ಕಾನ್ಶೀರಾಂ ಎಲ್ಲ ದೃಷ್ಟಿಯಿಂದಲೂ “ಭಾರತ ರತ್ನ”ವಾಗಿದ್ದಾರೆ…

gali3.gif 

“ಗಾಳಿ ಬೆಳಕು”

ನಟರಾಜ್ ಹುಳಿಯಾರ್

ಜ್ಯೋತಿ ಬಸು, ವಾಜಪೇಯಿ ಹಾಗೂ ಕಾನ್ಶೀರಾಂ – ಈ ಮೂವರಲ್ಲಿ ಕಾನ್ಶೀರಾಂ ಅವರಿಗೆ ಭಾರತ ರತ್ನ ಕೊಡುವುದು ಹಲವು ದೃಷ್ಟಿಗಳಿಂದ ಸರಿ ಎನಿಸುತ್ತದೆ. ಜ್ಯೋತಿ ಬಸು ಅವರ ಕೊಡುಗೆ ಎಲ್ಲರಿಗೂ ಗೊತ್ತಿದೆ: ಅವರು ಪಶ್ಚಿಮ ಬಂಗಾಳದಲ್ಲಿ ಭೂಸುಧಾರಣೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದವರು. ಬಸು ಕಳೆದ ಕೆಲವು ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯ ಸಿದ್ಧಾಂತಕ್ಕೆ ಬದ್ಧವಾಗಿರುವ ಆದರೆ ಅಭಿಪ್ರಾಯ ಭೇದಗಳಿರುವ ಪಕ್ಷಗಳನ್ನು ಒಗ್ಗೂಡಿಸಿ ಸಮ್ಮಿಶ್ರ ಸರ್ಕಾರ ನಡೆಸುವುದು ಹೇಗೆಂದು ತೋರಿಸಿ ಕೊಟ್ಟವರು. ನಮ್ಮ ರೈತ ಸಂಘ ಹಾಗೂ ದಲಿತ ಸಂಘಟನೆಗಳ ವಿವಿಧ ಬಣಗಳು ಒಂದು ಸಮಾನ ಕಾರ್ಯಕ್ರಮದ ಅಡಿ ಕೆಲಸ ಮಾಡುವುದು ಹೇಗೆ ಎಂಬುದನ್ನು ಜ್ಯೋತಿ ಬಸು ರೂಪಿಸಿದ ಸಮ್ಮಿಶ್ರ ಮಾದರಿಯಿಂದ ಕಲಿತುಕೊಳ್ಳಬೇಕು. ಅದರಲ್ಲೂ ತಮ್ಮ ತಮ್ಮಲ್ಲಿ ಒಂದು ಸಣ್ಣ ಭಿನ್ನಾಭಿಪ್ರಾಯ ಹುಟ್ಟಿದರೂ ಅದನ್ನು ಮಾಧ್ಯಮಗಳ ಎದುರು ಚೀರಿ ಒಂದು ಸಾಲಿನ ಸುದ್ದಿಯಾಗುವ ಚಪಲಚೆನ್ನಿಗ ಚಳುವಳಿಗಾರರು ಜ್ಯೋತಿ ಬಸು ಅವರ ಪ್ರಯೋಗದಿಂದ ಕಲಿಯುವುದು ಸಾಕಷ್ಟಿದೆ. ಪ್ರಧಾನಿ ಪಟ್ಟ ಕೈಯಳತೆಯಷ್ಟು ಹತ್ತಿರ ಬಂದಾಗ, ಆ ಹುದ್ದೆಯ ಬಗ್ಗೆ ಆಸೆಯಿದ್ದರೂ ಪಕ್ಷದ ಹೈಕಮ್ಯಾಂಡ್ ಬೇಡವೆಂದಿದ್ದರಿಂದ ಅದನ್ನು ಕೈಬಿಟ್ಟವರು ಜ್ಯೋತಿ ಬಸು. ಈಚೆಗೆ ಭಾರತದಲ್ಲಿ ಇಂಥ ದೊಡ್ಡ ತ್ಯಾಗಕ್ಕೆ ಮನಸ್ಸನ್ನು ಸಿದ್ಧ ಮಾಡಿಕೊಂಡವರು ಇಬ್ಬರೇ: ಸೋನಿಯಾ ಗಾಂಧಿ ಮತ್ತು ಜ್ಯೋತಿ ಬಸು. ವಿದ್ಯಮಾನಗಳಿಗೆ, ಬಿಕ್ಕಟ್ಟುಗಳಿಗೆ ಪ್ರತಿಕ್ರಿಯಿಸುವಾಗ ಸಾಮಾನ್ಯವಾಗಿ ತೂಕ ಕಳೆದುಕೊಳ್ಳದೆ ಮಾತಾಡುವ ಜ್ಯೋತಿ ಬಸು ಜೀವಿಸುವಷ್ಟು ಸರಳವಾಗಿ ನಮ್ಮ ದೇಶದ ಯಾವ ಮಾಜಿ ಮುಖ್ಯಮಂತ್ರಿಗಳು, ಶಾಸಕರೂ ಜೀವಿಸುವುದಿಲ್ಲ. ಇಂಥ ಜ್ಯೋತಿ ಬಸು ಭಾರತರತ್ನ ಪಟ್ಟಕ್ಕೆ ಅರ್ಹರು ಎಂಬುದು ಸರಿ.

ಮುಂದೆ ತನ್ನ ಪ್ರಧಾನಿ ಹುದ್ದೆಯ ಹಾದಿಯಲ್ಲಿ ಅಡ್ಡಿಯಾಗದಿರಲಿ ಎಂಬ ಯೋಜನೆಯ ಅಂಗವಾಗಿ ಎಲ್.ಕೆ.ಅಧ್ವಾನಿಯವರು ತೇಲಿ ಬಿಟ್ಟಿರುವ ಅಟಲ ಬಿಹಾರಿ ವಾಜಪೇಯಿಯವರ ಯಾವ ಸಾಧನೆಗಾಗಿ ಅವರಿಗೆ ಭಾರತರತ್ನ ಕೊಡಬೇಕೆಂಬುದನ್ನು ಯೋಚಿಸೋಣ. ವಾಜಪೇಯಿಯವರ ಜನಸಂಘದ ಸಿದ್ಧಾಂತ ದೇಶ ವಿಭಜನೆಯ ಸಿದ್ಧಾಂತವಾದ್ದರಿಂದ ಅವರಿಗೆ ಭಾರತರತ್ನ ಕೊಡುವುದು ಭಾರತೀಯ ಸಂವಿಧಾನದ ಮೂಲ ತತ್ವಕ್ಕೇ ವಿರುದ್ಧವಾದುದು. ಆದರೆ, ವಾಜಪೇಯಿ ಒಬ್ಬ ವ್ಯಕ್ತಿಯಾಗಿ ಎಲ್ಲ ಪಕ್ಷಗಳ ನಾಯಕರಿಂದ ಗೌರವ ಗಳಿಸಿದ್ದಾರೆನ್ನುವುದು ನಿಜ. ಮಾಜಿ ಪ್ರಧಾನಿ ಚಂದ್ರಶೇಖರ್, ಜಾರ್ಜ್ ಫರ್ನಾಂಡೀಸ್, ಮುಲಾಯಂ ಎಲ್ಲರಿಗೂ ವಾಜಪೇಯಿಯವರ ಬಗ್ಗೆ ಗೌರವವಿದೆ. ವಾಜಪೇಯಿ ಕವಿಯ ಹಾಗೆ ಯೋಚಿಸಿದಾಗ ಕೊಂಚ ಮಾನವೀಯವಾಗಿ ಯೋಚಿಸಲೆತ್ನಿಸಿದ್ದಾರೆ. ಬಾಬರಿ ಮಸೀದಿಯ ಗುಮ್ಮಟ ಬಿದ್ದಾಗ “ಇದು ಕರಾಳ ದಿನ” ಎಂದಿದ್ದ ವಾಜಪೇಯಿ ಗುಜರಾತಿನಲ್ಲಿ ಅಲ್ಪಸಂಖ್ಯಾತರ ಕಗ್ಗೊಲೆ ನಡೆದಾಗ ಮೋದಿಯನ್ನು “ರಾಜಧರ್ಮ ಪಾಲಿಸಬೇಕು” ಎಂದು ಚುಚ್ಚಿಯೂ ಚುಚ್ಚದವರಂತೆ ಸುಮ್ಮನಾದರು. ಆದರೆ ಆಗ ಅವರು ಬಳಸಿದ “ರಾಜಧರ್ಮ” ಎಂಬ ಶಬ್ದವೇ ಪ್ರಜಾಪ್ರಭುತ್ವ ವಿರೋಧಿಯಾದುದು. ಅದು ಗೊತ್ತಿಲ್ಲದೆ ದೇವೇಗೌಡ, ಯಡಿಯೂರಪ್ಪ ಥರದ ನಾಯಕರು “ರಾಜಧರ್ಮ” ಎಂಬ ಮಾತನ್ನೇ ಬಳಸುವ ಪೆದ್ದುತನ ತೋರುವುದನ್ನು ಮುಂದುವರೆಸುತ್ತಲೇ ಇದ್ದಾರೆ. ವಾಜಪೇಯಿ ಹೀಗೆ ತಪ್ಪು ಶಬ್ದ-ತಪ್ಪು ಸಿದ್ಧಾಂತಗಳ ಮಿಶ್ರಣ ಮಾಡುವವರ ಜೊತೆಗೇ ಕೆಲವೊಮ್ಮೆ ಸ್ಫೂರ್ತಿ ತುಂಬುವಂತೆ ಕೂಡ ಮಾತಾಡಿದ್ದಾರೆ. ಒಳ್ಳೆಯ ಪಾರ್ಲಿಮೆಂಟೇರಿಯನ್ ಎಂದು ಬಹುಮಾನ ಪಡೆದಿದ್ದಾರೆ. ಆದರೆ ವಾಜಪೇಯಿ ಸಾಧಾರಣ ಕವಿಯಾದ್ದರಿಂದ ಉಬ್ಬಿದ ಶಬ್ದಗಳ ಠೊಳ್ಳುತನ ಅವರಿಗೆ ಸುಲಭವಾಗಿ ಗೊತ್ತಾಗುವುದಿಲ್ಲ; ಅಥವಾ ಅವರು ಹಿಟ್ಲರ್ ಮಾಡಿದ ಹಾಗೆ, ಸಾವಧಾನವಾಗಿ ಯೋಚಿಸಿಯೇ ಆ ರೀತಿಯ ಹುಸಿ ಶಬ್ದಗಳನ್ನು ಬಳಸುತ್ತಾರೆಂದು ಕಾಣುತ್ತದೆ. ಆದ್ದರಿಂದಲೇ ಭೀಕರ ಬಡತನ ಹೆಚ್ಚುತ್ತಿದ್ದರೂ ಅಥವಾ ಲಕ್ಷಾಂತರ ರೈತರ ಆತ್ಮಹತ್ಯೆಯಾಗುತ್ತಿದ್ದರೂ, ಭಾರತ ಕೊಳೆಯುತ್ತಿದ್ದರೂ, “ಭಾರತ ಹೊಳೆಯುತ್ತಿದೆ” ಎಂದು ತಮ್ಮ ಪಕ್ಷದ ಸುಳ್ಳುಗಾರರು ಚೀರಿದಾಗ ಅದನ್ನು ಒಪ್ಪಲು “ಕವಿ” ವಾಜಪೇಯಿಗೆ ಏನೂ ಮುಜುಗರವಾಗುವುದಿಲ್ಲ. ಸೂಕ್ಷ್ಮವಾದ ಮನಸ್ಸು ಇಲ್ಲದವರಿಗೆ ಅಥವಾ ನಿಜವಾದ ಕವಿಯಲ್ಲದವನಿಗೆ ಶಬ್ದಗಳ ಆಡಂಬರ ಹಾಗೂ ಅದರ ಹುಸಿತನ ಸುಲಭವಾಗಿ ಹೊಳೆಯುವುದಿಲ್ಲ. ಭಾರತ-ಪಾಕಿಸ್ತಾನಗಳ ಸಂಬಂಧ ಸುಧಾರಿಸಲು ಈ ಎರಡು ದೇಶಗಳ ನಡುವೆ ಬಸ್ ಓಡಿಸಿದ ವಾಜಪೇಯಿಯವರ ಕಾಲದಲ್ಲೇ ಕಾರ್ಗಿಲ್ ಯುದ್ಧವೂ ಆಯಿತು ಎಂಬ ಅಂಶವನ್ನು ಸೂಕ್ಷ್ಮವಾಗಿ ನೋಡಬೇಕು: ತಮ್ಮ ಭಾಷಣ ರೂಪದ ಮಾತುಗಳಿಂದ ಎಲ್ಲವೂ ಆಗುತ್ತದೆ ಎಂದು ನಂಬುವ ಸಿನಿಕ ರಾಜಕಾರಣಿಯೊಬ್ಬನ ಕ್ರೌರ್ಯ ತಂದ ದುರಂತ ಇದು. ಈ ರೀತಿಯ ಹುಸಿ ಭಾಷೆ ಬಳಸಿದವರೆಲ್ಲರೂ ಭಾರತಕ್ಕೆ ಒಂದಲ್ಲ ಒಂದು ದುರಂತ ತಂದಿದ್ದಾರೆ… ವಾಜಪೇಯಿಯವರ ಚತುಷ್ಪಥ ಯೋಜನೆ, ಗ್ರಾಮ್ ಸಡಕ್ ಯೋಜನೆಗಳನ್ನು ಅವರ ಸಾಧನೆ ಎನ್ನುವವರಿದ್ದಾರೆ. ಆದರೆ, ವಸ್ತುನಿಷ್ಠವಾಗಿ ನೋಡಿದರೆ ಈ ಯಾವುದರಲ್ಲಿಯೂ ಭಾರತರತ್ನಕ್ಕೆ ಅರ್ಹತೆಯನ್ನು ಸೂಚಿಸುವ ಸಾಧನೆಯೇನೂ ಕಾಣುತ್ತಿಲ್ಲ. ನೆಹರೂ, ಇಂದಿರಾ ಅವರನ್ನು ನೆನೆಸಿಕೊಂಡಂತೆಯೇ ರಾಜೀವ್, ವಿ.ಪಿ.ಸಿಂಗರನ್ನು ಕೂಡ ಇತಿಹಾಸ ಬೇರೆ ಬೇರೆ ಸಾಧನೆಗಳಿಗೆ ನೆನೆಸಿಕೊಳ್ಳಲಿದೆ. ಮನಮೋಹನ್ ಸಿಂಗ್ ಹಿಂದೊಮ್ಮೆ ತಂದ ಆರ್ಥಿಕ ಸುಧಾರಣೆಗಳಿಗಾಗಿ ಕೂಡ ಅವರ ಹೆಸರು ಉಳಿಯಲಿದೆ. ಆದರೆ ಕೇಂದ್ರದಲ್ಲಿ ಹೆಚ್ಚು ವರ್ಷ ಕಾಲ ಸಮ್ಮಿಶ್ರ ಸರ್ಕಾರ ನಡೆಸಿದರು ಎಂಬ ಹೆಗ್ಗಳಿಕೆ ಬಿಟ್ಟರೆ ಇನ್ಯಾವ ಕಾರಣಕ್ಕೂ ಮುಂದೆ ವಾಜಪೇಯಿ ನೆನಪಾಗಲಾರರು.

ಈ ಹಿನ್ನೆಲೆಯಲ್ಲಿ ಎಂದೂ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಲೀ ಆಗದಿದ್ದ, ಭಾರತದಲ್ಲಿ ಅಂಬೇಡ್ಕರ್ ನಂತರ ದಲಿತ ಜನಕೋಟಿಯಲ್ಲಿ ಹೊಸ ಚೈತನ್ಯ ತಂದ, ಈ ನೆಲದ ಕಟ್ಟಕಡೆಯ ಮನುಷ್ಯನ ಪ್ರತಿನಿಧಿಯಾದ ಕಾನ್ಶೀರಾಂ ಅವರಿಗೆ ಭಾರತ ರತ್ನ ಕೊಡುವುದು ಅತ್ಯಂತ ಸೂಕ್ತವಾದುದು. ಭಾರತ ರತ್ನಕ್ಕೆ ವಾಜಪೇಯಿಯವರ ಹೆಸರು ತೂರಿ ಬಂದಾಗ, ಅದಕ್ಕೆ ಪ್ರತಿಯಾಗಿ ಮಾಯಾವತಿಯವರು ಕಾನ್ಶೀರಾಂ ಅವರ ಹೆಸರನ್ನು ಕೇಂದ್ರರಂಗಕ್ಕೆ ತಂದದ್ದು ನಿಜ. ಆದರೆ ಸಾವಿರಾರು ಮೈಲಿ ಸೈಕಲ್ ಮೇಲೆ ಸುತ್ತಿ ಸಂಘಟನೆ, ಪಕ್ಷ ಕಟ್ಟಲು ಕಾನ್ಶೀರಾಂ ಪಟ್ಟಷ್ಟು ಪರಿಶ್ರಮವನ್ನು ಕಳೆದ ದಶಕಗಳಲ್ಲಿ ಭಾರತದ ಇನ್ನಾವ ನಾಯಕನೂ ಪಟ್ಟಿಲ್ಲ. ಅಷ್ಟೇ ಅಲ್ಲ, ಕಾನ್ಶೀರಾಂ ಈ ದೇಶದ ಕಾಲುಭಾಗ ಜನರಲ್ಲಿ ಹೊಸ ನಿರೀಕ್ಷೆ, ಭರವಸೆ ಹುಟ್ಟಿಸಿದರು. ಮುಂಬರುವ ದಿನಗಳಲ್ಲಿ ಭಾರತ ಪ್ರಥಮ ದಲಿತ ಪ್ರಧಾನಮಂತ್ರಿಯನ್ನು ಕಂಡರೆ ಅದಕ್ಕೆ ಕಾನ್ಶೀರಾಂ ಮುಖ್ಯ ಕಾರಣರಾಗಿರಬಲ್ಲರು. ದಾದಾಸಾಹೇಬ್ ಕಾನ್ಶೀರಾಂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಷ್ಟು ದೊಡ್ಡ ಚಿಂತಕರಲ್ಲ, ನಿಜ. ಆದರೆ ಅಂಬೇಡ್ಕರ್ ವಾದವನ್ನು ಆಳ್ವಿಕೆಯ ಸಹಜ ಭಾಗವನ್ನಾಗಿ ಮಾಡಬಲ್ಲ ವಿಶ್ವಾಸ ಹಾಗೂ ಧೈರ್ಯ ಬಂದದ್ದು ಕಾನ್ಶೀರಾಂ ಅವರಿಂದ. ಭಾರತದ ಕಳೆದ ೧೫ ವರ್ಷಗಳ ಅವಧಿಯಲ್ಲಿ ಸಾವಿರಾರು ವರ್ಷಗಳ ಭಾರತದ ಚರಿತ್ರೆಯ ಚಕ್ರದ ದಿಕ್ಕನ್ನು ನಿರ್ಣಾಯಕವಾಗಿ ಬದಲಿಸಲು ಅಂಬೇಡ್ಕರ್ ಅವರಂತೆಯೇ ಕಾನ್ಶೀರಾಂ ಅವರೂ ಕಾರಣರಾಗಿದ್ದಾರೆ. ಈ ಬಗ್ಗೆ ಯರಿಗೂ ಅನುಮಾನ ಬೇಡ.

ಕಟ್ಟಕಡೆಯ ಮನುಷ್ಯನಲ್ಲಿ ಸ್ಫೂರ್ತಿ, ಛಲ, ಆತ್ಮವಿಶ್ವಾಸ ತುಂಬಿದ್ದರ ಜೊತೆಗೇ ಅಧಿಕಾರ ಹಿಡಿಯುವ ಖಚಿತ ಹಾದಿಯನ್ನೂ ತೋರಿದ ಕಾನ್ಶೀರಾಂ ಇವತ್ತು ಎಲ್ಲ ದೃಷ್ಟಿಯಿಂದಲೂ ನಿಜವಾದ “ಭಾರತ ರತ್ನ”ವಾಗಿದ್ದಾರೆ. ಈ ಅಂಶವನ್ನು ಭಾರತದ ಅತ್ಯುನ್ನತ ಗೌರವವು ಈಗ ಅಧಿಕೃತಗೊಳಿಸಬೇಕು ಅಷ್ಟೆ.

‍ಲೇಖಕರು avadhi

January 31, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Nagaraj

    This is a biased opinion of somebody who doesnt understand the ground realities of India.
    To suggest that Sonia gandhi “sacrificed” the PM position itself is such a joke that the whole article loses credibility thereafter.
    & then Jyoti basu, who may be a gentleman, but represented the party of educated idiots and has pushed WB so far behind progress that his successor has to work overtime to get the state on par with an average performing state, let alone Gujarath. I dont know why people are so biased in India and just afraid to call a spade a spade. It looks like they make their mind who to like & dislike & then they make an argument to support that.
    IMHO, Bharatha ratna has lost its value & meaning long ago, so who cares who gets it anyways!

    ಪ್ರತಿಕ್ರಿಯೆ
  2. ಆಸು ಹೆಗ್ಡೆ

    ಭಾರತರತ್ನ ಎನ್ನುವ ಆ ಸರ್ವೋಚ್ಛ ಪ್ರಶಸ್ತಿಗೆ ಏನಾದರೂ ಈಗ ಏನಾದರೂ ಗೌರವ ಉಳಿದಿದೆಯೇ? ಭೋಫೋರ್ಸ್ ಹಗರಣದಲ್ಲಿ ಅನುಮಾನಾಸ್ಪದನಾಗಿದ್ದ ಮತ್ತು ಯೂನಿಯನ್ ಕಾರ್ಬೈಡಿನ ಆಂಡರ್ಸನ್ ಪಾರಾಗಲು ಪರೋಕ್ಷವಾಗಿ ಸಹಕರಿಸಿದ್ದ ಹಾಗೂ ಕೊನೆಗೆ, ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಗ್ನನಾಗಿದ್ದಾಗ ಉಗ್ರರ ದಾಳಿಗೆ ಬಲಿಯಾದ ರಾಜೀವ ಗಾಂಧಿ ಮುಂದೊಂದು ದಿನ ಭಾರತರತ್ನನೆನಿಸಿಕೊಳ್ಳುವ ಈ ನಾಡಿನಲ್ಲಿ ಹಾಗೂ ಸಿನೇಮಾ ಕ್ಷೇತ್ರದಲ್ಲಿನ ನಟನೆಯನ್ನು ರಾಜಕೀಯ ಕ್ಷೇತ್ರದಲ್ಲೂ ಯಶಸ್ವಿಗೊಳಿಸಿದ ಎಂ.ಜಿ.ಆರ್ ಎನ್ನುವ ನಟನೋರ್ವ ಭಾರತರತ್ನನೆಂದು ಕರೆಯಲ್ಪಡುವ ಈ ನಾಡಿನಲ್ಲಿ, ಭಾರತ ರತ್ನ ಎನ್ನುವ ಪದಕ್ಕೆ ಅಥವಾ ಆ ಪ್ರಶಸ್ತಿಗೆ ಏನಾದರೂ ಗೌರವ ಉಳಿದಿದೇಯೇ? ಜ್ಯೊತಿ ಬಸು ಮತ್ತು ವಾಜಪೇಯಿಯವರಿಗೆ ಈ ಪ್ರಶಸ್ತಿಯನ್ನು ನೀಡಿ, ಅವರೀರ್ವರನ್ನು ದಯವಿಟ್ಟು ಅವಮಾನ ಮಾಡದಿರಿ ಎನ್ನುವುದೇ ನನ್ನ ಬಿನ್ನಹ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: