ಕಲಾವಿದನ ಮನದ ಮಾತು

– ದಿನೇಶ್ ಕುಕ್ಕುಜಡ್ಕ

ದಿನೇಶ್ ಕುಕ್ಕುಜಡ್ಕ ಅವರ ಒ೦ದು ರೇಖಾಚಿತ್ರ ಪ್ರಕಟಿಸಿ ಅದು ’ನಿಮಗೇನು ಹೇಳುತ್ತದೆ’ ಎ೦ದು ಕೇಳಿದ್ದೆವು. ಆ ಚಿತ್ರ ಮತ್ತು ಅದಕ್ಕೆ ಬ೦ದ ಪ್ರತಿಕ್ರಿಯೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ :

ಅದನ್ನು ಓದಿ ದಿನೇಶ್ ಕುಕ್ಕುಜಡ್ಕ ಬರೆದ ಪ್ರತಿಕ್ರಿಯೆ ಇಲ್ಲಿದೆ. ಇದರಲ್ಲಿ ಅವರು ಒ೦ದು ಕೃತಿ ಹುಟ್ಟುವ ಬಗೆಯನ್ನು ಬಣ್ಣಿಸಿದ್ದಾರೆ. ಇದು ಕೇವಲ ಅವರ ಮನದಾಳದ ಮಾತಷ್ಟೇ ಅಲ್ಲ, ಎಲ್ಲ ಕಲಾವಿದರದೂ ಆದೀತು ಎ೦ದು ಇಲ್ಲಿ ಪ್ರಕಟಿಸುತ್ತಿದ್ದೇವೆ.

  ಹಿರಿಯರಿಗೆ ಈ ಪುಟ್ಟ ಕಲಾವಿದನ ವಂದನೆಗಳು. ನಿಜ ಹೇಳಬೇಕೆಂದರೆ, ನೀವು ಇಷ್ಟೆಲ್ಲಾ ಸೂಕ್ಷ್ಮಗಳನ್ನು ಹುಡುಕುತ್ತೀರೆಂಬ ಸಣ್ಣ ಕಲ್ಪನೆಯೂ ನನಗಿರಲಿಲ್ಲ! ಒಂದೊಮ್ಮೆ ಅದು ಮೊದಲೇ ಗೊತ್ತಿರುತ್ತಿದ್ದರೆ, ಸ್ವಲ್ಪ ಕಾನ್ಷಿಯಸ್ ಆಗಿಬಿಡುತ್ತಿತ್ತೋ ಏನೋ ಮನಸ್ಸು! ಸೃಜನಶೀಲ ಕೆಲಸಗಳಲ್ಲಿ ತೊಡಗಿರುವಾಗ ಹಾಗೆ ಕಾನ್ಷಿಯಸ್ ಆಗುವುದು;ಕೆಲವೊಮ್ಮೆ ಅದುವೇ ಒಂದು ಮಿತಿಯಾಗಬಹುದಾದ ಅಪಾಯವೂ ಇರಬಹುದೆನಿಸುತ್ತದೆ! ಮಿತ್ರರೇ, ಈ illustration ಗಳ ಒಟ್ಟಾರೆ ಶೈಲಿಗೆ ಸಂಬಂಧಿಸಿದಂತೆ, ಒಂದು ದೊಡ್ಡ ಗೊಂದಲದ ತುಯ್ದಾಟಕ್ಕೆ ಸಿಲುಕಿ ಹಲವು ತಿಂಗಳುಗಳೇ ನರಳಿಬಿಟ್ಟಿದ್ದೇನೆ ನಾನು.ಏನೇ ಮಾಡಿದರೂ ಇದು ಈಗಾಗಲೇ ಎಲ್ಲೋ ಯಾರೋ ಮಾಡಿಬಿಟ್ಟಂಥಾ ಶೈಲಿಯೇ ಎನ್ನಿಸಿಬಿಟ್ಟು ನನ್ನ ಗೆರೆಗಳ ಬಗ್ಗೆಯೇ ಹೇವರಿಸಿಕೊಳ್ಳುವಂತಾಗಿದ್ದು ಎಷ್ಟೋ ಸಲ! ಈ ಮಧ್ಯೆ ನಾನು ಏನೋ ಮಾಡಹೋಗಿ ಇದುವೇ ಚಿತ್ರ ಅಂದುಕೊಳ್ಳುವಷ್ಟರಲ್ಲಿ ಅದನ್ನು ಬಳಸಿಕೊಳ್ಳುವವರ ಅಸಹನೆಯ ಮರ್ಜಿಗೆ ಬೀಳಬೇಕಾದ ಸಂದರ್ಭಗಳು….ಒತ್ತಡದ ವೇಳೆಯಲ್ಲೂ ಸಂತೆಯಲ್ಲಿ ಮೂರು ಮೊಳ ನೇಯ್ದು ಗಟ್ಟಿಗನೆನಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಮೆದುಳು ಹಿಂಡಿಕೊಳ್ಳುವ ಯಾತನಾಮಯ ಕಸರತ್ತುಗಳು…. ಒಂದುರೀತಿಯ ಬುದ್ಧಿ ಜಿಗುಪ್ಸೆಗೆ ಬಿದ್ದು ನರಳುವ ಸಂದರ್ಭಗಳನ್ನೂ ಕಂಡಿದ್ದೇನೆ.ಅಂದ ಮಾತ್ರಕ್ಕೆ ಇದು ಯಾರಿಗೂ ಆಗಿರದ ಅನುಭವವೆಂದೇನಲ್ಲ. ಒಂದರ್ಥದಲ್ಲಿ ಈ ‘ವ್ಯಾಪಾರ’ವೇ ದೂರದ ಶತ್ರುವಾಗಿ ಕೃತಿಕಾರನನ್ನು ಕೊಂದುಬಿಡುವ ಸಾಧ್ಯತೆಯೂ ಇರಬಹುದೆಂದು ಒಮ್ಮೊಮ್ಮೆ ತೀವ್ರವಾಗಿ ಅನ್ನಿಸುವುದಿದೆ! ಇಷ್ಟೆಲ್ಲಾ ಸಾಂದರ್ಭಿಕ ವಿವರಗಳೇಕೆಂದರೆ, ಮೇಲಿನ ಚಿತ್ರ- ಮಗು ತಾನು ಯಾರಿಗೂ ಕಾಣಿಸಿತ್ತಿಲ್ಲವೆಂದುಕೊಂಡು ತನ್ನ ಪಾಡಿಗೆ ತಾನು ಆಟವಾಡುತ್ತಾ ಏನನ್ನೋ ಮಾಡುತ್ತಿರುತ್ತದಲ್ಲ… ಹಾಗೆ ರಚನೆಗೊಂಡಿರುವುದು! ಬಹುಷಃ ಯಾವ ಒತ್ತಡವೂ ಇದ್ದಿರಲಿಲ್ಲ ಆವತ್ತು. ಒಂದೊಮ್ಮೆ ಅದು ಚಿತ್ರವಾಗಿ ಯಶಸ್ವಿಗೊಂಡಿದ್ದರೆ, ಅದಕ್ಕೆ ಕಾರಣ- ಕಲೆಯ ಹೃದಯ ಹೊಕ್ಕಿದ ಆ ಸುಂದರ ಗಳಿಗೆಯ ಶುಭ್ರಗಾಳಿಯ ಆಹ್ಲಾದಕರ ಜೀವಂತಿಕೆಯೇ ಹೊರತು,ಈ ಅಹಂಕಾರಿ ಮನುಷ್ಯ ಕೈಗಳ ಒಣ ನೈಪುಣ್ಯತೆಯಂತೂ ಅಲ್ಲ! ಇಲ್ಲಿ ಹಿರಿಯರಿಬ್ಬರು ಹಂಚಿಕೊಂಡ ಸೂಕ್ಷ್ಮ ಒಳನೋಟಗಳು- ಕೃತಿಕಾರನಾಗಿ ನನ್ನನ್ನು ಉಲ್ಲಾಸಗೊಳಿಸಿವೆ. ಏಕೆಂದರೆ,ಚಿತ್ರದ ಶೈಲಿಯೂ ಸೇರಿದಂತೆ ಅದರ ವರ್ಣನಾವಿವರಗಳನ್ನು ಅವರಿವರಿಗೆ ಸ್ವತಃ ಕಲಾವಿದನೇ ಒಪ್ಪಿಸಿಕೊಳ್ಳುವುದಿದೆಯಲ್ಲಾ… ಅದು ಯಾವ ಕಲಾವಿದನೂ ಮಾಡಲಾಗದ ಮತ್ತು ಮಾಡಬಾರದ ಕೆಲಸವೇ! ಆ ಕಂಟಕದಿಂದ ನನ್ನನು ಪಾರು ಮಾಡಿದ ಹಿರಿಯರಿಗೆ ಧನ್ಯವಾದಗಳು!   ಇಷ್ಟಾಗಿಯೂ ಪತ್ರಿಕೆಯಲ್ಲಿ ಒಂದು ದಿನದ ಮಟ್ಟಿಗೆ ಕಾಣಿಸಿಕೊಂಡು ,ಬಳಿಕ ಕಲಾವಿದನ ವೈಯಕ್ತಿಕ ದಾಖಲೆಗಷ್ಟೇ ಸೇರಿಹೋಗಬಹುದಾಗಿದ್ದ ಈ ಚಿತ್ರವನ್ನೆತ್ತಿ ಮಡಿಲಿಗೆ ಕೂರಿಸಿಕೊಂಡು ಕೂಸಿನ ಕೊಂಡಾಟದ ವಾತ್ಸಲ್ಯ ತೋರಿಸಿದ ‘ಅವಧಿ’ಗೆ ಪ್ರೀತಿಯ ನಮಸ್ಕಾರಗಳು. – ದಿನೇಶ್ ಕುಕ್ಕುಜಡ್ಕ
]]>

‍ಲೇಖಕರು G

June 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Manjunath

    Priya Dinesh avare …
    Nimma vyangya chithragalu bahala sogasagi moodi barutha ive haagu olle punch inda koodive ,,, yaara teekegu neevu thale kedisikolluva agathyavilla. Heege ollolle cartoon haagu kalakruthigalannu moodisi nammellarannu ranjisi ..
    Inthi
    Manjunath

    ಪ್ರತಿಕ್ರಿಯೆ
  2. ರವಿ ಮುರ್ನಾಡು, ಕ್ಯಾಮರೂನ್

    ಪುಟ್ಟ ಕಲಾವಿದ ಅಂತ ಹೇಳುತ್ತ ಬೆಟ್ಟದಂಥ ಮಾತುಗಳಿಂದ ಕಲಾವಿದನ ವ್ಯವಸ್ಥೆಗೆ ಬಣ್ಣ ಹಚ್ಚಿದ್ದೀರಿ ಮಾನ್ಯ ಕುಕ್ಕುಜಡ್ಕ.
    ಇದು ಕಲಾವಿದರ ಒಳಗಿನ ಮಾತು.ನಾನಂದುಕೊಂಡ೦ತೆ ತನಗೆ ತಾನೇ ಬರೆಯುತ್ತ ಅಥವಾ ಗೀಚುತ್ತಾ ಕುಳಿತುಕೊಂಡಾಗಲೂ ಅದು ಅವನದೇ ಜಗತ್ತಾಗಿರುತ್ತವೆ. ಇಲ್ಲಿ ಯಾವುದೇ ಮರ್ಜಿಗಳು ತಿಕ್ಕಾಡುವುದಿಲ್ಲ.
    ಅವನ ನೋಟ ಅವನ ಜಗತ್ತನ್ನು ಮೀರಿ ನಿಲ್ಲುವ ಶಕ್ತಿ ಇದ್ದರೆ ಅದು ಕತ್ತಲೆಯಿಂದ ಬೆಳಕಿಗೆ ಬರುವುದು ಪ್ರಕ್ರುತ್ತಿ ನಿಯಮ. ಅದನ್ನು ನಿಮ್ಮ ಕೃತಿ ಮಾಡಿದೆ.
    ಅಲ್ಲಿ ಯಾರದೇ ಸಹಾಯ ಬೇಕಿಲ್ಲ. ತನ್ನಿಂತಾನೆ ಒಂದಿಲ್ಲೊಂದು ದಿನ ಅದು ತನ್ನ ಜಾಗವನ್ನು ಕಾಯ್ದಿರಿಸಿಕೊಳ್ಳುವುದು. ಪ್ರತಿಭೆ ಕತ್ತಲೆಯಲ್ಲಿ ಎಂದಿಗೂ ಕೂರುವುದಿಲ್ಲ.
    ಈ ಸೃಜನಶೀಲತೆ ಮಸುಕಾವುದು ಹೇಗೆ ಅಂತ ಪ್ರಶ್ನೆ ಬಂತು. ಸಮಾಜದ ಮುಖವಾಣಿಗೆ ಹಾತೊರೆದಾಗ ನಿಜತ್ವ ಸತ್ತು ಹೋಗುವುದು.
    ಮತ್ತು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಚಪ್ಪಾಳೆಗಳ ಶಬ್ದಕ್ಕೆ ಅನುಮಾನಗಳು ಬಾಧಿಸಿದಾಗ creativity ಶಕ್ತಿ ಕಳೆದುಕೊಳ್ಳುವುದು. ಅಥವಾ ಸತ್ತೆ ಹೋಗುವುದು.
    ಅಲ್ಲಿ ಮಾನವತೆಯೊಳಗಿನ ಕಲಾವಿದ ಶರೀರವಷ್ಟೇ ನೆಲದಲ್ಲಿ ಬಿಟ್ಟು ಇಲ್ಲವಾಗುವನು. ಶರೀರ ನಡೆದಾಡುವ ಹೆಣವಾಗುವುದು.
    ಕಲೆ ಜಂಜಡದ ಅವಸರದಲ್ಲಿ ಅರಳುವುದಿಲ್ಲ….ಅಥವಾ ಅರಳಿದರು ಅದು ನಾಲ್ಕು ದಿನ ಬದುಕುವುದಿಲ್ಲ.
    ನಿಮ್ಮ ಕೃತಿಯಲ್ಲಿ ಪ್ರತಿಯೊಂದು ರೇಖೆಯು ತುಂಬಾ ಆಯುಷ್ಯವನ್ನು ಪಡೆದವು . ಆಸ್ವಾಧಿಸುತ್ತಿದ್ದ೦ತೆ ಮತ್ತಷ್ಟು ಜೀವ ತುಂಬುವುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: