‘ಕಾಲ’ದಲ್ಲಿ ರಜನಿ ಸ್ಟಿರಿಯೋಟೈಪ್ ಇಲ್ಲ

 ಶ್ರೀ ಮುರಳಿ ಕೃಷ್ಣ

ನಮ್ಮ ದೇಶದ ಚಲನಚಿತ್ರರಂಗದ ಅನೇಕ ಸ್ಟಾರ್ ಗಳು, ಮೆಗಾ ಸ್ಟಾರ್ ಗಳು ಜೀವನಕ್ಕೆ ಹತ್ತಿರವಿರುವ ಪಾತ್ರಗಳಿಗಿಂತ ಅದಕ್ಕೆ ಮಿಗಿಲಾದ ಪಾತ್ರಗಳಲ್ಲಿ ಮಿಂಚಿರುವುದನ್ನು ಕಾಣಬಹುದು.

ಇದಕ್ಕೆ ಏನು ಕಾರಣ?

ಒಂದು ಕಾರಣ-ರಾಮಾಯಣ, ಮಹಾಭಾರತದಂತಹ ನಮ್ಮ ಪುರಾಣಗಳ ಮೂಂಚೂಣಿ ಪಾತ್ರಗಳ ಅನುಕರಣೆ ಎನ್ನಬಹುದು. ಇವುಗಳಲ್ಲಿ ಪ್ರಧಾನ ರಸಗಳ ವಿಜೃಂಭಣೆಯೇ ಜಾಸ್ತಿ. ಕಪ್ಪು-ಬಿಳುಪು ಪಾತ್ರಗಳ ನಿರೂಪಣೆಗೇ ಪ್ರಾಶಸ್ತ್ಯ. ನಾಟಕಗಳಲ್ಲಾದಂತೆ, ಚಲನಚಿತ್ರಗಳಲ್ಲೂ ಪ್ರಥಮವಾಗಿ ಪುರಾಣಗಳ ವಸ್ತುಗಳೇ ಪ್ರಯೋಗಿಸಲ್ಪಟ್ಟಿತು.

ದಾದಾ ಸಾಹೇಬ್ ಪಾಲ್ಕೆ ನಿರ್ದೇಶಿಸಿದ ಭಾರತೀಯ ಚಲನಚಿತ್ರರಂಗದ ಪ್ರಥಮ ಚಲನಚಿತ್ರದ ಉದಾಹರಣೆ ನಮ್ಮ ಮುಂದಿದೆ. ಇರಲಿ…

ತಮಿಳುನಾಡಿನಲ್ಲಿ ಚಲನಚಿತ್ರರಂಗಕ್ಕೆ ಹಾಗೂ ರಾಜಕೀಯಕ್ಕೆ ಹತ್ತಿರದ ನಂಟು. ಕರುಣಾನಿಧಿ, ಎಂ ಜಿ ರಾಮಚಂದ್ರನ್, ಶಿವಾಜಿ ಗಣೇಶನ್, ಜಯಲಲಿತ, ಎಸ್ ಎಸ್ ರಾಜೇಂದ್ರನ್, ವಿಜಯಕಾಂತ್ ಮತ್ತು ಇನ್ನು ಅನೇಕರು ರಾಜಕೀಯವನ್ನು ಪ್ರವೇಶಿಸಿದ ಉದಾಹರಣೆಗಳು ಅಲ್ಲಿವೆ.

ಪ್ರಸ್ತುತ ರಾಜಕೀಯಕ್ಕೆ ಗ್ರ್ಯಾಂಡ್ ಎಂಟ್ರಿ ಮಾಡಿರುವ ರಜನಿಕಾಂತ್ ಮತ್ತು ಕಮಲಹಾಸನ್ ಸುದ್ದಿಯಲ್ಲಿದ್ದಾರೆ. ‘ಮಕ್ಕಳ್ ನೀತಿ ಮಯ್ಯಂ’ ಎಂಬ ಸೆಂಟ್ರಿಷ್ಟ್ ಪಕ್ಷವನ್ನು ಕಮಲಹಾಸನ್ ಹುಟ್ಟುಹಾಕಿದ್ದಾರೆ. ರಜನಿಕಾಂತ್ ಪಕ್ಷವನ್ನು ಸ್ಥಾಪಿಸಿಲ್ಲ. ಅದರ ತಯಾರಿಯಲ್ಲಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ನಟಿಸಿರುವ, ಪ ರಂಜಿತ್ ನಿರ್ದೇಶನದ ‘ಕಾಲ’ ಚಲನಚಿತ್ರ ತೆರೆಕಂಡಿದೆ. ಅವರ ಹಿಂದಿನ ಚಲನಚಿತ್ರ ‘ಕಬಾಲಿ’ಯನ್ನು ಕೂಡ ರಂಜಿತ್ ನಿರ್ದೇಶಿಸಿದ್ದರು. ‘ಕಬಾಲಿ’ ಮತ್ತು ‘ಕಾಲ’ಗಳನ್ನು ತುಲನೆ ಮಾಡಿದಾಗ, ‘ಕಾಲ’ದಲ್ಲಿ ಎಂದಿನ ರಜನಿ ಚಲನಚಿತ್ರಗಳ ಸ್ಟಿರಿಯೋಟ್ಯೆಪ್ ಸಂಗತಿಗಳು ಕಡಿಮೆ ಇವೆ.

ತಳಸಮುದಾಯದ, ಕಪ್ಪು ಉಡುಪನ್ನೇ ಧರಿಸುವ ಕಾಳ ಧಾರವಿ ಕೊಳಗೇರಿಯ ಅದ್ವಿತೀಯ ನಾಯಕನಾಗಿರುತ್ತಾನೆ. ಆ ಕೊಳಗೇರಿಯನ್ನು ಇಲ್ಲವಾಗಿಸಲು ಪ್ರಯತ್ನಿಸುವ, ಎಲ್ಲ ವಿಧದಲ್ಲೂ ಶಕ್ತಿಶಾಲಿಯಾಗಿರುವ ಹರಿ ದಾದ ಯಾವಾಗಲೂ ಬಿಳಿ ಬಟ್ಟೆಯನ್ನು ಧರಿಸಿರುತ್ತಾನೆ. ಅವರೀರ್ವರ ನಡುವಿನ ಸೆಣಸಾಟ, ಪ್ರಯೋಗಿಸಲ್ಪಟ್ಟಿರುವ ಕಪ್ಪು, ಬಿಳಿ, ಕೆಂಪು ಬಣ್ಣಗಳ ಪ್ರತಿಮೆಗಳ ಹಾಗೂ ಇತರ ಕೆಲವು ವಿಚಾರಗಳ ಬಗೆಗೆ ವಿವೇಚನೆಯುಳ್ಳ ವೀಕ್ಷಕರು, ವಿಶ್ಲೇಷಕರು, ಸಾಮಾಜಿಕ ಹೋರಾಟಗಾರರು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಆದರೆ ‘ಕಾಲ’ನ ಪಾತ್ರಪೋಷಣೆಯಲ್ಲಿ ವ್ಯಕ್ತಿಕೇಂದ್ರದ ನಡೆಯಿದೆ. ಆತ ಒಂದರ್ಥದಲ್ಲಿ ಹರಿ ದಾದನ ಪ್ರತಿರೂಪ. ಧಾರವಿಯಲ್ಲಿ ಆತನ ಮಾತು ವೇದ ವಾಕ್ಯ!

ಸಮಾಜದ ಅಂಚಿನಲ್ಲಿರುವವರ ಪರವಾಗಿರುವ ‘ಕಾಲ’ ಚಲನಚಿತ್ರದ ಮೂಲಕ ರಾಜಕೀಯರಂಗದ ಪ್ರವೇಶಕ್ಕೆ ಜಾಣ ಸಿದ್ಧತೆಗಳನ್ನು ನಡೆಸಿದ್ದಾರೆ ರಜನಿ ಎಂಬುದು ತಮಿಳುನಾಡಿನಲ್ಲಿ ಸದ್ದು ಮಾಡುತ್ತಿರುವ ಸುದ್ದಿ. 126 ವರ್ಷಗಳಷ್ಟು ಹಳೆಯದಾದ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಅವರು ಇತ್ತೀಚೆಗೆ ಯಾವ ಸರ್ಕಾರ ಕರ್ನಾಟಕದ ಅಧಿಕಾರ ಚುಕ್ಕಾಣಿಯನ್ನು ಹಿಡಿದರೂ, ತಮಿಳುನಾಡಿಗೆ ನೀರನ್ನು ಬಿಡಬೇಕು ಎಂದದ್ದಕ್ಕೆ ಕರ್ನಾಟಕದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಯಿತು.

ತಮಿಳುನಾಡಿನ ತೂತ್ತಕೂಡಿಯ ಸ್ಟರ್ಲೈಟ್ ಕಾಪರ್ ಕಂಪನಿಯ ವಿರುದ್ಧದ ಪ್ರತಿಭಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಹತರಾದರು.

ಇದಕ್ಕೆ ಸಂಬಂಧಿಸಿದಂತೆ ಮೇ 22ರ ತಮ್ಮ ಹೇಳಿಕೆಯಲ್ಲಿ ರಜನಿ “ ಇಂತಹ ಪ್ರತಿಭಟನೆಗಳು ಜರುಗಿದರೇ, ತಮಿಳುನಾಡು ಒಂದು ಸ್ಮಶಾನವಾಗುತ್ತದೆ” ಎಂದರು! ಇದು ಅಲ್ಲಿ ವ್ಯಾಪಕ ಖಂಡನೆಗೆ ಒಳಗಾಯಿತು.

ಅವರು ತಮ್ಮ ರಾಜಕೀಯ ‘ಆನ್ಮಿಗ ಅರಸಿಯಲ್’ (ಆಧ್ಯಾತ್ಮಿಕ ರಾಜಕೀಯ) ಎಂದು ಬಣ್ಣಿಸಿದ್ದಾರೆ. ಅಲ್ಲದೆ ಅವರು ದಕ್ಷಿಣ ಭಾರತದ ನದಿಗಳ ಜೋಡಣೆ ಬಗೆಗೆ ದೂರಾಲೋಚನೆಯಿಲ್ಲದೆ ಸಮರ್ಥಿಸಿದ್ದಾರೆ. ಇವೆಲ್ಲವೂ ಅವರ ರಾಜಕೀಯದ ಅಪ್ರಬುದ್ಧ ನಡೆಗಳು ಎಂದು ಕೆಲವರು ವಿಶ್ಲೇಷಿಸಿದ್ದಾರೆ.

ಅವರು ಸ್ಥಾಪಿಸಲು ಉದ್ದೇಶಿಸಿರುವ ರಾಜಕೀಯ ಪಕ್ಷ, ಅಣ್ಣಾ ಡಿಎಮ್‍ಕೆ, ಬಿಜು ಜನತಾದಳ್, ಡಿಎಮ್‍ಕೆ, ಟಿಎಮ್‍ಸಿ, ಟಿಅರ್‍ಎಸ್ ಮತ್ತಿತರ ಏಕನೇತಾರ ಕೇಂದ್ರದ ಪಕ್ಷವಾಗುತ್ತದೆಯೇ ಅಥವಾ ಇಲ್ಲವೋ ಎಂಬುದನ್ನು ಕಾಲವೇ ತಿಳಿಸುತ್ತದೆ.

‍ಲೇಖಕರು avadhi

June 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: