ಕಾರ್ಪೊರೇಟ್ ಸಂಸ್ಕೃತಿಯ ಅತಿಕ್ರಮಣ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಗಳಿಗೆ  ನ್ಯೂಸ್ ಪೇಪರ್ ಸಾಫ್ಟ್ ವೇರನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ ಆಡಳಿತ ವರ್ಗ ತ್ವರಿತ ಗತಿಯಲ್ಲಿ ಆ ನಿಟ್ಟಿನಲ್ಲಿ ಕಾರ್ಯಮಗ್ನವಾಯಿತು.‌ ತಾಂತ್ರಿಕ ಸಿಬ್ಬಂದಿಯ ನೇಮಕದೊಂದಿಗೆ ಈ ಪ್ರಕ್ರಿಯೆ ಶುರುವಾಯಿತು. ಮುದ್ರಣ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಪ್ರೆಸ್ ಸೂಪರಿನ್‍ಟೆಂಡೆಂಟ್ ಜಾಗಕ್ಕೆ ಚೀಫ್ ಪ್ರೊಡಕ್ಷನ್ ಮ್ಯಾನೇಜರ್ ಬಂದರು. ಅವರ ಕೈಕೆಳಗೆ ಒಂದೊಂದು ಪಾಳಿಗೆ ಒಬ್ಬರಂತೆ ಮೂವರು ಪ್ರೊಡಕ್ಷನ್ ಮ್ಯಾನೇಜರುಗಳು ಬಂದರು.

ತಂತ್ರಾಂಶ ಅಭಿವೃದ್ಧಿ ಮೊದಲಾದ ಕೆಲಸಗಳನ್ನು ನೋಡಿಕೊಳ್ಳಲು ವಿದ್ಯುನ್ಮಾನ ವಿಭಾಗವನ್ನು ತೆರೆಯಲಾಯಿತು. ಈ ವಿಭಾಗಕ್ಕೆ ಒಬ್ಬರು ಚೀಫ್ ಮ್ಯಾನೇಜರ್ ಮತ್ತು ಅವರ ಕೈಕೆಳಗೆ ನಾಲ್ಕಾರು ಮಂದಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್  ಪದವೀಧರರು ಮ್ಯಾನೇಜರುಗಳಾಗಿ ಬಂದರು. ಸಿಬ್ಬಂದಿಗೆ ಕಂಪ್ಯೂಟರ್ ತರಬೇತಿ ಮತ್ತು ವಿದ್ಯುನ್ಮಾನ ವಿಭಾಗದ ಎಲ್ಲ ಕೆಲಸಗಳು ಇವರ ಹೊಣೆಯಾಯಿತು.

ಏಕ ಕಾಲದಲ್ಲಿ ಸಂಪಾದಕೀಯ ವಿಭಾಗದ ಜೊತೆಗೆ ಜಾಹೀರಾತು, ಪ್ರಸರಣ ಮತ್ತು ಅಕೌಂಟ್ಸ್ ಮತ್ತು ಎಚ್ ಆರ್ ವಿಭಾಗಗಳು ಕಂಪ್ಯೂಟರೀಕರಣಗೊಂಡವು. ಈ ವಿಭಾಗಗಳಿಗೂ ಜನರಲ್ ಮ್ಯಾನೇಜರ್, ಚೀಫ್ ಮ್ಯಾನೇಜರುಗಳ ನೇಮಕವಾಯಿತು. ಹೀಗೆ ಸಂಸ್ಥೆಯ ಎಲ್ಲ ವಿಭಾಗಗಳೂ ಸಂಪೂರ್ಣವಾಗಿ ನ್ಯೂಸ್ ಪೇಪರ್ ಸಾಫ್ಟ್ ವೇರನ್ನು ಅಳವಡಿಸಿಕೊಳ್ಳಲು ಸಜ್ಜಾದವು.

ಸಂಪಾದಕೀಯ ವಿಭಾಗವನ್ನು ಸಂಪೂರ್ಣವಾಗಿ ಹವಾ ನಿಯಂತ್ರಣಕ್ಕೊಳಪಡಿಸಲಾಯಿತು. ಹಳೆಯ ಕುರ್ಚಿ ಮೇಜುಗಳು ಹೋಗಿ ಅವುಗಳ ಜಾಗದಲ್ಲಿ ಕ್ಯೂಬಿಕಲ್ಸ್ ಮತ್ತು ಕಂಪ್ಯೂಟರ್ ಮೇಜುಗಳು ಬಂದವು. ಈ ಬದಲಾವಣೆಗಳಿಂದಾಗಿ ಸಂಪಾದಕೀಯ ವಿಭಾಗ ಕಾರ್ಪೊರೇಟ್ ಆಫೀಸಿನ ಕಳೆ ಪಡೆಯಿತು. ಕೈಗಳಲ್ಲಿ ಮೊಳೆ ಜೋಡಿಸುವುದು, ಸಾಲಚ್ಚು ಯಂತ್ರಗಳಲ್ಲಿ ಸುದ್ದಿ ಕಂಪೋಸ್ ಮಾಡುವುದು ಹೋಗಿ ಅವುಗಳ ಜಾಗಕ್ಕೆ ಡಿಟಿಪಿಗಳು ಬಂದವು. ಡಿಟಿಪಿಗಳು ಬಂದರೂ ಅವು ಸಾಪ್ತಾಹಿಕ ಪುರವಣಿ ಮತ್ತು ಸಂಪಾದಕೀಯ ಪುಟದ ಲೇಖನಗಳನ್ನು ಟೈಪ್ ಮಾಡಲು ಸೀಮಿತವಾಗಿತ್ತು.

ಕಂಪ್ಯೂಟರ್ ಟೈಪಿಂಗ್‍ನಲ್ಲಿ ತರಬೇತಿ ಪಡೆದಿದ್ದ ಉಪಸಂಪಾದಕರು ಮತ್ತು ವರದಿಗಾರರು ಲೇಖನಿ ಮತ್ತು ಕಾಗದಕ್ಕೆ ʼನಮಸ್ಕಾರ’ ಹೇಳಿ ಕಂಪ್ಯೂಟರಿನಲ್ಲೇ ತಮ್ಮ ವರದಿಗಳನ್ನು ಬರೆಯಬೇಕಿತ್ತು ಹಾಗೂ ಪಿಟಿಐ ಮತ್ತು ಯುಎನ್ ಐ ಸುದ್ದಿಗಳನ್ನು ಭಾಷಾಂತರ ಮಾಡಬೇಕಿತ್ತು. ಕಂಪ್ಯೂಟರುಗಳಿಗೆ ಸ್ಪ್ಲಿಟ್ ಸ್ಕ್ರೀನ್  ಸೌಲಭ್ಯ ಅಳವಡಿಸಿದ್ದರಿಂದ ಎಡಬದಿಯಲ್ಲಿ ಅವತರಿಸುತ್ತಿದ್ದ ಏಜೆನ್ಸಿಯ ಇಂಗ್ಲಿಷ್ ವರದಿಗಳನ್ನು ಬಲಬದಿಯ ಸ್ಕ್ರೀನ್ ಮೇಲೆ ಭಾಷಾಂತರ ಮಾಡುವ ಅನುಕೂಲವಿತ್ತು.

ಜಿಲ್ಲಾ ವರದಿಗಾರರು ಮೊಡೆಮ್ ಮೂಲಕ ಕಳುಹಿಸುತ್ತಿದ್ದ ವರದಿಗಳು ಗ್ರಾಮಾಂತರ ವಿಭಾಗದ ಸುದ್ದಿ ಮೇಜಿನ ಕಂಪ್ಯೂಟರ್ ಜಾಲಕ್ಕೆ ಬಂದಿಳಿಯುತ್ತಿದ್ದವು. ಹೀಗೆ ಬಂದ ಸುದ್ದಿಗಳನ್ನು ಕಂಪ್ಯೂಟರಿನಲ್ಲೇ ಪರಿಷ್ಕರಿಸಿ (ಎಡಿಟ್ ಮಾಡಿ) ಪ್ರಿಂಟರಿಗೆ ಕಳುಹಿಸಬೇಕಾಗಿತ್ತು. ಪೇಜಿನೇಷನ್ ತಂತ್ರಾಂಶ ಇನ್ನೂ ಸಿದ್ಧವಾಗಿರಲಿಲ್ಲವಾದ್ದರಿಂದ ಶುರುವಿಗೆ ʼಕಟ್  ಅಂಡ್ ಪೇಸ್ಟ್ʼ ಮೂಲಕ ಪುಟಗಳನ್ನು ಸಿದ್ಧಪಡಿಸುತ್ತಿದ್ದೆವು. ಕಂಪ್ಯೂಟರಿನಲ್ಲಿ ಪರಿಷ್ಕೃತವಾದ ಸುದ್ದಿಗಳನ್ನು/ಲೇಖನಗಳನ್ನು ಪ್ರಿಂಟರಿಗೆ ಕಳುಹಿಸಿ, ಅವುಗಳ ಔಟ್‍ಪುಟ್ ತೆಗೆದುಕೊಂಡು ಪುಟಗಳ ಗ್ರಿಡ್‍ಗಳಿಗೆ ‘ಕಟ್ ಅಂಡ್ ಪೇಸ್ಟ್’ ಮಾಡುತ್ತಿದ್ದೆವು.

ಫೋಟೋಗಳನ್ನು/ರೇಖಾ ಚಿತ್ರಗಳನ್ನು ಬ್ಲಾಕ್ ಮಾಡಿಸುವ ವ್ಯವಸ್ಥೆಯೂ ಹೋಗಿ ಅದರ ಜಾಗಕ್ಕೆ ಬ್ರೊಮೈಡ್ ಬಂತು. ಫೋಟೋ/ಚಿತ್ರದ ನೆಗೆಟಿವ್ ಅನ್ನು ಒಂದು ಯಂತ್ರಕ್ಕೆ ಕಳುಹಿಸಿದರೆ ಅದು ಕಪ್ಪು ಬಿಳುಪು ಚಿತ್ರದ ಬ್ರೊಮೈಡ್ ಔಟ್ ಪುಟ್ ಅನ್ನು ಕೊಡುತ್ತಿತ್ತು. ಈ ಬ್ರೊಮೈಡ್ ಗಳನ್ನು ಪುಟಗಳಿಗೆ ‘ಕಟ್ ಅಂಡ್ ಪೇಸ್ಟ್’ ಮಾಡುತ್ತಿದ್ದೆವು.

ಕಂಪ್ಯೂಟರೀಕರಣದ ಈ ಮೊದಲ ಹಂತ ನಮಗೆ ಸಾಕಷ್ಟು ಪಡಿಪಾಟಲುಗಳನ್ನು ತಂದೊಡ್ಡಿತು. ಮೊದಲನೆಯದಾಗಿ ನನ್ನಂಥ ವಯಸ್ಸಾದ ಹಳೆಯ ತಲೆಮಾರಿನವರಿಗೆ ಈ ಹೊಸ ವ್ಯವಸ್ಥೆಗಳಿಗೆ ಮಾನಸಿಕವಾಗಿ ಹೊಂದಿಕೊಳ್ಳುವುದೇ ಕಷ್ಟವಾಗಿತ್ತು. ಪೆನ್ನು, ಕಾಗದ ತ್ಯಜಿಸಿ ಕಂಪ್ಯೂಟರ್ ನಲ್ಲಿ ಬರೆಯುವುದು ಒಂದು ದೊಡ್ಡ ಶಿಕ್ಷೆಯಂತೆ ಭಾಸವಾಗುತ್ತಿತ್ತು. ಕೈ ಬರವಣಿಗೆಯ ‘ಸುಖ’ ಹೋಗಿ, ಪಿತ್ರಾರ್ಜಿತ ಆಸ್ತಿ ಕಳೆದುಕೊಂಡವರಂತೆ ಖಿನ್ನರಾದೆವು. ಪೆನ್ನು ಹಿಡಿದು ಬರೆಯುತ್ತಿದ್ದಾಗ ಬುದ್ಧಿ, ಮನಸ್ಸು ಮತ್ತು ಕೈಗಳ ನಡುವೆ ಇರುತ್ತಿದ್ದ ಸಾಮರಸ್ಯ ಕಂಪ್ಯೂಟರ್ ಬರವಣಿಗೆಯಲ್ಲಿ ಮಾಯವಾಗಿತ್ತು.

ಮನಸ್ಸಿನಲ್ಲಿ ಮೂಡಿದ ಸುದ್ದಿ/ವಿಚಾರಗಳನ್ನು ಕಂಪ್ಯೂಟರಿನಲ್ಲಿ ಮೂಡಿಸಲು ಇಂಗ್ಲಿಷ್ ಕೀಲಿಮಣೆಯಲ್ಲಿ ಕನ್ನಡ ಅಕ್ಷರಗಳಿಗಾಗಿ ತಡಕಾಡುತ್ತಿದ್ದಂತೆ ಮನಸ್ಸಿನಲ್ಲಿ ಮೂಡಿದ ಆಲೋಚನೆ, ಸುದ್ದಿಗಳ ಹರಿವು, ಲೇಖನದ ವಿಚಾರ ಲಹರಿ ನಿಂತು ಹೋಗುತ್ತಿತ್ತು. ಸೇವ್ ಮಾಡದ ಮೈಮರೆತದಿಂದ ಅಲ್ಲಿಯವರೆಗೆ ಬರೆದದ್ದು ಅಳಿಸಿ ಹೋಗಿರುತ್ತಿತ್ತು. ಅಲ್ಲಿಯವರೆಗೆ ಮಾಡಿದ ಸುದ್ದಿಗಳು ಬ್ಯಾಕಪ್‍ನಲ್ಲಿ ತಂತಾನೆ ‘ಸೇವ್’ ಆಗುವ ವ್ಯವಸ್ಥೆ ಇತ್ತು.

ಆದರೆ ಬ್ಯಾಕಪ್ ನಿಂದ ಕಾಪಿ ಮಾಡಿಕೊಳ್ಳುವ ಕಮಾಂಡುಗಳು ಮರೆತು ಹೋಗುತ್ತಿದ್ದವು. ಹೀಗಾಗಿ ಸಂಕಟ ಬಂದಾಗ ವೆಂಕಟರಮಣ ಎಂಬಂತೆ ನಿಮಿಷ ನಿಮಿಷಕ್ಕೂ ಎಂಜಿನಿಯರುಗಳ ಮೊರೆ ಹೋಗುವುದು ಅನಿವಾರ್ಯವಾಯಿತು. ಹೊಸತಲೆಮಾರಿನ ಪತ್ರಕರ್ತರು ಇದರಲ್ಲಿ ಹಳಬರಿಗಿಂತ ತುಂಬ ಚುರುಕಾಗಿದ್ದರು/ಚಾಲೂಕಾಗಿದ್ದರು. ಕಂಪ್ಯೂಟರಿನಲಿ ಕೆಲಸ ಮಾಡುವುದು ಅವರಿಗೆ ಬಲುಬೇಗ ಕರಗತವೂ ಆಯಿತು ಮನೋಗತವೂ ಆಯಿತು.

ಹೀಗೆ ಕೆಲವೊಮ್ಮೆ ಮಾನವ ತಪ್ಪುಗಳಿಂದಾಗಿ, ಇನ್ನು ಕೆಲವೊಮ್ಮೆ ತಂತ್ರಾಂಶ/ಯಂತ್ರಾಂಶಗಳ ತಪ್ಪುಗಳಿಂದಾಗಿ ಮೊತ್ತದ ಪರಿಣಾಮ ಎಡಿಷನ್ ಮೇಲೆ ಆಗುತ್ತಿತ್ತು. ʼಕಟ್ ಅಂಡ್ ಪೇಸ್ಟ್’ ಮಾಡಿ ಸಿದ್ಧಪಡಿಸಿದ ಪುಟಗಳನ್ನು ಕ್ಯಾಮೆರಾ ವಿಭಾಗಕ್ಕೆ ಕೊಡಬೇಕಾಗಿತ್ತು.ಇಲ್ಲಿಗೆ ಸಂಪಾದಕೀಯ ವಿಭಾಗದ ಹೊಣೆ ಮುಗಿಯುತ್ತಿತ್ತು.

ಕ್ಯಾಮೆರಾ ವಿಭಾಗದಲ್ಲಿ ನಾವು ಕೊಟ್ಟ ಸಿದ್ಧಪಡಿಸಿದ ಪೇಜುಗಳ ನೆಗೆಟಿವ್ ತೆಗೆದು ಪ್ಲೇಟ್ ಮೇಕಿಂಗ್ ವಿಭಾಗಕ್ಕೆ ಕಳುಹಿಸುತ್ತಿದ್ದರು. ಅಲ್ಲಿ ಪ್ಲೇಟ್ ಮಾಡಿ ಮುದ್ರಣ ವಿಭಾಗಕ್ಕೆ ಕಳುಹಿಸಲಾಗುತ್ತಿತ್ತು. ಕ್ಯಾಮೆರಾ ವಿಭಾಗಕ್ಕೆ ಪುಟಗಳನ್ನು ಕೊಡುವುದರೊಂದಿಗೆ ನಮ್ಮ ಹೊಣೆ ಮುಗಿಯಿತು ಎನ್ನುವಂತಿರಲಿಲ್ಲ. ಔಟ್ ಪುಟ್, ಫೋಟೊ ಬ್ರೊಮೈಡುಗಳು ಬರುವುದು ಸಾಮಾನ್ಯವಾಗಿ ತಡವಾಗುತ್ತಿತ್ತು. ಇದರಿಂದಾಗಿ ಪುಟಗಳನ್ನು ಸಿದ್ಧಪಡಿಸುವುದು ತಡವಾಗುತ್ತಿತ್ತು. ಹೀಗಾಗಿ ‘ಎಡಿಟೋರಿಯಲ್ ಡಿಲೇ” ಎಂದು ಎಲ್ಲ ವಿಭಾಗದವರೂ ತಮ್ಮ ವರದಿಗಳಲ್ಲಿ ಒಂದು ಟೀಕು ಬರೆಯುತ್ತಿದ್ದರು.

ಪ್ರತಿದಿನ ಮಧ್ಯಾಹ್ನ ಒಂದೂವರೆ-ಎರಡು ಗಂಟೆಗೆ ನಿರ್ದೇಶಕರುಗಳೊಂದಿಗೆ ಎಲ್ಲ ವಿಭಾಗದ ಮುಖ್ಯಸ್ಥರ ಡೇಲಿ ಮೀಟಿಂಗ್ ನಡೆಯುತ್ತಿತ್ತು. ಪತ್ರಿಕೆಯನ್ನು ಹೊರ ತರುವುದರಲ್ಲಿ ಹಿಂದಿನ ದಿನ ಎದುರಿಸಿದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಈ ಸಭೆಯ ಉದ್ದೇಶ.

ಸಭೆ ಶುರುವಾಗುತ್ತಿದ್ದುದೇ ‘ಎನಿ ಪ್ರಾಬ್ಲಂ?’ ಎನ್ನುವ ‘ಎಂಡಿ’ ಯವರ ಪ್ರಶ್ನೆಯಿಂದ. ಪ್ರಸರಣ ವಿಭಾಗದ ಜನರಲ್ ಮ್ಯಾನೇಜರ್ ಅವರು, “ಎಡಿಷನ್ ಡಿಲೇ ಸರ್… ನಗರದ ಏಜೆಂಟರುಗಳು ನಾಲ್ಕೈದು ಕಡೆ ಪೇಪರ್ ಬಂಡಲ್‍ಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ ಕಾರಣ ವಾಪಸು ಬಂದಿವೆ” ಎಂದು ವರದಿ ಒಪ್ಪಿಸುತ್ತಿದ್ದರು.

ಪತ್ರಿಕೆ ಸಕಾಲಕ್ಕೆ ವಿತರಣಾ ಕೇಂದ್ರಗಳನ್ನು ತಲುಪದಿದ್ದರೆ, ಪತ್ರಿಕೆ ಹಂಚುವ ಹುಡುಗರು ಕಾಯುವ ಸಹನೆ ತೋರದೆ ಹೊರಟು ಹೋಗುತ್ತಿದ್ದರು. ಹೀಗಾಗಿ ಏಜೆಂಟರುಗಳು ಪತ್ರಿಕೆಯ ಬಂಡಲ್‍ಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದರು. ಎಷ್ಟು ಬಂಡಲುಗಳು ವಾಪಸು ಬಂದವೋ ಅಂದು ಅಷ್ಟು ನಷ್ಟ.
“ವೈ ಡಿಲೇ?”
“ಎಡಿಟೋರಿಯಲ್ ಡಿಲೇ ಸರ್”

-ಎಂದು ಚೀಫ್ ಪ್ರೊಡಕ್ಷನ್ ಮ್ಯಾನೇಜರ್ ಅವರ ಉತ್ತರ ಸಿದ್ಧವಿರುತ್ತಿತ್ತು. ಈಗ, ‘ಹೋರಿ ಮೇಲೆ ಮಾರಿ ಕಣ್ಣುʼ ಎನ್ನುವ ಥರಾ ಎಲ್ಲರ ಕಣ್ಣೂ ಸಂಪಾದಕೀಯ ವಿಭಾಗದ ಮುಖ್ಯಸ್ಥನ ಮೇಲೆ. ನಾನು ಆಫೀಸಿಗೆ ಹೋದ ತಕ್ಷಣ, ಅಂದು ಎಡಿಷನ್ ಡಿಲೇ ಆಗಲು ಕಾರಣಗಳೇನು ಎಂದು ತಲೆಕೆಡಿಸಿಕೊಂಡು ಸಮಜಾಯಿಷಿ ಸಿದ್ಧಪಡಿಸಿಕೊಳ್ಳತ್ತಿದ್ದೆ. ಔಟ್ ಪುಟ್ ಡಿಲೇ, ಬ್ರೊಮೈಡ್ ಡಿಲೇ, ಪೇಸ್ಟಪ್ ಸಿಬ್ಬಂದಿಯ ಕೊರತೆ ಇತ್ಯಾದಿ.

ಪ್ರೊಡಕ್ಷನ್ ವಿಭಾಗದವರು ಇದೆಲ್ಲವನ್ನೂ ತಳ್ಳಿ ಹಾಕುತ್ತಿದ್ದರು. ಪ್ರೊಡಕ್ಷನ್ ವಿಭಾಗಗಳ ಮುಖ್ಯಸ್ಥರ ವರದಿಗಳಲ್ಲಿ ಇದಾವುದೂ ಇರುತ್ತಿರಲಿಲ್ಲ. ಎಡಿಟೋರಿಯಲ್ ಡಿಲೇ ಎನ್ನುವುದು ಮಾತ್ರ ಇರುತ್ತಿತ್ತು. ನಮ್ಮಿಂದ ಇದಾವ ತೊಂದರೆಯೂ ಆಗಿಲ್ಲ ಎಂದು ಚೀಫ್ ಪ್ರೊಡಕ್ಷನ್ ಮ್ಯಾನೇಜರ್ ಸಮರ್ಥಿಸಿಕೊಳ್ಳುತ್ತಿದ್ದರು. ಕೊನೆಗೆ ನಾನೇ ತಲೆ ಕೊಡಬೇಕಾಗುತ್ತಿತ್ತು.

ಪತ್ರಿಕಾ ವ್ಯವಸಾಯ ಸ್ವಾತಂತ್ರ್ಯಾನಂತರ ಭಾರಿ ಬಂಡವಾಳ ಬೇಡುವ ಉದ್ಯಮವಾಗಿ ಬೆಳೆದದ್ದು ಈಗ ಇತಿಹಾಸ. ವಿದ್ಯುನ್ಮಾನ ಕ್ಷೇತ್ರದಲ್ಲಿನ ಹೊಸಹೊಸ ತಂತ್ರಜ್ಞಾನಗಳನ್ನು, ವೃತ್ತಪತ್ರಿಕೆಗಳಿಗೆಂದೇ ರೂಪಿಸಲಾದ ತಂತ್ರಾಂಶವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅದು ದಾಪುಗಾಲು ಹಾಕಿ ನಡೆಯತೊಡಗಿದಾಗ ಅದರ ಸಾಂಸ್ಥಿಕ ಸ್ವರೂಪದಲ್ಲೂ ಬದಲಾವಣೆಗಳಾದವು.

ಸಂಪಾದಕೀಯ ವಿಭಾಗಕ್ಕೆ ಮತ್ತು ಮುದ್ರಣ ವಿಭಾಗಕ್ಕೆ ಪ್ರತ್ಯೇಕ ತಂತ್ರಾಂಶಗಳನ್ನು ರೂಪಿಸಲಾಗಿತ್ತು. ಅವುಗಳನ್ನು ಅಳವಡಿಸಿಕೊಳ್ಳಲು ಪತ್ರಿಕೆಗಳಿಗೆ ಎಲೆಕ್ಟ್ರಾನಿಕ್ಸ್ ಎಂಜಿನಿಯರುಗಳು,‌ ಮೆಕಾನಿಕಲ್ ಎಂಜಿನಿಯರುಗಳು ಮತ್ತು ಎಲೆಕ್ಟ್ರಿಕಲ್ ಎಂಜಿನಿಯರುಗಳ ಅಗತ್ಯ ಉಂಟಾಯಿತು. ಹೀಗೆ ನೇಮಕಗೊಂಡ ಎಂಜಿನಿಯರುಗಳಿಗೆ ಪತ್ರಿಕೆಯ ಉತ್ಪಾದನೆಯೂ ಬೋಲ್ಟುನೆಟ್ಟುಗಳಂತೆಯೇ ಒಂದು ಜಡ ಉತ್ಪನ್ನವಾಗಿ ಕಂಡದ್ದು ಒಂದು ‘ಸೃಜನಶೀಲ ದುರಂತವೇ’ ಸರಿ.

ಪತ್ರಿಕೆಗಳು ಸಜೀವ ಸಂವಹನ ತಂತು. ಪತ್ರಿಕೆಗಳಲ್ಲಿ ಜನರ ಹೃದಯ ಮಿಡಿಯುತ್ತದೆ, ದೇಶದ ಹೃದಯ ಮಿಡಿಯುತ್ತದೆ ಎನ್ನುವ ಪರಿಜ್ಞಾನ, ಸುದ್ದಿ ಜ್ಞಾನ, ಪತ್ರಿಕಾ ಪ್ರಪಂಚದ ಸಂವೇದನಾಶೀಲತೆ ಅವರಲ್ಲಿ ಕಂಡುಬರಲಿಲ್ಲ. ಜಾಹೀರಾತು ಹಾಗೂ ಪ್ರಸರಣ ವಿಭಾಗಗಳಿಗೆ ಹೊಸದಾಗಿ ಬಂದ ಎಂಬಿಎ ಪದವೀಧರ ಮ್ಯಾನೇಜರುಗಳೂ ಹಾಗೇ ಇದ್ದರು. ಈ ಪರಿಯ ಮ್ಯಾನೇಜರುಗಳ  ಅಸಂವೇದನಾಶೀಲತೆಯಿಂದಾಗಿ ಸಂಪಾದಕೀಯ ವಿಭಾಗಕ್ಕೆ ಬಹಳಷ್ಟು ಸಲ ಕಿರಿಕಿರಿ, ಮುಜುಗರಗಳು ಉಂಟಾಗುತ್ತಿದ್ದವು. ರಾತ್ರಿ 2 ಗಂಟೆಗೆ ಒಂದು ಅಲ್ಲೋಲ ಕಲ್ಲೋಲ ಸುದ್ದಿ ಬರುತ್ತದೆ. ಆ ವೇಳೆಗಾಗಲೇ ಸಿಟಿ ಎಡಿಷನ್ ಮುದ್ರಣ ಶುರುವಾಗಿರುತ್ತದೆ. ಮುಖ್ಯ   ಉಪಸಂಪಾದಕರು ಮುದ್ರಣ ವಿಭಾಗಕ್ಕೆ ಫೋನ್ ಮಾಡಿ ಲೇಟೆಸ್ಟ್ ಸುದ್ದಿ ತೆಗೆದುಕೊಳ್ಳಬೇಕಾಗಿರುವ ಕಾರಣ ಮುದ್ರಣ ನಿಲ್ಲಿಸುವಂತೆ (ಸ್ಟಾಪ್ ಪ್ರೆಸ್) ಹೇಳುತ್ತಾರೆ.

“ಇಲ್ಲ ಸಾರ್, ನಿಲ್ಲಿಸಲಿಕ್ಕೆ ಆಗಲ್ಲ. ಆ ಸುದ್ದಿ ನಾಳೆ ತೆಗೆದುಕೊಂಡರೆ ಆಗುವುದಿಲ್ಲವೆ?” ಎನ್ನುತ್ತಾರೆ ಮುದ್ರಣ ವಿಭಾಗದ ರಾತ್ರಿ ಪಾಳೆಯ ಪ್ರೊಡಕ್ಷನ್ ಮ್ಯಾನೇಜರ್. ಮುಖ್ಯ ಉಪಸಂಪಾದಕರು ನನಗೆ ಫೋನ್ ಮಾಡುತ್ತಾರೆ. ನಾನು ಚೀಫ್ ಪ್ರೊಡಕ್ಷನ್ ಮ್ಯಾನೇಜರ್ ಅವರಿಗೆ ಫೋನ್ ಮಾಡಿದಾಗ ಅವರಿಂದಲೂ “ನಾಳೆ ತೆಗೆದುಕೊಂಡರಾಗದೆ? ಎಡಿಷನ್ ಡಿಲೇ ಆಗುತ್ತೆ, ಪೇಪರ್ ಬಂಡಲ್‍ಗಳು ವಾಪಸು ಬರುತ್ತವೆ” ಎನ್ನುವ ಪ್ರತಿಕ್ರಿಯೆ ಬರುತ್ತದೆ. ನಾನು ಆ ಸುದ್ದಿ ತೆಗೆದುಕೊಳ್ಳಲೇ ಬೇಕಾದ ಅಗತ್ಯವನ್ನೂ ನಾವು ತೆಗೆದುಕೊಳ್ಳದೆ ಹೋದರೆ, ಪ್ರತಿಸ್ಪರ್ಧಿ ಪತ್ರಿಕೆಗಳು ತೆಗೆದುಕೊಳ್ಳುತ್ತವೆ, ಆಗ ನಮ್ಮ ಪತ್ರಿಕೆಯ ನಂಬಿಕೆ, ವಿಶ್ವಾಸಾರ್ಹತೆ, ಓದುಗರ ನಿರೀಕ್ಷೆಗಳಿಗೆ  ಧಕ್ಕೆಯಾಗುತ್ತದೆ ಎಂದೆಲ್ಲ ಹೇಳಿದ ಮೇಲೆ ‘ಸ್ಟಾಪ್ ಪ್ರೆಸ್’ಗೆ ಒಪ್ಪುತ್ತಾರೆ.

ಆಗಲೂ ತಕ್ಷಣ ಮುದ್ರಣ ನಿಲ್ಲಿಸುವುದಿಲ್ಲ. ಸಂಪಾಕೀಯ ವಿಭಾಗ ಪುಟದಲ್ಲಿ ಹೊಸ ಸುದ್ದಿ ಹಾಕಿ, ಪುಟದ ಪ್ಲೇಟ್ ಆಗಿ ಮುದ್ರಣ ವಿಭಾಗಕ್ಕೆ ಹೋದಾಗಲೇ ಯಂತ್ರ ನಿಲ್ಲುವುದು. ನಿಲ್ಲಿಸಿ ಹಳೇ ಪ್ಲೇಟ್ ತೆಗೆದು ಹೊಸ ಪ್ಲೇಟ್ ಹಾಕುತ್ತಾರೆ. ಅಂದರೆ ನಗರ ಮುದ್ರಣದಲ್ಲೂ ಕೆಲವು ಭಾಗಗಳಿಗೆ ಕೋಲಾಹಲಕಾರಿ ಸುದ್ದಿ ಹೋಗಿರುವುದಿಲ್ಲ. ಬಸವನಗುಡಿ ಓದುಗರಿಗೆ ಲಭಿಸಿದ ಲೇಟೆಸ್ಟ್ ಸುದ್ದಿ ರಾಜಾಜಿನಗರದ ಓದುಗರಿಗೆ ಲಭಿಸಿರುವುದಿಲ್ಲ. ಓದುಗರಿಂದ ಹೀಗೇಕೆ ಎಂದು ಬರುವ ಫೋನ್ ಕರೆಗಳಿಗೆ ಸಂಪಾದಕ ಉತ್ತರಿಸಬೇಕಾಗುತ್ತಿತ್ತು.

ಮೊದಲು ಹೀಗಿರಲಿಲ್ಲ. ‘ಸ್ಟಾಪ್ ಪ್ರೆಸ್ʼ ಎಂದಾಕ್ಷಣ ಸುದ್ದಿಯ ಗಹನತೆಗೆ ಮುದ್ರಣ ವಿಭಾಗದವರು ಸ್ಪಂದಿಸುತ್ತಿದ್ದರು. ‘ಸ್ಟಾಪ್ ಪ್ರೆಸ್’ ಆಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಆದ ವಿಳಂಬವನ್ನು ರವಾನೆಯಲ್ಲಿ ಸರಿದೂಗಿಸುತ್ತಿದ್ದರು. ಅಂದರೆ ಹಳಬರಿಗೆ ಪತ್ರಿಕಾಲಯದ ಪರಿಭಾಷೆ ಅರ್ಥವಾಗುತ್ತಿತ್ತು. ಇಂದಿನವರಿಗೆ ಅದರ ಜ್ಞಾನವಿರಲಿಲ್ಲ. ತಿಳಿದುಕೊಳ್ಳುವ ಆಸಕ್ತಿಯೂ ಇರಲಿಲ್ಲ. ಮರುದಿನ ಮೀಟಿಂಗ್ ನಲ್ಲಿ ಚೀಫ್ ಪ್ರೊಡಕ್ಷನ್ ಮ್ಯಾನೇಜರ್ “ಅದು ‘ಸ್ಟಾಪ್ ಪ್ರೆಸ್’ ಮಾಡುವಂಥ ಮಹತ್ವದ ಸುದ್ದಿಯಲ್ಲ” ಎಂದು ನಮ್ಮ ಕಾಲೆಳೆಯುತ್ತಿದ್ದರು. ಒಮ್ಮೊಮ್ಮೆ ಈ ಅಭಿಪ್ರಾಯವನ್ನು ನಿರ್ದೇಶಕರೂ ಅನುಮೋದಿಸಿದಾಗ ನನಗೆ ಕಟಕಟೆಯಲ್ಲಿ ನಿಂತ ಅನುಭವವಾಗುತ್ತಿತ್ತು.

ಜಿಲ್ಲಾ ವರದಿಗಾರರಿಗೆ ಕಂಪ್ಯೂಟರ್, ಮೋಡೆಮ್ ಮತ್ತು ಕ್ಯಾಮೆರಾಗಳನ್ನು ಕೊಡಲಾಗಿತ್ತು. ವರದಿಗಾರರು ಜಿಲ್ಲೆಯ ಪ್ರಮುಖ ಸಭೆ ಸಮಾರಂಭಗಳ ವರದಿ ಜೊತೆಗೆ ಚಿತ್ರವನ್ನು ಕಳುಹಿಸಿ ಕೊಡತಕ್ಕದ್ದೆಂದು ನಾನು ಕಡ್ಡಾಯ ಮಾಡಿದ್ದೆ. ಎಲ್ಲ ವರದಿಗಾರರೂ ಛಾಯಾಗ್ರಹಣದಲ್ಲಿ ನುರಿತವರಾಗಿರಲಿಲ್ಲ. ಆದ್ದರಿಂದ ಅವರು ಕಳಹಿಸುತ್ತಿದ್ದ ಚಿತ್ರಗಳ ಗುಣಮಟ್ಟ ‘A-1’ ಎನ್ನುವಂತಿರುತ್ತಿರಲಿಲ್ಲ. ಆದರೆ ತೀರ ಕಳಪೆ ಚಿತ್ರಗಳೂ ಆಗಿರುತ್ತಿರಲಿಲ್ಲ. ಇಂಥ ಚಿತ್ರಗಳನ್ನು ಬ್ರೊಮೈಡ್‍ ಮಾಡಲು ಕಳುಹಿಸಿದಾಗ ಚಿತ್ರ ಚೆನ್ನಾಗಿಲ್ಲವೆಂದು ಆ ವಿಭಾಗದವರು ಚಿತ್ರವನ್ನು ತಿರಸ್ಕರಿಸುತ್ತಿದ್ದರು. ಮತ್ತೆ ನಾನು ಪ್ರೊಡಕ್ಷನ್ ಮ್ಯಾನೇಜರಿಗೆ ಫೋನ್ ಮಾಡಿ ಆ ಜಿಲ್ಲೆಯ ಎಡಿಷನ್ ಗೆ ಚಿತ್ರ ಹೊಗಲೇಬೇಕಾದ ಅಗತ್ಯವನ್ನು ವಿವರಿಸಬೇಕಾಗಿ ಬರುತ್ತಿತ್ತು.

ಹೀಗೆ ಸುದ್ದಿ ಮತ್ತು ಸುದ್ದಿ ಚಿತ್ರಗಳ ಮಹತ್ವ ಕುರಿತು ಕಿರಿಕಿರಿ ಆಗುತ್ತಲೇ ಇರುತ್ತಿತ್ತು. ಕೋಣನ ಮುಂದೆ ಕಿಂದರಿ ಬಾರಿಸುವ ಕೆಲಸವನ್ನು ಮಾಡಬೇಕಾದಾಗ ನನಗಂತೂ ಕಿರಕಿರಿಯ ಜೊತೆಗೆ ಕೋಪವೂ ಬರುತ್ತಿತ್ತು. ಸಂಪಾದಕೀಯ ವಿಭಾಗ ಎಷ್ಟೇ ಮುತುವರ್ಜಿ ವಹಿಸಿ ಕೆಲಸ ಮಾಡಿ ಪತ್ರಿಕೆಯನ್ನು ‘ನಂಬರ್ 1’ ಸ್ಥಾನಕ್ಕೆ ತಂದರೂ ಮಧ್ಯಾಹ್ನದ ಸಭೆಯಲ್ಲಿ ಅವರ ಶ್ರಮ ಗೌಣವಾಗುತ್ತಿತ್ತು. ಉಳಿದ ವಿಭಾಗದವರು ಒಂದಲ್ಲ ಒಂದು ಕೊರೆ ತೆಗೆದು ಸಂಪಾದಕೀಯ ವಿಭಾಗದ ಮೇಲೆ ಗೂಬೆ ಕೂರಿಸುತ್ತಿದ್ದರು. ಹೀಗೆ ಪತ್ರಿಕೆಯ ಸಂಪಾದಕೀಯ ವಿಭಾಗದ ಮಹತ್ವದಲ್ಲಿ ಪಲ್ಲಟವಾಯಿತು. ಸಂಪಾದಕೀಯ ವಿಭಾಗದ ಗೌರವ ಮರ್ಯಾದೆಗಳು ಶಿಥಿಲಗೊಂಡವು. ತಂತ್ರಾಂಶ ಮತ್ತು ಮ್ಯಾನೇಜರುಗಳು ಮೇಲುಗೈ ಪಡೆಯಲಾರಂಭಿಸಿದರು.

ಮೊದಲೆಲ್ಲ ಪತ್ರಿಕೆಯೊಂದರಲಿ ಅತಿ ಹೆಚ್ಚು ವೇತನ ಪಡೆಯುತ್ತಿದ್ದವನೆಂದರೆ, ಅವನು ಸಂಪಾದಕ ಮಹಾಶಯ. ಈಗ ಸಂಪಾದಕ ಮಹಾಶಯ ಆ ಸ್ಥಾನದಿಂದ ಪದಚ್ಯುತನಾಗಿದ್ದ. ಈಗೆ ಅತಿಹೆಚ್ಚು ವೇತನ ಪಡೆಯುತ್ತಿದ್ದವರು ಚೀಫ್ ಜನರಲ್ ಮ್ಯಾನೇಜರ್ ಮತ್ತು ಜಾಹೀರಾತು ವಿಭಾಗದ ಜನರಲ್ ಮ್ಯಾನೇಜರು. ಜಾಹೀರಾತು ಮ್ಯಾನೇಜರಿಗೆ ವರಮಾನ ತರುವವನು ಎನ್ನುವ ಕೋಡು ಬೇರೆ. ಮ್ಯಾನೇಜರಿಗಳಿಗಾಗಿಯೇ ಪ್ರತ್ಯೇಕ ವೇತನಶ್ರೇಣಿ ಇತ್ತು. ನಮಗೆ ವೇತನ ಮಂಡಳಿಯ ಶಿಫಾರಸಿನಂತೆ ವೇತನ. ಹೀಗಾಗಿ ಮ್ಯಾನೇಜರುಗಳಿಗೆ ಸಂಪಾದಕೀಯ ವಿಭಾಗದವರಿಗಿಂತ ಹೆಚ್ಚಿನ ವೇತನ ಬರುತ್ತಿತ್ತು. ಇದರಿಂದಾಗಿ ಅವರಲ್ಲಿ ತಾವು ಸಂಪಾದಕೀಯ ವಿಭಾಗದವರಿಗಿಂತ ಮೇಲಿನವರು, ʼಬಾಸ್‍ಗಿರಿ’ ಮಾಡಬಹುದು ಎನ್ನುವ ಮೇಲರಿಮೆ ಬೆಳೆದಿತ್ತು. ಈ ಎಲ್ಲ ಕಾರಣಗಳಿಂದಾಗಿ ಸಂಪಾದಕೀಯ ವಿಭಾಗದ ಮಹತ್ವ ದಿನೇದಿನೇ ಕುಸಿಯತೊಡಗಿತು.

ಒಮ್ಮೆಯಂತೂ ಮಧ್ಯರಾತ್ರಿ ಎರಡು ಗಂಟೆಯಲ್ಲಿ ದೀಪಾವಳಿ ಸಂಚಿಕೆಯ ಮುವತ್ತೆರಡು ಪುಟಗಳ ಪ್ರೂಫನ್ನು ನನ್ನ ಮನೆಗೆ ಕಳುಹಿಸಿ ಅದನ್ನು ಆ ಕೂಡಲೇ ನೋಡಿಕೊಡುವಂತೆ ಪ್ರೊಡಕ್ಷನ್ ಮ್ಯಾನೇಜರು ಫೋನಿನಲ್ಲಿ ಹೇಳಿದರು. ರಾತ್ರಿ ಅವೇಳೆಯಲ್ಲಿ, ವಿದ್ಯುತ್ ದೀಪದ ಬೆಳಕಿನಲ್ಲಿ ಪ್ರೂಫ್ ನೋಡುವುದು ಹೇಗೆ ಸಾಧ್ಯ? ಆಗುವುದಿಲ್ಲ ಎಂದು ಹೇಳಿದೆ.

“ನಾನು ಪ್ರೊಡಕ್ಷನ್ ಮ್ಯಾನೇಜರ್  ಹೇಳ್ತಿದೀನಿ ನೀವು ನೋಡಿ ಕೊಡಬೇಕು. ಇಲ್ಲವಾದರೆ ನೀವು ನೋಡಿ ‘ಓ ಕೆ’ ಮಾಡಿದ್ದೀರಿ ಎಂದು ಭಾವಿಸಿ ಪ್ರಿಂಟ್ ಮಾಡಲು ಹೇಳುತ್ತೇನೆ” ಎಂದು ಆಜ್ಞೆ ಮಾಡುವ ಧಿಮಾಕಿನಲ್ಲಿ ಹೇಳಿದರು. ನಾನು ಸಾಧ್ಯವಿಲ್ಲ, ಬೆಳಗ್ಗೆ ನೋಡುತ್ತೇನೆ ಎಂದು ವಾಪಸು ಕಳುಹಿಸಿದೆ. ಮಾರನೇ ದಿನ ಮಧ್ಯಾಹ್ನದ ಸಭೆಗೆ ಹೋದಾಗ ಪ್ರೊಡಕ್ಷನ್ ಮ್ಯಾನೇಜರ್ ನನ್ನ ವಿರುದ್ಧ ಮೂರು ಪುಟಗಳ ದೂರು ಕೊಟ್ಟಿದ್ದರು. ಸಂಪಾದಕೀಯ ವಿಭಾಗದ ಅಸಹಕಾರದಿಂದಾಗಿ ಈ ವರ್ಷ ದೀಪಾವಳಿ ಸಂಚಿಕೆಯನ್ನು ಸಕಾಲದಲ್ಲಿ ತರಲಾಗದು ಎಂದೂ ಹೇಳಿದ್ದರು.

ಅದೃಷ್ಟವಶಾತ್ ಪ್ರಧಾನ ಸಂಪಾದಕರೂ ಆಗಿದ್ದ ಶ್ರೀ ಹರಿಕುಮಾರ್ ಅವರಿಗೆ ಪತ್ರಿಕಾವೃತ್ತಿಯ ಸಂವೇದನೆ ಮತ್ತು ಕರಡು ತಿದ್ದುವ ಸೂಕ್ಷ್ಮತೆಗಳು ತಿಳಿದಿದ್ದರಿಂದ ನಾನು ಬಚಾವ್ ಆದೆ. ರಾತ್ರಿ ಆ ವೇಳೆಯಲ್ಲಿ  ಪ್ರೂಫ್ ನೋಡುವಂತೆ ನಿರೀಕ್ಷಿಸುವುದು ಅಮಾನುಷ. ಆ ಹೊತ್ತಿನಲ್ಲಿ ಪ್ರೂಫ್‍ಗೆ ಏನು ನ್ಯಾಯ ಒದಗಿಸಲಾದೀತು. ಇನ್ನು ಮೇಲೆ ವಿಶೇಷ ಸಂಚಿಕೆಯ ಪ್ರೂಫುಗಳನ್ನು ಬೆಳಗಿನ ಹೊತ್ತಿನಲ್ಲೇ ಕೊಡಬೇಕು. ಇದು ಸಂಪಾದಕೀಯ ವಿಭಾಗದಿಂದ ಆಗಿರುವ ವಿಳಂಬವಲ್ಲ. ಆದ್ದರಿಂದ ಸಂಚಿಕೆ ಸಕಾಲದಲ್ಲಿ ಬರುವಂತೆ ನೋಡಿಕೊಳ್ಳುವುದು ಪ್ರೊಡಕ್ಷನ್ ವಿಭಾಗದ ಜವಾಬ್ದಾರಿ ಎಂದು ತೀರ್ಪು ಕೊಟ್ಟರು.

ಕಂಪ್ಯೂಟರೀಕರಣದಿಂದ ಸಿಬ್ಬಂದಿ ಸಮಸ್ಯೆಯೊಂದು ತಲೆದೂರಿತು. ಕಂಪ್ಯೂಟರೀಕರಣದಿಂದಾಗಿ ಕೆಲವು ಹುದ್ದೆಗಳು ಅನವಶ್ಯಕವಾದವು. ಕಂಪ್ಯೂಟರಿನಲ್ಲಿ ಬರೆಯುವಾಗ ಉಪಸಂಪಾದಕನಾಗಲೀ, ವರದಿಗಾರನಾಗಲೀ ತಪ್ಪಿಲ್ಲದೆ ಬರೆಯುತ್ತಾನೆ ಎಂದು ನಿರೀಕ್ಷಿಸಲಾಗುತ್ತದೆ. ತಪ್ಪಿದ್ದರೂ ಅದನ್ನು ಪುನರ್ ಪರಿಷ್ಕರಿಸುವಾಗ ತಪ್ಪನ್ನು ಅವನೇ ತಿದ್ದಬೇಕು. ಹೀಗಾಗಿ ಪ್ರೂಫ್ ರೀಡರುಗಳು ಬೇಕಾಗಿಲ್ಲ ಎನ್ನುವ ನಿರ್ಧಾರಕ್ಕೆ ಬರಲಾಯಿತು. ಅದೇ ರೀತಿ ಸಂಪಾದಕೀಯ ವಿಭಾಗದವರೇ ಕಂಪ್ಯೂಟರಿನಲ್ಲಿ ಬರೆಯುವ ಕಾರಣ ಡಿಟಿಪಿ ಆಪರೇಟರುಗಳು ಅನವಶ್ಯಕವಾದರು. ಇವರೆಲ್ಲರಿಗೂ ಸ್ವಯಂ ನಿವೃತ್ತಿ ಯೋಜನೆ ಸಲಹೆ ಮಾಡಲಾಯಿತು. ಆದರೆ ಅದನ್ನು ಯಾರೂ ಒಪ್ಪಿಕೊಳ್ಳಲಿಲ್ಲ.

ಲೆಕ್ಕಪತ್ರ ವಿಭಾಗ, ಜಾಹೀರಾತು/ಪ್ರಸರಣ ವಿಭಾಗ, ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಅವರಿಗೆ ಜಾಗ ತೋರಿಸಲಾಯಿತು. ಪ್ರೂಫ್ ರೀಡರುಗಳು ತಮಗೆ ಉಪಸಂಪಾದಕ/ವರದಿಗಾರರ ಹುದ್ದೆಗಳಿಗೆ ಬಡ್ತಿ ನೀಡಿ ಸಂಪಾದಕೀಯ ವಿಭಾಗದಲ್ಲೇ ಮುದುವರಿಸಬೇಕೆಂಬ ಬೇಡಿಕೆ ಮುಂದಿಟ್ಟರು. ಅವರುಗಳನ್ನೆಲ್ಲ ವರದಿಗಾರರನ್ನಾಗಿ ಜಿಲ್ಲೆಗಳಿಗೆ ಕಳುಹಿಸಲು ನಿರ್ಧರಿಸಲಾಯಿತು.

‘ಪ್ರವಾ’ ಆಗಷ್ಟೇ ಜಿಲ್ಲಾ ಆವೃತ್ತಿಗಳನ್ನು ಪ್ರಾರಂಭಿಸಿದ್ದರಿಂದ ಜಿಲ್ಲಾ ಮಟ್ಟದಲ್ಲಿ ವರದಿಗಾರಿಕೆಯನ್ನು ಬಲಪಡಿಸುವ ಅಗತ್ಯವೂ ತಲೆದೋರಿತ್ತು. ಹೀಗೆ ಕರಡು ತಿದ್ದುವವರೆಲ್ಲರನ್ನೂ ಜಿಲ್ಲಾ ವರದಿಗಾರರನ್ನಾಗಿ ನೇಮಿಸಲಾಯಿತು. ಈ ಪುನರ್ ನೇಮಕಗಳಿಂದ, ದಿ ಪ್ರಿಂಟರ್ಸ್ ಮೈಸೂರು ಆಡಳಿತ ವರ್ಗ ಹೆಚ್ಚುವರಿ ಸಿಬ್ಬಂದಿಯನ್ನು ಮನೆಗೆ ಕಳುಹಿಸದೆ ಮಾನವೀಯತೆ ಮೆರೆಸಿತು.

January 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: