ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡು ಹಕ್ಕಿಯ ಹಾದಿನೋಟ : ಇನ್ನೆಲ್ಲಿ ಆ ಕಾಲ!

ಮಾತಿನ ಭರದಲ್ಲಿ ಕಾಡೊಳಗೆ ದಾರಿ ಸಾಗಿದ್ದೇ ತಿಳಿಯಲಿಲ್ಲ. ನಾವು ನಡೆದು ಬಂದ ಬೆಂಕಿಯ ರೋಡು ತಳಾರದಲ್ಲಿ ನಾಲ್ಕು ಅಡಿ ತಗ್ಗಿನ ತೋಟದೊಳಗಿನ ಇನ್ನೊಂದು ರೋಡಿಗೆ ಸೇರುತ್ತಿತ್ತು. ಅದುವರೆಗೆ ಕಾಡಿನೊಳಗೆ ತಲ್ಲೀನರಾಗಿದ್ದ ನಮಗೆ ಯಾವುದೋ ಬಯಲಿಗೆ ಬಂದಂತೆ ಎನಿಸಿತು. ನಾವು ಇಳಿದ ಸ್ಥಳಕ್ಕೇ ಸ್ವಲ್ಪ ದೂರದಲ್ಲಿ ಬೆಟ್ಟದ ಕಡೆಯಿಂದ ಇನ್ನೊಂದು ದಾರಿ ನಿರ್ಮಾಣವಾಗಿತ್ತು. ಕಾಡು ಪ್ರಾಣಿಗಳ ಗೊರಸಿನ ಘಾತಕ್ಕೆ ಸಿಕ್ಕಭೂಮಿ ಬೆಟ್ಟದಿಂದ ಹೊಳೆಯವರೆಗೂ ಒಂದು ರಸ್ತೆ ನಿರ್ಮಾಣವಾದಂತೆ ತೋರುತ್ತಿತ್ತು. ಆಗಾಗ ನಮ್ಮ ಆಸುಪಾಸಿನವರು ಹೇಳುತ್ತಿದ್ದುದು ಖಚಿತವೆನಿಸಿತು. ಕಾರೆಕಾಯಿ ಹಡ್ಲು ಕಾಡುಕೋಣಗಳ ಆವಾಸವಾಗಿತ್ತು!

ತಳಾರದ ಆ ಜೌಗು ಪ್ರದೇಶದಿಂದ ಓಸರುತ್ತಿದ್ದ ನೀರು ಸ್ವಲ್ಪ ದೂರದಲ್ಲಿ ಒಂದು ಝರಿಯಾಗಿ ಪರಿವರ್ತನೆಯಾಗಿ ಕಡಿದಾದ ಬಂಡೆಯಿಳಿದು ಹೊಳೆಯ ಕಡೆಗೆ ಹರಿಯುತ್ತಿತ್ತು. ಕಾಡುಕೋಣಗಳು ಮಲಗಿ ಹೊರಳಾಡಿದ ಕಡೆ ಅಲ್ಲಲ್ಲಿ ಸಣ್ಣ ಸಣ್ಣ ನೀರಿನ ಹೊಂಡಗಳು.

ಅಂತಹಾ ಕಾಡಿನ ಮಧ್ಯೆ ಈ ಬಯಲು ಹೇಗೆ?

ದಿಗ್ಬ್ರೆಮೆಯಾಗಿ ಅತ್ತಿತ್ತ ನೋಡುತ್ತಾ ಬಲಕ್ಕೆ ಕಡಿದಾದ ಬಂಡೆ ಬಿಟ್ಟು ಎಡಕ್ಕೆ ತಿರುಗಿದ ರೋಡಿನಲ್ಲಿ ನಡೆಯತೊಡಗಿದೆವು. ಅಲ್ಲಲ್ಲಿ ಸಣ್ಣ ಸಣ್ಣ ಮರಗಳೆಲ್ಲಾ ಮುರಿದು ಬಿದ್ದಿವೆ. ಇಪ್ಪತ್ತಡಿ ಎತ್ತರದ ಬೈನೆ ಕಂದುಗಳೆಲ್ಲಾ ಮುರಿದು ನೆಲಕ್ಕುರುಳಿವೆ. ಅವುಗಳ ತುದಿಯ ಭಾಗವನ್ನೆಲ್ಲಾ ಸಿಗಿದು ಹಾಕಲಾಗಿದೆ. ಅಡಿಕೆಯ ಮರಗಳದ್ದೂ ಅದೇ ಪಾಡು! ಕಾಲಿಗೆ ಏನೋ ಗುಡ್ಡೆ ಎಡವಿತು. ನೋಡಿದರೆ ಆನೆಯಲದ್ದಿ. ಅಲ್ಲಲ್ಲಿ ಅದೇ ತರದ ಹಲವಾರು ಗುಡ್ಡೆಗಳು ಕಾಡನ್ನು ನೆಲಸಮ ಮಾಡಿರುವುದು ಆನೆಗಳದೇ ಕೆಲಸ!

ನಮ್ಮೊಂದಿಗಿದ್ದವರು ಭಯಭೀತರಾದರು. ಲದ್ದಿಗಳು ಬಾಡಿಹೋಗಿದ್ದರಿಂದ ಆನೆಗಳು ಈಗ ಇಲ್ಲಿರುವ ಸಂಭವವಿಲ್ಲವೆಂದು ಅವರಿಗೆಲ್ಲಾ ಸಮಾಧಾನ ಹೇಳಿದೆ. ಒಂದು ಕಾಲಕ್ಕೆ ಬೆಳೆಯಲ್ಲಿ ಉತ್ತುಂಗ ತಲಪಿದ್ದ ತೋಟದ ಪಾಡು ಈಗೇನಾಗಿ ಹೋಗಿದೆ! ಅದುವರೆಗಿನ ಉತ್ಸಾಹವೆಲ್ಲಾ ಕರಗಿ ಮನಸ್ಸಿನಲ್ಲಿ ವಿಷಾದ ಆವರಿಸಿತು. ಆಳೆತ್ತರ ಬೆಳೆದು ನಿಂತ ಹತ್ತಿಪ್ಪತ್ತು ಕಂದುಗಳನ್ನೊಳಗೊಂಡ ಯಾಲಕ್ಕಿ ತೆಂಡೆಗಳು! ಅವುಗಳ ಬುಡದಲ್ಲಿ ನೆಲಕಾಣದಂತೆ ಹರಡಿದ ಯಾಲಕ್ಕಿ ಹಣ್ಣಿನ ಗರೆಗಣು! ಚಕ್ಕಳಮಕ್ಕಳ ಹಾಕಿಕುಳಿತು ಹಣ್ಣು ಬಿಡಿಸಬೇಕಾಗಿತ್ತು. ನಾವು ಮಾದ್ಯಮಿಕ ಶಾಲೆಯ ಹುಡುಗರೇ ಶನಿವಾರ ಶಾಲೆ ಬಿಟ್ಟು ಆರೂ ಕಿಲೊಮೀಟರ್ ನಡೆದುಬಂದು ಹತ್ತು ಸೇರು ಹಿಡಿಯುವ ‘ಹುಡುಕೆ’ಯ ತುಂಬಾ ಹಣ್ಣು ಕೊಯ್ಯುತ್ತಿದ್ದೆವೆಂದರೆ ಆಗಿನ ವೈಭವ ಲೆಕ್ಕಹಾಕಬಹುದು!

ಯಾಲಕ್ಕಿ ಗಿಡಗಳಿಗೆ ನೆರಳು ಕೊಡುತ್ತಿದ್ದ ಶತಶತಮಾನಗಳಿಂದ ಬೆಳೆದಿದ್ದ ಬೃಹದಾಕಾರದ ಗಗನ ಚುಂಬಿ ಎನ್ನುವಂತಹಾ ನಂದಿ, ಬೊಬ್ಬಿ. ಹನಾಲುತಾರಿ ಮುಂತಾದ ಮರಗಳು!

ಇದೇ ಜೌಗು ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೃಹದಾಕಾರದ ಹನಾಲುತಾರಿ ಮರ. ಅವುಗಳ ಬೇರು ಎಲ್ಲೆಲ್ಲಿ ಹರಡಿದ್ದವೋ ಆ ನೇರಕ್ಕೆ ಕಾಂಡವೂ ತೆಳುವಾದ ಗೋಡೆಯಂತೆ ಹೊರಹೊಮ್ಮಿ ಮರದ ಸುತ್ತಾ ಸಣ್ಣ ಸಣ್ಣ ವಿಭಾಗಗಳು ಏರ್ಪಟ್ಟಿದ್ದು ನಮಗೆ ಸೋಜಿಗ ಹುಟ್ಟಿಸುತ್ತಿತ್ತು. ಯಾವಾಗಲೂ ತರಗು ಸುರಿದಿರುತ್ತಿದ್ದ ಆ ವಿಭಾಗಗಳಲ್ಲಿ ಏನಾದರೂ ವಸ್ತುವನ್ನು ಅಡಗಿಸಿ ಇಟ್ಟಿದಲ್ಲಿ ಬೇರೆಯವರಿಗೆ ಕಂಡು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ತನಿಯಪ್ಪ ಮನೆಗಾಗಿ ಸೇಂದಿಯನ್ನು ಅಲ್ಲೇ ಅಡಗಿಸಿಟ್ಟು ಹೋಗುತ್ತಿದ್ದ. ರಜಾದ ದಿನ ಸೇಂದಿ ತರುವ ಕೆಲಸ ನಮ್ಮದಾಗಿದ್ದರಿಂದ ಅದು ಇರುವ ಜಾಗದ ಸರಿಯಾದ ಗುರುತು ತಿಳಿದುಕೊಂಡಲ್ಲಿ ಮಾತ್ರ ನಮಗೆ ಕಂಡು ಹಿಡಿಯಲು ಸಾಧ್ಯವಾಗುತ್ತಿತ್ತು. ಅಷ್ಟು ಅಗಾಧವಾದ ಮರದ ಬಗ್ಗೆ ಈಗ ಯೋಚಿಸಲೂ ಸಾಧ್ಯವಾಗದು!

ಏಲಕ್ಕಿ ಕಟ್ಟೆ ಬಂದು ದಿಕ್ಕು ಕಾಣದಾದಾಗ ಟಿಂಬರ್ ಲಾಬಿಯ ಹಿಡಿತಕ್ಕೆ ಸಿಲುಕಿ ಇದೇ ಹನಾಲು ತೌರಿಯಮರ ಕಿರ್ರೋ ಎಂದು ಕರುಚುತ್ತಾ ನೆಲಕ್ಕುರುಳಿ ಅಸುನೀಗಿದ್ದನ್ನು, ಆ ಮರದಲ್ಲಿ ಆಶ್ರಯ ಪಡೆದಿದ್ದ ಕಬ್ಬೆಕುಳು ಮರಿಗಳೊಂದಿಗೆ ನೆಲಕ್ಕೆ ಬಿದ್ದು ದಿಕ್ಕಾಪಾಲಾಗಿ ಓಡಿದ್ದನ್ನು ಅಂದು ಅಲ್ಲಿದ್ದ ನಾನು ಕಣ್ಣಾರೆ ಕಂಡಿದ್ದೇ! ಇನ್ನು ಮಲೆನಾಡಿಗರ ದಿನದ ಆಯಾಸ ಕಳೆದು ಹೊಸ ಹುರುಪು ನೀಡುತ್ತಿದ್ದ ಬೈನೆ ಮರಗಳು! ಒಂದೊಂದು ಮರದಲ್ಲಿ ತನಿಯಪ್ಪ ಇಳಿಸುತ್ತಿದ್ದ ಹತ್ತಿಪ್ಪತ್ತು ಬಾಟಲಿ ಸೇಂದಿ! ಮನೆಯವರೂ ಹಣಗಳ್ಳಿನವರೂ ಕುಡಿದು ಇನ್ನೂ ಉಳಿದಿರುತ್ತಿದ್ದ ಸೇಂದಿ! ಎಷ್ಟೊಂದು ಸತ್ವಯುತವಾಗಿರುತ್ತಿತ್ತೆಂದರೆ ಬೆಳಗ್ಗೆ ಉಳಿದ ಸೇಂದಿಯನ್ನು ತನಿಯಪ್ಪ ರೋಡಿಗೆ ಚೆಲ್ಲಿದಾಗ, ಯಾವುದಕ್ಕೂ ಬಗ್ಗದ ಜಿಗುಂಬೆಗಳು ಘಾಟಿಗೆ ಹೆದರಿ ಕುಣಿದಾಡುತ್ತಿದ್ದುದನ್ನು ಕಂಡೇ ತಿಳಿಯಬಹುದಾಗಿತ್ತು.

ಈಗ ಬೈನೆಗಳೆಲ್ಲಿವೆ! ಆ ಸಮೃದ್ಧಿಯೆಲ್ಲಿದೆ! ಮೂಲಕಾಡನ್ನು ಕಡಿದ ನಂತರ ಈ ಮೂವತ್ತು ನಲವತ್ತು ವರುಷಗಳಲ್ಲಿ ನಾವು ತೋಟಮಾಡಲು ಏನೇ ಕಾಡು ಬಳಸಿದರೂ ಅದು ಹಿಂದಿನ ಕಾಡಿಗೆ ಸಾಟಿಯೇ? ಅದು ಬರೀ ಕುರುಚಲು ಕಾಡು ಅಷ್ಟೇ! ನನ್ನಲ್ಲಿ ವಿಷಾದದ ಛಾಯೆ ಮುಸಿಕಿದ್ದನ್ನು ಗಮನಿಸಿದ ನಮ್ಮ ಗುಂಪಿನವರು ಮೌನಧರಿಸಿ ಯಾಂತ್ರಿಕವಾಗಿ ಮುಂದೆ ಸಾಗುತ್ತಿದ್ದರು. ಎದುರಾದ ನೀರಿನ ಕೊಲ್ಲಿಯನ್ನು ಹಾದು ತೋಟದ ಬೇರೊಂದು ವಿಭಾಗಕ್ಕೆ ದಾಟಿದೆವು. ಅಲ್ಲಿಂದ ತಗ್ಗಿನಲ್ಲಿ ಹರಿಯುವ ಹೊಳೆ ಕಾಣುತ್ತಿದೆ. ಹೊಳೆಯ ಈಚೆಯ ಬದಿಯಲ್ಲಿ ವಾಟೆಮಣೆಗಳ ಅಡಿಯಲ್ಲಿ ಜನರ ಓಡಾಟ! ಅವರೆಲ್ಲಾ ಬೆಳಗಿನ ಜಾವವೇ ಬಂದಿದ್ದ ಮೊದಲನೇ ಗುಂಪಿನವರು. ನಾನು ಅಲ್ಲಿಯೇ ನಿಂತು ಸುತ್ತಲೊಮ್ಮೆ ವೀಕ್ಷಿಸಿದೆ.

ಎಲ್ಲಿ ಮೊದಲಿನ ವೈಭವ!

ಬಹಳ ಹಿಂದೆ ಮಳೆಗಾಲದಲ್ಲಿ ನಿಂತು ರಕ್ಷಣೆ ಪಡೆಯಲು ಒಂದು ನೆಲೆಯಿರಲಿಲ್ಲ. ಪ್ರತಿಯೊಬ್ಬರಿಗೂ ಗೊರಗವೇ ಆಸರೆ. ಒಮ್ಮೊಮ್ಮೆ ಗೊರಗವಿಲ್ಲದೇ ಬಂದು ಅಡ್ಡ ಮಳೆಗೆ ಸಿಕ್ಕಿಕೊಳ್ಳುವುದೂ ಇತ್ತು. ಆಗೆಲ್ಲಾ ಸೊಂಪಾಗಿ ಬೆಳೆದಿರುತ್ತಿದ್ದ ಬಾಳೆಯ ಹಿಂಡುಗಳಿಂದ ದೊಡ್ಡ ದೊಡ್ಡ ಎಲೆಗಳನ್ನು ಕಡಿದು ತಲೆಗೆ ಅಡ್ಡ ಹಿಡಿದು ನಿಲ್ಲುತ್ತಿದ್ದೆವು. ನಂತರದಲ್ಲಿ ಇದೇ ಜಾಗದಲ್ಲಿ ನಿರ್ಮಾಣವಾಗಿದ್ದು ಗುಡಿಸಲು! ಗೋಜೆಕಂಬಗಳ ಬೆಂಬಲದಿಂದ ಮೇಲೆದ್ದ ಗುಡಿಸಲು ಚಾವಣಿಗೆ ಕರಡದ ಹುಲ್ಲು! ಸುತ್ತಾ ಬೈನೆ ತಳಿಯಿಂದ ನಿರ್ಮಿಸಿದ ರಕ್ಷಣಾ ಗೋಡೆ! ಕಾಲಕ್ರಮದಲ್ಲಿ ನಾವು ನಮ್ಮ ತಾಯಿ ತಂದೆಗೆ ಬೆಂಬಲವಾಗಿ ನಿಂತಾಗ ಇಲ್ಲಿಯೇ ತಲೆಯೆತ್ತಿತ್ತು ಹಂಚಿನ ಬಿಡಾರ! ಅದರಲ್ಲಿ ಎರಡು ವಿಭಾಗ. ಒಂದು ಕೂತು ನಿಂತು ವಿಶ್ರಮಿಸಲು ಮಳೆಯಿಂದ ರಕ್ಷಣೆ ಪಡೆಯಲು, ಅಡಿಗೆ ಮಾಡಿ ಊಟ ಮಾಡಲು. ಇನ್ನೊಂದು ಏಲಕ್ಕಿ ಒಣಗಿಸುವ ಗೂಡು. ಆದರೆ ಅದೆಲ್ಲಾ ಈಗಲ್ಲಿದೆ! ನೆಲದ ತುಂಬಾ ಹರಡಿವೆ ಹಂಚಿನ ಚೂರುಗಳು! ಮರಮುಟ್ಟುಗಳಲ್ಲಿ. ಗೂಡು ನಿರ್ಮಿಸಲು ಬಳಸಿದ ಕಬ್ಬಿಣ ಎಲ್ಲಾ ಯಾರದೋ ಪಾಲಾಗಿವೆ. ಯಾವುದೋ ಅವನತಿ ಹೊಂದಿದ ಸಾಮ್ರಾಜ್ಯದ ತಳಹದಿಯ ಮೇಲೆ ನಿಂತಂತೆನಿಸಿತು.

ಅಲ್ಲಿಂದ ರೋಡು ಹೊಳೆಯ ಕಡೆಗೆ ತಿರುಗಿತ್ತು. ಇಳಿಜಾರಿನಲ್ಲಿ ನಡೆದು ಚೌಡಿಯ ಬನ ತಲಪಿದೆವು. ಅಲ್ಲಿ ಕೆಲಸವೆಲ್ಲಾ ಆಗಲೇ ಮುಗಿದಂತಿತ್ತು. ನಾವು ಬರುವುದು ತಡವಾದುದರಿಂದ ಕೆಲವರು ಸಿಡಿಮಿಡಿಗೊಂಡಿದ್ದರು. ಒಂದು ಹಲಸಿನ ಮರದ ಬುಡದಲ್ಲಿ ಸ್ಥಾಪಿತವಾಗಿದ್ದ ಕಲ್ಲಿಗೆ ಕುಂಕುಮವಿಟ್ಟು ಪೂಜಿಸಲಾಗಿತ್ತು. ಅದರ ಸುತ್ತಾ ಹುಲ್ಲು ಹಳ ಎಲ್ಲಾ ಕೆತ್ತಿ ಹಸನುಗೊಳಿಸಲಾಗಿತ್ತು. ಹೊಳೆಯ ಬದಿಯಲ್ಲಿ ಒಲೆಯ ಮೇಲೆ ದೊಡ್ಡ ಪಾತ್ರೆಯಲ್ಲಿ ಕೋಳಿಯ ಸಾರು ಘಮಘಮಿಸುತ್ತಿತ್ತು. ಪಕ್ಕದಲ್ಲಿ ಒಂದು ಪಾತ್ರೆಯಲ್ಲಿ ಅನ್ನ ಹಾಗೂ ಒಂದು ಬುಟ್ಟಿಯಲ್ಲಿ ಕಡುಬು ಸಿದ್ದವಾಗಿತ್ತು. ಅಣ್ಣ ಎಡೆ ಇಡುವುದರಲ್ಲಿ ನಿರತನಾಗಿದ್ದ. ಊರವರೆಲ್ಲಾ ವಾಡೆಮಣೆಯ ಬುಡದಲ್ಲಿ ಸ್ವಚ್ಛಗೊಳಿಸಿದ್ದ ಸ್ಥಳದಲ್ಲಿ ಊಟಕ್ಕೆ ಕಾಯುತ್ತಿದ್ದವರಂತೆ ಕುಳಿತಿದ್ದರು. ಸ್ವಾಮಿ ಹಾಗೂ ಶೆಟ್ಟಿಗೆ ಅಬ್ಬಿಯನ್ನು ನೋಡುವ, ಅದರಲ್ಲಿ ಮಿಯೂವ ತವಕ, ನಡೆಯಿರಿ ತೋರಿಸುತ್ತೇನೆ ಎಂದೆ. ಅಣ್ಣನಿಗೆ ಹಾಗೂ ಇತರರಿಗೆ ನನ್ನ ಮೇಲೆ ಸಿಟ್ಟೇ ಬಂದಿತ್ತು. ‘ನಿಂದು ಯಾವಾಗಲೂ ಇದ್ದದ್ದೇ. ದೇವರು ದಿಂಡರ ಬಗ್ಗೆ ಸ್ವಲ್ಪನೂ ಭಯ ಭಕ್ತಿ ಇಲ್ಲ. ಬಂದು ಕೈಮುಗದು ಆಮೇಲೆ ಎಲ್ಲಿ ಬೇಕಾದರೂ ಹೋಗಿ’ ಎಂದ.

ಹೊಳೆಗೆ ಇಳಿದಿದ್ದ ನಾನು ಹಾಗೆಯೇ ಮುಖ ತೊಳೆದುಕೊಂಡು ಹಿಂತಿರುಗಿದೆ. ಮೂರು ಎಡೆ ಇಡಲಾಗಿತ್ತು. ಅನ್ನ, ಕಡುಬಿನ ಜೊತೆಗೆ ಒಂದು ಮೂಲೆಯಲ್ಲಿ ಕೋಳಿಮಾಂಸ. ಪಕ್ಕದಲ್ಲಿ ಪ್ಲಾಸ್ಟಿಕ್ ಗ್ಲಾಸಿನಲ್ಲಿ ಒಂದಷ್ಟು ಬ್ರಾಂಡಿ! ಒಂದು ಒಡೆದ ತೆಂಗಿನ ಕಾಯಿ ಹಾಗೂ ತೊಟ್ಟು ಮುರಿದ ಮೂರು ಪಚ್ಚ ಬಾಳೆಹಣ್ಣು! ನಾನು ಹುಡುಗನಾಗಿದ್ದಾಗ ಅಪ್ಪನೊಂದಿಗೆ ‘ದಯ್ಯ ಕೊಡಲು’ ಬರುತ್ತಿದ್ದುದು ನೆನಪಾಯಿತು. ಇದೇ ಸ್ಥಳ. ಸುತ್ತಲೂ ಯಾಲಕ್ಕಿ ಫಸಲಿನ ಘಮ! ಎಡೆಯಲ್ಲಿ ನಾಟಿಕೋಳಿಯ ಸಾರು. ಮೂರೂ ಎಡೆಯ ಪಕ್ಕದಲ್ಲಿ ಮೂರು ಗಾಜಿನ ಲೋಟದಲ್ಲಿ ನಾವೇ ಭಟ್ಟಿ ಇಳಿಸಿದ ಘಮಘಮಿಸುವ ಸರಾಯಿ. ಚೌಡಿಗೆಂದೇ ಹೆಸರಿಸಿ ಕಡಿದು ಹಣ್ಣು ಮಾಡಿದ ಗಾಳುಬಾಳೆಯ ಹಣ್ಣಿನ ಇಡಿಯಗೊನೆ! ‘ಹುಂ, ತಗಾ ಊದುಗಡ್ಡಿ ಬೆಳಗಿ ಕೈಮುಗಿ’ ಎನ್ನುತ್ತಾ ಅಣ್ಣ ನನ್ನ ಕೈಗೆ ಊದುಗಡ್ಡಿ ಹಿಡಿಸಿದ, ನಾನು ಊದುಗಡ್ಡಿ ಬೆಳಗಿ ಕೈಮುಗಿದು ಹೊಳೆಯ ಕಡೆ ಹೆಜ್ಜೆ ಹಾಕಿದೆ. ನಮ್ಮೊಂದಿಗೆ ಬಂದ ಹೆಂಗಸರೆಲ್ಲಾ ಹೊಳೆಯಲ್ಲಿ ಕಾಲು ನೀರಿನಲ್ಲಿ ಇಳಿಬಿಟ್ಟ ಅಲ್ಲಲ್ಲಿ ಬಂಡೆಯ ಮೇಲೆ ಕುಳಿತಿದ್ದರು. ಸ್ವಾಮಿ, ಶೆಟ್ಟಿ ಹಾಗೂ ಪ್ರಸನ್ನ ಆಗಲೇ ತೊಟ್ಟಿಲು ಅಬ್ಬಿ ತಲಪಿದ್ದರು. ಅಬ್ಬಿಯ ಬುಡಕ್ಕೆ ಇಳಿದು ದುಮ್ಮಿಕ್ಕುವ ನೀರಿನ ಮಜಾ ಅನುಭವಿಸುತ್ತಿದ್ದರು. ಊರಿನ ಲೋಕೇಶ, ಕುಶಾಲ ಮುಂತಾದವರು ಅವರಿಗೆ ಸಾಥ್ ನೀಡುತ್ತಿದ್ದರು.

ಊಟದ ಸಿದ್ದತೆ ಮಾಡಿಕೊಂಡು ನಮಗಾಗಿ ಕೂಗುಹಾಕಲು ಶುರುಮಾಡಿದರು. ಇನ್ನೂ ತಡಮಾಡುವಂತಿಲ್ಲ. ನಮ್ಮಿಂದ ಅವರಿಗೇಕೆ ಅಸಮಾಧಾನ? ನೀರಾಟ ಆಡುತ್ತಿದ್ದವರಿಗೆ ಹೊರಡುವಂತೆ ಅವಸರಿಸಿದೆ, ಅಬ್ಬಿಯ ಸ್ನಾನದ ಮಜಾ ಅನುಭವಿಸುತ್ತಿದ್ದ ಅವರಿಗೆ ಮೇಲೆ ಬರಲು ಮನಸ್ಸಿದ್ದರೆ ತಾನೆ! ಊಟದ ನಂತರ ನಮ್ಮ ತೋಟದ ಆಚೆಯ ಅಂಚಿನಲ್ಲಿರುವ ಇನ್ನೂ ಅದ್ಭುತವಾದ ‘ದೇವರ ಮಕ್ಕಳ ಅಬ್ಬಿ’ಗೆ ಕರೆದೊಯ್ಯುವುದಾಗಿ ಪುಸಲಾಯಿಸಿದೆ. ಮೊದಲು ದೇವರಿಗಿಟ್ಟ ಎಡೆಯನ್ನು ಮನೆಯವರು ಉಣ್ಣಬೇಕು. ನಂತರ ಎಲ್ಲರಿಗೂ ಊಟ! ಅವರೆಲ್ಲಾ ನಮಗಾಗಿಯೇ ಕಾದಿದ್ದರು. ಮನೆಯ ಹಿರಿಯರಾದ ನಾವು ಅಣ್ಣ ತಮ್ಮಂದಿರು ಮೂವರಿಗೆ ದೇವರ ಎಡೆ ಕೊಟ್ಟನಂತರ ಉಳಿದವರಿಗೂ ವಾಟೆಮೆಣೆಯ ಬುಡದಲ್ಲಿ ಕೂರಿಸಿ ಎಲೆ ಹಾಕಲಾಯಿತು. ಪಕ್ಕದಲ್ಲಿ ಒಂದೊಂದು ಪ್ಲಾಸ್ಟಿಕ್ಗ್ಲಾಸು. ಗಂಡಸರೆಲ್ಲಾ ಬ್ರಾಂದಿಗೆ ಮೊರೆಹೋದರು. ಹೆಂಗಸರಿಗೆ ವಾಡಿಕೆಯಂತೆ ದೊರಕುತ್ತಿದ್ದ ಸೇಂದಿಯ ಬದಲಿಗೆ ಒಂದೊಂದು ಗ್ಲಾಸ್ ಸೆವೆನ್ ಅಪ್.

ನಮ್ಮೊಂದಿಗೆ ಬಂದವರು ಮೊದಲ ಪೆಗ್ಗಿನೊಂದಿಗೆ ಕಡುಬು ಕೋಳಿಸಾರು ಮುಗಿಸಿದರು. ಎರಡು ಮೂರನೇ ಕೌಂಟ್ ವಿಸ್ಕಿಗೆ ಕಾಯುತ್ತಿದ್ದ ಉಳಿದ ಅನುಭವಸ್ಥರು ಇನ್ನೂ ಕಡುಬು ಕೋಳಿಸಾರನ್ನೇ ನಂಚಾಡುತ್ತಿರ ಬೇಕಾದರೆ ನಾವು ಅವಸರದಲ್ಲಿ ಅನ್ನವನ್ನು ತಿಂದು ಊಟ ಮುಗಿಸಿ ಎದ್ದೆವು. ಮೊದಲೇ ದೇವರ ಮಕ್ಕಳ ಅಬ್ಬಿಗೆ ಹೋಗಲು ಕಾತುರರಾಗಿದ್ದವರು ಸಮಯ ವ್ಯರ್ಥ ಮಾಡದೆ ಹೊಳೆಯಲ್ಲಿ ಮೇಲ್ಮಖನಾಗಿ ಹೊರಟರು. ನಾನು ಹೊಳೆಯ ಮಧ್ಯದಲ್ಲಿದ್ದ ಒಂದು ವಿಶಾಲ ಬಂಡೆಯ ಮೇಲೆ ಕುಳಿತೆ. ನನ್ನ ಊಟದ ಎಲೆಯಲ್ಲಿ ಸ್ವಲ್ಪ ಅನ್ನವನ್ನು ಹಿಡಿದು ತಂದಿದ್ದೆ. ವಾಡಿಕೆಯಂತೆ ಕುಳಿತ ಬಂಡೆಯಿಂದ ಆ ಅನ್ನವನ್ನು ಹೊಳೆಯಲ್ಲಿ ಸುತ್ತಾ ಎರಚಿ ಥಕಥಕನೆ ಕುಣಿಯುತ್ತಾ ಬರುವ ಮೀನುಗಳಿಗಾಗಿ ಕಾದೆ. ಉಹುಂ! ಮೀನಿನ ಸುಳಿವೇ ಇಲ್ಲ! ಹೊಳೆಯ ನೀರಲ್ಲಿ ಕಣ್ಣಿಟ್ಟು ನೋಡಿದೆ. ಅಲ್ಲಲ್ಲಿ ಈಜುತ್ತಿದ್ದ ಕರಿಯ ಗೊದಮೊಟ್ಟೆಗಳನ್ನು ಬಿಟ್ಟರೆ ಬೇರೇನೂ ಕಾಣಲಿಲ್ಲ.

ನನ್ನನ್ನೇ ಗಮನಿಸುತ್ತಿದ್ದ ಲೋಕೇಶ ‘ಸುಮ್ಮನೆ ಯಾಕೆ ಮೀನಿಗಾಗಿ ಹುಡುಕಾಡ್ತಿರಿ ನಾಗ್ರಾಜಣ್ಣ! ಮೊನ್ನೆ ಯಾರೋ ಮೇಲಿನ ಅಬ್ಬಿಲಿ ಪಾಲಿಡಾಲ್ ಕದಲಿ ಬಿಟ್ಟಿದಾರೆ. ಮಾರನೇ ದಿನ ನೋಡಬೇಕಾಗಿತ್ತು. ಇಲ್ಲಿಂದ ಜೇಡಗದ್ದೆವರೆಗೂ ಹೊಳೆಯಲ್ಲಿ ಸತ್ತಮೀನೇ ತೇಲ್ತಾ ಇದ್ದವು. ಹೊಳೆಯ ಉದ್ದಕ್ಕೂ ಸಹಿಸಲಾರದ ವಾಸನೆ! ‘ಇನ್ನೂ ಸದ್ಯಕ್ಕೆ ಮೀನಿಗೆ ಆಸೆ ಪಡದು ಬ್ಯಾಡ’ ಎಂದ. ‘ಎಂತಹಾ ರಾಕ್ಷಸ ಜಾತಿಯ ಜನ. ತಮಗೆ ಬೇಕಾದ ಹಿಡಿ ಮೀನಿನ ಆಸೆಗೆ ಇಡೀ ಹೊಳೆಗೇ ವಿಷ ಕದರಿ ಇಡೀ ಮತ್ಸ್ಯಕುಲವನ್ನೇ ಸರ್ವನಾಶ ಮಾಡಿದ್ದಾರಲ್ಲ’ ಎನ್ನಿಸಿ ವಿಷಾದದಿಂದ ಕುಸಿದುಹೋದೆ.

 

ಇವರಿಗೆಲ್ಲಾ ಏನಾಗಿದೆ? ನಮ್ಮ ಪೂರ್ವಿಕರಿಗಿದ್ದ ಬುದ್ಧಿವಂತಿಕೆಯೂ ಈ ಆಧುನಿಕ ಯುಗದಲ್ಲಿರುವ ಇವರಿಗೆ ಇಲ್ಲವಾಗಿದೆಯಲ್ಲ! ಜಾಸ್ತಿ ಮೀನಿರುವ ಮಡುವಿಗೆ ಕೂಳಿ ಹಾಕಿಯೇ, ಮಳೆಗಾಲದಲ್ಲಿ ಅಬ್ಬಿಗೆ ಹ್ಯಾಪಿಕಟ್ಟೆಯೋ ತಮಗೆಷ್ಟು ಬೇಕೋ ಅಷ್ಟು ಮೀನು ಹಿಡಿದು ತಿನ್ನುತ್ತಿರಲಿಲ್ಲವೆ! ಹಬ್ಬ ಹರಿದಿನಗಳಲ್ಲಿ ಊರವರೆಲ್ಲ ಬಂದರೂ ಹೂಳೆಗೆ ವಚ್ಚಗಟ್ಟೆ ಹಾಕಿ ಒಂದು ಸಣ್ಣಮಡುವಿಗೆ ಹೊಳೆಯ ನೀರು ಬರದಂತೆ ತಪ್ಪಿಸಿ, ಆ ನೀರಿಗೆ ಕಾರೆಕಾಯಿಗಳನ್ನು ಜಜ್ಜಿ ಕದರಿ ಅದರ ಘಾಡಿಗೆ ಮೀನುಗಳು ನೀರಿನ ಮೇಲೆ ಬಂದಾಗ ಹಿಡಿಯುತ್ತಿರಲ್ಲಿಲ್ಲ! ಮೀನಿನ ಕುಲ ನಾಶವಾಗಬಾರದೆಂಬ ಮುನ್ನೆಚ್ಚರಿಕೆ ಅವರ ಪ್ರತಿ ಬೇಟೆಯ ವಿಧಾನದಲ್ಲೂ ಕಂಡು ಬರುತ್ತಿತ್ತಲ್ಲ! ಹಾಗೆಯೇ ಬಂಡೆಯ ಮೇಲೆ ಉರುಳಿಕೊಂಡು ಪರಿಸರದ ಮೇಲೆ ಮನುಷ್ಯನ ಪ್ರಹಾರ ಹೇಗೆ ಹೇಗೆ ನಡೆಯುತ್ತಿದೆ ಎಂಬುದನ್ನು ಆಲೋಚಿಸುತ್ತಾ ಮಲಗಿಕೊಂಡೆ. ಗಂಟೆ ಕಳೆದರೂ ಊಟದ ಸ್ಥಳದಿಂದ ಚರ್ಚೆ , ಬೊಬ್ಬೆ ಕೇಳಿ ಬರುತ್ತಿತ್ತೇ ಹೊರೆತು ಅವರ್ಯಾರು ಎದ್ದು ಬರುವಂತೆ ಕಾಣಲಿಲ್ಲ. ಯಥೇಚ್ಛವಾಗಿದ್ದ ಬ್ರಾಂಡಿ ಹಾಗೂ ಕೋಳಿಮಾಂಸ ಮುಗಿಯುವವರೆಗೂ ಏಳಬಾರದೆಂದು ಅವರು ಪಣತೊಟ್ಟಂತಿತ್ತು.

ಮೇಲಿನ ಅಬ್ಬಿಗೆ ಹೋಗಿದ್ದ ಗುಂಪು ಅವಸರ ಅವಸರವಾಗಿ ಬಂದು ನನ್ನನ್ನು ಸೇರಿಕೊಂಡು. ನಾನು ಅಲ್ಲಿಂದ ಎದ್ದೆ. ಊಟದ ಜಾಗಕ್ಕೆ ಹೋದೆವು. ಅಲ್ಲಿ ಕುಳಿದ್ದವರ ಎಲೆಗಳೆಲ್ಲಾ ಖಾಲಿಯಾಗಿದ್ದವು. ‘ಇನ್ನೂ ಆಗಿಲ್ವ. ಆಗಲೇ ಮದ್ಯಾಹ್ನ ಎರಡು ಗಂಡೆ’ ಎಂದೆ. ‘ಇಲ್ಲ ಇಲ್ಲ ನೀವ್ ಬರ್ಲಿ ಅಂತಾ ಕಾಯ್ತಾ ಇದ್ವಿ’ ಎನ್ನುತ್ತಾ ಗ್ಲಾಸುಗಳ ತಳದಲ್ಲಿದ್ದ ಬ್ರಾಂಡಿಯನ್ನು ನಾಲಿಗೆಯ ಮೇಲೆ ಸುರಿದುಕೊಂಡರು. ಹೆಂಗಸರು ಖಾಲಿಯಾದ ಪಾತ್ರೆಗಳನ್ನೆಲ್ಲಲಾ ತೊಳೆದು ಪದಾರ್ಥಗಳನ್ನು ಬೇರೆ ಬೇರೆ ಚೀಲಗಳಿಗೆ ತುಂಬುತ್ತಿದ್ದರು. ಪೇಯದೊಂದಿಗೆ ಪುಷ್ಕಳ ಬೋಜನ ಸೇವಿಸಿದ್ದ ಅವರೆಲ್ಲಾ ಕೈತೊಳೆದು ಅಲ್ಲಲ್ಲಿಯೇ ಉರುಳಿಕೊಂಡರು. ಅಬ್ಬಿಗೆ ಹೋಗಿ ಬಂದ ಗುಂಪು ಮಾತ್ರ ಒಳ್ಳೇಯ ಹುರುಪಿನಲ್ಲಿತ್ತು. ‘ಹ್ಯಾಗಿತ್ತು ಮೇಲಿನ ಅಬ್ಬಿ?’ ಎಂದೆ. ಬಹಳ ಅದ್ಭುತವಾಗಿತ್ತು. ಇಲ್ಲಿಗೆ ರಸ್ತೆ ಇದ್ದರೆ ಇದೊಂದು ಪ್ರಸಿದ್ಧ ಪ್ರವಾಸಿತಾಣವಾಗುತ್ತಿತ್ತು…. ಅದ್ಸರಿ ಈ ಅಬ್ಬಿಗಳಿಗೆ ಅದೇನು ಈ ರೀತಿ ಹೆಸರಿನಿಂದ ಕರೆಯುತ್ತಾರೆ. ಸ್ವಲ್ಪ ಅದರ ಹಿನ್ನಲೆ ಹೇಳ್ತೀರಾ?’ ಎಂದು ಆಸಕ್ತಿ ವ್ಯಕ್ತಪಡಿಸಿದರು. ‘ಇರ್ಲಿ ಹೋಗ್ತಾ ಹೋಗ್ತಾ ಅಲ್ಲೆಲ್ಲಾದ್ರೂ ದಾರಿಲಿ ಹೇಳ್ತಾರೆ. ಮಳೆ ಮೋಡ ಇದೆ. ಮೊದ್ಲು ಇಲ್ಲಿಂದ ಬೆಟ್ಟ ಹತ್ತಿಕೊಳ್ಳೋಣ’ ಎನ್ನುತ್ತಾ ನಮ್ಮ ಅಣ್ಣ ಹಾಗೂ ಅತ್ತಿಗೆ ಮಲಗಿದ್ದವರನ್ನೂ ಅಹಾ ಬಿಡದೆ ಏಳಿಸತೊಡಗಿದರು.

 

‍ಲೇಖಕರು avadhi

9 June, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading