ಕಾಯ್ಕಿಣಿ ಪಾರ್ಲರ್ ನಲ್ಲಿ ಮೇಕ್ ಅಪ್

ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು.  ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು.

ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿ ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು.

ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು.

kaikini

ನಿಮಗೂ ಇಷ್ಟವಾದರೆ ಅಥವಾ ನಿಮ್ಮ ಮನದೊಳಗೆ ಈ ಲಹರಿ ಇನ್ನೂ ಬೆಳೆದರೆ ನಮಗೆ ಕಳಿಸಿಕೊಡಿ ಎಂದು ಕೇಳಿದ್ದೆವು ..

ಹಾಗೆ ಮುಂದುವರೆದ ಎರಡು ಲಹರಿಗಳು ಇಲ್ಲಿವೆ. ಅದಕ್ಕೆ ಎಸ್ ಪಿ ವಿಜಯಲಕ್ಷ್ಮಿ ತಮ್ಮದೊಂದು ಹೂ ಸೇರಿಸಿದರು

ನಂತರದ ಸರದಿ ಚೈತ್ರಾ ಅವರದ್ದು. ತಮ್ಮ ಹುಬ್ಬುಗಳ ಲೋಕವನ್ನು ಅವರು ಹಿಡಿದಿಟ್ಟರು.

ರೇಷ್ಮಾ ನಾರಾಯಣ ಉಪ್ಪುಂದ ಈ ಲಹರಿಯನ್ನು ಮುಂದುವರಿಸಿದರು. ಕರ್ಚೀಫಿನ ಮೂಲಕ

ಪಾರ್ಲರ್ ನಲ್ಲಿ ಇದುವರೆಗೆ ಇಣುಕಿದ್ದು ಹೆಣ್ಣು ಮಕ್ಕಳು ಮಾತ್ರ ಆದರೆ ಮೊದಲ ಬಾರಿಗೆ ಪುರುಷನೊಬ್ಬರು ರಂಗಪ್ರವೇಶ ಮಾಡಿದರು. ವೀರೇಶಕುಮಾರ ಬೆಟಗೇರಿ ಪಾರ್ಲರ್ ಹೊಕ್ಕರು.     

ಸ್ಫೂರ್ತಿ ಗಿರೀಶ್ ಪಾರ್ಲರ್ ಹೊಕ್ಕ ನಂತರ ಈಗ ರವಿ ಕುಲಕರ್ಣಿಎಂಟ್ರಿ ಕೊಟ್ಟರು. 

ಅಂಗೋಲಾದಿಂದ, ಅಂಕೋಲಾ ಅಲ್ಲ- ಪ್ರಸಾದ್ ಕೆ ಪಾರ್ಲರ್ ನೊಳಗೆ ಹೆಜ್ಜೆ ಹಾಕಿದರು

ಈಗ ಶ್ರೀಕಾಂತ್ ಪ್ರಭು ಕಥೆಯನ್ನು ಇನ್ನೊಂದು ದಿಕ್ಕಿಗೆ ಒಯ್ದಿದ್ದಾರೆ   

jayanth kaikini vachike

ನಿಮ್ಮ ಮನದಾಳದೊಳಗೂ ನವಿರಾದ ಭಾವಗಳಿದ್ದರೆ ತಡ ಯಾಕೆ?

ನೀವೂ ಬರೆದು ಕಳಿಸಿ

shrikant selfyಶ್ರೀಕಾಂತ್ ಪ್ರಭು 

‘ಹಿಂಗೇ ಇದಾನೇನೇ ನಿನ್ನ ಬಾಲ್ಡೀ..’ ಅಂತಾ ಫೋಟೋ ಮೂತಿಗೆ ತಿವಿಯುವಂತೆ ಹಿಡಿದು ತೋರಿಸ್ತಾ, ನಿಂತು ನಿಂತು ಬರೋ ನಲ್ಲಿ ನೀರಿನ ಹಾಗೆ ಭಸ ಭಸ ನಗ್ತಾಳೆ.

ಫೋಟೋ ನೋಡಿದ್ರೆ ಎತ್ತಣ ಮಾಮ ಎತ್ತೆತ್ತಣ ಕೋಗಿಲೆ ಅನ್ನೋಣ ಅನ್ನಿಸುತ್ತೆ. ಏನಾದರೋ ಬಾಯಿ ಬಿಟ್ಟೆನೋ ಕೆಟ್ಟೆ. ಎಲ್ಲರಿಗೋ ಮತ್ತೆ ಮತ್ತೆ ಹೇಳ್ಕೊಂಡು ಜೋರಾಗಿ ನಗೋಕೆ ಶುರು ಮಾಡ್ತಾಳೆ. ಬೇರೆಯವರೂ ನಗೋ ನಾಟಕ ಮಾಡಿದ್ರೂ ಎಲ್ಲರಿಗೂ ಗೊತ್ತು ಅವಳು ತೋರಿಸೋ ಫಾರಿನ್ ಫೋಟೊ ಲಕ ಲಕ ಅಂತ ಹೊಳಿಯೋ ಅಂಗೈ ಅರಮನೆ ಅಂತ.

make-up-kitದಿನ ನಿತ್ಯದ ನಮ್ಮ ನಮ್ಮ ಮುದ್ದು ಮೊದ್ದುಗಳ ಗುಟ್ಟು ನಮಗೇ ಗೊತ್ತು. ಅದು ನಮ್ಮ ಗುಪ್ತ ನಿಧಿ. ಹಾಗೆಲ್ಲ ತಮಾಶೆ ಮಾಡಿ ನಗೋಕಾಗುತ್ತಾ ? ಅದೂ ಈ ಹರಕಲು ಬಾಯಿಯವಳ ಹತ್ತಿರ ? ನಿಜ ಜೀವನದಲ್ಲಿ ಹಾಗಿರಲು ಸಾಧ್ಯವೇ ಇಲ್ಲ ಅನ್ನುವ ಸಂಶಯವಂತೂ ಇದ್ದೇ ಇರತ್ತೆ. ಒಂದು ವೇಳೆ ಅದು ನಿಜವೇ ಆಗಿದ್ದರೆ ? ಅಯ್ಯೋ ರಾಮಾ !! ಕೆಮೆರಾ ಟ್ರಿಕ್ ಮಾಡಿ ಇಲಿಯನ್ನ ಹುಲಿ ಮಾಡಿ ತೋರಿಸ್ತಾರೆ ಅನ್ನುತ್ತ ಎಲ್ಲರಿಗೂ ಗೊತ್ತಿರೋ ಗುಟ್ಟಿನಲ್ಲಿ ಪಾಲ್ಗೊಳ್ಳುವ ಹಾಗೆ ಗೊಳ್ಳನೇ ನಗತೀವಿ. ಯೋಚನೆ ಮಾಡಿದರೆ ಭಯ ಆಗುತ್ತೆ ಇವಳು ಮಾಡೋ ಕೆಲಸಕ್ಕೆ. ಹುಬ್ಬು ಟ್ರಿಮ್ ಮಾಡ್ತಾ ಅವಳಾಡುವ ಖುಶಿ ಕೊಡೋ ಮಸಾಲೆ ಮಾತುಗಳು ಗರಂ ಆಗಿರುತ್ತವೆ ನಿಜ. ಆದರೆ ನಾಳೆ ಸತ್ಯನಾರಾಯಣನ ಪೂಜೆಗೆ ಬರೋ ಈ ತ್ರಿಪುರಸುಂದರಿಯರೆಲ್ಲ ಬೇಕಂತಲೇ ಮುಗಿ ಬಿದ್ದು “ಮಾಮಾ ಸ್ವಲ್ಪ ತುಪ್ಪ ಬಡಿಸಲಾ ? ಉಪ್ಪಿನಕಾಯಿ ? ಅಂತೆಲ್ಲ ನಗು ತಡೀತಾ ಬಡಿಸುವಾಗ “ಇವರು”, ಏನಿವತ್ತು ? ಎಲ್ಲಾ ನನ್ನ, ಭಾಳ ವಿಚಾರಿಸ್ಕೋತಿದಾರೆ ಅಂತ ಖುಷಿ ಪಟ್ಟುಕೊಳ್ಳಬಹುದು. ಆದರೆ, ನಿಜ ಗೊತ್ತಾದರೆ ನನ್ನ ಕಥೆ ಅಷ್ಟೆ.!!

ಕೆಲವು ಸಾರಿ “ಇಬ್ಬರೂ ಜೊತೆಯಾಗಿ ನೋಡಿ” ಅಂತ ಆದೇಶ ಹೊರಡಿಸಿ ಕ್ಲಿಪ್ ಕಳಿಸಿಬಿಡ್ತಾಳೆ. ಹಾಗೆಲ್ಲ ಮಾಡೊಕಾಗುತ್ತಾ ? ಇವರು ಅದನ್ನು ನೋಡಿ ಸರಿಯಾಗಿ ರಿಯಾಕ್ಟ್ ಮಾಡಿದ್ರೆ ಸರಿ. ಇಲ್ಲಾಂದ್ರೆ ಈ ದಿನ ನಿತ್ಯದ ಸೆಣೆಸಾಟ, ಕಿವಿ ರಿಂಗುಡಿಸೋ ಭಣ ಭಣದ ನಡುವೆ ಇವರಿಗೆ ಸಂಶಯದ ಕಿಡಿ ಹಚ್ಚಿ ಬಿಟ್ಟರೆ ನನ್ನ ಕಥೆ ಮುಗೀತು. ಬೇಡವೇ ಅಂದರೂ ಕೇಳದೇ ಎಲ್ಲರಿಗೂ ವಾಟ್ಸಾಪ್ ನಲ್ಲಿ “ಸಕ್ರಿಯ” ವಿಡಿಯೋ ಕಳಿಸಿಬಿಡ್ತಾಳೆ. ನಿಮ್ಮ ಬಾಳೂ ಹೀಗೇನೇ ಸಕ್ಕರೆ ತುಪ್ಪ ಆಗಿರಲಿ ಅಂತ ಅಡಿ ಟಿಪ್ಪಣಿ ಬೇರೆ. ಕ್ಲಿಪ್ ಗಳನ್ನ ಒಂದೆರಡು ಸಾರಿ ನೋಡಿ ನನ್ನ ಗ್ರೂಪನ ಕೆಲವು ಆತ್ಮೀಯರಿಗೆ ಗುಟ್ಟಾಗಿ ಕಳಿಸಿ ಡಿಲಿಟ್ ಮಾಡಿ ಬಿಡತೇನೆ. ಒಂದೆರಡು ದಿನ ಖುಶಿ ಖುಶಿಯಾಗಿರತೇನೆ. ಮತ್ತೆ ನಿಜಕ್ಕೆ ಮರಳಲೇ ಬೇಕು.

ನಾನು ಪಾರ್ಲರ್ ಗೆ ಹೋಗಿ ಬಂದ ಒಂದೆರಡು ದಿನ ಇವರೂ ಗೆಲುವಾಗಿರತಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ರೈತ ಬೋರ್ ವೆಲ್ ನಲ್ಲಿ ಅಕಸ್ಮಾತ್ ನೀರು ಜಿನುಗುವುದನ್ನು ನೋಡಿ ತನ್ನ ಇರಾದೆಯನ್ನು ಒಂದೆರಡು ದಿನದ ಮಟ್ಟಿಗೆ ಪೋಸ್ಟ್ ಪೋನ್ ಮಾಡಿದ ಹಾಗೆ ಕೆಲ ದಿನಗಳ ಮಟ್ಟಿಗಾದರೂ ಹಸಿ ಹಸಿ ತಂಪು ಉಸಿರು ಎಳೆದುಕೊಳ್ಳುತ್ತೇವೆ.

ಆಟೋ ಮಾಡಿಕೊಂಡು ಮನೆ ತಲುಪಿದಾಗ ಇವರು ಮನೆ ಬಾಗಿಲಲ್ಲಿ ಕಾಯ್ತಿದಾರೆ. “ಏನು ಇವತ್ತು ಸೊಮಾರಿಕಟ್ಟೆ ಇರಲಿಲ್ಲವೋ ? ಬೀಗದ ಕೈ ತೆಗೆದುಕೊಂಡು ಹೋಗಿ ಅಂತ ಹೇಳಿದರೆ ಕೇಳ್ಬೇಕಲ್ಲ ನೀವು” ಅನ್ನುತ್ತ ಒಳನಡೆದರೆ. “ತುಂಬಾ ಚನ್ನಾಗಿ ತಿದ್ದಿ ಕಳ್ಸಿದಾರೆ, ಅಂದ ಹಾಗೆ ಯಾರೇ ಈ ಊರ್ವಶಿ ?” ಅದು “ಅವಳ” ಕೋಡ್ ನೇಮ್ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ. ಅಯ್ಯೋ ನನ್ನ ಫೋನ್ !! “ಅವಳು ನಮ್ಮ ಬ್ಯೂಟಿ ಪಾರ್ಲರಿನ ಓನರ್ ಅಂದೆ. ನಿಜವಾದ ಹೆಸರಾ…. ಅಂತ ಹಿಡಿದಿಡಿದು ತಡವರಿಸುವ ಹಾಗೆ ಕೇಳಿದ್ರು. ” ಫೋನ್ ನೋಡಿದಾರೆ ಅಂತ ಖಾತ್ರಿ ಆಯಿತು. ನನ್ನ ಅಪಾಯಿಂಟ್ ಮೆಂಟ್ ಇದ್ದ ದಿನ ಬೆಳಿಗ್ಗೆ ಕ್ಲಿಪ್ ಕಳಿಸೋದು ಅವಳು ಮಾಡೋ ಕೀಟಲೆ. ನಂತರ ಅದರ ಬಗ್ಗೆ ಸವಿಸ್ತಾರ ಕಾಮೆಂಟರಿ ಮಾಡ್ತಾ ಕೆಲಸ ಮಾಡೊದು ಅವಳ ವೈಖರಿ. ಈ ಸಾರಿ ಡಿಲಿಟ್ ಮಾಡೋಕೆ ಸ್ವಲ್ಪ ಉದಾಸೀನ ಮಾಡಿದ್ದೆ. ವಯಸ್ಸಾಯ್ತು, ಮನೆಯಲ್ಲಿ ಇರೋದೆ ನಾವಿಬ್ಬರು ನೋಡಿದರೂ ನೊಡಿಕೊಳ್ಳಲಿ ಏನೀಗಾ ?

bride-moonಈ ವೃತ್ತಾಂತವನ್ನ ಇಲ್ಲಿಗೇ ಮುಗಿಸಬೇಕು ಅಂದುಕೊಂಡಾಗ ನನಗೆ ಕೆಲವು ಬೇರೆ ಬೇರೆ ರೀತಿಯ ಮುಕ್ತಾಯಗಳು ಹೊಳೆದವು. ಉದಾಹರಣೆಗೆ….

1 ಅವಳ ಹೆಸರು ಕಟ್ಟಿಕೊಂಡು ನಮಗೇನಾಗಬೇಕಿದೆ ?
“ಅಲ್ಲ ನೋಡೋಕೆ ಹೇಗಿದಾಳೆ ?”
“ಸುಮಾರಾಗಿದಾಳೆ… ಏನಂತ ಅವಳನ್ನ ಕಟ್ಟ್ಕೊಂಡಿದಾನೋ ಆ ಪುಣ್ಯಾತ್ಮಾ. ಬ್ಯೂಟಿ ಪಾರ್ಲರ್ ನಡಸುವವರು ನೊಡೋಕೆ ಸ್ವಲ್ಪನಾದ್ರೂ ಚೆನ್ನಾಗಿರಬೇಡವಾ? ಇವಳನ್ನ ಕಾಯೋಕೆ ಆ ಗಂಡ ಬೇರೆ ಮೂರೊತ್ತು ಬಾಗಿಲಲ್ಲೇ ಕಾಯ್ತಿರ್ತಾನೆ..

2 “ಹೆಸರಿಗೇನಾಗಿದೆ ಚನ್ನಾಗೇ ಇದೆ.”
ನೀನು ಹೇಳೋದೇನೋ ಸರಿ ಆದ್ರೆ ಯಾಕೋ ಸ್ವಲ್ಪ ಚಾಲೂ ಹೆಂಗಸು ಅನ್ನಿಸ್ತು…ಅಷ್ಟೆ.
ನೋಡದೇನೇ, ಒಂದು ಸಾರೀನೂ ಮಾತನಾಡಿಸ್ದೇನೆ, ಅದ್ಯಾಗೆ ಹೇಳ್ತೀರಾ….
ಅನ್ನಬೇಕು ಅಂದುಕೊಳ್ಳತಾ ಒಳ ನಡೆದರೆ ಹಿಂದೆ ಹಿಂದೆನೇ ಬಂದರು. ಖುಶಿ ಆಯಿತು.

3 “ಮುಂದಿನ ಸಾರಿ ಹೋಗುವಾಗ ಹೇಳು ಪಾಪ ಒಬ್ಬಳೇ ಅಷ್ಟು ದೂರ ಹೋಗ್ತೀಯಾ ಡ್ರಾಪ್ ಮಾಡತೀನಿ ಬೇಕಾದರೆ ಅಲ್ಲೇ ಪಾರ್ಲರನಲ್ಲಿ ಕಾದು ವಾಪಸ್ ಕರಕೊಂಡು ಬರ್ತೀನಿ.”
“ಬೇಡಾರಿ, ನೀವು ನಿಮ್ಮ ಸೋಮಾರಿ ಕಟ್ಟೆ ನೋಡಿಕೊಳ್ಳಿ. ಹತ್ತಿರದಲ್ಲೇ ಇಲ್ಲೆಲ್ಲೋ ಹೊಸದೊಂದು ಓಪನ್ ಆಗಿದೆಯಂತೆ ಹುಡುಕತೀನಿ…

4 “ಹೆಂಗಸರೂ ಈ ತರಹದ್ದೆಲ್ಲಾ ನೋಡತಾರೇನೇ…? ಒಳ್ಳೆ ಗ್ರೂಪ್ ಸೇರಿದೆ ನಿಮ್ಮದು. ಇನ್ನೊಂದಿಷ್ಟು ಇದ್ದರೆ ಕಳಿಸೋಕೆ ಹೇಳೇ. ಅಂದ ಹಾಗೆ ಯಾವ ರೀತಿಯ ಕ್ಲಿಪ್ ಗಳು ನಿಂಗಿಷ್ಟ ?”
ಅನ್ನುತ್ತಾ ಲಹರಿಯಲ್ಲಿ ಮುಂದುವರೆಸಿದರು.

5.”ಅದು… ಆ ಕ್ಲಿಪ್ ನೋಡಿದೆ. ಇಂಟರನೆಟ್ ಎಲ್ಲಾ ಬಂದ ಮೇಲೆ ಈ ತರಹದ್ದು ಜಾಸ್ತಿ ಆಗಿದೆ. ನಾವು ಗಂಡಸರೆಲ್ಲ ಕ್ಲಿಪ್ ಗಳನ್ನ ನೋಡ್ತಾನೇ ಇರತೇವೆ. ನಮಗೆ ಗೊತ್ತು ಯಾವದು ನಿಜ ಯಾವ್ದು ಆರ್ಟಿಫಿಶಿಯಲ್ ಅಂತ. ಹೆಂಗಸರಿಗೆ ಈ ತರಹದ್ದನ್ನ ನೋಡೋ ಅನುಭವ ಕಂಪೇರೆಟಿವ್ಲೀ ಹೊಸದು ಅಲ್ಲವಾ…..ಅವರು ಸಿನಿಮಾ ಟೆಕ್ನಿಕ್ ಉಪಯೋಗಿಸಿ ಅತಿಶಯೋಕ್ತಿ ಮಾಡಿ ತೋರಿಸ್ತಾ ಇರ್ತಾರೆ. ಆದರೆ ನಿಜ ಜೀವನದಲ್ಲಿ ಹಾಗಿರಲ್ಲ ಅನ್ನೋದು ನಿನಗೂ ಗೊತ್ತು, ನಂಗೂ ಗೊತ್ತು.”
(ಸ್ವಗತ) ನಾನು ಕಲಿಯುವದು ಬೇಕಾದಷ್ಟಿದೆ.!!
“ಈ ನಿನ್ನ ಊರ್ವಶಿ ಅಂಥವರಿಗೆಲ್ಲ ಹೇಳಬೇಕು. ಇದೆಲ್ಲ ನಮ್ಮನ್ನು ಭ್ರಮೆಗೊಳಿಸಲು ಅತಿಯಾಗಿ ತೋರಿಸಲಾಗುತ್ತೆ ಅಂತ. ಆದರೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ನಾನು ಅವಳಿಗೆ ಇದನ್ನೆಲ್ಲಾ ವಿಸ್ತಾರವಾಗಿ ಬಾಯಿ ಬಿಟ್ಟು ಹೇಳಲು ಆಗೋದಿಲ್ಲ. ನೀನು ಹೆಂಡತಿ…ನಿನಗೆ ಹೇಳಬಹುದು.”
(ಸ್ವಗತ) “ಬಿಡು ಮಾರಾಯಾ, ಅಲ್ಲಿ ಬರೋ ಹೆಚ್ಚಿನವರಿಗೆಲ್ಲಾ ಗೊತ್ತು ಯಾರ್ಯಾರ ಮನೆಯಲ್ಲಿ ಮೊಟ್ಟೆ ಹೇಗೆ ಬೇಯತ್ತೆ ಮತ್ತು ಎಷ್ಟೊತ್ತು ತಗೊಳ್ಳುತ್ತೆ ಅಂತ. ನಮಗೆ ಮೊಟ್ಟೆ ಬೇಯಿಸೋದನ್ನ ಯಾರಾದರೂ ಹೇಳಿಕೊಡಬೇಕಾ?
ಅಷ್ಟಕ್ಕೂ, ಈ ಮೊಟ್ಟೆಯಿಂದನೇ ಅಲ್ಲವಾ ಎಲ್ಲಾ ತಾಪತ್ರಯ ಶುರುವಾಗಿದ್ದು ?

‍ಲೇಖಕರು admin

March 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: