ಸ್ಮಿತಾ ಅಮೃತರಾಜ್, ಸಂಪಾಜೆ
ಕನ್ನಡದ ಪ್ರಮುಖ ಬರಹಗಾರ್ತಿಯರಲ್ಲಿ ಒಬ್ಬರಾದ ಉಷಾ ನರಸಿಂಹನ್, ಕೆಲವು ವರುಷಗಳ ಹಿಂದೆಯಷ್ಟೇ ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಅಷ್ಟರಲ್ಲೇ ೧೫ ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನ ರಚಿಸಿ ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡವರು. ಬರವಣಿಗೆಯನ್ನು ಉಸಿರಿನಂತೆ ಪರಿಭಾವಿಸಿಕೊಂಡು ಬರೆಯುತ್ತಿರುವ ಉಷಾ ಅವರಿಗೆ ಬರವಣಿಗೆ ಎಂಬುದು ದಿನನಿತ್ಯದ ಸಹಜ ಕ್ರಿಯೆ. ಎಲ್ಲೂ ಪ್ರಚಾರಕ್ಕೆ ಸಿಗದೆ ತಮ್ಮ ಪಾಡಿಗೆ ತಾವು ಬರೆಯುವ ಉಷಾ ಅವರ ಕೃತಿಗಳು ನನ್ನ ಓದಿಗೆ ಸಿಕ್ಕಿದ್ದು ಇತ್ತೀಚೆಗಷ್ಟೆ. ಅಲ್ಲಲ್ಲಿ ಅವರ ಕತೆಗಳನ್ನು ಓದಿಕೊಂಡು ಬಂದಿದ್ದ ನಾನು ಅವರ ಕಥನ ಕಲೆಗೆ ಮಾರು ಹೋಗಿದ್ದೆ. ಅವರ ಕೆಲವೊಂದು ಕತೆಗಳು ಕವಿತೆಯಂತೆ ಬಹು ದಿನದವರೆಗೂ ಕಾಡಿದ್ದವು. ಹಾಗಾಗಿ ಇನ್ನಿಲ್ಲದ ಉತ್ಸಾಹದಿಂದ ಅವರ ಕಾದಂಬರಿಯನ್ನು ಕೈಗೆತ್ತಿಕೊಂಡಿದ್ದೆ.
ಈಗಷ್ಟೆ ಓದಿ ಮುಗಿಸಿದ ಅವರ ಐತಿಹಾಸಿಕ ಕಾದಂಬರಿ’ ಪರ್ಷಿಯಾ ಪರಿಮಳ’ದ ಗುಂಗಿನಿಂದ ಹೊರ ಬರುವುದಕ್ಕೆ ಮುಂಚೆ ಎರಡು ಸಾಲು ಗೀಚದಿದ್ದರೆ ತೃಪಿಯಾಗಲಾರದು. ಒಂದು ಐತಿಹಾಸಿಕ ಕಾದಂಬರಿಯನ್ನು ಬರೆಯುವುದು ಅಷ್ಟೊಂದು ಸುಲಭದ ಸಂಗತಿಯಲ್ಲ. ಸಾಕಷ್ಟು ಅಧ್ಯಯನ, ಸಂಶೋಧನೆಗಳ ಜೊತೆಗೆ ಜೊತೆಗೆ ಅದರೊಳಗಿನ ಭಾವಕ್ಕೆ ಸ್ಪಂದಿಸುತ್ತಾ ಕಥಿಸುವುದರ ಹಿಂದೆ ಒಂದು ಧ್ಯಾನಸ್ಥ ಮನೋಭಾವ ಬೇಕು. ಎಂದೋ ನಡೆದು ಹೋದ ಸಂಗತಿಯನ್ನು ಮತ್ತೊಮ್ಮೆ ಅದಕ್ಕೆ ಮರುಸ್ಪರ್ಶ ನೀಡುತ್ತಾ ಹೊಸ ಜೀವಂತಿಕೆಯನ್ನು ತುಂಬಿ ಅನಾವರಣಗೊಳಿಸುವುದು ಸಾಮಾನ್ಯ ಸಂಗತಿಯಲ್ಲ. ಎಲ್ಲೂ ಜಾಳು ಜಾಳಾಗದಂತೆ,ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಇತಿಹಾಸವನ್ನ ಇಲ್ಲಿ ವರ್ತಮಾನದ ಕಣ್ಣಲ್ಲಿ ತುಂಬಿಸುವ ಕೆಲಸವನ್ನ ಲೇಖಕಿ ಸಮರ್ಥವಾಗಿ ನಿಭಾಯಿಸಿದ್ದಾರೆ.

ಸುಡು ಮರಳುಗಾಡಿನ ಮೂಲಕ ಹಿಂದೂಸ್ಥಾನಕ್ಕೆ ವಲಸೆ ಬಂದ ಹೆಣ್ಣು ಮಗಳೊಬ್ಬಳ ರೋಚಕ ಕಥಾನಕವೊಂದು ಹಲವು ಮಜಲುಗಳನ್ನು ದಾಟಿ ಬೆಕ್ಕಸ ಬೆರಗಾಗುವಂತೆ ಇಲ್ಲಿ ತೆರೆದುಕೊಳ್ಳುತ್ತದೆ. ಮಹಾತ್ಕಾಂಕ್ಷೆಯನ್ನು ಕಟ್ಟಿಕೊಂಡೇ ಸುಡು ಮರಳಿನಲ್ಲಿ ಪಯಣಿಸಿ ಹಿಂದೂಸ್ಥಾನಕ್ಕೆ ಬಂದು ಬಾದಶಹನ ಕೃಪೆಗೆ ಪಾತ್ರವಾಗಿ ಉನ್ನತ ಸ್ಥಾನವನ್ನು ಹೊಂದಿದ ಅವಳ ಅಪ್ಪ, ಇದೇ ಛಲ ಮತ್ತು ಆತ್ಮವಿಶ್ವಾಸವನ್ನು ಅಪ್ಪನಿಂದ ಬಳುವಳಿಯಾಗಿ ಪಡೆದ ಸಾಮಾನ್ಯ ಹೆಣ್ಣುಮಗಳೊಬ್ಬಳು ಎಲ್ಲಾ ಎಡರು ತೊಡರುಗಳನ್ನು ಮೀರಿ ಅಸಮಾನ್ಯವಾಗಿ ಬೆಳೆದು ಜಹಾಂಗೀರನ ಪತ್ನಿಯಾಗುವುದು.. ಆಡಳಿತ ಸೂತ್ರವನ್ನೇ ತನ್ನ ಕೈಯೊಳಗೆ ಹಿಡಿದುಕೊಳ್ಳುವುದು.. ಇವೆಲ್ಲಾ ಘಟಿಸಲು ಸಾಧ್ಯವಾ?. ರಾಜನ ಕೊನೇಯ ಪತ್ನಿಯಾಗಿ ಬಂದರೂ ಮತ್ತೆಂದೂ ಬೇರೆ ಯಾವ ಸುಲ್ತಾನಳನ್ನು ರಾಜನ ಅಂತ;ಪುರಕ್ಕೆ ಬರಲಾಗದಂತೆ ತಡೆದ ಆಕೆಯ ಪ್ರೇಮವಾದರೂ ಎಂತದ್ದು?.ಅಂತಃಪುರದೊಳಗೆ ಬರೇ ರಾಣಿಯಾಗಿಯೇ ಉಳಿಯದೆ ಇಡೀ ರಾಜ್ಯಾಡಳಿತವನ್ನೇ ಕೈಗೆತ್ತಿಕೊಂಡು.ಆಗಿನ ಕಾಲದಲ್ಲಿಯೇ ಅಬಲೆ ಹೆಣ್ಣುಮಕ್ಕಳಿಗಾಗಿಯೇ ಆಕೆ ಮಾಡಿದ ಸಮಾಜ ಕಾರ್ಯ ಅಚ್ಚರಿಹುಟ್ಟಿಸುವಂತದ್ದು. ಅಮ್ಮನಿಂದ ಬಳುವಳಿಯಾಗಿ ಬಂದ ಸುಗಂಧದ್ರವ್ಯ ತಯಾರಿಕೆಯನ್ನು ಅನೇಕ ಪ್ರಯೋಗಗಳ ಮೂಲಕ ತಯಾರಿಸಿ ಪರ್ಷಿಯಾ ಪರಿಮಳ ಹಿಂದೂ ಸ್ಥಾನದಲ್ಲೂ ಪಸರಿಸಿದ್ದರ ಹಿಂದೆ ಆಕೆಯ ಬದ್ಧತೆ ಮತ್ತು ಶ್ರಮ ಸಾಬೀತಾಗುತ್ತದೆ.
ಮೆಹರುನ್ನೀಸ ಎಂಬ ಹೆಣ್ಣುಮಗಳು ನೂರ್ ಜಹಾನಳಾಗಿ ರೂಪುಗೊಳ್ಳುವವರೆಗಿನ ರೋಚಕ ಪಯಣವನ್ನು ಲೇಖಕಿ ಅಷ್ಟೇ ತಾದ್ಯಾತ್ಮತೆಯಿಂದ ಮರು ನಿರೂಪಿಸುತ್ತಾ ಹೋಗುತ್ತಾರೆ. ಇಲ್ಲಿ ಇಡೀ ಕಾದಂಬರಿಯ ಹೆಸರೇ ಒಂದು ರೂಪಕದಂತೆ ಗೋಚರಿಸುತ್ತದೆ. ನೂರ್ ಜಹಾನಳ ಬದುಕು, ಆಕೆಯ ಸಾಧನೆ, ಪರಿಶುದ್ಧ ಪ್ರೇಮ,ಕವಿ ಹೃದಯ ,ಯಶಸ್ಸು ಎಲ್ಲವೂ ಆಕೆಯ ಅತ್ತರಿನ ಪರಿಮಳದಂತೇ ವ್ಯಾಪಿಸಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಹಾಗಾಗಿ ಆಕೆ ಪರಿಮಳಕ್ಕೆ, ಬೆಳಕಿಗೆ ಪರ್ಯಾಯ ಪದವೆಂಬಂತೆ ಬದುಕಿದಳು ಅನ್ನುವುದನ್ನು ಲೇಖಕಿ ಸೂಚ್ಯವಾಗಿ ಕಟ್ಟಿಕೊಡುತ್ತಾ ನಮ್ಮೊಳಗೂ ಒಂದು ರೋಮಾಂಚನವನ್ನು ಹುಟ್ಟಿಸಿ ಬಿಡುತ್ತಾರೆ.
ಈ ಕಾದಂಬರಿಯನ್ನು ಓದುತ್ತಾ ಹೋದ ಹಾಗೆ ಅನೇಕ ಚಿತ್ರಣಗಳು ನಾವು ನೋಡದೆಯೇ ಅನುಭವಿಸುವಂತೆ ಮಾಡುವಲ್ಲಿ ಇಲ್ಲಿಯ ಪಾತ್ರಗಳು, ಘಟನೆಗಳು, ನಿರೂಪಣೆ ಯಶಸ್ವಿಯಾಗಿವೆ. ಆಕೆಯ ಧೈರ್ಯ,ಧೀಶಕ್ತಿ,ಪ್ರೀತಿ,ಮಮತೆ,ಆಕೆಯ ಯೋಚನೆಗಳು, ಜನಪರ ಕಾರ್ಯಗಳು ಎಲ್ಲವೂ ಸಾಮ್ರಾಜ್ಯದ ಅಡಿಪಾಯವಾಗಿ ನಿಂತವೆಂಬುದು ಗ್ರಹಿಕೆಗೆ ದಕ್ಕುತ್ತದೆ. ಒಂದೊಂದು ಕಥಾನೇಯ್ಗೆಯೂ. ಮತ್ತೊಂದು ಕಥಾನೇಯ್ಗೆಯನ್ನ ಕಲಾತ್ಮಕವಾಗಿ ಕೂಡಿಕೊಳ್ಳುತ್ತಾ ಅನೇಕ ಸಂಗತಿಗಳನ್ನು ಬಿಗಿಯಾಗಿ ಕಟ್ಟಿಕೊಡುತ್ತದೆ.
ಮೊಮ್ಮಗಳ ಕುತೂಹಲಕ್ಕೆ ಕಾರಣವಾದ ಅತ್ತರಿನ ಶೀಷೆಯ ಮೂಲಕ ತೆರೆದುಕೊಳ್ಳುವ ಕತೆ ನಮ್ಮೊಳಗೂ ಒಂದು ಬೆರಗನ್ನು , ಕುತೂಹಲವನ್ನು ಇಳಿಸಿಕೊಂಡು ಹೋಗುವಂತೆ ಮಾಡುತ್ತದೆ. ತನ್ನ ಅಪ್ರತಿಮ ಸೌಂದರ್ಯ,ಬುದ್ಧಿಮತೆ,ಅಪರಿಮಿತ ಆತ್ಮವಿಶ್ವಾಸ, ಅಗಾಧ ಧೈರ್ಯ ಎಲ್ಲವನ್ನೂ ಅಡಗಿಸಿಕೊಂಡ ಅತ್ತರಿನ ಶೀಷೆಯ ಬಿರಡೆಯನ್ನು ಲೇಖಕಿ ಸಾವಾಧಾನದಿಂದ ಬಿಚ್ಚಿದ್ದಾರೆ. ಪರಿಮಳ ವ್ಯಾಪಿಸುತ್ತಿದೆ. ಅಘ್ರಾಣಿಸುವ ಸರದಿ ನಮ್ಮದೀಗ. ಬನ್ನಿ ಪರ್ಷಿಯಾ ಪರಿಮಳ ಕೈಗೆತ್ತಿಕೊಳ್ಳಿ. ಅಭಿನಂದನೆಗಳು ಉಷಾನರಸಿಂಹನ್ ಅವರಿಗೆ. ಸಿಗಬೇಕಾದ ಮನ್ನಣೆ,ಯಶಸ್ಸು ಈ ಕಾದಂಬರಿಗೆ ಸಲ್ಲಲಿ ಎಂಬುದೇ ನನ್ನ ಹಾರೈಕೆ.





ಉತ್ತಮ ಪುಸ್ತಕ ಪರಿಚಯ. ಓದಬೇಕೆನಿಸಿದೆ.
pusthaka parichya samnjasavagide smithakka. nanu odabeku pusthaka. usha narasimha nanna eshtada lekhakiyu hwdu. ebbarigu abhinandanegalu
ಕನ್ನಡದ ಒಂದು ಅತ್ಯುತ್ತಮ ಕೃತಿ ಎಂಬುದರಲ್ಲಿ ಎರಡು ಮಾತಿಲ್ಲ