ಏಯ್ ಬಾವಾ…
ಮನುಷ್ಯ ಸ್ವಭಾವ ಹುಟ್ಟಿನಿಂದಲೇ ಬಂದಿರುತ್ತಾ? ಅದೇನೋ ಗೊತ್ತಿಲ್ಲ. ನಾನಂತೂ ಹುಟ್ಟಾ ಸಂಕೋಚದವನು. ಆ ಸಂಕೋಚದ ಸ್ವಾಭವವೇ ನನ್ನ ವ್ಯಕ್ತಿತ್ವವನ್ನು ರೂಪಿಸಿದೆ ಅಂದುಕೊಂಡಿದ್ದೇನೆ. ಹುಡುಗನದು ತುಂಬಾ ವಿನಯದ ಸ್ವಭಾವ. ಯಾವುದೇ ಗದ್ದಲ ಗಲಾಟೆ ಇಲ್ಲ. ಎಷ್ಟು ಬೇಕೋ ಅಷ್ಟೇ ಮಾತು. ಕೇಳಿದ್ದಕ್ಕೆ ಮಾತ್ರ ಉತ್ತರ ತುಂಬಾ ಒಳ್ಳೆಯ ಹುಡುಗ ಎಂದು ಶಾಲೆಗಳಲ್ಲಿ ಅಂದರೇ ತುಂಬಾ ಮಿತಭಾಷಿ. ಅನಾವ್ಯಕವಾಗಿ ಎಲ್ಲದಕ್ಕೂ ಮೂಗು ತೂರಿಸುವುದಿಲ್ಲ. ಹಾಗಾಗಿ ಎಲ್ಲರಿಗೂ ಇಷ್ಟವಾಗುತ್ತಾನೆ ಎಂಬುದು ಮಿತ್ರವಲಯದ ಭಾವನೆ. ಯಾವುದೇ ಕಿರಿಕಿರಿಯಿಲ್ಲ. ಮಾತು ಬಹಳ ಕಡಿಮೆ. ಸಹೋದ್ಯೋಗಿಗಳಿಂದ ಕೆಲಸ ತೆಗೆಯಲು ಎಷ್ಟು ಅವಶ್ಯವೋ ಅಷ್ಟೇ ಮಾತುಕತೆ. ಹಾಗಾಗಿ ಕೆಲಸದ ವಾತಾವರಣ ತಿಳಿಯಾಗಿದ್ದು, ನಾವು ನೆಮ್ಮದಿಯಿಂದ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂಬುದು ಕಛೇರಿಯ ಜೊತೆ ಕೆಲಸಗಾರರ ಪ್ರಶಂಸೆ.
ಅದು ಹೋಗಲಿ ನಾನು ಮದುವೆಯಾಗಿರುವುದು ದೂರದ ಊರಿನಲ್ಲಿ . ಹೊಚ್ಚ ಹೊಸ ಪರಿಸರ. ಭಾವಾಜಿ ಬಹಳ ಬುದ್ದಿವಂತರು. ಅನಾವಶ್ಯಕವಾಗಿ ಯಾವುದೇ ವಾಗ್ವಾದದಲ್ಲಿ ಭಾಗಿಯಾಗುವವರಲ್ಲ. ಬಹಳ ಒಳ್ಳೆಯಯವರು. ಆ ಊರು ಯುವಕ ಯುವತಿಯರು, ನೆಂಟರ ಪ್ರಶಂಸೆಯ ಮಾತು. ಹಾಗಾಗಿ ಈ ಸಂಕೋಚದ ಸ್ವಭಾವದಿಂದಾಗಿಯೇ ನನಗೆ ಒಳ್ಳೆಯವನು ಎಂಬ ಹಣೆ ಪಟ್ಟಿ ಅಂಟಿಕೊಂಡು ಬಿಟ್ಟಿದೆ ಅಂದುಕೊಂಡಿದ್ದೇನೆ. ಈ ಲೇಖನ ಕಾರಣದಿಂದಾಗಿಯೋ, ಯಾವುದೇ ಕ್ರಿಯೆ ಜರುಗಿಸುವಾಗಲೂ ಒಳ್ಳೆಯತನ ಪ್ರದರ್ಶಿಸುವುದು ಅನಿವಾರ್ಯವಾಗಿದೆಯೋ ಎಂದು ಒಮ್ಮೊಮ್ಮೆ ಯೋಚಿಸುತ್ತೇನೆ.
ಅತಿಯಾದ ಒಳ್ಳೆಯತನ ಆರೋಪಿತವಾಗುವುದ ಆ ವ್ಯಕ್ತಿಯ ವ್ಯಕ್ತಿತ್ವದ ದೌರ್ಬಲ್ಯವೂ ಹೌದು ಎಂಬುದು ಕೂಡ ಸುಳ್ಳಲ್ಲ ಎಂಬುದು ನನ್ನ ಅಭಿಮತ. ಅವತ್ತು ತಿಂಡಿ ತಿಂದು ಆಫೀಸಿಗೆ ಹೊರಡುವಾಗ ಆಗಲೇ ಎಂದಿಗಿಂತಾ ಕಾಲು ಗಂಟೆ ತಡವಾಗಿತ್ತು. ಆದರೆ ಏನೇ ಆಗಲೀ, ನನ್ನ ಬಜಾಜ್ ನನ್ನ ತೋಟದಿಂದ ಹಾಸನಕ್ಕೆ ಹತ್ತು ನಿಮಿಷದಲ್ಲಿ ಕರೆದುಕೊಂಡು ಹೋಗುತ್ತದೆ. ಎಂಟು ಕಿಲೋಮೀಟರ್ ಯಾವ ದೂರ ಎಂದು ಕೊಳ್ಳುತ್ತಲೇ ಸ್ಕೂಟರ್ ಚಾಲನೆ ಮಾಡಿದೆ. ಅರ್ಧ ಕಿಲೋಮೀಟರ್ ಕ್ರಮಿಸಿ ಮುಖ್ಯ ರಸ್ತೆ ಸೇರಿಕೊಂಡೆ` ಸ್ಕೂಟರ್ನ ವೇಗ ಹೆಚ್ಚಾಯಿತು. ಯಾರೋ ನನ್ನ ಆಲೋಚನೆಯ ವೇಗವೂ ಹೆಚ್ಚಾಯಿತು. ನಾಲ್ಕು ಕಿಲೋಮೀಟರ್ ಮುಂದೆ ಹರಳಹಳ್ಳಿ ಗಡಿಯಲ್ಲಿ ಆ ಸುಂದರಿ ಇರಬಹುದೇ ! ಛೇ ಛೇ ಇರಲಾರದು ಈಗಾಗಲೇ ತಡವಾಗಿದೆ. ಇಷ್ಟರಲ್ಲಿ ಆಕೆ ಬಸ್ಸು ವ್ಯಾನೋ ಹತ್ತಿ ಹೋಗಿರುತ್ತಾಳೆ ಅಂದುಕೊಳ್ಳತೊಡಗಿದೆ.
ಸುಮಾರು ಒಂದು ವರ್ಷದಿಂದ ಅವಳು ಆ ಗಡಿಯಲ್ಲಿ ನಾನು ಅಲ್ಲಿ ದಾಟಿ ಹೊಗುವ ಸಮಯದಲ್ಲಿಯೇ ಬಸ್ಸು ಹತ್ತಿರುತ್ತಾಳೆ. ಸುಂದರಿ ಎನ್ನಲೂ ಅಡ್ಡಿ ಇಲ್ಲ. ವೇಷಭೂಷಣದಿಂದ ಆಕೆ ಮುಸ್ಲಿಂ ಎಂಬುದು ರುಜುವಾತಾಗಿರುತ್ತದೆ. ದಿನ ಹೋಗುತ್ತಾ ನೋಡಿ ನೋಡಿ ಮುಖಪರಿಚಯವಾಗಿ ಬಿಟ್ಟಿದೆ. ಇತ್ತಿಚೆಗೆಗಂತೂ ನಾನು ಅವಳನ್ನು ದಾಟಿ ಹೋಗುವಾಗ ಆಕೆಯ ಮುಖದಲ್ಲಿ ನಸು ನಗೆಯೊಂದು ಮೂಡುವುದನ್ನು ನೋಡಿದ್ದೇನೆ. ಆದರೆ ನನ್ನ ಸ್ವಭಾವ ಸಹಜಗುಣದಂತೆ ಅದನ್ನು ಕಂಡು ಕೊಂಡಿರುವಂತೆ ಅವಾಯ್ಡ್ ಮಾಡಲು ಪ್ರಯತ್ನಿಸುತ್ತ ಮುಂದೆ ಸಾಗುತ್ತೇನೆ. ನನ್ನ ಒಳ್ಳೆಯತನ ಗುರಾಣಿ ಹಿಡಿದು ಎಷ್ಟೇ ದೃಷ್ಟಿ ತಪ್ಪಿಸಲು ಹೆಣಗಾಡಿದರೂ ಆ ಸ್ಥಳಕ್ಕೆ ಬಂದಾಗ ನನ್ನ ಮನಸ್ಸು ಆ ಸುಂದರಿಯೆಡೆಗೆ ಸೆಳೆಯುವುದು ಸುಳ್ಳೇನೂ ಇಲ್ಲ. ಅವಳು ಮುಗುಳ್ಳನಗುವಾಗ ನನ್ನ ಮನಸ್ಸಿನಲ್ಲುಂಟಾಗುವ ಪುಳಕ ಮುಂದೆ ಮಾರ್ಪಡಬಹಹುದು. ಯಾವುದೋ ಜಟಿಲ ಸಮಸ್ಯೆಯ ಮುನ್ಸೂಚನೆ ಇರಬಹುದೇ ಎಂದು ಆಲೋಚಿಸಿದ್ದು ಉಂಟು. ಏನೇ ಆಗಲಿ ನನ್ನ ದಾರಿಯಲ್ಲಿ ನಾನು ಸಾಗಿ ಹೋಗಬೇಕು. ಅವಳ ಪಾಡಿಗೆ ಅವಳಿರಲಿ ಎಂದು ಕೊಂಡೆ.
ಇನ್ನೂ ಗಡಿ ಸಮೀಪಿಸಲು ಎರಡು ಪರ್ಲಾಂಗ್ ಇದೆ. ನನ್ನ ನಿರ್ಧಾರವನ್ನು ಮೀರಿ ನನ್ನ ದೃಷ್ಟಿ ಆಕೆ ನಿಲ್ಲುತ್ತಿದ್ದ ಮರದಡಿಗೆ ಹೋಯಿತು. ಹೌದು, ಅವಳು ಅಲ್ಲಿಯೇ ನಿಂತಿದ್ದಾಳೆ. ಇದೇನು ಇವತ್ತು ಇಷ್ಟು ತಡವಾದರೂ ಇನ್ನು ಹೋಗಿಲ್ಲ… ಏನಾದರಾಗಲಿ ನನಗೆ ಇನ್ನು ನನ್ನದಾರಿ ನನಗೆ ಎಂದು ಕೊಳ್ಳುತ್ತ ಸ್ಕೂಟರ್ ವೇಗ ಹೆಚ್ಚಿಸಿದೆ. ಇನ್ನೇನು ಹತ್ತು ಮಾರು ದೂರ ಇದೆ. ಆಕೆ ಕೈ ಚಾಚಿ ನಿಲ್ಲಿಸುವ ಸೂಚನೆ ಕೊಡುತ್ತಿದ್ದಾಳೆ. ಮುಖದಲ್ಲಿ ಅದೇ ಸಹಜ ನುಗು. ನನ್ನ ಎದೆ ಡವಡವ ಹೊಡೆದುಕೊಳ್ಳತೊಡಗಿದೆ. ನಿಲ್ಲಿಸುವುದು ಬೇಡ. ಹಾಗೆಯೇ ಮುಂದೆ ಹೋಗಿ ಬಿಡೋಣ ಎಂದು ಕೊಂಡರೋ ಮನಸ್ಸು ತಡೆಯಲಿಲ್ಲ. ಅದು ಒಳ್ಳೆಯತನದ ಲಕ್ಷಣವಲ್ಲ ಎಂದಿತ್ತು ಮನಸ್ಸು. ಸ್ಕೂಟರ್ ಅವಳ ಮುಂದೆ ನಿಂತುಕೊಂಡಿತು. ಸಾರಿ ಸಾರ್ ತೊಂದರೆ ಕೊಡ್ತ್ ಇದ್ದೀನಿ… ಸ್ವಲ್ಪ ಸಂತೆಪೇಟೆವರೆಗೆ ಡ್ರಾಪ್ ಕೊಡಿ. ಇವತ್ತು ಸಂತೆ ಅಲ್ವ ಯಾವ ಬಸ್ಸು ನಿಲ್ಲಿಸಲಿಲ್ಲ. ಬಸ್ಸು ವ್ಯಾನು ಎಲ್ಲಾರಷ್ಸು ಎಂದಳು. ದನಿಯಲ್ಲಿ ಆತಂಕವಿತ್ತು. ನಾನು ಸುಮ್ಮನೆ ಅವಳ ಮುಖ ನೋಡಿದೆ. ನಾನು ಗೊರೂರಿನಲ್ಲಿ ಟೀಚರ್ ಆಗಿದ್ದೀನಿ. ಇವತ್ತು ತುಂಬಾ ಲೇಟಾಗಿದೆ. ನಮ್ಮ ಹೆಡ್ಮಾಸ್ಟರ್ ಬಹಳ ಸ್ಟ್ರಿಕ್ಟು. ಆಬ್ಸೆಂಟ್ ಹಾಕಿ ಬಿಡುತ್ತಾರೆ. ನಾನು ಗೊಂದಲದಲ್ಲಿ ಸಿಲುಕಿರುವುದನ್ನು ಕಂಡು ಅವಳೇ ಮತ್ತೆ ಮಾತಾಡಿದಳು.
ನಾನು ಹೂಂ ಅಂದದ್ದೇ ತಡ. ಸ್ಕೂಟರ್ ಪಿಲಿಯನ್ ಸೀಟ್ ಏರಿ ಕುಳಿತಳು. ಸ್ಕೂಟರ್ ಮುಂದೆ ಹೋದಂತೆ ಯಾರೋ ಎಳೆದಾಡುತ್ತಿದೆ ಎನ್ನಿಸಿತು. ಹಿಂತಿರುಗಿ ನೋಡಿದೆ. ಆಕೆ ಮುಜುಗರ ಪಟ್ಟುಕೊಂಡು ತುದಿಯಲ್ಲೇ ಕುಳಿತ್ತಿದ್ದಳು. ಇದ್ಯಾವ ಗ್ರಹಚಾರ. ಈಕೆ ಎಲ್ಲಾದರೂ ಸ್ಕೂಟರ್ನಿಂದ ಉದುರಿ ತೊಂದರೆಗೆ ಸಿಲುಕುವಂತಾಗಬಾರದು ಎಂದು ಸರಿಯಾಗಿ ಕೂತ್ಕೋಳಿ ಮೇಡಂ ಎಂದೆ. ಆಕೆ ಹಿಂದಕ್ಕೆ ಸರಿಯಾಗಿ ಒತ್ತಿಕುಳಿತು ಒಂದು ಕೈಯಲ್ಲಿ ನನ್ನ ಭುಜ ಹಿಡಿದುಕೊಂಡಳು. ಸ್ಕೂಟರ್ ವೇಗ ಪಡೆದುಕೊಂಡಿತು. ಹೊಸ ಪರಿಸರದಲ್ಲಿ ಮನಸ್ಸು ಗಲಿಬಿಲಿಗೊಂಡಿತು. ಸಹಜ ಸ್ಥಿತಿಗೆ ಬರಲು ಸ್ವಲ್ಪ ಹೊತ್ತೆ ಬೇಕಾಯಿತು. ನಾನು ಸ್ಕೂಟರ್ನಲ್ಲಿ ಹುಡುಗಿಯನ್ನು ಕೂರಿಸಿಕೊಂಡು ಹೋಗುವುದನ್ನು ಯಾರದರೂ ಪರಿಚಿತರು ನೋಡಿದರೆ ಏನೆಂದುಕೊಂಡಾರೂ ಎಂದು ಮನಸ್ಸು ಅಳುಕುತ್ತಿತ್ತು. ಇರಲಿ ನಾನೇನು ತಪ್ಪು ಮಾಡುತ್ತಿಲ್ಲವಲ್ಲ. ತೊಂದರೆಯಲ್ಲಿರುವವರಿಗೆ ಸಹಾಯ ಮಾಡುತ್ತಿದ್ದೇನೆ ಅಷ್ಟೆ ಎಂದು ಮನಸ್ಸು ಗಟ್ಟಿಮಾಡಿಕೊಂಡೆ.
ನಾನು ತೊಂದರೆಗೆ ಸಿಲುಕಿಕೊಂಡಿದ್ದೇನೆ ಎಂದು ತಿಳಿದದ್ದೆ ತಣ್ಣೀರುಹಳ್ಳ ತಲುಪಿದಾಗ. ಸಂತೆ ಆದ್ದರಿಂದ ರೆಗ್ಯಲೇಟೆಡ್ ಮಾರ್ಕೆಟ್ನಿಂದ ತಣ್ಣೀರುಹಳ್ಳದ ವರೆಗೆ ಟ್ರಾಫಿಕ್ ಜಾಮ್ ಆಗಿ ಬಿಟ್ಟಿದೆ. ಬೇಗ ಸಂತೆಪೇಟೆ ತಲುಪಿ ಗೊರೂರು ರಸ್ತೆ ಸರ್ಕಲ್ನಲ್ಲಿ ಈಕೆಯನ್ನು ಇಳಿಸಿ ಮುಜುಗರದಿಂದ ಪಾರಾಗಬಹುದೆಂಬ ನನ್ನ ಆಸೆ. ಸುಲಭದಲ್ಲಿ ಈಡೇರುವಂತೆ ತೋರಲಿಲ್ಲ. ಆ ಟ್ರಾಫಿಕ್ ಮಧ್ಯಯೇ ನನ್ನ ಬಜಾಜ್ ನನ್ನನ್ನು ನುಸುಳುತ್ತ ಸಾಗುತ್ತಿತ್ತು. ನಮ್ ಗಡಿ ಟೀಚರ್ ಅಮ್ಮ ನಿಮ್ ಈಮ್ ಯಾರಜೊತೆಯಲೋ ಬೈಕಲ್ಲಿ ಹೋಗತ್ತ ಅವಳ ಲಗೇಜ್ ಆಟೋದಲ್ಲಿ ಕುಳಿತ ಹೆಂಗಸರು ವ್ಯಂಗ್ಯವಾಗಿ ಮಾತಾಡಿಕೊಳ್ಳುವುದು ಕೇಳಿತು. ಅತ್ತ ತಿರುಗಿನೋಡುವ ಧೈರ್ಯವಾಗಲಿಲ್ಲ. ಸ್ಕೂಟರ್ ಎಡಕ್ಕೆ ಹೊರಳಿಸಿ ಪಾರಾಗಲು ಯತ್ನಿಸುತ್ತಿದ್ದೆ.
ಪಕ್ಕದಲ್ಲಿಯೇ ನಮ್ಮ ತೋಟದ ಪಕ್ಕದ ಹಳ್ಳಿಯ ಗಾಡಿ ಮಿಲ್ಲಿಗೆ ಹೋಗುತ್ತಿದೆ. ಅವರು ನನ್ನನ್ನೇ ಗಮನಿಸುತ್ತಿದ್ದಾರೆ. ನೋಡ್ಲ ಅಣ್ಣಾವ್ರನ್ನ ಹಿಂದೆ ಮೂಟೆಯ ಮೇಲೆ ಕುಳಿತ್ತಿದವನು ಮುಂದೆ ಗಾಡಿ ಹೊಡೆಯುತ್ತಿದ್ದವನನ್ನು ತಿವಿದು ಹೇಳುತ್ತಿದ್ದ. ನನಗ್ಯಾಕೆ ಬೇಕಾಯಿತಪ್ಪ ಈ ಪಾಡು ಈಕೆಯನ್ನು ಇಲ್ಲಿಯೇ ಉದುರಿಸಿ ಹೋಗಿ ಬಿಡಲೇ ಎಂಬಷ್ಟು ಸಿಟ್ಟು ಬಂದಿತ್ತು. ಕಳ್ಳತನ ಮಾಡಿ ಜನರಿಂದ ತಪ್ಪಿಸಿಕೊಂಡು ಹೋಗಲು ಹೆಣಗಾಡುತ್ತಿರುವನ ಪರಿಸ್ಥಿತಿಯಾಗಿತ್ತು ನನ್ನದು. ಗಾಡಿಯವರಿಂದ ತಪ್ಪಿಸಿಕೊಳ್ಳಲು ಎದುರಿನ ಲಾರಿಯ ಬಲಕ್ಕೆ ಸ್ಕೂಟರ್ ಹೊರಳಿಸಿ ಟ್ರಾಫಿಕ್ ಮಧ್ಯೆ ನುಸುಳ ತೊಡಗಿದೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ನನ್ನ ಮಿತ್ರರೊಬ್ಬರು ಎದುರಾಗಬೇಕೇ? ಅವರು ಬೈಕ್ನಲ್ಲಿ ಕುಳಿತು ನನ್ನಂತೆಯೇ ಟ್ರಾಫಿಕ್ ನಲ್ಲಿ ನುಸುಳುತ್ತಾ ಎದುರುದಿಕ್ಕಿನಿಂದ ಬರುತ್ತಿದ್ದಾರೆ. ಅಯೋ ದೇವರೇ. ನೋಡದೇ ಇದ್ರೆ ಸಾಕಾಲ್ಲ… ನೋಡಿದ್ರೆ ನಮ್ಮ ಮಿತ್ರ ವಲಯದಲ್ಲೆಲ್ಲ ಟಾಂಟಾಂ ಹೊಡೆದು ಬಿಡುತ್ತಾರೆ.
ಪರಿಸ್ಥಿತಿಯಿಂದ ಪಾರಾಗಲು ಎಂದು ನೆನೆಯದ ದೇವರನ್ನು ನೆನಪಿಸಿಕೊಳ್ಳತೊಡಗಿದೆ. ನನ್ನ ದುರಾದೃಷ್ಟ ಅವರು ನೋಡಿಯೇ ಬಿಟ್ಟರು. ನನ್ನನ್ನು ನೋಡಿ ನಗು ಅರಳಿಸಿದವರ ಮುಖದಲ್ಲಿ ಆಶ್ಚರ್ಯಕರ ಚಿಹ್ನೆ ಮೂಡಿತು. ಹಿಂದೆ ಕುಳಿತವಳ ಕಡೆ ನೋಡುತ್ತಾ ಏನ್ಸಾರ್ ಎಂಬ ವ್ಯಂಗ್ಯ ಚಟಾಕಿ ಎಸೆದು ಟ್ರಾಫಿಕ್ನಲ್ಲಿ ಮಾಯಾವಾದರು. ಹುಡುಗಿಯನ್ನು ಕೂರಿಸಿಕೊಂಡು ಈ ಟ್ರಾಫಿಕ್ ಮಧ್ಯೆ ಮೆರವಣಿಗೆ ಹೋಗುವ ಪಾಡು ಯಾವನಿಗೆ ಬೇಕಾಗಿದೆ ಎಂದು ಪೇಚಾಡಿಕೊಳ್ಳುತ್ತಾ ಇನ್ನು ಕೆಲವೇ ಗಜ ಸರ್ಕಲ್ನಲ್ಲಿ ಇವಳನ್ನು ಉದುರಿಸಿ ಪರಾದರೆ ಸಾಕು ಎಂದು ಕೊಳ್ಳುತ್ತಾ ಸ್ಕೂಟರ್ನನ್ನು ಸಿಕ್ಕಲ್ಲಿ ನುಗ್ಗಿಸತೊಡಗಿದೆ.

ನನ್ನ ದುರಾದೃಷ್ಟದ ಪರಮಾವಧಿಯೋ ಏನೋ ಎಂಬಂತೆ ಪಕ್ಕದಲ್ಲೇ ಹಾದು ಹೋಗುತ್ತಿದ್ದ ನನ್ನ ಹೆಂಡತಿಯ ಊರಿನವರ ಜೀಪ್. ನನ್ನನ್ನ ನೋಡದಿದ್ದರೆ ಸಾಕಲ್ಲ ದೇವರೇ ಮತ್ತೆ ಎಂದು ನಂಬದ ದೇವರ ಮೊರೆ ಹೋದೆ. ಯಾವ ದೇವರು ನನ್ನನ್ನು ಈ ಮುಜುಗರದ ಪರಿಸ್ಥಿತಿಯಿಂದ ಪಾರು ಮಾಡಲು ಶಕ್ತರಾಗಿಲ್ಲ. ಅದರಲ್ಲಿ ಕುಳಿತ ಯುವಕರೆಲ್ಲ ನನ್ನೆಡೆಗೆ ನೋಡುತ್ತಿದ್ದಾರೆ. ಅದರಲ್ಲಿ ಹಬ್ಬ , ಜಾತ್ರೆಯಲ್ಲಿ ಅವರ ಊರಿಗೆ ಹೋದಾಗ ಗೌರವದಿಂದ ಕಾಣುವ ಹುಡುಗರು ಇದ್ದಾರೆ. ಅದರಲ್ಲೂ ದೂರದಲ್ಲೇ ನಿಂತು ಬಾಗಿ ಕೈ ಕುಲುಕುತ್ತಾ ಏನ್ ಬಾವಾಜಿ ಚನ್ನಗಿದ್ದೀರಾ ಎಂದು ಕುಶಲ ವಿಚಾರಿಸುವ ಆ ಹುಡುಗನು ಅಚ್ಚರಿಯಿಂದ ನೋಡುತ್ತಿದ್ದಾನೆ. ಜೀಪ್ ಸ್ಕೂಟರ್ ಅನ್ನು ದಾಟಿ ಮುಂದೆ ಹೋಗ ತೊಡಗಿತ್ತು. ನಾನು ಅವರೆಲ್ಲರ ದೃಷ್ಟಿ ತಪ್ಪಿಸಿ ಸ್ಕೂಟರನ್ನು ಟ್ರಾಫಿಕ್ ಮಧ್ಯೆ ನುಗ್ಗಿಸುತ್ತಿದ್ದೆ.
ಅದರಲ್ಲಿದ್ದ ನನ್ನ ಪ್ರೀತಿಯ ಯುವಕ ಕೂಗಿದ ಏನ್ಬಾವ? ನಾನು ಅವನ ಮುಖ ನೋಡಲಿಲ್ಲ. ಅದಕ್ಕೆ ಅವನ ಮಾತಿನ ಭಾವದಲ್ಲಿದ್ದ ಪ್ರಶ್ನೆ, ಅಚ್ಚರಿಯಲ್ಲ. ಅರ್ಥವಾಯಿತು. ವ್ಯಂಗ್ಯ ನನ್ನನ್ನು ಚುಚ್ಚಿ ಅಲ್ಲಾಡಿಸಿ ಬಿಟ್ಟಿತು. ಈ ಟ್ರಾಫಿಕ್ ನನ್ನನ್ನು ಸ್ಕೂಟರ್ ಸಮೇತ ನುಂಗಿ ಬಿಡಬಾರದೆ ಅನ್ನಿಸಿತು. ಎದುರಿಗೆ ಕಾಣುತ್ತಿದ್ದ ಗೊರೂರು ಸರ್ಕಲ್ ಮೈಲಿಗಟ್ಟಲೇ ದೂರದಲಿರುವಂತೆ ಭಾಸವಾಗತೊಡಗಿತು.
ಇರ್ರಿ ಸ್ವಲ್ಪ ! ಬೆಣ್ಣೆ ತಗೊಳೋಕ್ಕೆ ಲೇಟಾಗುತ್ತೆ !
ಮೊನ್ನೆ ಯಾವುದೋ ಕಾರ್ರನಿಮಿತ್ತ ನಮ್ಮವರೊಬ್ಬರನ್ನು ಭೇಟಿಯಾಗಲು ಜರೂರಾಗಿ ಹಾಸನಕ್ಕೆ ಬರಲು ಪೋನ್ ಮಾಡಿದ್ದರು. ನಮ್ಮ ತೋಟದಿಂದ ಬೇಲೂರು ಹಾಸನ ಮುಖ್ಯರಸ್ತೆ ತಲುಪಲು ಒಂದೆರಡು ಫರ್ಲಾಂಗ್ ಆಗುತ್ತದೆ. ಬಸ್ ಹಿಡಿಯಬೇಕಾದರೆ ಅಲ್ಲಿ ಗಡಿ ತಲುಪಲೇಬೇಕು. ನಡೆದೇಹೊರಟಿದ್ದೆ. ಎದುರಿಗೆ ಸಿಕ್ಕ ಗೌಡರೊಬ್ಬರು “ನಡೆದೇ ಹೊರಟಿರಿ” ಎಂದರು. “ಹುಂ” ಎನ್ನುತ್ತಾ ಅವಸರ ಪ್ರಕಟಿಸಿದೆ.ಅವರ ಪ್ರಶ್ನೆಗೆ ಸರಿಯಾದ ಉತ್ತರ ಸಿಗದಿದ್ದರಿಂದ “ಕಾರು?” ಎಂದರು. ಡ್ರೈವಿಂಗ್ ಗೊತ್ತಿಲ್ಲದವನಿಗೆ ಕಾರಿದ್ದು ಏನು ಪ್ರಯೋಜನ ಎಂದು ಅವರಿಗೆ ಹೇಗೆ ಹೇಳಲಿ! ಕಾರು ಬಂದ ಮೇಲೆ ಬೈಕು, ಸ್ಕೂಟರ್ ಎಲ್ಲಾ ಹುಡುಗರ ಪಾಲಾಗಬಿಟ್ಟಿವೆ. ನನಗಂತೂ ಸಣ್ಣಪುಟ್ಟ ಪಯಣಕ್ಕೆ ಕಾಲ್ನಡಿಗೆಯೇ ಗತಿ.ಗಡಿ ತಲುಪಿದ ಮೇಲೆ ಬಸ್ಸು ವ್ಯಾನಿಗಾಗಿ ಕಾಯುವುದು ಇದ್ದೇಇದೆ. ನಾನು ಎಷ್ಟೇ ಅವಸರಿಸಿದರೂ ಇನ್ನೇನು ಗಡಿ ತಲುಪುವುದು ನಾಲ್ಕು ಮಾರು ಇದೆ ಎನ್ನುವಾಗ ಹಾಸನ ಕಡೆಗೆ ಸೆಟಲ್ ಬಸ್ ದಾಟಿಬಿಡಬೇಕೆ?
ಇಲ್ಲಿ ನಿಲ್ಲುವ ಇನ್ನೊಂದು ಗ್ರಾಮಾಂತರ ಸಾರಿಗೆ ಬಸ್ಸು ಬರಲು ಏನಿಲ್ಲವೆಂದರೂ ಒಂದು ಗಂಟೆ ಕಾಯಬೇಕು ಎಂದುಕೊಳ್ಳುತ್ತಾ ನಿರಾಸೆಯಿಂದ ಮುಖ್ಯರಸ್ತೆಯ ಗಡಿಗೆ ಕಾಲೂರಿದೆ. ಬಸ್ಸನ್ನು ಹಿಂಬಾಲಿಸಿದಂತೆಯೇ ರೂಟ್ ವ್ಯಾನೊಂದು ಧಾವಿಸಿಬರುತ್ತಿದೆ! ಅಷ್ಟೇನೂ ರಷ್ಯೂ ಇಲ್ಲ.ಮನದಲ್ಲಿ ಆಶಾಕಿರಣವೊಂದು ಮೂಡಿತು.ಕೈ ಅಡ್ಡ ಹಿಡಿದೆ. ಉಹುಂ,ನಿಲ್ಲಲಿಲ್ಲ.ಬಂದ ವೇಗದಲ್ಲೇ ಧಾವಿಸಿಹೋಯಿತು. ಏಕಾಂಗಿಯಾಗಿ ಗಡಿಯಲ್ಲಿ ನಿಂತಿದ್ದ ನನ್ನನ್ನು ಅಕ್ಷರಷಃ ತಬ್ಬಲಿತನ ಕಾಡತೊಡಗಿತು.ಗಂಟೆಗಟ್ಟಲೆ ತಡಮಾಡಿ ಹಾಸನ ತಲುಪುವಂತಿರಲಿಲ್ಲ.ಏನು ಮಾಡುವುದು? ಕಾರುಗಳಿಗೆ, ಎಕ್ಸ್ಪ್ರೆಸ್ ಬಸ್ಸುಗಳಿಗೆ ಕೈಯೊಡ್ಡಿ ಪ್ರಯೋಜನವಿಲ್ಲ.
ಮನಸ್ಸಿಗೆ ಮುಜುಗರವಾದರೂ ಒಂಟಿ ಪ್ರಯಾಣಿಕರಿರುವ ಬೈಕ್ ಗಳಿಗೆ ಕೈಯೊಡ್ಡಿ ಲಿಫ್ಟ್ ಕೇಳುವುದೆಂದು ನಿರ್ಧರಿಸಿದೆ.ದೂರದ ತಿರುವಿಗೆ ಕಣ್ಣುನೆಟ್ಟು ಬರುವ ಬೈಕಿನಲ್ಲಿ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡು ಹತ್ತಿ ಬಂದಾಗ ಕೈಯೊಡ್ಡಿ ಬೇಡಿಕೆಯ ಮುಖಭಾವ ಪ್ರದರ್ಶಿಸತೊಡಗಿದೆ. ಕೆಲವರು ಬೈಕಿನ ವೇಗ ತಗ್ಗಿಸಿ ಆಸೆ ಹುಟ್ಟಿಸಿದರೂ ಮತ್ಗತೆ ಮನಸ್ಸು ಬದಲಿಸಿದವರಂತೆ ಮುನ್ನುಗ್ಗಿ ಹೋಗಿಬಿಡುತ್ತಿದ್ದರು.ಇನ್ನೂ ಕೆಲವರು ಏನೋ ದಾವಂತದಲ್ಲಿರುವಂತೆ ಕೈಯೊಡ್ಡಿದ ಕೂಡಲೇ ಆಕ್ಸಿಲೇಟರ್ ಒತ್ತಿಬಿಡುತ್ತಿದ್ದರು. ಅದೇಕೆ ಹೀಗೆ ? ಒಬ್ಬನಿಗಾದರೂ ಕೈಯೊಡ್ಡಿ ಬೇಡುತ್ತಾ ನಿಂತಿರುವ ನನಗೆ ಸಹಾಯ ಮಾಡಬೇಕೆಂದು ಏಕೆ ಅನಿಸುತ್ತಿಲ್ಲಾ! ಅಪರಿಚಿತನ ಸಹವಾಸ ಏಕೆ?ಇಲ್ಲದ ಸಮಸ್ಯೆಯನ್ನು ಯಾಕೆ ಮೈಮೇಲೆ ಎಳೆದುಕೊಳ್ಳುವುದೆಂದು ಯೋಚಿಸುತ್ತಿದ್ದಾರೆಯೇ? ನಾಚಿಕೆಯಾದಂತೆನಿಸಿತು. ಕೈಯೊಡ್ಡುವುದನ್ನು ನಿಲ್ಲಿಸಿ ಮುಂದೆ ಬರಬಹುದಾದ ಬಸ್ಸಿಗೆ ಕಾಯುತ್ತಾ ತಲೆತಗ್ಗಿಸಿ ನಿಂತುಕೊಂಡೆ.
ಹಿಂದಿನ ಪ್ರಸಂಗವೊಂದು ಮರೆವೆಯ ಪರದೆ ಸರಿಸಿ ನಿಚ್ಚಳವಾಗಿ ಮನದಲ್ಲಿ ಮೂಡತೊಡಗಿತು. ಗೆಜೆಟೆಡ್ ಹುದ್ದೆಗೆ ಬಡ್ತಿ ಪಡೆದು ಮೈಸೂರಿಗೆ ವರ್ಗವಾಗುವವರೆಗೂ ಸುಮಾರು ಹದಿನೈದು ವರ್ಷ ಈ ರಸ್ತೆಯಲ್ಲಿ ಬೆಳಗ್ಗೆ ಎಂಟು ಕಿಲೋಮೀಟರ್ ಮಧ್ಯಾನ ಎಂಟುಕಿಲೋಮೀಟರ್ ಸ್ಕೂಟರ್ ಪಯಣ ಮಾಡಿದ್ದೇನೆ. ಬೆಳಗಿನ ವೇಳೆ ವಾಹನಗಳ ಓಡಾಟವೂ ಕಡಿಮೆ.ಇನ್ನೂ ಬಿಸಿಲು ಏರಿರುತ್ತಿರಲಿಲ್ಲ. ತಂಪಾದ ಹವೆ. ಹಿತಕರವಾದ ವಾತಾವರಣದಲ್ಲಿ ಸ್ಕೂಟರ್ ಪಯಣದ ಸುಖ ಅನುಭವಿಸುತ್ತಿದ್ದೆ. ನಮ್ಮ ಗಡಿಯಿಂದ ನಾಲ್ಕು ಕಿಲೋಮೀಟರ್ ಕ್ರಮಿಸಿದರೆ ರಸ್ತಬದಿಯಲ್ಲೇ ಒಂದು ಮನೆ.ಅದರ ಹಿಂಬದಿಯಲ್ಲೇ ಅರೆಬರೆ ಕಟ್ಟಿರುವ ಕೋಳಿಪಾರಂ ಕಟ್ಟಡ.ಅದರ ಸುತ್ತ ಒಂದೆಕರೆ ಬಳಸಿದಂತೆ ತಂತಿಬೇಲಿ.ಮನೆಮುಂದುಗಡೆ ಗೇಟು.ಮನೆಯ ಮುಂದುಗಡೆ ಗೋಡೆಗೆ ದಪ್ಪದಪ್ಪ ಅಕ್ಷರದಲ್ಲಿ ಬರೆದ ಒಂದು ನಾಮಪಲಕ: “ಕೆಂಚೇಗೌಡ, ದ್ವಿತೀಯ ದರ್ಜೆ ಗುಮಾಸ್ತ” ಯಾರಾದರೂ ರಸ್ತೆಯಿಂದಲೇ ಓದಬಹುದಾಗಿತ್ತು. ನಾನು ಅಲ್ಲಿ ದಾಟುವಾಗ ಸುಮಾರು ನನ್ನ ವಯಸಿನದೇ ವ್ಯಕ್ತಿ ಗೇಟಿನ ಬಳಿ ಸಿಗರೇಟು ಸೇದುತ್ತಲೋ,ಹೂಗಿಡಗಳ ನಡುವೆ ತಿರುಗಾಡುತ್ತಲೋ ಇರುವುದನ್ನು ಗಮನಿಸಿದ್ದೆ.
ಆ ವ್ಯಕ್ತಿಯೂ ಸಹಾ ತೀಕ್ಷ್ಣವಾಗಿ ನನ್ನನ್ನು ಗಮನಿಸುತ್ತಿರುವಂತೆ ಅನ್ನಿಸುತ್ತಿತ್ತು.ಅದೆಲ್ಲಾ ಕೇವಲ ಕ್ಷಣ ಮಾತ್ರದ ಅನುಭವ ಅಷ್ಟೆ. ಆ ದಿನ ನನ್ನದೇ ಲಹರಿಯಲ್ಲಿ ಸ್ಕೂಟರ್ ಓಡಿಸುತ್ತಾ ಬರುತ್ತಿದ್ದೆ.ಕೆಂಚೇಗೌಡ ಆಫೀಸ್ ಡ್ರೆಸ್ ನಲ್ಲಿ ಗೇಟ್ ಬಳಿ ಬಂದು ನಿಂತಿದ್ದ.ಸ್ಕೂಟರ್ ನೋಡಿದ ಕೂಡಲೇ ರಸ್ತೆಗೆ ನೆಗೆದುಬಂದು ಕೈ ಅಡ್ಡ ಹಿಡಿದ.ಸ್ಕೂಟರ್ ನಿಂತ ಕೂಡಲೇ “ನಮಸ್ಕಾರ ಸಾರ್” ಎನ್ನುತ್ತಾ ಹಿಂದಿನ ಸೀಟಿಗೆ ಏರಿ ಕುಳಿತ. ಸ್ಕೂಟರ್ ಮುಂದೆ ಚಲಿಸಿದಂತೆ ಚಿರಪರಿಚಿತನಂತೆ ಮಾತಿಗೆ ತೊಡಗಿದ. ನನ್ನ ಹಿನ್ನೆಲೆಯ ಬಗ್ಗೆ ಅದು ಹೇಗೋ ಆಗಲೇ ಸಾಕಷ್ಟು ತಿಳಿದುಕೊಂಡಿದ್ದ.ಆತ ನನ್ನ ಮನಸ್ಸಿಗೆ ಖುಷಿಯಾಗುವಂತೆ ಮಾತಿನ ಪ್ರವಾಹ ಹರಿಸುತ್ತಿದ್ದ. ಸ್ಕೂಟರ್ ಹಾಸನ ನಗರ ಪ್ರವೇಶಿಸಿ ಸುಬಾಷ್ ಚೌಕಕ್ಕೆ ಬಂತು,”ನಿಲ್ಸಿ ನಿಲ್ಸಿ” ಎಂದ. ಸ್ಕೂಟರ್ ನಿಲ್ಲಿಸಿ ಆತನಿಗೆ ಇಳಿದು ಹೋಗಲು ಅನುವು ಮಾಡಿಕೊಟ್ಟೆ.ಇಳಿದವನೇ ಮುಂದೆ ಬಂದು ಹ್ಯಾಂಡಲ್ ಹಿಡಿದುಕೊಂಡು “ಇಳೀರಿ ಸಾರ್,ಟೀ ಕುಡಿಯೋಣ”ಎನ್ನತೊಡಗಿದ. ಇಲ್ಲ,ನನಗೆ ಲೇಟಾಗುತ್ತೆ ಇನ್ನೊಮ್ಮೆ ಕುಡಿಯೋಣ”ಎಂದರೂ ಕೇಳಲಿಲ್ಲ.
ಸನ್ಮಾನ್ ಹೊಟೆಲೊಳಕ್ಕೆ ಎಳೆದುಕೊಂಡೆ ಹೋದ.ಟೀ ಬರುವವರೆಗೂ ಎಷ್ಟೋ ವರ್ಷದ ಆತ್ಮೀಯ ಗೆಳೆಯನಂತೆ ಮಾತನಾಡುತ್ತಲೇ ಇದ್ದ.”ಅದೇನು ಮಲೆನಾಡಿನವರು ನೀವು ಇಲ್ಲಿ ಬಂದು ಈ ಬಯಲು ನಾಡಿನಲ್ಲಿ ಜಮೀನು ಮಾಡಿಕೊಂಡಿರಿ”ಎಂದ. ಮಲೆನಾಡಿನ ಗೌಡರಲ್ಲಿ ಯಾವುದೇ ಒಳಪಂಗಡಗಳಿಲ್ಲ.ಆದರೂ ಆತ ಅದು ಹೇಗೋ ನನ್ನನ್ನು ನಾನು “ದಾಸಗೌಡ” ಎಂದು ಕಂಡುಹಿಡಿದಿದ್ದ.”ಆ ಕಡೆ ಕೊಪ್ಲವರನ್ನು ನಂಬುವ ಹಾಗಿಲ್ಲ.ಮುಳ್ಳು ಜನ”.ಏನಾದರೂ ನಿಮ್ಮ ತಗಾದೆ ತೆಗೆದರೆ ತಿಳಿಸಿ.ನಾನು ಜನ ಕರ್ಕೊಂಡು ಬಂದು ನಿಮ್ಮ ಸಪೋಟಿಗೆ ನಿಲ್ಲುತ್ತೇನೆ ಎಂದ. ಅವನ ಮಾತುಗಳಲ್ಲಿ ನನ್ನ ಬಗ್ಗೆ ಕಾಳಜಿ ವ್ಯಕ್ತವಾಗುತ್ತಿದ್ದರೂ ಅದ್ಯೇಕೋ ಸ್ವಲ್ಪ ಅತಿಯಾಯಿತೇನೋ ಅಂದು ಕೊಳ್ಳುತ್ತಾ ಆಫೀಸ್ ರಸ್ತೆಯಲ್ಲಿ ಸ್ಕೂಟರ್ ಓಡಿಸಿದೆ. ಅಲ್ಲಿಂದ ನಮ್ಮ ಸಹ ಪ್ರಯಾಣ ಮುಂದುವರೆಯುತ್ತಲೆ ಇತ್ತು.

” ನಿಮ್ಮ ಸ್ಕೂಟರ್ ಬಹಳ ಚನ್ನಾಗಿದೆ. ಇಂಜಿನ್ ಸೌಂಡೇ ಇಲ್ಲ. ಸುಯ್ಯನೇ ಗಾಳಿಯಲ್ಲಿ ಹೋದ ಹಾಗೆ ಆಗುತ್ತೆ. ನಿಮ್ಮ ಹಿಂದಗಡೆ ಕುಳಿತುಕೊಂಡು ಹೋಗುವುದುಕ್ಕೆ ಬಹಳ ಖುಷಿಯಾಗುತ್ತದೆ. ಹಂಗಾಗಿ ಒಂದು ವಾರದಿಂದ ನನ್ನ ಬೈಕನ್ನೇ ಮುಟ್ಟಿಲ್ಲ ಎಂದ. ತಾನು ಇಲ್ಲಿ ಬಂದು ಒಂದು ಎಕರೆ ಜಾಗ ಕೊಂಡು ಒಂದು ಮನೆ ಕಟ್ಟಿದ್ದ ಬಗ್ಗೆ ಹೇಳಿಕೊಂಡ. ಒಬ್ಬ ಮಗ ಮೆಡಿಕಲ್ ಹಾಗೂ ಇನ್ನೊಬ್ಬ ಇಂಜಿನಿಯರ್ ಮಾಡುತ್ತಿರುವುದರ ಬಗ್ಗೆಯೂ ಹೇಳಿಕೊಂಡ. ಇನ್ನೂ ಕಟ್ಟುತ್ತಿರುವ ಕೋಳಿ ಫಾರಂ ಅದಕ್ಕೆ ಇಂಡಿಯಾನ್ ಓವರ್ಸಿಸ್ ಬ್ಯಾಂಕ್ನವರು ಮಂಜೂರು ಮಾಡಿರುವ 9 ಲಕ್ಷ ಲೋನ್ ಬಗ್ಗೆ ಹೇಳಿಕೊಂಡ. ಮೂರು ಕಂತು ಲೋನ್ ಆಗಲೇ ರಿಲಿಜ್ ಆಗಿದೆ. ಇನ್ನೂ ಕೊನೆಯ ಕಂತು ಬಾಕಿ. ಕೇಜುಗಳನ್ನು ತಂದು ಹಾಕಬೇಕು. ಅದನ್ನು ನೋಡಿ ನಂತರ ಕೊನೆಯ ಕಂತು ಬಿಡುಗಡೆಯಾಗುತ್ತದೆ. ಹೊಸದನ್ನು ಹಾಕುತ್ತಿಲ್ಲ. ಆಲೂರು ಬಳಿ ಒಂದು ಕೋಳಿ ಫಾರಂ ಮುಚ್ಚು ಹೋಗಿದೆ. ಅಲ್ಲಿನ ಸೆಕೆಂಡಾಂಡ್ ಕೇಜುಗಳನ್ನು ತರುತ್ತೇನೆ. ಹಾಗಾಗಿ ಕೊನೆಯ ಕಂತಿನ ಸಾಲ ಬಂದಾಗ ಒಂದು ಲಕ್ಷ ಕೈಗೆ ಉಳಿಯುತ್ತದೆ ಎಂದೆಲ್ಲ ಹೇಳಿಕೊಂಡ.
ಇವನಿಗೆ ಒಂದು ತರಹ ಸಾಹಸದ ಜೀವನವೇ ಎನ್ನಿಸಿತು. ಒಂದು ದಿನ ಆಫೀಸ್ ಬಳಿ ಬಂದ ಏನೋ ಒಂದು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ಧೇನೆ. ನಿಮ್ಮ ಹತ್ತಿರ ಹೇಳಿಕೊಂಡರೆ ಹಗುರ ಆಗಬಹುದು ಅಂದುಕೊಂಡು ಬಂದೆ. ಬನ್ನಿ ಹೊರಗೆ ಹೋಗಿ ಕಾಫಿ ಕುಡಿಯೋಣ. ಕುಡಿಯುತ್ತ ಮಾತಾನಾಡೋಣ ಎಂದ. ತನ್ನ ಸಮಸ್ಯೆಯನ್ನು ನನ್ನ ಬಳಿ ಹೇಳಿ ಕೊಳ್ಳುವಷ್ಟು ಈತ ನನ್ನ ಹತ್ತಿರವಾಗಿದ್ದನಲ್ಲ. ನಾನು ವಿಚಾರಿಸೋಣ ಎಂದು ಅವನನ್ನ ಹಿಂಬಾಲಿಸಿದೆ. ನಿಮ್ಮಂಥ ಒಳ್ಳೆಯವರ ಜೊತೆ ಮಾತಾಡೋದಕ್ಕೆ ಏನೂ ಅಳಕ್ಕಿಲ್ಲ ಸರ್? ನೇರವಾಗಿ ಮಾತಿಗೆ ಬರುತ್ತೇನೆ ಎಂದ.” ಹೂಂ ಸರಿ ಏನೂ ಹೇಳಿ ಎಂದೆ.
ಅವತ್ತೇ ಹೇಳಿದ್ದನಲ್ಲ ಕೋಳಿ ಫಾರಂ ಲೋನ್ ಕೊನೆಯ ಕಂತು ಬರಬೇಕಂತ. ಮುಂದಿನ ವಾರ ರಿಲಿಜ್ ಮಾಡಿಕೊಡಲು ಒಪ್ಪಿದ್ದಾರೆ. ಇನ್ನೆರಡು ದಿನದಲ್ಲಿ ಕೇಜ್ಗಳನ್ನು ತಂದು ಹಾಕಬೇಕು. ಅದಕ್ಕೆ ಒಂದು ಹತ್ತು ಸಾವಿರ ಸಾಲದೆ ಬಂದಿದೆ. ದಯಾವಿಟ್ಟು ಆಡ್ಜೆಸ್ಟ್ ಮಾಡಿಕೊಟ್ಟಿರಿ ಮುಂದಿನ ವಾರ ಲೋನ್ ರಿಲೀಜ್ ಆದ ಕೂಡಲೇ ಹಿಂದಕ್ಕೆ ಕೊಟ್ಟು ಬಿಡುತ್ತೇನೆ ಎಂದ. ನನಗೆ ಇಕ್ಕಟ್ಟಿಗೆ ಇಟ್ಟುಕೊಂಡಿತು. ನನ್ನ ಇದೂವರೆಗಿನ ಸರ್ವೀಸ್ನಲ್ಲಿ ಹಲವರಿಗೆ ಕಷ್ಟಕ್ಕೆ ನೆರವಾಗಿ ಅವರು ಕೈ ಎತ್ತಿದ್ದಾಗ ಪೇಚಾಡಿ ಕೊಂಡಿದ್ದೆ. 10 ಸಾವಿರ ಎಂದರೆ ಕಡಿಮೆ ಮೊತ್ತವೇ? ಜೇಬಿನಲ್ಲಿಗಾಗಲಿ ಬ್ಯಾಂಕಿನಲ್ಲಾಗಲಿ ಒಂದು ರೂಪಾಯಿಯೂ ಇಲ್ಲದ ಪರಿಸ್ಥಿತಿ ನನ್ನದು.
ಇನ್ನೊಂದೆರಡು ಹುಡುಗರ ಕಾಲೇಜ್ ಫೀಜ್ ಕಟ್ಟ ಬೇಕು. ಅದಕ್ಕಾಗಿ ನಾನೇ ಪ್ರಾವಿಡಂಡ್ಪಂಡ್ ಇಲ್ಲವೇ ಕೆಜೆಐಡಿ ಸಾಲದ ಮೊರೆ ಹೋಗಬೇಕು. ಈಗ ಮಾತಿಗೆ ಕಟ್ಟು ಬಿದ್ದು ವೃಥಾ ತೊಂದರೆಗೆ ಸಿಲುಕಿಕೊಳ್ಳಬಾರದು ಹುಷಾರ್ ಆಗಿ ಯೋಚಿಸಿ ಉತ್ತರ ಕೊಡಬೇಕು ಎನ್ನಿಸಿತು. ಗೌಡರೇ ಕ್ಷಮಿಸಿ ನಿಮ್ಮಗೆ ಹೆಲ್ಪ್ ಮಾಡಬೇಕು ಎನ್ನೊ ಮನಸ್ಸೆನೋ ಇದೆ ಆದರೆ ಒಂದು ರೂಪಾಯಿಯೂ ನನ್ನ ಬಳಿ ಇಲ್ಲವಲ್ಲ ಏನು ಮಾಡೋದು. ಈ ಪರಿಸ್ಥಿತಿಯಲ್ಲಿ ನನ್ನನು ಕೇಳಿ ಪೇಚಿಗೆ ಸಿಕ್ಕಿಸಿ ಬಿಟ್ಟರಲ್ಲ ಎಂದೆ. ಹೇಗೊ ಬಚವಾದೆ ಎನ್ನಿಸಿ ನನ್ನ ಮಾತಿಗೆ ನನ್ನಗೆ ಹೆಮ್ಮೆ ಎನಿಸಿತು. ಹಂಗನ್ಬೇಡಿ ಸಾರ್ ನೀವು ಈಗ ನನ್ನನ್ನು ಕೈ ಬಿಟ್ರೆ ಬಹಳ ತೊಂದರೆಗೆ ಸಿಕ್ಕಿಕೊಂಡು ಬಿಡುತ್ತೇನೆ. ಲೋನ್ಹಣ ಸಿಕ್ಕಿದ್ದರೆ ಮನೆ ಸಂಸಾರ ಮಕ್ಕಳ ಕಾಲೇಜು. ಕೋಳಿ ಫಾರಂ ಎನ್ನವು ನಡೆಯುತ್ತದೆ. ಇಲ್ಲ ಅಂದರೆ ನಾನು ಪಾತಳಕ್ಕೆ ಬಿದ್ದಹಂಗೆ. ನೋಡಿ ಹೇಗಾದರೂ 4 ದಿನದ ಮಟ್ಟಿಗೆ ಹೊಂದಿಸಿಕೊಡಿ ಎಂದು ಬೇಡಿಕೊಂಡ.
ನನ್ನ ಹಣಕಾಸಿನ ಪರಿಸ್ಥಿತಿಯೇ ಕೆಟ್ಟದಾಗಿ ಇದೆ ಅಲ್ಲ ಗೌಡ್ರೆ. ಎಲ್ಲಿಂದ ಹೊಂದಿಸಿ ಕೊಡಕಾಗುತ್ತದೆ ನಿಮ್ಮಗೆ 10 ಸಾವಿರ ಎಂದೆ. ಪ್ರಾವಿಡಂಡ್ ಪಂಡ್ನಲ್ಲಿ ಹಣ ಇದೆ ಅಲ್ಲ ಅದರಲ್ಲಿಯೇ 10 ಸಾವಿರ ಲೋನ್ ತೆಗೆದುಕೊಟ್ಟಿರಿ ಬಹಳ ಉಪಕಾರ ಆಗುತ್ತದೆ ಎಂದು ಅಂಗಲಾಚಿದ. ಇಲ್ಲಪ್ಪ ಅದರಲ್ಲಿ ಡ್ರಾ ಮಾಡುವುದಕ್ಕೆ ಆಗುವುದಿಲ್ಲ. ಮಕ್ಕಳ ಫೀಜ್ ಕಟ್ಟುವುದಕ್ಕೆ ಉಳಿಸಿಕೊಂಡಿರುವುದು ಅದೇ ಒಂದು ದಾರಿ ಎಂದೆ. ”ಮಕ್ಕಳ ಫೀಜ್ಗೆ ಅಲ್ವ ಸರ್ ನಾನು ಬರ ವಾರನೇ ಹಿಂದಕ್ಕೆ ಕೊಟ್ಟು ಬಿಡುತ್ಥೇನೆ.ದಯವಿಟ್ಟು ಕೈ ಬಿಡಬೇಡಿ ಎನ್ನುತ್ತ ಕೈ ಹಿಡಿದುದುಕೊಂಡ. ನಾನು ಅವನ ಮಾತಿನ ಜಾಲದಲ್ಲಿ ಸಿಲುಕಿಕೊಂಡಿದ್ದೆ. ಮರುದಿನ ಟ್ರಜರಿಗೆ ಬಿಲ್ ಕಳುಹಿಸಿ ಹಣ ತರುಸಿ ಕೊಟ್ಟಿದ್ದೆ. ಬಹಳ ಉಪಕಾರವಾಯಿತು ಎಂದ ಆತ. ನನಗೂ ವ್ಯಕ್ತಿಯೊಬ್ಬನ ಸಮಸ್ಯೆ ಬಗೆಹರಿಸಿದ ಸಮಾಧಾನವಾಯಿತು.
ಕೆಂಚೇಗೌಡ ಹಣದೊಂದಿಗೆ ಬರುವುದಾಗಿ ಹೇಳಿದ ದಿನ ಕಾದೆ. ಬರಲಿಲ್ಲ. ಮಾರನೇ ದಿನ , ಅದರ ಮಾರನೇ ದಿನ……. ಹೀಗೆ ಆತನ ಸುಳಿವಿಲ್ಲ. ದಿಗಿಲಾಗ ತೊಡಗಿತು. ಇರಲಿ ದಾರಿಯಲ್ಲೇ ಮನೆ ತಾನೆ ಹೋಗಿ ವಸೂಲು ಮಾಡಿಕೊಂಡರಾಯಿತು. ಎಂದೇ ಮನಸ್ಸಿನಲ್ಲಯೇ ಧೈರ್ಯ ತಂದು ಕೊಂಡೆ. ಒಂದೆರಡು ಬಾರಿ ಸ್ಕೂಟರ್ ನಿಲ್ಲಿಸಿ ಮನೆಗೆ ಹೋದೆ ಅವರ ಮನೆಯವರು ಇಲ್ಲ ಎಂದರು. ಇನ್ನೊಂದು ದಿನ ತುಸು ಬೇಗನೆ ಮನೆ ಬಿಟ್ಟು ಅವನ ಮನೆಗೆ ಹೋದೆ.ಬೈಕ್ ಆಗಲೇ ರಡಿ ಆಗಿ ಗೇಟಿನ ಕಡೆ ಮುಖ ಮಾಡಿ ನಿಂತಿತ್ತು. ಕಂಚೇಗೌಡ ಬಟ್ಟೆ ಧರಸಿ ಬೈಕ್ನ ಕಡೆ ಬರುತ್ತಿದ್ದ. ನನ್ನನ್ನು ಗೇಟು ದಾಟಲು ಬಿಡದಂತೆ ಅವಸರವಾಗಿ ನನ್ನ ಬಳಿ ಬಂದ. ಓ ಎಂಥ ಕೆಲ್ಸ್ ಆಯ್ತು ಅಂತಿರಾ… ನಾನು ದುಡ್ಡು ಕಟ್ಟುವುದು ಒಂದು ತಡವಾಯಿತು. ಮಾರನೇ ದಿನದಿಂದಲೇ ಮ್ಯಾನೇಜರ್ 15 ದಿನ ರಜಹೋಗಿ ಬಿಟ್ಟಿದ್ದಾರೆ. ಇನ್ನೊಂದು 15 ದಿನ ತಡಿರಿ ಎಂದ. ನಾನು ತೊಂದರೆಯಲ್ಲಿ ಸಿಲುಕಿಕೊಂಡಿರುವ ಅರಿವಾಗ ತೊಡಗಿತು.
ಹಾಂಗದ್ರೆ ಅಗುವುದಿಲ್ಲ. ಗೌಡ್ರೆ ಇನ್ನೆನೂ ಬರುವ ವಾರ ಮಕ್ಕಳ ಫೀಜ್ ಕಟ್ಟಬೇಕು. ಇಲ್ಲ ಅಂದರೆ ತೊಂದರೆ ಯಾಗುತ್ತದೆ. ಅಂಗಲಾಚುವ ಧ್ವನಿಯಲ್ಲಿ ಹೇಳಿದೆ. ಏನೂ ಮಾಡುವುದು ಹೇಳಿ ನಾನೇನು ಬೇಕು ಅಂತ ಮಾಡಿದ್ದಿನಾ ಏಲ್ಲಾದ್ರೂ ಅಡ್ಜೆಸ್ಟ್ ಮಾಡು ಕಟ್ಟಿರಿ ಎಂದು ಗೇಟ್ ತೆರೆದು ಬೈಹೊರಗೆ ತಳ್ಳ ತೊಡಗಿದ. ನನಗೆ ಮುಂದೆ ಏನೂ ಮಾತಾಡಬೇಕು ಎಂದೇ ತೋಚಲಿಲ್ಲ. ” ಮತ್ತೆ ಯಾವಾಗ ಸಿಕ್ಕುತ್ತೀರಿ ಎಂದೇ. ಇರಲಿ ಮ್ಯಾನೇಜರ್ ಬಂದ ಮೇಲೆ ಸಿಕ್ಕಿತ್ತೀನಿ ಎನ್ನುತ್ತಾ ಬೈಕ್ ಸ್ಟಾರ್ಟ್ ಮಾಡಿವೇ ಬಿಟ್ಟ. ನಾನು ಪೆಚ್ಚು ಮೋರೆ ಹಾಕಿಕೊಂಡು ಸ್ಕೂಟರ್ ಕಡೆ ಹೆಜ್ಜೆ ಹಾಕಿದೆ. ಅವನು ಹೇಳಿದ 15 ದಿನವೂ ಕಳೆದು ಹೋಯಿತು. ಹಲವಾರು ಬಾರಿ ಮನೆಗೂ ಹೋದೆ. ಯಾವಗ ಹೋದರು ಈಗ ಹೋದರು ಎನ್ನಿಸಿಕೊಂಡು ಬರುತ್ತಿದೆ. ಸಹದ್ಯೋಗಿಗಳಿಂದ ಸಾಲ ಪಡೆದು ಫೀಜ್ ಕಟ್ಟಿದೆ. ಆದರೂ ಕೆಂಚೇಗೌಡರಿಂದ 10 ಸಾವಿರ ವಸೂಲು ಮಾಡುವ ಆಸೆಯನ್ನೇನೂ ಬಿಟ್ಟಿರಲಿಲ್ಲ. ದಿನವೂ ಅದೇ ರಸ್ತೆಯಲ್ಲಿ ನನ್ನ ಸ್ಕೂಟರ್ ಪಯಣ ನಡೆದೆಇತ್ತು.
ಆತ ಹೋಗಿರ ಬಹುದಾದ, ಇರಬಹುದಾದ ಎಲ್ಲ ಸ್ಥಳಗಳನ್ನು ಜಾಲಾಡ ತೋಡಗಿದೆ. ಪ್ರತಿಬಾರಿಯೂ ನಿರಾಶೆಯೇ ಕಾದಿರುತ್ತಿತ್ತು. ಅಂದು ಸಂತೆ ದಿನ. ಸಂತೇ ಪೇಟೆ ಜನ ಜಂಗುಳಿಯ ಮಧ್ಯೆ ಕೆಂಚೇಗೌಡನ ಮುಖ ಕಾಣಿಸಿತು. ಇನ್ನೇನೂ ನನ್ನ ಹತ್ತು ಸಾವಿರ ಸಿಕ್ಕಿಯೇ ಬಿಟ್ಟಿತ್ತು ಅನ್ನಿಸಿ ಖುಷಿಯಾಯಿತು. ಹೇಗಾದರೂ ಉಪಾಯದಲ್ಲಿ ನನ್ನ ಹಣ ವಸೂಲು ಮಾಡಿಕೊಳ್ಳಬೇಕು ಅಂದುಕೊಳ್ಳುತ್ತಾ ಅವನ ಬಳಿ ಹೋದೆ. ಅವನು ಯಾರೊಂದಿಗೋ ಮಾತಿನಲ್ಲಿ ತೊಡಗಿದ. ಆ ವ್ಯಕ್ತಿ ಮುಗ್ದನಂತೆ ತೋರುತ್ತಿದ್ದ. ಮುಂದಿನ ” ಹರಕೆಯ ಕುರಿ” ಇವನೇ ಇರಬಹುದು ಅಂದು ಕೊಳ್ಳುತ್ತಾ ನಮಸ್ಕಾರ ಕೆಂಚೇಗೌಡ್ರೆ ಅಂದೇ. ಅಲ್ಲಿ ಇದ್ದಕ್ಕಿಂದಂತೆ ನಾನು ಎದುರಾದದು ಆತನಿಗೆ ಇಷ್ಟವಾಗಲಿಲ್ಲ ಎಂಬುವುದು ಅವನ ಮುಖಬಾವದಿಂದ ತಿಳಿಯಿತು. ” ಸ್ವಲ್ಪ ಇರಿ ನಮ್ಮ ಸ್ನೇಹಿತರ ಹತ್ತಿರ ಮಾತಾಡ್ತಾ ಇದ್ದಿನಿ ಅಂದ. ಆ ವ್ಯಕ್ತಿ ಅತ್ತ ಹೋದೊಡನೆ ಬನ್ನಿ ಗೌಡ್ರೆ ಇಲ್ಲೇ ಎಲ್ಲದರೂ ಕಾಫಿ ಕುಡಿಯೋಣ ಎಂದೆ.
ಒಳ್ಳೆಯ ವಾತಾವರಣದಲ್ಲಿ ಮಾತನಾಡಿ ನನ್ನ ಕೆಲಸ ಈಡೇರಿಸಿಕೊಳ್ಳಬೇಕೆನ್ನುವುದು ನನ್ನ ಹುನ್ನಾರವಾಗಿತ್ತು. ಆತ ಬಂದ ಕಾಫಿ ಕುಡಿದ. ನಾನು ನನ್ನ ಕಷ್ಟವನ್ನೇಲ್ಲ ಆತನಿಗೆ ಹೇಳಿಕೊಂಡೆ.ಫೀಜ್ ಕಟ್ಟಲು ಸಾಲ ಮಾಡಿರುವ ಬಗ್ಗೆ ಅವರು ಸಾಲವನ್ನು ಹಿಂತಿರುಗಿಸುವಂತೆ ಪೀಡಿಸುತ್ತಿರುವ ಬಗ್ಗೆ ನಾನು ಸಾಲ ಮಾಡಿರುವ ಬಗ್ಗೆ ಮನೆಯವರಿಗೆ ತಿಳಿದು ಅವರೆಲ್ಲ ಬೇಸರ ಮಾಡಿಕೊಂಡಿರುವ ಬಗ್ಗೆ ಎಲ್ಲ ಪರಿಪರಿಯಾಗಿ ಹೇಳಿ ನನ್ನ ಹಣವನ್ನು ಹಿಂತಿರುಗಿಸುವಂತೆ ಅಂಗಲಾಚಿ ಬೇಡಿಕೊಂಡೆ. ಅದು ವರೆಗೆ ಅವನು ಸ್ಥಿತ ಪ್ರಜ್ಞನಂತೆ ಕುಳಿತ್ತಿದ್ದವನು ಗಡಿಯಾರದ ಕಡೆ ಒಮ್ಮೆ ನೋಡಿಕೊಂಡ. ” ಇರ್ರಿ ಸ್ವಲ್ಪ , ಸಂತೆಯಲ್ಲಿ ಬೆಣ್ಣೆ ತಗೋಬೇಕ. ಲೇಟಾಗುತ್ತೆ. ಎನ್ನುತ್ತಾ ನನ್ನ ಇನ್ನೊಂದು ಮಾತಿಗೂ ಕಾಯದೆ ಸಂತೆ ಒಳಗೆ ಮರೆಯಾಗಿ ಹೋದ. ಇನ್ನೆಂದಿಗೂ ಇವರು ನನ್ನ ಸಹ ಪ್ರಯಾಣಿಕನಾಗಿ ಬರಲಾರ ಎಂದು ಮನವರಿಕೆಯಾಗ ತೊಡಗಿತು. ಎಲ್ಲ ಸಾಕ್ಷಿಯಾಗಿದ್ದ ನನ್ನ ಸ್ಕೂಟರ್ ದೂರದಲ್ಲಿ ರಸ್ತೆ ಬದಿ ಅನಾಥವಾಗಿ ನಿಂತಿತು.







ಅಪರಿಚಿತನ ಆಪ್ತತೆ ಎಂಥ ಸಂಕಷ್ಟಕ್ಕೆ ದೂಡಿತು. ಸಹಪ್ರಯಾಣಿಕರಿಂದ ಆದ ಕಿರಿಕಿರಿ, ಪಜೀತಿ, ಅಸಂತೋಷವನ್ನು ಹೊರ ಹಾಕಿದ್ದೀರಿ. ಚೆನ್ನಾಗಿದೆ.