ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕಾಲೆಳೆಯುವವರಿಗೆ ಪ್ರೀತಿಯ ಸ್ವಾಗತ..' – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ

(ಕಾಲೆಳೆಯುವವರು ಇದ್ದಾರೆಂದೇ ನಾವು ನಮ್ಮ ಕೆಲಸವನ್ನು ಇನ್ನಷ್ಟು ನೀಟ್ ಆಗಿ, ಇನ್ನಷ್ಟು ಶೃದ್ಧೆಯಿಂದ ಮಾಡಲು ಸಾಧ್ಯವಾಗುತ್ತಿರುವುದು. ನಮ್ಮನ್ನು ಗಮನಿಸುವವರು ಇದ್ದಾರೆ ಎಂದೇ ನಾವು ನಮ್ಮ ಕೆಲಸಗಳಲ್ಲಿ ಸದಾ ಜಾಗ್ರತರಾಗಿರಲು ಸಾಧ್ಯವಾಗುತ್ತಿರುವುದು. ಆದರೆ ಆ ಕಾಲೆಳೆಯುವಿಕೆ ಒಬ್ಬ ವ್ಯಕ್ತಿಯ ಬಾಳನ್ನೇ ಹಾಳುಮಾಡುವಂತಿರಬಾರದು ಎನ್ನುವ ಸತ್ಯ ಮಾತ್ರ ಅರಿತಿರಬೇಕು.)
ಯಾರಾದರೂ ನಿಮ್ಮ ಕಾಲೆಳೆಯುತ್ತಾರೆ ಎಂದರೆ ಅದು ಬೇರೇನಿಲ್ಲ. ಆ ವ್ಯಕ್ತಿಗಿಂತ ನೀವು ಮುಂದಿದ್ದೀರಿ ಎಂದರ್ಥ. ನನ್ನ ಸ್ನೇಹಿತರೊಬ್ಬರು ಪದೇ ಪದೇ ಹೇಳುವ ಮಾತಿದು. ಹೌದು ಪದೇ ಪದೇ ಕಾಲೆಳೆಯುವವರನ್ನು ಕಂಡಾಗ ನೆನಪಾಗುವ ಮಾತು ಇದು.
ಒಮ್ಮೆ ಒಬ್ಬ ವಿಜ್ಞಾನಿ ತನ್ನ ಲ್ಯಾಬೋರೇಟರಿಗೆ ಹಲವಾರು ದೇಶಗಳಿಂದ ಏಡಿಗಳನ್ನು ತರಿಸಿ ಒಂದು ಪಾತ್ರೆಯಲ್ಲಿ ಹಾಕಿಟ್ಟಿದ್ದನಂತೆ. ಭಾರತದ ಏಡಿಗಳಿರುವ ಪಾತ್ರೆಯೊಂದನ್ನು ಬಿಟ್ಟು ಉಳಿದೆಲ್ಲ ಪಾತ್ರೆಗಳಿಗೆ ಸ್ವಲ್ಪ ಪ್ರಮಾಣದ ಕ್ಲೋರೋಫಾರ್‍ಮ ಸಿಂಪಡಿಸಿದ್ದನಂತೆ. ಇದನ್ನು ಕಂಡು ಅರ್ಥವಾಗದ ಆತನ ಅಸಿಸ್ಟೆಂಟ್ ಈ ಬಗ್ಗೆ ವಿಚಾರಿಸಿದಾಗ ಭಾರತದ ಏಡಿಗಳು ಯಾವತ್ತೂ ಮೇಲೇರಲಾರದು. ಯಾಕೆಂದರೆ ಒಂದು ಮೇಲೇರಲು ಉಳಿದ ಏಡಿಗಳು ಬಿಡಲಾರದು. ಒಂದು ಮೇಲೇರಲು ಹೋದರೆ ಉಳಿದ ಏಡಿಗಳು ಅದರ ಕಾಲು ಹಿಡಿದು ಎಳೆಯುತ್ತದೆ ಎಂದಿದ್ದನಂತೆ. ಕಾಲೆಳೆಯುವ ಮಾತು ಬಂದಾಗಲೆಲ್ಲ ನನಗೆ ನೆನಪಾಗುವ ಕಥೆ ಇದು. ಇದು ಭಾರತದ ಏಡಿಗಳು ಮಾತ್ರ ಮಾಡುವ ಕೆಲಸವಲ್ಲ. ಎಲ್ಲಾ ಪ್ರಾಣಿಗಳ ಗುಣ. ಅದರಲ್ಲೂ ಇದು ಮನುಷ್ಯ ಸಹಜ ಗುಣ ಇದು. ನಮಗಿಂತ ಯಾರಾದರೂ ಒಂದು ಹೆಜ್ಜೆ ಮುಂದಿದ್ದಾರೆ ಎಂದು ಅರಿವಾದ ತಕ್ಷಣ ಕಾಲೆಳೆಯಲು ಪ್ರಾರಂಭಿಸುವುದು ಇಂದಿನ ಕಥೆಯಲ್ಲ.
ಕಾಲೆಳೆಯುವುದು ಎಂದರೆ ಕೇವಲ ಹಾನಿ ಮಾಡುವುದು ಎಂದಷ್ಟೇ ಅರ್ಥವಲ್ಲ. ಅದು ಬೇರೆಯವರನ್ನು ಕಂಡು ಕುರುಬುವುದೂ ಸಹ ಆಗಬಹುದು. ಪುರಾಣ ಕಾಲದಿಂದಲೂ ನಮಗಿಂತ ಮೇಲೇರಿದವರನ್ನು ಕಂಡು ಕುರುಬುವ ಬಹಳಷ್ಟು ಉದಾಹರಣೆಗಳನ್ನು ಕಂಡಿದ್ದೇವೆ. ತಗಿಂತ ಮೊದಲು ಕುಂತಿ ಮಗುವನ್ನು ಪಡೆದಳೆಂದು ಹೊಟ್ಟೆಕಿಚ್ಚು ಪಟ್ಟ ಗಾಂಧಾರಿ ತನ್ನ ಹೊಟ್ಟೆಯನ್ನು ಹೊಡೆದುಕೊಂಡು ಪಿಂಡವನ್ನೇ ಬಸಿದ ಕಥೆ ಯಾರಿಗೆ ಗೊತ್ತಿಲ್ಲ? ಹಾಗೆ ಅಸೂಯಾಪರ ಗಾಂಧಾರಿಯ ಮನಸ್ಥಿತಿ ಎಂಬಂತೆ ದುರ್‍ಯೋದನ ಪಾಂಡವರ ಕಾಲೆಳೆಯುತ್ತಲೇ ತನ್ನ ಜೀವ ಕಳೆದುಕೊಂಡ. ರಾಮ ರಾಜನಾಗುವ ಭಯದಿಂದ ಆತನ ಕಾಲೆಳೆಯಲು ಹೋದ ಕಕೇಯಿ ತನ್ನ ಗಂಡನನ್ನೇ ಬಲಿಕೊಟ್ಟಳು.

ಕಾಲೆಳೆಯುವ ಪ್ರವೃತ್ತಿಯಿಂದಾಗಿಯೇ ಇಡೀ ಭಾರತ ಬ್ರಿಟೀಷರ ವಶವಾಯಿತು. ಒಬ್ಬ ರಾಜನ ಏಳಿಗೆ ಸಹಿಸಲಾಗದೇ ಪಕ್ಕದ ರಾಜ್ಯದ ದೊರೆ ಬ್ರಿಟಿಷರೊಂದಿಗೆ ಗುಟ್ಟಾಗಿ ಹೊಂದಾಣಿಕೆ ಮಾಡಿಕೊಂಡು ಆತನ ಕಾಲೆಳೆಯಲು ಪ್ರಯತ್ನಿಸಿದ್ದರ ಪ್ರತಿಫಲವಾಗಿ ಇಡೀ ದೇಶವನ್ನು ಬೆಳ್ಳಿಯ ಬಟ್ಟಲಲ್ಲಿಟ್ಟು ಬ್ರಿಟಿಷರ ಪಾದಗಳಿಗೆ ಅರ್ಪಿಸಿದ್ದು ಇಂದು ಇತಿಹಾಸ. ಹಾಗಂತ ಇದು ಕೇವಲ ಭಾರತದ ಸಮಸ್ಯೆ ಎಂದು ನಾವು ತಿಳಿದುಕೊಳ್ಳಬೇಕಿಲ್ಲ. ಪ್ರಪಂಚದಾದ್ಯಂತ ಇಂತಹ ಹಲವಾರು ಉದಾಹರಣೆಗಳಿವೆ. ಕಾಲೆಳೆಯುವವರನ್ನು ಮುನ್ನುಗ್ಗುವವರ ಉಮ್ಮೇದಿಗೊಂದು ಸ್ಪೀಡ್ ಬ್ರೆಕ್ ಎನ್ನ ಬಹುದು.
ಕಾಲೆಳೆಯುವುದು ಎಂದರೆ ಅದು ಯಾರೋ ಬೇರೆಯವರು, ಆಗದವರು ಮಾತ್ರ ಮಾಡುವ ಕೆಲಸ ಎಂದು ಕೊಳ್ಳಬೇಕಾಗಿಲ್ಲ. ಒಂದು ಮನೆಯಲ್ಲಿಯೇ ಇರುವವರು ಕೂಡ ಈ ಕೆಲಸ ಮಾಡ ಬಹುದು. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಕ್ಕ-ತಂಗಿ, ಅಣ್ಣ- ತಮ್ಮ ಕೂಡ ಕೆಲವೊಮ್ಮೆ ಒಬ್ಬರ ಸಾಧನೆಯನ್ನು ಕಂಡು ಇನ್ನೊಬ್ಬರು ಕಾಲೆಳೆಯುವುದು ಅತೀ ಸಹಜವಾದದ್ದು. ಆ ಗುಣ ಚಿಕ್ಕಂದಿನಿಂದಲೇ ಕೆಲವೊಮ್ಮೆ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಅಣ್ಣ ಹೆಚ್ಚು ಅಂಕ ಪಡೆಯುತ್ತಾನೆ ಎಂದು ತಮ್ಮ ಆತನ ಪುಸ್ತಕಗಳನ್ನು ಅಡಗಿಸಿಡುವುದು, ಅಕ್ಕ ಚಂದ ಕಾಣುತ್ತಾಳೆಂದು ತಂಗಿ ಆಕೆಯ ಹೊಸ ವಸ್ತ್ರಗಳನ್ನು ಹಾಳು ಮಾಡುವುದು ಎಲ್ಲರ ಮನೆಯಲ್ಲೂ ಒಂದಲ್ಲಾ ಒಂದು ಸಂದರ್ಭದಲ್ಲಿ ನಡದೇ ನಡೆಯುತ್ತದೆ. ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಾದರಂತೂ ಇಂತಹ ವೈಷಮ್ಯ ಇನ್ನೂ ಹೆಚ್ಚು. ಶಾಲಾ ಕಾಲೇಜುಗಳಲ್ಲಿ ಆತ್ಮೀಯ ಸ್ನೇಹಿತರೆನಿಸಿಕೊಂಡವರೂ ಕೂಡ ಇಂತಹ ಕಾಲೆಳೆಯುವುದರಲ್ಲಿ ಕೆಲವೊಮ್ಮೆ ನಿರತರಾಗಿರುತ್ತಾರೆ. ತ್ರೀ ಇಡಿಯಟ್ಸ್‌ನಲ್ಲಿಯ ಒಂದು ದೃಶ್ಯ ಇನ್ನೂ ಕಣ್ಣೆದುರಿಗಿದೆ. ತಮ್ಮೊಡನೆ ತುಂಟಾಟ ನಡೆಸುತ್ತಿರುವ ಗೆಳೆಯನೊಬ್ಬ ತಮಗಿಂತ ಹೆಚ್ಚು ಅಂಕ ಪಡೆದು ರ್ಯಾಂಕ್ ಬಂದಾಗ ಅನುಭವಿಸುವ ನೋವಿನ ಕುರಿತು ಇದ್ದ ಸನ್ನಿವೇಶ. ಹೌದು ಅಲ್ಲಿ ಕೂಡ ಕಾಲೆಳೆಯುವ ಗುಣವಿದೆ.
ಕೆಲವು ದಿನಗಳ ಹಿಂದೆ ನನ್ನ ಪುಟ್ಟ ಗೆಳತಿಯೊಬ್ಬಳದ್ದು ಇದೇ ಗೋಳು. ದ್ವಿತಿಯ ಡಿಗ್ರಿ ಓದುತ್ತಿರುವ ಆಕೆ ಕೇವಲ ಓದಿನಲ್ಲಷ್ಟ ಅಲ್ಲ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂದು. ಆಕೆ ಡಿಬೆಟ್, ಭಾಷಣ, ಕ್ವಿಜ್ ಎಂದೆಲ್ಲ ಹಲವಾರು ಸ್ಪರ್ದೆಗಳಲ್ಲಿ ಭಾಗವಹಿಸಿ ಬಹುಮಾನ ತಂದಾಗಲೆಲ್ಲ ಆಕೆಯ ಸಹಪಾಠಿಗಳದ್ದು ಒಂದೇ ಕುಹಕ. ಕೆಲವರಂತು ಆಕೆ ಹೋಗುತ್ತಿದ್ದರೆ ತನ್ನನ್ನು ತಾನು ಏನೆಂದುಕೊಂಡಿದ್ದಾಳೋ ಗೊತ್ತಿಲ್ಲ. ಯಾವಾಗ ನೋಡಿದರೂ ತಿರುಗಲ ತಿಪ್ಪಿ ತರಹ ತಿರುಗುತ್ತಾಳೆ ಎಂದು ಆಕೆಗೆ ಕೇಳುವಂತೆಯೇ ಆಡಿಕೊಳ್ಳುತ್ತಾರಂತೆ. ಕೆಲವು ಗುರು ಸ್ಥಾನದಲ್ಲಿದ್ದವರೂ ಕೂಡ, ಇದೇ ಆಗ್ಹೋಯ್ತು. ಈ ಸಲ ನೀನು ಪಾಸ್ ಆಗೋದಿಲ್ಲ ನೋಡು. ಓದೋದು ಬಿಟ್ಟು ಅದೇನು ವಾದ, ಚರ್ಚೆ ಅಂತಾ ವರ್ಷ ಇಡೀ ಓಡಾಡಿಕೊಂಡಿರ್‍ತಿಯಾ? ಹಿಂದಿನ ಸಲ ಸ್ಕೋರ್ ಆದ ಹಾಗೆ ಈ ವರ್ಷ ಆಗೋಲ್ಲ ನೋಡು ಎಂದು ಕೆಂಗಣ್ಣು ಬಿಟ್ಟು ಹೆದರಿಸುತ್ತಾರಂತೆ. ‘ಇನ್ನು ಮುಂದೆ ನಾನು ಏನೂ ಮಾಡೊದಿಲ್ಲ ಅಕ್ಕ. ನನಗೆ ಬೇಜಾರಾಗ್ತಿದೆ. ನನ್ನ ಸಾಧನೆಗೆ ಪ್ರೋತ್ಸಾಹ ಕೊಡೋದು ಬೇಡ ಬಿಡು. ಅಟ್‌ಲೀಸ್ಟ ಏನೂ ಹೇಳದೆ ಸುಮ್ಮನಿದ್ದರೂ ಸಾಕಿತ್ತು. ಆದರೆ ಬೆನ್ನ ಹಿಂದೆ ಆಡಿಕೊಳ್ಳುತ್ತ, ಬುದ್ಧಿ ಹೇಳುವ ನೆಪದಲ್ಲಿ ಆತ್ಮವಿಶ್ವಾಸ ಚಿವುಟುವುದನ್ನು ಕಂಡರೆ ಸಾಕು ಎನ್ನಿಸಿ ಬಿಡುತ್ತದೆ. ಎಂದು ಮುಖ ಉಬ್ಬಿಸಿ ಹೇಳುತ್ತಿದ್ದವಳನ್ನು ಕಂಡು ನಿಜಕ್ಕೂ ತಮಾಷೆ ಎನ್ನಿಸಿತ್ತು. ಬಹುಶಃ ಆ ವಯಸ್ಸಿಗೆ ಅದು ಸಹಜವಾದ ಮಾತು. ತನ್ನನ್ನು ಯಾರೂ ಹೀಯಾಳಿಸಬಾರದು, ಯಾರೂ ಕಾಲೆಳೆಯ ಬಾರದು ಎನ್ನುವ ಉತ್ಸಾಹದ ವಯಸ್ಸು ಅದು.
ಆದರೆ ಅದಕ್ಕೆಂದು ನಾವು ಮಾಡುವ ಕೆಲಸವನ್ನು, ನಮಗೆ ಆತ್ಮ ಸಂತೃಪ್ತಿ ನೀಡುವ ಕೆಲಸವನ್ನು ಬಿಟ್ಟರೆ ಅದು ಅರಿಯೇ? ಇಲ್ಲ. ಕಾಲೆಳೆಯುವವರು ಇದ್ದಾರೆಂದೇ ನಾವು ನಮ್ಮ ಕೆಲಸವನ್ನು ಇನ್ನಷ್ಟು ನೀಟ್ ಆಗಿ, ಇನ್ನಷ್ಟು ಶೃದ್ಧೆಯಿಂದ ಮಾಡಲು ಸಾಧ್ಯವಾಗುತ್ತಿರುವುದು. ನಮ್ಮನ್ನು ಗಮನಿಸುವವರು ಇದ್ದಾರೆ ಎಂದೇ ನಾವು ನಮ್ಮ ಕೆಲಸಗಳಲ್ಲಿ ಸದಾ ಜಾಗ್ರತರಾಗಿರಲು ಸಾಧ್ಯವಾಗುತ್ತಿರುವುದು. ಆದರೆ ಆ ಕಾಲೆಳೆಯುವಿಕೆ ಒಬ್ಬ ವ್ಯಕ್ತಿಯ ಬಾಳನ್ನೇ ಹಾಳುಮಾಡುವಂತಿರಬಾರದು ಎನ್ನುವ ಸತ್ಯ ಮಾತ್ರ ಅರಿತಿರಬೇಕು. ನಿಂದಕರಿರಬೇಕು ಜಗದಲ್ಲಿ ಹಂದಿಯ ಹಾಗೆ ಎನ್ನುವ ಸರ್ವಜ್ಞನ ವಚನ ಎಲ್ಲಾ ಕಾಲದಲ್ಲೂ ಸಲ್ಲುತ್ತ ಕಾಲೆಳೆಯುವವರಿಗೂ ಒಂದು ಊರನ್ನು ಸ್ವಚ್ಛಗೊಳಿಸುವ ಕಾಯಕವನ್ನು ನೀಡಿದ್ದಾರೆ.. ಕಾಲೆಳೆಯುವವರೆ! ನಿಮಗಿದೋ ಪ್ರೀತಿಯ ಸ್ವಾಗತ..
 

‍ಲೇಖಕರು avadhi

24 April, 2014

5 Comments

  1. prakash dore

    nimma baravanige channagide, good

  2. k v pundalik

    eee lekhana chennagide
    andre chennagide

  3. b.n.naik

    dinalu idannu odiye namma dinada krtavya start madbeku, yakendre horagade hodaglu idu nenapirlebeku.

  4. anant

    good work

  5. Anonymous

    Suppr mam. all d best

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading