ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಜಾಣದಿಂದ ಹೆಣ್ಣಿನ ಅಭಿವ್ಯಕ್ತಿಯ ಕ್ಯಾನ್ವಾಸುಗಳು

 

ಪ್ರೊ ಅಮರೇಂದ್ರ ಶೆಟ್ಟಿ ಆರ್

ಅದು ಕವಿ ಬೇಲೂರು ರಘುನಂದನ್ ತಮ್ಮ ‘ಕಾಜಾಣ’ ಎನ್ನುವ ಸಂಸ್ಥೆಯ ಮೂಲಕ ಏರ್ಪಡಿಸಿದ್ದ ಮಹಿಳಾ ಕಾವ್ಯ ಗೋಷ್ಠಿ. ಕಾವ್ಯಾಸಕ್ತರೂ ಕವಯಿತ್ರಿಯರೂ ಸೇರಿ ಸುಮಾರು ಎಪ್ಪತ್ತು ಜನರಿದ್ದರೆನಿಸುತ್ತದೆ. ಆ ಗೋಷ್ಟಿಯಲ್ಲಿ ಹೆಣ್ಣಿನ ಸಂವೇದನೆಗಳು ಹಾಗೂ ಅವುಗಳ ಅಭಿವ್ಯಕ್ತಿಗೆ ಅವಳು ಕಂಡುಕೊಳ್ಳುವ ವಿಶಿಷ್ಟ ಮಾರ್ಗಗಳ ಕುರಿತು ಡಾ. ವಸು ಮಳಲಿಯವರು ಮಾತನಾಡುತ್ತಿದ್ದರು. ಅವರ ಮಾತಿನಲ್ಲಿ ಪ್ರಸ್ಥಾಪಗೊಂಡ ಒಂದೆರಡು ವಿಚಾರಗಳನ್ನು ನನ್ನದೇ ಗ್ರಹಿಕೆಯ ನೆಲೆಯಲ್ಲಿ ಫೋರ್ಸ್ ಎನ್ನುವಂತೆ ಬಳಸಿಕೊಳ್ಳುತ್ತ, ಅವರ ವಿಚಾರಗಳಲ್ಲಿ ದಕ್ಕಿದ ಒಂದು ಒಳನೋಟವನ್ನು ಲೇಖನದುದ್ದಕ್ಕೂ ಬಳಸಿಕೊಳ್ಳುತ್ತ ಕೆಲವು ಸಂಗತಿಗಳನ್ನು ಮಂಡಿಸಲು ಯತ್ನಿಸುತ್ತೇನೆ.

ಹೆಣ್ಣಿಗೆ ಸಾಮಾಜಿಕ ಬದುಕಿನ ಎಲ್ಲ ವಲಯಗಳಲ್ಲಿ ತನ್ನದೆನ್ನುವ ನಿಶ್ಚಿತವಾದ ಸ್ಪೇಸ್ ಇಲ್ಲ. ಆದ್ದರಿಂದ ಒಂದರ್ಥದಲ್ಲಿ ತನ್ನ ಜಗತ್ತಿನಲ್ಲಿ ತಾನೇ ಅನ್ಯಳಾಗಿರುವ ಸ್ಥಿತಿ ಅವಳದು. ಇದು ಹೆಣ್ಣಿಗೆ ಜಗತ್ತಿನಾದ್ಯಂತ ತೀರಾ ಸಾಮಾನ್ಯ ಎನ್ನಬಹುದಾದ ಸ್ಥಿತಿ. ಆದರೂ ತನ್ನ ಐಡೆಂಟಿಟಿಗಳನ್ನು ಉಳಿಸಿಕೊಳ್ಳುವ, ತನ್ನನ್ನು ತುಳಿಯುವ ಶಕ್ತಿಗಳ ಎದುರು ವಿರೋಧಗಳನ್ನು ದಾಖಲಿಸುವ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಬೇರೆ ಬೇರೆ ಕಾಲ, ದೇಶ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳಲ್ಲಿ ಹೆಣ್ಣು ಮಾಡುತ್ತ ಬಂದಿದ್ದಾಳೆ. ಹೆಣ್ಣು ಹೀಗೆ ತನ್ನ ಇರುವಿಕೆಯನ್ನು ಗುರುತಿಸಿಕೊಳ್ಳಲು ಹಾಗೂ ದಾಖಲಿಸಲು ಆರಿಸಿಕೊಳ್ಳುವ ಕೆಲವು ದಾರಿಗಳಾದ ರಾಜಕೀಯ, ಕಾನೂನು ಹಾಗೂ ಸಾಮಾಜಿಕ ಸಂಘಟನಾ ನೆಲೆಗಳು ನಮಗೆ ಪರಿಚಿತ. ಇವುಗಳೊಂದಿಗೆ ಕೆಲವು ಅಪರೂಪದ ದಾರಿಗಳಲ್ಲಿ ಕೂಡ ಹೆಣ್ಣು ತನ್ನ ಚೈತನ್ಯದ ಹಾಜರಿಯನ್ನು ದಾಖಲಿಸುತ್ತಿರುತ್ತಾಳೆ.
ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ರಂಗೋಲಿ ಪರಂಪರೆ ಇದೆ. ಇಂಡಿಯಾದ ಹಳ್ಳಿಗಳಲ್ಲಿ ಮನೆಯ ಎದುರು ಹೆಣ್ಣು ಮಕ್ಕಳು ರಂಗೋಲಿ ಬಿಡಿಸಿರುವ ದೃಶ್ಯವನ್ನು ಸಾಮಾನ್ಯವಾಗಿ ಈಗಲೂ ಕಾಣಬಹುದು. ಹೆಣ್ಣು ಹೀಗೆ ತನ್ನ ಮನೆಯ ಮುಂದೆ ಬಿಡಿಸುವ ರಂಗೋಲಿ ಅವಳ ಮಾಮೂಲಿಯಾದ, ಕೇವಲದ ದೈನಿಕವಲ್ಲ ಅಥವಾ ಅದೊಂದು ಧಾಮರ್ಿಕ ನಂಬಿಕೆ ಅಥವಾ ಆಚರಣೆಯ ಭಾಗ ಕೂಡ ಅಲ್ಲ. ಆದರೆ ಅದಕ್ಕೆ ಹೆಣ್ಣಿನ ನೆಲೆಯಿಂದ ಹಲವು ಆಯಾಮಗಳಿವೆ. ಅಂದರೆ, ಹೆಣ್ಣು ಮಗಳೊಬ್ಬಳು ತನಗೆ ಸುಲಭ ಲಭ್ಯವಿರುವ ರಂಗೋಲಿ ಪುಡಿಯಲ್ಲಿ ಮನೆಯ ಮುಂದೆ ಚಿತ್ರ ಬಿಡಿಸುತ್ತ ಅದರಲ್ಲಿ ತಾನೂ ಬಿಚ್ಚಿಕೊಳ್ಳುತ್ತ ಅರಳಿಕೊಳ್ಳುತ್ತ ಘಮಿಸುತ್ತ ತನ್ನ ವ್ಯಕ್ತಿತ್ವಕ್ಕೆ ಹೊಸ ಚೈತನ್ಯವನ್ನು ಧಾರಣ ಮಾಡಿಕೊಳ್ಳಲು ಪ್ರಯತ್ನಿಸುತ್ತಿರಬಹುದು ಅಥವಾ ಬರಿಯ ಗಂಡು ಪಾತ್ರಗಳೇ ವಿಜೃಂಭಿಸುವ ಮನೆಯೊಳಗಿನ ರಂಗದಲ್ಲಿ ಹೇಳಲಾಗದ ಸಂತೋಷ, ಕೋಪ ಮತ್ತು ಅಸಹನೆಗಳನ್ನು ರಂಗೋಲಿಯಲ್ಲಿ ಬಿಚ್ಚಿಡುತ್ತಿರಬಹುದು ಅಥವಾ ಎಂದೋ ಸಂದುಹೋಗಿರುವ ಅಸಂಖ್ಯ ಹಿರೀಕ ಹೆಣ್ಣುಮಕ್ಕಳ ದುರಂತ ಕಥನಗಳನ್ನು ರಂಗೋಲಿಯ ಗೆರೆಗಳಲ್ಲಿ ಚಿತ್ರಿಸುತ್ತಿರಬಹುದು ಅಥವಾ ಆ ಅಸಂಖ್ಯ ಹೆಣ್ಣು ಮಕ್ಕಳ ಹೂತುಹೋದ ಕನಸುಗಳ ಉತ್ಖನನಕ್ಕಾಗಿ ಮಾಡಿಕೊಳ್ಳುತ್ತಿರುವ ಗುರುತುಗಳೋ ರೇಖಾ ಚಿತ್ರಗಳೋ ಅವಾಗಿರಬಹುದು ಅಥವಾ ತನ್ನ ಸುತ್ತಲ ಅನಂತ ಸಾಧ್ಯತೆಗಳ ಲೋಕದ ಜೊತೆಗೆ ಬಯಲಾಗುವ ಅವಳ ಅಭಿಲಾಶೆಯೂ ಅದಾಗಿರಬಹುದು. ಹೀಗೆ ರಂಗೋಲಿಯೆನ್ನುವ ಒಂದು ಕ್ರಿಯೆಯಲ್ಲಿ ಹೆಣ್ಣಿನ ಮನೋಲೋಕದ ಹಲವು ಮುಖಗಳು ಅನಾವರಣಗೊಳ್ಳುತ್ತ ಹೋಗಬಹುದು.

ಇಂಡಿಯಾದಂತಹ ದೇಶದಲ್ಲಿ ಹೆಣ್ಣು ಮಕ್ಕಳು ಹೀಗೆ ತಮ್ಮೊಳಗಿನ ಭಾವಗಳನ್ನು ಹೇಳಿಕೊಳ್ಳುವ, ತಮ್ಮನ್ನೇ ಕೇಳಿಕೊಳ್ಳುವ, ಹಗುರಗೊಳ್ಳುವ, ಮತ್ತೆ ಮತ್ತೆ ಬಂದು ಅಪ್ಪಿಕೊಳ್ಳುವ ಕನಸುಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಅತ್ಯಂತ ಪ್ರಶಸ್ತವಾದ ಕಾಲವಾಗಿ ರಂಗೋಲಿಯ ಹೊತ್ತನ್ನೂ, ಪ್ರಶಸ್ತವಾದ ನೆಲೆಯನ್ನಾಗಿ ಮನೆಯ ಪುಟ್ಟ ಅಂಗಳವನ್ನೂ ಬಳಸಿಕೊಳ್ಳುತ್ತಾರೆ. ಅದರಿಂದ ಮನೆಯ ಹೊರಗೆ ತಮ್ಮದೆನ್ನುವ ಪರ್ಯಾಯ ಸ್ಪೇಸ್ಗಳನ್ನು ಕಂಡುಕೊಳ್ಳುತ್ತಾರೆ ಎನ್ನಿಸುತ್ತದೆ. ಆ ಸ್ಪೇಸಿನ ಬಗೆಗೆ ಅವಳಿಗಿರುವ ಅಟ್ಯಾಚ್ಮೆಂಟ್ ಎಂತದ್ದೆಂದರೆ, ಮನೆಯ ಮುಂದೆ ತಾನು ಬಿಡಿಸಿದ ರಂಗೋಲಿ ಯಾರದೋ ಕಾಲಿನ ತುಳಿತಕ್ಕೆ ಅಳಿಸಿಹೋದರೆ ಮೊದಲಿನಷ್ಟೇ ಪ್ರೀತಿ, ಸಹನೆ ಮತ್ತು ತನ್ಮಯತೆಯಿಂದ ಮತ್ತೊಂದು ರಂಗೋಲಿಯನ್ನು ಬಿಡಿಸುತ್ತಾಳೆ. ಆ ಮೂಲಕ ಅಪಾರ ಜೀವನ್ಮುಖತೆಯನ್ನೂ ಹಾಗೂ ತನ್ನದೆನ್ನುವ ಜಾಗವನ್ನು ತನ್ನಿಚ್ಚೆಯ ರೂಪದಲ್ಲಿಯೇ ಉಳಿಸಿಕೊಳ್ಳಬೇಕೆನ್ನುವ ಸಂಕಲ್ಪವನ್ನೂ ಅದ್ಭುತವಾಗಿ ಮಂಡಿಸುತ್ತಾಳೆ.
ವಜರ್ೀನಿಯಾ ವುಲ್ಫ್ ತನ್ನ ‘ಂ ಖಠಠಟ ಔಜಿ ಔಟಿಜ’ ಔತಿಟಿ’ ಎನ್ನುವ ಪ್ರಸಿದ್ಧ ಸ್ತ್ರೀವಾದಿ ಪ್ರಬಂಧದಲ್ಲಿ ‘ಒಬ್ಬಳು ಹೆಣ್ಣು ಉತ್ತಮ ಸಾಹಿತ್ಯವನ್ನು ರಚಿಸಬೇಕಾದರೆ ಅವಳಿಗೆ ತನ್ನದೇ ಆದ ಕೊಠಡಿ ಅಥವಾ ಸ್ವತಂತ್ರ ಸ್ಥಳ ಮತ್ತು ಸ್ವಂತ ಆದಾಯಗಳಿರಬೇಕು’ ಎನ್ನುತ್ತಾರೆ. ವಜರ್ೀನಿಯಾ ವುಲ್ಫ್ರ ಈ ತಾತ್ವಿಕತೆ ಆಧುನಿಕ ಸ್ತ್ರೀವಾದದ ಕೇಂದ್ರ ರೂಪಕದಂತಿದೆ. ಬಹುಶಃ ತನ್ನದೇ ಆದ ಕೊಠಡಿ ಹಾಗೂ ಸ್ವಂತ ಆದಾಯ ಹೆಣ್ಣಿಗೆ ಇನ್ನೂ ದೂರದ ಮಾತೇ ಆಗಿದ್ದರೂ ಸ್ವತಂತ್ರ ಸ್ಥಳವನ್ನು ಹೊಂದುವ ಬಯಕೆ ಅಥವಾ ಇಚ್ಚೆ ನೂರಾರು ವರ್ಷಗಳಿಂದ ಭಾರತೀಯ ಹೆಣ್ಣು ಮಕ್ಕಳಲ್ಲಿ ರಂಗೋಲಿ ಬಿಡಿಸುವ ಅಂಗಳದ ರೂಪದಲ್ಲಿ ಸಾಕಾರಗೊಳ್ಳುವುದು ಒಂದು ವಿಶಿಷ್ಟ ವಿದ್ಯಮಾನ. ಹಾಗಾಗಿಯೇ ಇಂಡಿಯಾದ ಹೆಣ್ಣಿನ ಕನಸು, ಅಸ್ತಿತ್ವದ ಹುಡುಕಾಟ, ಎದುರಾಗುವ ನಿರಾಸೆ ಹಾಗೂ ವ್ಯವಸ್ಥೆಯು ಅವಳ ಮುಂದಿಡುತ್ತಿರುವ ನೀತಿಗಳೆದುರು ಅವಳು ತೋರುತ್ತಿರುವ ಮೌನ ಪ್ರತಿರೋಧವೆಂದು ಕೂಡ ರಂಗೋಲಿಗಳನ್ನು ಕಾಣಲು ಸಾಧ್ಯವಿದೆ.

ಹೆಣ್ಣಿನ ಅಭಿವ್ಯಕ್ತಿಯ ಕ್ಯಾನ್ವಾಸುಗಳ ಸಾಲಿಗೆ ಅವಳ ದೇಹ ಕೂಡ ಸೇರಿರುವುದು ವಿಶೇಷ. ಬಟ್ಟೆ, ಒಡವೆ, ಮೆಹಂದಿ, ಉಗುರಿನ ಪಾಲಿಷ್, ಹಚ್ಚೆ ಮುಂತಾದ ವಸ್ತು ಮತ್ತು ಪ್ರಸಾಧನಗಳಿಂದ ತನ್ನನ್ನು ಅಲಂಕರಿಸಿಕೊಳ್ಳುವ ಹೆಣ್ಣು ತನ್ನ ಮುಖ ಹಾಗೂ ಶರೀರವನ್ನೇ ಮಾಧ್ಯಮವಾಗಿಸಿಕೊಳ್ಳುವ, ಅದನ್ನೇ ತನ್ನ ವ್ಯಕ್ತಿತ್ವದ ಅಭಿವ್ಯಕ್ತಿಯ ವೇದಿಕೆ ಮಾಡಿಕೊಳ್ಳುವ, ಅದನ್ನೇ ತನ್ನ ಸೌಂದರ್ಯಾಭಿವ್ಯಕ್ತಿಯ ಕ್ಯಾನ್ವಾಸ್ ಮಾಡಿಕೊಳ್ಳುವ ಕ್ರಮ ಮಾತ್ರ ಅನನ್ಯವಾದುದು. ತನಗೆ ಈ ದೊಡ್ಡ ಜಗತ್ತಿನಲ್ಲಿ ತೋರಿದ ನಿರಾಕರಣೆಗಳು ಹಾಗೂ ವಿಧಿಸಿದ ಕಟ್ಟಳೆಗಳ ಎದುರು ಅವಳು ಕಟ್ಟಿಕೊಳ್ಳುವ ಇಂತಹ ಸ್ವ-ದೇಹ ಕೇಂದ್ರಿತ ಪರ್ಯಾಯಗಳು ನಿಜವಾಗಿಯೂ ಅದ್ಭುತವಾದುದು. ರಂಗೋಲಿಯಲ್ಲಿ ಭೂಮಿ ಅವಳ ಕ್ಯಾನ್ವಾಸ್ ಆಗುತ್ತಿದ್ದರೆ, ಇಲ್ಲಿ ಅವಳ ದೇಹವೇ ಅವಳ ಕ್ಯಾನ್ವಾಸ್ ಆಗುತ್ತಿದೆ. ದೇಹವನ್ನು ದೇಗುಲವಾಗಿಸುವ ಬಸವಣ್ಣನಿಗಿಂತ ದೇಹವನ್ನು ಕ್ಯಾನ್ವಾಸ್ ಮಾಡಿಕೊಳ್ಳುವ ಹೆಣ್ಣಿನ ಇಂತಹ ಪರಿಕಲ್ಪನೆ ತುಂಬ ವಿಶಿಷ್ಟವಾದುದು. ಹೆಣ್ಣಿನ ಸ್ವ-ದೇಹ ಕೇಂದ್ರಿತ ಕ್ಯಾನ್ವಾಸಿನ ಪರಿಕಲ್ಪನೆ ಅಥವಾ ಅವಳು ತನ್ನನ್ನು ಅಲಂಕರಿಸಿಕೊಳ್ಳುವ ಕ್ರಿಯೆಯು ಬಹುತೇಕ ಅವಳ ಖಾಸಗಿ ಬದುಕು ಹಾಗೂ ಸಂತೋಷಕ್ಕೆ ಸಂಬಂಧಿಸಿದ್ದು. ಆದರೆ ಹೆಣ್ಣಿನ ಬದುಕಿನ ತೀರ ಸರಳವೆನ್ನುವ ಇಂತಹ ಕ್ರಿಯೆಗಳಲ್ಲಿ ಇರುವ ವಿಶಿಷ್ಟತೆ ಹಾಗೂ ಅದು ಎಲ್ಲ ಹೆಣ್ಣುಗಳ ಬದುಕಿನ ಕಥನವಾಗಿ ಹರಡಿಕೊಳ್ಳುವ ಬಗೆ ಮಾತ್ರ ಬೆರಗಾಗಿಸುತ್ತದೆ.
ಮೊದಲಿನಿಂದಲೂ ಗ್ರಾಮೀಣ ಮತ್ತು ಪೇಟೆಯ ಹೆಣ್ಣುಮಕ್ಕಳಿಗೆ ಹಲವು ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಅಭಿವ್ಯಕ್ತಿಯ ಮಾಧ್ಯಮಗಳಿದ್ದವು. ಆದರೆ ಇಪ್ಪತ್ತನೇ ಶತಮಾನದ ಪೂವರ್ಾರ್ಧದ ತನಕ ಅವರು ತಮ್ಮ ಅಭಿವ್ಯಕ್ತಿಗಾಗಿ ಅವಲಂಬಿಸುತ್ತಿದ್ದುದು ಅಲಂಕಾರ, ರಂಗೋಲಿ, ಚಿತ್ರಕಲೆ, ಹಾಡು ಹಸೆ, ಬಟ್ಟೆಯ ಕುಸುರಿ ಕೆಲಸಗಳು ಹಾಗೂ ಒಂದಿಷ್ಟು ಗೊಂಬೆ ತಯಾರಿ ಇತ್ಯಾದಿಗಳನ್ನು ಮಾತ್ರ. ಕೆಲವರು ಸಿನಿಮಾ ಮತ್ತು ನಾಟಕದಂತಹ ಕಲಾ ಪ್ರಕಾರಗಳಲ್ಲಿ ತೊಡಗಿಕೊಂಡಿದ್ದರು. ಇನ್ನು ಕೆಲವರು ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು. ಹೆಣ್ಣು ತನ್ನ ದೇಹವನ್ನು ಕೂಡ ಮಾಧ್ಯಮವಾಗಿ ಬಳಸಬೇಕಾದ ಸಿನಿಮಾ ಮತ್ತು ನಾಟಕದಂತಹ ಕಲಾಪ್ರಕಾರಗಳು ಮನೆಯೊಳಗಿನ ಅಲಂಕಾರದಂತೆ ತೀರಾ ಖಾಸಗಿ ನೆಲೆಯದ್ದಾಗಿರಲಿಲ್ಲ. ಅವು ಸ್ವಲ್ಪ ಮಟ್ಟಿಗೆ ಅವಳು ತನ್ನ ವ್ಯಕ್ತಿತ್ವವನ್ನು ಸಾರ್ವಜನಿಕವಾಗಿ ಒಡ್ಡಿಕೊಳ್ಳಬೇಕಾದ ನೆಲೆಗೆ ಸೇರಿದವುಗಳೂ ಆಗಿದ್ದವು. ಹಾಗಾಗಿ ಆ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಒಂದು ಕಾಲದಲ್ಲಿ ತೀರಾ ಕಡಿಮೆಯಿತ್ತು.
ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ರಚನೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಅವರು ಬರೆದಿದ್ದನ್ನು ಪ್ರಕಟಿಸಲು ಹಾಗೂ ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳಲು ವೇದಿಕೆಗಳು ತುಂಬ ಸೀಮಿತ ಪ್ರಮಾಣದಲ್ಲಿವೆ. ಸಾಂಪ್ರದಾಯಿಕ ನೆಲೆಯ ಅಂತಹ ವೇದಿಕೆಗಳು ಹೆಣ್ಣು ಮಕ್ಕಳ ವಿಚಾರದಲ್ಲಿ ಅಷ್ಟು ಉದಾರವಾಗಿಯೇನೂ ಇಲ್ಲ. ಕನ್ನಡದಲ್ಲಿ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಹಾಗೂ ಅವುಗಳ ವಾಷರ್ಿಕಾಂಕಗಳು, ಹಾಗೆಯೇ ಇತ್ತೀಚೆಗೆ ಚಾಲ್ತಿಗೆ ಬಂದಿರುವ ಅಂತಜರ್ಾಲ ಪತ್ರಿಕೆಗಳು, ಬ್ಲಾಗುಗಳು ಎಲ್ಲ ಸೇರಿದರೆ ಒಂದೆರಡು ನೂರು ಇರಬಹುದು. ಅದರಲ್ಲಿ ಸಾಹಿತ್ಯ ಮತ್ತು ಸಾಹಿತ್ಯ ಸಂಬಂಧಿತ ಬರಹಗಳನ್ನು ಪ್ರಕಟಿಸುವ ಪತ್ರಿಕೆಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇನ್ನುಳಿದ ಪತ್ರಿಕೆಗಳಿಗೆ ಸಾಹಿತ್ಯ ಬರಹ ಎನ್ನುವುದು ಊಟದ ಎಲೆಯೊಳಗಿನ ಹಲವು ಖಾದ್ಯಗಳಲ್ಲಿ ಒಂದು ಅಷ್ಟೆ. ಕೆಲವು ಪತ್ರಿಕೆಗಳು ಅಷ್ಟು ಜಾಗವನ್ನೂ ಸಾಹಿತ್ಯಕ್ಕೆ ಕೊಡುವುದಿಲ್ಲ. ಮೊದಲೆಲ್ಲ ಟಿ.ವಿ.ವಾಹಿನಿಗಳಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಸ್ವಲ್ಪ ಅವಕಾಶವಿತ್ತು. ಆದರೆ ವಾಹಿನಿಗಳೂ ರೋಚಕತೆಯ ಬೆನ್ನತ್ತಿರುವುದರಿಂದ ಅಲ್ಲೂ ಕೂಡ ಈಗ ಸಾಹಿತ್ಯಕ್ಕೆ ಜಾಗವಿಲ್ಲ. ರೇಡಿಯೋ ಮಾಧ್ಯಮದಲ್ಲಿಯೂ ಅವಕಾಶ ಕಡಿಮೆಯಾಗಿದೆ. ಇತ್ತೀಚೆಗೆ ಒಂದೆರಡು ಪತ್ರಿಕೆಗಳು ಅನೇಕ ವರ್ಷಗಳಿಂದ ನಡೆಸುತ್ತಿದ್ದ ಸಾಹಿತ್ಯ ಸ್ಪಧರ್ೆಗಳನ್ನೂ ನಿಲ್ಲಿಸಿವೆ. ಕೆಲವು ಪ್ರಮುಖ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಅವುಗಳ ವಿಶೇಷಾಂಕಗಳಲ್ಲಿ ದಶಕಗಳಿಂದ ಪ್ರತಿ ವರ್ಷವೂ ಕೆಲವು ಬರಹಗಾರರಿಗೆ ಮಾತ್ರ ಆದ್ಯತೆ ಕೊಡುತ್ತವೆ. ಬಹುಶಃ ಎಸ್ಟಾಬ್ಲಿಶ್ ಆಗಿರುವವರ ಬರಹಗಳನ್ನು ಮಾಕರ್ೆಟಿಂಗ್ ಮಾಡುವುದು ಸುಲಭ ಎನ್ನುವ ಲೆಕ್ಕಾಚಾರ ಪತ್ರಿಕೆಗಳಿಗೆ ಇರಬಹುದು. ಹಾಗಾಗಿ ಅಲ್ಲಿ ಹೊಸಬರಿಗೆ ಅವಕಾಶ ತುಂಬ ಕಡಿಮೆ. ಪುಸ್ತಕ ಪ್ರಕಾಶನ ಸಂಸ್ಥೆಗಳು ಸಹಾ ಹೊಸ ಬರಹಗಾರರನ್ನು ದೂರವಿಡುತ್ತವೆ. ಹಾಗಾಗಿ ಅನೇಕರು ತೆರೆಮರೆಯಲ್ಲಿಯೇ ಉಳಿದು ಹೋಗುತ್ತಾರೆ. ಅವರಲ್ಲಿ ಬಹು ಸಂಖ್ಯೆಯ ಹೆಣ್ಣುಮಕ್ಕಳೂ ಇರುತ್ತಾರೆನ್ನುವುದು ಮುಖ್ಯ. ಆದರೆ ಪತ್ರಿಕೆಗಳಿಗೆ ಬರಹದ ಗುಣಮಟ್ಟ, ಪ್ರಸ್ತುತತೆ, ಸೈದ್ಧಾಂತಿಕತೆಗಳ ಕುರಿತು ಕೆಲವು ನಿರೀಕ್ಷೆಗಳು ಇರುತ್ತವೆಯಾದ್ದರಿಂದ, ಹಾಗೆಯೇ ಕೆಲವು ವ್ಯಾವಹಾರಿಕ ಲೆಕ್ಕಾಚಾರಗಳು ಕೂಡ ಇರುತ್ತವೆಯಾದ್ದರಿಂದ ಎಲ್ಲರ ಬರಹಗಳ ಪ್ರಕಟಣೆ ಸಹಜವಾಗಿ ಅವುಗಳಿಗೆ ಕಷ್ಟವಾಗಬಹುದು.
ತೊಂಬತ್ತರ ದಶಕದ ನಂತರ ವಿದ್ಯಾವಂತ ಹೆಣ್ಣು ಮಕ್ಕಳು ಸಾಂಪ್ರದಾಯಿಕ ಅಭಿವ್ಯಕ್ತಿಯ ಸಾಧನಗಳನ್ನು ಸ್ವಲ್ಪ ಬದಿಗಿಟ್ಟು ಮೊಬೈಲ್, ಕಂಪ್ಯೂಟರ್ ಮುಂತಾದ ಆಧುನಿಕ ಸಾಧನಗಳನ್ನು ಬಳಸತೊಡಗಿದ್ದಾರೆ. ಅಂತಹ ಸಂಪರ್ಕ ಸಾಧನಗಳ ಮೂಲಕ ಅವರಿಗೆ ದೊರಕಿದ್ದು ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣ. ಕ್ರಮೇಣ ಫೇಸ್ಬುಕ್ ಅವರಿಗೆ ಒಂದು ಮುಕ್ತ ಆಕಾಶವಾಗಿ ಮಾರ್ಪಟ್ಟಿದೆ. ತಮಗೆ ಅನ್ನಿಸಿದ್ದನ್ನು ತಕ್ಷಣ ಎಲ್ಲರೊಂದಿಗೆ ಹಂಚಿಕೊಳ್ಳುವ ಸ್ವಾತಂತ್ರ್ಯ ಫೇಸ್ಬುಕ್ಕಿನ ಮೂಲಕ ಅವರಿಗೆ ದಕ್ಕಿದೆ. ಹಾಗಾಗಿ ಹಿಂದೆಂದೂ ಕಾಣದಷ್ಟು ದೊಡ್ಡ ಪ್ರಮಾಣದಲ್ಲಿ ಎಲ್ಲ ಬಗೆಯ ಸಾಂಸ್ಕೃತಿಕ ವಿದ್ಯಮಾನಗಳಿಗೆ ಅವರು ತೀವ್ರವಾಗಿ ವಸ್ತುನಿಷ್ಟವಾಗಿ ಸ್ಪಂದಿಸುತ್ತಿದ್ದಾರೆ. ಮುಖ್ಯವಾಗಿ ಬರವಣಿಗೆಯ ಮೂಲಕ ಸಮಾಜದ ಜೊತೆಗೆ ಮುಖಾಮುಖಿಯಾಗಲು ಬಯಸುವವರಿಗೆ ಫೇಸ್ಬುಕ್ ಎನ್ನುವುದು ಯಾರ ಹಂಗೂ ಇಲ್ಲದ, ಯಾರ ಅಪ್ಪಣೆ ಬೇಕಿಲ್ಲದ, ಒಂದು ಇತಿಮಿತಿಯಲ್ಲಿ ಬಹಳಷ್ಟು ಸ್ವಾತಂತ್ರ್ಯವಿರುವ, ಪರಿಚಿತ ಹಾಗೂ ಅಪರಿಚಿತವೆನ್ನುವ ಎರಡೂ ನೆಲೆಗಳಲ್ಲಿ ಸಮಾಜದೊಂದಿಗೆ ಸಂವಹಿಸಲು ಸಾಧ್ಯವಿರುವ ವೇದಿಕೆಯಾಗಿ ಪರಿಣಮಿಸಿದೆ. ಮುಖ್ಯವಾಗಿ ‘ಫೇಸ್ಬುಕ್ ವಾಲ್’ ಎನ್ನುವುದೇ ಒಂದು ಅದ್ಭುತ ಪರಿಕಲ್ಪನೆ. ಅದೊಂದು ಪಬ್ಲಿಕ್ ವಾಲ್, ಬಯಲಿಗೆ ತೆರೆದುಕೊಂಡ ಸಾರ್ವಜನಿಕ ಗೋಡೆ. ಇಷ್ಟು ಕಾಲ ಮಾತನಾಡಲು ಆಗದಿದ್ದ ಹೆಣ್ಣು ಮಕ್ಕಳು ಒಮ್ಮಿಂದೊಮ್ಮೆಲೆ ಸಾರ್ವಜನಿಕ ಗೋಡೆಯ ಮೇಲೆ ಅಥವಾ ಒಂದರ್ಥದಲ್ಲಿ ಬೀದಿಯ ಗೋಡೆಯ ಮೇಲೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದಾರೆ. ಆಧುನಿಕ ಸಮಾಜದ ಫೇಸ್ಬುಕ್ ಎನ್ನುವ ಜಗುಲಿ ಕಟ್ಟೆಯಲ್ಲಿ, ಪಂಚಾಯ್ತಿ ಕಟ್ಟೆಯಲ್ಲಿ, ಚಿಂತನೆಯ ಚಾವಡಿಗಳಲ್ಲಿ ಅವರು ತಮ್ಮ ಹಾಜರಿ ಮತ್ತು ಪ್ರಸ್ತುತತೆಯನ್ನು ಮಂಡಿಸುತ್ತಿದ್ದಾರೆ. ಒಟ್ಟಾರೆ, ಹೆಣ್ಣು ಮಕ್ಕಳ ಪಾಲಿಗೆ ತಮ್ಮ ಸಂತೋಷ, ಸಾಧನೆ, ಆತಂಕ, ಅಭಿಪ್ರಾಯ, ಪ್ರತಿಭಟನೆ ಎಲ್ಲವನ್ನೂ ದಾಖಲಿಸುವ ಹಾಗೂ ಅವುಗಳನ್ನು ಜಗದಗಲ ಬಿತ್ತರಿಸುವಂತಹ ಬೃಹತ್ತಾದ ಕ್ಯಾನ್ವಾಸ್ ಎನ್ನುವಂತೆ ಫೇಸ್ಬುಕ್ಕಿನಂತಹ ಸಾಮಾಜಿಕ ಜಾಲತಾಣಗಳು ಬಳಕೆಯಾಗುತ್ತಿವೆ. ಹೆಣ್ಣುಮಕ್ಕಳ ಅಭಿವ್ಯಕ್ತಿಯ ಜಗತ್ತು ರಂಗೋಲಿಯ ಚುಕ್ಕಿಗಳು ಹಾಗೂ ರೇಖೆಗಳ ಹಂತದಿಂದ ಅನೂಹ್ಯ ರೂಪದ ಫೇಸ್ಬುಕ್ಕಿನ ತನಕ ತಲುಪಿರುವುದನ್ನು ನಾವೆಲ್ಲ ವಿಸ್ಮಯದಿಂದ ನೋಡುತ್ತಿದ್ದೇವೆ.
ಹಾಗಾಗಿ ಪತ್ರಿಕೆಗಳಲ್ಲಿ ಅವಕಾಶ ವಂಚಿತರಾದ ಪ್ರತಿಭೆಗಳ ಅಭಿವ್ಯಕ್ತಿಯ ತಾಣವಾಗಿ ಫೇಸ್ಬುಕ್ಕಿನಂತಹ ಸಾಮಾಜಿಕ ಜಾಲತಾಣಗಳು ನೆರವಾಗುತ್ತಿವೆ. ಮೊದಲೇ ಹೇಳಿದಂತೆ ಹೆಣ್ಣುಮಕ್ಕಳ ಪಾಲಿಗೆ ಅದೊಂದು ಮುಕ್ತ ಆಕಾಶವಾಗಿ ಪರಿಣಮಿಸಿದೆ. ಅಲ್ಲಿ ಸಾಹಿತ್ಯದ, ಅದರಲ್ಲೂ ಕಾವ್ಯದ ಹೊಳೆಯೇ ಹರಿಯುತ್ತಿದೆ. ಸಮಸ್ಯೆಯೆಂದರೆ, ಅಲ್ಲಿ ಸಾಹಿತ್ಯದ ಸೂಕ್ಷ್ಮತೆಗಳ ಅರಿವಿಲ್ಲದವರು ಕೊಡುತ್ತಿರುವ ಲೈಕ್ಗಳ ಪ್ರಭಾವ ಹೆಚ್ಚಾಗುತ್ತಿದೆ. ಇಂತಹ ಲೈಕ್ಗಳ ಸಂಖ್ಯೆ ಮತ್ತು ಅಸೂಕ್ಷ್ಮ ಅಭಿಪ್ರಾಯಗಳನ್ನು ನಂಬುವ ಕೆಲವರಲ್ಲಿ ತಾವು ಈಗಲೇ ಮಹಾನ್ ಲೇಖಕರೆನ್ನುವ, ಮಹಾನ್ ಚಿಂತಕರೆನ್ನುವ ಭ್ರಮೆಗಳೂ ಹೆಚ್ಚಾಗುತ್ತಿದೆ. ಹಾಗೆಯೇ ತಾವು ಯಾವುದರ ಬಗೆಗಾದರೂ ಯಾರ ಬಗೆಗಾದರೂ ಪ್ರತಿಕ್ರಿಯಿಸಬಹುದು ಎನ್ನುವ ಧೋರಣೆ ಕೂಡ ಬೆಳೆಯುತ್ತಿದೆ.
ಹಾಗೆಂದು ಫೇಸ್ಬುಕ್ಕಿನಲ್ಲಿ ತೊಡಗಿಕೊಂಡ ಎಲ್ಲ ಬರಹಗಾರರಲ್ಲಿ ಬೌದ್ಧಿಕ ಅಸೂಕ್ಷ್ಮತೆ ಇದೆಯೆಂದು ಸಾರಾಸಗಟಾಗಿ ನಿರ್ಲಕ್ಷಿಸಿ ಮಾತನಾಡುವಂತಿಲ್ಲ. ಯಾಕೆಂದರೆ, ಅಲ್ಲಿ ಪ್ರತಿಭಾವಂತರು ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಫೇಸ್ಬುಕ್ಕನ್ನು ಒಂದು ಸೃಜನಶೀಲ ಕ್ಯಾನ್ವಾಸ್ ಮಾಡಿಕೊಂಡಿರುವ ಹಲವು ಹೆಣ್ಣು ಮಕ್ಕಳು ಕೂಡ ಅಲ್ಲಿದ್ದಾರೆ. ಅವರಿಗೊಂದು ಸಮರ್ಪಕ ವೇದಿಕೆ ಕಲ್ಪಿಸುವ, ನಿಜದ ನೆಲೆಯಲ್ಲಿ ಅವರ ಬರಹದ ಸಾಧ್ಯತೆಗಳನ್ನು ವಿಸ್ತರಿಸಲು ನೆರವಾಗುವ, ಅವರ ಅಭಿವ್ಯಕ್ತಿಯ ಕ್ಯಾನ್ವಾಸ್ಗಳಿಗೆ ಉತ್ತೇಜನದ ಬಣ್ಣವನ್ನೂ ತುಂಬುವ ಕೆಲಸವನ್ನು ಮಾಡಬೇಕಾಗಿದೆ. ಅದು ಇವತ್ತಿನ ಬಹು ಮುಖ್ಯ ಸಾಮಾಜಿಕ ಅಗತ್ಯವೂ ಹೌದು.
ಹೊಸ ಬರಹಗಾರರನ್ನು, ಫೇಸ್ಬುಕ್ಕಿನಲ್ಲಿ ಗುರುತಿಸಿಕೊಂಡ ಕವಯಿತ್ರಿಯರನ್ನು ಪ್ರೋತ್ಸಾಹಿಸುವ ಇಂತಹ ಪ್ರಯತ್ನಗಳನ್ನು ಕಾಜಾಣದಂತಹ ಸಂಸ್ಥೆ ಮಾಡುತ್ತಿದೆ. ಕಾಜಾಣ ಸಂಸ್ಥೆಯ ಇಂತಹ ಪ್ರಯತ್ನವು ಪ್ರತಿಭಾವಂತ ಯುವ ಕವಿಗಳ ಉದಯಕ್ಕೂ ಕಾರಣ ಆಗುತ್ತಿದೆ. ಅದು ಇತ್ತೀಚೆಗೆ ನಡೆಸಿದ ಮಹಿಳಾ ಕಾವ್ಯ ಗೋಷ್ಟಿ ಆ ದಿಸೆಯಲ್ಲಿ ಒಂದು ಗಮನಾರ್ಹ ಪ್ರಯತ್ನ ಎನ್ನಬಹುದು.
 

‍ಲೇಖಕರು G

16 September, 2014

2 Comments

  1. ashadeepa

    Tumbu hrudayada dhanyavadagalu sir
    Hennina stanavanu bhavanegalnu changi helidira

  2. Anonymous

    VASSU MAALALI YAVARA MAATHU KELI NANNA KAVANA OODHUVAAGA AM CRYING AAGA KUSUMA BAALE , SHAMMI MAHI , ASHADEEPA YAVARU YESTU ENCOURAGE KOTTU HEMA PATTANA SHETTY MADAM & BELUR SIR DAIYRAA HELI NEW KAVIGALIGE ENCOURAGE KOODUTHIRUVA BELUR SIR AVARA KAAJANA GROUP & AAVADI MAGINE NA YELLARIGU & E LEKANAVAANNU BAAREDHA AMARENDRA SIR AVARIGAE DHANAYAVAADHGALU

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading