ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕಾವೇರಿ ಕೊಡಗಿನ ಕಾವೇರಿ…’ – ಅನಿತಾ ನರೇಶ್ ಮಂಚಿ

ತಲಕಾವೇರಿ ಪ್ರವಾಸಿಗಳ ಸ್ವರ್ಗ

ಅನಿತಾ ನರೇಶ್ ಮಂಚಿ

ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರ ವನಸಿರಿ ಮಳೆ ಹನಿಗಳ ಮಾಲೆ ಧರಿಸಿ ಬೀಸಿ ಬರುವ ಗಾಳಿಯಲೆಗೆ ತೊನೆದಾಡುತ್ತಾ ನರ್ತಿಸುತ್ತಿದ್ದವು.ನಾವು ಸಾಗುತ್ತಿರುವ ಬೆಟ್ಟಗಳ ನಡುವಿನ ತಿರುವು ಮುರುವಿನ ಹಾದಿ ಇದ್ಯಾವುದೂ ತನಗೆ ಸಂಬಂಧವಿಲ್ಲ ಎನ್ನುವಂತೆ ಒದ್ದೆಯಾಗಿ ತಣ್ಣಗೆ ಮಲಗಿತ್ತು. ಯಾವುದೇ ಎಚ್ಚರಿಕೆಯ ಸೂಚನೆಗಳಿಲ್ಲದಿದ್ದರೂ ವಾಹನದ ವೇಗ ತನ್ನಿಂದ ತಾನೇ ತಗ್ಗುತಿತ್ತು. ಕಣ್ಣು ಸರಿ ಇದ್ದರೂ ತಡಕಾಡುತ್ತಾ ಚಲಾಯಿಸುವಂತಾಗುತ್ತಿತ್ತು. ಕಣ್ಣಿನ ಎದುರು ಮಂಜಿನ ಲೋಕವೊಂದು ಪ್ರತ್ಯಕ್ಷವಾಗಿತ್ತು.

ನೆಲಕ್ಕೆ ಹೆಜ್ಜೆಯೂರಿ ನಿಂತಾಗ ತಣ್ಣನೆಯ ಅಲೆಯೊಂದು ನಮ್ಮನ್ನು ಸುತ್ತುವರಿಯಿತು. ಮಂಜಿನ ಪದರದೊಳಗೆ ಸಿಲುಕಿದ ನಾವು ನಮ್ಮ ಗುರುತು ಪರಿಚಯಗಳನ್ನು ಕಳೆದುಕೊಂಡು ವಿಶ್ವ ಮಾನವರಾದೆವು. ಹತ್ತಡಿ ದೂರದಲ್ಲಿ ನಿಂತರೂ ಕಣ್ಣಿಗೆ ಗೋಚರಿಸದೇ ಅದೃಶ್ಯ ಜೀವಿಗಳಾದೆವು. ‘ನಮಗೆ ನಾವು ಮಾತ್ರ ಬೇರಾರು ಇಲ್ಲ’ ಎಂಬ ವೇದಾಂತವು ತಲೆಯೊಳಗೆ ನುಗ್ಗಿ ಸುಲಭವಾಗಿಯೇ ವೇದಾಂತಿಗಳಾದೆವು. ಪ್ರಕೃತಿಯ ಮಾಯಾಜಾಲದ ಬಲೆಯೊಳಗೆ ಸಿಲುಕಿ ಎಲ್ಲವನ್ನೂ ಮರೆತೆವು.

ಪುಟ್ಟದೊಂದು ಕೊಳ, ಅದರ ಹಿಂದೆ ಕುಂಡಿಕೆ ಅಲ್ಲೇ ಸ್ವಲ್ಪ ಮೇಲ್ಬಾಗದಲ್ಲಿ ಎರಡು ದೇವರ ಗುಡಿಗಳು ಇದ್ದವು. ಒಂದು ಪಕ್ಕದಲ್ಲಿ ಪ್ರಪಾತವಿದ್ದರೆ ಇನ್ನೊಂದೆಡೆಯಲ್ಲಿ ಎತ್ತರದ ಗಿರಿಯಿತ್ತು. ಇದರರ್ಥ ನಾವು ಕೊಡಗಿನ ತಲಕಾವೇರಿಯ ಮಡಿಲನ್ನು ಸೇರಿದ್ದೇವೆ ಎಂದಾಗಿತ್ತು.

ಹೌದು ಇದು ಕಾವೇರಿಯ ಉಗಮ ಸ್ಥಳ. ಪುರಾಣ ಪ್ರಸಿದ್ಧ ಭೂಮಿ. ಲೋಪಾಮುದ್ರೆ ಲೋಕ ಕಲ್ಯಾಣಕ್ಕಾಗಿ ಅಗಸ್ತ್ಯನ ಕಮಂಡಲದಿಂದ ಹೊರ ಬಂದು ಕಾವೇರಿಯಾಗಿ ಹರಿಯಲು ಮೊದಲಿಟ್ಟದ್ದು ಇಲ್ಲಿಂದಲೇ. ದಕ್ಷಿಣದ ಸುರಗಂಗೆ, ಬಿಂದು ಮಾತ್ರ ಪ್ರೋಕ್ಷಣೆಯಿಂದ ಸರ್ವ ಪಾಪಗಳನ್ನು ನಿವಾರಿಸುವ ಶಕ್ತಿ ಹೊಂದಿದ ದೇವಿಯೆಂದೇ ಪೂಜಿಸಲ್ಪಡುವ ಕಾವೇರಿ ತಾಯಿಯ ತವರಿದು. ನೀರು ಸಕಲ ಚರಾಚರಗಳಿಗೂ ಮೂಲ . ಕೊಳೆಯನ್ನು ತೊಳೆಯುತ್ತದೆ. ಅನ್ನವನ್ನು ನೀಡುತ್ತದೆ. ಇದರಿಂದಾಗಿ ಸಹಜವಾಗಿಯೇ ಪೂಜನೀಯವೆನಿಸುತ್ತದೆ. ಅದರಲ್ಲೂ ಪ್ರಕೃತಿಯ ಎಲ್ಲಾ ಸೌಂದರ್ಯವನ್ನು ಮನದಣಿಯೆ ಉಣಬಡಿಸುವ ತಾಣ ಪವಿತ್ರ ಕ್ಷೇತ್ರವೂ ಆಗಿದ್ದಾಗ ಮನಸ್ಸು ಅಲ್ಲಿಗೆಳೆಯುವುದರಲ್ಲಿ ಅಚ್ಚರಿಯೇನಿದೆ?

ಮುಂದೇನಿದೆ ಎಂಬ ಕುತೂಹಲವೇ.. ಬನ್ನಿ ನಮ್ಮೊಡನೆ..

ಎತ್ತರೆತ್ತರದ ಪರ್ವತಗಳಿಂದ ಸುತ್ತುವರಿದ ಈ ಸ್ಥಳ ಕೊಡಗಿನ ಪ್ರವಾಸಿಗಳ ಮುಖ್ಯ ಆಕರ್ಷಣೆ. ಪ್ರಕೃತಿಯ ನಡುವೆ ಕರಗಿ ಹೋಗಬೇಕೆನ್ನುವವರ ಕನಸಿನ ಅರಮನೆ.ಭಾಗಮಂಡಲದಿಂದ ಎಂಟು ಕಿಲೋ ಮೀಟರುಗಳ ಅಂತರದಲ್ಲಿರುವ ತಲಕಾವೇರಿ ಪ್ರವಾಸಿಗಳ ಸ್ವರ್ಗ.

ಮೇಲೇರಿ ಸುತ್ತ ಕಣ್ಣು ಹಾಯಿಸಿದರೆ ಅಲೆ ಅಲೆಯಾಗಿ ಪರ್ವತಗಳು ಕಾಣಿಸುತ್ತವೆ. ಸುಮ್ಮನೆ ನಿಂತಲ್ಲಿಂದಲೇ ಒಂದು ಸುತ್ತು ತಿರುಗಿ. ನೀವೊಂದು ಹಸಿರಿನ ಬೆಟ್ಟಗಳ ಗೋಲದೊಳಗೆ ಕುಳಿತಂತೆ ಅನುಭವವಾಗುತ್ತದೆ. ನಿಮ್ಮಿಂದ ತಗ್ಗಿನಲ್ಲಿ ಕೆಳಗೆ ಮೋಡಗಳು ಲಾಸ್ಯವಾಡುತ್ತಾ ಸಂಚರಿಸುವುದು ಕಾಣುತ್ತದೆ. ಇದ್ದಕ್ಕಿದ್ದಂತೆ ಮೋಡಗಳು ನಿಮ್ಮನ್ನು ಆವರಿಸಿ ಮುಚ್ಚಿ ಬಿಡಬಹುದು.ಅರಸಿಕ ಮನಸ್ಸೂ ಇಲ್ಲಿ ಕವಿಯಾಗಬಹುದು. ಭಾವುಕ ಮನಸ್ಸು ಮೌನವಾಗಬಹುದು.

ಹೊತ್ತು ತಾನಾಗಿಯೇ ಕರಗುತ್ತದೆ. ಕಾಲವೆಂಬುದನ್ನು ಸ್ಥಗಿತಗೊಳಿಸಿ ಇಲ್ಲೇ ಉಳಿಯುವ ಮನ ನಿಮ್ಮದಾಗುತ್ತದೆ.ಮತ್ತೊಮ್ಮೆ ಬರುವ ಪ್ರತಿಜ್ಞೆ ಮಾಡಿಯೇ ಕುಳಿತಲ್ಲಿಂದ ಏಳುತ್ತೀರಿ. ಮನಸ್ಸು ನಿಮಗರಿವಿಲ್ಲದೆ

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ

ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲೆ ನಿಂದಳೋ

ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ

ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ

ಅಲ್ಲಿ ಆ ಕಡೆ ನೋಡಲಾ

ಅಲ್ಲಿ ಕೊಡವರ ನಾಡಲಾ

ಅಲ್ಲಿ ಕೊಡವರ ಬೀಡಲಾ

ಎಂಬ ಪಂಜೆಯವರ ಹಾಡನ್ನು ಗುಣುಗುಣಿಸತೊಡಗುತ್ತದೆ.

 

‍ಲೇಖಕರು avadhi

15 June, 2013

1 Comment

  1. Ashoka Bhagamandala

    ಕಾವೇರಿ ನೀ ಬೆಡಗಿನ ವೈಯ್ಯಾರಿ….ಚಿತ್ರ ಲೇಖನ ಬಹಳ ಸೊಗಸಾಗಿ ಮೂಡಿ ಬಂದಿದೆ. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading