ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕಾವ್ಯ ಕಾಜಾಣ’ ಫೋಟೋ ಆಲ್ಬಂ

ಕಾವ್ಯ ಕಾಜಾಣ -೨೦೧೪

ಸ್ಥಳ : ಚಾವಡಿ, ನಾಟಕ ಅಕಾಡೆಮಿ. ಕನ್ನಡ ಭವನ ಬೆಂಗಳೂರು.
‘ಕಾಜಾಣ’ ಕಲೆ ಸಾಹಿತ್ಯದ ಅನಾವರಣಕ್ಕೆ, ಯುವಕರಲ್ಲಿ ಇರುವ ಸಾಹಿತ್ಯ ಇನ್ನಿತರ ಸೃಜನ ಕಲೆಗಳಲ್ಲಿನ ಪ್ರತಿಭೆ ಮತ್ತು ಆಸಕ್ತಿಗಳಿಗೆ ವೇದಿಕೆಯಾಗುವ ಸಲುವಾಗಿ ಕಟ್ಟಿಕೊಂಡ ಉತ್ಸಾಹಿ ಯವಕರೇ ಕಟ್ಟಿಕೊಂಡ ಗುಂಪು. ಇದು ಗುಂಪು ಅಂತ ಅನ್ನಿಸಿಕೊಂಡರೂ ಸದಾ ಕೆಲಸ ಮಾಡುವುದು ಬಯಲಿನ ಆಶಯ ಉಳ್ಳ ಅನೇಕರಿಗೆ. ಎಲ್ಲೂ ವ್ಯಕ್ತಿ ನಿಷ್ಟವಾಗಿ ದುಡಿಯದೆ ಉತ್ಸಾಹಿ ಯುವ ಮನಸ್ಸುಗಳ ಸಮಷ್ಟಿ ದೃಷ್ಟಿಯಲ್ಲಿ ಕಾಜಾಣ ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಇದರ ಪರಿಧಿಯೊಳಗೆ ಸಾಹಿತ್ಯ. ಚಿತ್ರಕಲೆ, ಸಂಗೀತ, ಸಿನೆಮಾ, ಫೋಟೋಗ್ರಫಿ , ರಂಗಭೂಮಿ ಹೀಗೆ ಅನೇಕ ಪ್ರಕಾರಗಳೊಟ್ಟಿಗೆ ಇರುವ ಯುವಕರಿಗೆ ಮುಖವಾಣಿಯಾಗಿದೆ. ಈ ಎಲ್ಲಾ ಆಶಯಗಳನ್ನು ಜಾರಿಗೆ ತರಲು ಮೊದಲು ಅಭಿನಯಕ್ಕೆ ಸಂಭಂದಿಸಿದ ಸಿನೆಮಾ ಶಿಬಿರವನ್ನು ಮತ್ತು ಕಾವ್ಯಕ್ಕೆ ಸಂಭಂದಿಸಿದ ಕಾವ್ಯ ಕಮ್ಮಟವನ್ನು ಮೂರು ದಿನಗಳ ಕಾಲ ಕುಪ್ಪಳಿಯಲ್ಲಿ ನಾಡಿನ ವಿವಿಧ ಮೂಲೆಗಳಿಂದ ಬಂದ ಆಸಕ್ತರಿಗೆ ಆಯೋಜಿಸಲಾಗಿತ್ತು . ಜೊತೆಗೆ ವರ್ಷಕೊಮ್ಮೆ ಕಾಜಾಣ ಕಾವ್ಯ ಪುರಸ್ಕಾರವನ್ನು ಕೂಡ ಕೊಡ ಮಾಡಲಾಗುತ್ತಿದೆ.
ಹೀಗೆ ಅನೇಕ ಆಶಯಗಳನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ಕಾಜಾಣ 25 ನೇ ಮೇ 2014 ರ ಭಾನುವಾರ ನಾಟಕ ಅಕಾಡೆಮಿಯ ಚಾವಡಿಯಲ್ಲಿ ‘ಕಾವ್ಯ ಕಾಜಾಣ- ೨೦೧೪ ‘ ಅನ್ನುವ ಹೆಸರಿನಲ್ಲಿ ಕವಿಗೊಷ್ಠಿಯನ್ನು ಆಯೋಜಿಸಿತ್ತು. ಈ ಕವಿಗೋಷ್ಠಿಯಲ್ಲಿ ಕವಯತ್ರಿ ಎಚ್.ಎಲ್. ಪುಷ್ಪ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಎಲ್. ಹನುಮಂತಯ್ಯನವರು ಉದ್ಘಾಟನೆಯನ್ನು ಮಾಡಿದರು. ಕಾಜಾಣದ ರೂವಾರಿ, ಕವಿ ಬೇಲೂರು ರಘುನಂದನ್ ಉಪಸ್ತಿತರಿದ್ದರು. ನಾಡಿನ ವಿವಿಧ ಮೂಲೆಗಳಿಂದ 20 ಜನ ಕವಿಗಳು ಆಗಮಿಸಿದ್ದರು. ಬೆಂಗಳೂರಿನ ಕವಿಗಳು ಮಾತ್ರವಿರದೆ ಉತ್ತರ ಕರ್ನಾಟಕ, ಹಾಸನ , ಮೈಸೂರು, ಇನ್ನೂ ಹಲವೆಡೆಗಳಿಂದ ಕವಿಗಳು ಭಾಗವಿಸಿದ್ದರಿಂದ ಈ ಕವಿಗೋಷ್ಠಿ ವಿಶಿಷ್ಟವಾಗಿತ್ತು.
ಭಾಗವಹಿಸಿದ್ದ ಎಲ್ಲ ಇಪ್ಪತ್ತು ಮಂದಿ ಕವಿಗಳಿಗೆ ಹಣತೆಯ ದೀಪವನ್ನು ಹತ್ತಿಸಿಕೊಡುತ್ತ ವಿಶಿಷ್ಟವಾಗಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಎಲ್ ಹನುಮಂತಯ್ಯನವರು ಕವಿತೆ ಹುಟ್ಟಿಕೊಳ್ಳುವ ಬಗೆಯನ್ನು ಅನೇಕ ಉದಾಹರಣೆಗಳನ್ನು ಕೊಡುತ್ತ ಕಾಜಾಣದ ಕಾರ್ಯವನ್ನು ಕುರಿತು ಅಭಿನಂದಿಸಿದರು. ಕವಿಗೆ ಗುಂಪು ಅನ್ನುವುದಿಲ್ಲ ಅವನು ತನ್ನ ಮನೋಶಕ್ತಿಯಿಂದ ಸಮಷ್ಟಿಯನ್ನು ವಿಶ್ವ ತತ್ವವನ್ನು ಕಟ್ಟಿ ಕೊಡುವ ಅಶಾಂತ ಸಂತ ಎಂದರು. ವಾರದ ಕೊನೆಯ ದಿನಗಳಲ್ಲಿ ಯುವಕರು ನಗರದ ಆಚೆ ಹೋಗಿ ರೇವು ಪಾರ್ಟಿಗಳನ್ನು ಮಾಡುತ್ತಿರುವ ಈ ದಿನಗಳಲ್ಲಿ ಭಾಗವಹಿಸಿದ ಕವಿಗಳೆಲ್ಲಾ ಕಾವ್ಯದ ಹುಚ್ಚು ಹತ್ತಿಸಿಕೊಂಡಿರುವುದು ಬಹು ಮುಖ್ಯವಾದ ಅಂಶ. ಇದಕ್ಕೆ ಕಾರಣವಾದ ಕಾಜಾಣ ನಾಡಿಗೆ ಬಹು ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಎಚ್. ಎಲ್. ಪುಷ್ಪ ಅವರು ಮಾತನಾಡುತ್ತಾ ಕವಿಗೋಷ್ಠಿಯಲ್ಲಿ ಓದಿದ ಎಲ್ಲ ಕವಿತೆಗಳು ವರ್ತಮಾನಕ್ಕೆ ಗಂಭೀರವಾಗಿ ಸ್ಪಂದಿಸುತ್ತಿದೆ.ಲಂಕೇಶ್ ಬೋದಿಲೇರ್ ನೀಷೆ ಕಮೂ ಕುವೆಂಪು ಬೇಂದ್ರೆ ಅಡಿಗ ಇನ್ನೂ ಅನೇಕರನ್ನೂ ಉದಾಹರಿಸುತ್ತಾ ಕಾವ್ಯ ವಸ್ತು , ಭಾಷೆ ಮತ್ತು ಅದರ ಸಂರಚನೆಯನ್ನು ಕುರಿತು ವಿಶೇಷವಾಗಿ ಮಾತನಾಡಿದರು. ಬಾಷೆಯನ್ನು ಪ್ರಮುಖವಾಗಿ ಗಮನಿಸುತ್ತಾ ಯಾವುದೇ ವಸ್ತು ಮತ್ತು ಭಾಷೆಯನ್ನೂ ನಮ್ಮ ದಾರಿಗೆ ಒಗ್ಗಿಸಿಕೊಂಡು ಕವಿತೆ ಕಟ್ಟಬೇಕು ಅಂದರು. ಕವಿಗೋಷ್ಠಿಯಲ್ಲಿ ಓದಿದ ಪ್ರತಿಯೊಂದು ಕವಿತೆಯನ್ನು ಕುರಿತು ವಿಶ್ಲೇಷಿಸಿ ಕವಿಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಜೊತೆಗೆ ನಾನು ಇತ್ತೀಚಿಗೆ ಕಂಡು ಬಹು ವಿಶಿಷ್ಟವಾದ ಕವಿಗೋಷ್ಠಿ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.ವಸ್ತುವಿನಲ್ಲಿ ಶ್ರೇಷ್ಠ ಕನಿಷ್ಠ ಅನ್ನುವುದಿಲ್ಲ ಆಯ್ದುಕೊಂಡ ವಸ್ತುವನ್ನು ಅರ್ಥಪೂರ್ಣವಾಗಿ ಬಳಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾಜಾಣದ ಈ ಕೆಲಸಕ್ಕೆ ಪ್ರೀತಿಯ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಪ್ರಾಸ್ತವಿಕದಲ್ಲಿ ಬೇಲೂರು ರಘುನಂದನ್ ಕಾಜಾಣ ಕಾರ್ಯ ನಿರ್ವಹಿಸುತ್ತಿರುವ ಬಗೆ ಮತ್ತು ಕಾವ್ಯ ಕಾಜಾಣದ ಆಶಯಗಳನ್ನು ತಿಳಿಸಿದರು. ಜೊತೆಗೆ ಕವಿಗಳಾದ ಸಂದ್ಯಾರಾಣಿ, ಜಯಲಕ್ಷ್ಮಿ ಪಾಟೀಲ್, ಚೀಮನ ಹಳ್ಳಿ ರಮೇಶ್ ಬಾಬು, ವಿ.ಆರ್ ಕಾರ್ಪೆಂಟರ್, ಪದ್ಮ .ಟಿ. ಚಿನ್ಮಯಿ, ಆರ್. ಜಿ . ಹಳ್ಳಿ ಅವರುಗಳು ಉಪಸ್ಥಿತರಿದ್ದು ಕವಿಗಳಿಗೆ ಕವಿತೆಯನ್ನು ಕುರಿತು ತಮ್ಮ ಅನಿಸಿಕೆಗಳನ್ನು ಹೇಳಿ ಕಾಜಾಣದ ಕಾರ್ಯಕ್ಕೆ ಅಭಿನಂದಿಸಿದರು. ಕಲಾವಿದೆ ರೂಪಶ್ರೀ ಕಲ್ಲಿಗನೂರು ಪ್ರಾರ್ಥಿಸಿದರು. ಮಧುಶ್ರೀ ವೇಲೂರ್ ನಿರೂಪಣೆ ಮಾಡಿದರು.
ಕಾರ್ಯಕ್ರಮದ ಕೆಲವು ಫೋಟೋಗಳು ನಿಮಗಾಗಿ :
ವರದಿ ಮತ್ತು ಚಿತ್ರಗಳು : ರಘುನಂದನ್
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :


 
 

‍ಲೇಖಕರು G

28 May, 2014

1 Comment

  1. ದ್ಯಾವನೂರು ಮಂಜುನಾಥ್

    ಮುಂದಿನ ಕಾರ್ಯಕ್ರಮಗಳು ನಡೆಯ ಬೇಕದರೆ ನನಮಗು ಸಹ ತಿಳಿಸಿ ಬಿಡುವಿದ್ದರೆ ನಾವು ನಿಮ್ಮ ಜೋತೆ ಸೇರುತ್ತೆವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading