ಕವಿತೆಗಳನ್ನು ರೆಕ್ಕೆ ಕಟ್ಟಿ ಹಾರಿಬಿಡಿ..

11032471_1078688975491753_4923347466128436409_n

ಪ್ರವರ ಕೊಟ್ಟೂರು

1ಜೈಲಿನೊಳಗೆ
ಮೂಲೆ ಹಿಡಿದ ಕವಿ,

ಎಂಟು ಅಡಿ ಮೇಲಿನ ಕಿಟಕಿಯ
ತುಕ್ಕು ಹಿಡಿದ ಸರಳುಗಳ
ಎದೆ ಸೀಳಿ ಬೆಳಕು
ಕವಿಯ ಎದುರು ಮುಖ ಹರಡಿ
ಚಕ್ಕಳಮುಕ್ಕಳ ಹಾಕಿ ಕೂತಿದೆ

ಕವಿ ಗಡ್ಡ ಬಿಟ್ಟಿದ್ದಾನೆ,
ಅವನ ವಯಸ್ಸಿಗೆ ಅವು ನೋಟೀಸು ಬೋರ್ಡು,
ಸುಕ್ಕು ಹಣೆಯಿಂದ ಬೇರು ಇಳಿಸಿ
ಕೆನ್ನೆ ಕಣ್ಣು ಗಲ್ಲ ಕುತ್ತಿಗೆ
ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುತ್ತಿದೆ,

ಜೋಲುಮುಖವೆಂದರೆ ಕತ್ತಲಿಗೆ ಗಾಢ ಪ್ರೀತಿ,
ಅವನ ಮುಖವನ್ನು ಬಿಟ್ಟು ಕದಲಿದ್ದು
ಕಡಿಮೆಯೇ.
ಚರ್ಮ ದಾಟಿ ಹೊರ ಬರಲು
ನರಗಳೆಲ್ಲ ಯತ್ನಿಸುತ್ತಲೇ ಇವೆ,
ರಕ್ತ ದೇಹದುದ್ದಗಲಕ್ಕೂ ಆಗಾಗ ಗಸ್ತು ಹೊಡೆಯುತ್ತದೆ,
ಎದೆ ಯಥಾವತ್ತು ಬಡಿದುಕೊಳ್ಳುತ್ತದೆ,
ಅವನು ಎದೆ ಮೇಲೆ ಕೈ ಇಟ್ಟು ಕುಳಿತಿರುವಾಗ
ಜೈಲರ್, ಒಮ್ಮೆ ಕಂಬಿಗಳನ್ನು ವೀಣೆ ತಂತಿಗಳಂತೆ
ಮೀಟುತ್ತಾನೆ,

ಕಣ್ಣು ತೆರೆದನೋ
ಬೂಟುಗಾಲು ಮುಂದಕ್ಕೆ ಚಲಿಸಿ
ಸದ್ದು ಗೌಣವಾಗುತ್ತದೆ

ತಟ್ಟೆಯ ಅನ್ನದ ಮೇಲೆ
ಪ್ರಶ್ನೆಗಳನ್ನು
ಕವಡೆಗಳಂತೆ ಕುಲುಕಿ ಎಸೆದ ಬೆಳಕಿನೊಳಗಿಂದ
ರೆಕ್ಕೆ ಬಡಿದುಕೊಂಡು ಬಂದ ನೊಣ
ಪ್ರಶ್ನೆಗಳನ್ನು ಒಂದೊಂದಾಗಿ ತಿಂದು
ಅನ್ನ ಮಿಕ್ಕಿತು

ಕವಿ ಜೈಲಿನೊಳಗಿದ್ದಾನೆಂದ ಮೇಲೆ
ಕವಿತೆಗಳು?
ಬೇಕಾದಲ್ಲಿ ಕವಿಗೆ ಬಾಸುಂಡೆ ಬರುವ ಹಾಗೆ ಚಾಟಿ ಬೀಸಲಿ,
ನೇಣಿಗೆ ಹಾಕಲಿ
ಅಳುವವರೂ ಇಲ್ಲ,
ಪಾಪ ಕವಿತೆಗಳದ್ದೇನು ಕರ್ಮ!
ಬೆಳಕು ಗೊಣಗಿತು

ಬಣ್ಣ ಮಾಸಿದ ಗೋಡೆಗಳ ಮೇಲೆ2
ಹುಚ್ಚನಂತೆ ಬರೆಯಲಿಕ್ಕೆ ಶುರುವಿಡುತ್ತಾನೆ
ಹೆಸರಿಲ್ಲದ ಚಿನ್ಹೆಗಳಿಲ್ಲದ ಕವಿತೆಗಳು
ಚೂರು ಜಾಗ ಮಿಕ್ಕದಂತೆ
ನಾಲ್ಕೂ ಗೋಡೆಗಳು ಗಾಜಿನ ಕನ್ನಡಿಯಾದವು
ಕವಿತೆಯೋ ಕವಿಯೋ
ಕವಿಯೋ ಕವಿತೆಯೋ

ಬೆಳಕು ಕಣ್ಣು ಉಜ್ಜಿಕೊಂಡು
ಗಟ್ಟಿಯಾಗಿ ತಬ್ಬಿಕೊಂಡಿತು
ಕವಿ ತೋಳು ಬಿಡಿಸಿ ಮೂಲೆಯಲ್ಲಿ ಕುಂತುಬಿಟ್ಟ

ನಾಳೆ ಗಲ್ಲು!
ಸಾಯುವುದು ಕವಿಗೆ ಹೊಸತಲ್ಲ
ಅವನು ಕವಿತೆಗಳ ಹಡೆದು, ಅದೆಷ್ಟು ಸಾವಿರ ಸಲ ಸತ್ತಿದ್ದಾನೋ
ಬಿಡಿ, ನಾಳೆಯೂ ಒಮ್ಮೆ ಸತ್ತುಬಿಡಲಿ..

ಇಬ್ಬರು,
ಹೂ.. ಇವರು ಪೊಲೀಸರು
ಅವರು ಸದ್ದನ್ನು ಇಡೀ ಜೈಲಿನ ತುಂಬ ತುಂಬುತ್ತಾ
ಬರುತ್ತಿದ್ದಾರೆ,
ಮೂಲೆ ಹಿಡಿದ ಕವಿಯನ್ನೊಮ್ಮೆ ಇಣುಕಿ ನೋಡುತ್ತಾರೆ
ಬದುಕಿದ್ದು ಖಾತ್ರಿಯಾಯ್ತು,
ಕವಿಯ ಮುಂದೆ ನಿಂತಿದ್ದಾರೆ ನೆಟ್ಟಗೆ
ಮಡಿಚಿದ ಕಾಲುಗಳ ನಡುವಿದ್ದ ಮುಖವನ್ನೆತ್ತಿ
ಕವಿ ಅವರನ್ನು ನೋಡುತ್ತಾನೆ,
ಶೂನ್ಯ ನೋಟಕ್ಕೆ ದುಃಖ ಉಮ್ಮಳಿಸಿ ಬರಲಾರದು

ಕಾಲಿಗೆ ಕೈಯಿಗೆ ಕುತ್ತಿಗೆಗೆ
ಕಬ್ಬಿಣದ ಸರಪಳಿ
ಕವಿ ತನ್ನನ್ನೇ ತಾನು ಬಂಧಿಸಿಕೊಂಡು ಅದೆಷ್ಟೋ ವರ್ಷಗಳಾದವು
ಇವರು ಖೈದಿಯ ದೇಹವನ್ನು ಬಂಧಿಸಬೇಕಾದ್ದು ಕಾನೂನು
ಮಾಡಿಕೊಳ್ಳಲಿ

ಚೌಕಟ್ಟಿನ ನಡುವೆ
ಹಗ್ಗದ ಕುಣಿಕೆ
ಕಾಯುವಿಕೆ ಅದಕ್ಕೆ ಹಿಡಿಸುವುದಿಲ್ಲ,
ಕವಿಗೆ ಅದೂ ಅರ್ಥವಾಯಿತು

ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಲು ಬಂದ
ಧಡೂತಿ ಮನುಷ್ಯನನ್ನು
ಹಾಕದಂತೆ ಹೇಳುತ್ತಾನೆ

ಕೊನೇ ಪ್ರಾರ್ಥನೆ?
ಒಣಗಿದ ಗಂಟಲನ್ನು ಹಾವಿನ ಮೈ ಮಾಡಿಕೊಂಡು
“ಕವಿತೆಗಳನ್ನು ರೆಕ್ಕೆ ಕಟ್ಟಿ ಹಾರಿಬಿಡಿ”

ಕುಣಿಕೆ ನೋವಿನ ಸಣ್ಣ ಸದ್ದಿನ ಒದ್ದಾಟದೊಂದಿಗೆ ಖಾಲಿಯಾಗುತ್ತದೆ

‍ಲೇಖಕರು admin

October 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: