ಡಾ ಬಿ ಎ ವಿವೇಕ ರೈ
**
ನಾಡಿನ ಹೆಸರಾಂತ ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಅವರ ಹೊಸ ಕಾದಂಬರಿ ‘ಲ್ಯಾಟರೀನಾ’.
‘ಸಪ್ನ ಬುಕ್ ಹೌಸ್’ ಈ ಕೃತಿಯನ್ನು ಪ್ರಕಟಿಸಿದೆ.
ಕನ್ನಡದ ಹಿರಿಯ ವಿದ್ವಾಂಸರಾದ ಡಾ ಬಿ ಎ ವಿವೇಕ ರೈ ಅವರು ಈ ಕಾದಂಬರಿಗೆ ಬರೆದ ಮುನ್ನುಡಿ ಇಲ್ಲಿದೆ.
**
ಕೆಲವು ದಿವಸಗಳ ಹಿಂದೆ ಕುಂವೀ ತಮ್ಮ ಹೊಸ ಕಾದಂಬರಿಯ ಹಸ್ತಪ್ರತಿ ಕಳಿಸಿ ಕೊಟ್ಟಿದ್ದರು. ಹೆಸರು ‘ಲ್ಯಾಟರೀನಾ’ ಎಂದಿತ್ತು. ಕುಂವೀ ಇತ್ತೀಚಿಗೆ ವರ್ಷಕ್ಕೊಂದರಂತೆ ಹೊಸ ಕಾದಂಬರಿ ಬರೆದು ಹೊರ ತರುತ್ತಿದ್ದಾರೆ. ಈ ಕಾದಂಬರಿಯ ಉಪಶಿರ್ಷಿಕೆ ‘ನೊಂದಾನೊಂದು ಕಾಲದ ಗಲೀಜು ಪ್ರಸಂಗ’ ಎಂದು ಇತ್ತು. ಕಾದಂಬರಿಯ ಕೊನೆಯಲ್ಲಿ ಇದು ಗಲೀಜು ಪ್ರಸಂಗದ ಆರಂಭ ಮಾತ್ರ, ಮುಕ್ತಾಯ ಇರುವುದು ನಿಮ್ಮ ಮನಸ್ಸಿನಲ್ಲಿ’ ಎಂಬ ಭರತ ವಾಕ್ಯ ಇತ್ತು. ಕುಂವೀಯವರ ಇತ್ತೀಚಿನ ಕಾದಂಬರಿಗಳಂತೆಯೇ ಇದನ್ನು ಕೂಡ ಓದುವುದು ನನಗೆ ಕಷ್ಟದ ಕೆಲಸವಾಯಿತು. ಇದಕ್ಕೆ ಕಾರಣ ಕಾದಂಬರಿಯ ಕಥನದ ವಿಭಿನ್ನ ಮಾದರಿ ಮತ್ತು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟವಾದ ಭಾಷಾ ಶೈಲಿ. ಲ್ಯಾಟರೀನಾ ಕಾದಂಬರಿಯಲ್ಲಿ ಕೂಡ ಮುಖ್ಯ ಕಥನದ ಜೊತೆಗೆ ಅನೇಕ ಉಪಕತೆಗಳು ನಡುನಡುವೆ ಸೇರಿಕೊಂಡಿವೆ. ಈ ಉಪಕಥನಗಳ ಸ್ವಾರಸ್ಯವನ್ನು ಬಿಡಿಯಾಗಿಯೇ ಅನುಭವಿಸಬಹುದು. ಆದರೆ ಅವುಗಳನ್ನು ಮುಖ್ಯ ಕಥನದ ಜೊತೆಗೆ ಜೋಡಿಸಿಕೊಂಡು ಓದಬೇಕು.
ಈ ಕಾದಂಬರಿಯ ಭಾಷಾ ಶೈಲಿ ಕನ್ನಡದಲ್ಲಿ ಅಪೂರ್ವ, ವ್ಯಂಗ್ಯ, ವಿಡಂಬನೆ, ಹಾಸ್ಯ ಇವುಗಳ ವೈವಿಧ್ಯಮಯ ಮಾದರಿಗಳು – ಇಲ್ಲಿನ ನಿರೂಪಣೆ, ಸಂಭಾಷಣೆ ನುಡಿಗಟ್ಟು ರೂಪಕ ಪ್ರಸಂಗಗಳಲ್ಲಿ ಸಮ್ಮಿಶ್ರವಾಗಿ ಪ್ರವಹಿಸುತ್ತವೆ. ಗ್ರಾಮ್ಯ, ಶಿಷ್ಟ, ಇಂಗ್ಲೀಷ್ ಭಾಷೆಗಳ ಪದ ನುಡಿಗಟ್ಟುಗಳನ್ನು ಸಹಜವಾಗಿ ಬೆರಕೆ ಮಾಡುವ ಮೂಲಕ ಕುಂವೀ ಹೊಸ ಕಥನ ಭಾಷೆಯೊಂದನ್ನು ನಿರ್ಮಿಸುತ್ತಾರೆ. ಸಾಹಿತ್ಯ ವಿಮರ್ಶೆಯಲ್ಲಿ ಉಲ್ಲೇಖಿಸುವ ‘ಐರನಿ’ಯ ಬಹುರೂಪಗಳು ಇಲ್ಲಿ ಮೈತಳೆಯುತ್ತವೆ. ಲ್ಯಾಟರೀನಾ ಕಾದಂಬರಿಯ ‘ನಾಂದಿ’ಯ ಹಾಗೆ ಆರಂಭದಲ್ಲಿ ‘ಗಲೀಜು ಜಾನಪದ ಕಥೆ’ ಹೆಸರಿನಲ್ಲಿ ಒಂದು ಕಥೆಯನ್ನು ಕೊಡಲಾಗಿದೆ. ‘ಒಮ್ಮೆ ಹಂದಿಗಳ ಸಂಸಾರ ಊರ ಹೊರಗಿನ ಬಯಲಲ್ಲಿ ಮೃಷ್ಟಾನ್ನ ಭೋಜನ ಮಾಡುತ್ತಿದ್ದವು. ಆಗ ತುಂಟ ಮರಿಯೊಂದು, ‘ನಾವು ಮನುಷ್ಯರ ಮಲವನ್ನು ತಿನ್ನುವಂತೆ ಮನುಷ್ಯರು ಹಂದಿಗಳ ಮಲವನ್ನು ತಿನ್ನುವರೇನು!’ ಎಂದು ಕೇಳಿತಂತೆ. ಅದರಿಂದ ಕೋಪಗೊಂಡ ತಾಯಿ ಹಂದಿ, ‘ಊಟ ಮಾಡುವಾಗ ಹಾಗೆಲ್ಲ ಗಲೀಜು ಮಾತಾಡಬೇಡ’ ಎಂದು ಗದರಿಸಿತಂತೆ.

ಮನುಷ್ಯರ ನೈಸರ್ಗಿಕ ದೈನಂದಿನ ದೈಹಿಕ ಕ್ರಿಯೆ ಮಲವಿಸರ್ಜನೆ ಎನ್ನುವುದು ಖಾಸಗಿ ರೂಪದಿಂದ ಸಾರ್ವಜನಿಕ ವಲಯದವರೆಗೆ ವಿಭಿನ್ನ ಸಮಸ್ಯೆ ಸವಾಲುಗಳಿಗೆ ಕಾರಣವಾದ ವಿಷಯ ಈ ಕಾದಂಬರಿಯ ತಿರುಳಿನಲ್ಲಿ ಇದೆ. ಆದರೆ ಕಾದಂಬರಿಯ ಕವಚಗಳ ಹಾಗೆ ಭಾಸವಾಗುವ ಸನ್ನಿವೇಶ, ಘಟನೆ, ಪಾತ್ರಗಳು, ಸಂಸ್ಥೆಗಳು, ಈ ಕಾದಂಬರಿ ಧ್ವನಿಸುವ ಜಾತಿ ವ್ಯವಸ್ಥೆ, ವರ್ಗಭೇದ, ಮಹಿಳೆಯರ ಸಂಕಷ್ಟಗಳು, ಸರ್ಕಾರಿ ವ್ಯವಸ್ಥೆ, ಭ್ರಷ್ಟಾಚಾರ, ಅಕ್ರಮಗಳು, ಮಠಗಳು, ಪ್ರಾಣಿಗಳು, ಪತ್ರಿಕೆಗಳು ಮುಂತಾದ ಬಹುರೂಪಿ ನೆಲೆಗಳಲ್ಲಿ ಸೇರಿಕೊಂಡು ಸಂಕೀರ್ಣವಾದ ಸಂಕಥನ ರೂಪದಲ್ಲಿ ಈ ಕಾದಂಬರಿ ನಿರ್ಮಾಣವಾಗಿದೆ. ಕುಂವೀ ‘ಲ್ಯಾಟರೀನಾ’ ಕಾದಂಬರಿಯಲ್ಲಿ ತಮ್ಮ ಊರು ‘ಕೊಟ್ಟೂರು’ ವನ್ನು ಕೇಂದ್ರವನ್ನಾಗಿ ಇರಿಸಿಕೊಂಡು ಅದರ ಒಳಗಡೆಯೇ ಕಳೆದ ಶತಮಾನದ ಅರುವತ್ತರ ದಶಕದ ಸುಮಾರಿನಿಂದ ಆಧುನಿಕ ಕಾಲದವರೆಗೆ ಶೌಚಾಲಯಗಳ ಇತಿಹಾಸದ ಪದರಗಳ ಹೆಣಿಗೆಯನ್ನು ನೇಯ್ದಿದ್ದಾರೆ.
ಇದರಲ್ಲಿ ನಿರೂಪಕನಾಗಿ ಕಾದಂಬರಿಯ ಉದ್ದಕ್ಕೂ ಕಾಣಿಸಿಕೊಳ್ಳುವವನು ಹಾಲಪ್ಪನ ಮಗ ವೀರಭದ್ರಪ್ಪ (ಈರಭದ್ರಿ) ಅವನ ಜೊತೆಗೆ ಅವನ ಗೆಳೆಯ ಕಕ್ಕಸುಗಳ ಇತಿಹಾಸ, ವರ್ತಮಾನ, ಸಾಮಾಜಿಕ, ರಾಜಕೀಯ ಸಂಗತಿಗಳ ಬಗ್ಗೆ ‘ಕಕ್ಕಸು ಮಾಡಿದ ಕ್ರಾಂತಿ’ ಪುಸ್ತಕ ಬರೆದ ಸಂಬು (ಶಂಭುನಾಥ್). ವೀರಭದ್ರಪ್ಪ ಮತ್ತು ಸಂಬು ಅವರ ಮೂಲಕ ಈ ಇಡೀ ಕಾದಂಬರಿಯ ಸಂಕೀರ್ಣ ರೂಪಗಳು ತೆರೆದುಕೊಳ್ಳುತ್ತವೆ. ಆತ್ಮಕಥನಗಳನ್ನು ಅನುಭವ ಕಥನ ಎಂದೂ, ನೆನಪಿನ ಸಂಸ್ಕೃತಿಯ ಕಥನ ಎಂದೂ ನೋಡುವ ದೃಷ್ಟಿಕೋನವು ಸಾಹಿತ್ಯದ ಅಧ್ಯಯನದಲ್ಲಿ ಪ್ರಚಲಿತವಿದೆ. ಸಾಹಿತಿಗಳ ಆತ್ಮಕಥನ ಅಥವಾ ಆನುಭವ ಕಥನದ ಸುಳುಹುಗಳನ್ನು ಕೆಲವೊಮ್ಮೆ ಅವರ ಕಾದಂಬರಿಯಂತಹ ಕಥನಗಳಲ್ಲು ಗುರುತಿಸಬಹುದು. ಶಿವರಾಮ ಕಾರಂತರು ತಮ್ಮ ಆತ್ಮಕಥನದ ಸಂಪುಟದ ‘ಸಾಹಿತ್ಯ ಮತ್ತು ನಾನು’ ಭಾಗದಲ್ಲಿ ತಮ್ಮ ಆರಂಭದ ಅನೇಕ ಕಾದಂಬರಿಗಳ ಹಿನ್ನಲೆ, ತಮ್ಮ ಬದುಕಿನ ಅನುಭವಗಳನ್ನು ವಿವರಿಸಿದ್ದಾರೆ. ಉದಾಹರಣೆಗೆ ಚೋಮನ ದುಡಿ, ಕುಡಿಯರ ಕೂಸು, ಬೆಟ್ಟದ ಜೀವ, ಮರಳಿ ಮಣ್ಣಿಗೆ, ಸರಸಮ್ಮನ ಸಮಾಧಿ ಇತ್ಯಾದಿ. ಸೃಜನಶೀಲ ಲೇಖಕರು ತಮ್ಮ ಬದುಕಿನಲ್ಲಿ ಬಾಲ್ಯದಿಂದ ತೊಡಗಿ ಇನ್ನೂ ನೆನಪಿನ ಕೋಶಗಳಲ್ಲಿ ಜೀವಂತವಾಗಿ ಇರುವ ವಿದ್ಯಮಾನಗಳಿಗೆ ಕಥನದ ರೂಪವನ್ನು ಕೊಡುವುದರ ಜೊತೆಗೆ ಅವುಗಳ ಮೂಲಕ ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಸಂಗತಿಗಳಿಗೆ ಸೂಕ್ಷ್ಮ ಪ್ರತಿಕ್ರಿಯೆಯನ್ನು ಕೊಡಲು ಪ್ರಯತ್ನಿಸುತ್ತಾರೆ. ಈ ದೃಷ್ಟಿಯಿಂದಲೂ ಕುಂವೀ ಅವರ ಈ ಹೊಸ ಕಾದಂಬರಿ ಕಾಲಗರ್ಭದ ಸಾಂಸ್ಕೃತಿಕ ಉತ್ಖನನದ ಒಂದು ಮಾದರಿಯಾಗಿದೆ.
ನಿರೂಪಕ ವೀರಭದ್ರಪ್ಪನ ಬಾಲ್ಯ ಕಾಲದಲ್ಲಿನ ನಿಂಗಮ್ಮಜ್ಜಿ ಮತ್ತು ಆಕೆಯ ಸಹೋದರಿ ಸಿದ್ದಮ್ಮಜ್ಜಿಯವರ ಪ್ರವೇಶದ ಮೂಲಕ ಕಾದಂಬರಿ ಆರಂಭವಾಗುತ್ತದೆ. ಕಾದಂಬರಿಯಲ್ಲಿ ಕ್ರಾಂತಿಯ ಮೊದಲ ಕಿಡಿಯನ್ನು ಉರಿಸುವುದು ಬಾಲಕ ವೀರಭದ್ರ, ಖಾಸಗಿಯವರ ಕಕ್ಕಸುಗಳ ಮಲವನ್ನು ಪಾಂಚಾಲ ಕುಲದ ಮಹಿಳೆಯರು ಹೊತ್ತುಕೊಂಡು ಹೋಗುವ ದೀನಸ್ಥಿತಿಯನ್ನು ನೋಡಿ ಆತನು ಶೆಟ್ಟಿಯ ಖಾಸಗಿ ಕಕ್ಕಸಿಗೆ ಬೀಗ ಜಡಿದು ಮೊದಲ ಕ್ರಾಂತಿಯ ಧ್ವನಿಯನ್ನು ಮೊಳಗಿಸಿದ. ಕಾದಂಬರಿಯಲ್ಲಿ ಮುಂದೆ ನಡೆಯುವ ಎಲ್ಲಾ ಘಟನೆಗಳು ಈ ವಿದ್ಯಮಾನದ ಬಹುರೂಪಿ ಪ್ರತಿಫಲನಗಳು. ಅದಕ್ಕೆ ಐತಿಹಾಸಿಕ, ಸಾಮಾಜಿಕ, ಜನಾಂಗಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಆಯಾಮಗಳನ್ನು ಕುಂವೀ ಕಾದಂಬರಿಯ ಸನ್ನಿವೇಶ ಮತ್ತು ಪಾತ್ರಗಳ ಮೂಲಕ ತಂದಿದ್ದಾರೆ. ತಲೆಯಲ್ಲಿ ಮಲ ಹೊರುವ ಕಕ್ಕಸುಗಳ ಸ್ವಚ್ಚ ಮಾಡುವ ಸಂಗತಿಗಳು ನಮ್ಮ ದೇಶದಲ್ಲಿ ದಲಿತರ ಶೋಷಣೆಯ ಭಾಗವಾಗಿದ್ದವು. ಮಹಾತ್ಮ ಗಾಂಧಿಯವರು ತಾವೇ ಕಕ್ಕಸುಗಳನ್ನು ಶುಚಿ ಮಾಡುವ ಮೂಲಕ ಕ್ರಾಂತಿ ಮಾಡಿದವರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುದ್ಮುಲ್ ರಂಗರಾಯರು ದಲಿತರ ಉದ್ದಾರಕ್ಕಾಗಿ ಬಹುಬಗೆಯ ಚಟವಟಿಕೆಗಳನ್ನು ನಡೆಸಿದರು. ಬಿ. ಬಸವಲಿಂಗಪ್ಪನವರು ಕರ್ನಾಟಕ ಸರಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದಾಗ ತಲೆಯಲ್ಲಿ ಮಲ ಹೊರುವ ಪದ್ದತಿಯನ್ನು ನಿಷೇಧಿಸುವ ಕ್ರಾಂತಿಕಾರಕ ಕಾನೂನನ್ನು ಮಾಡಿದರು. ಆದರೂ ಈ ಪದ್ದತಿ ಜೀವಂತವಾಗಿ ಇರುವುದನ್ನು ಕಂಡು ಹೈಕೋರ್ಟಿನ ಇಬ್ಬರು ನ್ಯಾಯಾಧೀಶರು ಇತ್ತೀಚಿಗೆ ಇಂತಹ ಅಪರಾಧಕ್ಕೆ ಕಾರಣರಾದವರಿಗೆ ಸ್ವಯಂ ಪ್ರೇರಿತ ಶಿಕ್ಷೆಯನ್ನು ವಿಧಿಸುವ ಮಹತ್ವದ ತೀರ್ಮಾನವನ್ನು ಕೈಗೊಂಡರು. ಈ ಸಮಸ್ಯೆಯ ನಿವಾರಣೆಯ ಪ್ರಯತ್ನದಿಂದ ಮುಂದುವರೆಯುವ ‘ಲ್ಯಾಟರೀನಾ’ ಕಾದಂಬರಿಯು ಬಯಲು ಶೌಚದಿಂದ ತೊಡಗಿ ಲೆಟ್ರಿನ್ ವರೆಗಿನ ಬೆಳವಣಿಗೆ ಹೋರಾಟ ಸಮಸ್ಯೆಗಳು ಮುಂತಾಗಿ ಒಂದು ದಿಕ್ಕಿನಲ್ಲಿ ಚಲಿಸುತ್ತದೆ. ಇದರ ಒಳಗೆಯೇ ಖಾಸಗಿ ಮತ್ತು ಸಾರ್ವಜನಿಕ ಕಕ್ಕಸುಗಳ ತಾರತಮ್ಯ, ಅವುಗಳೊಳಗೆ ಅಂತರ್ಗತವಾಗಿರುವ ಜಾತಿ ವರ್ಗ ಭೇದಗಳು ಅನಾವರಣವಾಗುತ್ತವೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಆಯಾ ಸನ್ನಿವೇಶಗಳಲ್ಲಿ ಬೇರೆ ಬೇರೆ ಪಾತ್ರಗಳ ಮೂಲಕ ಹೊರಗೆಡಹಲಾಗಿದೆ. ತ್ಯಾಜ್ಯ ನಿರ್ಮೂಲನದ ಸಮಸ್ಯೆ ಆಧುನಿಕ ಕಾಲದ ಡ್ರೈನೇಜ್ಗಳ ಭಯಾನಕ ಭೂಗತಲೋಕದವರೆಗೆ ಈ ಸಂಕಥನ ಸಾಗುತ್ತದೆ.

ಈ ಕಾದಂಬರಿಯಲ್ಲಿ ಎರಡು ಸಂಸ್ಥೆಗಳು ಭಿನ್ನವಾಗಿ ರೂಪಿತವಾಗಿವೆ. ಒಂದು ಮಹಾತ್ಮ ಗಾಂಧಿ ಪ್ರೇರಿತ ಸಾಬರಮತಿ ಆಶ್ರಮ, ಇನ್ನೊಂದು ಅದಕ್ಕೆ ವಿಲೋಮವಾದದ್ದು ಶೌಚೇಶ್ವರ ಮಠ. ಸಾಬರಮತಿ ಆಶ್ರಮ, ಅಲ್ಲಿನ ಬಾಪೂ ರೀತಿ ಇದ್ದ ರಂಗಾರಿ ಮತ್ತು ಕಸ್ತೂರಿ ಬಾಯಿ, ಅವರ ಸಮಾಜ ಸೇವೆಯ ಮಾದರಿಗಳು, ಬಾಯಿಯವರ ಕ್ರಾಂತಿಯ ಚಟವಟಿಕೆಗಳು, ಕೊನೆಯಲ್ಲಿ ನಿಸ್ತೇಜವಾದ ಸಾಬರಮತಿ ಆಶ್ರಮ – ಇದು ಗಾಂಧಿ ಮೌಲ್ಯದ ಅನುಕರಣೆಯ ಅದಃಪತನದ ರೂಪಕ. ಹಂದಿಗಳನ್ನು ಸಾಕುತ್ತಿದ್ದ ಕೊರಚರ ಕೇಂದ್ರವನ್ನು ತಮ್ಮ ಮಠವನ್ನಾಗಿ ಪರಿವರ್ತನೆ ಮಾಡಿಕೊಂಡ, ಹಸುಗಳನ್ನು ಸಾಕಿ ಲಾಭ ಮಾಡಿಕೊಳ್ಳುತ್ತಿದ್ದ ಕಮರ್ಷಿಯಲ್ ಆಗಿ ಬೆಳೆದ ಸ್ವಾಮಿಗಳ ಮಠ – ಆಧುನಿಕ ದಿಡೀರ್ ಮಠಗಳ ರೂಪಕ.
ಹಂದಿ, ದನ, ಎಮ್ಮೆ ಇವುಗಳಲ್ಲಿ ಯಾವುದು ಶುದ್ಧ, ಯಾವುದು ಅಶುದ್ಧ ಎನ್ನುವ ಪೂರ್ವಗ್ರಹದ ಹಿಂದೆ ವರ್ಣಭೇದ, ಜಾತಿಭೇದ ಇರುವ ಮಲಿನ ಮನಸ್ಸುಗಳನ್ನು ಕಾದಂಬರಿಯಲ್ಲಿ ಮತ್ತೆ ಮತ್ತೆ ಬಯಲು ಮಾಡಲಾಗಿದೆ. ನಿರೂಪಕ ವೀರಭದ್ರಪ್ಪನವರ ಪ್ರೀತಿಯ ಮಣಕ ‘ಸಿನ್ನೂರಿ’ ತನ್ನ ಇಂದ್ರಿಯಗಳ ಮೂಲಕ ಗ್ರಹಿಸುವುದನ್ನು ಭಾಷೆಯಲ್ಲಿ ಪರಿವರ್ತಿಸುವ ಮೂಲಕ ಕಾದಂಬರಿಯಲ್ಲಿ ಪಶುಗಳ ಭಾವನೆಗಳಿಗೆ ಕೂಡ ಎಡೆ ದೊರೆತಿದೆ. ಮನಸ್ಸಿನ ಒಳಗಿನ ಮಾಲಿನ್ಯ ಹೋಗದೆ ಹೊರಗಿನ ಶುಚಿಗೆ ಅರ್ಥವಿಲ್ಲ ಎನ್ನುವುದನ್ನು ಕಾದಂಬರಿ ಉದ್ದಕ್ಕೂ ಬೇರೆ ಬೇರೆ ಸನ್ನಿವೇಶ ಘಟನೆಗಳ ಮೂಲಕ ಬಿಂಬಿಸುತ್ತದೆ. ಇದೆ ಅಂತರಂಗ ಮತ್ತು ಬಹಿರಂಗ ಶುದ್ದಿ. ಇದು ಕುಂವೀಯವರ ಕಾದಂಬರಿ ‘ಲ್ಯಾಟರೀನಾ’ವನ್ನು ಒಂದು ಬಾರಿ ಓದಿ ನೆನಪಿಗೆ ಬಂದ ಕೆಲವು ತುಣುಕುಗಳು ಮಾತ್ರ.






0 Comments