ಕಲ್ಲೇಶ್ ಕುಂಬಾರ್ ಓದಿದ ʼನೀಲಕುರಿಂಜಿʼ

ನೀಲಕುರಿಂಜಿ: ತಾಜಾ ತಾಜಾ ಕಥೆಗಳು..

ಕಲ್ಲೇಶ್ ಕುಂಬಾರ್

‘ನೀಲಕುರಿಂಜಿ’- ದಾದಾಪೀರ್ ಜೈಮನ್ ಅವರ ಹೊಸ ಕಥಾಸಂಕಲನ. ಈ ಕಥಾಸಂಕಲನದ ವಿಶೇಷತೆ ಎಂದರೆ, ಮನುಷ್ಯನ ಸ್ವಾರ್ಥ ಕಾರಣವಾಗಿ ಇಡಿಯಾಗಿ ಜಗತ್ತು ಮಾನವೀಯತೆಯ ಪರಿಧಿಯಿಂದಾಚೆ ಬಂದು, ಕ್ರೌರ್ಯವನ್ನು ಮೆರೆಯುತ್ತಿರುವ ಈ ದಿನಮಾನಗಳಲ್ಲಿ ನಮ್ಮ ಬದುಕು ಸಂಕೀರ್ಣಗೊಳ್ಳುವುದಕ್ಕೆ ಕಾರಣವಾಗುತ್ತಿರುವ, ಸ್ವಯಂ ನಾವೇ ಸೃಷ್ಟಿಸಿಕೊಂಡಿರುವ ಹೊಸ ಹೊಸ ಸಂದಿಗ್ಧಗಳನ್ನು ಮತ್ತು ಅವು ತಂದೊಡ್ಡಿರಬಹುದಾದ ಹೊಸದೆನ್ನುವ ಅಪಾಯಗಳನ್ನು ಕನ್ನಡ ಕಥನಲೋಕದಲ್ಲಿ ಕಾಣಿಸಲು ಕಥೆಗಾರ ದಾದಾಪೀರ್ ಅವರು ಪ್ರಯತ್ನಿಸಿ ಯಶಸ್ವಿಯೂ ಆಗಿದ್ದಾರೆ. ಹೀಗಾಗಿ, ಕನ್ನಡ ಕಥನಲೋಕಕ್ಕೆ ಹೊಸದೆನ್ನುವ ಸಂಗತಿಗಳನ್ನು ಒಳಗೊಂಡಿರುವುದು ಈ ಸಂಕಲದ ಹೆಚ್ಚುಗಾರಿಕೆ ಎನ್ನಬೇಕು.

ಈ ಸಂಕಲನದ ‘ಜಾಲಗಾರ’ ಕಥೆಯನ್ನೇ ನೋಡಿ: ‘ನೆಟ್ ವರ್ಕ್ ಮಾರ್ಕೆಟಿಂಗ್’ನ ಆಳ ಆಳಗಲವನ್ನು ಶೋಧಿಸುವ ನಿಟ್ಟಿನಲ್ಲಿರುವ ಈ ಕಥೆ, ಮನುಷ್ಯರ ಮುಗ್ಧ ಭಾವನೆಗಳನ್ನು ಹಣದ ಸರಕಾಗಿಸಿಕೊಳ್ಳಲು ಟೆಡ್ಡಿಬೇರ್, ಆಮೆ, ನರಿ, ಶಾರ್ಕ್… ಹೀಗೆ ಏನಾದರೊಂದು ಪ್ರಾಣಿಗಳ ಜಾಣತನವನ್ನು ಅಳವಡಿಸಿಕೊಂಡು, ಆ ಮೂಲಕ ಎದುರಾಳಿಯನ್ನು ಗೆದ್ದು, ನೆಟ್ ವರ್ಕ್ ಎಂಬ ಕೊನೆ ಮೊದಲಿಲ್ಲದ ಸರಪಳಿಗೆ ತಂದು ಜೋಡಿಸಿ, ತಾನು ಕಮಿಷನ್ ಹಣದಲ್ಲಿ ಬದುಕು ಮುನ್ನಡೆಸಬೇಕೆನ್ನುವ ತಂತ್ರವೊಂದರ ಗಿಮಿಕ್ ಗಳನ್ನು ಅನಾವರಣ ಮಾಡುತ್ತದೆ. ಆರ್ಥಿಕ ವ್ಯವಸ್ಥೆಯನ್ನು ಏರುಪೇರು ಮಾಡಬಹುದಾದಂಥ ಅಪಾಯವನ್ನು ಹೊಂದಿರುವ ನೆಟ್ ವರ್ಕ್ ಮಾರ್ಕೆಟಿಂಗ್ ಎಂಬ ಪತ್ರಿಕೆಗಳಲ್ಲಿ ವರದಿಯಾಗಬಹುದಾದ ವಿಚಾರವೊಂದನ್ನು ಕಥೆಗೆ ಅಳವಡಿಸಿ ಯಶಸ್ವಿಯೂ ಆಗಿರುವ ಕಥೆಗಾರ ದಾದಾಪೀರ್ ಅವರ ಆಲೋಚನಾಕ್ರಮ ಮೆಚ್ಚುವಂಥದ್ದು.

ಹಾಗೆಯೇ, ಸೀಮಿತ ಚೌಕಟ್ಟಿನೊಳಗಿನ ಬದುಕು ಅದೆಷ್ಟು ಸಂಕೀರ್ಣವಾಗಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಈ ಸಂಕಲನದಲ್ಲಿ ‘ಪೇಟೆ ಸಮುದ್ರದ ದಾರಿ’ ಎಂಬ ಕಥೆ ಇದೆ. ಆ ಸಂಕೀರ್ಣ ಬದುಕು ಉಂಟುಮಾಡುವ ತಲ್ಲಣ, ಆಘಾತಗಳು ಮನುಷ್ಯ ಎಂದೆಂದೂ ಸುಧಾರಿಸಿಕೊಳ್ಳಲಾರದಷ್ಟು ಘೋರವಾಗಿರುತ್ತವೆ ಎಂಬುದನ್ನು ಈ ಕಥೆ ಸೂಚ್ಯವಾಗಿ ಹೇಳುತ್ತದೆ. ನಗರ ಜೀವನ ಸ್ವಯಂ ರೂಪಿಸಿಕೊಂಡಿರುವ ಅಸಂಗತ ಮತ್ತು ಸಂಕೀರ್ಣವಾದ ನಡಾವಳಿಗಳು ಮನುಷ್ಯನ ಆಲೋಚನಾಕ್ರಮದಲ್ಲುಂಟು ಮಾಡಿರಬಹುದಾದ ಸ್ಥಿತ್ಯಂತರಗಳು ತಂದೊಡ್ಡುತ್ತಿರುವ ಅಪಾಯಗಳು ಅತಿಘೋರವಾದವುಗಳು. ಇಲ್ಲಿ, ಕಥೆಯ ಮುಖ್ಯಪಾತ್ರ ಸಮುದ್ರ ತನ್ನ ಪಾಡಿಗೆ ತಾನು ನಗರ ಬದುಕಿನ ದ್ವಂದ್ವಗಳನ್ನು ಅವಲೋಕಿಸುತ್ತ ಹೋದಂತೆ ಅದರ ವಿಚ್ಛಿದ್ರಕಾರಿ ಮನಸ್ಥಿತಿಯು ಅನಾವರಣಗೊಳ್ಳುತ್ತ ಹೋಗುತ್ತದೆ.

ಸಮುದ್ರನ ಶಾಲೆಯ ಹೈಸ್ಕೂಲು ಓದುವ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಅಪರಾಧಿ ಮನೋಭಾವನೆಯನ್ನು ಬೆಳೆಸಿಕೊಳ್ಳುವುದಕ್ಕೆ ನಗರೀಕರಣ ಪ್ರಕ್ರಿಯೆಯು ಸೃಷ್ಟಿಸಿರುವ ಸಂಕೀರ್ಣವೂ ಮತ್ತು ಅಸಂಗತವೂ ಆದ ಬದುಕಿನ ಶೈಲಿಯೇ ಕಾರಣವಾಗಿದೆ ಎನ್ನಬೇಕು. ಆದರೆ, ಅದೇ ಸಮುದ್ರನ ಗೆಳೆಯ ಮಾನವ್’ನು ಜೀವನದ ಎಲ್ಲ ಎಡರು ತೊಡರುಗಳನ್ನು ದಾಟಿಕೊಂಡು ಚಲನಚಿತ್ರ ನಿರ್ದೇಶಕನಾಗಿ ಹೆಸರು ಮಾಡಿರುವುದಕ್ಕೆ ಆತ ಬೆಳೆದು ಬಂದ ಗ್ರಾಮ ಜಗತ್ತು ರೂಢಿಸಿಕೊಂಡಿರುವ ಪರಿಸರವೇ ಕಾರಣವಾಗಿದೆ ಎಂಬ ಮಾತನ್ನೂ ಸಹ ಈ ಕಥೆ ಪುಷ್ಟೀಕರಿಸುತ್ತದೆ.

ಕಥೆಗಾರ ದಾದಾಪೀರ್ ಅವರು ವಿವಾದಿತ ವಿಚಾರಗಳನ್ನು ಕಥೆಯೊಳಗೆ ತಂದು ಅವುಗಳ ಕುರಿತಾಗಿ ಪರ ವಿರೋಧಗಳ ಗೆರೆಯ ಮೇಲೆ ನಿಂತು ತುಂಬಾ ಪ್ರಾಮಾಣಿಕವಾಗಿ ಚರ್ಚೆಗಿಳಿಯುವ ಸಾಹಸವನ್ನು ಈ ಸಂಕಲನದಲ್ಲಿನ ಕಥೆಗಳಲ್ಲಿ ಮಾಡಿದ್ದಾರೆ. ಈ ಮಾತಿಗೆ ಸಾಕ್ಷಿಯಾಗಿ ಸಂಕಲನದ ಶೀರ್ಷಿಕೆಯೂ ಆಗಿರುವ ‘ನೀಲಕುರಿಂಜಿ’ ಎಂಬ ಕಥೆಯಿದೆ. ಈ ಕಥೆ, ಭಾವನಾತ್ಮಕವಾದ ಸಂಬಂಧಗಳ ನೆಲೆಯಲ್ಲಿಯೇ ವಿವಾದಿತ ಸ್ಥಳವೊಂದರಲ್ಲಿ ಮನುಷ್ಯನು ತನ್ನ ಇರುವಿಕೆಯನ್ನು ಗುರುತಿಸಿಕೊಳ್ಳಲು ನಡೆಸುವ ನಿರಂತರವಾದ ಹೋರಾಟದ ಬಗೆ ಎಂಥದ್ದು ಎಂಬುದನ್ನು ಆರ್ದ್ರವಾಗಿ ಕಟ್ಟಿಕೊಡುತ್ತದೆ. ಇಲ್ಲಿ, ಜಾತಿಯ ಕುಲುಮೆಯ ನಿಗಿನಿಗಿ ಕೆಂಡದೊಳಗೆ ಬೇಯುತ್ತಿರುವ ಬಾಬಾ ಬುಡನಗಿರಿ ಪರ್ವತದ ಸೆರಗಿನೊಂದಿಗೆ ನಂಟನುಳಿಸಿಕೊಂಡು ಬದುಕುತ್ತಿರುವ ಹಸೀನಾ, ಹನೀಫಾ ಮತ್ತು ಕಲಂದರ- ಅಷ್ಟೇ ಇರುವ ಮುಸ್ಲಿಂ ಕುಟುಂಬವೊಂದು ಅಲ್ಲೇ ಯಾವತ್ತೋ ಜಾತಿ ವಿವಾದದ ಕಾರಣವಾಗಿ ಕಳೆದು ಹೋದ ಕಲಂದರನ ಅಪ್ಪ ಸಿದ್ಧಕಲಿಯ ಬರುವಿಕೆಗೆ ಕಾಯುತ್ತ ಕಾಲ ನೂಕುತ್ತಿರುವುದು ಮಾತ್ರ ವಿಪರ್ಯಾಸದ ಸಂಗತಿ ಎನಿಸುತ್ತದೆ.

ಒಬ್ಬಳು ನೆನಪುಗಳನ್ನು ದಾಟುತ್ತ; ಇನ್ನೊಬ್ಬಳು ನೆನಪುಗಳಲ್ಲೇ ಮಿಂದು ಹೋಗುತ್ತ- ಹೀಗೆ ತಮ್ಮ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಿದ್ಧಕಲಿಯ ಆಗಮನದ ನೆನಪಲ್ಲೇ ನಡೆಸುವ ಹೋರಾಟ ಓದುಗನ ಎದೆಯನ್ನು ಝಲ್… ಎನ್ನುವಂತೆ ಮಾಡುತ್ತದೆ. ಆದಾಗ್ಯೂ, ಪ್ರತಿ ಸಲವು ಬಾಬಾ ಬುಡನಗಿರಿಯ ಮೈಮೇಲೆ ಅರಳಿ ಘಮ ಸೂಸುವ ನೀಲಕುರಿಂಜಿ ಹೂವುಗಳನ್ನು ನಿರೀಕ್ಷಿಸುವುದಕ್ಕಷ್ಟೇ  ಅವರ ಏನೆಲ್ಲ ಬಯಕೆಗಳು ಸೀಮಿತವಾಗುವುದು, ಕಲಂದರನು ಬೇರೆ ಜಾತಿಯ ಚೆಲ್ವಿಯನ್ನು ವರಿಸಲು ಹಸೀನಾ ಮತ್ತು ಹನೀಫಾ ಒಪ್ಪಿಕೊಳ್ಳುವುದು- ಇದೆಲ್ಲ ಕಥೆಯೊಳಗೆ ಸೌಹಾರ್ದತೆಯಲ್ಲಿನ ಸುಖದ ಪರಿ ಎಂಥದ್ದು ಎಂಬುದನ್ನು ಓದುಗನ ಎದೆಗೆ ದಾಟಿಸಲೆಂಬಂತೆ ಮೂಡಿ ಬಂದಿದೆ. ಕಥೆ ಓದಿದ ಮೇಲೆ ಈ ಕಾರಣವಾಗಿಯೇ ತೀವ್ರವಾಗಿ ಕಾಡಲಾರಂಭಿಸುತ್ತದೆ.

ಹಾಗೆ ನೋಡಿದರೆ ಕಥೆಗಾರ ದಾದಾಪೀರ್ ಅವರು ಸಂಬಂಧಗಳ ಬಗ್ಗೆ ನಿಖರವಾಗಿಯೂ ತೀವ್ರವಾಗಿಯೂ ತಟ್ಟುವಂತೆ ಬರೆಯುತ್ತಾರೆ. ಈ ಮಾತಿಗೆ ಪೂರಕವಾಗಿ ಈ ಸಂಕಲನದ ‘ಎಲ್ಲೋ ಯಲ್ಲೋ…’ ಕಥೆಯನ್ನೇ ಗಮನಿಸಿ. ನಮ್ಮ ಬದುಕು ದಿಢೀರ್ ಎಂದು ಬಂದು ಆವರಿಸಿಕೊಳ್ಳುವ ಬಾಹ್ಯ ಸಂಬಂಧಗಳು ತಂದೊಡ್ಡುವ ದ್ವಂದ್ವಗಳು, ಆ ಬದುಕನ್ನೇ ಹೇಗೆಲ್ಲ ನಿಕಷಕ್ಕೊಡ್ಡುತ್ತ ಹೋಗುತ್ತವೆ ಎಂಬುದನ್ನು ಈ ಕಥೆ ವಿವರಿಸುತ್ತದೆ. ತನ್ನ ಖಾಸಗಿ ವೈವಾಹಿಕ ಬದುಕಿನ ನೋವುಗಳನ್ನು ದಾಟಿಸುತ್ತಲೇ ಕಥೆಗಾರನಿಗೆ ಹತ್ತಿರವಾಗುವ ‘ಈಶ್ವರಿ’ ಎಂಬ ಸಹದ್ಯೋಗಿಯು ಆತನಿಗೆ ಸಂಬಂಧಗಳ ಜಟಿಲತೆಯನ್ನು ಪರಿಚಯಸುತ್ತ ಹೋಗುತ್ತಾಳೆ. ಬದುಕು ಅದದೇ ನೀಡಿದ ಸಂಬಂಧಗಳ ಆಯ್ಕೆಯನ್ನು ತಮ್ಮದೇ ಸ್ವಂತದ ಆಯ್ಕೆ ಎಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯನ್ನು ಪರಿಸ್ಥಿತಿಯು ಸೃಷ್ಟಿಸುತ್ತದೆ ಎಂಬುದನ್ನು ಅರಿವಿಗೆ ತರುತ್ತದೆ. ಹಾಗೆ ನೋಡಿದರೆ, ಕಥೆಗಾರನ ಬದುಕು ಮತ್ತು ಈಶ್ವರಿಯ ಬದುಕು ವಯಸ್ಸಿನ ಅಂತರವನ್ನು ಮೀರಿ ಒಂದೇ ಹಳಿಯ ಮೇಲೆ ಬಂದು ನಿಲ್ಲುವುದಕ್ಕೂ ಸಹ ಕಥೆಗಾರನ ತಾಯಿಯನ್ನು ಆಕೆಯ ಗಂಡ ಬಿಟ್ಟು ಹೋದ ದುರಂತ ಕಥೆಯೇ ಕಾರಣ ಎಂಬುದು ಸಹ ಅಷ್ಟೇ ಸತ್ಯ. ಕಥೆ, ಸಂಬಂಧಗಳ ಆಯ್ಕೆಯ ವಿಚಾರದಲ್ಲಿ ಮನುಷ್ಯನಿಗೆ ಒದಗಿ ಬರುವ ಪರಿಸ್ಥಿತಿಯನ್ನು ಕೇಂದ್ರವಾಗಿರಿಸಿಕೊಂಡು ಇನ್ನಿಲ್ಲದಂಗೆ ಚಿಂತನೆಗೀಡು ಮಾಡುತ್ತದೆ.

ಹಾಗೆಯೇ, ಕಥೆಗಾರ ದಾದಾಪೀರ್ ಹೇಳಿಕೊಂಡಂತೆ, ‘ಕಥೆ ಎಂದರೆ ಚೌಕಟ್ಟಿನೊಳಗೆ ಸೆರೆ ಹಿಡಿದ ಬದುಕಿನ ಭಾಗ..’ ಎಂಬ ಮಾತನ್ನು ಕೇಂದ್ರವಾಗಿರಿಸಿಕೊಂಡು ನೋಡಿದಾಗ ಈ ಸಂಕಲನದ ‘ತೇರು’ ಕಥೆ ಹೆಚ್ಚು ಆಪ್ತವೆನಿಸುತ್ತದೆ. ಈ ಕಥೆಯ ಮುಖ್ಯಪಾತ್ರ ಅಮ್ಮಿಯು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದ ಪರಿಯನ್ನು ಈ ಕಥೆ ಹೇಳುತ್ತದೆ. ಜಾತಿ ಕಾರಣವಾಗಿ ಬೆಸೆದುಕೊಳ್ಳಲಾಗದ ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತ ಹೋದಂತೆ ಕಾಲಾಂತರದಲ್ಲಿ ಬದುಕಿನ ಕುರಿತಾದ ಅಭದ್ರತೆಯೂ ಸಹ ಹೇಗೆ ಹೆಚ್ಚುತ್ತ ಹೋಗುತ್ತದೆ ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ.

ಈ ಸಂಕಲನದಲ್ಲಿ ಈ ಕಥೆಗಳನ್ನು ಹೊರತುಪಡಿಸಿ ‘ಟೋಕನ್ ನಂಬರ್’, ‘ಆವರಣ’, ‘ತೀರದ ಒಲವಿನ ಒಂಟಿ ಹಾಡು’ ಮತ್ತು ‘ಆಳದಾಕಾಶದ ಪ್ರತಿಬಿಂಬ’ ಎಂಬ ನಾಲ್ಕು ಕಥೆಗಳಿದ್ದು, ಈ ಕಥೆಗಳು ತೆರೆದಿಡುವ ಲೋಕದ ಸಂಕಟಗಳು ಓದುಗನ ಎದೆಯನ್ನು ತೇವಗೊಳಿಸುತ್ತವೆ. ಪ್ರತೀ ಕಥೆಯನ್ನು ಓದಿದಾಗಲೂ ಮನಸ್ಸು ಜಡಗೊಳ್ಳುತ್ತದೆ. ನಮ್ಮದೇ ಬದುಕಿದು, ಅದೆಷ್ಟು ಜಟಿಲ ಎಂದೆನಿಸುತ್ತದೆ.

ಅಷ್ಟಾಗಿಯೂ ಇಲ್ಲಿನ ಬಹುತೇಕ ಕಥೆಗಳನ್ನು ನಾಡಿನ ಪತ್ರಿಕೆಗಳು ಏರ್ಪಡಿಸುವ ಕಥಾಸ್ಪರ್ಧೆಗಳನ್ನು ಗಮನದಲ್ಲಿರಿಸಿಕೊಂಡು ಬರೆದ ಕಥೆಗಳಾಗಿದ್ದು ಪದಗಳ ಮಿತಿಗಳಿಂದಾಗಿ ಹೇಳಲೇಬೇಕಾಗಿದ್ದ ಇನ್ನೇನನ್ನೋ ಹೇಳಲಾಗದ ಸಂದಿಗ್ಧಕ್ಕೆ ಒಳಗಾಗಿವೆ ಎಂದುಕೊಳ್ಳಬಹುದು. ಮಹತ್ವಾಕಾಂಕ್ಷೆಗೆಗೆ ಒಳಗಾಗಿ ಬರೆದ ಕಥೆಗಳು ಕಲಾತ್ಮಕತೆಯ ಕುಸುರಿ ಕೆಲಸದಿಂದ ನುಸುಳಿ ಹೋದ ಅಪಾಯವನ್ನು ಎದುರುಸುತ್ತಿರುವಂತಿದೆ. ಆದರೂ ಸಹ ಈ ಕಥೆಗಳು ವಸ್ತು, ವಿನ್ಯಾಸ ಮತ್ತು ಕಥೆ ಕಟ್ಟುವಲ್ಲಿನ ಶ್ರದ್ಧೆಯ ಕಾರಣವಾಗಿ  ದಾದಾಪೀರ್ ಅವರನ್ನು ಭವಿಷ್ಯದ ಅತ್ಯುತ್ತಮ ಕಥೆಗಾರ ಎಂಬುದನ್ನು ನಿಸ್ಸಂಶಯವಾಗಿ ಒಪ್ಪಿಕೊಳ್ಳುವಂತೆ ಮಾಡುತ್ತವೆ ಎಂಬ ಮಾತನ್ನು ತಳ್ಳಿ ಹಾಕಲಾಗದು.

‍ಲೇಖಕರು Admin

November 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: