ರೇಣುಕಾ ನಿಡಗುಂದಿ
ಮಳೆಗಾಲದ ಇಳಿಸಂಜೆಯಲ್ಲಿ ದೊಡ್ದ ಮಳೆ ಸುರಿದರೆ ಟ್ರ್ಯಾಫಿಕ್ಕಲ್ಲಿ ಸಿಗುವ ಭಯದಲ್ಲಿ ಹೆಜ್ಜೆ ಓಡುವ ನಡೆಯಾಗುತ್ತದೆ. ಮಳೆಯನ್ನು ಆನಂದಿಸಿ ಯುಗವೇ ಕಳೆದ ಹಾಗಿದೆ. ಒಮ್ಮೆ ಸುರಿದು ಬರಿದಾಗುವೆನೆಂಬಂತೆ ಧೋಗುಟ್ಟು ಸುರಿವ ಮಳೆಯನ್ನು ಬೊಗಸೆಯಲ್ಲಿ ಹಿಡಿಯಲಾರದೇ, ಎದೆಗೊಂಚೂರು – ಕಣ್ಣಲ್ಲೊಂಚೂರು ತುಂಬಿಕೊಳ್ಳುವಾಗೆಲ್ಲ ನನ್ನೂರಿನ ಮನೆಯ ಕರೀ ಹೆಂಚಿನ ಮೇಲೆ ಸುರಿವ ಮಳೆ ನೆನಪಾಗುತ್ತದೆ. ಕರಿ ಹೆಂಚಿಗೂ ಮಳೆಗೂ ಇರುವ ಮೋಹದ ಋಣ , ಪ್ರೇಮಾನುಬಂಧ ಈಗಿನ ಕಾಂಕ್ರೀಟಿನ ಮಾಡಿಗೆಲ್ಲಿ ? ಹೆಂಚು ಮುರಿದುಹೋಗುವಂತೆ ಸುರಿವ ಅರ್ಭಟವೆಲ್ಲ ಅಡಗಿದ ನಂತರದ ಲಯಬದ್ಧ ಹನಿಗಳ ನಾದ, ತಟ ತಟ., ಪಟ ಪಟ , ತದಗಿನತೋಂ…ತೋಂ ಸಂಗೀತದ ನಾದ ಈಗಲೂ ಕಿವಿಯಲ್ಲಿಯೇ ತುಂಬಿದೆ. ಮಳೆಯನ್ನು ನೋಡುತ್ತ ಕೂರುವ ಸುಖ ಪದಗಳಿಗೆ ನಿಲುಕದು. ಮನಸ್ಸು ತುಂಬ ’ಈ ಹಸಿರು ಸಿರಿಯಲಿ, ಮನಸು ಮೆರೆಯಲಿ …ಹಾಡು ಗುನುಗುನಿಸುತ್ತಿರುತ್ತದೆ.

ಊರಲ್ಲಿ ತುಂಬ ಮಳೆ, ನೀನೊಮ್ಮೆ ಈ ಸೋನೆ ಸುರಿಯುವ ಮಳೆಗಾಲಕ್ಕೆ ಬಾರೆ …ಹಳ್ಳ, ಕೊಳ್ಳ, ತೊರೆಯೆಲ್ಲ ತುಂಬಿ ಹರಿಯುತ್ತಿದೆ – ಎಂದು ಕರೆಯುವ ಅವನ ಕರೆ ಒಳಗೊಳಗೆ ಸೆಳೆಯುತ್ತಿರುತ್ತದೆ. ಇಲ್ಲಿರಲಾರೆ..ಅಲ್ಲಿಗೆ ಹೋಗಲಾರದ ತಲ್ಲಣ. ಮಳೆಯೆಂದರೆ ಏಕೆ ಈ ಹುಚ್ಚು ? ಏಕೆ ಈ ಉನ್ಮಾದ ? ಧುಮುಗುಡುವ ಬಯಕೆ, ಹರಿಯುವ ಆಸೆ, ಸುರಿವ ಸೆಳೆತದ ಮೊತ್ತ ಉಕ್ಕಿ ಹರಿವ ಸಂತಸದ ಹೊಳೆ. ಬಾನು – ಭುವಿ, ಮೋಡ- ಮಿಂಚು, ಮಳೆ- ಇಳೆ, ಹಸಿರಿಗೂ ಚೆಲುವಿಗೂ ಎಲ್ಲ ಜೊತೆಯ ನಂಟು. ಒಂದು ಬಿಟ್ಟು ಇನ್ನೊಂದಿಲ್ಲ. ಪ್ರಕೃತಿ -ಪುರುಷ, ಶಿವ -ಶಕ್ತಿ ಎಲ್ಲ ಒಂದರಲ್ಲಿ ಇನ್ನೊಂದರ ಐಕ್ಯವಾಗುವ, ಜೊತೆಯಾಗಿ ನಡೆಯುವ ಲೋಕದ ಅವಿನಾಭಾವ ಅನುಬಂಧ. ಅದರಲ್ಲೂ ಮೊದಲ ಮಳೆ ಬಿದ್ದ ಇಳೆ ಘಮ್ಮೆನ್ನುವ ಪುಳಕ ಹೊತ್ತು ಬರುವ ತಂಗಾಳಿ ಕಚಗುಳಿಯಿಡುತ್ತದೆ.
ನನ್ನೂರಿನ ಮಳೆಗಾಲದಲ್ಲಿ ರಾಡಿ ರೊಜ್ಜು ಮೊಣಕಾಲು ಮಟ ಸಿಡಿಸಿಕೊಂಡು, ನೆನೆದುಕೊಂಡು ಬರುವ ಸುಭಾಸ್ ರೋಡ್ ರಸ್ತೆ, ಗಾಂಧೀಚೌಕಿನ ಹಸಿ ಹಸಿ ಟಾರು ರೋಡಿನಾಚೆಗೂ ಮಿಂಚು ಮುಗಿಲಿನ ಮಾರಿ ಮೇಲೆ ಕಾಮನಬಿಲ್ಲು ಮೂಡುವ ರಮ್ಯತೆಯನ್ನು ಕಣ್ಣು ಹಿಗ್ಗಲಿಸಿಕೊಂಡು ನೋಡುತ್ತ, ಕುಣಿಯುತ್ತ ಮನೆಗೆ ಬರುತ್ತಿದ್ದ ದಿನಗಳು ನೆನಪಾಗುತ್ತವೆ. ಹಸಿ ನೆಲ, ಹಸಿ ಮಾಡು ಹಸಿಯಾದ ಹೊಸ ಲೋಕದ ಬಾಗಿಲ ಮುಂದೆ ಅಂಗಳದಲ್ಲಿ ಕೆನ್ನೀರ ಮಳೆ ಹೊಳೆ ಸಣ್ಣಗೇ ಹರಿಯುತ್ತಿರುವ ಹೊತ್ತಲ್ಲಿ ನೋಟ್ ಬುಕ್ಕಿನ ಹಾಳೆಗಳನ್ನೇ ಪರ ಪರ ಹರಿದುಕೊಂಡು ಕಾಗದದ ದೋಣಿಮಾಡಿ ನೀರಿಗೆ ಇಳಿಬಿಡುವಾಗ ಸಮುದ್ರವನ್ನೇ ಬಾಚಿಕೊಂಡ ಆವೇಗ- ಆನಂದ. ಪುಟ್ಟ ಕಿಡಕಿಯ ಆಳವಾದ ಗೂಡಿನಲ್ಲಿ ಮುದುರಿಕೊಂಡು ಬೆಚ್ಚಗಿನ ಹುರಿಗಡಲೆ ಮೆಲ್ಲುತ್ತ ರೋಡಿನಲ್ಲಿ ಚಿನ್ನಾಟವಾಡುತ್ತಿರುವ ಮಳೆಯನ್ನು ನೋಡುವುದೆಷ್ಟು ಹಿತ. ನೀರು ನಿಂತ ಪುಟ್ಟ ಹಳ್ಳದಲ್ಲಿ ದೊಡ್ದ ಹನಿಗಳು ಬಿದ್ದು, ಅದು ಪುಟಿ ಪುಟಿದು ಕುಣಿಯುವ ನಲಿವನ್ನೂ, ಸಣ್ಣ ಹನಿಗಳು ಸೃಷ್ಟಿಸುವ ಸಣ್ಣ ವರ್ತುಲ ಹಿಗ್ಗಿನಲ್ಲಿ ಹಿಗ್ಗಿ ದೊಡ್ದ ವರ್ತುಲವಾಗಿ, ವರ್ತುಲವರ್ತುಲೊಳು ರಿಂಗಣಗೊಳ್ಳುವ ರಿಂಗಿನೊಳಾಟದಲ್ಲಿ ತಮ್ಮನೇ ಮರೆತಿರುವ ಮಳೆ ಹನಿಗಳಾಟ ಮರುಳು ಹಿಡಿಸುತ್ತಿತ್ತು.
ಈ ಮಳೆಗಾಲದ ನೆನಹಿನೊಂದಿಗೆ ಸರಸಿ ನೆನಪಾಗುತ್ತಾಳೆ. ಪುಟ್ಟ ಮನೆಯ ಕತ್ತಲು ಕವಿದ ಅಡುಗೆಮನೆಯ ನಿಗಿನಿಗಿಸುವ ಒಲೆಗೂಡಿನ ಪಕ್ಕದಲ್ಲಿ ಪ್ರೇಮಳ ಎದುರು ಬೆಕ್ಕಿನಂತೆ ಮುದುರಿಕೂತ ಸರಸಿಯ ಕತೆ. ನಾವೆಲ್ಲ ಪ್ರೇಮಕ್ಕನ ಸುತ್ತ ಒಲೆಗೂಡು ಪಕ್ಕಕೂತು ಆಕೆ ಸುಟ್ಟುಕೊಟ್ಟ ಹಪ್ಪಳ ಕುರುಕುತ್ತಿದ್ದೆವು. ಯಾವುದೋ ಒಂದು ಸುಂದರ ಕತೆಯೊಂದರ ಕೈ ಬೆರಳು ಹಿಡಿದು ಕೂತಂತೆ. ಸರಸಿಯ ಕೈ ಭಯದಲ್ಲಿ ತಣ್ಣಗೇ ಕೊರೆಯುತ್ತಿದ್ದವು. ಪ್ರೇಮಳ ಕೈಯಲ್ಲಿ ಆಕೆಗೆ ಬಂದ ಪ್ರೇಮ ಪತ್ರ. ಸರಸಿಗೆ ಕೇಳುವಷ್ಟು ಮಾತ್ರವೇ ಮೆಲುವಾಗಿ ಓದಿ ಹೇಳುತ್ತಿದ್ದಳು. ಇಂಥದ್ದೇ ಮಳೆಗಾಲದ ಬೋರು ಹೊಡೆಸುವ ಫಿಸಿಕ್ಸ್ ಕ್ಲಾಸು ನಡೆಯುತ್ತಿರುವಾಗ ಅವಳಿಗ್ಯಾರೋ ನಿನಗ್ಯಾರೋ ಕೇಳುತ್ತಿದ್ದಾರೆಂಬ ಕರೆಗೆ ಸರಸಿ ಹೊರಗೆ ಓಡಿದ್ದಳು.
ವಾಪಸ್ಸು ಮರಳಿದಾಗ ಅವಳ ಬಣ್ಣವೆಲ್ಲ ತುಂತುರು ಮಳೆಗೆ ಸಿಕ್ಕು ನೆನೆದುಹೋದ ಹಳದಿ ಎಲೆಯಂತಾಗಿತ್ತು. ಮುಷ್ಟಿಯಲ್ಲಿ ಅಡಗಿಸಿದ್ದನ್ನು ಹೇಗೋ ಪಾಟೀಚೀಲದಲ್ಲಿ ತುರುಕಿಸಿಟ್ಟ ಸರಸಿ ಫಿಸಿಕ್ಸ್ ಕ್ಲಾಸು ಮುಗಿಯುವವರೆಗೂ ಭಯದಲ್ಲಿ ಜೀವಹಿಡಿದು ಕೂತಿದ್ದಳು. ಸಧ್ಯ ಆ ದರಿದ್ರ ಫಿಸಿಕ್ಸ್ ಟೀಚರು ಅದೇನು ತೊರ್ಸು ಅನ್ನಲಿಲ್ಲ. ಏನಿದೆಯೋ ಒಳಗೆ? ಯಾಕೆ ಅವನು ಹಾಗೆ ತನ್ನ ಸ್ಕೂಲಿನವರೆಗೂ ಬಂದು ಕೊಟ್ಟುಹೋದನೆಂದೂ ಅವಳಿಗೆ ಸಿಟ್ಟು, ಕುತೂಹಲ, ಭ್ರಮೆ, ಭಯದಲ್ಲಿ ತಲೆತಗ್ಗಿಸಿದ್ದಳು. ಸಧ್ಯ ಟೀಚರ್ ಅವಳಿಗೆ ಯಾವ ಪ್ರಶ್ನೆಯನ್ನೂ ಎಸೆಯಲಿಲ್ಲ. ನಾವೆಲ್ಲ ಮನೆಗೋಡುವ ದಾರಿಯಲ್ಲಿ ಪೀಡಿಸಿದರೂ ಏನೂ ಹೇಳಲಿಲ್ಲ. ಪಾಪ ಅವಳದನ್ನು ಮುಟ್ಟಿಯೂ ಇದ್ದಿಲ್ಲ. ಏನೇ ಆದರೂ ನಮ್ಮ ಪ್ರೇಮಕ್ಕನ ಹತ್ತಿರವೇ ತೋರ್ಸೋದು ಅಂತ ತೀರ್ಮಾನಿಸಿದ್ದೆವು.
ಮನೆಯಲ್ಲಿ ಪಾಟಿಚೀಲ ಎಸೆದು ಪ್ರೇಮಕ್ಕನ ಮನೆಗೆ ಓಡಿದ್ದೆವು. ಲೈಟಿಲ್ಲದ ಮನೆಯಲ್ಲಿ ಚಿಮಣಿ ದೀಪ ಹಚ್ಚಿಕೊಂಡು, ಲಾಟೀನು ಬೆಳಗಿಸಿಕೊಂಡು ಓದುವ ಅವಳ ಮನೆಯಲ್ಲಿ ಒಂಥರಾ ಆಪ್ತತೆ. ಎಂಥದೋ ಶಾಂತಿ, ನೆಮ್ಮದಿ ನೆಲೆಸಿರುತ್ತಿತ್ತು. ಕತ್ತಲು ಆವರಿಸಿದ ಅಡುಗೆಕೋಣೆಯಲ್ಲಿ ಒಲೆ ಮುಂದೆ ಅನ್ನ ಕುದಿಸುತ್ತ ಕುರುಡು ಬೆಳಕಿನಲ್ಲಿ ಪತ್ರ ಓದುತ್ತಿದ್ದ ಪ್ರೇಮಕ್ಕ ಆಗಾಗ ಮುಗುಳು ನಗುತ್ತಿದ್ದಳು. ಸರಸಿಗೆ ಬಂದ ಮೊದಲ ಪ್ರೇಮ ಪತ್ರ !! ಅದೂ ನಾಲ್ಕು ಪುಟಗಳಷ್ಟು. ಏನು ಬರೆದಿದ್ದನಪ್ಪ ಅಷ್ಟು. ಅದನ್ನು ಓದುವ, ಅಪೇಕ್ಷಿಸುವ ವಯಸ್ಸಲ್ಲದ ಸರಸಿ ನೀನೆ ಈ ಪತ್ರ ಇಟ್ಟುಕೋ ಪ್ರೇಮಕ್ಕ ಎಂದಿದ್ದು ಇನ್ನೂ ನೆನಪಿದೆ. ಹರಿದು ಒಲೆಗೆ ಹಾಕಿದ್ದನ್ನು ಮುಂದೆ ಹೇಳಿಕೊಂಡಿದ್ದಳು. ಮುಗ್ಧ ಮನಸ್ಸಿನ ಎದೆಯಲ್ಲಿ ಬಿದ್ದ ಮೊದಲ ಹನಿ. ಪ್ರೇಮವೆಂಬ ಹೆಸರಿನ ಕಂಪೂ ಗೊತ್ತಿರದ ಇಳೆಗೆ ಬಿದ್ದ ಬೆಚ್ಚನೆಯ ಭಾವ ಬೀಜವೊಂದು ಊರಿ ಮೊಳಕೆ ಒಡೆದ ಸದ್ದು ಅರಿವಿಗೆ ಬರಲಿಲ್ಲ.

ಮೊದಲ ಮಳೆಯಲ್ಲಿ ಮಿಂದು ಕಂಪು ಸೂಸುವ ಇಳೆಯ ಸೊಬಗನ್ನು ನೋಡುವಾಗೆಲ್ಲ ಸರಸಿಗೆ ತಾ ಓದದೇ ಹೋದ ಮೊದಲ ಪತ್ರ ನೆನಪಾಗುತ್ತದೆ. ಜತೆಗೆ ಅವನೂ. ದಿನಾ ರಸ್ತೆ ಪಕ್ಕ ಪಕ್ಕ ನಡೆಯುತ್ತ ಲೈನು ಹೊಡೆಯುವ ಅವನನ್ನು ನೋಡಲೂ ಭಯ. ಇಂಥದೇ ಮಳೆಗಾಲದ ಒಂದಿನ ನಾವಿಬ್ಬರೂ ಕೊಡೆ ಹಿಡಿದು ಬರುತ್ತಿದ್ದಾಗ ಶ್ರಿನಿವಾಸ್ ಟಾಕೀಜಿನ ಹತ್ತಿರ ಮತ್ತೆ ಅವನು ಕಂಡ. ಮಳೆಯಲ್ಲೆ ನೆನೆದುಕೊಂಡು ಜತೆ ಜತೆಗೆ ಹೆಜ್ಜೆಹಾಕುತ್ತಿದ್ದವನನ್ನು ನೋಡಿದ ಸರಸಿ ಯಾವ ಮಾಂತ್ರಿಕತೆಯಿಂದಲೋ – ’ ರೀ ತಗೋಳಿ-’ ಎಂದು ತನ್ನ ಕೊಡೆ ಅವನಿಗೆ ಕೊಟ್ಟು ತಾನು ನನ್ನ ಛತ್ರಿಯಲ್ಲಿ ಮುದುಡಿಕೊಂಡರೆ ಮುಖ ಸೂರ್ಯಕಾಂತಿಯಾಗಿ ಇಳಿಸಂಜೆ ಕೆಂಪೂ ಸೇರಿ ಮುಖ ಕಾಮನಬಿಲ್ಲಾಗಿತ್ತು. ಎಲ್ಲಿದ್ದ ? ಇದ್ದಕ್ಕಿದ್ದಂತೆ ಹೇಗೆ ಬಂದು ನಮ್ಮನ್ನು ಸೇರಿಕೊಂಡ ? ಬೇಕಿದ್ದರೆ ಅವನಿಗೆ ಆಫೀಸಿನ ಜೀಪೇ ಬರುತ್ತಿತ್ತು ಮನೆವರೆಗೆ ಬಿಟ್ಟುಕೊಡಲು. ಈ ಕಾಲುನಡಿಗೆ , ಕಾಯುವಿಕೆ ಎಲ್ಲ ಸರಸಿಗಾಗಿ ! ಅಬ್ಬಾ….!!
ಮುಂದೇನಾಯಿತು ಕತೆ ?
ಏನೂ ಅಗಲಿಲ್ಲ. ಅವನು ಅಪ್ಪ ಅಮ್ಮ ಒಪ್ಪಿದವಳನ್ನು ಮದುವೆಯಾಗಿ ಇವಳಿಗೆ ಪತ್ರ ಬರೆಯುತ್ತಲೇ ಕಾಲ ಕಳೆದ. ಇವಳು ಓದಿ ಪುಳಕಗೊಳ್ಳುತ್ತ ಮತ್ತೆ ಹರಿದುಹಾಕುತ್ತ ಉಳಿದಳು. ಒಂದು ನೆನಪಿಗೆಂತ ಕುರುಹಾಗಿಯೂ ಉಳಿದಿಲ್ಲ. ಮರೆತೇನೆಂದರೆ ಮರೆಯಲಿ ಹ್ಯಾಂಗ ? ಅನ್ನುವಂತೆ ಮೋಡವನ್ನೂ , ಮಳೆಯ ಕನಸನ್ನು ಹೊತ್ತುಕೊಂಡು ಹನಿ ಹನಿಯಾಗುತ್ತ, ಮಳೆ ಮಳೆಯಾಗುತ್ತ….ಮಳೆಯಿಲ್ಲದ ಹೊತ್ತಿನಲ್ಲಿ ಬಂಜರಾಗುತ್ತ, ಮತ್ತೆ ಹನಿಗಟ್ಟಿದ ಮೋಡದಲ್ಲಿ ಮರೆಯಾಗುತ್ತ, ಗುಡುಗು ಸಿಡಿಲಿನ ಸಂತೆಯಲ್ಲಿ ಕಳೆದುಹೋಗುತ್ತ ಭೂಮಿ ಮೇಲಿನ ಚಿಗುರು ಗರಿಕೆಯಾಗಿ ಹೋದಳು.






0 Comments