ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾವ್ಯ ಎಂ.ಎನ್ ಹೊಸ ಕವಿತೆ- ಭೂಮಿ ಕನ್ಯೆ

ಕಾವ್ಯ ಎಂ.ಎನ್

—-

ದಹಿಸುವ ಅಗ್ನಿಶಿಖೆ

ಪಟ್ಟವೇರಿದ ಘನತೆಗೆ

ಒಳಗೆ ಬೆಂದಳು ಸೀತೆ..

ಹಸಿವಿರಲಿಲ್ಲ ಅವಳಿಗೆ

ರಾಮನದೋ ರಾವಣನದೋ…

ಸೀತೆ!

ಅವಳು ಹುಟ್ಟಿಲ್ಲದವಳು

ಮತ್ತೆ ಸಾವೂ….

ಸುಡುವ ಬೆಂಕಿಗೆ ಬೆಳಕಿ‌ನ ಹೆಸರಿಟ್ಟು

ಕಾಡ ಹಾದಿಗೆ ಜಾರಿದ್ದಳು

ಬೇರು ಬೆಟ್ಟ ಬಯಲು ಶೂನ್ಯ ತಬ್ಬಿದ್ದೆ..

ಮಣ್ಣಹಾದಿಗೆ

ಅವಳ ನಡೆದ ಗುರುತೂ ಇಲ್ಲ…

ಗತದ ಏಕಾಂತ ಲೋಕಾಂತದ ಗದ್ದಲದ ಮಧ್ಯೆ

ಒಂಟಿತನದ ಗುಟುಕು ಉಂಡಳು

ತುತ್ತು ತುತ್ತಲೂ ತಿಣುಕುವ ಕಲ್ಲಿನ ಹರಳು…

ಅಡುಗೆ ಕೋಣೆಯ ಇತಿಹಾಸ

ಶಯ್ಯಾಗೃಹದಷ್ಟು ರೋಮಾಂಚನವಲ್ಲ

ಮರಗಟ್ಟಿದ ಎದೆನೋವು

ಹುತ್ತಗಟ್ಟಿತು ಒಳಗೊಳಗೆ..

ಸೀತೆ ಅಡಗಿಸಿಟ್ಟದ್ದು ಅಲ್ಲಿ ನಿಟ್ಟುಸಿರನ್ನಷ್ಟೇ ಅಲ್ಲ…

ರಾಮನಾದಂತೆ ರಾಮ

ಸೀತೆ ಸೀತೆಯಾಗಲಿಲ್ಲ…

ಅಪಹರಣದ ಗಾಳಿಕಥೆಯಲಿ

ಗೂಢವಾಗಿ ತೇಲಿಹೋದ ಉಪಮೆಗಳ

ಹುಡುಕಲಾಗದು

ಎಲ್ಲಿ ಬಿದ್ದಳೋ ಭೂಮಿಕನ್ಯೆ

ಹಾಳು ಕೊಂಪೆಯಲೋ ತಣ್ಣನೆಯ ತಾವಿಲ್ಲ….

ದಣಿದ ಜಾನಕಿ

ಮತ್ತೊಮ್ಮೆ ಕಾದಳು ಸೀತೆಯಾಗಲು…

ಪರದೆ ಸರಿಯಬೇಕಿತ್ತು..

ಅ ಶೋಕ ವನದ ಸೀತೆಯ

ಸುಡಲಿಲ್ಲ ಅಗ್ನಿ…

ಅವನ ಮುದ್ರೆ ಶುದ್ಧಕಾಯಕ್ಕೆ..

ತಾಕಿದ ಕಿಡಿ ಅಂಗಾಂಗವ ಮುಟ್ಟಿ ಘೋಷಿಸಿತು

ಉರಿದು ಉಳಿದಿರುವುದು ಅಗ್ನಿಕನ್ಯೆ…

ಬದುಕಿನ ಧ್ಯಾನ

ಒಡೆದು ಚೂರಾದ ಸೀತೆಗೆ

ಹೊಸತಲ್ಲ..

ದುಃಖದ ಪರಿಮಳವ

ಭೇಷರತ್ ಆಘ್ರಾಣಿಸಿದವಳು

ಹೋದಲೆಲ್ಲಾ

ಉತ್ಕಟವಾಗಿ ಮುಡಿದದ್ದು

ಬೆಂಕಿಹೂವು…..

‍ಲೇಖಕರು avadhi

22 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading