಗಲೆಂದು ಅವರು ಯಾವತ್ತೂ ಕನ್ನಡ ಕಲಿಕೆಗೆ ಪ್ರಯತ್ನಿಸಿದವರಲ್ಲ. ನಾವೇ ಮಲಯಾಳದ ಪರೀಕ್ಷೆಗಳನ್ನು ಪಾಸಾಗಿ ಕೇರಳದಲ್ಲಿ ನೆಲೆ ಊರುವುದಕ್ಕೆ ಪ್ರಯತ್ನಿಸಿದ್ದೇವೆಯೇ ಹೊರತು ಇಲ್ಲಿನ ವಲಸಿಗ ಮಲಯಾಳಿಗಳಿಗೆ ಕನ್ನಡ ಭಾಷೆಯ ಅಗತ್ಯ ಹಾಗೂ ಮಹತ್ವವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಪಟ್ಟವರಲ್ಲ. ಕೇರಳ ಸರಕಾರಕ್ಕೆ ನನ್ನ ಪ್ರಶ್ನೆಯಿಷ್ಟೆ: ಕಾಸರಗೋಡು ಜಿಲ್ಲೆಯಲ್ಲಿ ಉದ್ಯೋಗ ನಿಮಿತ್ತವಾಗಿ ಬಂದು ನೆಲೆಸಿದ ಮಲಯಾಳದವರಿಗೆ ಯಾಕೆ ಕನ್ನಡ ತರಬೇತಿ ತರಗತಿಗಳನ್ನು ತೆರೆಯಬಾರದು? ಈ ಕಳೆದ ಆರು ದಶಕಗಳಲ್ಲಿ ಕಾಸರಗೋಡಿನಲ್ಲಿ ನೆಲೆಯೂರಿದ ಸಹಸ್ರಗಟ್ಟಲೆ ಮಲಯಾಳಿ ಬಂಧುಗಳಿಗೆ ‘ಕನ್ನಡದ ಪ್ರಾಥಮಿಕ ಕಲಿಕೆ ಕಡ್ಡಾಯ’ ಎಂಬ ಆಡಳಿತಾತ್ಮಕ ಕಾನೂನನ್ನು ಕೇರಳ ಸರಕಾರ ಯಾಕೆ ಜ್ಯಾರಿಗೊಳಿಸಬಾರದು? ಹಾಗೂ ಕನ್ನಡಿಗರ ಹಿತಕಾಯುವ ಮಾತುಕೊಡುವ, ನಮ್ಮಿಂದ ಚುನಾಯಿತರಾದ ಎಮ್ಮೆಲ್ಲೆ, ಎಂಪಿಗಳು ಯಾಕೆ ಇದನ್ನು ಆದ್ಯತೆಯ ಮೇರೆಗೆ ಜ್ಯಾರಿಗೊಳಿಸಲು ಯತ್ನಿಸಬಾರದು?
ಎಷ್ಟೊಂದು ಕನ್ನಡಿಗರು ಈ ಕನ್ನಡದ ನೆಲದಲ್ಲಿ ಮಲಯಾಳ ಕಲಿತು ಕೇರಳದ ಜನರ ಮರ್ಜಿಗೆ ತಕ್ಕಂತೆ ಬದುಕು ಸಾಗಿಸುತ್ತಿದ್ದಾರೆ! ಮಲಯಾಳದ ಸಾಹಿತಿಗಳನ್ನು ಕನ್ನಡದಲ್ಲೂ ಮಲಯಾಳದಲ್ಲೂ ಓದಿಕೊಳ್ಳುತ್ತಿದ್ದಾರೆ. ಈವರೆಗೆ ಸುಮಾರು ನೂರ ಐವತ್ತು ಮಲಯಾಳದ ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಆದರೆ ಕನ್ನಡದ ಕೇವಲ ಅರುವತ್ತು ಕೃತಿಗಳು ಮಲಯಾಳಕ್ಕೆ ಅನುವಾದಗೊಂಡಿವೆ. ಇದು ಏನನ್ನು ಸೂಚಿಸುತ್ತದೆ? ನಾವು ಮಲಯಾಳಕ್ಕೆ ಕೊಟ್ಟ ಗೌರವವನ್ನು ಅವರು ಕನ್ನಡಕ್ಕೆ, ಆ ಮೂಲಕ ಕನ್ನಡಿಗರಿಗೆ ನೀಡುತ್ತಿಲ್ಲ ಎಂದಲ್ಲವೆ?

ಇತರ ಭಾಷೆಯ ಕೃತಿಗಳನ್ನು ನಮ್ಮ ಭಾಷೆಗೆ ಅನುವಾದಿಸುವಷ್ಟು ಸುಲಭವಾಗಿ ನಮ್ಮ ಭಾಷೆಯ ಕೃತಿಗಳನ್ನು ಇತರ ಭಾಷೆಗೆ ಅನುವಾದಿಸುವುದು ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ. ನಮಗೆ ನಮ್ಮ ಮಾತೃಭಾಷೆಯಲ್ಲಿರುವ ಹಿಡಿತ ನಾವು ಓದಿ, ಕೇಳಿ, ಆಡಿ ಕಲಿತ ಅನ್ಯಭಾಷೆಯಲ್ಲಿ ಇರುವುದಿಲ್ಲ. ಆದ್ದರಿಂದ ತಕ್ಕಮಟ್ಟಿಗೆ ಮಲಯಾಳ ಬಲ್ಲ ನಾವು ಮಲಯಾಳದ ಕೃತಿಗಳನ್ನು ಶಕ್ತವಾಗಿಯೇ ನಮ್ಮ ಮಾತೃಭಾಷೆಗೆ ಅನುವಾದಿಸಿ ಬೀಗುತ್ತೇವೆ. ಮಲಯಾಳಿಗಳಿಗೆ ಕನ್ನಡ ಭಾಷೆಯ ಮೇಲೆ ಎಳ್ಳಷ್ಟಾದರೂ ಅಭಿಮಾನವಿದ್ದರೆ -ನಾವು ಹೇಗೆ ಮಲಯಾಳದಿಂದ ಕನ್ನಡಕ್ಕೆ ಅನುವಾದಿಸುತ್ತೇವೆಯೋ ಹಾಗೆಯೇ- ಕನ್ನಡದಿಂದ ಸಾಹಿತ್ಯ ಕೃತಿಗಳನ್ನು ಅವರ ಮಾತೃಭಾಷೆಗೆ ಅನುವಾದಿಸಬೇಕು. ಕೇರಳದಿಂದ ಇಲ್ಲಿ ಬಂದು ನೆಲೆಗೊಂಡ ಮಲಯಾಳಿಗಳು ಕನ್ನಡವನ್ನು ಓದಿ, ಕೇಳಿ, ಆಡಿ ಕಲಿತು ಕನ್ನಡದ ಮಹತ್ತರ ಕೃತಿಗಳನ್ನು ಮಲಯಾಳಕ್ಕೆ ಅನುವಾದಿಸಬಹುದಿತ್ತು. ಆದರೆ ಹಾಗಾಗಲಿಲ್ಲವೆ?
ಕನ್ನಡ ಸಾಹಿತ್ಯದ ಬಗ್ಗೆ ಅವರಲ್ಲಿ ತಾತ್ಸಾರ ಮನೋಭಾವ ಇದೆಯೆಂದಲ್ಲವೆ ಇದಕ್ಕೆ ಅರ್ಥ? ಅನಂತಮೂರ್ತಿ, ಕಂಬಾರ, ಆಲನಹಳ್ಳಿ ಕೃಷ್ಣ, ಲಂಕೇಶ, ನಿರಂಜನ ಮೊದಲಾದ ಕೆಲವರು ಒಂದಾನೊಂದು ಕಾಲದಲ್ಲಿ ಮಲಯಾಳಕ್ಕೆ ಹೋದರೇ ಹೊರತು ಈಗಿನ ದಿವಸಗಳಲ್ಲಿ ಆ ಕೆಲಸ ನಡೆಯುವುದು ಭಾರೀ ಅಪರೂಪ. ಮಲಯಾಳಿಗಳು ಕನ್ನಡ ಸಾಹಿತ್ಯವನ್ನು ಮಲಯಾಳಕ್ಕೆ ಕೊಂಡೊಯ್ಯುವಂತೆ ಮಾಡಬೇಕಾದುದು ಕಾಸರಗೋಡಿನ ಕನ್ನಡಿಗರ ಕರ್ತವ್ಯ ಎಂದು ನಾನಾದರೂ ಭಾವಿಸುತ್ತೇನೆ. ನಾವೇ ಮೇಲೆ ಬಿದ್ದು ಅವರ ಭಾಷೆಯನ್ನು ಆಡುವುದರಲ್ಲಿ ಸಾರ್ಥಕ್ಯವನ್ನು ಕಂಡೆವೆಂದು ಭ್ರಮಿಸುವುದಲ್ಲ. ಬದಲಿಗೆ, ಈ ಮಣ್ಣಿಗೆ ಬಂದಾಗ ಇಲ್ಲಿನ ಭಾಷೆ ಕಲಿಯಬೇಕಾದ -ರೋಮಿನಲ್ಲಿದ್ದಾಗ ರೋಮನ್ ಆಗಬೇಕಾದ-ಅನಿವಾರ್ಯತೆಯನ್ನು ಅವರಿಗೆ ಮನಗಾಣಿಸಬೇಕು. ಕನ್ನಡ ಕಲಿತು ಕನ್ನಡದ ಮೇಲಿನ ತಿರಸ್ಕಾರವನ್ನು ಬದಿಗೊತ್ತಿ ಅತ್ಯತ್ತಮ ಕೃತಿಗಳನ್ನು ಮಲಯಾಳ ಭಾಷೆಗೆ ಮಲಯಾಳಿ ಬರಹಗಾರರು ಕೊಂಡೊಯ್ಯಬೇಕು. ಆಗಷ್ಟೆ ಕೊಡುಕೊಳೆಗೂ ಅರ್ಥ ಬರುವುದು ಸಾಧ್ಯ.
ಚಿಕ್ಕಂದಿನಲ್ಲಿ ನನ್ನ ಹುಟ್ಟೂರಾದ ನಾಯ್ಕಾಪು, ಸುತ್ತಣ ಅನಂತಪುರ, ಸೀತಾಂಗೋಳಿ ಸೂರಂಬೈಲುಗಳಂತಹ ಗ್ರಾಮೀಣ ಪ್ರದೇಶಗಳಲ್ಲಿ ಗಂಜಿಮೇಳಗಳು ನಡೆಸುತ್ತಿದ್ದ ಯಕ್ಷಗಾನ ಪ್ರದರ್ಶನಗಳನ್ನು ರಾತ್ರಿಯಿಡೀ ಹೊಟ್ಟೆತುಂಬಾ ನೋಡುತ್ತಿದ್ದೆ. ಬಳಿಕ ಕುಂಡಾವು ಮೇಳ, ಕೂಡ್ಲುಮೇಳ, ಸುರತ್ಕಲ್ ಮೇಳ, ಧರ್ಮಸ್ಥಳ ಮೇಳಗಳು ಒಂದೊಂದಾಗಿ ಕಣ್ಣಮುಂದೆ ಬಂದುವು. ಪುರಾಣಗಳ ಜೀವಸತ್ವ, ಕನ್ನಡದ ಕಸುವು ನನಗೆ ಮನವರಿಕೆಯಾದುದೇ ಅಲ್ಲಿಂದ. ಯಕ್ಷಗಾನದ ಈ ತವರೂರಿನಲ್ಲಿ ಸಿಕ್ಕಿದ ಕಲಬೆರಕೆಯಿಲ್ಲದ ಕನ್ನಡ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಸಿಗಲಿಕ್ಕಿಲ್ಲ. ಅಂಥ ಕನ್ನಡದ ಬೆಳೆಗೆ, ಕುರಿತೋದದೆ ಲಭಿಸಿದ ಜ್ಞಾನಾನುಭವಕ್ಕೆ ಕುಂಬಳೆ ನೆಲವೂ ಕಾರಣೀಭೂತವಾಗಿದೆ. ನಮ್ಮ ಮಣ್ಣಿನ ಮಗ, ಯಕ್ಷಗಾನದ ಪಿತಾಮಹ ಪಾತ್ರಿಸುಬ್ಬನಿಂದ ಮೊದಲ್ಗೊಂಡು ಕುಂಬಳೆ ಕುಂಞಂಬು, ಕುಂಬಳೆ ಕುಟ್ಯಪ್ಪು, ಕುಂಬಳೆ ಸುಬ್ಬಪ್ಪು, ಕುಂಬಳೆ ತಿಮ್ಮಪ್ಪು, ಕುಂಬಳೆ ಸುಂದರ ರಾವ್, ಕುಂಬಳೆ ಶ್ರೀಧರ ರಾವ್ ಹೀಗೆ ಅದೆಷ್ಟು ಕಲಾವಿದರು ಕುಂಬಳೆ ಸ್ಥಳನಾಮವನ್ನು ತಮ್ಮ ಹೆಸರಿನ ಜೊತೆಗೆ ಪೋಣಿಸಿಕೊಂಡು ಅಜರಾಮರಗೊಳಿಸಿದ್ದಾರೆ!
ಕಾಸರಗೋಡು ಜಿಲ್ಲೆಯ ಪ್ರಸಿದ್ಧಿಯನ್ನು ದೇಶವಿದೇಶಗಳಿಗೆ ತಲುಪಿಸಿದ ಸಾಹಿತಿಗಳು, ಯಕ್ಷಕಲಾವಿದರು, ಚಿತ್ರಕಾರರು, ಗೊಂಬೆಯಾಟದವರು, ಜಾನಪದ ಕಲಾವಿದರು ಮುಂತಾದವರನ್ನು ಪಟ್ಟಿಮಾಡಿದರೆ ಅದು ಬೃಹತ್ತಾಗಿ ಬೆಳೆಯುತ್ತದೆ. ಪ್ರಶ್ನೆ ಅದಲ್ಲ. ಪಾತ್ರಿಸುಬ್ಬ ಯಕ್ಷಗಾನಕ್ಕೆ ಪಿತಾಮಹ. ಕೇರಳದ ಕಥಕ್ಕಳಿಗೆ ಕಲಾಮಂಡಲದಲ್ಲಿ ದೊರಕಿದ ಸ್ಥಾನಮಾನ ಪಾತ್ರಿಸುಬ್ಬನಿಗೆ ಕುಂಬಳೆಯಲ್ಲಿ ಲಭಿಸಬೇಕಿತ್ತು. ಆತನ ಹೆಸರಿನಲ್ಲಿ ಕೊನೆಯ ಪಕ್ಷ ಒಂದು ಯಕ್ಷಕಲಾ ಕೇಂದ್ರವಾದರೂ ನಿರ್ಮಾಣವಾಗಬೇಕಿತ್ತು. ಆತ ರಚಿಸಿದ ಯಕ್ಷಗಾನ ಪ್ರಸಂಗಗಳಿಗೆ ಸಾಹಿತ್ಯದ ಸ್ಥಾನಮಾನ ಲಭಿಸಬೇಕಿತ್ತು. ಈ ನೆಲದ ತೆಂಕುತಿಟ್ಟು ಯಕ್ಷಗಾನಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ ದೊರಕಬೇಕಿತ್ತು. ತನ್ಮೂಲಕ ಜಗತ್ತಿನ ಕಲಾಸಕ್ತರನ್ನು ಕುಂಬಳೆಗೆ ಸೆಳೆಯಬಹುದಾಗಿತ್ತು. ಈ ಕೆಲಸವನ್ನು ಯಾವ ಸರಕಾರ ಮಾಡಬೇಕು? ಕೇರಳಿಗರಿಗೆ ಕನ್ನಡದ ಕಲೆಯನ್ನು ಸಾಕಿ ಆಗಬೇಕಾದುದೇನು? ಎರಡೂ ಸರಕಾರ ಸೇರಿ ಗೋವಿಂದ ಪೈಗಳನ್ನು ಉದ್ಧಾರ ಮಾಡಿದ್ದು ಸಾಕು; ಇನ್ನು ಪಾತ್ರಿಸುಬ್ಬನನ್ನೂ ಉದ್ಧಾರ ಮಾಡಲು ಈ ಸರಕಾರಗಳಿಗೆ ದುಂಬಾಲು ಬಿದ್ದರೆ ‘ಇದ್ದುದೂ ಹೋಯಿತು ಮದ್ದಿನ ಗುಣದಿಂದ’ ಎಂಬಂತಾದೀತು. ಇಂಥ ಕೆಲಸವನ್ನು ದೇಶವಿದೇಶಗಳಲ್ಲಿರುವ ಕಲಾಪ್ರೇಮಿಗಳ ಸಹಕಾರದಿಂದ ನಿಭಾಯಿಸಬೇಕೇ ಹೊರತು ಬೇರೆಬೇರೆ ದೋಣಿಯಲ್ಲಿ ಕಾಲಿಟ್ಟ ಈ ಎರಡು ಸರಕಾರಗಳಿಂದಲ್ಲ. ಈಗಾಗಲೇ ಕುಂಬಳೆಯಲ್ಲಿ ಪ್ರಾರಂಭಗೊಂಡ ಪಾತರ್ಿಸುಬ್ಬನ ಕೆಲಸವನ್ನು ಯಶಸ್ವಿಯಾಗಿ ಕೊನೆ ಮುಟ್ಟಿಸಬಲ್ಲ ಯುವಶಕ್ತಿ ಮುಂದೆ ಬರಬೇಕು.
ಕನ್ನಡ ಸಂಸ್ಕೃತಿಯ ಬೆಳೆಯನ್ನು ಅಳಿಸಿಹಾಕುವ ಪ್ರಯತ್ನ ನಮಗರಿವಾಗದಂತೆ ನಿಧಾನ ವಿಷದ ಹಾಗೆ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ. ‘ಕಾಸರಗೋಡಿನಲ್ಲಿ ಕನ್ನಡ ಮನೆಮಾತಾಗಿರುವವರು ವಿರಳ. ಹಾಗಾಗಿ ಕಾಸರಗೋಡು ಕೇರಳಕ್ಕೆ ಸೇರಬೇಕಾದದ್ದು ನ್ಯಾಯವೆ’ ಎಂದು ಹೇಳುವವರಿಗೆ ಇಲ್ಲಿನ ಭಾಷೆಯ, ಸಂಸ್ಕೃತಿಯ ಕನ್ನಡತನದ ಅರಿವಿಲ್ಲ. ಇಂದಿಗೂ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಿಗೆ ಸೇರಿದವರನ್ನು ‘ಎಂಥದು ಮಾರಾಯ್ರೆ, ನಾವು ಖುಷಾಲಿಗೆ ಹೇಳಿದ್ದಲ್ಲವೋ?’ ಎಂದು ಹೇಳಿ ಗೇಲಿಮಾಡುವವರಿದ್ದಾರೆ. ಅದರ ಜೊತೆಗೇನೆ ‘ನೀವು ಎಷ್ಟು ಶುದ್ಧವಾಗಿ ಕನ್ನಡ ಮಾತಾಡ್ತೀರಿ’-ಎಂಬುದಾಗಿ ಮನಬಿಚ್ಚಿ ನಮ್ಮ ಕನ್ನಡವನ್ನು ಕೊಂಡಾಡುವವರೂ ಇದ್ದಾರೆ. ಇಂದಿಗೂ ಕಾಸರಗೋಡು ಜಿಲ್ಲೆಯಲ್ಲಿರುವ ಹಲವು ಗ್ರಾಮಗಳು -ಭಾಷೆ ಯಾವುದಾದರೂ- ಶದ್ಧ ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ನಿಂತ ಉದಾಹರಣೆಗಳಿವೆ.
ಕಾಸರಗೋಡು ಕನ್ನಡಿಗರು ವಿವಿಧ ರೀತಿಯಲ್ಲಿ ಕನ್ನಡದ ಉಳಿವಿಗಾಗಿ ಪ್ರಯತ್ನ ಪಡುತ್ತಲೇ ಇದ್ದಾರೆ. ಇಂದಿಗೂ ಯಕ್ಷಗಾನ ತಾಳಮದ್ದಳೆಯನ್ನು ಪ್ರತಿವಾರ ನಡೆಸಿಕೊಂಡು ಬರುವ ಪ್ರದೇಶವಿರುವುದು ಈ ಜಿಲ್ಲೆಯಲ್ಲೆ. ಕನ್ನಡ ಭಾವಗೀತೆಗಳ ಸಂಗೀತರಥ, ಯಕ್ಷಗಾನದ ಯಕ್ಷತೇರು, ವಠಾರನಾಟಕವೆಂಬ ಹೊಚ್ಚಹೊಸ ರಂಗಪ್ರಯೋಗ, ಲಾರಿನಾಟಕ, ವುನೆಮನೆಗಳಲ್ಲಿ ಕನ್ನಡಾಭಿಯಾನ ಮುಂತಾದ ಪ್ರಯೋಗಗಳು ಕಾಸರಗೋಡಿನಿಂದ ಹೊರಟವುಗಳೆ. ಕೇರಳದ ತಿರುವನಂತಪುರ ಹಾಗೂ ಕರ್ನಾಟಕದ ಬೆಂಗಳೂರಿನ ವರೆಗೆ ಹಳ್ಳಿಹಳ್ಳಿಗಳಲ್ಲಿಇಡಿಯ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಬಗೆಗಿನ ಸಾಮಾಜಿಕ ಎಚ್ಚರಿಕೆ ಮೂಡಿಸಲು ಯತ್ನಿಸಿದ ಯಾತ್ರೆಗಳಿವು. ಇಲ್ಲಿನ ನೂರಾರು ಭಜನಾ ಸಂಘಗಳು ‘ಕುಣಿತ ಭಜನೆ,’ ಭಜನಾ ಸಪ್ತಾಹ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಮ್ಮ ಕನಕ, ಪುರಂದರಾದಿ ದಾಸರುಗಳನ್ನು ಶಾಶ್ವತಗೊಳಿಸುವ ಕೆಲಸವನ್ನು ನಿರಂತರ ಮಾಡುತ್ತಿವೆ.
ಹೆಚ್ಚಿನ ಭಾಷೆಗಳನ್ನು ಕಾಡುವ ಒಂದು ವಿಚಾರವಿದೆ. ಅದರ ಕುರಿತು ಕಾಸರಗೋಡು ಕನ್ನಡಿಗರಾದ ನಾವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿದೆ. ಇಂದು ಪುಸ್ತಕ ಓದುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ನಲುವತ್ತು ವಯಸ್ಸಿಗಿಂತ ಕೆಳಗಿನವರು ಪುಸ್ತಕ ಓದುವುದನ್ನು ಅನುಭವ ವಿಸ್ತರಿಸುವ ದಾರಿ ಎಂದು ತಿಳಿದೇ ಇಲ್ಲ. ಅನೇಕ ಗ್ರಂಥಾಲಯಗಳು ಪುಸ್ತಕಗಳ ಕಟ್ಟು ಬಿಡಿಸಿಯೇ ಇಲ್ಲ. ಹಿಂದೆಲ್ಲ ಬಸ್ಸಿನಲ್ಲಿ, ರೈಲಿನಲ್ಲಿ ಪ್ರಯಾಣ ಮಾಡಬೇಕಿದ್ದರೆ ಪುಸ್ತಕಗಳು ನಮ್ಮ ಸಂಗಾತಿಗಳಾಗಿರುತ್ತಿದ್ದವು. ಇಂದು ಮೊಬೈಲ್ ಇಟ್ಟುಕೊಂಡು ಸದಾ ಕುಟ್ಟುತ್ತಿರುತ್ತೇವೆ. ನಮ್ಮ ಬುದ್ಧಿಶಕ್ತಿಯ ಚಟುವಟಿಕೆಗಳನ್ನು ಸೀಮಿತಗೊಳಿಸುವ ಇಂಥ ಆಧುನಿಕ ತಂತ್ರಜ್ಞಾನದ ಬಗ್ಗೆ ಯುವಜನತೆ ಎಚ್ಚತ್ತುಕೊಳ್ಳಬೇಕು. ಮನನ ಚಟುವಟಿಕೆ ನಡೆಯುವುದೇ ಓದಿನಿಂದ. ಕನ್ನಡದಲ್ಲಿ ಪ್ರಕಟಗೊಂಡ, ಪ್ರಕಟಗೊಳ್ಳುತ್ತಿರುವ ಅನೇಕ ಗ್ರಂಥಗಳು ಜಾಗತಿಕ ಮಟ್ಟದಲ್ಲಿ ಸ್ಥಾನಪಡೆಯಬಲ್ಲವು. ಅವುಗಳ ಯಥಾರ್ಥ ಓದುಗರನ್ನು ಬಡಿದೆಬ್ಬಿಸಬೇಕಿದೆ. ಗ್ರಂಥಾಲಯಗಳು ಇನ್ನಷ್ಟು ಶಕ್ತವಾಗಿ ಹಳ್ಳಿಹಳ್ಳಿಗಳಲ್ಲಿ ನೆಲೆಗೊಳ್ಳಬೇಕಾಗಿದೆ.
ನಾಗತಿಹಳ್ಳಿಯ ಗ್ರಂಥಾಲಯ ಬೆಳೆದ ಬಗೆಯನ್ನು ನಿಮಗೆ ಹೇಳಬೇಕು. ನಮ್ಮ ನಡುವೆ ಆಸೀನರಾಗಿರುವ ಸಮ್ಮೇಳನದ ಉದ್ಘಾಟಕರಾದ ನಾಗತಿಹಳ್ಳಿ ಚಂದ್ರಶೇಖರರದು ತಾನು ಹುಟ್ಟಿ ಬಳೆದ ಹಳ್ಳಿಗೆ ಏನನ್ನಾದರೂ ಮಾಡಬೇಕೆಂಬ ಮಹದಾಸೆ. ಹಳ್ಳಿಗಾಗಿ ಅವರು ಬಹಳಷ್ಟು ಮಾಡಿದರು. ಅದರಲ್ಲಿ ಅವರು ಸ್ಥಾಪಿಸಿದ ಗ್ರಂಥಾಲಯವೂ ಒಂದು. ಅವರು ಆ ಹಳ್ಳಿಯಲ್ಲಿ ಪ್ರತಿ ವರ್ಷ ಆಚರಿಸುವ ‘ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ದಲ್ಲಿ ಪಾಲ್ಗೊಳ್ಳಲು ಬರುವ ಅತಿಥಿಗಳೂ ಗೆಳೆಯರೂ ಕನಿಷ್ಠ ಎರಡು ಪುಸ್ತಕಗಳನ್ನಾದರೂ ತರಬೇಕು. ಇಂದೀಗ ಅಲ್ಲಿ ಸುಮಾರು ಹತ್ತು ಸಾವಿರದಷ್ಟಾದರೂ ಪುಸ್ತಕಗಳಿರಬಹುದು. ನಾಗತಿಹಳ್ಳಿಯಲ್ಲಿ ಇಂದೀಗ ಓದುಗರು ಸೃಷ್ಟಿಯಾಗಿದ್ದಾರೆ. ಕತೆ, ಕವನ ಬರೆಯಬಲ್ಲವರು, ಊರ ಚರಿತ್ರೆಯನ್ನು ರಚಿಸಬಲ್ಲವರು ನಿಮರ್ಾಣಗೊಂಡಿದ್ದಾರೆ ಎಂಬುದು ಸಣ್ಣ ಮಾತೇನಲ್ಲ. ಕಾಸರಗೋಡಿನ ಕನ್ನಡಿಗರೂ ಇದರಲ್ಲಿ ಹಿಂದೆಬೀಳುವಂತಿಲ್ಲ. ಹಾಗೆಲ್ಲಾದರೂ ಆದರೆ ಮುಂದಿನ ತಲೆಮಾರಿನ ಕನ್ನಡಿಗರು ಪಶ್ಚಾತ್ತಾಪ ಪಡಬೇಕಾದೀತು.
1984ರಲ್ಲಿ ಕಾಸರಗೋಡು ಜಿಲ್ಲೆ ನಿರ್ಮಾಣವಾಗುವ ತನಕ ಈ ಜಿಲ್ಲೆಯಲ್ಲಿ ಯಾವುದೇ ಬಗೆಯ ಅಭಿವೃದ್ಧಿ ಕೆಲಸ ನಡೆಯಲಿಲ್ಲ. ಕಾಸರಗೋಡು ಕರ್ನಾಟಕಕ್ಕೆ ಇಂದಲ್ಲದಿದ್ದರೆ ನಾಳೆ ಸೇರಿಯೇ ಬಿಡಬಹುದೆಂಬ ಭಯ ಕೇರಳ ಸರಕಾರಕ್ಕೆ ಇತ್ತು. ಹಾಗಾಗಿ ಜಿಲ್ಲೆಯ ಪ್ರಗತಿಯ ಕಡೆಗೆ ಅವರು ಗಮನ ಹರಿಸಲೇ ಇಲ್ಲ. ಇದರಿಂದ ಕಾಸರಗೋಡು ಜಿಲ್ಲೆ ಸಕಲರೀತಿಯಲ್ಲೂ ಹಿನ್ನಡೆ ಅನುಭವಿಸಿತ್ತು. ವಿದ್ಯಾಭ್ಯಾಸದಿಂದ ಮೊದಲ್ಗೊಂಡು ಸಕಲ ಸಂಪರ್ಕಗಳಿಗೂ ಹತ್ತಿರದ ಮಂಗಳೂರನ್ನು ಅವಲಂಬಿಸಬೇಕಾಗಿ ಬಂದುದು ಕಾಸರಗೋಡು ಕನ್ನಡಿಗರಿಗೆ ವರವೇ ಆಯಿತು. ಸಾಧ್ಯವಾದಷ್ಟೂ ಕನ್ನಡದ ಕಾವಿನಲ್ಲೇ ಕಾಸರಗೋಡು ಬೆಚ್ಚಗಿರಲೆತ್ನಿಸಿತು. ವೃತ್ತಿಪರ ಶಿಕ್ಷಣದ ಮಾತುಬಂದಾಗ ಕರ್ನಾಟಕ ಸರಕಾರ ಗಡಿನಾಡ ಕನ್ನಡಿಗರನ್ನು ಮಲಮಗಳ ಧೋರಣೆಯಿಂದ ಕಾಣುತ್ತಿದೆ ಎಂಬುದು ದುಃಖದಾಯಕ ವಿಚಾರ. ಮಾತೃಭಾಷೆಯ ಪ್ರಶ್ನೆಯೆತ್ತುವ ಚಾಳಿಯನ್ನು ಕರ್ನಾಟಕ ಸರಕಾರ ಇನ್ನೂ ಬಿಟ್ಟಿಲ್ಲ.
ಕಾಸರಗೋಡು ಎಂಬುದು ಒಂದು ಸಾಂಸ್ಕೃತಿಕ ಕನ್ನಡ ವಲಯ. ಮಲಯಾಳವೂ ಸೇರಿದಂತೆ ಕನ್ನಡೇತರ ಹಲವು ಭಾಷೆಗಳನ್ನು ಮನೆಯಲ್ಲಿ ಆಡುತ್ತಲೂ ಶಾಲೆಯಲ್ಲಿ ಕನ್ನಡ ಕಲಿಯುತ್ತಲೂ ಮುಂದುವರಿದವರೆಲ್ಲ ಕನ್ನಡಿಗರೆ. ಅಷ್ಟನ್ನೇ ಆಧಾರವಾಗಿ ಇಟ್ಟುಕೊಂಡು ಅವರು ಕರ್ನಾಟಕದಲ್ಲಿ ವೃತ್ತಿಪರ ಶಿಕ್ಷಣವನ್ನು ಪಡೆಯುವ ಅರ್ಹತೆಗೆ ಭಾಜನರಾಗಬೇಕು. ಬೇರೆ ಯಾವ ಮಾನದಂಡವೂ ಇದಕ್ಕೆ ಬೇಕಾಗಿಲ್ಲ. ಕರ್ನಾಟಕ ಸರಕಾರ ಇದನ್ನು ಅರ್ಥಮಾಡಿಕೊಳ್ಳಬೇಕು.
ಇಲ್ಲಿ ಹೇಳಬೇಕಾದ ಇನ್ನೊಂದು ವಿಚಾರವಿದೆ. ನಾವು ಕನ್ನಡಿಗರು ಕಂಪ್ಯೂಟರ್ ಪರಿಣತರು. ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಪ್ರದೇಶದಿಂದ ಅಸಂಖ್ಯ ಕಂಪ್ಯೂಟರ್ ಪರಿಣತ ಕನ್ನಡಿಗರನ್ನು ಜಗತ್ತಿಗೆ ಸರಬರಾಜು ಮಾಡಿದವರು. ಇನ್ಫೋಸಿಸ್, ವಿಪ್ರೋ ಮೊದಲಾದ ಪ್ರಕಾಂಡ ಸಾಫ್ಟವೇರ್ ಕಂಪೆನಿಗಳ ಮಾಲಕರು ನಮ್ಮ ಕರ್ನಾಟಕದವರು. ಅಂಥ ಕಂಪೆನಿಗಳು ಕರ್ನಾಟಕ ಸರಕಾರದ ಸಾವಿರಗಟ್ಟಲೆ ಎಕರೆ ಜಮೀನನ್ನು ಆವರಿಸಿ ಕುಳಿತಿವೆ. ಅಂಥ ಸಾಹುಕಾರರಿಗೆ ನನ್ನ ಪ್ರಶ್ನೆಯಿಷ್ಟೆ: ಕನ್ನಡದ್ದೇ ಆದ ಜಾಗತಿಕ ಮಟ್ಟದ ಯಾವೆಲ್ಲ ಸಾಫ್ಟವೇರ್ಗಳನ್ನು ಇಂಥ ಬೃಹತ್ ಕಂಪೆನಿಗಳ ಮಾಲಕರಾದ ನೀವು ತಯಾರಿಸಿದ್ದೀರಿ? ಸಮಗ್ರ ಕನ್ನಡ ಸಾಹಿತ್ಯ, ಕನ್ನಡದ ಬದುಕಿಗೆ ಬೇಕಾದ ವಿಚಾರಗಳು ಕಂಪ್ಯೂಟರ್ ಮೂಲಕ ಓಡಾಡುವಂತೆ ಮಾಡಲು ನೀವು ಯಾವ ಬಗೆಯ ಪ್ರಯತ್ನ ಪಟ್ಟಿರಿ? ಜಾಗತೀಕರಣದ ಈ ಸಂದರ್ಭದಲ್ಲಿ ನಮ್ಮ ಕನ್ನಡವನ್ನು ಜಗತ್ತಿನ ಇತರ ಪ್ರಮುಖ ಭಾಷೆಗಳಿಗೆ ಸಂವಾದಿಯಾಗಿ ನಿಲ್ಲಿಸಬಹುದಿತ್ತಲ್ಲ. ಹಾಗೆ ಮಾಡಿದರೆ ನಿಮ್ಮ ಲಾಭಕ್ಕೆ ಚ್ಯುತಿ ಬರುತ್ತಿತ್ತೆ? ಈ ಮಣ್ಣಿನ ಋಣ ತೀರಿಸುವ ಜವಾಬ್ದಾರಿಯಿಲ್ಲವೆ ನಿಮಗೆ?
ಇಂದೀಗ ಪ್ರತಿಯೊಂದು ಸಣ್ಣಪುಟ್ಟ ವಿಚಾರಗಳಿಗೂ ಇಂಗ್ಲಿಷ್ನ್ನು ಮೊರೆಹೊಗುವ ಗತಿಗೇಡು ನಮ್ಮದು. ಅಥರ್ಾತ್ ಕನ್ನಡದ ಕಂಪ್ಯೂಟರೀಕರಣ ಆಮೆ ನಡಿಗೆಯದ್ದು. ಮುಂದಿನ ದಿನಗಳಲ್ಲಿ ಕನ್ನಡವು ಜಾಗತಿಕ ಮಟ್ಟದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಬೇಕಾಗಿದೆ. ಆ ದೃಷ್ಟಿಯಲ್ಲಿ ಕನ್ನಡ ಮುಂದುವರಿದರೆ ಮಾತ್ರ ಕೇರಳದ ತೆಕ್ಕೆಯಲ್ಲಿ ಕುಳಿತ ಕಾಸರಗೋಡು ಕನ್ನಡಿಗರು ಗರಿಬಿಚ್ಚಿ ಹಾರುವ ಧೈರ್ಯ ತೋರಬಹುದು. ಅಲ್ಲವಾದರೆ ಮುದುಡಿ ಮೂಲೆ ಪಾಲಾಗಬೇಕಾದೀತು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಕನ್ನಡಿಗರಿಗೆ ಸಲ್ಲಬೇಕಾದ ಪಾಲೇನು ಎಂಬುದು ಕೂಡ ನಿಷ್ಕರ್ಷೆಯಾಗಬೇಕು. ಶಾಸ್ತ್ರೀಯ ಸ್ಥಾನಮಾನದ ಸುಖವನ್ನು ಕೋಟಿಗಟ್ಟಲೆ ಹಣದ ಮೂಲಕ ಕರ್ನಾಟಕ ಪಟ್ಟರೆ ಸಾಲದು; ಅದರಲ್ಲಿ ಕಾಸರಗೋಡಿನ ಕನ್ನಡಿಗರಿಗೂ ಪಾಲಿದೆ ಎಂಬುದನ್ನು ಕರ್ನಾಟಕ ಸರಕಾರ ತಿಳಿದು ವರ್ತಿಸಬೇಕು. ಈ ಎಚ್ಚರಿಕೆಯನ್ನು ಕರ್ನಾಟಕ ಸರಕಾರ ಸದಾ ಬಗಲಲ್ಲಿಟ್ಟುಕೊಂಡು ನಡೆದಾಡಿದರೆ ಗಡಿನಾಡ ಕನ್ನಡಿಗರು ಕಿಂಚಿತ್ತಾದರೂ ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯ.
ಚಿರಾಯುವಾಗಲಿ ಕಾಸರಗೋಡು ಕನ್ನಡ.

‍ಲೇಖಕರು G

8 May, 2014

3 Comments

  1. maheshwari.u

    nija, sir, shashreeya bhasheya sthanamana kannadakke sikkidaga sambhrama pattavaralli kasaragodu kannadigaruu iddaru.aadare ee sambandhavaada kaaryayojanegalenu embudara bagge kasaragodinavaru innuu ajnaathare.shasthreeya sthanamanada sukha emba maathinalle eno dhwani iddahagide.adu bare sukha vagiddare adaralli palu bedave beda. kannadadalli unnatha adhyayanada avakasha iruva kendragalannu joteyagi samaveshagolisi hiriya kiriya vidvamsarannu aahvanisi kaalabadha hagoo phalaprada kaarayayojanegalannu roopisuvudiddalli eshtu chennaagithu!

  2. mallikarrjuna kalamarahalli

    nimma chintaneyalli arthapuurna olanootagala , vartamaanada vaastava ide ABHINANDANE

  3. Rajan

    A very timely and heart touching story, as long as Kannada warms our heart we are all Kannadigaru and no one can take that away. Sorry for writing in English but I am helpless in that..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading