ಕಾಯ್ಕಿಣಿಯವರ ಸೂಕ್ಷ್ಮ ಚಿತ್ರಕಶಕ್ತಿಯ ‘ಶಬ್ದತೀರ’

ರಹಮತ್ ತರೀಕೆರೆ

ಜಯಂತ ಕಾಯ್ಕಿಣಿ ಗದ್ಯದ ಹೃದ್ಯತೆ

ಕನ್ನಡ ಗದ್ಯಬರೆಹಗಳಲ್ಲಿ ವಿಶಿಷ್ಟ ಮಾದರಿಗಳಿವೆ. ನವರತ್ನ ರಾಮರಾವ್, ಎ.ಎನ್. ಮೂರ್ತಿರಾವ್, ಗೋವಿಂದಪೈ, ಕುವೆಂಪು, ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಜಿ.ರಾಜಶೇಖರ, ನಾಗೇಶ ಹೆಗಡೆ, ಅಬ್ದುಲ್ ರಶೀದ್ ಹೀಗೆ. ಇವುಗಳಲ್ಲಿ ಜಯಂತ ಕಾಯ್ಕಿಣಿಯವರದೂ ಒಂದು.

ಜಯಂತ್ ಕವಿತೆ ಮತ್ತು ಸಿನಿಮಾಗೀತೆ ರಚಿಸಿದ್ದರೂ ಅವರ ನಿಜಪ್ರತಿಭೆ ಪ್ರಕಟವಾಗಿರುವುದು ಕಥೆ, ಅಂಕಣಬರೆಹವೇ ಮೊದಲಾದ ಗದ್ಯ ಪ್ರಕಾರಗಳಲ್ಲಿ. ಅವರ ಅಂಕಣಗಳೂ ಪುಸ್ತಕ ವಿಮರ್ಶೆಗಳೂ ಮುನ್ನುಡಿಗಳೂ ಸೇರಿಕೊಂಡಿರುವ ‘ಶಬ್ದತೀರ’ ಗದ್ಯಪ್ರಿಯನಾದ ನನಗೆ ಇಷ್ಟವಾದ ಕೃತಿಗಳಲ್ಲಿ ಒಂದಾಗಿದೆ.

ಇಲ್ಲಿನ ಲೇಖನಗಳಲ್ಲಿ ಎದ್ದು ಕಾಣುವುದು ನವೀನವೆನಿಸುವ ಭಾಷೆ ಮತ್ತು ಅಭಿವ್ಯಕ್ತಿಕ್ರಮ; ಇಲ್ಲಿ ಉಪಮೆಗಳಾಗಿ ಬರುವ ನುಡಿಚಿತ್ರಗಳು ಬಹಳ ವಿಶಿಷ್ಟವಾಗಿವೆ ಮತ್ತು ಜಯಂತ್ ಮಾತ್ರ ರಚಿಸಬಲ್ಲಂತಹವಾಗಿವೆ. ಒಂದು ಕಡೆ ತಾರೆಯೊಬ್ಬಳ ಚೆಲುವು ಆಗ ತಾನೇ ಚೂಪಾಗಿ ಕೆತ್ತಿದ ಪೆನ್ಸಿಲಿನಂತಿತ್ತು ಎಂಬ ಚಿತ್ರ ಬರುತ್ತದೆ. ಇಂತಹ ಚಿತ್ರಕಶಕ್ತಿಯಿಂದ ವಿಚಾರ ಮತ್ತು ನೋಟಗಳು ಹಸಿಗೋಡೆಯಲ್ಲಿ ನೆಟ್ಟ ಹರಳಂತೆ ಓದುಗರೊಳಗೆ ಕೂತುಬಿಡುತ್ತವೆ. ಹೀಗಾಗಿಯೇ ಇಲ್ಲಿನ ಭಾಷೆಯನ್ನು ಓದಬಹುದು ಮಾತ್ರವಲ್ಲ, ರಾಜೇಂದ್ರ ಚೆನ್ನಿಯವರು ಅಭಿಪ್ರಾಯಿಸಿರುವಂತೆ ಸಂಗೀತದಂತೆ ಆಲಿಸಲೂಬಹುದು.

ಇಲ್ಲಿನ ಗದ್ಯದ ಶಕ್ತಿಯು ಮೂರು ಮೂಲಗಳಿಂದ ಬಂದಂತಿದೆ: ಬದುಕನ್ನು ವ್ಯಂಗ್ಯವಾಗಿ ವಿನೋದದಿಂದ ನೋಡಬಲ್ಲ ನೋಟಕ್ರಮದಿಂದ; ದೈನಿಕ ಬದುಕಿನ ಯಾವತ್ತೂ ವಿವರಗಳನ್ನು ಸೂಕ್ಷ್ಮವಾಗಿ ಕಾಣಿಸುವ ದೃಷ್ಟಿಕೋನದಿಂದ ಹಾಗೂ ಈ ನೋಟಕ್ರಮ ಮತ್ತು ಕಥನಕ್ರಮಗಳ ಒಳಗೆ ತುಡಿಯುವ ಮಾನವೀಯ ಅನುಕಂಪದಿಂದ. ಈ ಮೂರೂ ಅಂಶಗಳು ಬರೆಹದ ಆಕೃತಿಗೆ ಹಾಗೂ ಚೆಲುವಿಗೆ ಮಾತ್ರವಲ್ಲ, ಇಲ್ಲಿರುವ ಜೀವನದರ್ಶನಕ್ಕೂ ಕಾರಣವಾಗಿವೆ. ಜಯಂತ್ ಬರೆಹದಲ್ಲಿರುವ ಸೂಕ್ಷ್ಮತೆಗೆ ಮನುಷ್ಯರ ಸ್ವಭಾವದ `ಚಿಕ್ಕಪುಟ್ಟ’ ವಿವರಗಳೂ ತಪ್ಪಿಸಿಕೊಳ್ಳುವುದಿಲ್ಲ.

ಅವರ ಬರೆಹದ ಶಕ್ತಿ ಇರುವುದೇ ಈ ‘ಸಣ್ಣ’ ವಿವರಗಳನ್ನು ಶ್ರದ್ಧೆಯಿಂದ ಮತ್ತು ತನ್ಮಯತೆಯಿಂದ ಕೊಡುವಲ್ಲಿ. ಅದರಲ್ಲೂ ನಗರದ ಮಧ್ಯಮವರ್ಗದ ಜನರೊಳಗೆ ಅಡಗಿರುವ ಹಿಪಾಕ್ರಸಿ, ಕೃಪಣತೆ, ಆಳವಿಲ್ಲದ ಚಿಂತನಶೀಲತೆ, ಅವಕಾಶವಾದಿತನ ಇವನ್ನೆಲ್ಲ ತಿರಸ್ಕಾರಕ್ಕೆ ಒಳಗಾಗಿಸದೆ, ಅನುಕಂಪೆಯಿಂದ ಅವರ ಬರೆಹ ಕಟ್ಟಿಕೊಡುತ್ತದೆ. ನಗರದ ಬದುಕು ಝಗಝಗಿಸುವ ಇಲ್ಲವೇ ಪ್ರಕ್ಷುಬ್ಧವಾಗಿರುವ ವಿರಾಟ್ ಚೌಕಟ್ಟುಗಳಲ್ಲಿ ಅಲ್ಲ, ಬೀದಿಬದುಕಿನ ಪಿಸುದನಿಗಳ ಮೂಲಕ ಇಲ್ಲಿ ಬಿಚ್ಚಿಕೊಳ್ಳುತ್ತದೆ. ಅದರಲ್ಲೂ ಮುಂಬೈ ಮತ್ತು ಬೆಂಗಳೂರು ನಗರಗಳನ್ನು ಕುರಿತ ಇಲ್ಲಿನ ಒಳನೋಟಗಳು ಅಪೂರ್ವ.

ಇವು ವಿದೇಶಿ ಲೇಖಕರು ಕೊಲ್ಕತ್ತಾ ಮುಂತಾದ ನಗರಗಳಲ್ಲಿದ್ದು ಬರೆದ ನಗರಗಳ ಕಥನಕ್ಕಿಂತ ಭಿನ್ನವಾಗಿವೆ. ಈ ಕಾರಣದಿಂದ ಜಯಂತರ ಬರೆಹ ಮಧ್ಯಮವರ್ಗದ ಮಹಾಕಥನ. ರೊಮ್ಯಾಂಟಿಕ್ ನೆಲೆಯಲ್ಲಿ ಮಹಾನಗರಗಳ ಬಗ್ಗೆ ನಮ್ಮ ಅನೇಕ ಬರೆಹಗಳು ಕಾರಿಕೊಂಡಿರುವ ಪೂರ್ವಗ್ರಹ ಮತ್ತು ಎಳಸುತನ ನೋಡುವಾಗ, ಇಲ್ಲಿನ ಬರೆಹ ಕಾಣಿಸುವ ಕ್ರೌರ್ಯ ಮತ್ತು ತಾಯ್ತನಗಳೆರಡೂ, ನಗರ ಬದುಕಿನ ವಿಶಿಷ್ಟತೆಯನ್ನು ಅರಹುತ್ತವೆ. ನಾಗರ ಬದುಕನ್ನು ಹೀಗೆ ಮಾಗಿದ ತಾಳ್ಮೆಯಲ್ಲಿ ಕಟ್ಟಿಕೊಡುವ ಮೂಲಕವೇ ಹೊಸ ಜೀವನದರ್ಶನವನ್ನು ಜಯಂತರ ಗದ್ಯ ಹೊಮ್ಮಿಸುತ್ತದೆ.

ಜಯಂತ್, ಯಾವಾಗಲೂ ಚರಿತ್ರೆಯ ಭಾರವಿಲ್ಲದೆ ವರ್ತಮಾನದ ಬದುಕನ್ನು ದೃಗ್ಗೋಚರವಾಗುವಂತೆ ಹಿಡಿದಿಡಲು ಯತ್ನಿಸುವ ಲೇಖಕರಲ್ಲಿ ಒಬ್ಬರು. ಇದರಿಂದ ಅನಾಮಿಕರ ಚರಿತ್ರೆಯನ್ನು ಸೃಷ್ಟ್ಟಿಸಲು ಅವರಿಗೆ ಸಾಧ್ಯವಾಗಿದೆ. ಈ ಪರ್ಯಾಯ ಚರಿತ್ರೆಯ ನಾಯಕ ನಾಯಕಿಯರು ಅನಾಮಿಕರು ಮಾತ್ರವಲ್ಲ ಅದೃಶ್ಯರೂ ಹೌದು. ಈ ನವಚರಿತ್ರೆಯ ನಿರ್ಮಾಣಕ್ಕೆ ಸಂಬಂಧಿಸಿಯೇ ಈ ಕೃತಿಯಲ್ಲಿರುವ ಸಿನಿಮಾ ವಿಮರ್ಶೆ-ವಿಶ್ಲೇಷಣೆಗಳನ್ನು ಗಮನಿಸಬೇಕು.

ಕನ್ನಡ ಸಂಶೋಧನೆಯು ‘ಜನಪ್ರಿಯ’ ಸಂಸ್ಕೃತಿ  ಕುರಿತು ಅಸ್ಪೃಶ್ಯತಾ ಧೋರಣೆ ತಳೆದಂತೆ ಮೌನವಹಿಸಿದೆ. ಈ ಹಿನ್ನೆಲೆಯಲ್ಲಿ ಎನ್.ಎಸ್. ಶಂಕರ್, ಜಯಂತ್ ಮುಂತಾದವರು ಸಿನಿಮಾಗಳ ಕಲಾತ್ಮಕ, ತಾತ್ವಿಕ ಮತ್ತು ತಾಂತ್ರಿಕ ಸೋಲು ಗೆಲುವುಗಳನ್ನು ಚರ್ಚಿಸುವುದು ಮಹತ್ವದ ಸಂಗತಿ. ಜಯಂತ್ ಇಲ್ಲಿ ಮಾಡಿರುವ ಸಿನಿಮಾ ಜಗತ್ತಿನ ಚರ್ಚೆಯು, ತಿರಸ್ಕಾರ ಮತ್ತು ಪಕ್ಷಪಾತವಿಲ್ಲದ ಆರೋಗ್ಯಕರ ದೂರದಲ್ಲಿ ರೂಪುಗೊಂಡಿದೆ.

ಕಿರು ವಿವರಗಳ ಮೂಲಕ ಲೋಕವನ್ನು ಸೂಕ್ಷ್ಮವಾಗಿ ನೋಡುವ ಜಯಂತರ ಗದ್ಯ, ವಿವರ ದಾಖಲಿಸುವ ಗೀಳಿನಲ್ಲಿ ಏಕತಾನತೆಯನ್ನೂ ಸೃಷ್ಟಿಸಿಕೊಳ್ಳುವುದುಂಟು. ಇಲ್ಲಿ ದಂಗುಬಡಿಸುವ ಅನುಭವದ ವೈವಿಧ್ಯವಿಲ್ಲ, ಆದರೆ ನವಿರುತನವಿದೆ. ಬೌದ್ಧಿಕ ಪರಿಭಾಷೆ ಮತ್ತು ತಾತ್ವಿಕತೆಯ ಭಾರದ ಬಗ್ಗೆ ಅನುಮಾನವಿರುವ ಇಲ್ಲಿನ ಬರೆಹದಲ್ಲಿ, ಬೆನ್ನುಬಿಲ್ಲದ ಕೋಮಲ ರಮ್ಯ ಬರೆಹದ ಭಾಗಗಳೂ ಇವೆ.

ಜಯಂತ್ ಕಿರಿಯ ಲೇಖಕರಿಗೆ ಬರೆದಿರುವ ಮುನ್ನುಡಿ-ವಿಮರ್ಶೆಗಳಲ್ಲಿ ಒರಟು ಸಮಾಜಮುಖಿಯಲ್ಲದ ಬರೆಹಗಳ ಬಗ್ಗೆ ಸದಾ ಎಚ್ಚರಿಸುವುದನ್ನು ಇಲ್ಲೇ ನೆನೆಯಬಹುದು. ಈ ಮಾರ್ಗ ಕೆಲವೊಮ್ಮೆ ರಮ್ಯತೆಯ ಕಮರಿಗೆ ಸಾಗಲು ಪ್ರೇರಿಸಿರಬಹುದೇ ಎಂದು ಶಂಕೆ ಬರುತ್ತದೆ.

`ಶಬ್ದತೀರ’ದ ಅನೇಕ ಬರೆಹಗಳಲ್ಲಿ ತಾತ್ವಿಕವಾಗಿ ನಿಷ್ಠುರವಾದ ನಿಲುವುಗಳಿವೆ. ಇದನ್ನು ಎನ್.ಎಸ್. ಶಂಕರ್ ಅವರ ಸಿನಿಮಾ ವಿಶ್ಲೇಷಣೆಯಲ್ಲಿ, ನಿಹಲಾನಿಯವರ ಸಿನಿಮಾ ಚರ್ಚೆಯಲ್ಲಿ ಕಾಣಬಹುದು. ಆದರೆ ಈ ನಿಷ್ಠುರತೆ ಕೆಲವೆಡೆ ಕಾಣೆಯಾಗುತ್ತದೆ. ನಿದರ್ಶನಕ್ಕೆ ಅಡಿಗರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಸಾಕ್ಷಿ’ ಕುರಿತ ಲೇಖನ. ಇಲ್ಲಿ ಸದರಿ ಪತ್ರಿಕೆಯ ಸಾಹಿತ್ಯಕ ಸಂವೇದನೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಆದರೆ ಈ ಮೆಚ್ಚುಗೆಗೆ ಅಡಿಗರ ನವ್ಯ ಸಾಹಿತ್ಯಕ ಸಂವೇದನೆ ಎಷ್ಟೆಲ್ಲ ಲೇಖಕರನ್ನು ಹೊರಗಿಟ್ಟಿತು ಎಂದು ವಿಮರ್ಶಾತ್ಮಕವಾಗಿ ಕಾಣಲು ಸಾಧ್ಯವಾಗಿಲ್ಲ; ಸಾಮಾನ್ಯ ಸಂಗತಿಗಳ ಮೂಲಕವೇ ಬದುಕನ್ನು ಕಾಣಿಸುವ ಅವರ ಚಹರೆಗಳೇ ಇರುವ ಕೆ.ಎಸ್.ನರಸಿಂಹಸ್ವಾಮಿ ಅವರನ್ನು `ಸಾಕ್ಷಿ’ಯ ಸಾಹಿತ್ಯಕ ನಿಲುವು ಹೀಗಳೆಯಿತು ಎಂಬುದನ್ನು ಚಾರಿತ್ರಿಕವಾಗಿ ನೆನೆಯಲು ಸಾಧ್ಯವಾಗಿಲ್ಲ.

ಜಯಂತ್ ಬರೆಹ ಭಾವನಾತ್ಮಕ ಗಳಿಗೆಯಲ್ಲಿ ತನ್ನ ತ್ರಾಣವಾದ ನಿಷ್ಠುರತೆಯನ್ನು ಕಳೆದುಕೊಳ್ಳುವುದುಂಟು. ಅಂಕೋಲ ಕುರಿತ ಇಲ್ಲಿನ ಪದ್ಯವನ್ನು ಗಮನಿಸಬೇಕು. ಇಲ್ಲಿ ಬಂದಿರುವ ಚಿತ್ರಸರಣಿಯನ್ನು ಓದುತ್ತ ಮೈಮರೆಯುತ್ತ ಇರುವಾಗಲೇ, ಭಟ್ಟರ ಅಥವಾ ಕಾಮತರ ಮನೆಯ ಹಿತ್ತಲಿನಲ್ಲಿ ಮುಸುರೆ ತೊಳೆಯುತ್ತಲೊ ಅವರ ಕೊಟ್ಟಿಗೆಗಳಲ್ಲಿ ಸಗಣಿ ಬಾಚುತ್ತ ಕಸಗುಡಿಸುತ್ತ ಎಲೆಯಡಿಕೆ ಮೆದ್ದ ಬಾಯಿಯ ಹಾಲಕ್ಕಿಯ ಹೆಂಗಸರ ಚಿತ್ರವೂ ಬಂದೀತೆಂದು ಕಾಯುವ ಓದುಗರಿಗೆ ನಿರಾಶೆಯಾಗುತ್ತದೆ. ಮೆಚ್ಚಲೇಬೇಕು ಎಂದು ನಿರ್ಧರಿಸಿ ಚಿತ್ರಗಳನ್ನು ಹಾರದಂತೆ ಕಟ್ಟುತ್ತ ಹೋದಕಡೆ ಬರೆಹ ತನ್ನ ವಿಮರ್ಶನ ಪ್ರಜ್ಞೆ ಬಿಟ್ಟುಕೊಡುತ್ತದೆ.

ಆದರೆ ಇಂತಹ ಮಿತಿಗಳನ್ನು ಆಳವಾದ ವಿಷಾದ ಪ್ರಜ್ಞೆಯಲ್ಲಿ ಬರೆಯುವಲ್ಲಿ ಜಯಂತ್ ಮೀರಬಲ್ಲರು. ಮೇಲುನೋಟಕ್ಕೆ ತಮಾಶೆಯಾಗಿರುವ ಹಗುರಧಾಟಿಯ ಬರೆಹದಲ್ಲೂ ಅವರು ಕಟುಸತ್ಯಗಳನ್ನು ಹೊಮ್ಮಿಸುತ್ತ ಆಳವಾಗಿ ಕಲಕಬಲ್ಲರು. ಇದಕ್ಕೆ ‘ಚಪ್ಪಾಳೆ’ ಕುರಿತ ಬರೆಹವೇ ಸಾಕ್ಷಿ.ಜಯಂತ್ ಬರೆಹದಲ್ಲಿ ತಾತ್ವಿಕವಾಗಿ ನನ್ನಂತಹವರು ಭಿನ್ನಮತ ತೋರುವ ಮತ್ತು ಮೆಚ್ಚುವ ಎಷ್ಟೊ ಸಂಗತಿಗಳಿವೆ. ಆದರೆ ಬರೆಹವನ್ನು ಒಂದು ಕಸುಬುದಾರಿಕೆ ಎಂದು ಭಾವಿಸಿ ಶ್ರದ್ಧೆಯಿಂದ ತೊಡಗುವ ಅವರ ಬದ್ಧತೆ, ಲಹರಿತನದೊಳಗೆ ದರ್ಶನವನ್ನು ಅಡಗಿಸುವ ಕುಶಲತೆ, ಯಾವಾಗಲೂ ಪ್ರಿಯವಾಗುತ್ತದೆ.

‍ಲೇಖಕರು Avadhi GK

March 1, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಶಿವಶಂಕರ ಭಟ್ಟ

    ಜಯಂತರ ಬರಹಗಳು ಚೇತೋಹಾರಿಯಾಗಿವೆ. ವಿಮರ್ಶೆ ಬೇಕು. ಆದರೆ ಅದು ವಿಮರ್ಶಕರ ‘ತಾತ್ವಿಕ ಅಭಿಪ್ರಾಯಗಳಿಗೆ’ ಹೊಂದಲೇ ಬೇಕು ಎಂದು ಬಯಸುವುದು ತರವೇ? ಹೊಸಗನ್ನಡ ಸಾಹಿತ್ಯದಲ್ಲಿ ಸುಮಾರು ಕೃತಿಗಳು ವಿಮರ್ಶಕ vs ತಾತ್ವಿಕ ಭಿನ್ನಾಭಿಪ್ರಾಯ ಎಂಬ egoಗೆ ಸಿಲುಕಿ ನಲುಗಿಹೋಗಿವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: