-ಡಾ ಲಕ್ಷ್ಮಿಕಾಂತ ಮಿರಜಕರ
ಗಜಲ್
ಬಡತನದಲ್ಲಿ ಬೆಂದು ಬಸವಳಿದಿದ್ದರೂ ಸಹನೀಯವಾಗಿದೆ ಈ ರಾತ್ರಿ
ಕಹಿ ನೆನಪುಗಳು ಕಾಡಿ ಕೊಲ್ಲುತ್ತಿದ್ದರೂ ಸಹನೀಯವಾಗಿದೆ ಈ ರಾತ್ರಿ
ಅಸಂಖ್ಯಾತ ನಕ್ಷತ್ರಗಳ ಹೊತ್ತ ನೀಲಿಆಕಾಶ,ನಡುವೆ ತುಂಬುಚಂದಿರ
ಒಂಟಿತನವು ಬೆನ್ನಟ್ಟಿ ಕಾಡುತ್ತಿದ್ದರೂ ಸಹನೀಯವಾಗಿದೆ ಈ ರಾತ್ರಿ
ಇಬ್ಬನಿ ತುಂಬಿದ ಬಯಲ ಅಂಗಳದಲ್ಲಿ ಕನಸುಗಳ ಕನವರಿಕೆ
ದುಃಖದ ಸಾಗರದಲ್ಲಿ ಈಜುತ್ತಿದ್ದರೂ ಸಹನೀಯವಾಗಿದೆ ಈ ರಾತ್ರಿ
ಮಗಳೆಂಬ ಮುಗಿಲ ಸುಖದ ಸ್ಪರ್ಷ ಅವಳು ಕೆನ್ನೆಗಿತ್ತ ಹೂಮುತ್ತು
ನಿರಾಸೆಗಳ ಮಡುವಲ್ಲಿ ಬಿದ್ದಿದ್ದರೂ ಸಹನೀಯವಾಗಿದೆ ಈ ರಾತ್ರಿ
ಇರುಳು ಅರಳುವ ಹೂವಿನ ಗಂಧ ಜೊತೆಯಲ್ಲಿ ಕವಿತೆಯ ಓದು
ವಿಷಾದವೇ ತುಂಬಿ ತುಳುಕುತ್ತಿದ್ದರೂ ಸಹನೀಯವಾಗಿದೆ ಈ ರಾತ್ರಿ
ತಲೆಗೂದಲು ನೇವರಿಸಿ “ಕಾಂತ”ನ ಮನದನ್ನೆ ನೀಡಿದ ಮಡಿಲ ಸಾಂತ್ವನ
ಸೋಲಿನ ಸರಪಳಿಯಲ್ಲಿ ಸಿಲುಕಿದ್ದರೂ ಸಹನೀಯವಾಗಿದೆ ಈ ರಾತ್ರಿ






0 Comments