ಕವಿಗೆ ಖರ್ಚುಗಳಿರುತ್ತವೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ಯನ್ನು ‘ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ‘ವಿಜಯ ಕರ್ನಾಟಕ’ದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ 

ಇನ್ನು ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

“No tears in the writer, no tears in the reader. No surprise in the writer, no surprise in the reader ” 
– Robert Frost  

              
ಕವಿಯೊಬ್ಬ ಕಮರ್ಷಿಯಲ್ ಬ್ಯಾಂಕ್ ಒಂದಕ್ಕೆ ಸಾಲ ಕೇಳಲು ಬಂದಾಗ ಮ್ಯಾನೇಜರ್ ಮತ್ತು ಕವಿಯ ನಡುವೆ ಹೀಗೊಂದು ಸಂಭಾಷಣೆ ನಡೆಯಿತು.

‘ಏನ್ ಕೆಲಸ ಮಾಡ್ತೀರಿ?’ 

‘ಕಾವ್ಯ ಸೃಷ್ಟಿ ಮಾಡ್ತೀನಿ’ 

‘ಓಹ್, ಪೊಯಟ್ರಿ ಕ್ರಿಯೇಷನ್’ 

‘ಹೌದು’

‘ಈಗೇನು ಪ್ರಾಪರ್ಟಿ ಕ್ರಿಯೇಷನ್ ಗೆ ಮನಸು ಮಾಡಿ ಬ್ಯಾಂಕ್ ಕಡೆ ಬಂದ್ರಾ?’ 

‘ನಾನೊಬ್ಬ ಕವಿ ಸರ್. ಕವನಗಳನ್ನ ಬರೀತೀನಿ’ 

‘ಒಳ್ಳೆಯದು. ನಾನು ಕೇಳಿದ್ದು ಯಾವ ಉದ್ಯೋಗ ಮಾಡ್ತೀರಿ‌ ಅಂತ?’ 

‘ಅದೇ ಸರ್… ಕವನಗಳನ್ನು ಬರೆಯೋದೆ ನನ್ನ ಕೆಲಸ.‌ ನನಗೆ ಸಾಲ ಬೇಕಿತ್ತು’ 

‘ಅಲ್ಲಾರೀ ನಮ್ಮಲ್ಲಿ ಸಾಲ ಕೊಡಬೇಕು ಅಂದರೆ ವರಮಾನ ಬರುವಂಥ ಉದ್ಯೋಗ ಇರಬೇಕು. I mean collateral’ 

‘ಹೋಗಲಿ ನನ್ನ ಬಳಿ ಇರುವ ದಾಖಲೆಗಳನ್ನು ಇಟ್ಟುಕೊಂಡಾದರೂ ಸಾಲ ನೀಡಬಹುದೆ?’ 

‘ಏನು ದಾಖಲೆಗಳಿವೆ ನಿಮ್ಮ ಬಳಿ?’ 

ನಿಧಾನಕ್ಕೆ ತನ್ನ ಕೈಚೀಲದಿಂದ ಒಂದು ದೊಡ್ಡ ಹಾಳೆಗಳ ಕಂತೆಯನ್ನು ತೆಗೆದು ಮ್ಯಾನೇಜರ್ ಟೇಬಲ್ ಮೇಲಿಟ್ಟ ಕವಿ ಅದರಲ್ಲಿ ಒಂದು ಬಹುಮುಖ್ಯವಾದ ಹಾಳೆಯನ್ನು ತೆಗೆದು ಎದುರು ಕೂತವನ ಕೈಗಿತ್ತ…

‘ಸರ್ವನಾಶದ ಸಮರ’ ಎಂಬ ಶೀರ್ಷಿಕೆಯಿದ್ದ ಆ ಹಾಳೆಯಲ್ಲಿ ಒಂದು ದೀರ್ಘವಾದ ಪದ್ಯವಿತ್ತು. ಗಂಟಲು ಸರಿ ಮಾಡಿಕೊಂಡ ಕವಿ ‘ಕದನದಲಿ ಗೆದ್ದವ ಸೋತ; ಸೋತವ ಸತ್ತ’ ಎಂದು ಥೇಟ್ ಕವಿಗೋಷ್ಠಿಯಲ್ಲಿ ಓದುವವನಂತೆ ಓದಿದ. 

‘ಸರಿ, ನಿಮ್ಮ ಈ ಕವನದಿಂದ ಯಾವುದಾದರೂ ಯುದ್ಧವನ್ನು ತಡೆಯಲು ಸಾಧ್ಯವಾಗಿದೆಯಾ?’ 

ಕವಿಗೆ ಅವಮಾನವಾದಂತಾಯಿತು.

‘ಗೊತ್ತಿಲ್ಲ. ಆದರೆ ಗಡಿಗಳಲ್ಲಿ ನಡೆಯುವ ಯುದ್ಧಕ್ಕಿಂತ ನಾಡಿನಲ್ಲಿರುವ ಯುದ್ಧೋನ್ಮಾದ ಅಪಾಯಕಾರಿ. ಹಾಗಾಗಿ ನಾನು ಬರೆಯುವುದು ಮುಖ್ಯ ಎಂದುಕೊಳ್ಳುತ್ತೇನೆ. ಇನ್ನೂ ಸರಳವಾಗಿ ಹೇಳೋದಾದರೆ ನಿಮ್ಮಿಂದ ಬ್ಯುಸಿನೆಸ್ ಎನ್ಸಹಾನ್ಸಮೆಂಟ್ ಗೆ ಅಂತ ಲೋನ್ ಪಡೆದವರೆಲ್ಲರ ಬ್ಯುಸಿನೆಸ್ಸೂ ಎನ್ ಹಾನ್ಸ್ ಆಗಿಬಿಟ್ಟಿದೆಯಾ?’ 

‘ಅದೆಲ್ಲ ನಮಗೆ ಬೇಕಿಲ್ಲ ಸರ್. ಅವರು ತಗೊಂಡ ಸಾಲಕ್ಕೆ ಸರಿಯಾಗಿ ಬಡ್ಡಿ ಕಟ್ಟುತ್ತಾ ಹೋದರೆ ಸಾಕು’ 

‘ಮತ್ತೇಕೆ ನನ್ನ ಕವಿತೆ ಯುದ್ಧ ತಡದು ಬಿಡುತ್ತದೆಯೆ‌ ಎಂದು ಕೇಳಿದಿರಿ?’ 

‘ಕ್ಷಮಿಸಿ, ಹಾಗೆ ಕೇಳಬಾರದಿತ್ತು ನಾನು. ಇರಲಿ, ಬೇರೆ ಯಾವ ವಿಷಯದ ಬಗ್ಗೆ ಕವಿತೆಗಳನ್ನು ಬರೆದಿದ್ದೀರಿ?’ 

‘ಪ್ರೇಮದ ಬಗ್ಗೆ… ವಿರಹದ ಬಗ್ಗೆ… ಕಾಮದ ಬಗ್ಗೆ… ಸ್ವಾತಂತ್ರ್ಯದ ಬಗ್ಗೆ… ಜೀವನದ ಬಗ್ಗೆ… ಸಾವಿನ ಬಗ್ಗೆ… ಸಂಕಟದ ಬಗ್ಗೆ… ಸಂಭ್ರಮದ ಬಗ್ಗೆ… ಬಡತನದ ಬಗ್ಗೆ… ಬಗ್ಗೆ…’ 
‘ಓಹ್! ನಿಮ್ಮ ಪಟ್ಟಿ ದೊಡ್ಡದೇ ಇದೆ ಅನ್ಸುತ್ತೆ. ಆದರೆ ನನಗೆ ಒಂದು ಅನುಮಾನ ಸರ್.‌ ನಮ್ಮ ಜೀವನ ಸಾಮಾನ್ಯವಾಗಿ ಹೇಗೋ ನಡಕೊಂಡು ಹೋಗ್ತಾ ಇರುತ್ತೆ. ನೀವು ಸುಮ್ನೆ ಅದನ್ನ ಅಲಂಕಾರಿಕವಾಗಿ, ಇಲ್ಲವೆ ಅತೀ ನೀರಸವಾಗಿ ಬರೆದು ಬೇರೇನೇ ಕಲ್ಪನೆ ಕಟ್ಟಿಕೊಟ್ಟು ಬಿಡ್ತೀರಿ. ಆದರೆ ವಾಸ್ತವದಾಗ ಅದು ಹಾಗಿರೋದಿಲ್ಲ ಅಲ್ವಾ?’ 

‘ಸರಿ ಈಗ ನಾನು ನಾಲ್ಕು ಸಾಲುಗಳನ್ನು ಓದಿ ಹೇಳ್ತೀನಿ. ನಿಮಗೇನನ್ಸುತ್ತೆ ಹೇಳಿ;

“ಒಂದು ಮುತ್ತಿನಿಂದ ಕೊಲ್ಲಬಹುದೆ ನರನನು? ವಿರಹದಲಿ ಬೇಯಿಸಿದರದಕಿಂತ ಸಾವು ಉಂಟೇನು?” 

‘ನೋಡಿ, ಏನೂ ಅರ್ಥ ಆಗ್ಲಿಲ್ಲ. ಆದರೆ ಏನೋ ಒಂಥರ ವಿಶೇಷ ಇದೆ‌. ನಿಜ ಸರ್ ಪ್ರೇಮಕ್ಕಿಂತ ವಿರಹವೇ ಚೆಂದ’ ಎಂದ ಮ್ಯಾನೇಜರ್ ಗೆ ಈ ಕವಿವರ್ಯನ ಮೇಲೆ ಅದೇಕೋ ಆಸಕ್ತಿ
ಹೆಚ್ಚಾದಂತೆ ಕಂಡುಬಂದು ಅಲ್ಲಿಯೇ ಇದ್ದ ಅಟೆಂಡರ್ ನನ್ನು ಕರೆದು ಕಾಫಿ ತರಲು ತಿಳಿಸಿದನು. 

‘ಹೇಳಿ‌ ಕವಿಗಳೆ, ಈಗ ನಿಮಗೆ ಸಾಲ ಏತಕ್ಕೆ ಬೇಕು?’ ಕಾಫಿ ಕಪ್ ಬಾಯಿಗಿರಿಸುತ್ತಲೇ ಕೇಳಿದರು ಮ್ಯಾನೇಜರ್. 

‘ಕವಿತೆಗಳನ್ನು ಬರೆಯಲು ಸರ್’ 

‘ವಾಟ್? ಕವಿತೆ ಬರೆಯೋಕೆ ಸಾಲ ಬೇಕಾ?’ 

‘ಹೌದು…’ 

‘ನೀವ್ ಹೇಳೋದು ಅರ್ಥ ಆಗ್ಲಿಲ್ಲ ಸರ್’ 

‘ಕೆಲವು ಸಣ್ಣಪುಟ್ಟ ಖರ್ಚುಗಳಿರುತ್ತವೆ. ಅವುಗಳನ್ನ ನಿಭಾಯಿಸಬೇಕು’ 

‘ಸರಿ, ನಿಮಗೆ ಇದರಿಂದ ಆದಾಯ ಬರೋದಿಲ್ಲವೆ?’ 

‘ಇಲ್ಲ. ಇದು ಇನ್ವೆಸ್ಟ್ಮೆಂಟ್ ಅಲ್ಲ. ಸೋಷಿಯಲ್ ಮೋಟಿವ್ ಇಂದ ಬರೆಯೋದು’ 

‘ಅದಕ್ಕೆ ಬ್ಯಾಂಕ್ ಯಾಕೆ ಸಾಲ ಕೊಡಬೇಕು ಹೇಳಿ?’ 

‘ಸಮಾಜದ ಸ್ವಾಸ್ಥ್ಯ ಕಾಪಾಡೋಕೆ’ 

‘ಎಂಥ ಸ್ವಾಸ್ಥ್ಯ ಕಾಪಾಡ್ತೀರಿ ನೀವು? ಪ್ರೀತಿ‌-ಪ್ರೇಮ‌, ಇಂದ್ರ-ಚಂದ್ರ, ವಿರಹ, ಕ್ರಾಂತಿ-ಗೀಂತಿ ಅಂತೆಲ್ಲ ರಸವತ್ತಾಗಿ ಬರೆದು ಜನರ ತಲೇಲಿ ಏನೇನೋ ಅಲೋಚನೆಗಳನ್ನ ತುಂಬಿ ಸಮಾಜದ ಸ್ವಾಸ್ಥ್ಯ ಹಾಳು ಮಾಡ್ತೀರಿ ನೋಡಿ ನೀವು’ 

‘ಇಷ್ಟು ಉಡಾಫೆಯಾಗಿ ನೀವು ಮಾತನಾಡಬಾರದು’

‘ನಾನೊಬ್ಬ ಬ್ಯಾಂಕರ್ ಸರ್’ 

‘ಅದಕ್ಕೆ ನಿಮಗೆ ಯಾವ ಕಲೆಯೂ ಹೂಡಿಕೆಯಾಗಿ ಕಾಣೋದೇ ಇಲ್ಲ’ 

‘ಹೂಡಿಕೆ ಮಾಡಿದ್ದಕ್ಕೆ ಪ್ರತಿಫಲ ಇರಬೇಕು ಅಲ್ವಾ? ನಿಮ್ಮ ಕವಿತೆಗಳ ಪ್ರತಿಫಲ‌ ಏನು ಅನ್ನೋದನ್ನ ನನಗೆ ಹೇಳಿ’ 

‘ಈ ಜಗತ್ತೇ ಒಂದು ಸುಂದರ ಕಾವ್ಯ. ಇಲ್ಲಿ ಕಾವ್ಯವಲ್ಲದ್ದು ಏನೂ ಇಲ್ಲ. ನೋಡಿ ನಮ್ಮಿಬ್ಬರ ಆಲೋಚನೆಗಳು ತೀರ ವಿರುದ್ಧ ದಿಕ್ಕಿನಲ್ಲಿವೆ. ಆದರೂ ನಾವಿಬ್ಬರೂ ಈ ಕ್ಯಾಬಿನ್ ನಲ್ಲಿ ಕೂತು ಕಾಫಿ ಕುಡುದ್ವಿ ಅಲ್ವಾ? ಅದೊಂದು ಕಾವ್ಯ ಸರ್’ 

‘ಏನ್ ಹೇಳ್ತೀರ್ರಿ?’ 

‘ಹೌದು ಸರ್. ನೀವು ಕೊಟ್ಟ ಸಾಲವನ್ನು ತೀರಿಸಲಾಗದೆ ಯಾರೋ ಒಬ್ಬ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ನೋಡಿ. ಅದೂ ಕಾವ್ಯವೇ. ನಾನು ಅದರ ಬಗ್ಗೆ ಬರೆಯಬೇಕಿದೆ. ಹಾಗಾಗಿಯೇ ಸಾಲ ಕೇಳಲು ಬಂದೆ’

‘ನಿಮ್ದೊಳ್ಳೆ ಸಹವಾಸ ಆಯ್ತಲ್ರಿ. ಏನೋ ನಾನು ಸ್ಕೂಲಲ್ಲಿ ಓದುವಾಗ ಪದ್ಯಗಳನ್ನ ಇಷ್ಟಪಡ್ತಿದ್ದೆ. ಬೇಗ ಕಂಠಪಾಠ ಮಾಡಿ ಯಾವಾಗ್ಲೂ ಹೇಳ್ತಾ ಇರ್ತಿದ್ದೆ ಅನ್ನೋ‌ ಕಾರಣಕ್ಕೆ ಆಸಕ್ತಿವಹಿಸಿ ನಿಮ್ಮ ಹತ್ರ ಮಾತಾಡ್ತಿದ್ರೆ, ನೀವು ಏನೇನೋ ಹೇಳ್ತೀರಲ್ಲ?’ 

‘ಅಂದ್ರೆ, ‌ನೀವು ಸ್ಕೂಲ್ ಮುಗಿಸಿದ ಮೇಲೆ ಕಾವ್ಯವನ್ನ ಕಡೆಗಣಿಸಿದಿರಿ ಅಲ್ವಾ?’ 

‘ಅದು ಎಲ್ಲೂ ಅಗತ್ಯ ಬರಲಿಲ್ಲ’ 

‘ಇಲ್ಲ ಸರ್. ‌ತಪ್ಪು ನೀವು ಮಾಡಿದ್ದು. ಅದಕ್ಕೆ ನೀವು ಹೀಗಾಗಿರೋದು’ 

‘ಏನ್ರಿ ಆಗಿದೆ ನನಗೆ? ನಿಮ್ದ್ಯಾಕೋ ಅತಿಯಾಯ್ತು. ಜನ ಏನೇನೋ ಒಳ್ಳೆ ಕೆಲಸಗಳಿಗೆ ಸಾಲ ಕೇಳ್ಕೊಂಡ್ ಬರ್ತಾರೆ. ನಮ್ ಗೈಡ್ ಲೈನ್ಸ್ ನ ಮೀಟ್ ಆಗೋಕೆ ಆಗದೆ ಅವರಿಗೆ ಸಾಲ ಕೊಡೋಕೆ ಆಗೊಲ್ಲ. ಅದರ ಬಗ್ಗೆ ಎಷ್ಟು ಬೇಸರ ಆಗುತ್ತೆ ಗೊತ್ತಾ? ಅಂಥದ್ದರಲ್ಲಿ ನೀವು ಇಂಥ ಮೂರ್ಖ ಬೇಡಿಕೆ ಇಟ್ಕೊಂಡ್ ಬಂದಿದ್ದರಲ್ಲ?’ 

‘ನಿಮ್ಮಲ್ಲಿ ಇನ್ನೂ ಕಾವ್ಯ ಇದೆ ಅಂತಾ ಗೊತ್ತಾಯ್ತು ಸರ್’ 

‘ಅದ್ಹೇಗ್ರಿ?’ 

‘ಒಳ್ಳೆ ಉದ್ದೇಶವೊಂದಕ್ಕೆ ಸಾಲ ಕೊಡೋಕೆ ಆಗಲಿಲ್ಲ ಅಂತ ನೀವು ನೊಂದುಕೊಳ್ಳೋದು ಇದೆಯಲ್ಲ‌ ಸರ್. ಅದೆಂಥಾ ಕಾವ್ಯ ಗೊತ್ತಾ?’ 

‘ನಿಜವೇನ್ರಿ? ಹಾಗಾದ್ರೆ ಈ ಬ್ಯಾಂಕಲ್ಲಿ ಅದೇನು ಕಾವ್ಯ ಇದೆ ಅಂತ ಒಂದು ಲಿಸ್ಟ್ ಮಾಡ್ಬಿಡಿ ಕೇಳೋಣ’ 

‘ಖಂಡಿತವಾಗಿಯೂ ಸರ್. ಬರ್ಕೊಳ್ಳಿ ನಾನ್ ಹೇಳೋದ್ನ… ನೋಡಿ, ಅಲ್ಲಿ  ಬಹಳ ಹೊತ್ತಿನಿಂದ ತನ್ನ ಕೆಲಸಕ್ಕಾಗಿ ಯಾರನ್ನು ಭೇಟಿ ಮಾಡಬೇಕೆಂದು ತಿಳಿಯದೆ ಕಂಗಾಲಾಗಿ ನಿಂತಿರುವ ಆ ಯುವತಿಗೆ ನಿಮ್ಮ ಗುಮಾಸ್ತರೊಬ್ಬರು ಖುದ್ದಾಗಿ ಕರೆದು ಸಹಾಯ ಮಾಡುತ್ತಿದ್ದಾರೆ ನೋಡಿ ಅದೊಂದು ಕಾವ್ಯವೇ ಸರಿ. 

ಇನ್ನು ನಿಮ್ಮ ಕ್ಯಾಶಿಯರ್ ಟೋಕನ್ ಪ್ರಕಾರ ಕರೆದಾಗ ಸರತಿಯಲ್ಲಿ ಬಂದವರ್ಯಾರು ಎಂಬುದನ್ನು ಖಚಿತಪಡಿಸಿಕೊಳ್ಳದೆ ಕೇವಲ ಕೈಯಲ್ಲಿರುವ ಟೋಕನ್ ಆಧಾರದಲ್ಲಿ ಅವರಿಗೆ ಹಣ ಕೊಟ್ಟು ಕಳಿಸುತ್ತಾನೆ ನೋಡಿ ಅದರ ಹಿಂದಿರುವುದು ಕಾವ್ಯವೇ ಅಲ್ಲವೆ ?

ಯಾರೋ ಒಬ್ಬ ಚೆಕ್ ಎಂಬ ಕಾಗದವೊಂದನ್ನು ಕೊಟ್ಟಾಗ ನೀವು ಅದರಲ್ಲಿರುವಷ್ಟು ಹಣವನ್ನು ಅವನಿಗೆ ಸಂದಾಯ ಮಾಡುತ್ತೀರಲ್ಲ ಅದು…

ಹತ್ತಾರು ಬಾರಿ ನಿಮ್ಮ ಬಳಿ ಸಾಲಕ್ಕೆಂದು ಅಲೆದು ಸುಸ್ತಾದವನೊಬ್ಬ ಏಜೆಂಟ್ ಮೂಲಕ ಬಂದು ಕೆಲವು ರಿಯಾಯಿತಿಗಳೊಂದಿಗೆ ಸಲೀಸಾಗಿ ಸಾಲ ಪಡೆದು ಹೋಗುವಾಗ ಮಂದಹಾಸ ಬೀರುತ್ತಾನೆ ನೋಡಿ ಅದಲ್ಲವೆ ಕಾವ್ಯ? ಕೋಟ್ಯಂತರ ರೂಪಾಯಿಗಳನ್ನು ಬ್ಯಾಂಕಿಗೆ ವಂಚಿಸಿ ಉದ್ಯಮಿಯೊಬ್ಬ ವಿದೇಶಕ್ಕೆ ಹಾರಿದ ಸುದ್ದಿ ಟಿವಿಗಳಲ್ಲಿ ಬಿತ್ತರವಾಗುವಾಗ ಅವನಿಗೆ ಸಾಲ ಮಂಜೂರು ಮಾಡಿದ ನಿವೃತ್ತ ಬ್ಯಾಂಕರ್ ಗಳು ಮನೆಯಲ್ಲಿ ಸಕ್ಕರೆ ಕಾಯಿಲೆಯ ಮಾತ್ರೆಗಳನ್ನು ನುಂಗುತ್ತಿರುತ್ತಾರಲ್ಲ ಅದೆಂಥ ರೂಪಕ ಕಾವ್ಯವಲ್ಲವೆ?

 

ಇನ್ನೂ ಮುಂದುವರಿಸುವ ಉತ್ಸಾಹದಲ್ಲಿದ್ದ ಕವಿಯ ಮಾತನ್ನು ತುಂಡರಿಸಿದ ಮ್ಯಾನೇಜರ್;

‘ಅಂದರೆ ಬ್ಯಾಂಕ್ ಕೂಡ ಕಾವ್ಯಮಯವಾಗಿದೆ ಅಂತೀರಾ?’

‘ಬ್ಯಾಂಕೊಂದೇ ಅಲ್ಲ ಸರ್. ಇಡೀ‌ ಜಗತ್ತೇ ಕಾವ್ಯಮಯವಾಗಿದೆ’ 

‘ಅದೆಲ್ಲ ಸರಿ ಸರ್. ಆದರೆ ಈ ಕಾವ್ಯ ಸೃಷ್ಟಿ ಮಾಡೋಕೆ ನಿಮಗೆ ಸಾಲ ಯಾಕೆ ಬೇಕು?’ 

‘ಕವಿಗೆ ಖರ್ಚುಗಳಿರುತ್ತವೆ’ 

‘ಕವಿಯ ಖರ್ಚಿಗೂ ಕಾವ್ಯಕ್ಕೂ ಏನು ಸಂಬಂಧ’ 

‘ಬ್ಯಾಂಕಿಗೂ ಹಣಕ್ಕೂ ಇರುವ ಸಂಬಂಧ’ 

‘ಸರಿ. ನಿಮಗೆ ಸಾಲ ನೀಡಲು ಒಪ್ಪಿದ್ದೇನೆ. ಬ್ಯಾಂಕಿನ ಮಾರ್ಗಸೂಚಿಗಳನ್ನು ಮೀರಿ ನಾನಿದನ್ನು ಮಾಡುತ್ತೇನೆ. ಆದರೆ ನೀವು ಬೆಲೆ ಬಾಳುವ ಏನನ್ನಾದರೂ ಅಡಮಾನ ಇಡಬೇಕು’ 

‘ನನ್ನ ಬಳಿ ಕಾವ್ಯವೊಂದನ್ನು ಬಿಟ್ಟು ಇನ್ನೇನು ಇಲ್ಲ’ 

‘ಆಗಲಿ, ನಿಮ್ಮ ಈ ಕವನಗಳನ್ನೇ ಆಧಾರವಾಗಿಟ್ಟುಕೊಂಡು ಸಾಲ ನೀಡುತ್ತೇನೆ. ಆದರೆ ಇವುಗಳಲ್ಲಿ ಸರ್ಕಾರದ ವಿರುದ್ಧ ಬರೆದ ಕವನ ಯಾವುದೂ ಇಲ್ಲ ತಾನೆ?’ 

‘ಸರ್ಕಾರದ ವಿರುದ್ಧ ಬರೆದದ್ದಿಲ್ಲ. ಶೋಷಣೆಯ ವಿರುದ್ಧ ಬರೆದಿದ್ದಿದೆ. ಅದು ತನ್ನ ವಿರುದ್ಧವೇ ಎಂದು ಸರ್ಕಾರ ಭಾವಿಸುವುದಿಲ್ಲ ಬಿಡಿ’ 

‘ನೋಡಿ, ನಾನು ಮುಂದಿನ ತಿಂಗಳು ನಿವೃತ್ತನಾಗೋನಿದ್ದೀನಿ. ನನಗೂ ಶುಗರ್ ಇದೆ.’ 

‘ಚಿಂತೆ ಬೇಡ ಸರ್. ಒಂದು ಭೇಟಿಯಲ್ಲಿ ನೀವು ಕಾವ್ಯದ ಮಹತ್ವ ಅರಿತುಕೊಂಡಿದ್ದೀರಿ ಎಂದಮೇಲೆ ನಾನೂ ಕೂಡ ಸಾಲದ ಮಹತ್ವ ಅರ್ಥ ಮಾಡ್ಕೊಳ್ತೀನಿ’ 

‘ಥ್ಯಾಂಕ್ಸ್ ಎ ಲಾಟ್. ನಿಮ್ಮ ಹಣವನ್ನು ಕ್ಯಾಷ್ ಕೌಂಟರಿನಲ್ಲಿ ಕೊಡ್ತಾರೆ’ 

‘ತುಂಬಾ ಥ್ಯಾಂಕ್ಸ್ ನಿಮಗೆ. ಕಾವ್ಯದ ಶಕ್ತಿ ನನಗೆ ಈ ದಿನ ಮತ್ತಷ್ಟು ಮನವರಿಕೆಯಾಯಿತು ಸರ್. 

‘ಹೌದು. ಕವನಗಳನ್ನ ಅಡವಿಟ್ಟು ಸಾಲ ಪಡೆದ ಮೊದಲ ಕವಿ ನೀವು. ಹಾಗೆಯೇ ಸಾಲ ಕೊಟ್ಟ ಮೊದಲ ಮ್ಯಾನೇಜರ್ ನಾನೇ ಇರಬೇಕು.’ 

‘ನಾವಿಬ್ಬರೂ ಒಂದು ಹೊಸ ಬ್ಯಾಂಕಿಂಗ್ ಪಾಲಿಸಿಗೆ ನಾಂದಿ ಹಾಡಿದ್ದೇವೆ ಎಂದುಕೊಳ್ಳೋಣ ‘ 

ಇಬ್ಬರೂ ನಕ್ಕರು … 

ಕವಿ ಕ್ಯಾಷ್ ಕೌಂಟರಿನ ಬಳಿ ಹೊರಟ. 

ಮ್ಯಾನೇಜರ್ ಮನೆಗೆ ಹೊರಡಲು ಕ್ಯಾಬಿನ್ ನಿಂದ ಎದ್ದು ಬಂದವರು ಕ್ಯಾಷ್ ಕೌಂಟರಿನ ಬಳಿ ಹೋಗಿ ಕವಿಯನ್ನು ಮತ್ತೊಮ್ಮೆ ಕೇಳಿದರು;’ ಕಾವ್ಯ ಸೃಷ್ಟಿಗೆ ನಿಮಗೆ ಹಣ ಯಾಕೆ ಬೇಕು?’ 

‘ಕವಿಗೆ ಖರ್ಚುಗಳಿರುತ್ತವೆ ಸರ್…’ ಎಂದು ಗಂಭೀರವಾಗಿ ಉತ್ತರಿಸಿದ ಕವಿ. 

ಮತ್ತೆ ಇಬ್ಬರೂ ನಕ್ಕರು… 

ಬ್ಯಾಂಕಿನಲ್ಲಿ ಬೇರೆ ಯಾರೂ ನಗುತ್ತಲಿರಲಿಲ್ಲ…

August 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. ಯಂ. ಕೃಷ್ಣರಾಜ. ಭಟ್. ಹೆಬ್ರಿ

    ಆರಂಭದಿಂದ ಅಂತ್ಯದವರೆಗೆ..ಸರಳವಾಗಿ, ಸಹಜವಾಗಿ ಓದಿಸಿಕೊಂಡು ಹೋದ ಖುಷಿಕೊಟ್ಟ ಬರಹ. ಅಭಿನನಂದನೆಗಳು.

    ಪ್ರತಿಕ್ರಿಯೆ
  2. ಸಂತೋಷ್ ಕುಮಾರ್ ಎಸ್

    ಒಂಥರಾ ಚೆನ್ನಾಗಿದೆ.

    ಪ್ರತಿಕ್ರಿಯೆ
  3. Peter C seravo

    ಕಾವ್ಯಕೆ ಹೊಸ ಅರ್ಥ…ವಾಹ್…ಚೆನಾಗಿದೆ, ಮಾವಲಿ ಸರ್….

    ಪ್ರತಿಕ್ರಿಯೆ
  4. Smitha Reddy

    ಹೊಸ ಆರ್ಥಿಕ ಕಾವ್ಯಮೀಮಾಂಸೆಗೆ ನಾಂದಿ ಹಾಡಿದಂತಿದೆ . ಚೆನ್ನಾಗಿದೆ

    ಪ್ರತಿಕ್ರಿಯೆ
  5. ರೇಣುಕಾ ರಮಾನಂದ

    ವಿಭಿನ್ನವಾಗಿದೆ.ಖುಷಿ ಕೊಡ್ತು

    ಪ್ರತಿಕ್ರಿಯೆ
  6. Vasanth b s

    ಕವಿಯ ಕಣ್ಣಿಗೆ ಎಲ್ಲವೂ ಕಾವ್ಯಮಯ.. ಚನಾಗಿದೆ ಬರಹ.

    ಪ್ರತಿಕ್ರಿಯೆ
  7. Kotresh T A M

    ಕವಿಗೆ ಖರ್ಚುಗಳಿರುತ್ತವೆ!

    ಹ್ಹಹ್ಹಹ್ಹ…Nice!

    ಪ್ರತಿಕ್ರಿಯೆ
  8. Kotresh T A M

    ಕವಿಗೆ ಖರ್ಚುಗಳಿರುತ್ತವೆ.

    ಹ್ಹಹ್ಹಹ್ಹ…..Nice!

    ಪ್ರತಿಕ್ರಿಯೆ
  9. ಲತೀಫ್ ನವಿಲೇಹಾಳ್

    ಹೌದು ಸ್ವಾಮಿ, ಓದುಗರಾದ ನಮಗೂ ‘ಖರ್ಚು’ ಗಳಿರುತ್ತವೆ. ನೀವು ಖರ್ಚು ಮಾಡುವಾಗ ನಮನ್ನೂ ಕರೆಯಿರಿ……
    ಸೂಪರ್‌ ಶಿವು..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: