ಎಚ್ ಕೆ ಶರತ್
ಪ್ರಿಯ ಕಾಲೇಜು,
ನಿನಗೆ ವಿದಾಯ ಹೇಳುವ ಸಲುವಾಗಿ ಈ ಪತ್ರ ಬರೆಯುತ್ತಿದ್ದೇನೆ. ಆರು ವರ್ಷದ ಹಿಂದೆ ನಿನ್ನನ್ನು ಭೇಟಿಯಾದಾಗ ನೀನು ಹೇಗಿದ್ದೆಯೋ ಈಗಲೂ ಹಾಗೆ ಇದ್ದೀಯ. ಅದೇ ಹಳೆಯ ಗೋಡೆ, ಕ್ಲಾಸ್ ರೂಮುಗಳು, ನೀಲಗಿರಿ ಮರಗಳೇ ತುಂಬಿರುವ ಕಾಡಲ್ಲದ ಕಾಡು… ಹೀಗೆ ಎಲ್ಲವೂ ಹಾಗೆ ಇವೆ. ನಿನ್ನ ಮಡಿಲಲ್ಲಿ ನಡೆದಾಡುವ ಮುಖಗಳು ಮಾತ್ರ ಬದಲಾಗಿವೆ, ಬದಲಾಗುತ್ತಲೇ ಇವೆ.
ಯಾರು ಬರಲಿ ಹೋಗಲಿ ನೀನು ಮಾತ್ರ ಇದ್ದ ಹಾಗೆ ಇದ್ದೀಯ. ನಿನ್ನನ್ನು ಎದುರುಗೊಳ್ಳುವ ಮುನ್ನ ಅದೇನೋ ಕುತೂಹಲವಿತ್ತು. ನೀನು ಎಂಜಿನಿಯರಿಂಗ್ ಕಾಲೇಜು ಅನ್ನುವ ಕಾರಣಕ್ಕೆ. ಆದರೆ ದಿನಗಳು ಉರುಳಿದಂತೆ ನೀನೂ ಬೋರು ಹೊಡೆಸಿದೆ. ಈ ಆರು ವರ್ಷಗಳ ಅವಧಿಯಲ್ಲಿ ನನಗರಿವಿಲ್ಲದಂತೆ ನಿನ್ನೊಂದಿಗೆ ಬಿಡದ ನಂಟು ಬೆಳೆದಿದೆ. ನನ್ನ ದಿನಚರಿಯ ಅವಿಭಾಜ್ಯ ಅಂಗ ನೀನಾಗಿದ್ದೆ.
ನೀನೆಂದರೆ ಮೊದಲು ನೆನಪಾಗುವುದು…? ಈ ಪ್ರಶ್ನೆಯೇ ಬಾಲಿಶ ಅನಿಸುತ್ತದೆ. ಯಾಕೆಂದರೆ ನಿನ್ನ ಮಡಿಲಲ್ಲಿ ಅರಳಿದ ನೆನಪುಗಳಿಗೆಲ್ಲ ನನ್ನ ಮನದಲ್ಲಿ ಸಮಾನ ಸ್ಥಾನಮಾನ ನೀಡಿದ್ದೇನೆ. ನಿನ್ನ ಮಡಿಲಲ್ಲಿ ಮೊದಮೊದಲು ಕಾಲಿಡುವಾಗ ಅದ್ಯಾವುದೋ ಹಿಂಜರಿಕೆ ಇತ್ತು. ಈಗ ನಿನ್ನ ಮೈನ ಪ್ರತಿ ಜಾಗವೂ ನನಗೆ ಚಿರಪರಿಚಿತ.

ಸುಮ್ಮನೆ ಕೂತು ಈ ಆರು ವರ್ಷದ ಒಡನಾಟ ನೆನೆದರೆ ನನ್ನ ಕಣ್ಮುಂದೆ ಸುಳಿಯುವುದು ಕ್ಲಿಕ್ ಆದ ಲವ್ ಕೇಸುಗಳು, ವಿಚಿತ್ರ ವ್ಯಕ್ತಿತ್ವದ ಕ್ಲಾಸ್ಮೇಟುಗಳು, ಲೆಕ್ಚರರ್ಗಳು…
ನನಗೆ ಒಂದು ವಿಚಾರದಲ್ಲಿ ನಿನ್ನ ಮೇಲೆ ಮುನಿಸಿದೆ. ಕೆಲವರಿಗೆ ಆರು ವರ್ಷದ ಅವಧಿಯಲ್ಲಿ ಡಜನ್ನುಗಟ್ಟಲೆ ಕ್ರಶ್ಶು, ಲವ್ವು, ಡವ್ವುಗಳನ್ನು ಕರುಣಿಸಿದ ನೀನು ನನ್ನನ್ನು ಒಂದೇ ಒಂದು ಲವ್ ಸ್ಟೋರಿಗೂ ಪಾತ್ರಧಾರಿಯನ್ನಾಗಿ ಆರಿಸದಿರುವುದಕ್ಕೆ ಮನದ ಮೂಲೆಯಲ್ಲೆಲ್ಲೋ ಬೇಸರವಿದೆ. ಸಣ್ಣ ಪುಟ್ಟ ಸೆಳೆತಗಳು ಶುರುವಾದರೂ ಅವ್ಯಾವೂ ಪ್ರಪೋಸ್ ಮಾಡುವಷ್ಟು ಗಾಢವಾಗಿ ಮುಂದುವರಿಯಲೇ ಇಲ್ಲ. ತಪ್ಪು ನಿನ್ನದು ಮಾತ್ರ ಅಲ್ಲ ಬಿಡು.
ಲೆಕ್ಚರರ್ಗಳಿಗೆ, ಜೊತೆಗಿದ್ದವರಿಗೆ ಇಟ್ಟ ಅಡ್ಡ ಹೆಸರುಗಳನ್ನು ನೆನೆದರೆ ಈಗಲೂ ನಗು ಇಣುಕುತ್ತದೆ. ಕಪ್ಪೆ, ದ, ಜಪಾನ್, ಮಟಾಶ್ ಲೆಗ್, ಚಲ್ಲು, ಬ್ಯಾಟ್ರಿ, ಅಮೀಬಾ, ಪುಳಿಯೊಗ್ರೆ, ಪುಂಗ, ದುನಿಯಾ, ಎತ್ತು ಮಾಮ, ಬಾಷಾ, ಸ್ಪ್ಲೆಂಡರ್, ರಸಿಕ, ಗುಮ್ಮಿ, ಸೊಳ್ಳೆ… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಕಾಲೇಜು ಅಂದರೆ ಅದು ಬರೀ ಅಷ್ಟೇ ಅಲ್ಲ. ಜಗತ್ತಿನೊಳಗಿನ ಜಗತ್ತು ಅಂತ ನನಗೀಗ ಅರ್ಥವಾಗಲಾರಂಭಿಸಿದೆ. ವೈಯಕ್ತಿಕ ಬದುಕಿನಲ್ಲಿ ಹತ್ತು ಹಲವು ದುರಂತಗಳಿಗೆ ನಾಯಕ/ಕಿ ಆದವರು ಸಹ ನಿನ್ನ ತೆಕ್ಕೆಗೆ ಸರಿದ ಕೂಡಲೇ ತಮ್ಮ ನೋವನ್ನೆಲ್ಲ ಕಳಚಿಟ್ಟು ನಲಿವು ತೊಟ್ಟುಕೊಳ್ಳುವುದು ವಿಶೇಷವೇ ಸರಿ.
ಕಳೆದ ಆರು ವರ್ಷಗಳಿಂದ ನನ್ನ ಬದುಕಿನ ಅವಿಭಾಜ್ಯ ಅಂಗವಾಗಿದ್ದ ನಿನ್ನೊಂದಿಗಿನ ನಂಟು ಇನ್ನೇನು ಕಳಚಿ ಬೀಳಲಿದೆ. ಆಮೇಲೆ ನೀನು ನೆನಪಿನಂಗಳಕ್ಕೆ ಸರಿಯಲಿದ್ದೀಯ.
ನಿನ್ನ ಕುರಿತು ಗುಣಗಾನ ಮಾಡುವಂತಹದ್ದು ಏನೂ ಇಲ್ಲ. ಆದರೂ ನಿನ್ನನ್ನು ತೊರೆಯುವ ವೇಳೆಗೆ ಒಳಗೆಲ್ಲೋ ಬೇಸರ ಮೂಡುತ್ತಿದೆ. ಏನೇನೊ ಹೇಳಬೇಕೆಂದು ಪತ್ರ ಬರೆಯಲಾರಂಭಿಸಿದೆ. ಬರೆಯುವಾಗ ಹೆಚ್ಚು ತೋಚಲಿಲ್ಲ. ವಿಧಿ ಇಲ್ಲದೆ ಪತ್ರ ಮುಗಿಸುತ್ತಿದ್ದೇನೆ, ಮಡಿಲಲ್ಲಿ ನೆನಪುಗಳನ್ನು ಹರಡಿಕೊಂಡು…
ಇಂತಿ ನಿನ್ನ ಪ್ರೀತಿಯ
-ಎಚ್.ಕೆ.ಶರತ್






0 Comments