ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡು ಹೂವಿನ ಸೊಲ್ಲು : ಹೀಗೊಂದು ಮದುವೆ ಆಟ…

ಮದುವೆ ಆಟ

ರೇಣುಕಾ ನಿಡಗುಂದಿ

ತನ್ನ ವಯಸ್ಸಿನ ಹುಡುಗಿಯರಿನ್ನೂ ಆಟವಾಡಿಕೊಂಡು, ಈಗಷ್ಟೇ ಅರಳಿ ಎದ್ದು ಕಾಣುವ ಎದೆಯನ್ನು ಮುಚ್ಚಲೋ ಎಂಬಂತೆ ಎದೆಗೆ ಎರಡು ಪುಸ್ತಕ ಅವಿಚಿಕೊಂಡು ಪಿಯೂ ಕಾಲೇಜಿಗೆ ಹೋಗುವಾಗಲೇ ಅವಳ ಮದುವೆಯ ಆಟವೊಂದನ್ನು ಮನೆಯಲ್ಲಿ ನಿರ್ಧರಿಸಿಯಾಗಿತ್ತು. ಬಾಂಬೆ ಡೈಯಿಂಗ್ ಬಟ್ಟೆಯ ಮೆದು ನೂಲಿನ ಪುಟ್ಟ ಹೂಗಳ ಹೊಸ ಲಂಗ , ಅವ್ವನೇ ಹೊಲಿದ ಹೊಸ ಬ್ಲೌಸು ಕಪಾಟಿನಲ್ಲಿ ಮಡಿಕೆ ಮುದುಡದೇ ಕೂತಿತ್ತು. ಅವಳು ಹೆಜ್ಜೆ ಇಟ್ಟಲೆಲ್ಲ ಗೆಜ್ಜೆ ಕಾಲಿನ ಘುಂಘುರುಗಳದೇ ಮಾತು. ಕಿಲಿ ಕಿಲಿ ನಗು, ಹೋದಲೆಲ್ಲ ಗಲ ಗಲ ಬಳೆ ನಿನಾದ. ಪಡಸಾಲೆ ತುಂಬ ದೊಡ್ದವರ ದೊಡ್ಡಾಟ. ಚಿಕ್ಕಿ, ಕಾಕೂ , ಮಾಮಿ ಅಜ್ಜಿ ಅತ್ತೆ, ಎಲ್ಲ ಕೂತು ಹಪ್ಪಳ ಲಟ್ಟಿಸುವುದರಲ್ಲೂ ಒಂಥರಾ ಆಟವೇ ಅನಿಸುತ್ತಿತ್ತು. ಇದೇ ಈಗ ಸಂಜೆ ಇಳಿದು ಬಿಸಿಲು ತಮ್ಮ ಹರಿಕಲ್ಲಿನಲ್ಲಿ ಇಳಿಯುವಾಗಲೆಲ್ಲ ಅವನು ಕಾಲೇಜು ಮುಗಿಸಿ ಹೋಗುವ ಸಮಯ. ಅವಳ ಮನಸ್ಸು ಅವನ ಮೃದುಗೂದಲಲ್ಲೇ ಆಡುತ್ತಿದ್ದರೆ, ಇವರು ಒಳಗಡೆ ಚುರುಮರಿಗೆ ಘಮ್ಮೆನ್ನು ಒಗ್ಗರಣೆ ಹಾಕುತ್ತಿದ್ದಾರೆ. ಥೂ ….ಯಾಕೆ ಹೀಗೆ ? ಯಾವುದೂ ನಾವಂದುಕೊಂಡಂತೆ ಆಗುವುದಿಲ್ಲ. ಎಲ್ಲವೂ ಒಂದು ನಿರ್ಧಿಷ್ಟ ಕಾಲಕ್ಕೆ ಹೀಗೆ ಹೀಗೇ ಆಗಬೇಕೆಂದಿದೆಯಲ್ಲ.

ಹೀಗೂ ಬಿಡದೇ ಕಾಡುವ , ಎದ್ದರೆ ಕೂತರೆ ಪಾತ್ರಗಳೂ ಮಾತಾಡಿದಂತಾಗುವ ಖ್ಯಾತ ನಾಟಕಕಾರ, ಕವಿ ಎಚ್.ಎಸ್. ಶಿವಪ್ರಕಾಶ್ ಅವರ ಮದುವೆ ಆಟಗಳು ಮನಸ್ಸನ್ನು ಆವರಿಸಿಕೊಳ್ಳುವಂತೆ ಈ ಲೋಕದ ಆಟವೂ ಮನಸ್ಸನ್ನು ಕಲಕುತ್ತದೆ. ’ ಮದುವೆ ಹೆಣ್ಣು’ ನಾಟಕದ ಬುಡಕಟ್ಟು ಜನಾಂಗದ ಪಾಪದ ಹೆಣ್ಣು ವಿಧಿಯ ಆಟಕ್ಕೆ ಬಲಿಯಾಗುವ ಬೇಟ. ಆ ಬುಡಕಟ್ಟಿನ ಸಂಪ್ರದಾಯದಂತೆ ಮದುವೆಗೆ ಮೊದಲು ವರನು ಗಂಡಾಳಿನ ತಲೆಬುರುಡೆಯೊಂದನ್ನು ವಧು ದಕ್ಷಿಣೆಯಾಗಿ ವಧುವಿನ ತಂದೆತಾಯಿರಿಗೆ ಕೊಡಲು ಕಾಡಿನಲ್ಲಿ ಅಲೆಯುತ್ತಿರುವಾಗ, ಮಳೆಯ ಹಾಗೂ ಕತ್ತಲೆಯ ಕಾರಣದಿಂದ ಗೊತ್ತಾಗದೆ ತಾನು ವಿವಾಹವಾಗಲಿರುವ ತರುಣಿಯನ್ನೇ ಕೊಂದು ಅವಳ ತಲೆಬುರುಡೆಯನ್ನು ತರುತ್ತಾನೆ. ಇಲ್ಲಿ ಗಂಡು ಹೆಣ್ಣು ಇಬ್ಬರೂ ವಿಧಿಯ ಆಟಕ್ಕೆ ಬಲಿಯಾಗುತ್ತಾರೆ.
`ಕಸಂದ್ರ` ಎಂಬ ಎರಡನೆಯ ನಾಟಕದಲ್ಲಿ, ಹೆಲನ್ ಮತ್ತು ಪ್ಯಾರಿಸ್ ಇವರುಗಳ ವಿವಾಹೇತರ ಪ್ರೇಮ-ಕಾಮಗಳ ಕಾರಣದಿಂದ ಪ್ರಾರಂಭವಾಗುವ ಟ್ರಾಯ್ ಯುದ್ಧದಲ್ಲಿ ಅಲ್ಲಿನ ರಾಜಪುತ್ರಿ ಕಸಂದ್ರ ಗ್ರೀಕರ ಸೇನಾನಿ ಅಗಮೆಮ್ನಾನ್ ಗೆ ಸೆರೆಯಾಗಿ, ಅವನ ದಾಸಿಯಾಗಿ ಗ್ರೀಸ್ ಗೆ ಹೋಗಿ, ಅಲ್ಲಿ ದುರ್ಮರಣಕ್ಕೆ ಬಲಿಯಾಗುವ ಗ್ರೀಕ್ ನಾಟಕದ ’ಕಸಾಂದ್ರ’ ಮತ್ತೆ ಮತ್ತೆ ಕಾಡುತ್ತಾಳೆ. ಪ್ರೇಮ -ಕಾಮದ ಯುದ್ಧ. ಭವಿಷ್ಯವನ್ನೇ ನುಡಿಯುವ ಕಾಸಾಂದ್ರಳ ಭವಿಷ್ಯವಾಣಿಯನ್ನು ಯಾರೂ ನಂಬದಿರುವ ದುರಂತ, ಶಿವ ಮತ್ತು ದಕ್ಷನ ಸಂಘರ್ಷ, ಅಪಮಾನವನ್ನು ತಾಳದೇ ದಾಕ್ಷಾಯಣಿ ಯಜ್ಞಕುಂಡಕ್ಕೆ ಆಹುತಿಗೊಳ್ಳುವ ’ಸತಿ’, ಈ
ಮೂರೂ ನಾಟಕಗಳಿಗಿಂತ ಭಿನ್ನವಾದುದು `ಮಕರಚಂದ್ರ`. ಇದರಲ್ಲಿ, ಕೆಳ ವರ್ಗದ ಜಾಡಮಾಲಿಯೊಬ್ಬನು ತನ್ನೆದುರು ಮನೆಯಲ್ಲಿರುವ ಸುಂದರ ನಟಿಯೊಬ್ಬಳ ನೀಳ ರೇಷ್ಮೆ ಕೂದಲನ್ನು ನೋಡಿ ಅವಳನ್ನು ಮೋಹಿಸುತ್ತಾನೆ ಮತ್ತು ಅವಳಿಗೆ ಭಾವುಕ ಪ್ರೇಮಪತ್ರಗಳನ್ನು ಬರೆಯುತ್ತಾನೆ. ಆ ಪತ್ರಗಳಿಂದ ಆ ನಟಿ ಆರ್ಕತಳಾದರೂ ಅವನ ಸಾಮಾಜಿಕ ಅಂತಸ್ತನ್ನು ಅರಿತ ಕೂಡಲೇ ಅವನ ಪ್ರೇಮವನ್ನು ತಿರಸ್ಕರಿಸುತ್ತಾಳೆ ಮತ್ತು ಆ ತಿರಸ್ಕಾರವನ್ನು ಸಹಿಸಿಕೊಳ್ಳಲಾರದೆ ಆ ಬಡ ಜಾಡಮಾಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿ, ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆ ಬೇಟೆಯಾಡುತ್ತದೆ ’ಮಕರಚಂದ್ರ’ ನಾಟಕದಲ್ಲಿನ ವಿಚಿತ್ರ ಪ್ರೇಮ, ನವಿರಾದ ಭಾವ, ’ಇವೆಲ್ಲ ನಾಟಕಗಳ ಪಾತ್ರಗಳೆಲ್ಲ ಕಣ್ಣುಮುಂದೆ ದುತ್ತೆಂದು ನರ್ತಿಸಿತೊಡಗಿದಾಗ ಬದುಕಿನ ಬಗೆಗೆ ಒಂದು ಸಂಕೀರ್ಣತೆಯುಂಟಾಗಿ ಬೆಚ್ಚುವಂತಾಗುತ್ತದೆ. ಇಡೀ ಸಮಾಜ ವ್ಯವಸ್ಥೆ ಹೆಣ್ಣಿನೊಡನೆ ಬೇಟೆಯಾಡುತ್ತಿರುವ ತಲ್ಲಣ. ಬದುಕಿನಲ್ಲಿ ತಾವಾಗೇ ಘಟಿಸುವ ಘಟನೆಗಳು, ಪಾತ್ರಗಳು ಎಲ್ಲವೂ ಮಕ್ಕಳಾಟದಂತೆಯೇ ಒಮ್ಮೊಮ್ಮೆ ನಾಟಕೀಯವೆನಿಸಿ ಹಾಸ್ಯಾಸ್ಪದವೂ ಆಗಿರುತ್ತವೆ. ವಿಷಣ್ಣವೂ ಆಗಿರುತ್ತವೆ.

ಅಂದೂ ಅಲ್ಲೊಂದು ಆಟ ನಡೆಯುತ್ತಿತ್ತು. ನೆಂಟರಿಷ್ಟರು, ಒಬ್ಬಳೇ ಒಬ್ಬ ಗೆಳತಿಯ ಮುಂದೆ ಹಿಡಿಯಾಗುವ , ಹನಿಯಾಗುವ ಆಟ. ಎದುರೇ ಕೂತ ತನ್ನನ್ನೇ ನೋಡುತ್ತಿದ್ದ ಡಾಕ್ಟರನನ್ನು ನೋಡಲಾರದ ಸಂಕಟ, ನಾಚಿಕೆ. ಎಲ್ಲವನ್ನೂ ಅಗ್ನಿಗೆ ಆಹುತಿ ಹಾಕಿ ಸ್ವಾಹಾ ..ಸ್ವಾಹಾ ಹೇಳಿಸುತ್ತಿದ್ದ ಭಟ್ಟರು. ಹೋಮ -ಹವನದ ಹೊಗೆಯಲ್ಲಿ ಕಣ್ಣಲ್ಲಿ ನೀರಿಳಿಯುತ್ತಿತ್ತು. ಮುಖವೆಲ್ಲ ಕೆಂಪು. ವಿಪರೀತ ಕಣ್ಣುರಿ. ಅವತ್ತೂ ಜ್ವರ ಏರಿ ತೋರಿಸಿಕೊಳ್ಳಲು ಇದೇ ಡಾಕ್ಟರ್ ಕ್ಲಿನಿಕ್ಕಿಗೆ ಹೋದಾಗ ನನಗಿಂತ ಅವನಿಗೇ ಜ್ವರ ಬಂದವನಂತೆ ಬೆವರುತ್ತಿದ್ದ. ದೊಡ್ದತ್ತೆ ಯಾಕೆ ಹಾಗೆ ಹೇಳಿದಳೋ ಗೊತ್ತಿಲ್ಲ, ಅವನಿಗೂ ಹೆಣ್ಣು ಹುಡುಕುತ್ತಿದ್ದಾರೆ ಎಂದು. ಯಾಕೆ ಕೇಳಲಿಲ್ಲ ಅವನು- ಮದುವೆಯಾಗ್ತೀಯಾ ? ಅಂತಾ. ನೆನೆಸಿಕೊಂಡರೆ ಜೋರಾಗಿ ಅತ್ತುಬಿಡಬೇಕೆನಿಸುತ್ತದೆ. ಅವನಿಗೆ ಗೊತ್ತಿತ್ತಾ…ತಾನು ಬೇಗ ಸಾಯುತ್ತೇನೆಂದು ! ಎವೆಯಿಕ್ಕದೇ ಕಣ್ಣು ತುಂಬಿಕೊಂಡ ಕಣ್ಣುಗಳು ಮುಚ್ಚಿಯೇ ಹೋಗುತ್ತವೆಂದು ಯಾರಿಗೆ ಗೊತ್ತಿತ್ತು ! ಅವನಿಗೆ ಏನಾಗಿತ್ತೋ ಗೊತ್ತಿಲ್ಲ, ಅವನು ತೀರಿಹೋದ, ಕ್ಲಿನಿಕ್ಕಿನ ಬಾಗಿಲು ಸದಾಕಾಲ ಮುಚ್ಚಿಹೋದವು. ಬಿಕ್ಕಳಿಕೆಗೂ ಒಂದು ಮಾತಂತಿದ್ದರೆ, ಅಕ್ಷರದಲ್ಲಿ ತುಂಬಿಸಿಡಬಹುದಿತ್ತು. ಅದಕ್ಕೆ ದನಿ ಇದೆ, ಲಯವಿದೆ. ಜೀವ ಹಿಂಡುವ ದನಿಯಿದೆ. ಅವನ ಹೆಸರು ಮಾತ್ರ ಉಸಿರಲ್ಲೇ ಅಡಗಿಹೋಗಿದೆ.
ಮಸೂತಿ ದಾಟಿ ಇಬ್ಬರೂ ಉದ್ಡು ದುಡು ನಡೆದುಕೊಂಡು ಬಂದರೆ ಎತ್ತೆರದ ಮಾಳಿಗೆ ಮೇಲೆ ನಿಂತು ಖಾಜಿ ಮನೆಯ ಹೆಂಗಸರು ಹಿತ್ತಲ ಕಡೆ ಮುಖಮಾಡಿ ಮದುವೆ ಹೆಣ್ಣನ್ನು ನೋಡುತ್ತಿದ್ದಾರೆ. ಥೂ….ನಮಗೂ ಬುರಖಾನೋ…ಘುಂಘಟವೋ ಇದ್ದಿದ್ದರೆ ಚೆನ್ನಾಗಿತ್ತು. ಮಾರವಾಡಿಗಳ ಮದುಮಕ್ಕಳಿಗೆ ಎಂಥ ಚೆಂದ ಕೆಂಪು ಮೇಲೊದಿಕೆ ಇರುತ್ತಪ್ದಪ್ಪಾ…. ಹಳಿ ಊರಿನ ಮದುವೆಗಳಲ್ಲಿ ಮದುಮಗಳಿಗೆ ಮೈತುಂಬ ಸೀರೆ , ತಲೆತುಂಬ ಸೆರಗು ಅಲ್ಲದೇ ಗುಲಾಬಿ ಬಣ್ಣದ ಮೇಲೊದಸು ಹಾಕಿ ಮುಚ್ಚಿಟ್ಟಂತೆ ಮಾಡಿರುತ್ತಾರೆ. ಅದೊಂದು ಮಾಂಸದ ಮುದ್ದೆ ತರ. ನಾಲ್ಕು ದಿನದಲ್ಲಿ ಅವರೇ ತೆರೆ ಸರಿಸಿ ಪಕ್ಕದ ಓಣಿ ನೀರಿಗೆ ಹೋದಾಗಲೇ ಹೊಸ ಮಾಲಗಿತ್ತಿಯ ಆಡಂಬರವನ್ನು ಕಾಣುವುದು. ಮಾಳಿಗೆ ಮೇಲೆ ಖಾಜಿ ಮನೆಯ ಮುಸ್ಲಿಂ ಹೆಣ್ಣುಮಕ್ಕಳು ಹಲ್ಲು ಕಿರಿದು ನಿಂತ ಮದುವೆ ಹೆಣ್ನನ್ನು ನೋಡಿ ನಗುತ್ತಿದ್ದಾರೆ. ಸಿನೆಮಾ, ಸೀರಿಯಲ್ ಗಳಲ್ಲಿ ನೋಡುವಂತೆ ಮದುಮಗಳನ್ನು ಮನೆತುಂಬಿಸಿಕೊಳ್ಳಲು ಆರತಿಯೂ ಇಲ್ಲ, ಒಳಗೆ ಕರೆಯುವವರೂ ಇಲ್ಲ…! ಅಬ್ಬಾ!! ಸಧ್ಯ ಆಟ ಮುಗಿಯಿತು. ನಾ ಮನೆಗೆ ಹೊರಟೆ ಎನ್ನುವ ಅವಳನ್ನು ತಡಿ ತಡಿ ಅಜ್ಜ ಬರಲಿ, ಹೇಳಿ ಹೋಗುವಿಯಂತೆ ಎಂದು ಹುಡುಗ ತಡೆದು ನಿಲ್ಲಿಸಿದ. ಆಯಿತು, ಪೇರಲ ಮರದಲ್ಲಿ ಹಣ್ಣುಗಳೆಷ್ಟು, ದೋರೆ ಕಾಯಿಗಳೆಷ್ಟು ನೋಡು. ನಂಗೊಂದೆರಡು ಕಿತ್ತು ಕೊಡು ! ಹುಡುಗಿಯ ಆಜ್ಞೆ. ಅದು ಕೋರಿಕೆ ಹೇಗಾದೀತು ? ಇವನೇನು ದೊಡ್ಡ ಸೂರ್ಯ -ಚಂದ್ರಾಮನೇ ! ಎಷ್ಟು ಸರ್ತಿ ತನ್ನನ್ನು ಹೊಡೆದಿಲ್ಲ. ಎಷ್ಟು ಸರ್ತಿ ಅವ್ವನಿಗೆ ಚಾಡಿ ಹೇಳಿಲ್ಲ.
ಅವಳು ಬೆರಳೆತ್ತಿ ತೋರಿದ ದೋರೆ ಪೇರಲಹಣ್ಣನ್ನು ಅವನು ಕಿತ್ತು ಕೊಟ್ಟ. ಅಷ್ಟರಲ್ಲೇ ಅಜ್ಜ.ಅಜ್ಜಿ, ಮಾಮ – ಮಾಮಿ ಎಲ್ಲ ಹಿಂಡು ಹಿಂಡಾಗಿಯೇ ಬಂದರು. ಏನೋ ಹುಡುಗಿಯನ್ನು ಹೀಗಾ ಓಡಿಸಿಕೊಂಡು ಬರೋದು ! ಎಂದೆಲ್ಲ ಹುಡೂಗ ನಾಚುವಂತೆ ಚೇಷ್ಟೆಗೆ ತೊಡಗಿದರು. ಮದುವೆಯಾಟ ಮುಗಿದು ಮನೆಗೆ ಹೋಗಿ ಈ ರೇಷ್ಮೆ ಸೀರೆ ಕಿತ್ತು ಬಿಸಾಕಿ ತನ್ನ ಮ್ಯಾಕ್ಸಿಯನ್ನು ತೊಟ್ಟರೆ ಸಾಕೆಂದು ಹುಡುಗಿ ಒದ್ದಾಡುತ್ತಿದ್ದಳು. ಅಜ್ಜ ಸುಸ್ತಾದವನಂತೆ ಇಸೀ ಚೇರಿನಲ್ಲಿ ಹೋಗಿ ಉಸ್ಸೆಂದು ಮೈ ಚೆಲ್ಲಿ ಕೂತ. ಅಜ್ಜನ ಬೆನ್ನಿಗೆ ಕೂಸು ಮರಿಯಂತೆ ಬಿದ್ದ ಹುಡುಗಿ, ಅಜ್ಜನಿಗೆ ಗೋಗರೆಯಿತು – ಅಜ್ಜಾ…ಆಯಿತು ನಾ ಮನೆಗೋಗ್ತೀನಿ…! ಇದೇ ಮನೆಯಮ್ಮಾ ನಿಂಗೆ ಇನ್ನು ಮೇಲೆ, ನಿನ್ನ ಗಂಡನಿಗೆ ಹೇಳಿಹೋಗು – ಏನೇನೋ ಅನ್ನಬೇಕು ಅಂದುಕೊಂಡ ಅಜ್ನ್ನ ಆದ್ರೆ ಬಾಯಿಯೇ ಬರಲಿಲ್ಲ. ಹೋದ್ರೆ ಹೋಗಲಿ,ಎಲ್ಲಿಗೆ ಹೋಗ್ತಾಳೆ…ಅಂದುಕೊಂಡನೋ ಏನೋ- ಆಯ್ತವ್ವಾ ಹೋಗ್ ಬಾ”’….. ಮದುವೆ ಹೆಣ್ಣು ಬಿಟ್ಟಬಾಣದಂತೆ ನೆಗೆದು ಚಿಗರಿಯಂತೆ ಮನೆಕಡೆ ಓಡಿದಳು. ಇವತ್ತಿನ ಆಟ ಮುಗಿಯಿತೆಂಬಂತೆ …!!
 

‍ಲೇಖಕರು avadhi

14 September, 2013

2 Comments

  1. ರಮೇಶ್ ಹಿರೇಜಂಬೂರು

    ಲೇಖನ ಚೆನ್ನಾಗಿದೆ. ಎಚ್.ಎಸ್.ಶಿವಪ್ರಕಾಶ್‌ ಅವರ ಬರವಣಿಗೆಯೇ ಹಾಗೆ, ನವಿರಾದ ಭಾವನೆಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ತೆರೆದಿಡುವ ತಾಕತ್ತು ಅವರದು.
    -ರಮೇಶ್ ಹಿರೇಜಂಬೂರು

  2. bharathi b v

    Yaavudo lokakke Hoda haage ansthu …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading