ಕಾಲಾ ಡುಂಗರ್‌ನ ಅನ್ನ ತಿನ್ನುವ ನರಿಗಳು!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ.  ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಗುಜರಾತಿನ ಭುಜ್‌ನಲ್ಲಿ ಅರ್ಧ ದಿನ ಕಾಯುವಿಕೆಯಲ್ಲೇ ವೇಸ್ಟ್‌ ಆಗಿಬಿಟ್ಟಿತ್ತು. ಬೆಳಗ್ಗಿನಿಂದ ಸಂಜೆಯವರೆಗೂ ಒಂದು ನಿರೀಕ್ಷೆಯೊಂದಿಗೇ ಅಕ್ಷರಶಃ ರಸ್ತೆಯಲ್ಲೇ ಕಾದಿದ್ದೆವು. ಅರ್ಜಿಯಂತೂ ಹಾಕಿದ್ದಾಗಿತ್ತು. ಅನುಮತಿ ಸಿಕ್ಕೇ ಸಿಗುತ್ತದೆಂಬ ಹುಚ್ಚು ಧೈರ್ಯ ಹೆಚ್ಚಿತ್ತು ಅನಿಸುತ್ತದೆ. ವಿಘಾಕೋಟ್‌ಗೆ ಹೋಗಬೇಕೆಂಬ ಕನಸೂ ಅಷ್ಟೇ ಹೆಚ್ಚಿತ್ತು‌ ಅನ್ನಿ. ವಿಘಾಕೋಟ್‌, ರನ್‌ ಆಫ್‌ ಕಚ್‌ನ ಮುಂದುವರಿದ ಭಾಗ.

ಭಾರತದ ಬದಿಯ ಕಚ್‌ಗೆ ಅಂತಿನ ಪಾಯಿಂಟಾಗಿ ಇಂಡಿಯಾ ಬ್ರಿಡ್ಜ್ ಹೆಸರಿನ ಸೇತುವೆಯಿದೆ.‌ ಈ ಸೇತುವೆ ದಾಟಿ ಸಾಮಾನ್ಯ ನಾಗರಿಕರು ಹೋಗಲಾಗದು. ಅನುಮತಿ ಪಡೆದರೆ, ಹಲವು ವಿಶೇಷ ನಿಯಮಗಳನ್ನು ಪಾಲಿಸಿಕೊಂಡು, ಕ್ಯಾಮರಾ, ಫೋನುಗಳೆಲ್ಲವನ್ನು ಅಲ್ಲೇ ಸೇನಾ ಚೆಕ್‌ ಪೋಸ್ಟಿನಲ್ಲೇ ಬಿಟ್ಟು ೬೦ ಕಿಮೀ ಪ್ರಯಾಣ ನಮ್ಮ ವಾಹನದಲ್ಲೇ ಮಾಡಿ ಅದೇ ದಿನ ಸಂಜೆಯೊಳಗೆ ಹಿಂತಿರುಗಬಹುದು, ಪಾಕಿಸ್ತಾನ ಗಡಿಯವರೆಗೆ ಸೇನೆಯ ಕಣ್ಗಾವಲಿನಲ್ಲಿ ರನ್‌ ಆಫ್‌ ಕಚ್‌ನ ಯಾರೆಂದರೆ ಯಾರೂ ಇಲ್ಲದ ಬೆಳ್ಳನೆ ಬಟಾ ಬಯಲದು. ಕೊನೇಯಲ್ಲಿ ಗ್ರೇಟ್‌ ರನ್‌ ಎರಡು ಭಾಗವಾಗಿಬಿಡುತ್ತದೆ, ಅರ್ಧ ಭಾರತಕ್ಕೆ, ಅರ್ಧ ಆ ಕಡೆ ಪಾಕಿಸ್ತಾನಕ್ಕೆ. ಇಂಥದ್ದೊಂದು ನಮ್ಮ ಗಡಿಯ ಸೊಬಗು ನೋಡಬೇಕೆಂದು ಹೊರಟುಬಿಟ್ಟಿದ್ದೆವು.

ಅನುಮತಿ ಸಿಕ್ಕೇ ಸಿಗುತ್ತದೆ ಅಂದುಕೊಂಡು ಸಿಗದೆ ತೀವ್ರ ನಿರಾಸೆಯೊಂದಿಗೆ ಒಂದೇ ಉಸಿರಿಗೆ ಡ್ರೈವ್‌ ಮಾಡಿಕೊಂಡು ರನ್‌ ಉತ್ಸವದ ಸ್ಥಳಕ್ಕೆ ಬಂದು ಬಿಟ್ಟಿದ್ದೆವು. ಪುಣ್ಯಕ್ಕೆ ಸೂರ್ಯನಿನ್ನೂ ಪಶ್ಚಿಮದಂಚಿನಲ್ಲಿ ನಮಗಾಗಿಯೇ ಕಾಯುತ್ತಿದ್ದ ಎಂಬಂತೆ ನಾವು ಅಲ್ಲಿ ತಲುಪಿದ ತಕ್ಷಣ ಮರೆಯಾದ. ಈ ಭರ್ಜರಿ ದೃಶ್ಯವನ್ನು ಕಣ್ಣೂ ಕ್ಯಾಮರಾವೂ ಒಳಕ್ಕಿಳಿಸಿಕೊಂಡವು.

ಗುಜರಾತ್‌ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳಲ್ಲೊಂದಾದ ರನ್ ಉತ್ಸವ್‌ ಈ ಬಾರಿಯಂತೂ ಬಿಕೋ ಅನ್ನುತ್ತಿತ್ತು. ಖಾಲಿ ಅಂದರೆ ಖಾಲಿ. ಯಾರೋ ಯುವ ಉತ್ಸಾಹಿಗಳು ಅಡ್ವೆಂಚರ್‌ ಮಾಡಲು ಹೋಗಿ ಆ ಬಿಳಿ ಉಪ್ಪುನೆಲೆದ ಮೇಲೆ ಯದ್ವಾತದ್ವ ಕಾರು ಓಡಿಸಿ ಚಕ್ರ ಹುಗಿಸಿಕೊಂಡು ತೆಗೆಯಲಾಗದೆ ಒದ್ದಾಡುತ್ತಿದ್ದರು. ಉತ್ಸಾಹದ ಭರದಲ್ಲಿ ಇನ್ನೂ ಸರಿಯಾಗಿ ಒಣಗದ ಮೆದು ನೆಲವನ್ನು ತಪ್ಪು ತಿಳಿದು ಪ್ರಮಾದವಾಗಿತ್ತು. ಅವರ ಪೀಕಲಾಟ ನೋಡಿದಾಗ ನಾವು ಇಡೀ ದಿನ ಕಾದದ್ದು ಮರೆತುಹೋಗಿ ಸೂರ್ಯಾಸ್ತ ಕಣ್ತುಂಬಿಕೊಂಡು ನಿರಾಳರಾಗಿಬಿಟ್ಟಿದ್ದೆವು ಎಂಬಲ್ಲಿಗೆ ಆ ದಿನ ಮುಗಿದಿತ್ತು. ಮರುದಿನ ಕಾಲೋ(ಲಾ) ಡುಂಗರ್‌ ಕಾಯುತ್ತಿತ್ತು.

ಕಾಲೋ ಡುಂಗರ್‌ ಎಂದರೆ ಗುಜರಾತಿಯಲ್ಲಿ ಕಪ್ಪು ಬೆಟ್ಟ. ನಾವು ಈ ಕಾಲಾ ಡುಂಗರ್‌ ಎಂಬ ಕಪ್ಪು ಬೆಟ್ಟಕ್ಕೆ ಹೋಗಲೇಬೇಕೆಂದು ಅಂದುಕೊಳ್ಳುವುದಕ್ಕೆ ಎರಡು ಕಾರಣಗಳಿವೆ. ಒಂದು ಎಂದೋ ಎಲ್ಲೋ ಓದಿದ ಕೇಳಿದ ಈ ನರಿ ಕಥೆ. ಇನ್ನೊಂದು ಇದು ಕಚ್‌ನಂಥ ಬಟಾಬಯಲಿನಲ್ಲೊಂದು ಅತ್ಯಂತ ಎತ್ತರದ ಜಾಗವಾದ ಕಾರಣ ಖಂಡಿತವಾಗಿ ಅತ್ಯದ್ಭುತ ದೃಶ್ಯ ಸಿಕ್ಕೀತು ಎಂಬ ಆಶಾಭಾವ.

ಕಚ್‌ಗೆ ಬಂದವರಲ್ಲಿ ಹಲವರಾದರೂ ಈ ಎರಡನೇ ಕಾರಣಕ್ಕೆ ಕಾಲಾ ಡುಂಗರ್‌ಗೆ ಬಂದೇ ಬರುತ್ತಾರೆ. ಮೊದಲನೇ ಕಾರಣ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ನಾವು ಸರಿಯಾದ ಸಮಯಕ್ಕೇ ತಲುಪಿದ್ದೆವು. ಮಧ್ಯಾಹ್ನದ ಹೊತ್ತು. ʻಇನ್ನೇನು ಅರ್ಧ ಗಂಟೆಯಲ್ಲಿ ಮಂದಿರದ ಪುರೋಹಿತರು ಅನ್ನ -ದಾಲ್‌- ಬೆಲ್ಲ ಬೆರೆಸಿದ ಊಟವನ್ನು ಅಲ್ಲಿ ದೂರದಲ್ಲಿ ಕಾಣ್ತಾ ಇದೆಯಲ್ಲ, ಅದೇ ಕಟ್ಟೆಯಲ್ಲಿ ಹಾಕಿ ಬರುತ್ತಾರೆ, ನರಿಗಳಿಗೆ. ಬೆಟ್ಟದ ಸುತ್ತಲ ಕುರುಚಲು ನಮೂನೆಯ ರಕ್ಷಿತಾರಣ್ಯದಲ್ಲಿ ನೂರಾರು ನರಿಗಳಿವೆ. ಅವುಗಳಿಗಿದು ಊಟʼ ಅಂದಿದ್ದು ರಂಜಿತ್‌. ಇಲ್ಲಿಗೆ ಬರುವ ಮೊದಲು ರಂಜಿತ್‌ಗೆ ಉಳಿದುಕೊಳ್ಳುವ ವಿಚಾರಕ್ಕಾಗಿ ಫೋನ್‌ ಮಾಡಿದ್ದರಿಂದ ಆತ ಕಾಲಾ ಡುಂಗರ್‌ ಹತ್ತಿದಾಕ್ಷಣ ಮಾತಿಗೆ ಸಿಕ್ಕಿದ್ದ.

ಎಷ್ಟು ನರಿಗಳಿವೆ ಈ ಕಾಡಿನಲ್ಲಿ? ಎಲ್ಲವೂ ಬರುತ್ತಾ ಇಲ್ಲಿಗೆ ಎಂದರೆ, ʻನೂರಾರು ಇವೆ. ಇಲ್ಲಿ, ಅತೀ ಹೆಚ್ಚು ನರಿಗಳೇ ಇರೋದು. ಎಲ್ಲ ನರಿಗಳೂ ಬರೋದಿಲ್ಲ. ಸಾಮಾನ್ಯವಾಗಿ ಕಾಣೋದಕ್ಕೆ ಸಿಗೋದು ಹತ್ತಿಪ್ಪತ್ತು ಅಷ್ಟೇ. ಹೆಚ್ಚು ಬರುತ್ತವೋ ಏನೋ, ಬಂದರೂ ಹಗಲು ಹೊತ್ತಿನಲ್ಲಿ ಕಡಿಮೆ. ರಾತ್ರಿ ಈ ಕುರುಚಲು ಕಾಡಿನಲ್ಲಿ ಆಹಾರ ದಕ್ಕದಾದಾಗ ಬಂದು ತಿಂದು ಹೋಗುತ್ತವೆ. ಬಿಟ್ಟರೆ ಮುಳ್ಳುಹಂದಿ, ಮುಂಗುಸಿಗಳಂತ ಚಿಕ್ಕಪುಟ್ಟ ಪ್ರಾಣಿಗಳು ಅಷ್ಟೇ.

ಈಗೆಲ್ಲ ಈ ಚಳಿಗಾಲದಲ್ಲಿ ಬರ್ತವೆ ಅಂತ ಪಕ್ಕಾ ಹೇಳಲೂ ಆಗೋದಿಲ್ಲ. ಎಷ್ಟಾದರೂ ಮಾಂಸಾಹಾರಿ ಪ್ರಾಣಿಗಳು. ಇಲ್ಲಿ ಆಹಾರ ಇದ್ದೇ ಇರುತ್ತವೆ ಎಂದು ಗೊತ್ತು. ಆದರೆ ಅವು ಪ್ರಕೃತಿ ಸಹಜವಾಗಿ ತಮ್ಮ ಆಹಾರ ಹುಡುಕಿಯೇ ಹುಡುಕುತ್ತವೆ, ಅದು ಸಿಗಲಿಲ್ಲವಾದರೆ, ಹೊಟ್ಟೆ ತುಂಬಿಸಲು ಇಲ್ಲಿಗೆ ಕೊನೇ ಆಯ್ಕೆಯಾಗಿ ಇಲ್ಲಿ ಬರುತ್ತವೆ. ಈಗ ನೋಡಿ, ನಾನು ನರಿಗಳನ್ನು ನೋಡದೆ ಒಂದೆರಡು ತಿಂಗಳುಗಳೇ ಕಳೀತು. ಈಗ ಚಳಿಗಾಲ. ಬೇಸಗೆಯಲ್ಲಷ್ಟೇ ಈ ಕುರುಚಲು ಕಾಡು ಒಣಗಿ, ಬಿಸಿಲು ಜಾಸ್ತಿಯಾದಾಗ ತಿನ್ನಲು ಏನೂ ಸಿಕ್ಕದೆ ಇಲ್ಲಿ ಬರುತ್ತವೆ. ಆದರೆ ಇಲ್ಲಿನ ಸಂಪ್ರದಾಯ ಮಾತ್ರ ನಾವು ಬಿಡಲ್ಲ. ಅವುಗಳು ಬರಲಿ, ಬಿಡಲಿ, ಇಲ್ಲಿ ಅವುಗಳ ಪಾಳು ಅವಕ್ಕಿಟ್ಟೇ ಇಡುತ್ತಾರೆʼ ಎಂದ.

ಹಾಗಾದರೆ ಈ ಪರಂಪರೆ ಶುರುವಾದದ್ದು ಹೇಗೆ? ಮನುಷ್ಯರ ಕಣ್ಣಿನಿಂದ ಆದಷ್ಟೂ ತಪ್ಪಿಸಿಕೊಳ್ಳುವ ನಾಚಿಕೆ ಸ್ವಭಾವದ ಈ ನರಿಗಳು ಸುಖಾಸುಮ್ಮನೆ ಬರಲು ಆರಂಭಿಸುತ್ತವಾ? ಎಂದರೆ ಅದಕ್ಕೆ ಪೂರಕವೆನಿಸುವಂಥ ಎರಡು ಕಥೆಗಳಿವೆ. ಒಂದರ ಪ್ರಕಾರ, ಭೂಲೋಕದಲ್ಲೆಲ್ಲ ಸಂಚರಿಸಿ ದತ್ತಾತ್ರೇಯ ದೇವರು ಗುಜರಾತಿನ ಈ ಕಾಲಾ ಡುಂಗರ್ ನಲ್ಲಿ ನೆಲೆ ನಿಂತರಂತೆ. ಆಗ ಹಸಿದ ನರಿಗಳು ಆಹಾರ ಅಪೇಕ್ಷೆಯಿಂದ ಬಳಿ ಬಂದು ನಿಂತಾಗ ದತ್ತಾತ್ರೇಯರು ತಮ್ಮ ದೇಹದ ಭಾಗವನ್ನೇ ಆಹಾರವಾಗಿ ನೀಡಿದರು.

ಮೊಂಡಾದ ದೇಹದ ಭಾಗ ಮತ್ತೆ ಬೆಳೆಯಿತು. ಮರುದಿನ ಮತ್ತೆ ನರಿ ಬಂತು. ಮತ್ತೆ ದೇಹದ ಭಾಗವೊಂದು ತುಂಡಾಗಿ ಆಹಾರವಾದರೆ, ಈ ಕಡೆ ತುಂಡಾದ ಜಾಗ ಮತ್ತೆ ಬೆಳೆದಿತ್ತು. ಈ ಪ್ರಕ್ರಿಯೆ ನಿರಂತರ ನಡೆಯಿತು. ಹಾಗಾಗಿಯೇ ಆ ನೆನಪಿನಲ್ಲಿ ಇಲ್ಲಿ ನರಿಗಳಿಗೆ ಇಂದಿಗೂ ಆಹಾರ ನೀಡಲಾಗುತ್ತದೆ ಹಾಗೂ ದತ್ತಾತ್ರೇಯ ದೇವಸ್ಥಾನ ಇಲ್ಲಿ ನಿರ್ಮಾಣವಾಯಿತು ಎಂದು ಒಂದು ಕಥೆಯ ವಿವರಣೆ.

ಇನ್ನೊಂದು ಕಥೆಯ ಪ್ರಕಾರ, ೪೦೦ ವರ್ಷಗಳ ಹಿಂದೆ ಪಚ್ಮೈ ಪೀರ್‌ ಎಂಬ ಸಂತ ಈ ಬೆಟ್ಟದಲ್ಲಿ ವಾಸವಾಗಿದ್ದಾಗ ಒಂದು ನರಿ ಆಹಾರ ಅಪೇಕ್ಷೆಯಿಂದ ಆತನ ಮುಂದೆ ನಿಂತಿತು. ಸಂತ ಆಹಾರ ಹಾಕಿದ. ಈ ಅಭ್ಯಾಸ ದಿನವೂ ಮುಂದುವರಿದು, ಒಂದು ದಿನ ನರಿಗೆ ಹಾಕಲು ಆತನ ಬಳಿ ಏನೂ ಇಲ್ಲವಾಯಿತು. ಆದರೆ, ನರಿ ಮಾತ್ರ ಮುಂದೆ ಬಂದು ನಿಂತಿದೆ. ಏನಾದರೂ ಮಾಡಬೇಕಲ್ಲ ಎಂದು ಸಂತ ತನ್ನ ಕೈಯನ್ನೇ ಕತ್ತರಿಸಿ ಅದನ್ನೇ ನರಿಗೆ ಆಹಾರವಾಗಿ ʻಲೋ ಅಂಗ್‌ʼ ಎಂದು ಹೇಳಿ ನೀಡಿದ.

ಈ ಘಟನೆಯ ನೆನಪಿಗೆ ಇಂದಿಗೂ ಕಳೆದ ೪೦೦ ವರ್ಷಗಳಿಂದ ನರಿಗಳಿಗೆ ಆಹಾರ ನೀಡುವ ಪರಿಪಾಠ ಇದೆ ಎಂಬುದು ಇನ್ನೊಂದು ಕಥೆ. ಹಾಗಾಗಿ ಸೌಟಿನಿಂದ ತಟ್ಟೆಯನ್ನು ತಟ್ಟುತ್ತಾ ಶಬ್ದ ಮಾಡಿ ಆಹಾರವನ್ನು ಅವಕ್ಕೆಂದೇ ಮೀಸಲಿರುವ ಒಂದು ಕಟ್ಟೆಯ ಮೇಲೆ ಹಾಕಲಾಗುತ್ತದೆ. ಹಾಕುವಾಗ ಈಗಲೂ ʻಲೋ ಅಂಗ್‌, ಲೋ ಅಂಗ್‌ʼ ಎಂದೇ ಮಂತ್ರೋಚ್ಛಾರಣೆಯಂತೆ ಹೇಳಲಾಗುತ್ತದೆ ಎಂಬುದು ಇನ್ನೊಂದು ಕಥೆ.

ಮಧ್ಯಾಹ್ನವಾಗಿತ್ತು. ಕಾಲಾ ಡುಂಗರ್‌ನ ಆ ಎತ್ತರದಲ್ಲಿ ನಿಂತು ಇಡೀ ಕಚ್‌ ನೋಡಿ ಆಗಿತ್ತು. ಹೋಡ್ಕಾದಲ್ಲಿ ಕೇಳಿ ಗುಂಗು ಹಿಡಿದ ಕಬೀರ್‌ ದಾಸರ ʻವಾರೀಜಾವೋಂ ರೇʼ ಹಾಡು ಮತ್ತೆ ಇಲ್ಲಿ ನನಗಾಗಿಯೇ ಯಾರೋ ಬಂದು ಹಾಡುತ್ತಿದ್ದಾರೆ ಎಂಬಂತೆ ದೇವ್‌ ಭಾಯಿ ಮಧುರವಾಗಿ ಹಾಡುತ್ತಿದ್ದ. ಆತನ ಬಳಿ ಅರ್ಧ ಗಂಟೆ ಕೂತು, ಹಾಡು ಕೇಳಿ ಮತ್ತೆ ಆ ನರಿಗಳಿಗೆ ಆಹಾರ ಹಾಕುವ ಕಟ್ಟೆಯ ಬಳಿ ಬಂದಾಗ ಸಮಯ ಸರಿಯಾಗಿತ್ತು. ಅದೇ ಊಟದ ಸಮಯ.

ಆದರೆ ನಮ್ಮ ಬ್ಯಾಡ್‌ ಲಕ್.‌ ನಮ್ಮ ಆ ದಿನವೂ ನರಿಗಳು ಬರಲಿಲ್ಲ. ನನ್ನ ಕ್ಯಾಮರಾದಲ್ಲಿ ಸೆರೆಯಾಗುವ ಭಾಗ್ಯ ಆ ನರಿಗಳಿಗಿಲ್ಲ ಅಷ್ಟೆ ಎಂದು ನರಿಗಳದ್ದೇ ದ್ರಾಕ್ಷಿ ಹುಳಿ ಧಾಟಿಯಲ್ಲಿ ಸಮಾಧಾನ ಮಾಡಿಕೊಳ್ಳುತ್ತಾ ಮತ್ತೆ ಪಯಣ ಮುಂದುವರಿಸಿದೆ.

ಈ ಕಾಲಾ ಡುಂಗರ್‌ ಡ್ರೈವ್‌ಗೆ ಇನ್ನೊಂದು ಮಜಲಿದೆ. ಭುಜ್‌ನಿಂದ ಸುಮಾರು ೯೦ ಕಿಮೀ ದೂರದಲ್ಲಿರುವ ಇದಕ್ಕೆ ಹೋಗುವಾಗ ಅಂಥದ್ದೊಂದು ಜಾಗ ಸಿಗುತ್ತದೆ, ಅಲ್ಲಿ ನಾವು ಕಾರಿನ ಗೇರನ್ನು ನ್ಯೂಟ್ರಲ್ಲಿನಲ್ಲಿಟ್ಟರೆ ಸಾಕು ಕಾರು ಹಿಂದಕ್ಕೋಡುತ್ತದೆ. ಅದೂ ಏರುಹಾದಿಯಲ್ಲಿ ೨೦ ಕಿಮೀ ವೇಗದಲ್ಲಿ! ಕಾರಣ, ಇಲ್ಲಿನ ನೆಲದ ಅಯಸ್ಕಾಂತೀಯ ಗುಣ ಎಂಬುದು ವಿಜ್ಞಾನದ ವಿವರಣೆ.

ಇಂಥದ್ದೊಂದು ಮ್ಯಾಗ್ನಟಿಕ್‌ ಹಿಲ್‌ ಲಡಾಕಿನ ಲೇನಲ್ಲಿ ಬಹಳ ಪ್ರಸಿದ್ಧ. ಈ ಕಾಲಾಡುಂಗರ್‌ ಕೂಡಾ ಅಂಥದ್ದೇ ಒಂದು ಮ್ಯಾಗ್ನೆಟಿಕ್‌ ಹಿಲ್.‌  ನಮ್ಮ ಮೂಲಕವೂ ಇದರ ಯಶಸ್ವೀ ಪರೀಕ್ಷೆಯೂ ನಡೆದು ಕಚ್‌ ಎಂಬ ಬಿಳೀ ಸುಂದರಿ ಸಂಜೆಯ ಹೊಂಬಣ್ಣಕ್ಕೆ ಸಾಕ್ಷಿಯಾಗಲು ನಮ್ಮನ್ನು ಮತ್ತೆ ಕರೆಸಿಕೊಂಡಳು ಎಂಬಲ್ಲಿಗೆ ನಮ್ಮ ಕಚ್‌ ಪ್ರೇಮ ಎರಡನೇ ಇರುಳಿಗೆ ಕಾಲಿಟ್ಟಿತ್ತು.

‍ಲೇಖಕರು ರಾಧಿಕ ವಿಟ್ಲ

February 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: