ಕಲ್ಲೇಶಿ ಕಾರಿನೊಂದಿಗೆ ಮಾಯವಾದ!

ಸಮೃದ್ಧ ಬದುಕಿಗೆ ಸೂತ್ರಗಳು!

~ಎಸ್.ಜಿ.ಶಿವಶಂಕರ್

 

ಬೆಂಗಳೂರಿನಲ್ಲಿ ಪಾದಚಾರಿಗಳ ನಡೆಯುವ ಜಾಗವನ್ನೆಲ್ಲಾ ರಸ್ತೆಗಳು ನುಂಗಿರುವುದು ಕಂಡು ಅಚ್ಚರಿಗೊಂಡೆ! ಮತ್ತೆ ಪಾದಚಾರಿಗಳ ಗತಿ ಏನು? ಅವರೆಲ್ಲಿ ನಡೆಯುತ್ತಾರೆ ಎಂಬ ಯೋಚನೆ ಬಂತು. ಅದಕ್ಕೆ ಉತ್ತರವೂ ಎದುರಿಗೇ ಗೋಚರಿಸಿತು!

ವಾಹನ ಸಮುದ್ರದ ನಡುವೆ ಒಂದು ಕ್ಷುದ್ರ ವಾಹನದಂತೆ ಜೀವ ಕೈಯಲ್ಲಿ ಹಿಡಿದು ಕಕ್ಕಾಬಿಕ್ಕಿಯಾಗಿ ನಡೆಯುತ್ತಿರುವ ಪಾದಚಾರಿಗಳು ಕಂಡರು!

ಅವರನ್ನೇ ಅನುಕರಿಸುತ್ತಾ ನಾನೂ ರಸ್ತೆಗಿಳಿದೆ. ಯಾವ ಕ್ಷಣದಲ್ಲಿ ಯಾವ ವಾಹನ ಮೇಲೇರುವುದೋ ಎಂಬ ಆತಂಕ ಎದೆಯಲ್ಲಿ ಅವಲಕ್ಕಿ ಭತ್ತ ಕುಟ್ಟುತ್ತಿತ್ತು. ನೇರವಾಗಿ ನನ್ನ ಹಿಂದಿನಿಂದ ಜೋರಾಗಿ ಹಾರನ್ ಕೇಳಿತು. ಸಾವು ಬಂದೇಬಿಟ್ಟಿತು ಎಂದು ಗಾಬರಿಗೊಂಡಾಗ ಪಕ್ಕದಲ್ಲಿ ನಿಂತ ಕಾಲಿಸ್ ವಾಹನದ ಚಾಲಕನೊಬ್ಬ ಬಾಗಿಲು ತೆರೆದು ಬನ್ನಿ ಸಾರ್..ಬೇಗ್ನೆ ಹತ್ಕೊಳ್ಳಿಎಂದ. ನನಗೆ ಗಾಬರಿ ಇನ್ನೂ ಹೆಚ್ಚಾಯಿತು! ರಸ್ತೆಯಲ್ಲಿ ತನ್ನ ವಾಹನಕ್ಕೆ ಅಡ್ಡಿಬಂದವರೆಂದು ಈತ ನನ್ನನ್ನು ಪೋಲೀಸು ಇಲಾಖೆಗೆ ಒಪ್ಪಿಸಿಯಾನೆ ಎಂಬ ದಟ್ಟ ಅನುಮಾನ ಕಾಡಿತು!

ಅದ್ಯಾಕ್ ಅಂಗ್ ನೋಡ್ತೀರ ಸಾ… ನಾನು ನಿಮ್ಮ ಶಿಷ್ಯ ಕಲ್ಲೇಶಿ, ಗುರುತು ಸಿಗಲಿಲ್ಲವೆ? ಬೇಗ್ನೆ ಹತ್ತಿಕ್ಕೊಳ್ಳೀ ಸಾರ್, ಇಲ್ಲಾಂದ್ರೆ ಇಲ್ಲಿ ಯಾವನಾದ್ರೂ ಹಿಂದಿಂದ ಇಕ್ಕಿಬಿಡ್ತಾನೆ

ಕಲ್ಲೇಶಿ ಎಂದು ಹೇಳಿಕೊಂಡ ಆ ವ್ಯಕ್ತಿ ಸೀಟಿನ ಮೇಲೆ ಮಲಗಿ ದಂಗುಬಡಿದು ನಿಂತಿದ್ದ ನನ್ನನ್ನು ಕೈಚಾಚಿ ಒಳಗೆ ಎಳೆದುಕ್ಕೊಳ್ಳದಿದ್ದರೆ ಏನಾಗುತ್ತಿದ್ದೆನೋ ಗೊತ್ತಿಲ್ಲ!

ಸಮುದ್ರದ ಅಲೆಗಳಂತೆ ನುಗ್ಗಿ ಬರುತ್ತಿದ್ದ ವಾಹನಗಳ ನಡುವೆ ಕಲ್ಲೇಶಿ ತನ್ನ ಕಾಲಿಸ್ ಮುನ್ನಡೆಸಿದ. ಅವನು ಕಲ್ಲೇಶಿಯೇ ಎಂಬ ಅನುಮಾನದಿಂದ ನೋಡಿದೆ. ಕಲ್ಲೇಶಿಯನ್ನು ನೋಡಿ ಆಗಲೇ ಹತ್ತಾರು ವರ್ಷಗಳಾಗಿದ್ದಿರಬಹುದು. ನಾನೊಂದು ಕೇಂದ್ರಸ್ವಾಮ್ಯದ ಬೃಹತ್ ಕೈಗಾರಿಕೆಯ ವರ್ಕ್‌ಷಾಪಿನಲ್ಲಿ ಇಂಜಿನಿಯರ್ ಆಗಿದ್ದಾಗ ಕಲ್ಲೇಶಿ ಅಲ್ಲಿ ಮಷಿನ್ ಆಪರೇಟರು. ಯೂನಿಯನ್ನು, ಇಸ್ಪೀಟು, ಕುದುರೆ ಜೂಜು, ಬೆಟ್ಟಿಂಗು, ರಾಜಕೀಯ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ನನ್ನನ್ನು ಮ್ಯಾನೇಜ್ಮೆಂಟಿನ ಏಜೆಂಟೆಂದು ಹಂಗಿಸುತ್ತಿದ್ದ. ನನಗೂ ಅವನಿಗೂ ಅಷ್ಟಕ್ಕಷ್ಟೆ! ಸುಮಾರು ಸಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಹೀಗಿರುವಾಗಲೇ ಇದ್ದಕ್ಕಿದ್ದಂತೆ ಒಂದು ದಿನ ಕಲ್ಲೇಶಿ ಬೆಂಗಳೂರಿನ ಶಾಖೆಗೆ ವರ್ಗ ಮಾಡಿಸಿಕೊಂಡು ಹೋಗಿದ್ದ.

ಗರಿಗರಿಯಾದ ಕಂದು ಬಣ್ಣದ ದುಬಾರಿ ಬಟ್ಟೆಯ ಸಫಾರಿ, ಕೈಯಲ್ಲಿ ಮಜಬೂತಾದ ಚಿನ್ನದ ಬ್ರೇಸ್‌ಲೆಟ್ಟು, ಕೊರಳಲ್ಲಿ ನಾಯಿಯ ಚೈನಿನಷ್ಟು ದಪ್ಪನೆಯ ಚಿನ್ನದ ಚೈನು, ಹಣೆಯಲ್ಲಿ ಕುಂಕುಮ, ಪೂರಿಯಂತೆ ಊದಿಕೊಂಡ ಮೈಯಿನ ವ್ಯಕ್ತಿ ಕಲ್ಲೇಶಿಯೇ ಎಂದು ಗುರುತು ಹಿಡಿದೆ.

ಅದ್ಯಾಕೆ ಸಾರ್ ಹಂಗೆ ನೋಡ್ತೀರ?ಕಲ್ಲೇಶಿ ನಸುನಗುತ್ತಾ ಕೇಳಿದ.

ಎಷ್ಟೊಂದು ಬದಲಾಗಿಬಿಟ್ಟಿದ್ದೀಯ?

ನೀವು ಮಾತ್ರ ಅಂಗೇ ಒಣಗಿಕೊಂಡಂಗೇ ಇದ್ದೀರಲ್ಲ ಸಾ..?

ನಾನು ನಿನ್ನಂಗೆ ಬೆಂಗ್ಳೂರು ಸೇರಿರ್ಲಿಲ್ಲವಲ್ಲಾ ಕಲ್ಲೇಶಿ

ಗೊಳ್ಳೆಂದು ನಕ್ಕ ಕಲ್ಲೇಶಿ! ಅವನ ವಾಹನ ಚಾಲನಾ ಪ್ರಾವೀಣ್ಯತೆಯನ್ನು ಮೆಚ್ಚುಗೆಯಿಂದ ನೋಡಿದೆ.

ನಿಮ್ಮಾತು ನಿಜ ಸಾ..ಬೆಂಗ್ಳುರೊಂದು ಸೇರಿದ್ರೆ ಸಾಕು ಎಂತೆಂತೋರೋ ಎಂಗೆಂಗೋ ಆಗೋಗ್ತಾರೆ ಸಾರ್..ಈ ಊರಿನ ಗುಣ ಹಂಗದೆ

ನೀನು ಹೆಂಗಿದೀಯಾ..? ಏನ್ಮಾಡ್ತಿದ್ದೀಯಾ..? ನೋಡಿದರೆ ಚೆನ್ನಾಗೇ ಇದ್ದೀಯ..ಸರಿ ಏನ್ಮಾಕೊಂಡಿದ್ದೀಯಾ?

ದೊಡ್ಡ ಕತೆ ಸಾರ್! ಮೆಗಾ ಸೀರಿಯಲ್!

ಎಂದು ನಗುತ್ತಾ ಒಂದು ದೊಡ್ಡ ಐಷಾರಾಮಿ ಡ್ರೈವ್ ಇನ್ ಹೋಟೆಲಿನೊಳಗೆ ಕಾಲೀಸ್ ನುಗ್ಗಿಸಿದ ಕಲ್ಲೇಶಿ..

ನಂದು ಟಿಫನ್ ಆಗಿದೆ ಕಲ್ಲೇಶಿ ಎಂದು ತೊದಲಿದೆ.

ಏ ಸುಮ್ನಿರಿ ಸಾರ್! ನಿಮ್ಮ ಕತೆ ನಂಗೊತ್ತಿಲ್ಲವಾ..? ಬೆಳಿಗ್ಗೆಯಿಂದ ಖಾಲೀ ಹೊಟ್ಟೇಲಿದ್ದು, ಮಧ್ಯಾನ್ಹ ಕ್ಯಾಂಟೀನಲ್ಲಿ ಒಂದೂವರೆಗೆ ಊಟ ಮಾಡ್ತಿದ್ದೋರವಾ ನೀವು?

ಇಡ್ಲಿ, ವಡೆ, ಪೊಂಗಲ್ ಆರ್ಡರ್ ಮಾಡಿ ಕಲ್ಲೇಶಿ ತನ್ನ ಕತೆ ಹೇಳಿದ.

ಸಾಲ ಸೋಲ ಮಾಡಿ ಒಂದು ಬಾರ್ ತೆಗೆದೆ ಸಾರ್! ಅದೃಷ್ಠ ಖುಲಾಯಿಸಿತು! ದೇವರು ಕಣ್ಣು ಬಿಟ್ಟ! ಬಾರು ಸ್ವಲ್ಪ ಸ್ಟೆಬಿಲೈಸಾಯ್ತು, ರಿಯಲ್ ಎಸ್ಟೇಟ್ ಶುರು ಮಾಡಿದೆ! ಜೊತೇಗೆ ಒಂದಿಷ್ಟು ಫೈನಾನ್ಸಿಂಗು ಅಂಗೆ ಇಂಗೇಂತ ನಾಲ್ಕಾರು ಬಿಸಿನೆಸ್ ಶುರುವಾಯ್ತು! ಮನೆ ಕಟ್ಟಿಸಿ ಮಾರೋಕೂ ಶುರು ಮಾಡಿದೆ. ಒಂದೆರಡು ಹೌಸಿಂಗು ಸೊಸ್ಶೆಟಿ ಡೈರೆಕ್ಟರು ಆಗಿದೀನಿ…ಎಲ್ಲಾ ಚೆನ್ನಾಗಿ ನಡೀತಿದೆ ಸಾರ್! ದೇವರ ದಯ, ನಿಮ್ಮಂತೋರ ಆಶೀರ್ವಾದ

ಅಬ್ಬಬ್ಬಾ ಶಾನೆ ಆಯ್ತಲ್ಲ ಕಲ್ಲೇಶಿ! ಇದೆಲ್ಲಾ ಯಾವಾಗ ಮಾಡ್ತೀಯ? ಮತ್ತೆ ಕಾರ್ಖಾನೆ ಕೆಲಸ?

ಏ..ಅದನ್ನ ಬಿಡಾಕಾಯ್ತದ ಸಾರ್..! ನಾಮ್ಕಾವಸ್ತೆ ಅದೂ ಇದೆ..ಯಾವಾಗ್ಲಾದ್ರೂ ಈ ಕೆಲಸಗಳೆಲ್ಲಾ ಬೇಜಾರಾದ್ರೆ ಹೋಗ್ತೀನಿ

ಏನು? ಬೇಜಾರಾದ್ರೆ ಹೋಗ್ತೀಯಾ? ಇದ್ಕೆಲ್ಲಾ ಪರ್ಮಿಶನ್ನು?

ಏ..ಬಿಡಿ ಸಾರ್..ಎಲ್ಲಾ ನಿಮ್ಮಂಗೇ ಇರ್ತಾರ? ಎಲ್ಲಾ ಅಡ್ಜಸ್ಟ್‌ಮೆಂಟ್

ಕಲ್ಲೇಶಿ ಮಾತಿಗೆ ಗಂಟಲಲ್ಲಿ ಬೋಂಡಾ ಚೂರು ಸಿಕ್ಕಿಕೊಂಡಿತು! ಗೊರಗೊರ ಸದ್ದು ಮಾಡಿದೆ.

ಸ್ವಲ್ಪ ನೀರು ಕುಡೀರಿ ಸಾರ್! ನೀವೂ ಅಡ್ಜಸ್ಟ್ಮೆಂಟ್ ಮಾಡ್ಕೊಂಡು ಹೋಗಿದ್ರೆ ಇವತ್ತು ಇಂಗಿರ್ತಿರಲಿಲ್ಲ ಬಿಡಿ. ಶಾನೆ ಸ್ಟ್ರಿಕ್ಟು, ನೀತಿ, ನಿಯಮ ಅಂತ ಹೋಗಿದ್ದಕ್ಕೆ ನಿಮ್ಮ ಪರಿಸ್ಥಿತಿ ಇವತ್ತು ಎಂಗಾಗೈತೆ ನೋಡಿ! ನಾಲ್ಕು ಬರೋ ಕಡೆ ಎರಡು ಪ್ರಮೋಷನ್ನು ಬಂತು! ನಮ್ಮಂತೋರ ಜೊತೆ ಚೆನ್ನಾಗಿದ್ರೆ ನಾಲ್ಕಲ್ಲ ಐದು ಪ್ರಮೋಷನ್ನು ಕೊಡಿಸ್ತಿದ್ದೊ! ಈಗ್ನೋಡಿ ರಿಟೈರ್ ಆಯ್ತು! ಕಾಲ ಬದಲಾಗಿ ಹೋಗೈತೆ ಸಾರ್! ನೋಡಿ, ನಾನೂ ನಿಮ್ಮಂಕೇಲಿ ಇದ್ದು ಆ ದರಿದ್ರ ಮೆಷೀನ್ ಹಿಡ್ಕಂಡು, ಬೆಳಿಗ್ಗೆ ಎಂಟರಿಂದ ಸಂಜೆ ಐದು ಗಂಟೆತನಕ ನೀವು ಹೇಳಿದಂತೆ ಗಾಣದೆತ್ತಿನ ಹಾಗೆ ದುಡಿದಿದ್ದರೆ ಈ ಸ್ಥಿತೀಗೆ ಬರ್ತಿದ್ನಾ? ನೀವೇ ಹೇಳಿ..

ಬ್ಶೆರಿಗೆ ಹಿಡಿದ ಕಲ್ಲೇಶಿ!

ಎಲ್ಲಾರೂ ನಿನ್ನಂಗೇ ಅಗೋದ್ರೆ ನೀನು ಈ ಸ್ಥಿತೀಗೆ ಬರ್ತಿರಲಿಲ್ಲ ಕಲ್ಲೇಶಿ! ನನ್ನಂತೋರು ಹೆಚ್ಚು ಜನ ಇರೋದಕ್ಕೇ ನಿನ್ನಂತಾ ಕೆಲವರು ಈ ಸಿಸ್ಥಿತೀಗೆ ಬರೋಕೆ ಸಾಧ್ಯ

ಎಚ್ಚರಿಸಿದೆ! ಇಲ್ಲವಾದರೆ ನನ್ನನ್ನೇ ಬ್ರೈನ್ ವಾಶ್ ಮಾಡಿದರೂ ಮಾಡಿಯಾನೇ!

ಇಲ್ಲಾ ಸಾರ್ ನೀವು ಬದಲಾಗಲೇ ಬೇಕು! ಎಷ್ಟು ಕಾಲ ಹಿಂಗೇ ಇರ್ತೀರಾ? ನಿಮ್ಮ ಕಾಲವಂತೂ ಮುಗಿದೇ ಹೋಯ್ತು, ಇನ್ನು ನಿಮ್ಮ ಮಕ್ಕಳು ಮೊಮ್ಮಕ್ಕಳನ್ನ ನಿಮ್ಮ ದಾರೀಲೇ ಪಳಗಿಸಬೇಡಿ..ಅಂದಂಗೆ ಬೆಂಗ್ಳೂರಿನಲ್ಲಿ ಫ್ಲಾಟು, ಸೈಟು ಮಾಡೋ ಯೋಚನೆ ಮಾಡಿಲ್ಲವಾ? ಅಂಗೇನಾದ್ರೂ ಇದ್ರೆ ತಗಳ್ಳೀ ನನ್ನ ಕಾರ್ಡು! ನಮ್ಮ ಬಾಸು ಅನ್ನೋ ಅಭಿಮಾನಕ್ಕೆ ಖಂಡಿತವಾಗಿ ಕಡಿಮೆ ದುಡ್ಡಲ್ಲಿ ಹೆಚ್ಚು ಲಾಭ ಆಗೋ ಹಾಗೆ ಮಾಡ್ತೀನಿ

ಇಲ್ಲಾ ಕಲ್ಲೇಶಿ ಅಂತ ಯಾವ ಯೋಚನೇನೂ ಇಲ್ಲ. ವಿಶ್ರಾಂತ ಜೀವನಕ್ಕೆ ಮೈಸೂರೇ ಉತ್ತಮ. ಆಗ ಮಾಡಿಕೊಂಡ ಮನೆ ಇದೆ. ಇನ್ನು ಮಕ್ಕಳ ಬಗೆಗೆ ಯೋಚನೆ ಇಲ್ಲ. ಅವರೂ ಕೊಂಚ ಕಷ್ಟಪಟ್ಟು ದುಡೀಲಿ!

ತನ್ನ ಯಾವ ಮಾತನ್ನೂ ನಾನು ಪುರಸ್ಕರಿಸುತ್ತಿಲ್ಲ ಅನ್ನೋ ಯೋಚನೆ ಕಲ್ಲೇಶಿಗೆ ಬಂದಿರಬೇಕು.

ಪಿ.ಎಫ್, ಗ್ರಾಚುಟಿ ದುಡ್ಡಿದ್ರೆ ನನ್ನ ಫೈನಾನ್ಸ್ ಕಂಪನೀಲೆ ಡಿಪಾಜಿಟ್ ಮಾಡಿ ಸಾರ್..ಕೈತುಂಬಾ ಬಡ್ಡಿ ಕೊಡ್ತೀನಿ..ಮತ್ತೆ ಬೇಕಾದ ಅನುಕೂಲಾನೂ ಮಾಡಿಕೊಡ್ತೀನಿ…

ಕಲ್ಲೇಶಿ ಇನ್ನೊಂದು ಅಸ್ತ್ರ ಪ್ರಯೋಗಿಸಿದ.

ಕಲ್ಲೇಶಿಯ ಮಾತಿಗೆ ಮರುಳಾಗುವ ಜಾಯಮಾನ ನನ್ನದಲ್ಲ! ಹಾಗೆ ನೋಡಿದ್ರೆ ಮೈಸೂರಿನ ಕಾರ್ಖನೆಯಲ್ಲಿರುವಾಗಲೇ ಕಲ್ಲೇಶಿಯ ಸಹವಾಸದಿಂದ ಚೀಟಿ ಪಾಟಿ ಅಂತ ಸಾಕಷ್ಟು ಕಳಕೊಂಡಿದ್ದೆ! ಇರುಳು ಕಂಡ ಭಾವಿಗೆ ಹಗಲು ಬೀಳಲು ಸಾಧ್ಯವೆ?

ಅದೆಲ್ಲಾ ಏನೂ ಬೇಡ ಕಲ್ಲೇಶಿ ನಾನು ಇರೋ ಹಾಗೇ ನೆಮ್ಮದಿಯಿಂದ ಇದ್ದೀನಿ!

ಏನ್ಸಾರ್ ನೀವು ನನ್ನ ಹಳೇ ಬಾಸು, ಒಂದಿಷ್ಟು ಅನುಕೂಲ ಮಾಡಿಕೊಡೋಣ ಅಂದ್ರೆ ನೀವು ಬದಲಾಗೋದೇ ಇಲ್ಲಾಂತೀರಿ..? ಎನ್ನುತ್ತಲೇ ಜೀಬಿನಿಂದ ಮೊಬೈಲು ತೆಗೆದು ಹೇಳು ಶಿವ..ಹೂ.ಏನು ಶಾನೆ ಅರ್ಜೆಂಟಾ..? ಏನು ಸಿಎಮ್ಮು ನೋಡ್ಬೇಕಾ..? ಓ..ಅದೇ..ಹೊಸಾ ಅಪಾರ್ಟುಮೆಂಟಿನ ವಿಷಯಾನ? ಬಂದೆ ಗುರುವೆ…ಇನ್ನೇನು ಒಂದು ಹತ್ತು ನಿಮಿಷ!

ಸಾರ್ ನೀವು ಖಂಡಿತಾ ನನ್ನ Pಮಿಸಬೇಕು! ಶಾನೆ ಅರ್ಜೆಂಟು! ಸಿಎಮ್ಮು ನೋಡ್ಬೇಕು..ನೀವು ನನ್ನ ಗುರುಗಳು. ನಾನು ಇಂಗೇ ಹೋದ್ರೆ ನೀವು ಏನೂ ತಿಳ್ಕಳಲ್ಲಾ ಅಂತ ಅಂದ್ಕೊಂಡಿದ್ದೀನಿ..ಇನ್ನೊಂದ್ಸಲ ಸಿಗ್ತೀನಿ

ಅವನ ಮಾತು ಮುಗಿಯುವ ಮುಂಚೆಯೇ ನಾನು ಕಾಲೀಸ್‌ನಿಂದ ಕೆಳಗಿಳಿದಿದ್ದೆ! ಇಂತವೆಲ್ಲಾ ಹೊಸ ಅನುಭವಗಳೇ ಅಲ್ಲ!

ಕಲ್ಲೇಶಿ ಕಾರಿನೊಂದಿಗೆ ಮಾಯವಾದ!

ಹೋಟೆಲಿನ ಬಿಲ್ಲು ಕೈಗೆ ಬಂದಿತ್ತು…! ಕಲ್ಲೇಶಿಯ ಸಮೃದ್ಧ ಬದುಕಿನ ಸೂತ್ರ ಗೊತ್ತಾಗಿತ್ತು!!

 

 

 

‍ಲೇಖಕರು G

July 15, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: