ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕಾಡಿನ ನಡುವೆ ಒಂಟಿಗುಬ್ಬಚ್ಚಿ' – ಡಾ ಎಲ್ ಸಿ ಸುಮಿತ್ರಾ ತೀರ್ಥಹಳ್ಳಿ ಬರೀತಾರೆ

– ಡಾ ಎಲ್ ಸಿ ಸುಮಿತ್ರಾ ತೀರ್ಥಹಳ್ಳಿ


ಕಾಡಿನ ನಡುವೆ ಒಂಟಿಯಾಗಿ ಋಷಿಯಂತೆ ಬದುಕುವ ಇವರಿಗೆ , ಮರಗಿಡ,ಹೂ, ಹಕ್ಕಿ ,ದನಕರುಗಳೇ ಸಂಗಾತಿಗಳು. ಸುತ್ತ ಹಸಿರು ಬನ , ಅರಳಿದ ಹೂಗಳು, ಹಳೆಕಾಲದ ಬ್ರಿಟಿಷ್ ವಾಸ್ತುಶೈಲಿಯ ಮನೆ, ಜಗುಲಿಯ ಮೇಲಿನ ಖುರ್ಚಿಯಲ್ಲಿ ಕುಳಿತು ದಿಗಂತವನ್ನು ದಿಟ್ಟಿಸುತ್ತಿರುವವರೇ ಸೇಥ್ನಾ.
ಎರಡುವರ್ಷಗಳ ಹಿಂದೊಮ್ಮೆ ಮೂಡಿಗೆರೆಗೆ ಹೋದಾಗ ರಾಜೆಶ್ವರಿ ತೇಜಸ್ವಿಯವರು ಬೆಳೆಸಿದ ಆರ್ಕಿಡ್  ಗಿಡಗಳನ್ನು ನೋಡುತ್ತಿದ್ದಾಗ ಅಪರೂಪದ ಡೋವ್ ಆರ್ಕೆಡ್  ನ ಆಕರ್ಷಕ ಬಿಳಿ ಹೂಗಳನ್ನು ನೋಡಿ ಇದು ಎಲ್ಲಿ ಸಿಕ್ಕಿತು ಎಂದಾಗ, ಅವರು ಆಲ್ದೂರಿನಲ್ಲಿ ಸೇಥ್ನಾ ಅಂತ ಇದ್ದಾರೆ ಅವರ ಬಳಿ ತುಂಬ ಆರ್ಕೆಡ್ ಸಂಗ್ರಹ ಇದೆ,ಅಂದಾಗ ನಾನು ಹೋಗಿ ನೋಡಬೇಕೆಂದುಕೊಂಡೆ. ಇತ್ತೀಚೆಗೆ ತೇಜಸ್ವಿ ನೆನಪಿನ ಕಾರ್ಯಕ್ರಮಕ್ಕೆ ನಾವಿಬ್ಬರೂ ಹೋದಾಗ ಸೇಥ್ನಾ ಅವರನ್ನು ಭೇಟಿಯಾದೆವು.
ಆಲದೂರಿನಿಂದ ಮೂಡಿಗೆರೆಗೆ ಹೋಗುವದಾರಿಯಲ್ಲಿ ಎರಡು ಕಿ ,ಮೀ ನಷ್ಟು ದೂರಹೋದರೆ ರಸ್ತೆಯ ಎಡಭಾಗದಲ್ಲಿ ಎತ್ತರದಲ್ಲಿ ಸುತ್ತಲಿನ ಪರಿಸರಕ್ಕಿಂತ ಭಿನ್ನವಾಗಿ ಎತ್ತರಕ್ಕೆ ಬೆಳೆದ ಮರಗಳ ತೋಪು ಕಾಣಿಸುತ್ತದೆ. ರಸ್ತೆ ಇನ್ನೂ ಎತ್ತರಕ್ಕೆ ಏರಿದಂತೆ “ಎಲೆಗುಡಿಗೆ ಎಸ್ಟೇಟ್’ ಹೆಸರು ಕಾಣಿಸುತ್ತದೆ. ಗೇಟ್ ತೆರೆದು ಒಳ ಹೋದರೆ ಒಳಗಿನ ಭೂದೃಶ್ಯ ಯಾವುದೋ ಬೇರೆ ದೇಶದ್ದೆನಿಸುತ್ತದೆ. ಹಸಿರು ಹುಲ್ಲುಗಾವಲಿನ ನಡುವೆ ಗುಡ್ಡಗಳ ಏರಿಳಿವುಗಳನ್ನು ಬಳಸಿ ಹರಿದ ಅಗಲ ಕಿರಿದಾದ ರಸ್ತೆ ಅಲ್ಲಲ್ಲಿ ಬೆಳೆದ ಮರಗಳು, ಅಂಕುಡೊಂಕಿನ ರಸ್ತೆಯಲ್ಲಿ ಗುಡ್ಡಗಳನ್ನು ಬಳಸಿ ಮುಂದೆ ಹೋದರೆ ಕಾಫಿ ತೊಟ. ಮೊದಲ ಮಳೆಗೆ ಹೂವರಳಿದ್ದವು. ಕಾಫಿ ತೋಟದ ನಡುವೆ ವೃತ್ತಾಕಾರದಲ್ಲಿ ಸಾಗಿ ಬ್ರಿಟಿಷ್ಶೈಲಿಯ ಮನೆಯೆದುರು ನಿಂತಾಗ ಸುತ್ತಲೂ ಬಣ್ಣ ಬಣ್ಣದ ಹೂಗಳ ಮನಮೋಹಕ ದೃಶ್ಯ. ಅದು ಪುಷ್ಪಪ್ರಿಯ ಕೆ .ಆರ್ ಸೇಥ್ನಾ ಅವರ ಮನೆ.
ಕೆ. ಆರ್. ಸೇಥ್ನಾ ಅಂದರೆ ಕಾವೂಸ್ ರುಸ್ತುಮ್ ಸೇಥ್ನಾ ಎಂಬ ಪಾರ್ಸಿ ಹೆಸರಿನ ಹ್ರಸ್ವರೂಪ. 50 ವರ್ಷಗಳ ಹಿಂದೆ ಪೂನಾದಿಂದ ಬಂದು ಇಲ್ಲಿ ನೆಲೆಸಿದ ಸೇಥ್ನಾ ಅವರಿಗೆ ಈಗ ಎಂಬತ್ತೆರಡು ವರ್ಷ. 3800 ಅಡಿ ಎತ್ತರದಲ್ಲಿರುವ ಎಲೆಗುಡಿಗೆ ತೋಟವನ್ನು ಅವರು ಮಿಡ್ಲ್ ಟನ್ ಎಂಬ ಬ್ರಿಟಿಷ್ ಪ್ಲಾಂಟರ್ ಒಬ್ಬರಿಂದ ಕೊಂಡರು. ಸ್ವಾತಂತ್ರ್ಯಪೂರ್ವದಲ್ಲಿ ಪೂನಾದಲ್ಲಿ ಜಾಕಿಯಾಗಿ ಕೆಲಸ ಮಾಡುತ್ತಿದ್ದರು. ಶ್ರೀ ಮತ್ತು ಶ್ರೀಮತಿ ಮಿಡ್ಲಟನ್ ಸಮೀಪದಲ್ಲಿ ಇದ್ದ ಇನ್ನೊಂದು ಹಳೇಕಾಲದ ಮನೆಯಲ್ಲಿ ವಾಸಮಾಡುತ್ತಿದ್ದರು.
ಮರಗಿಡಗಳ ಕುರಿತು ವಿಷೇಷ ಆಸಕ್ತಿ ಬೆಳೆಸಿಕೊಂಡಿರುವ ಇವರು ಅಪರೂಪದ ಆರ್ಕಿಡ್ ಗಳನ್ನು ಸಂಗ್ರಹಿಸಿದ್ದಾರೆ. ವನ್ಯ ಜಾತಿಗಳೇ ಜಾಸ್ತಿಯೆನ್ನುವುದೂ ವಿಶೇಷ. ಮೂವತ್ತು ಬಗೆಯ ಅಪರೂಪದ ವಾಯುವಾಸಿ ಮತ್ತು ನೆಲವಾಸಿ ಆರ್ಕಿಡ್ ಗಳು ಸೇಥ್ನಾ ಅವರ ಸಂಗ್ರಹದಲ್ಲಿವೆ. ಸಹಜವಾದ ಪರಿಸರವನ್ನು ಒದಗಿಸಿದ್ದಾರೆ. ಹಳೆಮರದ ತುಂಡುಗಳನ್ನು ನೆರಳಿರುವ ಜಾಗದಲ್ಲಿ ನೆಲದಲ್ಲಿ ಹೂಳಿ ಅದರ ಮೇಲೆ ಆರ್ಕೆಡ್ ಗಳನ್ನು ಕಟ್ಟಿ ಸಹಜ ವಾತಾವರಣದಲ್ಲಿರುವಂತೆ ಬೆಳಸಿದ್ದಾರೆ. ಪ್ರವೇಶ ದ್ವಾರದ ಬಳಿ ಹಲಸಿನ ಮರದ ಕಾಂಡದಲ್ಲಿ ಎಳೆಗೆಂಪಿನ ಆಕರ್ಷಕ ಡೆಂಡ್ರೋಬಿಯಂಗಳು ಅರಳಿ ಸುಗಂಧ ಬೀರುತ್ತಿದ್ದವು.
ಯಾವುದೇ ರಸಾಯನಿಕಗಳನ್ನು ಬಳಸದೇ ಬೆಳೆದಿರುವ ಕ್ಯಾಟ್ಲಿಯಾ, ಫೇಲನಾಪ್ಸಿಸ್, ದೆಂಡ್ರೋಬಿಯಂ, ಅರುಂಡಿನಾ, ಫಲೈಯಸ್ ವ್ಯಾಲಿಚಿ, ಡೋವ್ ಆರ್ಕೆಡ್ ಮತ್ತು ಹೆಸರು ಗೊತ್ತಿಲ್ಲದ ಎಷ್ಟೊ ಆರ್ಕೆಡ್ ಹೂಗಳು ಮನಕ್ಕೆ ಮುದನೀಡುತ್ತವೆ. ತೋಟದ ನಡುವಿನ ದಾರಿಗಳ ಅಂಚುಗಟ್ಟಿಗೂ ಮೆಣಸು ದಾಸಿವಾಳ, ನೀಲಿಥನ್ಬಜರ್ಯಾ ಮುಂತಾದ ಹೂಬಿಡುವ ಗಿಡಗಳನ್ನೇ ಬೆಳಸಿದ್ದಾರೆ. ಗಿಡಗಳ ಜತೆ ದನ, ನಾಯಿಗಳನ್ನು ಸಾಕಿಕೊಂಡಿರುವ ಸೇಥ್ನಾ ಒಂಟಿಜೀವಿ. ಒಬ್ಬರೇ ಇರುವುದನ್ನು ಇಷ್ಟಪಡುವ ಅವರು ತಾವು ಮಾನವತಾವಾದವನ್ನು ನಂಬುವವರು, ಯಾವುದೇ ಧರ್ಮದಲ್ಲಿ ತಮಗೆ ನಂಬಿಕೆ ಇಲ್ಲ ಎಂದರು. ಸಂಗೀತ ಕೇಳುವುದು ಓದುವುದು, ಪಕ್ಷಿವೀಕ್ಷಣೆ ಮತ್ತು ಪ್ರವಾಸ ಅವರ ಹವ್ಯಾಸಗಳು. ಹಲವಾರು ಸಲ ಯುರೋಪ್ ದೇಶದ ಪ್ರವಾಸ ಮಾಡೀದ್ದಾರೆ. ನೇಪಾಳ, ಟಿಬೆಟ್ ತರಹದ ಜಾಗಗಳಿಗೆ ಪ್ರವಾಸಹೋಗುವುದು ತುಂಬಾ ಪ್ರಿಯವಾದುದು. ಪಕ್ಷಿ ವೀಕ್ಷಣೆ ಮಡುವುದು, ಪರಿಸರ, ಪ್ರಾಣಿಗಳನ್ನು ಕುರಿತ ಪುಸ್ತಕಗಳನ್ನು ಓದುವುದರಲ್ಲಿ ವಿಶೇಷ ಆಸಕ್ತಿ. ಈ ಆಸಕ್ತಿಗಳೇ ಅವರನ್ನು ತೇಜಸ್ವಿಯವರ ಸ್ನೇಹಿತರಾಗುವಂತೆ ಮಾಡಿದ್ದು.
ತೇಜಸ್ವಿ ಆಗಾಗ ಸೇಥ್ನಾ ಅವರನ್ನು ಬೇಟಿಯಾಗುತ್ತಿದ್ದರಂತೆ. ಪ್ರಸಿದ್ಧ ಪಕ್ಷಿಶಾಸ್ತ್ರಜ್ನ ಸಲೀಂ ಆಲಿ ಇವರ ಸ್ನೇಹಿತರು. ಇವರ ಮನೆಗೆ ಎರಡು ಸಲ ಭೇಟಿನೀಡಿ ಪಷ್ಚಿಮಘಟ್ಟದ ಕಾಡುಗಳನ್ನೆಲ್ಲ ಅಲೆದಿದ್ದರಂತೆ. ಸಲೀಂಅಲಿಯವರ ಜತೆ ಆಗುಂಬೆ ಘಾಟ್ ನೆತ್ತಿಯಲ್ಲಿ ತೆಗೆಸಿಕೊಂಡಿರುವ ಅಪರೂಪದ ಫೋಟೊವನ್ನು ನಮಗೆ ಕೊಟ್ಟರು. ಕುದುರೇಮುಖ ಗಣಿಗಾರಿಕೆಯಿಂದ ಪರಿಸರ ನಾಶವಾಗುತ್ತದೆಂದು ಯೋಜನೆಯ ಆರಂಭದಲ್ಲಿ ವಿರೋಧಿಸಿದವರಲ್ಲಿ ಸೇಥ್ನಾ ಒಬ್ಬರು. ಬಾಂಬೆ ನ್ಯಾಚುರಲ್ ಹಿಸ್ಟರಿ ಸಂಸ್ಥೆಯೂ ಸೇರಿದಂತೆ ಹಲವಾರು ಪರಿಸರರಕ್ಷಣಾ ಸಂಘಟನೆಗಳಿಗೆ , ವನ್ಯಪ್ರಾಣಿ ರಕ್ಷಣ ಸಂಸ್ಥೆಗಳಿಗೆ ಸದಸ್ಯರಾಗಿದ್ದಾರೆ.
ತಮಗೆ ಯಾವುದೆ ಮತಧರ್ಮಗಳಲ್ಲಿ ನಂಬಿಕೆಯಿಲ್ಲವೆಂದು ಹೇಳಿದ ಸೇಥ್ನಾ ತಾವು ನಿರೀಶ್ವರವಾದಿಯೆಂದು ಹೇಳಿದರು ಮಾತಿನ ನಡುವೆ ನಮಗೆ ತಾವೇ ಸ್ವತಹ ಟೀ ಬೆರೆಸಿಕೊಟ್ಟರು, ಮನೆಯಲ್ಲೇ ತಯಾರಿಸಿದ ಬಿಸ್ಕತ್ ಗಳ ಜತೆ. ಅವರ ಆಚರಣೆಗೆ ಅನುಗುಣವಾಗಿ ನನಗೆ ಟೀ ಕಪ್ ಕೊಟ್ಟ ಮೇಲೆ ನನ್ನ ಪತಿಗೆ ಕೊಟ್ಟರು. 82ರ ಇಳಿವಯಸ್ಸಿನಲ್ಲೂ ತಾವೇ ತಮ್ಮ ಲ್ಯಾಂಡ್ ರೊವರ್ ಜೀಪ್ ಅನ್ನು ದ್ರೈವ್ ಮಾಡ್ತಾರೆ. ಮಾತಿನ ನಡುವೆ ಕಾಜಾಣವೊಂದು ಕೂಗಿದಾಗ , ಅದನ್ನು ಕೇಳಿಸಿಕೊಳ್ಳಲು ಮಾತು ನಿಲ್ಲಿಸಿದ ಸೇಥ್ನಾ ಋಷಿ ತರಹ ಕಂಡರು. ಚುರುಕಾಗಿ ಚಟುವಟಿಕೆಯಿಂದ ನಡೆದಾಡುವ ಈ ಅಜ್ಜ ನನಗಾಗಿ ಕಾರಿನ ಬಾಗಿಲು ತೆರೆದು ಹಿಡಿದು ನಾನು ಕುಳಿತ ಮೇಲೆ ಬಾಗಿಲು ಹಾಕಿದರು. ಅವರ ಮನೆಗೂ ಕಾಡಿಗೂ ನಡುವೆ ಹೂಗಳ ಸೆರಗು ಅಂಚು ಕಟ್ಟಿದಂತಿತ್ತು. ಮುಸ್ಸಂಜೆಯಲ್ಲಿ ಅವರ ತೋಟದಿಂದ ಹೊರಬಂದಾಗ ಬೇರೆ ಪ್ರಪಂಚಕ್ಕೆ ಹೋಗಿಬಂದಂತೆನಿಸಿತು.

‍ಲೇಖಕರು G

13 January, 2014

14 Comments

  1. sumithra.lc

    ಪರಿಸರ ಪ್ರೇಮಿ ಸೇಥ್ನಾ [ಕಾವೂಸ್ ರುಸ್ತುಂ ಸೇಥ್ನಾ]ಮೊನ್ನೆ ಜನವರಿ ೫ ರಂದು ನಿಧನ ರಾದರು. ಈ ಸಂದರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ಯಾಗಿ ಈ ಲೇಖನ .ಸುಮಿತ್ರಾ ಎಲ್ ಸಿ

    • ಅಶೋಕವರ್ಧನ

      ಓದಿ ಸಂತೋಷಪಟ್ಟೆನೆನ್ನುವಷ್ಟರಲ್ಲಿ ಈ ಸುದ್ದಿ – ಒಳ್ಳೆಯವರಿಗಿದು ಕಾಲವಲ್ಲ? 🙁

    • Sumangala

      ಅವರ ಬಗ್ಗೆ ಕೇಳಿದ್ದೆ… ಬೇಸರವಾಯಿತು. ನಿಮ್ಮ ಬಳಿ ಅವರ ಹೂದೋಟದ, ಆರ್ಕಿಡ್ ಗಳ ಫೋಟೋ ಇದ್ದರೆ ಹಾಕಿ…

  2. ಬಿ. ಆರ್. ಸತ್ಯನಾರಾಯಣ

    ಸುಂದರ ಬರವಣಿಗೆ. ಸೇತ್ನಾ ಅವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು ಮೇಡಂ

  3. Uma Rao

    Sumithra, Nimma Lekhana odi allege hogi Sethna avaranne kandu bandantaayitu. Avaru nidhanaraada vishaya keli besaravaayiru.

  4. ಗುಡ್ಡಪ್ಪ

    ಛೇ … ಗುಬ್ಬಚ್ಚಿ ಎಲ್ಲಿ ಹೋಯಿತು????

  5. h a patil

    – ಸೇಥ್ನಾ ಅವರ ಜೀವನ ಪರಿಚಯ ಮಾಡಿ ಕೊಡುವ ಲೇಖನ ಸಶಕ್ತವಾಗಿ ಮೂಡಿ ಬಂದಿದೆ. ಅವರು ಕೆಲ ದಿನಗಳ ಹಿಂದೆ ಕಾಲಾವಾದ ವಿಷಯತಿಳಿದು ಬೇಸರವಾಯಿತು.

  6. bharathi b v

    che avara bagge neevu muncheye barediddare ondu sala bheti aagi bidabahudittu …..

  7. bhagyalakshmi

    avara bagge oduvaagale avaru illa …..

  8. Anil Talikoti

    ಸಾರ್ಥಕ ಬದುಕು ಸೇಥ್ನಾ ಅವರದು -ಹಾರಿ ಹೋಗುವದೆ ಹಕ್ಕಿಯ ಪ್ರಕೃತಿ.
    -ಅನಿಲ ತಾಳಿಕೋಟಿ

  9. nempe devaraj

    ivara bagege tilisikotta riti parisarada hosa loka teredittante.parisara ulisuvalli genudda kelasa madi marudda mataduvavara madye setna is different.

  10. Anonymous

    photogalu iddarebdayavittu haki

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading