‘ಕಾಶ್ಮೀರ್ ನಾಮಾ’ದಲ್ಲಿ ಉಳಿದು ಹೋದ ಪ್ರಶ್ನೆಗಳು..

ಫೆ.೧೬ ದೆಹಲಿಯ ಪ್ರಧಾನಮಂತ್ರಿಗಳ ನಿವಾಸದ ಕೂಗಳತೆಯ ದೂರದಲ್ಲಿರುವ ಸಾಮ್ರಾಟ್ ಅಶೋಕ್ ಹೊಟೇಲ್ ನ ಲಾಂಜ್ ನಲ್ಲಿ ಶಾ ಫೈಸಲ್ ಅವರನ್ನು ಹಿಂದಿಯ ಸೂರ್ಯ ಸಮಾಚಾರ್ ನ್ಯೂಸ್ ಚಾನಲ್ ಖ್ಯಾತ ಪತ್ರಕರ್ತ ಪುಣ್ಯಪ್ರಸುನ್ ವಾಜಪೇಯಿ (exclusive interview) ನಡೆಸುತ್ತಿದ್ದರು.

ಇದ್ದಕ್ಕಿದ್ದಂತೆ ಬಂದ ಹೊಟೇಲ್ ನ ಭದ್ರತಾ ಸಿಬ್ಬಂದಿಗಳು,ವ್ಯವಸ್ಥಾಪಕರು ಫೈಸಲ್ ಅವರ ಸಂದರ್ಶನವನ್ನು ನಿಲ್ಲಿಸುವಂತೆ ತಾಕೀತು ಮಾಡುತ್ತಾರೆ. ಹೊಟೇಲ್ ಸಾಮ್ರಾಟ್‌ನಲ್ಲಿ ತಂಗಿದ್ದ ಶಾ ಫೈಸಲ್ ಅವರನ್ನು ಸಂದರ್ಶಿಸಲು ಪೂರ್ವ ಯೋಜಿತವಾಗಿ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿ ಹೊಟೇಲ್ ನ ವ್ಯವಸ್ಥಾಪಕರಿಂದಲೂ ಅನುಮತಿ ಪಡೆಯಲಾಗಿತ್ತು. ಆದರೆ ಸಂದರ್ಶನ ಆರಂಭವಾಗಿ ೧೩ ನಿಮಿಷಕ್ಕೆ ಆತಂಕಗೊಂಡವರಂತೆ ಓಡಿಬಂದ ಹೊಟೇಲ್ ನ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳು ಸುದ್ದಿ ಮಾಧ್ಯಮ ದ ಸಿಬ್ಬಂದಿಯನ್ನು ಸುತ್ತುವರಿದು ಕಾರಣ ಕೊಡದೆ ಸಂದರ್ಶನವನ್ನು ನಿಲ್ಲಿಸಿ ಹೊಟೇಲ್ ನಿಂದ ಹೊರ ಹಾಕುತ್ತಾರೆ. ಅಲ್ಲಿಗೆ ಶಾ ಫೈಸಲ್ ಅವರ ಸಂದರ್ಶನ ಮುಕ್ತಾಯವಾಗುತ್ತದೆ.

ಕಾಶ್ಮೀರದವರೇ ಆದ ಶಾ ಫೈಸಲ್ ೨೦೦೯ ನೇ ಬ್ಯಾಚ್ ನ ಐಎಎಸ್ ಟಾಪರ್. ಒಂದೂವರೆ ತಿಂಗಳ ಹಿಂದೆಯಷ್ಟೆ ಜಮ್ಮು-ಕಾಶ್ಮೀರ ದ ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಹೊರಬಂದವರು. ಕಾಶ್ಮೀರದ ರಾಜಕೀಯ ಬಗ್ಗೆ , ಪ್ರಭುತ್ವಗಳ ನೀತಿ ನಿರೂಪಣೆಗಳ ಬಗ್ಗೆ ತುಟಿ ಬಿಚ್ಚಿ ಮಾತನಾಡಲು. ಪ್ರಜಾಪ್ರಭುತ್ವ ಕಾಶ್ಮೀರಕ್ಕಾಗಿ ಏನನ್ನಾದರೂ ಮಾಡಲು, ಭರವಸೆ ಕಳೆದುಕೊಂಡು ಪ್ರಚೋದನೆಯ ಸಂಘರ್ಷದಲ್ಲಿ ಈಜುತ್ತಿರುವ ಕಾಶ್ಮೀರಿ ಯುವ ಸಮುದಾಯಕ್ಕಾಗಿ ಸರಿದಾರಿಯೊಂದ ತೋರಲು ಪ್ರಜಾತಾಂತ್ರಿಕ ದಾರಿಗಾಗಿ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದರು.

ಶಾ ಫೈಸಲ್ ಮಾತನಾಡುತ್ತಾ ಹೋಗುತ್ತಾರೆ…..

ಪುಲ್ವಾಮಾ ಘಟನೆ ಕಳೆದ ೩೦ ವರ್ಷಗಳಲ್ಲಿ ನಡೆದ ಅತ್ಯಂತ ಘೋರ ಘಟನೆ. ಈ ಘಟನೆಯ ಹಿಂದೆ ನಮ್ಮ ( ಭಾರತ ಸರ್ಕಾರ) ವಿಫಲತೆ ಇದೆ. ಕಾಶ್ಮೀರದಲ್ಲಿ ರಾಜಕೀಯ ನಿರ್ವಾತವಿದೆ. ವಾಸ್ತವಾಗಿ ಅಲ್ಲಿ ಡೆಮಾಕ್ರಟಿಕ್ ರಾಜಕೀಯ ವಾತಾವರಣ ನಿರ‍್ಮಾಣ ಮಾಡುವ ಬದಲು ಒಂದು ಅಮಾನವೀಯ ಸಂಕಷ್ಟವನ್ನು ಪೋಷಿಸಿಕೊಂಡು ಬರಲಾಗುತ್ತಿದೆ. ನಾವಿಂದು ನಾಗರೀಕರು-ಸೈನಿಕರ ಎರಡು ಕಡೆಯಿಂದಲೂ ಹೆಣಗಳನ್ನು ಎಣಿಸುತ್ತಿದ್ದೇವೆ. ಕಾಶ್ಮೀರದ ಸ್ಥಿತಿ ತುಂಬಾ ಭೀಕರವಾಗಿದೆ. ಯುವಕರು, ವಿದ್ಯಾವಂತರು ಹಿಂಸೆಗೆ ಪ್ರಚೋದಗೊಳ್ಳುತ್ತಿದ್ದಾರೆ. ಇಂತಹುದರ ಮಧ್ಯೆ ಐಎಎಸ್ ಪಾಸ್ ಮಾಡುವುದು, ದುಡ್ಡು ದುಡಿಯುವುದು ಇದ್ಯಾವುದನ್ನು ನಾನು ಮುಖ್ಯವಾಗಿಸಿಕೊಳ್ಳಲಾರೆ. ಕಾಶ್ಮೀರದ ಈ ಯುದ್ದಭೂಮಿಯಿಂದ ಬಂದ ನಾನು ಈ ದೇಶಕ್ಕಾಗಿ ಯೋಚಿಸಬೇಕಾಗಿದೆ. ಎನ್ನುತ್ತಾರೆ.

ಕಾಶ್ಮೀರದಲ್ಲಿ ಒಂದು ರಾಜಕೀಯ ನಿರ್ವಾತವಿದೆ. ಅಲ್ಲಿ ಎಲ್ಲಿಯವರೆಗೆ ಒಂದು ರಾಜಕೀಯ ಕಾರ್ಯವಿಧಾನ (political process) ಆರಂಭಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇದೊಂದು ಸಮಸ್ಯೆಯಾಗಿಯೇ ಮುಂದುವರೆಯುತ್ತದೆ. ಇದರಲ್ಲಿ ಹಿಂಸೆ ಮತ್ತು ಸಂಘರ್ಷ ಒಂದೆ ತೆರನಾದ ಪ್ರತಿಕ್ರಿಯೆಯೇ ಆಗಿರುತ್ತದೆ. ಪ್ರತಿ ಬಾರಿ ಕಾಶ್ಮೀರವನ್ನು ಹತ್ತಿಕ್ಕುವ ಕೆಲಸ ಮಾಡಿದಾಗ ಅದರ ಅಂತ್ಯ ದುರಂತವೇ ಆಗಿರುತ್ತದೆ. ಈ ದೇಶದ ನಿಜವಾದ ಪ್ರಜಾಪ್ರಭುತ್ವದ ಹೊಳಪನ್ನು ನೋಡಬೇಕಾಗಿದ್ದರೆ ಅದು ಕಾಶ್ಮೀರದಲ್ಲಿ ನೋಡಬೇಕಾಗಿತ್ತು. ಆದರೆ ಅಲ್ಲಿನ ಯುವಕರು ಪ್ರಜಾಪ್ರಭುತ್ವದಿಂದ ದೂರ ಉಳಿದಿದ್ದಾರೆ. ಹಿಂಸೆಯ ಹಾದಿ ತುಳಿದಿದ್ದಾರೆ. ಕೇವಲ ಮಿಲಿಟರಿಯಿಂದ ಆಡಳಿತವನ್ನು ಮುನ್ನಡೆಸುತ್ತೇವೆ ಎನ್ನುವುದಾದರೆ ಅದು ನಾಗರೀಕರ ವಿರುದ್ದದ ಯುದ್ಧವಾಗಿ ಮಾರ್ಪಾಡುಗೊಳ್ಳುತ್ತದೆ. ಇದರ ನಷ್ಟ ಕಾಶ್ಮೀರಿಗಳದ್ದೇ ಆಗಿದ್ದು, ಅಲ್ಲಿನ ತಾಯಂದಿರದ್ದು, ಮುಗ್ದ ಜನರದ್ದೇ ಆಗಿರುತ್ತದೆ.. ದೆಹಲಿಯಲ್ಲಿ ಕುಳಿತವರಿಗೆ, ಕುರ್ಚಿಯ ಹಿಂದೆ ಓಡುವವರಿಗೆ ಇದರ ಬಗ್ಗೆ ಯಾವ ಸಂಬಂಧವೂ ಇಲ್ಲ.

ಐದು ವರ್ಷಗಳ ಹಿಂದೆ ಕಾಶ್ಮೀರದ ವಿದ್ಯಮಾನ ಹೀಗಿರಲಿಲ್ಲ. ೨೦೧೧-೧೨ ರ ಸಂದರ್ಭದಲ್ಲಿದ್ದ ಪರಿಸ್ಥಿತಿ ಈಗ ಬಿಗಾಡಾಯಿಸಿದೆ. ಕಾಶ್ಮೀರದ ಜನತೆ ೩೦-೪೦ ವರ್ಷಗಳಿಂದ ಇಟ್ಟುಕೊಂಡು ಬಂದಿದ್ದ ವಿಶ್ವಾಸ ಕಳೆದ ಐದು ವರ್ಷಗಳಲ್ಲಿ ಕುಸಿದು ಹೋಗಿದೆ. ಹಿಂಸೆಯಲ್ಲದೆ ಬೇರೆ ಮಾರ್ಗವೇ ಇಲ್ಲ ಎಂಬಂತಾಗಿದೆ. ದುರಾದೃಷ್ಟವೆಂದರೆ ಪ್ರಭುತ್ವ ಕೂಡ ಮಿಲಿಟರಿಯಿಂದ ಸರಿಪಡಿಸುವ ನಿರ್ಧಾರಕ್ಕೆ ಬಂದಿದೆ. ಒಂದು ರಾಜಕೀಯ ವ್ಯವಸ್ಥೆ ಮಾಡಬೇಕಾದ ಕೆಲಸವನ್ನು ಇಂದು ಮಿಲಿಟರಿಗೆ ಒಪ್ಪಿಸಲಾಗಿದೆ. ರಾಜಕೀಯ ವ್ಯವಸ್ಥೆಯೊಂದು ಮಾಡಬೇಕಾದ ಕೆಲಸವನ್ನು ಮಿಲಿಟರಿ ಮಾಡುತ್ತಿದೆ.. ಇದು ಸರಿಯಲ್ಲ. ಮತ್ತೆ ನಾವು ಕಾಶ್ಮೀರದಲ್ಲಿ ರಾಜಕೀಯ ಸಂವಾದವನ್ನು ಆರಂಭಿಸಬೇಕು, ಸಮಸ್ಯೆಗೆ ಪರಿಹಾರ ಹೊಸತಾಗಬೇಕಿಲ್ಲ. ಹಳೆಯ ಪರಿಹಾರ ಸೂತ್ರಗಳೇ ನಮ್ಮಲ್ಲಿ ಇವೆ. ಅತಿರೇಕತೆಯ ರಾಷ್ಟ್ರೀಯತೆ ಹೆಸರಿನಲ್ಲಿ ನಾವು ಬೇರೆ – ನೀವು ಬೇರೆ ಎಂಬ ವಿಭಜನೆ ನಡೆದಿದೆ. ಕಾಶ್ಮೀರಕ್ಕೆ ರಾಷ್ಟ್ರೀಯತೆಯ ಹೆಸರಿನಲ್ಲಿ ಬೆಂಕಿ ಹಚ್ಚಲಾಗಿದೆ. ಕಾಶ್ಮೀರ ೭೦ ಸಾವಿರ ಜನರ ಒಂದು ಗೋದಾಮು ಆಗಿದೆ. ನಾವು ಬೇರೆ-ನೀವು ಬೇರೆ ಎಂಬ ಭಾವನೆಯಿಂದ ನೋಡಲಾಗುತ್ತಿದೆ. ..

* ಕಾಶ್ಮೀರದಲ್ಲಿ ನಡೆಯುತ್ತಿರುವುದು ಒಂದು ರಾಜಕೀಯ ಹೋರಾಟ ಎಂದು ಪರಿಗಣಿಸಬೇಕು.
* ರಾಜಕೀಯ ಸಂವಾದ, ಚರ್ಚೆಯ ಅವಕಾಶದ ಬಾಗಿಲುಗಳನ್ನು ತೆರೆಯಬೇಕು.
* ಕಾಶ್ಮೀರ ಜನತೆಯ ರಾಜಕೀಯ ಹಕ್ಕು ಮತ್ತು ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಕಾಣಬೇಕು.
* ಜಮ್ಮು-ಕಾಶ್ಮೀರದ ವಿವಿದ ಪ್ರಾಂತ್ಯಗಳ ಪ್ರಾದೇಶಿಕ ಮನೋಭಾವನ್ನು ಅಭಿಪ್ರಾಯವನ್ನು ಪರಿಗಣಿಸಬೇಕು.

ಬಹಳ ವರ್ಷಗಳಿಂದ ನಾವು ಹೇಳುತ್ತಿದ್ದೇವೆ. ಕಾಶ್ಮೀರಿ ಪಂಡಿತರನ್ನು ಮತ್ತೆ ಕಣಿವೆ ಕರೆತರಲಾಗುವುದು ಎಂದು ಹೇಳುತ್ತಾ ಬರಲಾಗಿದೆ ಇದೊಂದು ಓಲೈಕೆಯ ಮಾತಾಗಿಯೇ ಉಳಿದಿದೆ. ಪ್ರತಿದಿನ ಕಾಶ್ಮೀರಿ ಪಂಡಿತರು ತಮ್ಮ ಸಂಸ್ಕೃತಿಯಿಂದ ದೂರ ಉಳಿಯುವಂತಾಗಿದೆ. ಇದರಿಂದ ವೈವಿಧ್ಯತೆಯ ನಷ್ಟ ಅನುಭವಿಸುತ್ತಿದ್ದೇವೆ. ಇದರ ಬಗ್ಗೆ ನಾವು ಮಾತನಾಡುತ್ತಿಲ್ಲ. ಬದಲಿಗೆ ನಾವು ಹೊಸ ಕಂಪನಿಗಳನ್ನು ಕಾಶ್ಮೀರಕ್ಕೆ ಕಳುಹಿಸಲು ಸಿದ್ದರಿದ್ದೇವೆ. ಹೊಸ ಮೆಷಿನ್ ಗನ್ , ಬಂದೂಕುಗಳ ಸೈನ್ಯವನ್ನು ಗಡಿಗೆ ಕಳುಹಿಸಲಿದ್ದೇವೆ ಎನ್ನಲಾಗುತ್ತಿದೆ. ಈ ರೀತಿಯ ಕ್ರಮ ಫಲನೀಡುವುದಿಲ್ಲ. ಈ ರೀತಿ ಕಾಶ್ಮೀರದ ಯುದ್ಧವನ್ನು ಗೆಲ್ಲಲಾಗದು, ಯುದ್ಧ ಮತ್ತು ಶಸ್ತ್ರಾಸ್ತ್ರಗಳಿಂದ ಕಾಶ್ಮೀರ ಸಮಸ್ಯೆ ಬಗೆಹರಿಸಲಾಗದು , ನಿಶ್ಚಿತವಾಗಿ ಹೇಳಬಲ್ಲೆ ಮಾನವೀಯತೆ,ರಾಜಕೀಯ ನಡವಳಿಯಿಂದ ಮತ್ರ ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂಬುದನ್ನು ಮನಗಾಣಬೇಕು..

ಇಷ್ಟು ಮಾತುಗಳನ್ನು ಅಡುವ ಹೊತ್ತಿಗೆ ಸಂದರ್ಶನ ಬಲವಂತವಾಗಿ ತಡೆಹಿಡಿಯಲ್ಪಡುತ್ತದೆ. ದಿಲ್ಲಿಯಲ್ಲಿ ಪ್ರಧಾನಿಯ ನಿವಾಸದ ಸಮೀಪವೂ ಒಬ್ಬ ನಾಗರೀಕನಾಗಿ ಮಾತನಾಡಲು ಬಿಡುವುದಿಲ್ಲ ಎಂದಾದರೆ ಇದೊಂದು ಆಶ್ಚರ್ಯದ ಸಂಗತಿ. ಆದರೆ ಇಲ್ಲೇನು ನಡೆಯುತ್ತಿದೆ ಎಂದು ಪತ್ರಕರ್ತ ಪುಣ್ಯಪ್ರಸುನ್ ಅವರ ಪ್ರಶ್ನೆ ಪ್ರಸಕ್ತ ಸನ್ನಿವೇಶದಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಅಷ್ಟಕ್ಕೂ ಫೈಸಲ್ ಅವರು ಆಡಿದ ಮಾತುಗಳಲ್ಲಿ ಇದ್ದ ದೇಶ ದ್ರೋಹವಾದರೂ ಏನು? ಅವರ ಮಾತುಗಳು ಯಾರನ್ನೂ , ಏನನ್ನೂ ಬೊಟ್ಟು ಮಾಡಿ ತೋರಿಸುತ್ತಿತ್ತು?

ದೇಶಭಕ್ತಿ ಮತ್ತು ರಾಷ್ಟ್ರೀಯತೆ ಎಂಬುದು ಒಂದು ರಾಜಕೀಯ ಪಕ್ಷವೊಂದರ ಸದಸ್ಯತ್ವದಂತೆ ಭಾವಿಸಿರುವ ಸನ್ನಿಪೀಡಿತ ಸಮುದಾಯ ವಾಸ್ತವದ ಸಂಗತಿಗಳನ್ನು ಮರೆತು ಯುದ್ಧ. ದೇಶಪ್ರೇಮ ಎಂಬ ಅಬ್ಬರದಲ್ಲಿ ಮೊಳಗಿದೆ. ಬಲಿದಾನಗೈದ ಮಂಡ್ಯದ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದ ನಟ. ಸಾಮಾಜಿಕ ಚಿಂತಕ ಪ್ರಕಾಶ್‌ರಾಜ್ ಅವರಿಗೆ ಘೇರಾವ್ ಹಾಕುವವರ ಮೆದುಳಲ್ಲಿ ಉಗ್ರರ ತಲೆಯಲ್ಲಿ ತುಂಬಿದ ಹಿಂಸಾ ಪೀಡಿತ ಸ್ವರ್ಗದ ಅಮಲೇ ತುಂಬಿರುವುದು ಕಾಣುತ್ತಿದೆ. ಪುಲ್ವಮಾ ದಾಳಿಗೆ ಕಾರಣವಾದ ಅಡಳಿತ ವೈಫಲ್ಯವನ್ನು ಪ್ರಶ್ನಿಸುವಂತಿಲ್ಲ. ನಮ್ಮದೇ ನೆಲದ ಮುಸ್ಲಿಮರು ಇಂದು ಮತ್ತೆ ಮತ್ತೆ ತಮ್ಮ ಪ್ರಾಮಾಣಿಕತೆಯನ್ನು, ನಿಷ್ಠೆಯನ್ನು ತೋರಿಸಬೇಕಾದ ಅನಿವಾರ‍್ಯತೆಯನ್ನು ಸೃಷ್ಟಿಸಲಾಗುತ್ತಿದೆ.

ಯುದ್ಧ ಯುದ್ಧ ಎಂಬ ಚೀತ್ಕಾರಕ್ಕೆ ಬಿದ್ದ ಮಂದಿಗೆ ಯುದ್ಧ ಬೇಡ ಎನ್ನುವವರೆಲ್ಲಾ ದೇಶದ್ರೋಹಿಗಳಂತೆ ಗುರಿಯಾಗಬೇಕಾಗಿದೆ. ಕಾಶ್ಮೀರದ ಮೂಲ ಸಮಸ್ಯೆಯ ಕುರಿತು ಒಂದು ರಾಜಕೀಯ ಸಂವಾದವೇ ಈ ದೇಶದಲ್ಲಿ ನಡೆಸಲಾಗದಷ್ಟು ಅಸಹಿಷ್ಣುತೆ-ಅವಿವೇಕವೊಂದರ ಬೀಜವನ್ನು ಕಳೆದ ೫ ವರ್ಷಗಳಲ್ಲಿ ಬಿತ್ತಲಾಗಿದೆ. ಇದೇ ಮಾತನ್ನು ಶಾ ಫೈಸಲ್ ತಮ್ಮ ಸಂದರ್ಶನದಲ್ಲಿ ಸೂಕ್ಷ್ಮವಾಗಿ ಎತ್ತಿದ್ದಾರೆ. ಬಹುಶಃ ಈ ಮಾತೇ ಸಂದರ್ಶನ ನೋಡುತ್ತಿದ್ದ ಕೆಚ್ಚಿನೆದೆಯ ಚೌಕಿದಾರನ ಗುಂಡಿಗೆಗೆ ಕಾವು ಗೀಚಿರಬೇಕು.

ಪಾಕಿಸ್ತಾನ ಒಂದು ಅರಾಜಕ ರಾಷ್ಟ್ರ. ಧರ್ಮದ ಅಫೀಮು , ಭ್ರಷ್ಟಾಚಾರ, ಸಿದ್ದಾಂತದ ದಿವಾಳಿತನ, ರಾಜಕೀಯ ಅಜ್ಞಾನ ಗಳಿಂದ ತುಂಬಿ ಹೋಗಿರುವ ಪಾಕಿಸ್ತಾನವನ್ನು ಯುದ್ಧ ಮಾಡಿ ನಾಶ ಮಾಡಬೇಕಾದ ಅಗತ್ಯವಿಲ್ಲ. ಜಾಗತಿಕಮಟ್ಟದಲ್ಲಿ ರಾಜತಂತ್ರವನ್ನು ಹೆಣೆದು ಏಕಾಂಗಿಯಾಗಿಸಿದರೆ ಸಾಕು ಪಾಕಿಸ್ತಾನ ತನಗೆ ತಾನೆ ಉರಿದು ಹೋಗಿ ಭೂಪಟದಲ್ಲಿ ಇಲ್ಲವಾಗುತ್ತದೆ. ಕೇವಲ ಒಂದು ಸರ್ಜಿಕಲ್ ಸ್ಟೈಕ್ ನ್ನು ಮಹಾನ್ ಯುದ್ಧ ಗೆದ್ದ ಹುಮ್ಮಸ್ಸಿನಲ್ಲಿ ಢಾಣಾ ಡಂಗೂರ ಸಾರಿದ ನಮ್ಮ ಸರ್ಕಾರ ಮತ್ತವರ ಭಕ್ತಗಣ, ತನ್ನ ಎದೆಯ ಮೇಲೆ ದಾಳಿ ಮಾಡಿದ ಜಾಗತಿಕ ಭಯೋತ್ಪಾದಕ ಲಾಡೆನ್ ನನ್ನು ಸದ್ದಿಲ್ಲದೆ ಮುಗಿಸಿದ ಅಮೇರಿಕಾದಿಂದ ಯುದ್ಧ ತಂತ್ರ ಕಲಿಯುವುದು ಬಹಳಷ್ಟಿದೆ ಎನಿಸುತ್ತಿಲ್ಲವೆ?

ಉಗ್ರರ ದಾಳಿಯನ್ನು ತನ್ನದೆ ನೆಲದ ಒಂದು ಜನಸಮುದಾಯವನ್ನು ದ್ವೇಷಿಸುವ , ಪ್ರಭುತ್ವದ ಸರ್ವಾಧಿಕಾರ ಪ್ರಶ್ನಿಸುವವರನ್ನು, ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವವರನ್ನು , ಪೊಳ್ಳು ದೇಶಪ್ರೇಮವನ್ನು ನಿರಾಕರಿಸುವವರನ್ನು ಹತ್ತಿಕ್ಕುವುದು ರಾಷ್ಟ್ರಕಾರ್ಯವಾಗಿ ಕೆಲವರಿಗೆ ಕಾಣುತ್ತಿದೆ. ಪಾಕಿಸ್ತಾನಕ್ಕೆ ಭಾರತದ ಕುರಿತು ಬೇಹುಗಾರಿಕೆ ಮಾಡಿದವರಲ್ಲಿ , ಉಗ್ರರಿಗೆ ನೆರವು ನೀಡಿದವರಲ್ಲಿ ಹಿಂದೂಗಳೂ, ಮುಸ್ಲಿಂರೂ ಇದ್ದಾರೆ. ಅವರು ಈ ದೇಶದ ದ್ರೋಹಿಗಳು ಮತ್ತು ಶತ್ರುಗಳೇ ಅಗಿರುತ್ತಾರೆ ವಿನಃ, ಅವರೆಂದೂ ಹಿಂದೂ ಅಥವಾ ಮುಸ್ಲಿಂ ಆಗಿರಲಾರ.

ಕಾಶ್ಮೀರದ ಶಾ ಫೈಸಲ್ ಎಂದ ಮಾತ್ರಕ್ಕೆ ಆತನ ಮಾತುಗಳು ನಿಜ ಭಾರತದ ಅತ್ಮದ ಮಾತುಗಳೇ ಆಗಿರಲಾರದು ಎಂಬ ತೀರ‍್ಮಾನಕ್ಕೆ ಬಂದು ಬಾಯಿ ಕಟ್ಟಬಹುದು ನಿಜ, ಆದರೆ ಕಾಶ್ಮೀರದ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗದು. ಮತ್ತೊಂದು ಅವಧಿಯ ಅಧಿಕಾರ ಬೆಳೆಗೆ ಕಣ ಹಸನು ಮಾಡಿಕೊಳ್ಳಲಾಗುತ್ತಿದೆ.

‍ಲೇಖಕರು avadhi

February 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. Shyamala Madhav

    ವಿಚಾರಪೂರ್ಣ ಅತ್ಯುತ್ತಮ ಲೇಖನ.

    ಪ್ರತಿಕ್ರಿಯೆ
  2. Sarayu

    UTTAMA LEKHANA. NIMMA LEKHANADA AaSHOTTARAGALU EEDERUVANTIDDARE ESHTU CHENNAGIRUTTE

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: