ರೇಣುಕಾ ನಿಡಗುಂದಿ
ಎಳೆ ಬೆಳದಿಂಗಳಿನಂತಾ ನೀಳ ಮೂಗಿನ , ಎಳಸು ಬೆರಳಿನ ಹುಡುಗನನ್ನು ತಾನೇ ಒಪ್ಪಿಕೊಂಡ ಹುಡುಗಿಗೆ ಹುಡುಗನ ಅವ್ವ ತನ್ನನ್ನು ಸೊಸೆಮುದ್ದು ಎಂದು ಮುದ್ದುಗರೆಯುವುದನ್ನು ಕೇಳುತ್ತ ಪುಳಕದಲ್ಲೆ ಬಾಲ್ಯ ಕಳೆದಿದ್ದಳು. ಮಕ್ಕಳಿಗೆ ಮಕ್ಕಳಾಟವಾದರೆ ದೊಡ್ಡವರಿಗೆ ತಮ್ಮ ಆಟ ತಿಳಿಯುವುದೇ ಇಲ್ಲ. ತಾವೇ ಬಿತ್ತಿದ ಬೀಜ ಬೆಲೆದು ಮರವಾಗುವ ಅರಿವಿರುವುದಿಲ್ಲ ! ಅವಳೂ ಅಷ್ತೇ ….ಮುಂದೆ ತಾವು ಓದಿ ಬೆಳೆದು ದೊಡ್ದವರಾದಾಗ ತಮ್ಮ ಮದುವೆಯಂತೂ ಖಚಿತ ಎಂದು ನಂಬಿಕೊಂಡೇ ಬೆಳೆದಳಲ್ಲ. ಅದೇನು ಸಣ್ಣ ವಿಷಯವಾ? ವಿನಾಕಾರಣ ಆ ನೀಳ ಮೂಗಿನ ಎಣ್ಣೆಗೆಂಪು ಮುಖದ, ಸುರುಳಿ ಸುರುಳಿ ಕೂದಲಿನ ಆ ಹುಡುಗನನ್ನು ಕಂಡು ನಾಚಿ ಓಡಿಹೋಗುವ ಹುಡುಗಿ. ಇಲ್ಲಿ ಬಾ ಅಂತ ಕರೆದರೂ ಬಾರದ ನಾಚಿಕೆ ಮುಖದ ಹುಡುಗಿ. ಈ ಹುಡುಗಿ ನಮ್ಮ ನಿಮ್ಮೆಲರ ಅಂತಃಕರಣದಲ್ಲಿದ್ದಾಳೆ. ಅಕ್ಕಪಕ್ಕದಲ್ಲಿದ್ದಾಳು. ಆಗಿನ ಕಾಲ ಬೇರೆಯಾದರೂ ಅಭಿವ್ಯಕ್ತಿಯ ಸ್ವರೂಪ ಒಂದೇ. ಇಂದಿನ ಕಾಲ ಹಾಗಲ್ಲ. ಬೇರೆಯದೇ ಡಿಜಿಟಲ್ ಲೋಕದಲ್ಲಿ ಭಾವನೆಗಳ ಅರ್ಥಕೋಶವೂ ಬದಲಾಗುತ್ತಿದೆಯೆನಿಸುತ್ತದೆ. ನವಿರು ಭಾವಸ್ಪರ್ಶದ ಒರತೆಯನ್ನು ದುರ್ಬೀನು ಹಿಡಿದು ಹುಡುಕುವಷ್ಟು.
ದೇವರ ಪ್ರಸಾದವನ್ನು ಅವನ ಬಾಳೆಯಲೆಯಂಥ ಚೂಪು ಅಂಗೈಯಲ್ಲಿ ಹಾಕುವಾಗಲೂ ಅವನಿಗೆ ಕೈ ತಾಕಿ ಬಿಟ್ಟೀತು ಎಂಬ ಭಯದಲ್ಲಿ ಕೈಯನ್ನು ಇನ್ನಷ್ಟು ಎತ್ತರಿಸುತ್ತಿದ್ದಳು. ಎರಡು ಜಡೆಯನ್ನು ಬಿಗಿದು ಕಟ್ಟಿದ ಕೆಂಪು ರಿಬ್ಬನ್ನಿನಲ್ಲಿ ಅವಳ ಮುಖ ಕೆಂಪು ಗುಲಾಬಿಯಂತೆ ಅರಳಿರುತ್ತಿತ್ತು. ಮೂಲೆಯ ನಿಚ್ಚಣಿಕೆ ಪಕ್ಕ ನಿಂತವನು ತನ್ನನ್ನು ನೋಡುತ್ತಿದ್ದಾನೋ ಇಲ್ಲವೋ? ಅಲ್ಲೇ ಇದ್ದಾನೋ ಮತ್ತೆ ಹೊರಗೇ ಹೋಗಿಬಿಟ್ಟನೋ ಎಂದು ಅವಳ ಕೆಂಪು ರಿಬ್ಬನ್ನ ಜಡೆಗಳು ಕತ್ತು ಕೊಂಕಿಸಿ ಪುಟ್ಟ ಕಿಟಕಿಯಿಂದ ಮತ್ತೆ ಮತ್ತೆ ನೋಡುತ್ತಿದ್ದವು. ನದಿಯಂತ ಹುಡುಗಿ ಜುಳು ಜುಳು ಹರಿಯುವಾಗ, ಕಲ ಕಲ ಹೆಜ್ಜೆಯಲ್ಲಿ ಘಲ ಘಲ ನಡೆಯುವಾಗ ಬಾಲ್ಯವೆನ್ನುವ ಹೂವಿನ ಚೆಂಡು ಪುಟಿ ಪುಟಿದು ಸಾಗುತ್ತಿತ್ತು. ಅಗಲೇ ನಮ್ಮ ಸಾಲೆಗೆ ಪಡಸಾಲಿ ಮಾಸ್ತರು ಬಂದಿದ್ದು. ನಾವೆಲ್ಲ ಆಗ ನಾಲ್ಕನೆ ಇಯತ್ತೆ !! ಪಾಟಿ ಬಳಪದ ಬೆರಳಿನ ಬರಹದ ಅಂದದ ದಿನಗಳು.
ಸೈಕಲ್ ಏರಿ ಯಾವಾಗಲೂ ಎಲೆಯಡಿಕೆ ಮೆಲ್ಲುತ್ತ ಬರುವ ಅವರು ಕ್ಲಾಸಿನಲ್ಲಿ ಕನ್ನಡ ಪಾಠ ಹೇಳಿಕೊಟ್ಟು ಉಳಿದ ಸಮಯದಲ್ಲಿ ಜಾನಪದ ಗೀತೆಗಳನ್ನು ರಾಗವಾಗಿ ಹಾಡುತ್ತ ಕೂತುಬಿಡುತ್ತಿದ್ದರು. ಸುವ್ವೀ ಸುವ್ವೀ ಅನ್ನೋ ಜನಪದ ಹಾಡುಗಳನ್ನು ಹಾಡುವ ಮಾಸ್ತರೆಂದರೆ ಉಳಿದ ಟೀಚರಮ್ಮಗಳಿಗೆ ಅಸಡ್ದೆ. ಹೆಣ್ಣುಪೆಕ್ಡಾ ಅನಿಸಿದ್ದರೋ ಏನೋ. ಯಾರೂ ಅವರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ಅದು ಮಕ್ಕಳಿಗೂ ಗೊತ್ತಾಗಿತ್ತು. ಅವರನ್ನು ಪ್ರೀತಿಯಿಂದ ಕಂಡವರೆಂದರೆ ಮಕ್ಕಳೇ. ಅಂದು ಅವರು ಹಾಡಿದ ಹಾಡಿನ ನಾದ ಕಿವಿಯಿಂದ ದೂರವಾದರೂ ಮ್ನಸಿನಿಂದ ದೂರವಾಗಿಲ್ಲ. ಅದೊಂದು ಗ್ರಾಮೀಣ ಹೆಣ್ಣುಮಗಳು. ಅವಳಿದ್ದುದು ತವರೋ, ಗಂಡನ ಮನೆಯೋ ! ಯಾವುದೋ ಒಂದು! ಎನೂ ಗೊತ್ತಾಗದ ವಯಸ್ಸು. ಬಳೆಗಾರನ ವೇಷದಲ್ಲಿ ಅವಳ ಅವನು ಬಾಗಿಲಿಗೆ ಬಂದಿರುತ್ತಾನೆ. ಕೈ ಹಿಡಿದು ಬಳೆ ತೊಡಿಸುತ್ತಾನೆ, ಕೈ ಬಿಡು ಅಂತಾಳೆ, ಆಮೇಲೆ ಸೆರಗು ಹಿಡಿಯುತ್ತಾನೆ , ಅವನಿಂದ ಬಿಡಿಸಿಕೊಳ್ಳುವ ಉಪಾಯಕ್ಕೆ ಅವಳು – ನನ ಮೈದುನ ಬಂದಾನು ಬಿಡಬಿಡ ಸೆರಗ ಸುವ್ವಿ..”

ನಮ್ಮ ಅತ್ತೆ ಬಂದಾಳ ಬಿಡು, ನಮ್ಮ ಮಾವ ಬಂದರೆ ಬಿಡು- ಹೀಗೆಲ್ಲ ಒಬ್ಬೊಬ್ಬರ ಹೆಸರನ್ನೆಲ್ಲ ಹಿಡಿದು ಹೇಳಿ, ಸುವ್ವೀ ಹಾಡುತ್ತಿದ್ದ ಪಡಸಾಲಿ ಮಾಸ್ತರರನ್ನು ಯಾಕೋ ಆ ಹುಡುಗಿಗೂ ಮರೆಯಲಾಗಲ್ಲಿಲ್ಲ. ಆಗ ಅರ್ಥವಾಗದಿದ್ದ ಜಾನಪದ ಹಾಡಿನ ಅನೇಕ ಹಾಡು ಕೇಳಿದ್ದರೂ, ಪದಸಾಲಿ ಮಾಸ್ತರ ಹಾಡು ಮರೆಯಲಾಗಿಲ್ಲ. ಯಾಕೆಂದರೆ ಮಾಸ್ತರು ಅವಳನ್ನು ಕರೆಯುತ್ತಿದ್ದುದೂ – ಸೊಸೆಮುದ್ದೇ ! ಏ ಸೊಸೆಮುದ್ದ ಬಾರಿಲ್ಲಿ ಅಂದರೆ ಸಾಕು ಎರೆಮಣ್ಣಿನಂತ ಹುಡಿಗಿಯ ಮನಸ್ಸಲಿ ಎಳೆ ಗರಿಕೆ ಚಿಗುರುತ್ತಿತ್ತು. ಹಸೀ ಮುದ್ದೆ ಮಣ್ಣಿನಲ್ಲಿ ಊರಿದ ಸಸಿಗಳ ಹಸಿರು ಬಲು ಸೊಗಸು. ಸೊಸೆಮುದ್ದು – ಎಷ್ಟು ಚೆಂದದ ಹೆಸರು. ಆ ಚೆಂದವನ್ನೆಲ್ಲ ಹತ್ತಿ ಹೊಲದಲ್ಲಿ, ಜೋಳದ ತೆನೆಯಲ್ಲಿ ಅಲೆದಲೆದು ಹುಡುಕಿದಳು. ಪಡಸಾಲಿ ಮಾಸ್ತರ ಸೊಸೆಮುದ್ದು ಸುವ್ವಿ ಹಾಡಲ್ಲಿ ಮರೆತುಹೋದಳು ! ಎಳೆ ಬೆಳದಿಂಗಳ ಎಳಸು ಮೂಗಿನ ಹುಡುಗ ಹೊಂಗೆಯ ಹೂವಲ್ಲಿ ಕಳೆದುಹೋದ !
ದಾರಿಗುಂಟ ಹೀಗೆ ಸಾಗಿದ ಹರಿವಿನಲ್ಲಿ ಮತ್ತೆ ನೆನಪಾದದ್ದು ಮೌನದ ಹುತ್ತದಲ್ಲಿ ಜಾರಿಹೋದ ಅಪ್ಪ. ಅಪ್ಪನಿಗೆ ಏನೋ ಅಸೌಖ್ಯವಾಗಿ ಇನ್ನು ಬದುಕುವುದಿಲ್ಲ ಎಂದು ಅವರಿಗೆ ತೋರಿತೋ ಏನೋ ಒಂದೂ ಗೊತ್ತಾಗದ ರೀತಿಯಲ್ಲಿ ಅವರ ಮೌನ ನಿಗೂಡವಾಯಿತು. ಈಗಲೂ ಆ ನಿಗೂಡ ಮೌನ ಕಾಡುತ್ತದೆ. ಯಾಕೆ ಮೌನವಾಗಿ ಹೋದ ಅವನು. ಆ ನೀರವ ಮುನದಲ್ಲೇ ತೂಕಡಿಸುವ ಅಪ್ಪನಿಗೆ – ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು —-ಚಿಕ್ಕ ವಾ.. ಚಿಕ್ಕವಾ……ಹಾಡಿ ತೋರಿಸುವಾಗ ಅವನ ಮೌನ ಕಂಡು ಸಿಟ್ಟು ಬಂದು – ನೀ ಕೇಳ್ತಿಯಿಲ್ಲೋ ನನ್ನ ಹಾಡು ಎಂದು ಗಲ್ಲ ಉಬ್ಬಿಸುವ ಹುಡಿಗಿಗೆ ಅಪ್ಪ- ’ನಿನ್ನ ಹಾಡ ಕೇಳಾಕತ್ತೀನವಾ…. ಹಾಡು… ಹಾಡು ’- ಎನ್ನುವ ಸೊಲ್ಲಿಗೆ ಪೂರ್ತಿ ಸಮಾಧಾನವಾಗಲಿಲ್ಲ. ಯಾಕೋ ಸುವ್ವೀ ಸುವ್ವೀ ಹಾಡುವ ಪಡಸಾಲೆ ಮಾಸ್ತರರ ಹಾಡಿನ ಹುಚ್ಚೂ, ಮಕ್ಕಳ ಮೇಲಿನ ಪ್ರೀತಿಯೂ, ಅವರ ಸೊಸೆಮುದ್ದೂ ನೆನಪಾಗಿ ಕಣ್ಣು ಹನಿಯಾಯಿತು. ಎಲ್ಲೋ ಏನೋ ಕೊರೆಯುತ್ತಿತ್ತು ಸಣ್ಣಗೇ !
ಸುವ್ವೀ ಸುವ್ವೀ ಸೆರಗಿನ ಮರೆಯಲ್ಲೇ ನಾಗರಪಂಚಮಿಗೆ ದೊಡ್ದ ಹುಣಿಸೆ ಮರಕ್ಕೆ ಕಟ್ಟಿದ ಜೋಕಾಲಿ ಮೇಲಕ್ಕೆರಿ ಏರಿ ಜೀಕುವಾಗ ಎದೆ ಹೂದೋಟದಲ್ಲಿ ಸಾವಿರ ಭ್ರಮರಗಳು ಹಾಡುತ್ತಿದ್ದವು. ಊರ ಉಡಾಳರ ಗುಂಪೆಲ್ಲ ಜೀಕುವ ಲಲನೆಯರನ್ನೆ ನೋಡಲು ಜಾತ್ರೆ ಸೇರುತ್ತಿತ್ತು. ಅವರನ್ನು ದೂರ ಓಡಿಸಲು ಇನ್ನೊಂದು ಹಿರಿಯರ ಗುಂಪು. ಎಂಥಾ ಗದ್ದಲ , ಜನಜಾತ್ರೆ ಪಂಚಮಿಗೆ. ನಾಗರಪಾಣಿಯನ್ನು ಆಯ್ದು ತಿನ್ನುವ ಚಿಗುರೆಲೆ ಹುಡುಗಿ ಹಸಿರು ತೊಡುವಾಗ ಅಂಗಳ ತುಂಬೆಲ್ಲ ಬೆಳದಿಂಗಳ ರಂಗೋಲಿ ಹಾಸಿತ್ತು.
ಕಾಲ ಪ್ರವಾಹದ ಜೋಕಾಲಿಯ ಜೀಕಿನಲ್ಲಿ ಮರೆತ ಗೆಳತಿ ಥಟ್ಟನೇ ನೆನಪಾಗಿ, ಮಧ್ಯಾಹ್ನ ಅವಳೇ ಫೋನ್ ಮಾಡಿ – ರಾಗವಾಗಿ ’ಹ್ಯಾಪಿ ಫ್ರೆಂಡಶಿಪ್ ಡೇ – ಎಂದಾಗ ಅಯ್ಯ ಮಾರಾಯತೀ ನೀ ಕೊಲ್ಲಾಪುರದಲ್ಲಿ ಮರೆತುಹೋದಿಯೇನೋ ಅಂದ್ಕೊಂಡಿದ್ದೆ ಅನ್ನುವ ತಾನೂ, ಅವಳು- ಯಾಕ ಮರೀಲಿ ? ನಾಗರ ಪಂಚಮಿಗೆ ಅಳ್ಳು ಹುರಿಲಿಕತ್ತೀನಿ, ನಾಳೆ ತಂಬಿಟ್ತು ಮಾಡ್ಬೇಕು ಎಂದೆಲ್ಲ ಹೇಳುವಾಗ ನಾವು ತಂಬಿಟ್ಟು, ಅಳ್ಳಿಟ್ಟಿನ ಉಂಡಿ ತಿಂದು ಜೋಕಾಲಿ ಜೀಕಿ ಹಗುರಾದ ದಿನಗಳು ಕಾಡತೊಡಗಿದವು. ಪಡಸಾಲಿ ಮಾಸ್ತರ ಹಾಡು ನೆನಪರೆ ಅದ್ನೋ ಇಲ್ಲೋ ಕೇಳಬೇಕೆಂದರೂ ಕೇಳಲಾಗಲಿಲ್ಲ…..






Ninna lokadallidda haage annisthu oduvashtoo hottu …