ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಯ್ಕಿಣಿ ಪಾರ್ಲರ್ ನಲ್ಲಿ ನಳಿನ

ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು.  ಅದು ‘ಅವಧಿ’ಯಲ್ಲಿ  ಪ್ರಕಟವಾಗಿತ್ತು.

ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿ ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು.

ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು.

kaikini

ನಿಮಗೂ ಇಷ್ಟವಾದರೆ ಅಥವಾ ನಿಮ್ಮ ಮನದೊಳಗೆ ಈ ಲಹರಿ ಇನ್ನೂ ಬೆಳೆದರೆ ನಮಗೆ ಕಳಿಸಿಕೊಡಿ ಎಂದು ಕೇಳಿದ್ದೆವು ..

ಹಾಗೆ ಮುಂದುವರೆದ ಎರಡು ಲಹರಿಗಳು ಇಲ್ಲಿವೆ. ಅದಕ್ಕೆ ಎಸ್ ಪಿ ವಿಜಯಲಕ್ಷ್ಮಿ ತಮ್ಮದೊಂದು ಹೂ ಸೇರಿಸಿದರು

ನಂತರದ ಸರದಿ ಚೈತ್ರಾ ಅವರದ್ದು. ತಮ್ಮ ಹುಬ್ಬುಗಳ ಲೋಕವನ್ನು ಅವರು ಹಿಡಿದಿಟ್ಟರು.

ರೇಷ್ಮಾ ನಾರಾಯಣ ಉಪ್ಪುಂದ ಈ ಲಹರಿಯನ್ನು ಮುಂದುವರಿಸಿದರು. ಕರ್ಚೀಫಿನ ಮೂಲಕ

ಪಾರ್ಲರ್ ನಲ್ಲಿ ಇದುವರೆಗೆ ಇಣುಕಿದ್ದು ಹೆಣ್ಣು ಮಕ್ಕಳು ಮಾತ್ರ ಆದರೆ ಮೊದಲ ಬಾರಿಗೆ ಪುರುಷನೊಬ್ಬರು ರಂಗಪ್ರವೇಶ ಮಾಡಿದರು. ವೀರೇಶಕುಮಾರ ಬೆಟಗೇರಿ ಪಾರ್ಲರ್ ಹೊಕ್ಕರು.     

ಸ್ಫೂರ್ತಿ ಗಿರೀಶ್ ಪಾರ್ಲರ್ ಹೊಕ್ಕ ನಂತರ ಈಗ ರವಿ ಕುಲಕರ್ಣಿಎಂಟ್ರಿ ಕೊಟ್ಟರು. 

ಅಂಗೋಲಾದಿಂದ, ಅಂಕೋಲಾ ಅಲ್ಲ- ಪ್ರಸಾದ್ ಕೆ ಪಾರ್ಲರ್ ನೊಳಗೆ ಹೆಜ್ಜೆ ಹಾಕಿದರು

ಶ್ರೀಕಾಂತ್ ಪ್ರಭು ಕಥೆಯನ್ನು ಇನ್ನೊಂದು ದಿಕ್ಕಿಗೆ ಒಯ್ದರು  

ಈಗ ನಳಿನ ಪಾರ್ಲರ್ ಹೊಕ್ಕಿದ್ದಾರೆ

jayanth kaikini vachike

ನಿಮ್ಮ ಮನದಾಳದೊಳಗೂ ನವಿರಾದ ಭಾವಗಳಿದ್ದರೆ ತಡ ಯಾಕೆ?

ನೀವೂ ಬರೆದು ಕಳಿಸಿ

kaikini by balu mandarti
ನಳಿನ ಡಿ 
ಒಂದೊಂದು ಸಲ ಕನ್ನಡಿಯೇ ಸತ್ಯಗಳನ್ನು ಹೇಳುತ್ತಿಲ್ಲ ಅನ್ನಿಸಿದರೂ ಬಣ್ಣ ಮೆತ್ತಿದ ಮೈಮಾಟ ಕಂಡು ಕನ್ನಡಿಯೂ ನಾಚಿ ಬೆರಗಾಗಿ ನಕಲಿಯನ್ನೇ ಅಸಲು ಎಂದು ತೋರಿಸುತ್ತದೆ.  ಅದರ ಕೆಲಸ ಅದು ಮಾಡುತ್ತದೆ, ಮಾಡಲೇಬೇಕು.  ಈ ಕನ್ನಡಿ ಕೆಡಿಸಿದ ಹುಡುಗಿಯರ ಲೆಕ್ಕವಿದೆಯಾ ಇದಕ್ಕೆ? ಇನ್ನು ಹುಡುಗರ ಲೆಕ್ಕವನ್ನು ಕೇಳುವುದೇ ಬೇಡ ಬಿಡಿ.  ಒಂಚೂರು ನಾಚಿಕೆ, ಅಂಜಿಕೆ, ಬಿನ್ನಾಣ ಎಲ್ಲಾ ಬಿಟ್ಟು ಕನ್ನಡಿಯನ್ನು ನಂಬಿಬಿಟ್ಟು ಮೋಸಹೋಗುವುದೂ ಆ ಒಂದು ವಯಸ್ಸಲ್ಲೇ ಅನ್ನಿಸುತ್ತೆ.
make-up-kitನನ್ನ ಕುಡಿನೋಟದ ಕಾಜಲ್ ಗೆ ಝಲ್ ಅನ್ನುವ ನಿನ್ನ ಎದೆಯ ಬಡಿತ, ನನ್ನ ತುಟಿಯ ರಂಗಿಗೇ ಕುಸಿದೇ ಬಿಡುವ ಎದೆಯ ಏರಿಳಿತ, ಕಣ್ಸನ್ನೆಗಳಿಗೇ ಹೆದರಿ ಮೌನಿಯಂತೆ, ಅಕಾಲಕ್ಕೆ ಕಕ್ಕಾಬಿಕ್ಕಿಯಾಗಿ ಮೋಡಿಗೊಳಗಾದವನಂತೆ.. ವಾರೆವ್ಹ್, ಅದೆಷ್ಟು ಸೊಗಸಾಗಿದ್ದವು ನಿನ್ನ ಸೊಂಟದ ಸುತ್ತಾ ನಾ ಬಳಸಿ ನಿನ್ನ ಬಿಸಿಮೈ ತಾಗುವಾಗ, ನಿರಾತಂಕವಾಗಿ ಕಲ್ಲುಬೆಂಚಿಗೊರಗಿ ನೀ ಕೂತು ಕಣ್ಮುಚ್ಚಿದರೆ, ನಾ ನಾಳೆಯ ಕನಸುಗಳ ಬರ್ ಪೂರ್ ಕತೆಗಳನ್ನು ಸಂಕೋಚದಿಂದಲೇ ಹೊಸೆದು, ಕಾಲ ಹೆಬ್ಬೆರಳಿನಲಿ ರಂಗೋಲಿ ಹಾಕುತ್ತಿದ್ದೆ.  ಹೆಚ್ಚೇನು ಕಂಪ್ಲೈಂಟ್ ಮಾಡದ ಹುಡುಗ ಕಾಂಪ್ರಮೈಸ್ಡ್ ಆಗೇ ಸಂಸಾರ ಮಾಡಿಕೊಂಡುಹೋಗುತ್ತಾನೆ ಅಂತ ಅನ್ನಿಸುತ್ತಿದ್ದುದು ಆಗಲೇ..
ನೀ ನಿನ್ನ ಸಂಪಾದನೆಯಲ್ಲೇ ಕಟ್ಟಿಕೊಳ್ಳಲು ಬಯಸಿದ ಹೊಸ ಸಂಸಾರ, ಅಪ್ಪನನ್ನು ಎದುರುಹಾಕಿಕೊಂಡು ನಾ ಇದುವರೆಗೆ ಪಟ್ಟ ಪಾಡುಗಳು, ತಥ್,  ಇದ್ಯಾವುದೂ ಅರಿವಾಗದ ಮೋಹಕ ಪ್ರಪಂಚಕ್ಕೆ ಜಾರಿಸಿದ್ದು ಕನ್ನಡಿಯೇ ನೋಡು… ಅದರಲ್ಲೂ ಆ ಪಾರ್ಲರಿನ ಕನ್ನಡಿಯನ್ನ ಮರೆಯಲುಂಟೇ…  ನಾ ಹೆಚ್ಚೆಚ್ಚು ಸುಂದರಾಗಲು ಅಲ್ಲಿಗೆ ಕಾಲಿಟ್ಟ ಶಕುನವೆಂಬಂತೆ  ನೀನೂ ಹೊಗಳು ಭಟ್ಟನಂತೆ ಬದಲಾಗುತ್ತಾ ಹೋಗುತ್ತಿದ್ದೆ, ಅದೇ ಮೋಡಿಗೆ ನನ್ನ ಮಾರ್ಜಾಲನಡಿಗೆ ಅದೇ ಪಾರ್ಲರಿನ ಮೆಟ್ಟಿಲು ಹತ್ತುತ್ತಿತ್ತು.  ಹೋಗಿ ಬಂದು ಅದೇ ಹುಡುಗಿ ಪರಿಚಿತಳಾದಳು,, ಹೆಚ್ಚು ವಿಚಾರಿಸಿಕೊಂಡದ್ದು ಅದೇ ದಿನ ನೋಡು.  ಅದೇ ಆ ದಿನ, ನಾನು ಯೌವನದ ಹೊಸ್ತಿಲಲ್ಲಿ ಅಮ್ಮನ ಮನೆಯಿಂದ ಕದ್ದು ತಂದ ಸೀರೆ ಉಟ್ಟುಕೊಂಡು ಪಾರ್ಲರ್ ನಲ್ಲಿಯೇ ಮಧುವಣಗಿತ್ತಿಯ ಗೆಟಪ್ ನಲ್ಲಿ ನಿನ್ನೊಂದಿಗೆ ರಿಜಿಸ್ಟ್ರಾರ್ ಆಫೀಸಿಗೆ ಮೌನದಿಂದಲಿ ನಡೆದ ದಿನ.  ಆಕೆ ನಿನ್ನನ್ನು ನೀ ನಿಂತ ಭಂಗಿಯನ್ನು, ಸಿಗರೇಟು ಹೊಗೆ ಬಿಡುವ ಶೈಲಿಯನ್ನೂ ಅದೆಷ್ಟು ಹೊಗಳುತ್ತಿದ್ದಳು ಗೊತ್ತಾ?  ನನ್ನಂತ ಮಂಕಿಗೆ ಇದೆಲ್ಲಾ ಗೊತ್ತಾಗಲು ಹೇಗೆ ಸಾಧ್ಯ ಹೇಳು?  ಅವಳು ಕೇಳಿದಂತೆಲ್ಲಾ ನಾನು ನಿನ್ನ ಬಗ್ಗೆ, ನಮ್ಮಿಬ್ಬರ ಬಗ್ಗೆ ನಮ್ಮ ಬದುಕಿನ ಕನಸುಗಳ ಕುರಿತು ಕಂಡಿದ್ದ ಸುಂದರ ನಿಶ್ಯಬ್ಧ ಸ್ವಪ್ನಗಳಿಗೆ ದನಿಯಾಗಿ ದೇನಿಸುವಂತೆ ಚಿತ್ರಿಸತೊಡಗಿದ್ದೆ.
‘ನಿಮ್ಮ ಕನಸುಗಳನ್ನು ಹಂಚಿಕೊಂಡ ಆ ಹುಡುಗ ಭಲೇ ಲಕ್ಕಿ ಕಣ್ರೀ’.. ಅಬ್ಬಾ ಎಂಥಾ ನಗು ಅದು, ಮೋಹಕ ನಗೆಯೊಳಗೊಂದು ವಿಷಣ್ಣ ಧ್ವೇಷವ ಹೊಸೆದ ಕ್ಷಣದ ಅಸಾಧ್ಯನಗು.  ಹಿಗ್ಗಾಮುಗ್ಗಾ ತಬ್ಬಿಬ್ಬಾಗಿ ನಾನು.. ಮಾತು ಬದಲಿಸಿ, ಮತ್ತಿನ್ನೇನೋ ಕೇಳಬೇಕಂದುಕೊಂಡೆ… ಆದರೆ ಕೇಳುವ ಮೊದಲು, ಚಪ್ಪಲಿ ಇರದ ಅವಳ ಪಾದಗಳನ್ನು ಗಮನಿಸಿದೆ.. ಇಲ್ಲಾ.. ಕಾಲುಂಗುರವಿರಲಿಲ್ಲ.. ಡೀಪ್ ನೆಕ್ ಹಾಕಿಕೊಂಡಿದ್ದು ಸೆನ್ಸಾರನ್ನು ಪ್ರದರ್ಶಿಸುತ್ತಿದ್ದ ಮುಂಭಾಗದಲ್ಲಿ ಅಲಂಕರಿಸಬೇಕಿದ್ದ ಕಪ್ಪುಸರ, ಚಿನ್ನದ ಉದ್ದಸರ.. ಇತ್ಯಾದಿ ಮಾಂಗಲ್ಯಸರದಂತದ್ದೇನೂ ಇರಲಿಲ್ಲ.. ಆದರೂ ಸಹಜ ಕುತೂಹಲಕ್ಕೆ… ತೆರೆ ಎಳೆಯುತ್ತಾ.. ಕೇಳಿದೆ.
’ನಿಮ್ಮ ಕನಸಿನ ಹುಡುಗನ ಬಗ್ಗೆಯೂ ಹೇಳಿ”?  ಸ್ವಲ್ಪವೂ ವಿಚಲಿತಳಾಗದ ಅವಳು, ಬಲಗಡೆಯ ಹೈಬ್ರೋ ದಟ್ಟವಾಗಿದೆ, ಇಲ್ಲಿ ಹಿಡಿದುಕೊಳ್ಳಿ ಎಂದು ನನ್ನನ್ನೇ ಸ್ಟನ್ ಮಾಡಿಬಿಟ್ಟಳು.  ಮಾತೇ ಆಲಿಸದವಳಂತೆ…ಹೈಬ್ರೋ ಮುಗಿಸಿ, ’ನಂಗೆ ಕೇಳುದ್ರಾ?  ನಮ್ಮಂತವರಿಗೆ ಇನ್ನೊಬ್ಬರನ್ನು ಚಂದಗಾಣಿಸುವಷ್ಟೇ ದೇವರು ಬರೆದಿರೋದು.  ನಾವೆಲ್ಲಾ ಎಲ್ಲಿ ಹುಡುಕಲಿಕ್ಕಾಗುತ್ತದೆ ಬಿಡಿ, ಆದರೆ ನಿಮ್ಮ ಸೆಲೆಕ್ಷನ್ ಹುಡುಗ ಸೂಪರ್..” ಅನ್ನುತ್ತಾ ಮತ್ತೆ ಕಿಟಕಿಯಾಚೆ ಇಣುಕಿನೋಡಿ ಇತ್ತ ಸರಿದಳು.  ಅವಳು ಬಾತ್ ರೂಮ್ ನೊಳಗೆ ಹೋದಾಗ, ಅಲ್ಲಿದ್ದ ಕ್ಲೀನಿಂಗ್ ಹುಡುಗ ನನ್ನತ್ತ ಅನಾಥನಂತೆ ನೋಡುತ್ತಾ ಕೂತ ಹುಡುಗನಿಗೆ ಏನಾದರೂ ಕೊಡಬೇಕೆನಿಸಿತು, ಇವಳ ದುಬಾರಿ ಬಿಲ್ ಅನುಭವವೂ ಇದ್ದುದರಿಂದ ಕೈಗೆ ಸಿಕ್ಕೊಂದು ನಾಣ್ಯವ ಕೊಟ್ಟೆ. ಅವನು ತನ್ನ ಕೆಲಸ ಮಾಡತೊಡಗಿದ, ಇದ್ದಕ್ಕಿದ್ದಂತೆ ಕೆಳಗೆ ಓಡಿದ.. ಅಷ್ಟರಲ್ಲಿ ಬಂದ ಬಿನ್ನಾಣಗಿತ್ತಿ ಪಾರ್ಲರ್ ನವಳು ನನ್ನ ಅಂಗಾಂಗಳನ್ನು ಹೊಗಳುತ್ತಾ.. ನಾಚಿದ್ದ ನನಗೆ ಇನ್ನಷ್ಟು  ನಾಚಿಕೆ ಅಂಟಿಸಿದಳು.  ಭರ್ತಿ ಒಂದುಮುಕ್ಕಾಲುಗಂಟೆಗೆ ನನ್ನನ್ನು ಬೀಳ್ಕೊಡುವಾಗ ಬ್ರೈಡಲ್ ಮೇಕಪ್ ಎಂದು ಚೆನ್ನಾಗೇ ಪೀಕಿಕೊಂಡಳು ಕೂಡಾ.
 make up7
– – –
ಆದರೆ ಅಂದು ಬೆನ್ನತ್ತಿದ ಬೂತ ಹೀಗೆ ಬೆನ್ನುಹಿಡಿದು ಮೂಳೆ ಮುರಿದು ಕಡೆಗೆ ಕ್ಯಾನ್ಸರ್ ಆಗುತ್ತದೆಂಬ ಅಪರೂಪದ ಅನುಮಾನವೂ ಬರಲಿಲ್ಲ.  ಆಗೊಮ್ಮೆ ಈಗೊಮ್ಮೆ ಮನೆಗೆ ಫೇಶಿಯಲ್ ಸರ್ವೀಸ್ ಗಂತ ಸುಂದರವಾಗಿ ಹರಡುತ್ತಿದ್ದ ನನ್ನ ಮನೆಯ ಬೊನ್ಸಾಯ್ ಗಿಡದ ಬಗ್ಗೆ ಮಾತಾಡುತ್ತಿದ್ದಳು.  ’ನೋಡಿ ನಾವು ಹೀಗೆ, ಎಷ್ಟೇ ಅಂದವಾಗಿದ್ದರೂ ಸೂರ್ಯನ ಬೆಳಕಿಲ್ಲದೆ ಒಳಗೇ ಇದ್ದುಬಿಡಬೇಕು.  ನಿಮ್ಮ ಹಾಗೆ ಹೊರಗೆ ಸ್ವಚ್ಛಂಧದಿಂದ ಸಂಸಾರ ಮಾಡುವ ಭಾಗ್ಯವೆಲ್ಲಿಂದ ಬರಬೇಕು ಹೇಳಿ?’
ಮನೆ ನೋಡಿಕೊಂಡವಳು, ನಾನಿಲ್ಲದಾಗ ನನ್ನವನ ಪರಿಚಯ, ಸ್ನೇಹ ಸಂಪಾದಿಸಿಕೊಂಡಿರಬಹುದು… ಕಡೆಗೆ ಎರಡು ವರ್ಷ ಭರ್ತಿಯಾಗುವ ಮೊದಲೇ ಹೀಗೆ? ಮಗುವಿನ ಜೊತೆಗೆ ಮುದ್ದಾಡುತ್ತಾ, ಹೊಸ ಕಸುವಿನೊಂದಿಗೆ ಚಿಗುರುತ್ತಿರಬೇಕಾದ ಕನಸಿನ ನಡುವೆ ಅದೇನು ಭಗ್ನತೆ? ಆ  ಹೆಣ್ಣಿನ ಅಂತರಾಳ ಅಳೆದು ಸುರಿದರೂ ನಾ ಅರಿಯಲಾಗದ ಆಳವಿತ್ತೇನು?
ಸರುಹೊತ್ತಿನಲ್ಲಿ ದಾಂಪತ್ಯಗಳು ಹೇಗೇಗೋ ಮುರಿದುಬಿದ್ದದ್ದು ಕಂಡಿದ್ದೇ… ಸೊಂಟದವರೆಗೆ ಬೆಳೆದ ಮಗಳನ್ನು ಹೆಂಡತಿಯೊಂದಿಗೆ ಕೈಬಿಡುವ ಯಶಸ್ವಿ ನಟರು, ಎರಡು ಹೆಂಡತಿಯರನ್ನು ಅವರ ಮಕ್ಕಳನ್ನು ಯಶಸ್ವಿಯಾಗಿ ಸಂಭಾಳಿಸುವ ಶ್ರೀಮಂತ ಗಂಡಸರು, ತಲಾಖ್ ಎನ್ನುತ್ತಾ ಮತ್ತೊಂದು ಹುಡುಗಿಯನ್ನು ಕೈಹಿಡಿಯುವವರು, ರಾಜಾರಸ್ತು ಪಿಎಗೆ ಹೆಂಡ್ತಿ ಸ್ಥಾನ-ಮಾನ ಕೊಟ್ಟು ಮೆರೆಸುವವರು… ಹೀಗೆಲ್ಲಾ ಆಗಲು ಸಾವಿರ ಕಾರಣಗಳಿರಬಹುದು… ಆದರೆ ನನ್ನ ಹುಡುಗನಿಗೇನಾಯಿತು?  ಅವಳ ಪಾರ್ಲರ್ ಅನ್ನು ಧ್ವೇಷಿಸುವ ಪರಿಗೆ ಅದು ಮೇಲ್ ಮಹಡಿಯಲ್ಲಿಯೇ ಉರಿದು ಭಸ್ಮವಾಗಬೇಕಿತ್ತು… ಅವಳ ನಕಲಿ ಮೇಕಪ್ ಕಳಚಿ, ಇವನು ಬೆಸ್ತುಬಿದ್ದು ಓಡೋಡಿ ಬಂದು ನನ್ನ ಕಾಲಬುಡದಲ್ಲಿ ಕಣ್ಣೀರಿಡಬೇಕಿತ್ತು… ಎಲ್ಲಕ್ಕೂ ಕಾಲ ಸನ್ನಿಹಿತವಾಗಬೇಕಲ್ಲ…  ಇತ್ತ ಮನೆಗೂ ಮರಳಲಾಗದೆ, ಇಲ್ಲಿಯೂ ಏಕಾಂಗಿಯಾಗಿಯೇ ಇರುವೆ.  ಕನ್ನಡಿಯಾಚೆ ಹುಟ್ಟಿಕೊಂಡ ಸಂಬಂಧಗಳಿಗೆ ಕಾರಣಗಳು ಅದೇನಿರುತ್ತವೋ ಆದರೆ ಮನುಷ್ಯತ್ವದ ಮೌಲ್ಯವೇ ಸತ್ತ ಮೇಲೆ, ದಾಂಪತ್ಯದ ಮೌಲ್ಯ ಹುಡುಕುವುದಕ್ಕಾಗುವುದೇ?  ಒಮ್ಮೆ ಆತ್ಮ-ದೇಹದೊಂದಿಗೆ ಮುಖಾ-ಮುಖಿಯಾಗದೆ ಮಾತುಬದಲಿಸುವ ಇವರುಗಳು ಕನ್ನಡಿಯಲ್ಲಿ ಬಣ್ಣವನ್ನಷ್ಟೇ ಏಕೆ ನೋಡುತ್ತಾರೆ?  ಅವರವರ ಆತ್ಮಾವಲೋಕನಕ್ಕೆ ಕನ್ನಡಿ ಇಲ್ಲದಿದ್ದರೆ ಸಾಧ್ಯವಿಲ್ಲವೇನು?
ನಾನು ಪಾರ್ಲರ್ ಧ್ವೇಷಿ.. ಹಾಗೆಯೇ.. ಪಾರ್ಲರ್ ಪರಿಕರಗಳ ಧ್ವೇಷಿ.. ಕ್ಷಮಿಸಿ.ಬಣ್ಣ ಹಚ್ಚುವವರು ಹಿಡಿಸುವುದಿಲ್ಲ, ಅದರಲ್ಲೂ ಮೇಕಪ್ ಮಾಡಲು ಮನೆಗೆ ಧಾವಿಸುವವರೆಂದರೆ ಅಲರ್ಜಿ.

‍ಲೇಖಕರು admin

19 March, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading