ಯಾರದಾದರೂ ಮನೆ ಹಾಳುಮಾಡಬೇಕು ಎಂದರೆ ಅವನಿಗೆ ಒಂದು ಹಳೆಯ ವಾಹನ ಕೊಡಿಸಿಬಿಡಬೇಕು ಎಂಬ ಅರ್ಥದ ಇಂಗ್ಲೀಷ್ ಗಾದೆಯೊಂದಿದೆ.
ನನ್ನ ಪಾಡೂ ಅದರಂತಯೇ ಆಗಿತ್ತು. ಘಟನಾವಳಿಗಳು ಶೀಘ್ರಗತಿಯಲ್ಲಿ ಘಟಿಸತೊಡಗಿದ್ದವು. ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಬೆನ್ನಟ್ಟತೊಡಗಿದ್ದವು. ಸ್ವಲ್ಪ ದಿನಗಳ ಅಂತರದಲ್ಲಿಯೇ ಕಾರಿನ ಇಂಜಿನ್ ಸೀಜ್ ಆಯಿತು. ಅದನ್ನು ಬೆಂಗಳೂರಿಗೆ ಹೇರಿಕೊಂಡು ಹೋಗಿ ಓಪನ್ ಮಾಡಿಸಿ ರೀಬೋರ್ ಮಾಡಿ ತರಲು ನಲವತ್ತು ಸಾವಿರ ತಗುಲಿತು. ಇನ್ನೇನೂ ತೊಂದರೆಯಿಲ್ಲ. ಹೊಸ ಇಂಜಿನ್ನಿನಂತೆ ಆಯಿತು. ಆರಾಮಾಗಿ ಓಡಿಸಿಕೊಳ್ಳಬಹುದು ಎಂದು ಮಗ ಸಮಜಾಯಿಸಿ ಹೇಳಿದ. ನಂತರದಲ್ಲಿ ಕಾರು ಯಾವುದೋ ಟ್ಯಾಕ್ಟರ್ನೊಂದಿಗೆ ಮುಖಾಮುಖಿ ಡಿಕ್ಕಿಯಾಗಿ ಕೀಡಿಯೇಟರ್ ಜಖಂ ಆಯಿತು. ಕೇಸ್ ಆಗಿ ಪೋಲಿಸರು ಗಾಡಿ ಹಿಡಿದು ಕೋರ್ಟ್ ಮುಖಾಂತರ ಬಿಡಿಸಿಕೊಂಡದ್ದೂ ಆಯಿತು. ಇನ್ನು ಆಗಾಗ ಬರುತ್ತಿದ್ದ ಸಣ್ಣಪುಟ್ಟ ರಿಪೇರಿ. ಅದನ್ನೆಲ್ಲಾ ಹೇಳುತ್ತಾ ಹೋದರೆ ಒಂದು ಕಾದಂಬರಿಗೆ ವಸ್ತುವಾಗಬಹುದಾದ ಅನುಭವ ವೈವಿದ್ಯ!
ಅಂತೂ ಸಾಲದ ಹೊರೆ ಆರವತ್ತು ಸಾವಿರದಿಂದ ಶುರುವಾಗಿ ಹಂತ ಹಂತವಾಗಿ ಏರುತ್ತಾ ಎರಡು ಲಕ್ಷಕ್ಕೆ ತಲಪಿತ್ತು. ಮಗನೂ ನನಗೆ ಸಬೂಬು ಹೇಳಿ ಸಾಕಾಗಿ ಹೋಗಿದ್ದ. ಮಾರಲು ಯತ್ನಿಸಿ ಆಗದೆ ನಿರಾಸನಾಗಿದ್ದ. ಅವನ ಸ್ನೇಹಿತ ಒಬ್ಬ ಡ್ರೈವರ್ ನಿರುದ್ಯೋಗಿಯಾಗಿದ್ದ. ಲೋಕಲ್ ಟ್ರಿಪ್ ಹೊಡಕೊಂಡು ಗಾಡಿ ಮೆಯಿಂಟೈನ್ ಮಾಡುತ್ತಿರುವವ. ಮನೆಯವರು ಎಲ್ಲಿಗಾದರೂ ಹೋಗುವುದಾದರೆ ಕರೆದುಕೊಂಡು ಹೋಗು ಎಂದು ಗಾಡಿಯನ್ನು ಅವನಿಗೆ ತಗಲುಹಾಕಿ ಬೆಂಗಳೂರು ಬಿದ್ದಿದ್ದ.
ಆರ್ಥಿಕ ಸಂಕಷ್ಟಕ್ಕೆ ದೂಡಿದ್ದ ಆ ಕಾರನ್ನು ಹತ್ತುವುದಿರಲಿ ಹತ್ತಿರದಿಂದ ಕಂಡರೇ ಭಯವಾಗತೊಡಗಿತ್ತು. ಸದ್ಯ ಕಾರಿನ ಒಡನಾಟ ತಪ್ಪಿದ್ದು ಒಂದು ಬಗೆಯ ನಿರಾಳವಾಗಿತ್ತು. ಬ್ಯಾಂಕಿನವರಿಗೆ, ಸಾಲಗಾರರಿಗೆ ಉತ್ತರ ಹೇಳುತ್ತಾ ಸಾಲ ತೀರಿಸಲು ಮಾರ್ಗೋಪಾಯಗಳನ್ನು ಯೋಚಿಸುತ್ತಾ ಕಾಲ ದೂಡುತ್ತದ್ದೆ. ಕಾರಿನ ಸಹವಾಸವೇ ಬೇಡ ಎಂದು ಎಷ್ಟೇ ದೂರವಿದ್ದರೂ ಮತ್ತೆ ಅದರಲ್ಲಿ ಕುಳಿತು ಪ್ರಯಾಣ ಮಾಡುವ ಸಂದರ್ಭ ಒದಗಿ ಬಂದೇ ಬಿಟ್ಟಿತು. ಹೆತ್ತೂರಿನಲ್ಲಿ ನಮ್ಮ ಸೋದರಮಾವ ಪೋರಣ್ಣಗೌಡರು ತೀರಿಕೊಂಡಿದ್ದರು.
ಆ ಸಾವಿಗೆ ನಮ್ಮ ತಂದೆ, ತಾಯಿಯರನ್ನು ಕರೆದುಕೊಂಡು ಹೋಗಿ ಬರಬೇಕಾಗಿತ್ತು. ಬಸ್ಸಿನಲ್ಲಂತೂ ಸಾಧ್ಯವಿಲ್ಲ. ನಮ್ಮ ಕಾರಿನ ಬಗ್ಗೆ ಯೋಚಿಸಿದಾಗ ಯಾಕೋ ಮೈಜುಂ ಎಂದು ಭಯ ಹರಿದಾಡಿದಂತಾಯಿತು. ಬೇರೆ ಯಾವುದಾದರೂ ಟ್ಯಾಕ್ಸಿಯಲ್ಲಿ ಹೋಗಿ ಬಂದರೆ ಹೇಗೆ? ಎಂದು ಯೋಚಿಸುತ್ತಿದ್ದೆ.
ಹಾಸನದಿಂದ ಊರಿಗೆ ಹೋಗುವ ಮಾರ್ಗ ಮಧ್ಯದಲ್ಲಿರುವ ಆಲೂರಿನಿಂದ ಪೋನ್ ಬಂದಿತ್ತು. ಅಲ್ಲಿ ನನ್ನ ತಂಗಿ ವನಜಾಕ್ಷಿ ಹಾಗೂ ಅವಳ ಗಂಡ ಆರೋಗ್ಯ ಇಲಾಖೆಯಲ್ಲಿ ಕೆಲಸಮಾಡುತ್ತಾರೆ. ‘ನಾಳೆ ಸಾವಿಗೆ ಹ್ಯಾಗೆ ಹೋಗ್ತೀರಿ’ ಎಂದಳು ‘ಗೊತ್ತಿಲ್ಲಾ ನೊಡ್ಬೇಕು’ ಎಂದೆ ‘ಯಾಕೆ ಕಾರ್ ಹೋಗೋದಿಲ್ವ? ಇದೇ ದಾರಿ ಅಲ್ವಾ? ನಾವೂ ಇಬ್ರೂ ಬರ್ತಿದ್ವಿ ಕರ್ಕಂಡು ಹೋದ್ರೆ….. ಕಾರ್ ತಗಂಡು ಇಷ್ಟ್ ದಿನ ಆದ್ರೂ ಒಂದ್ ಸಲನೂ ಕೂತಿಲ್ಲ ನಾವು!’ ಅವಳ ಮಾತಿನ ವ್ಯಂಗ್ಯತಾಗಿ ಕಾರನ್ನು ಹೊರಡಿಸಲು ಪ್ರೇರೇಪಿಸಿತು. ಡ್ರೈವರ್ಗೆ ಪೋನ್ ಮಾಡಿದೆ. ವಿವರ ಹೇಳಿದ ನಂತರ ‘ಈಗ ಹ್ಯಾಗಿದೆಯಪ್ಪ ಕಾರು? ಚೆನ್ನಾಗಿ ಓಡುತ್ತಾ’ ಎಂದು ವಿಚಾರಿಸಿಕೊಂಡೆ. ‘ಕಾರಿಗೇನು ಸಾರ್ ಇಂಜಿನ್ ಹೊಸದು, ರೇಡಿಯೇಟರ್ ಹೊಸದು ಪಸ್ಟ್ಕ್ಲಾಸಾಗಿ ಹೋಗುತ್ತೆ. ಆದರೆ ಟೈರ್ ವೀಕಾಗಿವೆ. ಅವನ್ನೊಂದಿಷ್ಟು ಬದಲಾಯಿಸಿದರೆ ಏನೂ ತೊಂದರೆ ಇಲ್ಲಾ’ ಎಂದ ‘ಸರಿ. ವಯಸ್ಸಾದವರೆಲ್ಲಾ ಇದಾರೆ. ಸೇಫಾಗಿ ಕರ್ಕಂಡ್ ಹೋಗಿ ಬರಬೇಕು’ ಎಂದೆ.

ಕಳೆದ ಬಾರಿ ರೇಡಿಯೇಟರ್ ಹಾಕಿಸುವಾಗ ಊರಿನ ನನ್ನ ಮಿತ್ರ ಹತ್ತು ಸಾವಿರ ಸಾಲ ಕೊಟ್ಟಿದ್ದ. ಹೇಳಿದ ಟೈಮಿಗೆ ಕೊಡಲು ಆಗಿರಲಿಲ್ಲ. ಅದಕ್ಕಾಗಿ ಪ್ರಾವಿಡೆಂಡ್ ಫಂಡ್ನಲ್ಲಿ ಹತ್ತು ಸಾವಿರ ಸಾಲ ತೆಗೆದಿದ್ದೆ. ಹಾಗೆಯೇ ಅದನ್ನು ತಲಪಿಸಿ ಬರಬೇಕು ಎಂದು ನೆನಪು ಮಾಡಿಕೊಂಡೆ. ಬೆಳಗ್ಗೆ ಹತ್ತು ಗಂಟೆಗೆಲ್ಲಾ ಹೊರೆಟೆವು. ಆಲೂರಿನಲ್ಲಿ ಅವರಿಬ್ಬರೂ ಹತ್ತಿ ಕೊಂಡರು. ಡ್ರೈವರ್ ಹೊಸಾ ಸೀಟ್ಕವರ್ ಹಾಕಿಸಿದ್ದ. ನನ್ನ ತಂಗಿ ಕೂರುವ ಮೊದಲು ಒಮ್ಮೆ ಬಡಿದು ನೋಡಿ ‘ಚೆನ್ನಾಗಿದೆ’ ಎಂದಳು. ಅಣ್ಣನ ಕಾರಿನಲ್ಲಿ ಕೂರುತ್ತಿದ್ದೇನೆ ಎಂಬ ಹೆಮ್ಮಯಿತ್ತು ಅವಳ ಮುಖದಲ್ಲಿ! ಪ್ರಯಾಣ ನಿರಾತಂಕವಾಗಿ ಸಾಗುತ್ತಿತ್ತು. ಸಕಲೇಶಪುರದಲ್ಲಿ ಇಳಿದು ಹೂ ಹಾರ ಹಾಗೂ ಪೂಜಾಸಾಮಾಗ್ರಿ ಕೊಂಡು ಪ್ರಯಾಣ ಮುಂದುವರಿಸಿದೆವು. ನನ್ನ ಕಾರಿನ ಕತೆಗಳು ನನ್ನ ತಂಗಿ ಹಾಗೂ ಬಾವನಿಗೆ ತಿಳಿದಿರಲಿಲ್ಲ. ಕಳೆದ ಬಾರಿಯ ಪಯಣದ ಅನುಭವವನ್ನು ಸಂಕ್ಷಿಪ್ತವಾಗಿ ಹೇಳಿದೆ ದೇವಸ್ಥಾನದ ಮುಂದೆ ಕಾರು ನಿಂತು ಹೋಗಿದ್ದು ಅದರ ಬಗ್ಗೆ ಅಮ್ಮಣಮ್ಮ ವ್ಯಾಖ್ಯಾನ ಮಾಡಿದ್ದು ಕೇಳಿದ ಮಹಾನ್ ದೈವಭಕ್ತೆ ವನಜಾಕ್ಷಿ ‘ಮತ್ತೆಂತದು ನೀನು. ಕಾರ್ ತಂಗಡ್ ಕೂಡ್ಲೆ ಹೋಗಿ ಪೂಜೆ ಮಾಡಿಸ್ಕಂಡು ಬರೋದಲ್ವ’ ಎಂದಳು.
ಸಕಲೇಶಪುರದಿಂದ ರಸ್ತೆ ಸರಿ ಇರಲಿಲ್ಲ. ಜಲ್ಲಿ ಎದ್ದು ಮರಳು, ಟೆಂಬರ್ನ ಲೋಡ್ ಲಾರಿಗಳೆಲ್ಲಾ ಓಡಾಡಿ ಗುಂಡಿ ಬಿದ್ದು ಹೋಗಿತ್ತು. ಡ್ರೈವರ್ ಕಾರನ್ನು ಅತ್ತಿತ್ತ ಹೊರಳಿಸುತ್ತಾ. ಗುಂಡಿಗಳನ್ನು ತಪ್ಪಿಸುತ್ತಾ ಹುಷಾರಾಗಿ ಕಾರು ನಡೆಸುತ್ತಿದು. ‘ಸ್ವಲ್ಪ ಜೋರಾಗಿ ಹೋಗಕೆ ಹೇಳು. ಸಾವು ನೋಡಿಕೊಂಡು ಹಾಗೇ ಊರಿಗೆ ಹೋಗಿ ಅಣ್ಣ ಅತ್ತಿಗೆ ಮಾತಾಡಿಸಿಕೊಂಡು ಬರಬಹುದು’ ಎಂದು ತಂಗಿ ಆಸೆ ವ್ಯಕ್ತಪಡಿಸಿದಳು. ಡ್ರೈವರ್ ಕಷ್ಟದ ಅರಿವಿದ್ದ ನಾನು ಏನೂ ಹೇಳಲಿಲ್ಲ. ಮುಂಗಾರಿನ ಮೋಡಗಳು ದಟ್ಟೈಸತೊಡಗಿದವು. ಡ್ರೈವರ್ ರಸ್ತೆಯ ಮೇಲೆಯೇ ದೃಷ್ಟಿ ಕೇಂದ್ರೀಕರಿಸಿ ಸುರಕ್ಷಿತವಾದ ಕಡೆ ಟೈರು ಹಾದುಹೋಗುವಂತೆ ಕಾರು ನಡೆಸುವುದರಲ್ಲಿ ಮಗ್ನನಾಗಿದ್ದ. ಬ್ಯಾಕರವಳ್ಳಿ ಇನ್ನೂ ಒಂದು ಕಿ.ಮೀ. ದೂರವಿತ್ತು. ಕಾರು ಏಕೋ ಅತ್ತಿತ್ತ ಎಳೆದಾಡಿದಂತೆ ತೋರಿತು. ದಿಣ್ಣೆ ಏರುತ್ತಿದ್ದ ಕಾರನ್ನು ಮುಂದೆ ನಡೆಸಿ ಸಮತ್ತಟ್ಟಾದ ರಸ್ತೆಗೆ ತಂದು ನಿಲ್ಲಿಸಿ ಡ್ರೈವರ್ ಕೆಳಗಿಳಿದು ಪರೀಕ್ಷಿಸಿದ. ಗಾಬರಿಯಿಂದ ನನ್ನೆಡೆಗೆ ತಿರುಗಿ ‘ಪಂಚರಾಗಿದೆ ಸಾರ್’ ಎಂದ. ಕಾಫಿ ತೋಟದ ಮಧ್ಯೆ ರಸ್ತೆಯಲ್ಲಿ ಕಾರು ನಿಂತಿದೆ. ಹತ್ತಿರ ಯಾವುದೂ ಮನೆಗಳಿಲ್ಲ. ಮಳೆ ಬೇರೆ ಬರುವ ಸೂಚನೆ ಇದೆ. ನನಗೆ ದಿಗಿಲಾಯಿತು. ಎಲ್ಲರೂ ಕೆಳಗಿಳಿದೆವು.
‘ಈಗೇನು’ ಎಂದೆ. ಆಗಲೇ ಅವನು ವೀಲ್ ಬಿಚ್ಚುತ್ತಿದ್ದ. ‘ಟೈರು ಟ್ಯೂಬ್ ಎರಡೂ ಕಟ್ ಆಗಿರೊ ಹಾಗೆ ಇದಾವೆ. ಎರಡನ್ನೂ ಬದಲಾಯಿಸಬೇಕು… ಜೇಬಲ್ಲಿ ದುಡ್ಡು ಇದೆಯಾ’ ಎಂದ. ಸಕಲೇಶಪುರದ ಕಡೆಗೆ ಒಂದು ವ್ಯಾನ್ ಬರುತ್ತಿತ್ತು. ಡ್ರೈವರ್ ಕೈ ಅಡ್ಡ ಹಿಡಿದ. ನಾನು ಜೇಬಿನಿಂದ ಹತ್ತು ಸಾವಿರ ತೆದುಕೊಡುತ್ತಾ ‘ನೋಡು. ಎಷ್ಟು ಉಳಿಯುತ್ತೇಂತಾ! ಉಳಿದರೆ ಇನ್ನೊಂದೆರಡು ಹೊಸಾ ಟೈರ್ ತಗೊಂಡು ಬಾ. ಹೆತ್ತೂರಿನಲ್ಲಿ ಬದಲಾಯಿಸಿದರೆ ಆಯಿತು’ ಎಂದೆ. ‘ಇರಿ. ಅರ್ಧ ಗಂಟೆಯಲ್ಲಿ ಬಂದೆ’ ಎಂದು ಧೈರ್ಯ ತುಂಬುತ್ತಾ ವ್ಯಾನಿನೊಳಗೆ ನುಸುಳಿಕೊಂಡ. ಸಣ್ಣಗೆ ಮಳೆ ಹನಿಯತೊಡಗಿತು. ನಿರ್ಜನ ಪ್ರದೇಶ ನಿಲ್ಲಲು ಒಂದು ಮನೆಯೂ ಇಲ್ಲ. ಪಯಣಕ್ಕೆ ಇಲ್ಲಯೇ ಭಂಗಬರಬೇಕೆ? ಎಲ್ಲರೂ ಚಡಪಡಿಸತೊಡಗಿದರು. ತಂದೆತಾಯಿಯರನ್ನು ಕಾರಿನೊಳಗೆ ಕೂರಿಸಿ ನಾವು ಮರದಡಿ ನಡುಗುತ್ತಾ ನಿಂತುಕೊಂಡಿದ್ದೆವು. ಹಾಗೆಯೇ ಎರಡೂವರೆ ಗಂಟೆ ಕಳೆಯಿತು. ಡ್ರೈವರ್ ಹೊಸ ಟೈರು ಟೈಬಿನೊಂದಿಗೆ ಒಂದು ಲಗೇಜ್ ಆಟೋದಲ್ಲಿ ಬಂದಿಳಿದ. ಹೊಸ ಟೈರು ಟೈಬು ದೊರೆತಿದ್ದರಿಂದ ಬಹಳ ಖುಷಿಯಾಗಿದ್ದಂತಿದ್ದ. ಲಗುಬಗೆಯಿಂದ ಬಿಚ್ಚಿಕೊಂಡು ಹೋಗಿದ್ದ ವೀಲನ್ನು ಜೋಡಿಸಿದ. ಉಳಿದವನ್ನು ಡಿಕ್ಕಿಗೆ ಹಾಕಿದ. ಎಲ್ಲರೂ ನೆಮ್ಮದಿಯ ಉಸಿರು ಬಿಡುವಂತಾಯಿತು. ಪಯಣ ಮುಂದುವರೆಯಿತು. ಕಾರೊಳಗೆ ಈಗ ಉಲ್ಲಾಸದ ವಾತಾವರಣ. ಮಳೆ ಜೋರಾಗ ತೊಡಗಿತು. ಅಂತೂ ಸ್ಮಶಾನ ತಲುಪಿದೆವು. ‘ನಿಮ್ಮ ಕಾರ್ ನಂಬಿಕೊಂಡು ಒಡಹುಟ್ಟಿದ ಅಣ್ಣನ ಮುಖವೂ ಸಿಕ್ಕದಂಗೆ ಆಯ್ತು’ ಎನ್ನುತ್ತಾ ತಾಯಿ ಪುಟ್ಟಮ್ಮ ಗೊಣಗುತ್ತಾ ಕಾರಿಂದ ಇಳಿಯತೊಡಗಿದರು. ಶವವನ್ನು ಚಿತೆಗೆ ಏರಿಸಿ ಆಗಿತ್ತು!
ಕಾಡುಹಕ್ಕಿಯ ಹಾದಿನೋಟ : ಚಿತೆಗೇರಿಸಿ ಆಗಿತ್ತು
ನಿಮಗೆ ಇವೂ ಇಷ್ಟವಾಗಬಹುದು…




0 Comments