ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡು ಹೂವಿನ ಸೊಲ್ಲು : ಎದೆಯು ಮರಳಿ ತೊಳಲುತಿದೆ…

ಎದೆಯು ಮರಳಿ ತೊಳಲುತಿದೆ, ದೊರೆಯುದದನೆ ಹುಡುಕುತಿದೆ…

ರೇಣುಕಾ ನಿಡಗುಂದಿ

ಇಂಥದ್ದೇ ನೀಲ ನಿರಪೇಕ್ಷಿತ ಶುಭ್ರ ಆಗಸದ ಉನ್ಮತ್ತತೆಯಲ್ಲಿ ಮತ್ತೆ ಮತ್ತೆ ಇಲ್ಲವಾಗುವ ಇರುಳಿನ ಕನವರಿಕೆಯಲ್ಲೇ ತೊಳಲುತ್ತಿರುವೆ. ಇಲ್ಲೆ ಎಲ್ಲೋ ತನ್ನ ಹತ್ತಿರದಲ್ಲೇ ಪಿಸುನುಡಿಗಳು ಬಿಸಿಯುಸಿರಿನ ಲಯದಲ್ಲಿ ಲೀನವಾಗಿರುವ ಮತ್ತ ಸ್ಪರ್ಶದ ವಿಲಂಬಿತ ರಾತ್ರಿ. ತೊದಲು ನಲುಮಾತಿನ ಇಂಪಾದ ದನಿ ಸೆಳೆಯುತ್ತಿರುವ ಭಾವ ಮನ್ಮಥ ಕ್ಷಣ ಹೀಗೆ ಇದ್ದು ಬಿಡಲಿ ಎನಿಸುತ್ತಿತ್ತು. ಸುತ್ತಲೂ ತೆಳುಮಂಜಿನಂಥ ಕತ್ತಲು ಆವರಿಸುತ್ತಿತ್ತು. ಮೇಲೆ ಇಡೀ ಇರುಳನ್ನೇ ತನ್ನ ಬಿಂಬದಲ್ಲಿ ಬಂಧಿಸಿದಂತೆ ಬಿದಿಗೆಯ ಚಂದ್ರ ತುಂಟ ಕೃಷ್ಣನಂತೆ ನಗುತ್ತಲಿದ್ದ. ಚಕೋರ ಪಕ್ಷಿಯಂತೆ ಮನಸ್ಸು ತುಡಿಯುತಿತ್ತು. ಪೂರ್ವದಿಂದ ಬೀಸುವಗಾಳಿ ಯಮುನೆಯನ್ನು ಹಾಸಿಕೊಂಡೇ ತನ್ನೆಡೆಗೆ ಬರುತ್ತದೆ. ಚೂರು ಮರಳುಗಂಧ ಚೂರು ಪಾಚಿಗಂಧವನ್ನು ಹೊತ್ತ ನಲ್ಲಿರುಳಲ್ಲಿ ಅವನ ಮಡಿಲಲ್ಲಿ ಮಲಗಿ ಚುಕ್ಕಿಗಳನ್ನೆಣೆಸುವ ಕನಸೇ ಚೆನ್ನ. ಅದಕ್ಕೆ ಪೂರ್ಣಿಮೆಯ ಉನ್ಮತ್ತ ಚಂದ್ರನ ಮುಗ್ಧ ಮೋಹಕತೆ ವಿಹ್ವಲಗೊಳಿಸುತ್ತದೆ.

ಹೀಗೆ ಒಮ್ಮೆ ತನ್ನ ಮಡಿಲಲ್ಲಿ ತಲೆ ಇಟ್ಟು ಮಲಗಿದವನ ಮೇಲೆ ಬಾಗಿ ಹೂಮುತ್ತನ್ನೊತ್ತಿದ್ದು ಮೊನ್ನೆಯೋ ಎನ್ನುವಂತಿದೆ. ತನ್ನ ಅವನ ಜನುಮದ ಒಡನಾಟವೇ ವಿಸ್ಮಯ ಸೃಷ್ಟಿಸುತ್ತಿದ್ದ ದಿನಗಳು. ಇಬ್ಬರೂ ಒಂದೇ ಬಟ್ಟಲಲ್ಲಿ ಎಂಜಲು ತಿನ್ನತೊಡಗಿದ್ದು ಗೊತ್ತೇ ಆಗಿರಲಿಲ್ಲ ! ಗೆಳತಿಯರೊಡನೆ ವಾಗ್ವಾದಗಳಾದರೆ ಇವನು ಇವಳ ಪಕ್ಷಕ್ಕೆ ಟೊಂಕಕಟ್ಟಿ ನಿಲ್ಲುತ್ತಿದ್ದ. ಯಾರೂ ಏನೂ ಅನ್ನಬಾರದು ಆಕೆಯನ್ನು. ’ಏಯ್, ನಿಂಗ್ಯಾಕೆ ಬೇಕು ಅವರ ಸಹವಾಸ, ನೋವು ಕೊಡುವವರನ್ನು ದೂರ ಇಡು’ ಕೂತು ಬುದ್ಧಿಹೇಳುವಷ್ಟು ಕಾಳಜಿ ಅವನಿಗೆ. ಎಲ್ಲರೂ ’ಏ’ ರೇಟಿನ ಸಿನೇಮಾ ನೋಡಿಬಂದು ತನ್ನನ್ನು ಮಾತ್ರ ಬಿಟ್ಟುಹೋದರೆಂಬ ಅವಮಾನದ ಕಂಪ್ಲೇಟಿಗೆ, ಅವ ಮಗುವೊಂದನ್ನು ರಮಿಸುವವನಂತೆ ಅದೇ ಸಿನೇಮದ ಎರಡು ಟಿಕೇಟ್ ತಂದು ಮ್ಯಾಟಿನಿ ಶೋಗೆ ಕರೆದೊಯ್ದಾಗ ಇಡೀ ಆಕಾಶದ ನಕ್ಷತ್ರಗಳೆಲ್ಲ ಅವಳ ಬೊಗಸೆಯಲ್ಲೆ ನಕ್ಕಿದ್ದವು ! ನೋಡಿದ್ದೇನೋ ಕೇಳಿದ್ದೆನೋ ಒಂದೂ ನೆನಪಿಲ್ಲ. ಅವಳು ಕಂಡ ಮೊದಲ ವಯಸ್ಕರ ಸಿನೇಮ. ಅವನ ಪಕ್ಕದಲ್ಲಿ ಕುಳಿತು ಮುಖ ತೋರಿಸಲೂ ಆಗದ ನಾಚಿಕೆಯಿಂದ ಒದ್ದಾಡಿದ್ದಳು.
ಇಬ್ಬರ ತಕರಾರು ತುಂಟಾಟದಲ್ಲಿ ಅಪ್ಪಡಿಯಾ….ಎಂದು ಅವಳನ್ನು ಅಟ್ಟಿಸಿಕೊಂಡು ಓಡಿ ಸಿಕ್ಕ ತಕ್ಷಣವೇ ತೋಳಲ್ಲಿ ಅವುಚಿಹಿಡಿದು ಇನ್ನಿಲ್ಲದಂತೆ ಪ್ರೀತಿ ಸುರಿಸುವ ಮೋಹವೆಲ್ಲ ಗ್ರೀಷ್ಮದ ಬೆವರ ಬೇಸರಿಕೆಗೆ ಉರುಳಾಗಿ ಕಾಡುತ್ತದೆ. ಮಿಥುನದ ದಣಿವಿನಲಿ ಮಿಂದು ಮನ ತಣಿದ ಬೆಳಗು ಉಲ್ಲಸಿತವಾಗಿರುವಂತೆ ಹೊಚ್ಚ ಸೊಬಗಿನ ಬೆಳಗಿಗೆ ನಿಂತಲ್ಲಿ ನಿಲ್ಲಲಾರದೇ ಕೂತಲ್ಲಿ ಕೂರಲಾರದೆ ಚಡಪಡಿಸುತ್ತಾಳೆ. ಹಗಲು ಇರುಳಾಗಿ, ಇರುಳು ಕಾವ್ಯವಾಗುವ ಹುಮ್ಮಸ್ಸು. ಥೂ… ಈ ಬದುಕಿನಲ್ಲಿ ಅಳಲೂ ಸ್ವಾತಂತ್ರ್ಯವಿಲ್ಲ ಹೆಣ್ಣಿಗೆ. ಕಣ್ಣೀರಿಗೊಂದು ಕಥೆ ಇದ್ದೇ ಇರುತ್ತದೆನ್ನುವವರಿಗೆ ಕಥೆಯಾಗಬೇಕು. ಹೆರವರ ಅಳತೆಗೋಲಿನಲ್ಲಿ ಮೌಲ್ಯಮಾಪನವಾಗಬೇಕು. ಮೌನದಲ್ಲೇ ಅತ್ತು ಹಗುರಾಗುವ ನಿರಾಳತೆಗೆ ಹಂಬಲಿಸಿ ಕೂತಂತೆ ಭಾಸವಾಗುತ್ತದೆ ಒಮ್ಮೊಮ್ಮೆ. ತನ್ನೆಲ್ಲ ಚಡಪಡಿಕೆಗಳೂ, ಹಂಬಲಗಳೂ ಹಾಗೇ ದಿಕ್ಕಿಲ್ಲದ ದರವೇಶಿಯಂತಾಗಿ ಹೋದ ವಿಷಾದವೇ ಹೆಪ್ಪುಗಟ್ಟಿದೆ ! ಒಮ್ಮೆಯೂ ಕೇಳದ ಅವನ ನಿರ್ಲಿಪ್ತತೆಯನ್ನು ಒಗ್ಗಿಸಿಕೊಳ್ಳುತ್ತ ಬದುಕಿದ್ದಿದೆಯಲ್ಲ ಅದು ತನ್ನನ್ನೆ ಇರಿದು ಕೊಲ್ಲುತ್ತಿದೆ. ಇಬ್ಬರ ಸಾಲದ ಋಣ ಮುಗಿಯಿತೇ ? ಇಷ್ಟು ಬೇಗ…..

ಅವತ್ತು ಟ್ರೈನಿನಲ್ಲಿ ಕುಳಿತು ಕಿಟಕಿಯಿಂದಾಚೆ ಚೌಕಡಿ ಚೌಕಡಿ ಉಣ್ಣೆ ಶರ್ಟಿನಲ್ಲಿ ನಿಂತವನ ಕಣ್ಣು ಮನಸ್ಸು ತನ್ನಂತೆಯೇ ಒದ್ದೆಯಾಗಿತ್ತೋ ಇಲ್ಲವೋ ಗೊತ್ತಿಲ್ಲ. ತನ್ನತ್ತಲೇ ನೋಡುತ್ತ, ಅಳಬೇಡವೆಂದು ಕಣ್ಣಲ್ಲೇ ಗೋಗರೆಯುತ್ತಿದ್ದ. ತಾನಂತೂ ನದಿಯೊಂದು ಕೊಸರಿಕೊಂಡು ಸಾಗರದೆಡೆಗೆ ಓಡುವಂತೆ ಕಣ್ಣಿರಕೋಡಿಯಾಗಿದ್ದಳು. ಎಲ್ಲ ಬಿಟ್ಟು ಓಡಿಬಿಡುವ ಅದಮ್ಯ ಆಸೆಯನ್ನು ತುದಿಗಾಲಲ್ಲಿಯೇ ಅದುಮಿ ಹಿಡಿದಿಡುವ ಪ್ರಯತ್ನದಲ್ಲಿ ಮತ್ತೆ ಮತ್ತೆ ಹನಿಗೂಡಿ ದಿಗಂತದಾಚೆಗಿನವರೆಗೂ ಹಳ್ಳವಾಗಿ ಹರಿಯುತ್ತಿರುವಂತೆ ನೆನೆದಿದ್ದಳು. ಪಕ್ಕದಲ್ಲಿ ಕುಳಿತವನಿಗೆ ಕಸಿವಿಸಿಯೋ ಅಚ್ಚರಿಯೋ ! ಯಾಕೀ ಪರಿ ಅಳು. ಅವನೇನಾಗಬೇಕು ನಿನಗೆ ? ಬಿಟ್ಟಬಾಣದಂತೆ ಉತ್ತರಿಸಿದ್ದಳು.. ” ನನ್ನ ಜೀವದ ಫ್ರೆಂಡು”- ತಟ್ಟನೇ ತಡವರಿಸದ, ವಿವೇಚನೆಯಿಲ್ಲದ, ಕಿಂಚಿತ್ ವಂಚನೆಯೂ ಇಲ್ಲದೇ ಬಂದಿತ್ತು. ಉತ್ತರ.
ಅವೇ ಪ್ರಶ್ನೆ, ಮತ್ತವೇ ಹಿಂಸೆ ಅದೇ ಉತ್ತರದ ಪುನರಾವರ್ತನೆಯಲ್ಲಿ ಮೂರು ದಶಕಗಳ ದಾಂಪತ್ಯ ಸವೆದುಹೋದವು. ಇಬ್ಬರಿಗೂ ಉಳಿದದ್ದು ಮುಖದ ಮೇಲೆಲ್ಲ ಪ್ರಶ್ನಾರ್ಥಕ ಚಿಹ್ನೆಗಳು, ಒಂದಿಷ್ಟು ಬ್ರ್ಯಾಕೆಟ್ ಚಿನ್ಹೆಗಳು, ಒಂದಿಷ್ಟು ಕಣ್ಣಿರು, ಒಂದಿಷ್ಟು ನಿಟ್ಟುಸಿರು. ಅವತ್ತು ಉಪಾಯವಾಗಿ ಅವಳನ್ನು ಮನೆಗೆ ಕಳಿಸಿದವನು ನಿಜವಾಗಿ ಅತ್ತನೋ ಇಲ್ಲವೋ ಆ ಪಳನಿ ಸುಬ್ರಹ್ಮಣ್ಯನಿಗೆ ಗೊತ್ತು. ಅವಳಿತ್ತ ತುತ್ತು, ಬಿರು ಬೇಸಿಗೆಯಲ್ಲಿ ಬಸವಳಿದು ಬಂದವನಿಗೆ ಬಡಿಸಿದ ಗಟ್ಟಿಮೊಸರಲ್ಲಿ ಕಲಸಿದ ಮೊಸರನ್ನ, ಸ್ನಾನಕ್ಕೆ ಬಿಸಿನೀರು ತೋಡಿದವಳ ಬೆರಳ ಗುರುತು, ಬೈಕಿನ ಹಿಂದೆ ಕೂತು ಕಚಗುಳಿ ಇಟ್ಟವಳ ಬಿಸಿಯುಸಿರಿನ ಲಯ, ಬಾಯಿಗೆ ಬಾಯಿಟ್ಟು ತಾಂಬೂಲ ಕದ್ದವಳ ನೆನಪು ಕಾಡಿ ಕಾಡಿ ತನ್ನನ್ನು , ಈ ಊರಿನಲ್ಲಿನ ಅಪರಿಚಿತ ಗಾಳಿಯನ್ನೂ ತನ್ನ ಪ್ರೀತಿಯಿಂದ ಸಹ್ಯ ಮಾಡಿದವಳನ್ನು ಎದೆಯಲ್ಲಿ ಹೊತ್ತು ನಡೆದನೋ ಇಲ್ಲಾ ಮರಳುಗಾಡಿನಲ್ಲಿ ಅವತ್ತೇ ಹೂತು ನಿರಾಳಗೊಂಡನೋ ಅವನೇ ಹೇಳಬೇಕು.
ಪ್ರೀತಿಯ ಮಹಾಪೂರವನ್ನೆ ಹೊತ್ತುತಂದ ಅವನ ಮೊದಲನೇ ’ಪ್ರೇಮಪತ್ರ’ವನ್ನು ಕರ್ಚೀಫಿನಲ್ಲಿ ಕಟ್ಟಿ ಟ್ರಂಕಿನಲ್ಲಿ ಬಚ್ಚಿಟ್ಟು ಗುಬ್ಬಚ್ಚಿಗೂಡು ಕಾಯುವಂತೆ ಕಾದಳು. ಲಲಿತಲವಂಗ ವನದಲ್ಲಿ ಶಾಕುಂತಲಹಕ್ಕಿ ಏಕಾಂಗಿತನಕ್ಕೆ ಕನಲಿ ಕೊರಗುವಂತೆ ಬಿಕ್ಕಿದಳು. ಓದಿದಷ್ಟೂ ಮನ ತುಂಬದು, ನೆನೆದಷ್ಟೂ ಹೃದಯ ತೃಪ್ತವಾಗದು. ಅವನ ಮುತ್ತಿನಂಥ ಅಕ್ಷರಗಳನ್ನು ಮುತ್ತಿಕ್ಕಿದಷ್ಟೂ ಮನ ತಣಿಯದು. ಇದಿನ್ನೂ ಸಾಲದೆನ್ನುವ ಭಾವ. ಶಿಶಿರದ ಕುಳಿರ್ ಗಾಳಿಗೆ, ಮಾಘದ ನಡುಗುವ ಚಳಿಗೆ , ವೈಶಾಖದ ಬಿರು ಬೇಸಿಗೆಯ ತಾಪದ ಪರಿವೆಯಿಲ್ಲದೇ ದೂರದ ಸುಬ್ರಹ್ಮಣ್ಯ ಸ್ವಾಮಿಯ ಬೆಟ್ಟದ ತುದಿವರೆಗೂ ನಡೆದುಹೋಗಿ ಮುಳುಗುವ ಸೂರ್ಯನೊಂದಿಗೆ ಮಾತಾಡುತ್ತ ತುಸುಹೊತ್ತು ಕೂತಿದ್ದು, ಮತ್ತೆ ಸಂಜೆ ಮುಳುಗುವ ಹೊತ್ತು ಗೆಳತಿಯ ಮನೆಗೆ ಹೋಗಿ ತನಗೇನಾದರೂ ಕಾಗದ ಬಂತಾ ಎಂದು ಕೇಳುತ್ತಿದ್ದಳು. ಎರಡು ತಿಂಗಳಿಗೊಮ್ಮೆ ಮೂರು ತಿಂಗಳಿಗೊಮ್ಮೆ ತಪ್ಪದೇ ಬರುತ್ತಿದ್ದ ಪತ್ರಗಳೂ ನಿಂತುಹೋದವು. ಅವನ ಪ್ರೀತಿಯ ನೆನಪಿನ ಗರ್ಭ ಹೊತ್ತ ಗರ್ಭಿಣಿಯಂತೆ ಅವಳ ಬಯಕೆಗಳು ನೂರಾರು. ಆದರೆ ಕೇಳುವ ಹೃದಯ, ಕಣ್ಣೊರೆಸಿ ರಮಿಸಿ ಮಾತಾಡಿಸುವ ಕರುಳೂ ಇಲ್ಲದ ಮನುಷ್ಯರನ್ನು ಮನುಷ್ಯರಾಗಿರೆನ್ನುವುದಾದರೂ ಹೇಗೆ ? ಎದೆ ಸುಡುವ ನೋವನ್ನು ಹಂಚಿಕೊಳ್ಳಲು ಯಾರಿದ್ದಾರೆ ? ಯಾರಿಗೆ ಬೇಕು ಒಣ ಮಾತುಗಳ ಪ್ರವರ !
ಸುಡುಬಿಸಿಲಿನಲ್ಲಿ ಒಂದೆಳೆ ತಂಗಾಳಿ ಸೂಸಿದರೂ ಹಿತವಾಗಬಹುದು, ನಟ್ಟಿರುಳಿನಲ್ಲಿ ಮಿನುಗುವ ಒಂಟಿ ಚುಕ್ಕಿಯನ್ನಾದರೂ ನೋಡಿ ಕನಸು ಬಿತ್ತಬಹುದು, ಆದರೆ ಒಂಟಿಹಕ್ಕಿಗೆ ಗುಟುಕು ನೀಡುವರ್ಯಾರು ? ನಾದವಿಲ್ಲದ ಗೆಜ್ಜೆಗೆ ಹೆಜ್ಜೆ ಹಾಕಿ ಕುಣಿಯುವರ್ಯಾರು ? ಮೊದಲ ಪತ್ರದಲ್ಲಿ ಪ್ರೀತಿಯಿಂದ ಪೋಣಿಸಿದ ’ನಾನ್ಯಾವತ್ತೂ ಜತೆಯಿದ್ದೇನೆ ’ಎಂದ ಪದಗಳಿಗೆಲ್ಲ ಗೆದ್ದಲು ಹಿಡಿದವೇ? ಯಾರೂ ಯಾರಿಗೂ ಜತೆಯಾಗಿರುವುದಿಲ್ಲ. ನಮ್ಮ ನಮ್ಮ ಕರ್ಮದ ಹಾದಿಯನ್ನು ನಾವೇ ಸವೆಸಬೇಕು. ದಾರಿಯಲ್ಲಿ ಹೋಗುವ ಪ್ರತಿ ಬೈಕಿನ ಮುಖದಲ್ಲೂ ಅವನದೇ ನಗುವಿನ ಛಾಯೆ ಕಂಡು ಸೋತಳು. ಸಂಜೆಗೆಂಪಿನಲ್ಲಿ ಸುರಗೀ ಹೂಗಳನ್ನು ಉಡಿಯಲ್ಲಿಟ್ಟುಕೊಂಡು ಮಾಲೆ ಕಟ್ಟುವಾಗ ಕಣ್ಣು ಮಂಜಾಗಿ ಕೈಗೆ ಸೂಜಿ ಚುಚ್ಚಿ ಹನಿಯೊಂದು ಉರುಳಿ ಹೂವಲ್ಲೇ ಸೇರಿಹೋಯಿತು.
ಬರೆಯುವ ಬರೆಸುವ, ಬರೆದು ಕಾಯುವ, ಕಾದು ಕರೆಯುವ ಪ್ರೇಮದ ಗುಲಾಬಿ ಹೂಗಳ ಪಕಳೆಗಳು ಈ ಫಾಲ್ಗುಣದಲ್ಲಿ ಒಣಗಿಹೋಗಿವೆ. ಸುತ್ತಲೂ ಗುಲ್ ಮೊಹರ್ ಕೆಂಪು ಸುರಿಯುತ್ತಿದೆ. ಎದೆಯು ಮರಳಿ ತೊಳಲುತಿದೆ, ದೊರೆಯುದದನೆ ಹುಡುಕುತಿದೆ; ಎನ್ನುವಂತೆ ದೊರೆಯದುದನ್ನೆ ಮತ್ತೆ ಮತ್ತೆ ಮನ ನೆನಯುವುದೇಕೆ? ತಂತಿಯಿಲ್ಲದ ವೀಣೆ ಕಾಡುವುದೇಕೆ? ಅವನೇ ನುಡಿಸಿದ ತಾನ್ ಪುರಾ ಈಗ ಸ್ಪರ್ಶವಿಲ್ಲದ ,ನಾದವಿಲ್ಲದ ಗುಜರಿ ಸಾಮಾನು ಮಾತ್ರ. ತನ್ನ ಸಾಮಾನೆಲ್ಲವನ್ನೂ ಯರ್ಯಾರಿಗೋ ಮಾರಿಕೊಂಡನೆಂದು ಅವನ ಗೆಳೆಯ ಹೇಳಿದ್ದ. ಆಗಾಗ ನುಡಿಸುತ್ತಿದ್ದ ತಾನ್ ಪುರಾ ಯಾವುದೋ ಸಂಘಕ್ಕೆ ಕೊಟ್ಟನಂತೆ. ಅವಳು ಅವನಿಗೆ ದಕ್ಕಿದ ನಂತರ ತಾನ್ಪುರಾ ಮೂಲೆಯಲ್ಲೇ ಕೂತಿತ್ತು. ಅದನ್ನು ನುಡಿಸಿದ್ದೇ ಇಲ್ಲ ಅವ. ಅವಳಿಗೆ ಕೊನೆ ಮುತ್ತಿನ ಜೊತೆ ಅವಳ ಪ್ರೀತಿಯ ಹಾಡುಗಳ ಕ್ಯಾಸೆಟ್ಟು, ಸಿಡ್ನಿ ಶೆಲ್ಡನ್ ಪುಸ್ತಕಗಳು. ಪ್ರೇಮ ಬದುಕಿನ ಒಂದು ಭಾಗ, ಅದೇ ಬದುಕಲ್ಲ ಎನ್ನುವ ಅವನ ಮಾತುಗಳು ಇಂದಿಗೂ ಗೊಂದಲ ಹುಟ್ಟಿಸುತ್ತವೆ. ತನಗೆ ’ಪ್ರೇಮವೇ ಬದುಕು’ ! ಪ್ರೇಮವೇ ಜೀವ. ಜೀವನಪೂರ್ತಿ ಒಬ್ಬರನ್ನು ಇನ್ನಿಲ್ಲದಂತೆ ಪ್ರೀತಿಸುವುದರಲ್ಲಿ, ಮರಳಿಬಾರದ ಕ್ಷಣಗಳನ್ನು ಮತ್ತೆ ಮತ್ತೆ ನಿತ್ಯ ಬದುಕುವುದರಲ್ಲಿ ಬದುಕು ಪಲ್ಲವಿಸುತ್ತಿಲ್ಲವೇ ??
 

‍ಲೇಖಕರು avadhi

27 April, 2013

4 Comments

  1. bharathi

    ಶುರುವಾದ ಮೇಲೆ ಕೊನೆವರೆಗೆ ಓದಿ ಉಸಿರಿಲ್ಲದೇ ಕೂತೆ …

  2. D.Ravivarma

    ಪ್ರೇಮ ಬದುಕಿನ ಒಂದು ಭಾಗ, ಅದೇ ಬದುಕಲ್ಲ ಎನ್ನುವ ಅವನ ಮಾತುಗಳು ಇಂದಿಗೂ ಗೊಂದಲ ಹುಟ್ಟಿಸುತ್ತವೆ. ತನಗೆ ’ಪ್ರೇಮವೇ ಬದುಕು’ ! ಪ್ರೇಮವೇ ಜೀವ. ಜೀವನಪೂರ್ತಿ ಒಬ್ಬರನ್ನು ಇನ್ನಿಲ್ಲದಂತೆ ಪ್ರೀತಿಸುವುದರಲ್ಲಿ, ಮರಳಿಬಾರದ ಕ್ಷಣಗಳನ್ನು ಮತ್ತೆ ಮತ್ತೆ ನಿತ್ಯ ಬದುಕುವುದರಲ್ಲಿ ಬದುಕು ಪಲ್ಲವಿಸುತ್ತಿಲ್ಲವೇ ?? wonderful…usirugatti hididu odisikondu hoguva taakattide…nimma barahakke….matte matte kaaduva chintane….

  3. Anuradha.B.Rao

    ಎದೆಯು ಮರಳಿ ತೊಳಲುತಿದೆ, ದೊರೆಯುದದನೆ ಹುಡುಕುತಿದೆ…ತುಂಬಾ ಚೆನ್ನಾಗಿದೆ . ಅಭಿನಂದನೆಗಳು.

  4. umasekhar

    vobbarigobbaru torisuva kalaji, apyate, comfort koduva bhava tumba chennagide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading