ಕಾಡುವ ‘ವಿರಹಿ ದಂಡೆ’

ಅಗಾಧ ಆಕಾಶ, ಅನಂತ ಕಡಲು ಉಳಿದದ್ದು ದಂಡೆ ವಿರಹ..

ಸ್ಮಿತಾ ಅಮೃತರಾಜ್ / ಸಂಪಾಜೆ.

ವೃತ್ತಿಯಲ್ಲಿ ಪತ್ರಕರ್ತರಾಗಿರುವ ಕವಿ ನಾಗರಾಜ ಹರಪನಹಳ್ಳಿಯವರ ಬಿಡಿ ಬಿಡಿ ಕವಿತೆಗಳನ್ನ ಅಲ್ಲಲ್ಲಿ ಓದಿದ್ದು ಬಿಟ್ಟರೆ ಅವರ ಪರಿಚಯ ನನಗಿರಲಿಲ್ಲ. ವಿರಹಿ ದಂಡೆಯನ್ನು ಓದಿ ಮುಗಿಸಿದಾಗ ಕಾಡಿದ ಭಾವಗಳನ್ನು ಅಲೆ ಅಳಿಸಿ ಹಾಕುವ ಮುನ್ನ ಬರೆಯ ಬೇಕೆನ್ನಿಸಿತು.

‘ಸಿಹಿ ನದಿಯು ಕಡಲು ಬೆರೆತರು
ಅಲೆಯಲ್ಲಿ ಉಕ್ಕಿದ್ದು ಉಪ್ಪು ನೀರು’

ಈ ಸಾಲುಗಳು ಇಡೀ ಸಂಕಲನದ ಸಾರವನ್ನು ಹಿಡಿದಿಟ್ಟಂತೆ ಭಾಸವಾಯಿತು. ಇದು ದಾಹವೋ? ವಿರಹವೋ?. ದಂಡೆಯೊಂದು ಇಲ್ಲಿ ಪ್ರತಿಮಾತ್ಮಕವಾಗಿ ಕುಳಿತು ಅನೇಕ ಅರ್ಥಗಳನ್ನ ಹೊಳೆಯಿಸಿದಂತೆ ತೋರುತ್ತದೆ. ಸಮುದ್ರದ ಬಾಯಾರಿಕೆಯೂ ದಂಡೆಯ ವಿರಹವೂ ಮುಗಿಯುವಂತದ್ದಲ್ಲ. ದಾಹವೇ ಅಂತದ್ದು, ಅದಕ್ಕೆ ತಣಿಯದಷ್ಟು ಬಾಯಾರಿಕೆ. ಸಮುದ್ರ-ದಂಡೆ, ನೆಲ-ಮುಗಿಲು, ಮಳೆ-ಬಿಸಿಲು, ಹರಯ-ಕನಸು ಇವುಗಳ ಹಪಾಹಪಿಕೆ ನಿಲ್ಲುವುದಿಲ್ಲ. ಕಡಲಿಗೆ ಮುಗಿಯದಷ್ಟು ದಾಹ, ಅತೃಪ್ತಿ. ಅದಕ್ಕೆ ದಂಡೆ ಸದಾ ವಿರಹಿಯಾ?. ಅಸುಖಿಯಾಗದವ ಕವಿಯಾಗಲಾರ ಅನ್ನೋ ಮಾತಿದೆ. ಹಾಗಾಗಿ ಬಹುಷ; ಇಂತಹ ಅತೃಪ್ತಿಯೇ ಕವಿತೆಯ ಹುಟ್ಟಿಗೆ ಕಾರಣವೂ ಹೌದು. ಇಲ್ಲದಿದ್ದರೆ ಬದುಕಿನಲ್ಲಿ ನಿರೀಕ್ಷೆಗಳು ಇರುವುದಿಲ್ಲ. ಗಮ್ಯದೆಡೆಗೆ ಹೆಜ್ಜೆಯೂ ಸಾಗುವುದಿಲ್ಲ. ಕೆಲವೊಮ್ಮೆ ಇಂತಹ ಅತೃಪ್ತಿಯೇ ಬದುಕನ್ನು ಸಹ್ಯಗೊಳಿಸುವುದು ಅಂತನ್ನಿಸುತ್ತದೆ.

ಕವಿ ನಾಗರಾಜ ಹರಪನಹಳ್ಳಿಯವರ ಕಾವ್ಯದಲ್ಲಿ ಒಲವೊಂದು ಸೆಳೆವ ಸೆಳಕಾಗಿ ಕಾಡುವುದನ್ನ ಗಮನಿಸಬಹುದು.ಇಡೀ ಪ್ರಕೃತಿಯೇ ಪ್ರೀತಿಗೊಂದು ಬಹು ದೊಡ್ಡ ರೂಪಕ. ಇಡೀ ಪ್ರಕೃತಿಯ ಸುಂದರತೆಯ ಹಿಂದೆ ಒಲವೊಂದು ಅಮೂರ್ತವಾಗಿ ಕೆಲಸಮಾಡುತ್ತದೆ ಅನ್ನುವುದು ಅಲ್ಲಗಳೆಯಲಾಗದ ಸತ್ಯ. ಮನೆಯ ಮುಂದೆ ಕುಂಡದಲ್ಲಿ ಹೂ ಅರಳಿದೆ ಎಂದರೆ ನೆಲದಡಿಯಲ್ಲಿ ಒಲವು ಬೆಳೆದಿರಬೇಕು ಅನ್ನುವ ಕವಿ ಅಮೂರ್ತ ಅಚ್ಚರಿಗಳನ್ನ ಬೆರಗಾಗುವಂತೆ ತೆರೆದಿಡ ಬಲ್ಲರು. ಇನ್ನೂ ಮುಂದಕ್ಕೆ ಹೋಗಿ ಕಡಲು ಪ್ರೀತಿಯ ಅಲೆಯನ್ನೇ ದಡಕ್ಕೆ ತಂದು ಹಾಕಿದರೂ ದಂಡೆ ಮತ್ತೆ ಮತ್ತೆ ವಿರಹಿ ಒಬ್ಬಂಟಿಯೇ. ಬದುಕಿಗೆ ಇದು ಎಷ್ಟೊಂದು ಹತ್ತಿರದಲ್ಲಿ ಅನ್ವಯಿಸಿ ಬಿಡುತ್ತದಲ್ಲ?!. ಬದುಕನ್ನ ಇಲ್ಲಿಲ್ಲದಂತೆ ಆಸ್ವಾದಿಸಬೇಕೆಂಬ ಜೀವನ ಪ್ರೀತಿ ಇಲ್ಲಿಯ ಹೆಚ್ಚಿನ ಕವಿತೆಗಳಲ್ಲಿ ಪ್ರತಿಫಲಿಸಿದೆ. ಬದುಕಿನ ನಶ್ವರತೆಯ ಕುರಿತು ಕವಿಗೆ ಅರಿವಿರುವುದರಿಂದಲೇ , ನಶ್ವರತೆಗೂ ಮುನ್ನ ಬದುಕ ಮೋಹಿಸಬೇಕು; ಬಯಲಲ್ಲಿ ಬಯಲಾಗಿ ತಬ್ಬಬೇಕು ಅನ್ನುವ ಇಂಗಿತವನ್ನು ವ್ಯಕ್ತ ಪಡಿಸುತ್ತಾರೆ. ಹಾಗೇ ಪುಳಕಗೊಳ್ಳುವ ದಂಡೆಗೆ ಪ್ರೇಮವೆಂದರೆ ರೋಮಾಂಚನ ಅನ್ನುವ ಸಾಲುಗಳ ಮೂಲಕ ಒಂದು ಬಗೆಯ ರೋಮಾಂಚನವನ್ನು ಓದುಗನ ಒಳಗೂ ಕಟ್ಟಿಕೊಡಬಲ್ಲರು.

ಬದುಕಿನ ಕುರಿತ ಅದಮ್ಯ ಪ್ರೀತಿ ನಮ್ಮನ್ನ ಪ್ರತಿನಿತ್ಯ ಹುಡುಕಾಟದಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡಬಲ್ಲದು.ಅದಕ್ಕೇ ದಕ್ಕಿಯೂ ದಕ್ಕದಂತಾಗುವುದು ಅನ್ನುವ ಆಶಯವನ್ನ ಪ್ರತಿಬಿಂಬಿಸುವ ಕವಿತೆಗಳು ದಕ್ಕದ್ದನ್ನ ಹಿಡಿಯಬಾರದು ಎನ್ನುವ ಇಲ್ಲಿಯ ಸಾಲುಗಳು ಬಲವಂತಕ್ಕೆ ಯಾವುದೂ ದಕ್ಕುವುದಿಲ್ಲ ಅನ್ನುವುದನ್ನ ಸಾಬೀತು ಪಡಿಸುತ್ತದೆ. ಇಷ್ಟಕ್ಕೆ ನಿಲ್ಲದೆ ಅದರ ಮುಂದುವರಿಕೆಯೆಂಬಂತೆ ದಕ್ಕದ್ದನ್ನು ದಕ್ಕಿಸಿಕೊಳ್ಳಬೇಕು ಅನ್ನುವ ಸಾಲು ಕೂಡ ಅವರಿಂದ ಬರೆಯಿಸಿಕೊಳ್ಳುತ್ತದೆ. ಇದು ಬಲವಂತ ಅಲ್ಲ, ಹಿಡಿಯಷ್ಟು ಪ್ರೀತಿಗಾಗಿ; ಬೊಗಸೆಯಷ್ಟು ಬದುಕಿಗಾಗಿ ಅನ್ನುವುದು ವೇದ್ಯವಾಗುತ್ತದೆ. ಹಿಡಿ ಪ್ರೀತಿಗಾಗಿ ನಮ್ಮೆಲ್ಲರದ್ದು ನಿರಂತರ ತಹತಹಿಕೆ ಇದ್ದದ್ದೆ. ದಕ್ಕಿದರೂ ದಕ್ಕದಿದ್ದರೂ ಅದರೆಡೆಗಿನ ಹಪಾಹಪಿಕೆ ನಿಲ್ಲುವುದಿಲ್ಲ. ನಶ್ವರ ಬದುಕಿನಲ್ಲಿ ಶಾಶ್ವತವಾಗಿರುವುದು ಪ್ರೇಮವೊಂದೇ. ಅದನ್ನೇ ಕವಿ,

ನೀನು ಕಡಲು ನಾನು ದಂಡೆ
ಯುಗಯುಗಗಳ ಪ್ರೇಮಕ್ಕೆ ಸಾಕ್ಷಿಯಾಗಿದೆ
ಶರಧಿ.

ಅಂತ ಬರೆದುಕೊಳ್ಳುತ್ತಾರೆ. ಪ್ರೇಮಕ್ಕೆ ಕಡಲಿಗಿಂತ ದೊಡ್ದ ಉಪಮೆ ಬೇಕೆ?.

ಒಲವಿಗೆ ಶರಣಾಗದ ಜೀವಿಗಳು ಎಲ್ಲಿ ತಾನೇ ಇದ್ದಾರು? ಪ್ರೀತಿಗೆ ಕಲ್ಲನ್ನೂ ಕರಗಿಸುವ ಶಕ್ತಿ ಇದೆ. ಇದೇ ಒಲವಿನ ತಾಕತ್ತು. ಅದನ್ನೇ ಕವಿ ಹೇಳುವುದು ಹೀಗೆ-

ವಜ್ರದ ಬೆಳಕಿನಂತಹ
ಕಾಠಿಣ್ಯದ ಹುಡುಗಿಯೂ
ಒಂದು ಒಲವಿಗೆ ಕರಗಿ ನೀರಾಗುವುದೇ ಸೋಜಿಗ.

ಅಗಾಧ ಆಕಾಶಕ್ಕೆ ಮುಖ ಮಾಡಿದರೆ ಕಳೆದು ಹೋದ ನಕ್ಷತ್ರ ನೆನಪು ಎನ್ನುವ ಸಾಲುಗಳು ಖಾಲಿ ಆಗಸವೊಂದು ಏಕಾಂತಕ್ಕೆ ಇಲ್ಲದ ಹುಡುಕಾಟಕ್ಕೆ ರೂಪಕದಂತೆ ಗೋಚರಿಸುತ್ತದೆ. ಒಂದು ದೀಪದ ಬೆಳಕು ಎಷ್ಟೆಲ್ಲಾ ಅನಾವರಣಗೊಳಿಸಬಲ್ಲದು ಅನ್ನುವ ಇಲ್ಲಿಯ ಸಾಲುಗಳು ವಿರಹಿ ದಂಡೆಯ ಮೂಲ ಅನೇಕ ಸಂಗತಿಗಳನ್ನ ತೆರೆದಿಡಬಲ್ಲದು.
ವಿರಹ, ಏಕಾಂತದೊಳಗೆ ಹುಟ್ಟಿಕೊಳ್ಳುವ ಇಲ್ಲಿನ ಹೆಚ್ಚಿನ ಕವಿತೆಗಳು ನಿರಾಸೆಯನ್ನು ಪ್ರಕಟಪಡಿಸುವುದಿಲ್ಲ. ಬದುಕಿನ ಕಡು ಮೋಹಿಯಂತೆ ಅನ್ನಿಸುತ್ತದೆ. ಪ್ರೇಮವೇ ಇಲ್ಲಿಯ ಕವಿತೆಗಳ ಸ್ಥಾಯಿ ಭಾವ. ಧ್ಯಾನಸ್ಥ ವಿರಹದಲ್ಲಿ ದಂಡೆಗೆ ತಾಕಿದ ಅಲೆಗಳೆಲ್ಲವೂ ಕಾಡುವ ಕವಿತೆಯೇ.

ಆದರೆ, ಏಕಾಂತವ ಸುಟ್ಟು
ಅಲ್ಲಿ ಪ್ರೇಮದ ಗಿಡ ನೆಟ್ಟು
ನೀರು ಹಾಕಿದರಷ್ಟೇ ಸಾಕು..

ಎಂದು ನಿವೇದಿಸುವ ಸಾಲುಗಳು ಪ್ರೇಮವನ್ನ ರ‍್ಧ್ರವಾಗಿ ಕಟ್ಟಿಕೊಡಬಲ್ಲವು.

ಏಕಾಂತಕ್ಕೆ ಪ್ರೀತಿಯ ಬೆಸುಗೆ ಹಾಕೋಣ
ಕೋಣೆಯ ವಿರಹಕೆ ಬಣ್ಣ ಹಚ್ಚೋಣ..

ಇಷ್ಟೇ ಸಾಲುಗಳು ಸಾಕು, ಹೇಳದೆಯೂ ಅನೇಕ ಬಣ್ಣಗಳನ್ನ ಕಡಲಂತೆ ತೆರೆದಿಡಬಲ್ಲದು ಅನ್ನಿಸುತ್ತದೆ. ಪ್ರೇಮ ಸ್ವಲ್ಪ ಹದ ತಪ್ಪಿದರೂ ಎಲ್ಲಾ ಹಸಿಹಸಿ ತೆರೆದಿಟ್ಟ ವಿವರಣೆಯಾಗಿ ಬಿಡುತ್ತದೆ.ಪ್ರೇಮ ಕಟ್ಟಿ ಕೊಡುವ ಭಾವ ಅತೀತವಾದದ್ದು. ಹಾಗಾಗಿ ಎಲ್ಲೋ ಕೆಲವು ಕಡೆ ಶೃಂಗಾರ ಭಾವವೇ ಮೇಳೈಸಿದ್ದು ಸುಳ್ಳಲ್ಲ. ಬಹುಷ; ಇದು ನನ್ನ ಗ್ರಹಿಕೆಯ ಮಿತಿಯೂ ಕೂಡ ಇರಬಹುದು. ಉಳಿದಂತೆ ವಿರಹಿದಂಡೆ ತನ್ನ ವಿರಹವನ್ನ, ದಕ್ಕದ್ದನ್ನ, ಏಕಾಂತವನ್ನ ಕವಿತೆಯಾಗಿಸಿದ ಪರಿ ಅನನ್ಯ.

ಕಡಲೂರಿನವರಾದ ನಾಗರಾಜ ಹರಪನಹಳ್ಳಿಯವರು ಸಮುದ್ರವನ್ನ ಧ್ಯಾನಿಸಿ ಬರೆಯುವುದರಲ್ಲಿ ಬಲು ಕುಶಲಿಗರು. ಎಷ್ಟೊಂದು ಕವಿಗಳು ಅವರೂರಿನಲ್ಲಿ?. ಬಹುಷ; ಕಡಲು ಅಲ್ಲಿ ಭೋರ್ಗರೆಯುವುದೇ ಕವಿತೆಗಾಗಿ ಅಂತನ್ನಿಸುತ್ತದೆ. ಕಡಲಿನ ಹುಚ್ಚು ಪ್ರೀತಿಯನ್ನ, ದಂಡೆಯ ವಿರಹವನ್ನ ತಹಬಂದಿಗೆ ತರುವುದು ನಡುವಿನಲ್ಲಿ ಹುಟ್ಟಿಕೊಂಡ ಕವಿತೆಯಷ್ಟೆ. ಸಮುದ್ರ ದಂಡೆಯಲ್ಲಿ ಮತ್ತಷ್ಟು ಕವಿತೆಗಳು ಹುಟ್ಟಲಿ; ಅದಕ್ಕಾದರೂ ದಂಡೆ, ಅಗಾಧ ಆಗಸ ಅನಂತ ಕಡಲನ್ನ ನೋಡುತ್ತಾ ವಿರಹಿಯಾಗಿಯೇ ಉಳಿಯಲಿ. ನಾಗರಾಜ ಹರಪನಹಳ್ಳಿಯವರ ಕಾವ್ಯ ಪ್ರೀತಿ ನಿರಂತರವಾಗಿರಲಿ.

ಈ ಪುಸ್ತಕವನ್ನು ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ 

 

‍ಲೇಖಕರು avadhi

November 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ನೂತನ ದೋಶೆಟ್ಟಿ

    ನಾಗರಾಜ ಅವರು ಕಡಲೂರಿನವರಾದರೂ ಅವರು ಕವಿತೆ ಅದರ ಭಾವ ಆಹಾ ಎನ್ನಿಸುವ ತಂಗಾಳಿ.. ಹಾಗೆಂದು ಸರಳ ಶಬ್ದಗಳಲ್ಲಿ ಕಡಲಾಳದ ಬೆರಗು…

    ಪ್ರತಿಕ್ರಿಯೆ
  2. nagraj Harapanahalli

    ಅವಧಿಗೆ ಹಾಗೂ ಸ್ಮಿತಾ ಅವರಿಗೆ ಥ್ಯಾಂಕ್ಸ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: