ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲ್ಲೂರರ ಬಗ್ಗೆ ಹೇಳೋಕೆ ತುಂಬಾ ಇದೆ..

ಬೆಂಗಳೂರಿಗೆ ಸ್ವಾನ್, ಇಳಾ, ಲಕ್ಷ್ಮಿ ಮುದ್ರಣಾಲಯ ಹೇಗೋ ಹಾಗೆ ಮಂಗಳೂರಿಗೆ- ಆಕೃತಿ ಪ್ರಿಂಟರ್ಸ್. ಇದರ ಕನಸುಗಾರ ಕಲ್ಲೂರ್ ನಾಗೇಶ್. ಕಲ್ಲೂರ್ ನಾಗೇಶ್ ಅವರು ಹೋರಾಟದ ಹಿನ್ನೆಲೆಯಿಂದ ಎದ್ದು ಬಂದವರು. ಅವರು ಕೇವಲ ಮುದ್ರಕರಲ್ಲ, ಮುದ್ರಣ ವಿನ್ಯಾಸಕಾರ.

ಹಾಗಾಗಿಯೇ ದಕ್ಷಿಣ ಕನ್ನಡ, ಉಡುಪಿಯ ಬಹುತೇಕ ಕೃತಿಗಳು ಇವರ ಅಂಗೈನಲ್ಲಿ ಕುಲಾವಿ ಧರಿಸುತ್ತವೆ. ಇದೀಗ ಬೆಂಗಳೂರಿನಿಂದಲೂ ಕೃತಿಗಳು ಅಲ್ಲಿಗೆ ವಲಸೆ ಹೋಗುತ್ತಿದೆ ಎಂದರೆ ಕಲ್ಲೂರ್ ನಾಗೇಶ್ ಅವರ ಛಾಪನ್ನು ಊಹಿಸಿಕೊಳ್ಳಿ.

ಆ ಆಕೃತಿ ಪ್ರಿಂಟರ್ಸ್ ಕೇವಲ ಮುದ್ರಣ ತಯಾರಿಯ ಕೇಂದ್ರವಲ್ಲ, ಮಾತು ಮಥಿಸುವ ಕೇಂದ್ರ ಸಹಾ…  ಅದನ್ನೇ ಮಂಜುನಾಥ ಕಾಮತ್ ಇಲ್ಲಿ ಬರೆದಿದ್ದಾರೆ

manjunath kamath

ಮಂಜುನಾಥ ಕಾಮತ್

ನಾನೀಗ ನಾಗರ ಹಾವುಗಳನ್ನು ಕೈಯಲ್ಲಿ ಹಿಡಿಯಬಲ್ಲೆ. ಅದ್ಕೆ ಕಾರಣ ಗುರುರಾಜ ಸನಿಲರೇ ಆದರೂ, ಅವರು ಅಷ್ಟುದ್ದದ ವಿಷಪೂರಿತ ನಾಗರಾಜನನ್ನು ಕೈಗೆ ಕೊಟ್ಟಕೂಡಲೇ ಕೈಪೂರ್ತಿ ನಡುಗುತ್ತಿತ್ತು. ಹಣೆಯಲ್ಲೂ ಬೆವರು. ಆಗ ಸ್ವತಃ ಕೈಯಲ್ಲಿ ಹಿಡಿದು “ಸನಿಲೆರೆ ಉಂದು, ಈರ್ ಕೊರ್ನಿಯಾ ಬಾಲೆ ಮಾರೆ. ಅಯಿಕ್ ಬೇನೆ ಮಲ್ತಿಜಿಡ ಅವು ದಾಲ ಮಲ್ಪುಜಿ. ನರಮಾನೀಗ್ ಉಂದು ದಾನಿ ಅರ್ಥ ಆಪುಜಿ” ಎನ್ನುತ್ತಲೇ ನನಗೆ ಧೈರ್ಯ ತುಂಬಿ, ಸ್ಪೂರ್ತಿ ನೀಡಿದವರು ಸನಿಲರಿಂದಲೇ ಪರಿಚಯರಾದ ಅವರ ಗೆಳೆಯ ಕಲ್ಲೂರು ನಾಗೇಶ್.

kallur nageshಅವರು ಆಕೃತಿ ಪ್ರಿಂಟರ್ಸ್ ನ ಮಾಲಕ. ಬಾವುಟಗುಡ್ಡೆ ಗೆ ಏರುವ ರಸ್ತೆಯ ಎಡಕ್ಕೆ, ದೊಡ್ಡ ಅಪಾರ್ಟ್ ಮೆಂಟ್ ಒಂದರ ಕೆಳಮಹಡಿಯಲ್ಲಿ ಅವರ ಕಚೇರಿ. ಅದು ಕೇವಲ ಮುದ್ರಣ, ವಿನ್ಯಾಸ, ವ್ಯವಹಾರಗಳು ನಡೆಯುವ ಜಾಗವಲ್ಲ. ಅವಿಭಜಿತ ಜಿಲ್ಲೆಗಳ ಹೆಚ್ಚಿನ ಸಾಹಿತಿಗಳು ಸೇರುವ ಕಟ್ಟೆಯದು. ಅವರ ವಿಚಾರ, ಕಥೆ, ಕಾದಂಬರಿಗಳೆಲ್ಲಾ ಪುಸ್ತಕ ರೂಪ ಪಡೆಯುವ ಕೇಂದ್ರವದು.

ಬೆಂಗಳೂರು ನಮ್ಮದಲ್ಲ ಅಂತ ಜನರಿಗೆ ಅನಿಸುತ್ತಿರೋ ಹಾಗೇ ಮಂಗಳೂರೂ ನಮ್ಮದಲ್ಲ ಅಂತ ಅನಿಸಲು ಆರಂಭವಾಗಿದೆ. ಪೇಟೆಯ ಬೀದಿಗಳಲ್ಲಿ ಸಾವಿರ ಮಂದಿ ಓಡಾಡುತ್ತಿದ್ದರೂ ನಾನು ಒಂಟಿ ಅಂತಲೇ ಇಲ್ಲೂ ಅನಿಸಲು ಶುರುವಾಗಿದೆ. ಆ ಹೊತ್ತಿಗೆ ನೀವು ಒಂಟಿಯಲ್ಲ, ನಾನೂ ನಿಮ್ಮೊಂದಿಗಿದ್ದೇನೆಂದು ಕರೆಯುವ ತಂಪಿನ ತಾಣ ಆಕೃತಿಯ ಮಡಿಲು.

ಅವರ ಪ್ರವಾಸಗಳು ತುಂಬಾ ವಿಶೇಷವಾಗಿರುತ್ತವೆ. ಕಳೆದ ವರುಷ ಎತ್ತಿನ ಹೊಳೆ ಯೋಜನೆ ವಿರುದ್ಧ ಮಂಗಳೂರಿನಲ್ಲಿ ಮೊದಲ ಮುಷ್ಕರ ನಡೆದ ದಿನ ನಾಗೇಶರು ಎತ್ತಿನ ಹೊಳೆ ಹುಡುಕುತ್ತಾ ಅದರ ಮೂಲದ ಕೇ ಹೊರಟಿದ್ದರು. ನಮ್ಮನ್ನೂ ಜೊತೆಗೊಯ್ದಿದ್ದರು. ಇತ್ತೀಚೆಗೆ ನೇತ್ರಾವತಿಯ ಹುಟ್ಟನ್ನೂ ಅರಸಿ ಹೋಗಿದ್ದೆವು. ಕೊಡಚಾದ್ರಿಯನ್ನೂ ಹತ್ತಿದ್ದೆವು.

ಇದೇ ಇಪ್ಪತ್ತನೇ ತಾರೀಕಿಗೆ ಅವರು ಕೇರಳಕ್ಕೆ ಹೊರಟಿದ್ದಾರೆ. ಅಲ್ಲಿನ ಬೋಟ್ ಹೌಸಿನ ಚಂದ ನೋಡೋದಕ್ಕಲ್ಲ. ಪ್ರವಾಸೀ ಕೇಂದ್ರ, ಮಂದಿರ, ಮ್ಯೂಸಿಯಂಗಳಿಗಂತೂ ಅಲ್ಲವೇ ಅಲ್ಲ. ಕೇರಳದ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನ ಜೀವನ ಅಧ್ಯಯನ ಮಾಡಲು.

kallur nagesh cover2ಕಲ್ಲೂರು ನಾಗೇಶರು ಸ್ವತಃ ಬರಹಗಾರರು, ಅನುವಾದಕರು. ಅನೇಕ ಬರಹಗಾರರ ಬರಹಗಳ ಮೊದಲ ಓದುಗರವರು. ಕೆಲವೊಂದನ್ನು ತಿದ್ದಿದವರು. ಅಲ್ಲಮಪ್ರಭು ಪೀಠ, ಚೌಟರ ಚಾವಡಿಯಲ್ಲೂ ಅವರು ಸಕ್ರಿಯ. ಅವರ ಆಕೃತಿಗೊಮ್ಮೆ ಭೇಟಿ ನೀಡಿದರೆ ಬೆಲ್ಲ ನೀರು ಸವಿದಷ್ಟೇ ಸಂತೋಷವಾಗುತ್ತೆ. ವ್ಯವಹಾರವಿಲ್ಲವಾದರೆ ಹರಟೆಗಾಗಿಯಾದರೂ ಒಮ್ಮೆ ಅಲ್ಲಿ ಹೋಗಿ ಬನ್ನಿ.

ನಾಗೇಶರ ಜೊತೆ ಎಲ್ಲಿಗಾದರೂ ಹೊರಡೋವಾಗ ಕಾರು ಹತ್ತಿ ಇಳಿಯುವ ಈ ಎರಡು ಕ್ರಿಯೆಗಳ ನಡುವೆ ಬಹಳಷ್ಟು ಕಲಿತಿದ್ದೇನೆ.

kallur nagesh cover1ಮಾತು, ಚರ್ಚೆ, ಹಾಸ್ಯಗಳಲ್ಲಿ ಅಭಿಪ್ರಾಯ ರೂಪಿಸಬಲ್ಲಷ್ಟು ಗಟ್ಟಿತನ. ನನಗೂ ಅವರಿಗೂ ವಯಸ್ಸಿನಲ್ಲಿ ಇಪ್ಪತ್ತು ವರುಷಗಳ ಅಂತರವಿದೆ. ವಯಸ್ಸಿನ ವ್ಯತ್ಯಾಸಗಳ ನಡುವೆ ಅನುಭವದ ಮಹಾ ವ್ಯತ್ಯಾಸವೂ ನಮ್ಮಲ್ಲಿದೆ. ಹಾಗಾಗಿ ಬದುಕಿನ ವಾಸ್ತವವನ್ನು, ಕೆಲವೊಂದು ಸತ್ಯಗಳನ್ನು ಅವರ ಬಾಯಲ್ಲಿ ಕೇಳುವಾಗ ಅರಗಿಸಿಕೊಳ್ಳಲು ಸಾಧ್ಯವಾಗದೆ ಹೀಗೂ ಉಂಟೇ?? ಎಂದು ಚಕಿತನಾಗಿದ್ದೇನೆ.

ಜೋಗಿಯ ಕಥೆ ಕಾದಂಬರಿ ಅಂಕಣಗಳ ಮೂಲಕ “ಜೀವನ ಪ್ರೀತಿ” ಎಂಬ ಶಬ್ದವನ್ನು ಮೊದಲ ಬಾರಿಗೆ ಗ್ರಹಿಸಿದ್ದೆ. ಅದನ್ನು ಪ್ರಾಯೋಗಿಕವಾಗಿ, ಜೀವನ ಪ್ರೀತಿ ಅಂದ್ರೆ ಹೀಗೆ ಅಂತ ಅನುಭವಕ್ಕೆ ಬರುತ್ತಿರೋದು ಕಲ್ಲೂರು ನಾಗೇಶರು ಹಾಗೂ ಗುರುರಾಜ ಸನಿಲರ ಸ್ನೇಹದಲ್ಲಿ.

ನಾಡಿದ್ದು ಕೇರಳಕ್ಕೆ ಅವರೊಂದಿಗೆ ಹೋಗಲಾಗುತ್ತಿಲ್ಲ. ಮುಂದಿನ ಪ್ರವಾಸದಲ್ಲಿ ಅವರ ಅನುಭವಗಳನ್ನು ಕೇಳಿ ನಿಮಗೂ ಹೇಳುತ್ತೇನೆ. ಆದರೆ ಕಲ್ಲೂರರ ಬಗ್ಗೆ ಹೇಳೋಕೆ ತುಂಬಾ ಇದೆ. ಇಲ್ಲಿ ಅವರನ್ನು ಪರಿಚಯಿಸಿದೆನಷ್ಟೇ. ನಮ್ಮನ್ನು ಪ್ರಭಾವಿಸಿದ ಅವರ ವಿಚಾರಗಳನ್ನು, ಜೀವನಾನುಭವಗಳನ್ನು ಮುಂದೊಮ್ಮೆ ಹಂಚಿಕೊಳ್ತೇನೆ.

‍ಲೇಖಕರು admin

29 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading