ಪಾರ್ಲರ್ ಒಳಗೊಂದಿಷ್ಟು ಹೊತ್ತು …

ವಿನಿ ನಾಯಕ್
ಆಗಿನಿಂದ ಕಾಯುತ್ತಿದ್ದೇನೆ ಸರದಿಗಾಗಿ.
ಮದುವೆ ಸೀಸನ್ ಅಂತೆ. ಪಾರ್ಲರಿನ ತುಂಬ ಹುಡುಗಿಯರು.
ಎದುರಿನ ಟೀಪಾಯಿ ಮೇಲೆ ನಾಲ್ಕಾರು ಗೃಹಶೋಭ, ಫೆಮೀನಾ ಪುಸ್ತಕಗಳು. ಪಕ್ಕದಲ್ಲಿ ಕಾಯುತ್ತಿರುವ ಹುಡುಗಿಯೊಬ್ಬಳು ಬಾಯ್ ಫ್ರೆಂಡ್ಗೆ ಹತ್ತು ನಿಮಿಷದಿಂದ ಇನ್ನೆರಡೇ ನಿಮಿಷದಲ್ಲಿ ಬರುವೆ ಎನ್ನುತ್ತಲೇ ಇದ್ದಾಳೆ ಫೋನಿನಲ್ಲಿ. ಐ ಬ್ರೋ ಶೇಪ್ ಮಾಡಿಸದೆ ಹಾಗೆ ಹೋದರೆ ಅವನ ಸ್ನೇಹಿತರ ಮುಂದೆ ವಕ್ರ ವಕ್ರವಾಗಿ ಕಂಡರೆ ಎಂಬ ದುಗುಡ ಅವಳಿಗೆ.
ಇನ್ನೊಬ್ಬಳು ಯಾರೋ ಮಧುಮಗಳಿರಬೇಕು. ಕಡುಗೆಂಪಿನ ಸೀರೆ ಒಪ್ಪುತ್ತಿದೆ ಅವಳ ಮೈಬಣ್ಣಕ್ಕೆ. ಪಾರ್ಲರ್ ಹುಡುಗಿ ಕೆನ್ನೆ ತುಂಬ ಗುಲಾಬಿ ಬ್ಲಷ್ ಬಡಿಯುತ್ತಿದ್ದಾಳವಳ ಕೆನ್ನೆಗೆ. ಹುಡುಗಿ ಮುಖದಲ್ಲಿ ಖುಷಿಯೇ ಇಲ್ಲ. ಈ ಹೆಣ್ಣುಗಳಿಗೆಲ್ಲ ಮದುವೆಗೆರಡು ತಾಸು ಇದೆ ಎನ್ನುವಾಗ ತುಂಬ ಕಳವಳ. ಮಧುಮಗಳ ಮನದಿಂಗಿತ ಬಣ್ಣಿಸುವುದು ಕಷ್ಟ. ಎಲ್ಲ ಬಿಟ್ಟು ಓಡಿ ಹೋಗುವ ಬಯಕೆಯಲ್ಲಿದ್ದಳವಳು. ಮತ್ತೊಮ್ಮೆ ಕನ್ನಡಿ ನೋಡಿಕೊಂಡಳು. ಪರ್ಸಿಂದ ಮೊಬೈಲ್ ತೆಗೆದು ಫೋನ್ ಮಾಡಿದವಳು ಮದುವೆ ಆಗ್ತಿದ್ದೀನೋ. ದಯವಿಟ್ಟು ಮದುವೆಗೆ ಬರಬೇಡ ಎಂದು ಹೇಳಿ ಫೋನ್ ಕಟ್ ಮಾಡಿದವಳು. ಹಳೇ ಗೆಳೆಯನಿರಬೇಕು. ಹಾಗೆಯೇ ದಬದಬನೇ ಹೊರಟುಹೋದಳು.
ಪಾರ್ಲರ್ ಹುಡುಗಿಯರಿಗೆ ಇವೆಲ್ಲ ಮಾಮೂಲು. ತಮ್ಮದೇ ಹಾಸಿ ಹೊದ್ದುಕೊಳ್ಳುವಷ್ಟಿರುವಾಗ ಇನ್ನ್ಯಾರ ಕಥೆಗೂ ಕಿವಿಗೊಡುವಷ್ಟು ಪರಿಧ್ಯಾನವಿಲ್ಲವರಿಗೆ.
ಅಜ್ಜಿಯೊಬ್ಬಳಿಗೆ ವಿಪರೀತ ಕಾಲು ಪಾದದ ಸೀಳಂತೆ. ಪೆಡಿಕ್ಯುರ್ ಮಾಡಿಸಿಕೊಳ್ಳುತ್ತಿದ್ದಳು. ಮತ್ತೊಬ್ಬಳು ದೊಡ್ಡ ಕೆಲಸದ ನಡುವೆ ರೋಸಿ ಹೋಗಿ ಪಾರ್ಲರ್ ಗೆ ಬಂದು ತಣ್ಣಗೆ ಕುಳಿತಿದ್ದಾಳೆ. ಸ್ಪಾ ಮಾಡಿಸಿಕೊಂಡು ರಿಲ್ಯಾಕ್ಸ್ ಆಗಬೇಕೆಂದಿದ್ದಾಳೆ.
ಕಡೆಗೂ ನನ್ನ ಸರದಿ. ಉದ್ದನೇ ಕೂದಲಿಂದ ರಬ್ಬರ್ ಬ್ಯಾಂಡ್ ಬಿಚ್ಚಿದವಳು ನುಣ್ಣಗೆ ಕೂದಲೆಲ್ಲ ಬೋಳಿಸೆಂದೆ. ಪಾರ್ಲರ್ ಹುಡುಗಿ ಕಣ್ಣರಳಿಸಿದಳು. ಕತ್ತರಿಸಿದ ಕೂದಲನ್ನೆಲ್ಲಾ ಪೊಲಿಥೀನ್ ಕವರಿನಲ್ಲಿ ನೀಟಾಗಿ ಪ್ಯಾಕ್ ಮಾಡಿಕೊಂಡೆ. ನಾಳೆ ಕಳಿಸಿಕೊಡಬೇಕು ಇದನ್ನು ಕ್ಯಾನ್ಸರ್ ಪೀಡಿತರಿಗಾಗಿಯೇ ಇರುವ ಎನ್.ಜಿ.ಓ ಗೆ.
ಪಾರ್ಲರ್ ಬಾಗಿಲಿನಿಂದ ಹೊರಬಿದ್ದೆ. ದಿಟ್ಟಿಸಿಸಿದ ಗಂಡಸರ ಕಣ್ತುಂಬ ಅಚ್ಚರಿ. ದಡ್ಡರು. ಹೆಣ್ಮಕ್ಕಳು ಪಾರ್ಲರಿಗೆ ಬರುವುದೇ ಶೃಂಗಾರ ಬಂಗಾರಕ್ಕೆಂದುಕೊಂಡಿದ್ದಾರೆ. ಅದಕ್ಕೇ ಹೆಂಗಸರು ಅರ್ಥವಾಗುವದಿಲ್ಲ ಇವರಿಗೆ.





ಹೊಸತನಕ್ಕೆ, ಸ್ವಂತಿಕೆಯ ಮುದ್ರೆಗೆ ಒಂದು ಸಲಾಮ್, ಒಂದು ಮುಗುಳ್ನಗೆ 🙂
-Ahalya
thank you avaddhi 😉
Wah… loved it.. idu bariya barahavalla.
Hugs
ಶಮಾ ಧನ್ಯವಾದಗಳು.ನಿಮ್ಮ ಅಕ್ಕರೆಯ ಮಾತುಗಳಿಗೆ