ಸಂತೋಷ್ ಅನಂತಪುರ
ವಿಚಾರಕ, ಚಿಂತಕ, ಸಾಧಕ ಕೃಷ್ಣನಾಥ್ ಶರ್ಮಾ ೧೯೩೪ ರಲ್ಲಿ ಕಾಶಿ ವಿದ್ಯಾ ಪೀಠದಲ್ಲಿ ವಿಶ್ವನಾಥ ಶರ್ಮ ದಂಪತಿಯ ನಾಲ್ಕು ಜನ ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದರು. ಬನಾರಸ್ ವಿಶ್ವ ವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ನಂತರದ ದಿನಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಸಮಾಜವಾದಿ ಆಂದೋಲನದಲ್ಲಿ ತೊಡಗಿಸಿಕೊಂಡರು. ಅನೇಕ ಸಂಘರ್ಷಗಳಲ್ಲಿ ಭಾಗಿಯಾಗಿ ಸೆರೆಮನೆ ವಾಸವನ್ನೂ ಅನುಭವಿಸಿದರು. ಕೆಲವು ಪತ್ರಿಕೆಯ ಸಂಪಾದನೆಯನ್ನು ಮಾಡಿದ ಅವರಿಗೆ ರಾಜಕೀಯ ಕ್ಷೇತ್ರವು ಹೆಚ್ಚು ರುಚಿಸಲಿಲ್ಲ. ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರು ” ಆರ್ಥಿಕಿ” ಎಂಬ ಅರ್ಥಶಾಸ್ತ್ರ ಸಂಬಂಧಿತ ತ್ರೈ ಮಾಸಿಕದ ಸ್ಥಾಪಕ ಸಂಪಾದಕರಾದರು. ಅವರ ಸೃಜನಾತ್ಮಕ ಬರವಣಿಗೆಗೆ ೧.೫ ಲಕ್ಷ ರೂ ಮೊತ್ತದ ‘ ಲೋಹಿಯಾ ಸಮ್ಮಾನ್’ ಪ್ರಶಸ್ತಿಯು ಇವರನ್ನು ಹುಡುಕಿಕೊಂಡು ಬಂದಿದೆ. ಕಲುಷಿತಗೊಂಡ ‘ ಸಮಾಜ’ ದ ವಿತಂಡ ‘ವಾದ’ ಗಳ ನಡುವೆ ಬೆಳ್ಳಿ ರೇಖೆಯಂತೆ ಕಾಣುವ ಅಪ್ಪಟ ಸಮಾಜವಾದಿ ಶ್ರೀ. ಕೃಷ್ಣನಾಥ್ ಜಿ ಅವರು. ಏಕಾಂತ ನಿಸರ್ಗವನ್ನು ಪ್ರೀತಿಸುವ ಈ ಏಕಾಂತ ಸಾಧಕನನ್ನು ಭೇಟಿಯಾಗುವ ಸದವಕಾಶ ಬೆಂಗಳೂರಿನ ವ್ಯಾಲೀ ಶಾಲೆಯಲ್ಲಿ ನನಗೆ ಇತ್ತೀಚೆಗೆ ದೊರಕಿತು. ಮುಂದಿನ ಮಾತುಗಳನ್ನು ನೀವು ಅವರಿಂದಲೇ ಕೇಳಿ;
“೧೯೩೪ ನ್ನು ಪ್ರಭಲ ಭೂಕಂಪಕ್ಕೂ, ಕಾಂಗ್ರೆಸ್ ಸೋಶಿಯಲಿಸ್ಟ್ ಪಾರ್ಟಿಯ ಉದಯಕ್ಕೂ ಜನರು ನೆನೆಪಿಸಿಕೊಳ್ಳುವುದರ ಜೊತೆಗೆ ನನ್ನ ಹುಟ್ಟನ್ನೂ ನೆನಪಿಸಿಕೊಳ್ಳುತ್ತಾರೆ ಎಂಬುದು ಒಂದು ಕಾಕತಾಳೀಯ ಅಷ್ಟೇ. ನನ್ನ ತಂದೆಯ ನಾಲ್ಕು ಮಕ್ಕಳಲ್ಲಿ ಕೊನೆಯವನಾಗಿ ಕಾಶಿ ವಿದ್ಯಾ ಪೀಠದಲ್ಲಿ ನಾನು ಈ ಲೋಕಕ್ಕೆ ಬಂದೆ. ತಂದೆ ಆದಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು. ಇತ್ತ ನನ್ನ ತಾಯಿ ಮತ್ತು ಅಜ್ಜಿ ನಮ್ಮನ್ನು ಸಂಭಾಲೀಸುವುದರ ಜೊತೆಗೆ ಗಂಗಾ ನದಿಯ ತಟದಲ್ಲಿದ್ದ ತುಂಡು ಭೂಮಿಯ ಕೃಷಿಯನ್ನೂ ನೋಡಿಕೊಳ್ಳಬೇಕಿತ್ತು. ಮದುವೆಯಾದ ಶುರುವಿನಲ್ಲೇ ತಂದೆಯವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದುದು ನಮ್ಮ ಆಜು ಬಾಜಿನವರಲ್ಲಿ, ಸಂಬಂಧಿಕರಲ್ಲಿ ಅಪಸ್ವರ ಏಳಲು ಕಾರಣವಾಯಿತು. ಇತ್ತ ಗಟ್ಟಿಗಿತ್ತಿ ನನ್ನ ಅಜ್ಜಿ ತಂದೆಯವರನ್ನು ಹುರಿದುಂಬಿಸಿದ್ದಲ್ಲದೆ, ಅದಾಗ ತಾನೇ ಮದುವೆಯಾಗಿ ಬಂದ ನನ್ನ ತಾಯಿಯನ್ನು, ನಂತರ ಆಕೆ ಹಡೆದ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಯಶಸ್ವಿಯಾದಳು. ಗಾಂಧೀಜಿಯವರು ಆರಂಭಿಸಿದ ಅಸಹಯೋಗ ಆಂದೋಳನದಲ್ಲಿ ನನ್ನ ತಂದೆಯವರು ಪಾಲ್ಗೊಂಡರು. ಆದರೆ ಆಂದೋಳನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಿಂದ ವಂಚಿತರಾಗಿದ್ದರು.
ಈ ಸಂಧರ್ಭದಲ್ಲಿ ಶಿವಪ್ರಸಾದ್ ಗುಪ್ತಾಜಿ ಯವರು ೧೯೧೨-೧೩ ರಲ್ಲಿ ಜಪಾನಿಗೆ ಹೋಗಿ ಬಂದು ಅಲ್ಲಿನ ಒಂದು ಸಂಸ್ಥೆಯು ನಡೆಸುತ್ತಿದ್ದ ಶಿಕ್ಷಣ ಕ್ರಮವು ಸರ್ಕಾರಿ ನಿಯಂತ್ರಣದಲ್ಲಿರದೆ ಕ್ರಾಂತಿಯನ್ನೇ ಮಾಡಿತ್ತು. ಅದು ಸರ್ಕಾರಿ ನಿಯಂತ್ರಣದಲ್ಲಿರದೆ ಯಶಸ್ವಿಯಾದದ್ದನ್ನೇ ಮಾದರಿಯಾಗಿ ಇಟ್ಟುಕೊಂಡು ಇಲ್ಲಿಯೂ ಅದೇ ತರದ ಶಿಕ್ಷಣ ಸಂಸ್ಥೆಯನ್ನು ಹೊರ ತರುವಲ್ಲಿ ಯೋಚಿಸುತ್ತಿದ್ದರು. ಅದೇ ಸಮಯಕ್ಕೆ ಗಾಂಧೀಜಿಗಿಂತಲೂ ಹಿರಿಯರಾದ, ದಾರ್ಶನಿಕ ಡಾ. ಭಗವಾನ್ ದಾಸ್ ಅವರು ಡಾ. ಎನಿ ಬೆಸೆಂಟ್ ಅವರ ಅಧ್ಯಕ್ಷತೆಯಲ್ಲಿ ೧೯ ನೇ ಶತಮಾನದ ಕೊನೆಯಲ್ಲಿ ಪ್ರಾಚೀನ ಶಾಸ್ತ್ರ ಮತ್ತು ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನವನ್ನು ಆಧಾರವಾಗಿಟ್ಟುಕೊಂಡು “ಸೆಂಟ್ರಲ್ ಹಿಂದೂ ಸ್ಕೂಲ್ ಹಾಗೂ ಸೆಂಟ್ರಲ್ ಹಿಂದೂ ಕಾಲೇಜ್” ಅನ್ನು ಪ್ರಾರಂಭಿಸಿದರು. ಅಲ್ಲಿದ್ದುಕೊಂಡೇ ತಂದೆಯವರು ಶಿಕ್ಷಣ ಪೂರೈಸಿ ಕಾಶಿ ವಿದ್ಯಾಪೀಠದಲ್ಲಿ ಶಿಕ್ಷಕರೂ ಆದರು. ಲಾಲ್ ಬಹಾದ್ದೂರ್ ಶಾಸ್ತ್ರಿ, ತೃಭುವನ್ ನಾರಾಯಣ್ ಸಿಂಗ್, ಹರಿಶ್ಚಂದ್ರ ಮೊದಲಾದವರು ಈ ವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದರು. ನಮ್ಮ ತಂದೆಯವರು ಆಚಾರ್ಯ ಕೃಪಾಲಾನಿ ನಡೆಸುತ್ತಿದ್ದ ಗಾಂಧಿ ಆಶ್ರಮದಲ್ಲಿ ಕೃಪಾಲಾನಿಯವರಿಗೆ ಜೊತೆಯಾಗಿದ್ದರು.
ಹೀಗೆ ಅಂದೋಳನಗಳು, ಸಾಹಿತ್ಯಿಕ ವೇದಿಕೆಗಳು ನನಗೆ ಸಾಮಾನ್ಯವಾಗಿದ್ದುವು. ಕಾಂಗ್ರೆಸ್ ಸೋಶಿಯಲಿಸ್ಟ್ ಪಾರ್ಟಿಯ ಫೌಂಡರ್ ಮೆಂಬರ್ ಆಚಾರ್ಯ ನರೇಂದ್ರ ದೇವ್ ಕಾಶಿ ವಿದ್ಯಾ ಪೀಠದ ಪ್ರಾಚಾರ್ಯರಾಗಿದ್ದರು. ಜಯಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ, ಅಚ್ಯುತ್ ಪಟ್ವರ್ಧನ್ ಮುಂತಾದ ಅನೇಕ ಹಿರಿಯರು ನನ್ನ ಮನೆಯ ಸದಸ್ಯರೇ ಆಗಿಬಿಟ್ಟಿದ್ದರು. ಇವರೆಲ್ಲರೂ ಕಾಶಿ ವಿಧ್ಯಾ ಪೀಠದಲ್ಲಿ ಓದುತ್ತಿದ್ದುದರಿಂದ ಮತ್ತು ನಾವೂ ಅಲ್ಲೇ ವಾಸಿಸುತ್ತಿದ್ದುದರಿಂದ ನಮ್ಮ ಮತ್ತು ಅವರ ನಡುವಿನ ಒಡನಾಟ, ಬಾಂಧವ್ಯ ಮನೆಯವರ ಹಾಗೆಯೇ ಇದ್ದಿತ್ತು. ಶಾಲೆ- ಕಾಲೇಜು ಅನ್ನು ಸೆಂಟ್ರಲ್ ಹಿಂದೂ ಸ್ಕೂಲ್ ಮತ್ತು ಕಾಲೇಜಿನಲ್ಲಿ ಉನ್ನತ ದರ್ಜೆಯಲ್ಲಿ ಪೂರೈಸಿದೆ. ನಾನು ೧೦ ನೇ ತರಗತಿಯಲ್ಲಿರುವಾಗ ಗಾಂಧೀಜಿಯ ಹತ್ಯೆಯಾಯಿತು. ಅರ್.ಎಸ್.ಎಸ್. ನ ಸದಾಶಿವ ಗೋಳ್ವಾಲ್ಕಾರ್ ಅವರು ಆ ಸಂಧರ್ಭದಲ್ಲಿ ಬನಾರಸ್ ನಲ್ಲಿ ಜನರನ್ನುದ್ದೇಶಿಸಿ ಒಂದು ಸಭೆಯನ್ನು ನಡೆಸುವವರಿದ್ದರು. ನಾವು ಒಂದಷ್ಟು ಯಂಗ್ ಸೋಶಿಯಲಿಸ್ಟ್ ಲೀಗ್ ನ ಯುವಕರು ಗೋಳ್ವಾಲ್ಕಾರ್ ಅವರನ್ನು ಆ ಸಭೆಯಲ್ಲಿ ಭಾಗವಹಿಸದಂತೆ ಪ್ರತಿಭಟಿಸಿ ಬಂಧನಕ್ಕೊಳಪಟ್ಟೆವು. ಅತೀ ಸಣ್ಣ ವಯಸ್ಸಿನ ಹುಡುಗನಾಗಿ ನನ್ನ ಮೊದಲ ಬಂಧನವು ಈ ಕಾರಣಕ್ಕೆ ನಡೆದು ಬನಾರಸ್ ಸೆಂಟ್ರಲ್ ಜೈಲ್ಗೆ ಹೋಗಿ ಬಂದೆ. ಆವಾಗ ನನ್ನ ತಂದೆಯವರು ಉತ್ತರ ಪ್ರದೇಶ್ ಕಾಂಗ್ರೆಸ್ ನ ಟ್ರೆಷರರ್ ಆಗಿದ್ದರು.
ನನ್ನ ಮೇಲೆ ಆಚಾರ್ಯ ನರೇಂದ್ರ ದೇವ್ ಅವರ ಪ್ರಭಾವ ತುಂಬಾನೆ ಆಯಿತು. ಅವರು ನೀಡಿದ ಬೌದ್ಧ ದರ್ಶನದ ಜ್ಞಾನ ಮುಂದೆ ನನಗೆ ತುಂಬಾ ಅನುಕೂಲವಾಯಿತು.. ಅವರು ಬರೆದ ‘ಬೌದ್ಧ ದರ್ಶನ’ ಮುಂದೆ ಪುಸ್ತಿಕೆಯಾಗಿ ಮುದ್ರಣಗೊಂಡು ಬಹಳ ಪ್ರಸಿದ್ಧಿ ಪಡೆಯಿತು. ನನ್ನ ಮುಂದಿನ ದಿನಗಳು, ಆಸಕ್ತಿಯು ರಾಷ್ಟ್ರೀಯ ಸ್ವಾತಂತ್ರ್ಯ, ಸಮಾಜವಾದಿ ಆಂದೋಳನ, ಬೌಧ್ಧ ದರ್ಶನ-ವಿಚಾರ, ಸಾಧನೆಗಳತ್ತ ಹರಿಯಿತು.
ನನ್ನ ಅಣ್ಣ ಡಾ. ರಂಗನಾಥ್ ೧೯೫೩ ರಲ್ಲಿ “ಸಮಾಜವಾದಿ ಯುವಕ ಸಂಘ” ದ (ನಂತರ ಅದು ” ಸಮಾಜವಾದಿ ಯುವಜನ ಸಭಾ” ಎಂದಾಯಿತು) ಪ್ರಥಮ ಫೌಂಡರ್ ಸೆಕ್ರೆಟರೀ ಯಾದರು. ಸಭೆಯಲ್ಲಿ ನಿಮ್ಮ ಕರ್ನಾಟಕದ ಜೆ.ಎಚ್. ಪಟೇಲ್, ಶಾಂತವೇರಿ ಗೋಪಾಲ್ ಗೌಡ ಅವರೂ ಇದ್ದರು. ಅಲ್ಲದೇ ಗೌಳೆ ನರಹರಿ- ಆಂದ್ರ ಪ್ರದೇಶ್, ರೇಬಿರೋಯ್- ಒಡಿಶಾ, ಲಾಳಲಿ ಮೋಹನ್ ನಿಗಮ್- ಮಧ್ಯ ಪ್ರದೇಶ, ಇನ್ನಿತರರೂ ಇದ್ದರು, ಆವಾಗ ನನಗೆ ೧೯ ರ ಹರೆಯ. ಮುಂದೆ ಎಮ್.ಎ ವಿದ್ಯಾರ್ಥಿಯಾಗಿದ್ದ ನಾನು ೧೯೫೬ ರಲ್ಲಿ ಗಾಂಧೀಜಿಯವರಿಂದ, ಸಮಾಜವಾಡದಿಂದ ಪ್ರಭಾವಿತನಾಗಿ ಕಾಶಿ ವಿಶ್ವನಾಥ ದೇವಳಕ್ಕೆ ನಾಲ್ಕು ಜನ ಹರಿಜನರನ್ನು ದರ್ಶನಕ್ಕೆಂದು ಕರೆದುಕೊಂಡು ಹೋಗಿ ಜೈಲು ವಾಸಿಯಾಗಿದ್ದೆ. ೧೯೫೭ ರ ಮೇ ೧೦ ರಂದು , ಬ್ರಿಟಿಷ್ ಸರ್ಕಾರದ ಮೂರ್ತಿಯನ್ನು ಸಾರ್ವಜನಿಕ ಸ್ಥಳದಿಂದ ತೆಗೆಯಬೇಕೆಂದೂ ಹಾಗೂ ಆಂಗ್ಲ ಭಾಷೆಯ ಪ್ರಯೋಗವನ್ನು ನಿಲ್ಲಿಸಬೇಕೆಂದೂ ಬನಾರಸ್ ವಿಕ್ಟೊರಿಯಾ ಪಾರ್ಕ್ ನಲ್ಲಿ ವಿಕ್ಟೊರಿಯಾಳ ಮೂರ್ತಿಯನ್ನು ನಾನು ಮತ್ತು ನನ್ನ ಸಂಗಡಿಗರು ಪುಡಿ ಮಾಡಿದೆವು.
ಇದಕ್ಕೆ ೧೯ ತಿಂಗಳ ಸೆರೆವಾಸ ಅನುಭವಿಸಿದೆ. ಆವಾಗ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಡಾ. ಸಂಪೂರ್ಣಾನಂದ ಅವರು ಇದ್ದರು. ಶ್ರೀಪ್ರಕಾಶ್ ಮಾಲ ರಾಜ್ಯಪಾಲರಾಗಿದ್ದವರು, ಮುಖ್ಯಮಂತ್ರೀಯವರಿಗೆ ನನ್ನ ಬಿಡುಗಡೆಯ ಬಗ್ಗೆ ಶಿಫಾರಸು ಮಾಡಿದ್ದರು. ಅದಕ್ಕೆ ಮುಖ್ಯಮಂತ್ರಿಗಳು ನೀಡಿದ ಉತ್ತರ; ” ಕೃಷ್ಣನಾಥ್ ಶರ್ಮಾ ಘಜನೀ ಮೊಹಮ್ಮದ್ ನಾದರೆ ನಾನೇನು ಮಾಡಲು ಸಾಧ್ಯ..? “ಎಂದಾಗಿತ್ತು. ಹಾಗೆ ಸೆರೆವಾಸ ಮುಂದುವರಿಸಿದ ನಾನು ಮುಂದೆ ೧೯೫೮ ರಲ್ಲಿ ಲೋಹಿಯಾ, ಕುವರ್ ಕೃಷ್ಣಪಾದ್ ಸಿಂಗ್ ಅವರನ್ನು ಲಖ್ನೊ ಜೈಲಿನಲ್ಲಿ ಒಂದೇ ಕೊಠಡಿಯಲ್ಲಿ ಇರಿಸಿದುದರಿಂದ ಅವರನ್ನು ಭೇಟಿಯಾಗಲು ಸಾಧ್ಯವಾಯಿತು.
ಸೆರೆವಾಸ ಅನುಭವಿಸಿದ ನಂತರ, ಮುಂದೆ ನಾನು ಲೋಹಿಯಾ ಅವರ ನಿರ್ದೇಶನದ ಮೇರೆಗೆ ಅಂದಿನ ಬಿಹಾರ್ ಮತ್ತು ಇಂದಿನ ಜಾರ್ಖಂಡ್ ರಾಜ್ಯದ ” ಪಲಾಮು” ಜಿಲ್ಲೆಯ ಆದಿವಾಸಿ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಲು ಹೋದೆ. ಅಂದು ಅಲ್ಲಿ ‘ಬರ’ ಮನೆಮಾಡಿತ್ತು. ನಂತರ ಒಂದಿಷ್ಟು ‘ಕೆಲಸವನ್ನು’ ಮಾಡಲು ಆದಿವಾಸಿಗಳಿಗೆ ಸರ್ಕಾರದ ಮುಖಾಂತರ ವಹಿಸಿಕೊಡಲಾಯಿತು. ಸಿಗುವಷ್ಟು ಪರಿಹಾರ ಅಲ್ಲೂ ದೊರಕದ ಕಾರಣ, ಮೊತ್ತ ಮೊದಲ ಬಾರಿಗೆ ಸ್ವಾತಂತ್ರ ಭಾರತದಲ್ಲಿ ಅಹಿಂಸಾ ಸ್ವರೂಪದ ” ಗೇರ್ ಡಾಲೊ ಆಂದೋಳನ” ವನ್ನು ” ರಾಖ್ ಪೋಲೀಸ್ ಠಾಣೆಯ” ಮೇಲೆ ನಡೆಸಿದೆವು. ‘ ವನ್ ವನ್ವಾಸಿ ಕೋ ದೋ’ ಎಂದು ಒತ್ತಾಯ ಹೇರಿ ಹೋರಾಟ ನಡೆಸಿದೆವು. ಬರ ಎಷ್ಟರ ಮಟ್ಟಿಗೆ ಆವರಿಸಿತ್ತು ಎನ್ನುವುದಕ್ಕೆ ಒಂದು ಸಣ್ಣ ಘಟನೆ ಹೇಳುತ್ತೇನೆ ಕೇಳು; ಹೀಗೆ ಆದಿವಾಸಿಗಳ ಕ್ಷೆಮಾಭಿವೃದ್ಧಿಗೆ ಹೋರಾಡುತ್ತಾ, ಒಂದು ದಿನ ನಾನು ಮತ್ತು ನನ್ನ ಸ್ನೇಹಿತ ನೀರಿಗಾಗಿ ೧೮ ಮೈಲಿ ನಡೆದೆವು ಆದರೂ ನೀರಿನ ಕುರುಹು ಸಿಗಲಿಲ್ಲ ಇನ್ನೇನು ನೀರಿಲ್ಲದೆ ಸಾಯುತ್ತೇವೆ ಎಂದಾಗ ಅಲ್ಲೇ ಒಂದು ಹುಲಿ ಹಾದು ಹೋಗಬೇಕೆ…! ಹುಲಿ ಕೂಡಾ ನೀರನ್ನು ಹುಡುಕಿಕೊಂಡು ನಾವು ಬಂದು ನಿಂತ ಸ್ಥಳದಿಂದ ಕಣ್ಣಳತೆ ದೂರದಲ್ಲಿ ಇದ್ದಿತ್ತು. ಅದು ಹೇಗೋ ಹುಲಿಯು ಮುಂದೆ ನಡೆದು ನೀರಿನ ಸಣ್ಣ ಕೊಳ್ಳವನ್ನು ಕಂಡು ತಾನು ನೀರು ಕುಡಿದು, ನಮ್ಮತ್ತ ಒಂದು ನೋಟ ಬೀರಿ ಪ್ರಾಣ ಭಿಕ್ಷೆಯನ್ನು ದಯಪಾಲಿಸಿ ಹೋಗಿತ್ತು….ನಮಗೊ ಹೋದ ಜೀವ ಬಂದಂತಾಗಿ ಅದು ಕುಡಿದು ಕದಡಿದ ನೀರಿನ ಹಳ್ಳಕ್ಕೆ ಹೋಗಿ ಬೊಗಸೆಯಲ್ಲಿ ನೀರನ್ನು ಕುಡಿದು ಅಂದು ಬದುಕಿ ಬಿಟ್ಟೆವು. ಅಂದ್ರೆ ಬರದ ತೀವ್ರತೆ ಅದೆಷ್ಟಿರಬಹುದು ಎಂದು ಅಂದಾಜು ಮಾಡಿಕೊ ! ನಂತರ ನನ್ನ ಮುಂದಿನ ಪಯಾಣವು ಹೈಡ್ರಾಬಾದ್ ಗೆ ಸಾಗಿತು. ಒಡಿಶಾದ ಅಂದಿನ ಮೆಂಬರ್ ಆಫ್ ಪಾರ್ಲಿಮೆಂಟ್ ಕಿಶನ್ ಪಟ್ನಾಯಕ್ ಸಂಪಾದಿಸುತ್ತಿದ್ದ ” ಮ್ಯಾನ್ ಕೈಂಡ್” ಎಂಬ ಪತ್ರಿಕೆಯಲ್ಲಿ ದುಡಿದೆ. ೧೯೬೦ ರಲ್ಲಿ ‘ವರ್ಲ್ಡ್ ಸತ್ಯಾಗ್ರಹ’ ಎಂಬ ಅಹಿಂಸಾ ರೂಪಿ ಆಂದೋಲನವನ್ನು ‘ಮ್ಯಾನ್ ಕೈಂಡ್ ‘ ಪತ್ರಿಕೆಯ ಮೂಲಕ ಹಮ್ಮಿಕೊಂಡಿದ್ದೆ. ಅದಕ್ಕೆ ಸ್ಪಂದಿಸಿದ ಘಾನ,ನೈಜೀರಿಯ, ಇತಿಯೋಪಿಯ, ಆಫ್ರಿಕಾ, ಅಮೇರೀಕಾ ದೇಶದ ಜನನಾಯಕರು ಈ ಆಂದೋಳನದಲ್ಲಿ ಭಾಗವಹಿಸಿದ್ದರು. ಮಾರ್ಟಿನ್ ಲೂಥರ್ ಕಿಂಗ್ ನ ಪರವಾಗಿ ಆತನ ಅನುಯಾಯಿಯು ಸುದೀರ್ಘ ಲೇಖನ ಬರೆದು ಕಳುಹಿಸಿದ್ದ.
ಹೀಗೆ ಜಾಗತಿಕ ಮಟ್ಟದಲ್ಲಿ ಆಯಾ ದೇಶದ ಜನ ನಾಯಕರು ತಮ್ಮ ದೇಶದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧವಾಗಿ ತಮ್ಮ ಅನಿಸಿಕೆಯನ್ನು, ನಿಲುವನ್ನು ಮ್ಯಾನ್ ಕೈಂಡ್ ಪತ್ರಿಕೆಯು ಆಯೋಜಿಸಿದ್ದ ‘ಜಾಗತಿಕ ಸತ್ಯಾಗ್ರಹ’ ಕ್ಕೆ ಬರೆದು ಕಳುಹಿಸಿ ತಮ್ಮ ಬೆಂಬಲವನ್ನು ಸೂಚಿಸಿ ಯಶಸ್ವಿಯನ್ನಾಗಿಸಿದರು. ಈ ನಡುವೆ ಅಣ್ಣ ಡಾ. ರಂಗನಾಥ್ ಅವರ ಆರೋಗ್ಯ ಹದಗೆಟ್ಟು ನಾನು ಬನಾರಸ್ ಗೆ ಮರಳಿ ಬಂದೆ. ಜೊತೆಗೆ ಆಂದೋಲನವೂ ಶುರುವಾಯಿತು. ಕಾಶಿ ವಿಶ್ವನಾಥ ಮಂದಿರಕ್ಕೆ ಹೋಗುವ ರಸ್ತೆಯಲ್ಲಿ ‘ ದೇಸಿ ಶರಾಬು’ ಅಂಗಡಿ ಇತ್ತು. ಅದನ್ನು ತೆಗೆಯುವತ್ತ ಅಲ್ಲಿನ ಒಂದಷ್ಟು ಜನರು ಆಂದೋಳನ ನಡೆಸಿದ್ದರು. ಅಲ್ಲಿ ನಾನು ಭಾಷಣಕಾರನಾಗಿ ಹೋಗಿ ಬಂಧಿತನಾಗಿ ೬ ತಿಂಗಳ ಕಾಲ ಜೈಲು ಸೇರಿದೆ. ಇದೆ ಸಮಯದಲ್ಲಿ ಅಂದ್ರೆ ೧೯೬೦ ರ ಹೊತ್ತಿಗೆ ಕಾಶಿ ವಿಧ್ಯಾಪೀಠದಲ್ಲಿ ಅರ್ಥ ಶಾಸ್ತ್ರ ವಿಷಯದಲ್ಲಿ ಶಿಕ್ಷಕನಾಗಿ ಸೇರಿಕೊಂಡೆ.
ಕನ್ನಡದ ನೆಲದಲ್ಲಿ ನಾವು ಮಾತನಾಡುತ್ತಿರುವ ಈ ಹೊತ್ತಲ್ಲಿ ನಿಮ್ಮ ಕನ್ನಡದವರೇ ಆದ ಕೆಲವರ ಬಗ್ಗೆ ಹೇಳುತ್ತೇನೆ ಕೇಳು; ೧೯೪೮ ರಲ್ಲಿ ಕಾಶಿ ವಿದ್ಯಾ ಪೀಠದಲ್ಲಿ ಕಲಿಯಲು ಕರ್ನಾಟಕದಿಂದ ರಾಮಕೃಷ್ಣ ಹೆಗ್ಡೆ, ಗಜಾನನ ಶರ್ಮಾ ಮತ್ತು ಭಟ್ ಜಿ ( ಅವರ ಹೆಸರು ನೆನಪಿಗೆ ಬರ್ತಾ ಇಲ್ಲ. ಅವರನ್ನು ನಾವು ಭಟ್ ಜಿ ಎಂದೇ ಕರೆಯುತ್ತಿದ್ದೆವು) ಬಂದರು. ನನಗಿಂತ ಅವರು ಹಿರಿಯರಾಗಿದ್ದರು. ಆ ಕಾಲದಲ್ಲಿ ರೈಲಿನ ಖರ್ಚನ್ನೂ ಭರಿಸುವ ಶಕ್ತಿ ಇಲ್ಲದ್ದುದರಿಂದ, ರಜೆಯ ಸಮಯದಲ್ಲಿ ಅವರು ಅಲ್ಲೇ ಕೆಲಸ ಮಾಡುತ್ತಿದ್ದರು. ನಂತರ ರಾಮಕೃಷ್ಣ ಹೆಗ್ಡೆಯವರು ಲಖ್ನೊ ವಿ.ವಿ ಯಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂ. ಎ ಮಾಡಿ, ಕಾನೂನು ಪಧವಿಯನ್ನು ಮಾಡುತ್ತಿರುವಾಗ ಅವರನ್ನು ಭೇಟಿ ಮಾಡಿದ್ದೇನೆ. ಹೆಗ್ದೆಯವರ ಕೊನೆಯ ದಿನದಲ್ಲೂ ಬೆಂಗಳೂರಿನ ಚಿತ್ರ ಕಲಾ ಪರಿಷತ್ನಲ್ಲಿ ಅವರನ್ನು ಭೇಟಿ ಮಾಡಿದ್ದೆ. ಆದಾಗಲೇ ಅವರು ಸೊರಗಿ ಹೋಗಿದ್ದರು. ಆದರೆ ಗಜಾನನ ಶರ್ಮಾ ಮತ್ತು ಭಟ್ ಜಿ ಅವರ ಸುದ್ಧಿಯೇ ಇಲ್ಲ. ಇವರಿಗೆಲ್ಲ ‘ಕೆರಂ’ ಆಟ ಬಹಳ ಇಷ್ಟವಾಗಿತ್ತು. ( ಈ ಲೇಖನ ಓದಿ ಯಾರಾದರೂ ಗಜಾನನ ಶರ್ಮ ಮತ್ತು ಭಟ್ ಜಿ ಯವರ ಬಗ್ಗೆ ಮಾಹಿತಿ ಸಿಕ್ಕಿದರೆ ಲೇಖಕರಿಗೆ ಕೊಡಬೇಕಾಗಿ ವಿನಂತಿ) .

೧೯೬೭ ರಲ್ಲಿ ‘ ಆಂಗ್ರೇಜಿ ಹಠಾವೋ’ ಆಂದೋಳನ ನಡೆಸಿದೆವು. ಅಲ್ಲಿ ನಿಮ್ಮವರೇ ಆದ ಪ್ರೊ. ಯು ಆರ್. ಅನಂತಮೂರ್ತಿ, ಒಬ್ಬ ಲೇಖಕನಾಗಿ, ಆಂಗ್ಲ ಪ್ರಾಧ್ಯಾಪಕರಾಗಿ ಅವರ ಪಾತ್ರ ಇಲ್ಲಿ ಗಮನಾರ್ಹವಾಗಿತ್ತು. ಅದೇ ರೀತಿ ಪ್ರೊ. ನಂಜುಂಡ ಸ್ವಾಮಿಯವರದ್ದು ಕೂಡ. ಹಾಗೆನೆ ಒಬ್ಬ ಕಲಾವಿದೆಯಾಗಿ ಸ್ನೇಹಲತಾ ರೆಡ್ಡಿ, ಹಿಂದಿಯ ಪ್ರಸಿದ್ಧ ಕವಿ, ಚಿಂತಕ, ‘ನಾರ್ತ್ ಕೇಂಬ್ರಿಡ್ಜ್’ ಎಂದೇ ಹೆಸರುವಾಸಿಯಾದ ಅಲಹಾಬಾದ್ ವಿ.ವಿಯ ಇಂಗ್ಲೀಷ್ ಪ್ರಾಧ್ಯಾಪಕ ವಿಜಯ್ ದೇವ್ ನಾರಾಯಣ್ ಸಾಹಿ ಮೊದಲಾದವರು ಇದ್ದರು. ಸಾಂಸ್ಕೃತಿಕ ರೂಪದಲ್ಲಿ ರಾಷ್ಟ್ರೀಯ ಅಸ್ಮಿತೆಯನ್ನು ” ಗಾಂಧಿ ಲೋಹಿಯಾ ಕೀ ಅಭಿಲಾಷಾ, ಚಲೇ ದೇಶ್ ಮೇ ದೇಸಿ ಭಾಷಾ” ಎಂಬ ಘೋಷಣೆಯೊಂದಿಗೆ ಪ್ರಾದೇಶಿಕ ಭಾಷೆಯ ಅಗತ್ಯತೆಯನ್ನು ಒತ್ತಿ ಸಾರುವ ಪ್ರಮುಖ ಆಂದೋಳನದಲ್ಲಿ ಮುಳುಗಿದ್ದೆವು. ಕರ್ನಾಟಕದ ‘ದೇಸಿ’ ಅಂಗಡಿಯ, ನಾಟಕಕಾರ ಪ್ರಸನ್ನ ಒಬ್ಬ ಮಾರ್ಕ್ಸಿಸ್ಟ್ ಆಗಿದ್ದರೂ ಈ ಭಾಷಾ ಆಂದೋಲನಕ್ಕೆ ಅವರು ಬೆಂಬಲ ನೀಡಿದ್ದರು. ಜೊತೆಗೆ ನಾಟಕಕಾರ ಬಿ.ವಿ. ಕಾರಂತ ಅವರೂ ಇದ್ದರು.
ಆವಾಗ ಹೈಡ್ರಬಾದ್ ನಿಂದ ಪ್ರಕಟವಾಗುತ್ತಿದ್ದ ‘ ಕಲ್ಪನಾ’ ಎಂಬ ಸಾಹಿತ್ಯ-ಸಾಂಸ್ಕೃತಿಕ ಮಾಸಿಕದ ಸಂಪಾದಕರಾಗಿ ಬದ್ರಿ ವಿಶಾಲ್ ಪತ್ತಿ ಇದ್ದರು. ಆ ಪತ್ರಿಕೆಗೆ ಮುಖ ಪುಟವನ್ನು ಖ್ಯಾತ ಕಲಾವಿದ ಎಮ್.ಎಫ್ ಹುಸೈನ್ ಅವರು ಮಾಡುತ್ತಿದ್ದರು. ನಂತರ ನಾನೂ ಆ ಮಾಸಿಕದ ಸಂಪಾದಕನಾದೆ. ನನ್ನ ಜೊತೆಗೆ ಬಂಗಾಳದಿಂದ ‘ಕಾಲಾಪಾನಿ’ ಯಲ್ಲಿ ಶಿಕ್ಷೆ ಅನುಭವಿಸಿದ ದಿನೇಶ್ ದಾಸ್ ಗುಪ್ತಾ, ಕೇರಳದಿಂದ ‘ಮನೋರಮಾ’ ಪತ್ರಿಕೆಯ ರಾಮುಣ್ಣಿ ಮೆನನ್ ಮನಕಲಾತ್, ಮಹಾರಾಷ್ಟ್ರದಿಂದ ಶ್ರೀಮತಿ ಇಂದುಮತಿ ಕೆಲ್ಕರ್ ಮತ್ತಿತರ ಭಾಷಾ ಲೇಖಕರು ಇದ್ದರು. ಇನ್ನೊಂದು ಸಮ್ಮೇಳನವು ೧೯೭೦ ರಲ್ಲಿ ಅಹಮದಾಬಾದ್ನಲ್ಲಾಯಿತು. ಗುಜರಾತ್ ವಿದ್ಯಾಪೀಠದ ಕುಲಪತಿ ಠಾಕುರ್ ಭಾಯಿ ದೇಸಾಯಿ ನಮ್ಮನ್ನುದ್ದೇಶಿಸಿ ಮಾತನಾಡಿದ್ರು. ಜ್ನಾನಪೀಠ ವಿಜೇತ ಉಮಾಶಂಕರ್ ಜೋಶಿಯವರು ಈ ಸಮ್ಮೇಳನದಲ್ಲಿ ಪಾಲ್ಗೊಂಡರು. ಈ ಸಮ್ಮೇಳನಕ್ಕೆ ಮೊರಾರ್ಜಿ ದೇಸಾಯಿ ಅವರು ಸಹಾಯ ಮಾಡಿದ್ರು. ನಂತರ ಈ ಆಂದೋಲನವನ್ನು ಗುಜರಾತಿನ ತುಲಸಿ ಭೊಡಾ ಅವರಿಗೆ ವಹಿಸಿ ನಾನು ಕಾಶಿ ವಿದ್ಯಾ ಪಿಠಕ್ಕೆ ಮರಳಿ ಬಂದೆ.
ಹಾಂ…ಇನ್ನೊಂದು ಘಟನೆ ನೆನಪಿಗೆ ಬಂತು, ದೆಹಲಿಯಲ್ಲಿ ಮಧು ದಂಡವತೆಯವರ ಕೊಠಡಿಯಲ್ಲಿ ನಾನು ಮತ್ತು ಮಧು ಜಿ ಅವರು ಕುಳಿತು ಮಾತನಾಡುತ್ತಿದ್ದಾಗ ಒಂದು ಫೋನ್ ಕರೆ ದಂಡವತೆಯವರಿಗೆ ಬಂತು. ಅತ್ತಲಿಂದ ಏನು ಹೇಳಿದರೆಂದು ಅರಿಯದೆ ನಾನು ಪಿಳಿ ಪಿಳಿ ಕಣ್ಣು ಮಿಟುಕಿಸುತ್ತಿದ್ದೆ. ಫೋನ್ ಇಟ್ಟವರೆ, ಕೃಷ್ಣನಾಥ್ ಜಿ ನಡಿಯಿರಿ, ನಿಮ್ಮ ಇಬ್ಬರು ಕರ್ನಾಟಕದ ಸಮಾಜವಾದಿ ಸ್ನೇಹಿತರು ಅಪಘಾತಕ್ಕೀಡಾಗಿದ್ದಾರೆ ಎಂದು ತುಸು ಸಿಟ್ಟಿನಿಂದಲೇ ಆಸ್ಪತ್ರೆಗೆ ಹೊರಟೆವು. ನೋಡಿದರೆ ನಮ್ಮ ಜೆ. ಎಚ್. ಪಟೇಲ್ ಹಾಗೂ ಜಾರ್ಜ್..! ಅವರಿಬ್ಬರು ಸ್ಕೂಟರ್ ನಲ್ಲಿ ಜಾಲಿ ರೈಡನ್ನು ಮಾಡಿ ಅಪಘಾತಕ್ಕೆ ಸಿಲುಕಿದ್ದರು. ಆಸ್ಪತ್ರೆಗೆ ಬಂದವರೇ, ಮಧು ದಂಡವತೆಯವರು ಅವರಿಬ್ಬರಿಗೆ ಚೆನ್ನಾಗಿ ಬೆಂಡೆತ್ಟಿದ್ದು ಇನ್ನೂ ನೆನಪಿದೆ. ಆವಾಗ ಅವರ ಮಗ ಮಹಿಮಾ ಪಟೇಲ್ ನೂ ದೆಹಲಿಯಲ್ಲಿದ್ದರು ಎಂದು ನನ್ನ ನೆನಪು.
ಮತ್ತೊಂದು ಘಟನೆ ಹೀಗಿದೆ; ಜಾರ್ಜ್ ಒಬ್ಬ ಅಪ್ಪಟ ಸಮಾಜವಾದಿಯಾಗಿದ್ದು, ತನ್ನ ರಾಜಕೀಯದ ಕೊನೆಯ ದಿನಗಳಲ್ಲಿ ಭಾ.ಜ.ಪ. ನೇತ್ರತ್ವದ ಎನ್. ಡಿ. ಎ. ಒಕ್ಕೂಟದ ಸರ್ಕಾರದಲ್ಲಿ ಶಾಮೀಲಾದುದು ಅವರಿಗೆ ತುಂಬಾ ನೋವಿನ ವಿಷಯವಾಗಿತ್ತು. ಅವರು ಹಾಸಿಗೆ ಹಿಡಿದಾಗ ನನ್ನನ್ನು ಅವರ ಮನೆಗೆ ಕರೆಯಿಸಿಕೊಂಡು ಅದನ್ನು ಹೇಳಿದ್ದರು ಕೂಡ. ಅವರ ನೆತ್ತಿಯಲ್ಲಿ ರಕ್ತ ಹೆಪ್ಪುಗಟ್ಟಿದ್ದನ್ನು ನನ್ನ ಕೈಯನ್ನು ಎಳೆದು ಅದರ ಮೇಲಿಟ್ಟು ತೋರಿಸುತ್ತಾ ಹಾಗೆ ಸ್ವಲ್ಪ ಹೊತ್ತು ಸವರುತ್ತಾ ಇರಿ ಎಂದು ಹೇಳಿ ಒಂದು ದೀರ್ಘ ನಿಟ್ಟುಸೀರನ್ನು ಎಳೆದಿದ್ದರು. ಹ್ಮೂ….. ಏನೇ ಅಂದರು ಅವರೊಬ್ಬ ನಿಜವಾದ ಸಮಾಜವಾದಿ, ಭ್ರಷ್ಟನಂತೂ ಖಂಡಿತಾ ಅಲ್ಲ.
ವೈಚಾರಿಕ ಆಧಾರದ ಮೇಲೆ ಒಕ್ಕೂಟ ಸರ್ಕಾರವು ರಾಜ್ಯ ಮತ್ತು ದೇಶವನ್ನು ಮುನ್ನಡೆಸಬೇಕೆಂಬುದು ನನ್ನ ನಿಲುವಾಗಿತ್ತು. ಅದು ಸಮಾಜದಲ್ಲಿ ಇರಬಹುದು ಅಥವಾ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇರಬಹುದು ಕೊಡು ಕೊಳ್ಳುವಿಕೆಯ ಅಗತ್ಯ ಬಹಳಷ್ಟಿದೆ ಎಂಬುದು ನನ್ನ ಅಭಿಮತ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವೆಲ್ಲ ಒಂದಾಗಿದ್ದೆವು. ರಾಜಕೀಯ ಪಲ್ಲಟಗಳು ದೇಶದ ಸ್ಥಿತಿ ಗತಿಯನ್ನು ತೋರಿಸುವಂತಿತ್ತು. ಇಂದಿರಾ ಗಾಂಧಿಯ ಹವಾ ತುಂಬಾ ಜೋರಾಗಿದ್ದ ಸಮಯವದು. ಅಂದು ನಮ್ಮನ್ನು ಮುನ್ನಡೆಸಿದವರು ಮಧು ದಂಡವತೆ, ರಾಜ್ ನಾರಾಯಣ್ ಮುಂತಾದ ವೈಚಾರಿಕರು. ಕಾಂಗ್ರೆಸ್ ಸರ್ಕಾರ ಮತ್ತು ನೆಹರು- ಗಾಂಧಿ ಪರಿವಾರದ ಅಧಿಪತ್ಯವನ್ನು ಕೊನೆಗೊಳಿಸಲು ಒಕ್ಕೂಟ ಸರ್ಕಾರದ ಅಗತ್ಯವಿದೆ ಮತ್ತು ಅದು ರಾಜ್ಯದಿಂದಲೇ ಶುರುವಾಗಬೇಕು ಎಂಬುದು ನಮ್ಮ ಆಲೋಚನೆಯಾಗಿತ್ತು. ಅದರಂತೆ ೧೯೭೪ ರಲ್ಲಿ ಒಕ್ಕೂಟ ಸರ್ಕಾರವು ಉತ್ತರ ಪ್ರದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಿತು.
ಆಗ ‘ಅಮ್ರುತಸರ್’ ನಿಂದ ‘ಹೌರ’ ಗೆ ‘ ಪಂಜಾಬ್ ಮೈಲ್’ ರೈಲು ಸಂಚರಿಸುತಿತ್ತು. ಅದು ಸಂಚರಿಸಿ ತಲಪುವ ಹಾಗೂ ಅಕ್ಕ ಪಕ್ಕದ ಅಷ್ಟೂ ರಾಜ್ಯಗಳಲ್ಲಿ ಒಕ್ಕೂಟ ಸರ್ಕಾರವಿತ್ತು. ಅಂದ್ರೆ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್, ಬಂಗಾಲದಲ್ಲಿ ಒಕ್ಕೂಟ ಸರ್ಕಾರವು ರಾಜ್ಯಭಾರ ಮಾಡುತ್ತಿತ್ತು. ಹಾಗಾಗಿ ಚುಟುಕಿನಲ್ಲಿ ಈ ಒಕ್ಕೂಟ ಸರ್ಕಾರಕ್ಕೆ ‘ಪಂಜಾಬ್ ಮೈಲ್’ ಎಂದು ನಾವು ಕರೆಯುತ್ತಿದ್ದೆವು. ಮುಂದೆ ನಾನು ಜೆ.ಪಿ. ಆಂದೋಲನದಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದೆ. ಹಿಂದೆ ಅವರು ನಮ್ಮ ಮನೆ ಕಾಶಿ ವಿದ್ಯಾಪೀಠದಲ್ಲೇ ಇದ್ದವರು. ಹಾಗಾಗಿ ಕೊಂಚ ಸಲುಗೆ ಅವರ ಬಳಿ ನನಗೆ ಇತ್ತು. ಒಂದು ದಿನದ ಸಭೆಯ ಬಳಿಕ ನಾನು ಮತ್ತು ಅವರು ನಡೆದಾಡುತ್ತಿರಬೇಕಾದರೆ ಅವರೊಂದು ಘಟನೆಯನ್ನು ನೆನೆಸಿಕೊಂಡು ನನಗೆ ಹೇಳಿದರು; “ಒಡಿಶಾದ ಮುಖ್ಯಮಂತ್ರಿ ಶ್ರೀಮತಿ. ನಂದಿನಿ ಶತ್ಪತಿ ಅವರು ಚುನಾವಣೆಗೆ ೩೦ ಲಕ್ಷ ರೂ. ಗಳನ್ನು ಖರ್ಚು ಮಾಡಿದ ವಿಷಯವನ್ನು ನಾನು ಇಂದಿರಾ ಗಾಂಧಿಗೆ ಹೇಳಿದೆ. ಅದಕ್ಕೆ ಆಕೆ … ಅಷ್ಟು ದುಡ್ಡು ಆಕೆಯ ಬಳಿ ಹೇಗೆ ಬಂತು..? ಎಂದು ಆಶ್ಚರ್ಯದಿಂದ ಕೇಳಿದರು ” ಎಂದರು.
ಮುಂದೆ ಒಕ್ಕೂಟ ಸರ್ಕಾರದ ವಿಚಾರವಾಗಿ, ಶಿಮ್ಲಾದ ರಾಷ್ಟ್ರಪತಿ ನಿವಾಸದ ಆಮಂತ್ರಣದ ಮೇರೆಗೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸೇಡ್ ಸ್ಟಡೀಸ್ ನಲ್ಲಿ ‘”ಯು.ಪಿ. ಎಕ್ಸ್‌ಪೆರಿಮೆಂಟ್ “ ಎಂಬ ವಿಷಯವಾಗಿ ಪೇಪರ್ ಪ್ರೆಸೆಂಟೇಶನ್ ನೀಡಿದೆ. ಜೊತೆಗೆ ದೆಹಲಿ ವಿ ವಿ ಯ ಪ್ರಾಧ್ಯಾಪಕ ಕರುನಾಕರನ್, ‘ಸ್ಟೇಟ್‌ಸ್ಮೆನ್’ ಪತ್ರಿಕೆಯ ಸಂಪಾದಕ ಪ್ರಾನ್ ಚೊಪ್ರ, ‘ವ್ಯೂ ಪಾಯಂಟ್’ ಪತ್ರಿಕೆಯ ಸಂಪಾದಕ ದೇವ್ ದತ್ತಾ ಇದ್ದರು. ಎಡ ಚಿಂತಕರಾದ ಕರುನಾಕರನ್ ನ ಒಲವು ರಾಜ್ಯ ಮಟ್ಟದ ಒಕ್ಕೂಟ ಸರ್ಕಾರಕ್ಕೆ ಮಾತ್ರ ಇದ್ದಿತ್ತು. ಅದೇ ರೀತಿ ಪ್ರಾನ್ ಚೊಪ್ರ ಅವರ ಒಲವು ರಾಜ್ಯಕ್ಕೆ ಮಾತ್ರ ಇದ್ದು ಕೇಂದ್ರದಲ್ಲಿ ಒಕ್ಕೂಟ ಸರ್ಕಾರದ ರಚನೆಗೆ ವಿರೋಧವಿತ್ತು. ದೇವ್ ದತ್ತ ಅವರ ನಿಲುವು ೫೦-೫೦ ಆಗಿತ್ತು. ನನ್ನ ಅಭಿಮತವು ರಾಜ್ಯದಲ್ಲಿ ನಡೆದ ಒಕ್ಕೂಟ ಸರ್ಕಾರದ ಪ್ರಯೋಗವು ಕೇಂದ್ರದಲ್ಲೂ ಆಗಿ ಎಲ್ಲರೂ ಎಲ್ಲಾ ವಿಧದಲ್ಲೂ ಭಾಗಿಯಾಗಬೇಕೆಂಬುದು ನನ್ನ ಕನಸಾಗಿತ್ತು.
೧೯೭೪ ರಲ್ಲಿ ಪ್ರತಾಪ್ ಗಡ್ ನ ‘ಸಯಿ’ ನದಿ ತಟದಲ್ಲಿ ‘ ವಿಪಶನ’ ಶಿಬಿರವನ್ನು ಸತ್ಯನಾರಾಯಣ ಗೋಯಾಂಕ ಅವರು ಆಯೋಜಿಸಿದ್ದರು. ಹಿಂದೆ ಓದುತ್ತಿರಬೇಕಾದರೆ ಆಚಾರ್ಯ ನರೇಂದ್ರ ದೇವ್ ಅವರ ” ಬೌದ್ಧ ದರ್ಶನ ” ದಿಂದ ಪ್ರಭಾವಿತನಾಗಿದ್ದ ನಾನು, ಈ ಶಿಬಿರಕ್ಕೆ ಸೇರಿಕೊಂಡೆ. ವಿಪಶನ ಅಂದ್ರೆ Seeing things from within, ನಮ್ಮೊಳಗನ್ನು ಇದ್ದ ಹಾಗೆ ಕಾಣುವುದು ಎಂದರ್ಥ. ಇದು ನನ್ನ ಬದುಕಿಗೆ ಹೊಸ ಅರ್ಥವನ್ನು ಕಲ್ಪಿಸಿಕೊಟ್ಟಿತು. ೧೯೭೪ ರಲ್ಲಿ ಪರಮ ಪೂಜ್ಯ ದಲಾಯಿ ಲಾಮಾ ಅವರ ಭೇಟಿಯಾಗಿ ಬೌದ್ಧ ದರ್ಶನದಿಂದ ಸಾಕಷ್ಟು ಪ್ರಭಾವಿತನಾಗಿದ್ದೆ ನಾನು ದೀಕ್ಷೆ ನೀಡಲು ಅವರ ಬಳಿ ಕೇಳಿಕೊಂಡೆ. ಅದಕ್ಕವರು ನನ್ನನ್ನು ದರ್ಮಶಾಲೆ ಗೆ ಕರೆದುಕೊಂಡು ಹೋಗಿ ಬೌದ್ಧ ದೀಕ್ಷೆ ನೀಡಿದರು. ಅದೇ ಸಮಯಕ್ಕೆ ರಾಜ್ ಘಾಟ್ ನಲ್ಲಿ ಜಿಡ್ದು ಕೃಷ್ಣಮೂರ್ತಿಯವರು ಬಂದಿದ್ದರು. ಅವರಿಗೆ ಬೌದ್ಧ ಚಿಂತಕರೊಡನೆ ಮಾತುಕತೆ ನಡೆಸಬೇಕೆಂಬ ಇಚ್ಛೆಯಾಗಿ ಅವರ ಅನುಯಾಯಿ ಅಚ್ಯುತ ಪತ್ವರ್ಧನ್ ಅವರು ವಿಪಶನ ಶಿಬಿರದಲ್ಲಿ ಭಾಗವಹಿಸಲು ಬಂದ ಬೌದ್ಧ ಚಿಂತಕರನ್ನು ರಾಜ್ ಘಾಟ್ ಗೆ ಕರೆಯಿಸಿಕೊಂಡರು. ಅವರಲ್ಲಿ ನಾನು ಒಬ್ಬನಾಗಿದ್ದೆ. ಹಾಗೆ ನವೆಂಬರ್ ೧೯೭೪ ರಲ್ಲಿ, ರಾಜ್ ಘಾಟ್ ನ ಅಸೆಂಬ್ಲಿ ಹಾಲ್ ನಲ್ಲಿ ಮೊದಲ ಬಾರಿಗೆ ಜಿದ್ದು ಕೃಷ್ಣಮೂರ್ತಿಯವರ ಭೇಟಿ ಹಾಗೂ ದರ್ಶನ ನನಗಾಯಿತು.
ಮುಂದೆ ನನ್ನ ಮತ್ತು ಅವರ ನಡುವಿನ ಸಂಬಂಧ ಜೆ.ಕೆ ಯವರ ಸಾವಿನ ವರೆಗೂ ನಡೆಯಿತು. ಜೆ.ಕೆ ಯವರು ನನ್ನನ್ನು ಕೃಷ್ಣಮೂರ್ತಿ ಫೌಂಡೇಶನ್ ಆಫ್ ಇಂಡಿಯಾದ (ಕೆ.ಎಫ್.ಐ) ಸದಸ್ಯಾನನ್ನಾಗಿಯೂ ಮಾಡಿದರು. ೧೯೮೪ ರಲ್ಲಿ ಜೆ.ಕೆ ನಮ್ಮನ್ನಗಲಿದರು. ೧೯೮೬ ರಿಂದ ಇಂದಿನವರೆಗೆ ಕೆ. ಎಪ್ಫ್. ಐ ಯ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಮ್ಮ ಮತ್ತು ಅವರ ನಡುವಿನ ಚರ್ಚೆಗಳಲ್ಲಿ ಮತಬೇಧವಿತ್ತು ಹಾಗಿದ್ದೂ ನಾವಿಬ್ಬರು ಪರಸ್ಪರ ಗೌರವ ಆದರಗಳಿಂದ ನಮ್ಮ ನಮ್ಮ ಅಭಿಪ್ರಾಯವನ್ನು ಮಂಡಿಸುತ್ತಿದ್ದೆವು. ೮೦ ರ ದಶಕದಲ್ಲಿ ಅವರಿಗೆ ಸಾವಿನ ಸೂಚನೆ ಇತ್ತೆನೋ ಅಂತ ಅನ್ನಿಸುತ್ತಿತ್ತು. ಅದನ್ನು ಅವರು ಪರೀಕ್ಷಿಸಲು ಬಯಸುತ್ತಿದ್ದರು. ಆದ್ದರಿಂದ ಅವರು ನಮ್ಮ ಬಳಿ Actually what does Budda say on death….? ಬುದ್ಧ ಸಾವಿನ ಬಗ್ಗೆ ಏನು ಹೇಳುತ್ತಿದ್ದ ಎಂದು ಪದೇ ಪದೇ ಕೇಳುತ್ತಿದ್ದರು. ಮುಂದಿನ ದಿನಗಳಲ್ಲಿ ನನ್ನ ಮತ್ತು ಕೆ. ಎಫ್.ಐ ನ ಸಂಬಂಧವು ಹೆಚ್ಚು ಹೆಚ್ಚು ಗಟ್ಟಿಯಾಗುತ್ತಾ ಬಂತು. ‘ಪರಿಸಂವಾದ್’ ಎಂಬ ತ್ರೈ ಮಾಸಿಕವನ್ನು ಹುಟ್ಟು ಹಾಕಿ ಅದಕ್ಕೆ ಸಂಪಾದಕನಾಗಿ ಸತತ ೨೫ ವರ್ಷಗಳ ಕಾಲ ಜೆ.ಕೆ. ವಿಚಾರಗಳನ್ನು ಪ್ರಚಾರ ಮಾಡಿದೆ. ಇದರ ಮೊದಲ ಪ್ರತಿ ೧೯೮೬ ಫೆಬ್ರವರಿಯಲ್ಲಿ ರಾಜ್ ಘಾಟ್ ನಿಂದ ಮುದ್ರಣಗೊಂಡಿತು.
೧೯೯೪ ರಲ್ಲಿ ಕಾಶಿ ವಿದ್ಯಾ ಪೀಠದಿಂದ ನಿವೃತ್ತನಾದೆ. ನಂತರದ ದಿನಗಳನ್ನು ಅಲ್ಲೇ ಇದ್ದ ಕೆ.ಎಫ್.ಐ ಯಲ್ಲಿ ಕಳೆಯುತ್ತಿದ್ದೆ. ಸಂಚಾರವೂ ಜೊತೆಯಲ್ಲಿ ಇರುತ್ತಿತ್ತು. ನನ್ನದೊಂದು, ಮಡದಿ- ಮಕ್ಕಳಿಲ್ಲದ ಒಂಟಿ ಜೀವ. ೧೯೮೮ ರಲ್ಲಿ ಮಹಾರಾಷ್ಟ್ರದಲ್ಲಿ ವೈದ್ಯರಾಗಿದ್ದ ಡಾ. ಇನಾಂಡಾರ್ ಅವರು ಆಚ್ಯುತ ಪಟ್ ವರ್ಧನ್ ಅವರ ಕರೆಗೆ ಓಗೊಟ್ಟು ರಾಜ್ ಘಾಟ್ ಗೆ ಸಂಸಾರ ಸಮೇತರಾಗಿ ಬಂದಿದ್ದರು. ಅವರಿಬ್ಬರ ಮಕ್ಕಳು ಕೂಡ ಮದನಪಳ್ಳಿಯ ಋಷಿ ವ್ಯಾಲೀ ಶಾಲೆಯಲ್ಲಿ ಓದುತ್ತಿದ್ದರು. ಹಾಗೆ ಬಂದ ಅವರ ಪರಿಚಯ ನನಗಾಗಿ, ಮುಂದೆ ೧೯೯೨ ರಲ್ಲಿ ಚೆನ್ನೈ ನಲ್ಲಿ ಆಯೋಜಿಸಿದ ಒಂದು ಮೀಟಿಂಗ್ ಗೆ ನಾನು ಮತ್ತು ಡಾ. ಇನಾಂಡಾರ್ ದಂಪತಿ ಬಂದೆವು. ಅದೇ ಸಮಯದಲ್ಲಿ ಬೆಂಗಳೂರಿನ ವ್ಯಾಲೀ ಶಾಲೆಯಲ್ಲಿ ಅನಂತ ಸ್ವಾಮಿ – ಕಬೀರ್ ಅವರಿಂದ ಸಮಸ್ಯೆ ಉಲ್ಬಣಗೊಂಡು ಶಾಲೆ ಅತಂತ್ರ ಸ್ಥಿತಿಯಲ್ಲಿತ್ತು. ಸಮಸ್ಯೆಗೆ ಪರಿಹಾರವಾಗಿ ಡಾ. ಇನಾಂಡಾರ್ ಅವರನ್ನು ಬೆಂಗಳೂರು ವ್ಯಾಲೀ ಶಾಲೆಯ ನಿರ್ದೇಶಕರನ್ನಾಗಿ ಮಾಡಿದೆವು. ಆರಂಭದ ದಿನಗಳಲ್ಲಿ ಬೇಕಾಗುವ ನೈತಿಕ ಬೆಂಬಲಕ್ಕಾಗಿ, ಆಚ್ಯುತ್ ಪಟ್ವರ್ಧನ್ ಅವರ ವಿನಂತೀಯ ಮೇರೆಗೆ ನಾನೂ ಡಾ. ಇನಾಂದಾರ್ ಅವರ ಜೊತೆಯಲ್ಲಿ, ಬೆಂಗಳೂರು ವ್ಯಾಲೀ ಶಾಲೆಗೆ ಬಂದೆ. ಅದು ವ್ಯಾಲೀ ಶಾಲೆಗೆ ನನ್ನ ಮೊದಲ ಭೇಟಿ. ಅಂದಿನಿಂದ ಇಂದಿನವರೆಗೂ ನಾನು ಇಲ್ಲಿಗೆ ಬಂದು ಹೋಗಿ ಮಾಡುತ್ತಿದ್ದೇನೆ. ಒಟ್ಟಿನಲ್ಲಿ ನನ್ನ ಜೀವನದ ಪ್ರಮುಖ ಮೂರು ಘಟನೆಗಳು ನಡೆದದ್ದು ೧೯೭೪ ರಲ್ಲಿ; ೧) ವಿಪಶನ ಶಿಬಿರಕ್ಕೆ ಸೇರಿದ್ದು ೨) ಪರಮ ಪೂಜ್ಯ ದಲಾಯಿ ಲಾಮಾ ಅವರ ಭೇಟಿ ೩) ಜಿದ್ದು ಕೃಷ್ಣಮೂರ್ತಿಯವರತಹ ದಾರ್ಶನಿಕನ ಭೇಟಿ.
ಬೆಂಗಳೂರು-ದೆಹಲಿ-ಸಾರನಾಥ್- ಬನಾರಸ್ ಅಂತ ನನ್ನ ತಿರುಗಾಟ. ಬೆಂಗಳೂರಿಗೆ ಬಂದ್ರೆ ವ್ಯಾಲೀ ಶಾಲೆಯಲ್ಲಿ ಉಳಿದುಕೊಳ್ಳುತ್ತೇನೆ, ದೆಹಲಿಯಲ್ಲಿ ನನ್ನ ಅಣ್ಣನ ಮಗ ಪ್ರೊ. ಆನಂದ್ ಕುಮಾರ್ ಜವಾಹರಲಾಲ್ ನೆಹರು ವೀವಿ ಯಲ್ಲಿ ಸಮಾಜಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕನಾಗಿದ್ದಾನೆ, ಅವನ ಜೊತೆ ಉಳಿಯುತ್ತೇನೆ. ಸಾರಾನಾಥ್ ನಲ್ಲಿ ನನ್ನ ಇನ್ನೊಬ್ಬ ಅಣ್ಣನ ಮಗನ ಆಶ್ರಮವಿದೆ ಅಲ್ಲಿ ಉಳಿದುಕೊಳ್ಳುತ್ತೇನೆ. ಬನಾರಸ್ ನಲ್ಲಿ ಹೇಗೂ ನನ್ನ ಪೂರ್ವಿಕರ ಮನೆಯಿದೆ, ಅಲ್ಲಿ ಉಳಿದುಕೊಳ್ಳುತ್ತೇನೆ. ೧೯೬೧ -೨೦೧೧ ರ ವರೆಗೆ ಹಿಮಾಲಯ ಚಾರಣ ಮಾಡಿದ್ದೇನೆ. ೧೯೮೧ ರಲ್ಲಿ ೮೦ ದಿನಗಳ ಜಾಗತಿಕ ಪ್ರವಾಸವನ್ನು ಕೈಗೊಂಡು, ” ಪೃಥ್ವಿ ಪರಿಕ್ರಮ” ಎಂಬ ಪುಸ್ತಕವನ್ನು ಬರೆದೆ. ಹಾಗೆ ನನ್ನ ಪ್ರವಾಸದ ಕುರಿತಾಗಿ ಹೊರ ಬಂದ ಇತರ ಪುಸ್ತಕಗಳು ಹೀಗಿವೆ; ಲಡಾಕ್ ಮೇ ರಾಗ್ ವಿರಾಗ್, ಕಿನ್ನರ್ ಧರ್ಮ ಲೊಕ್,ಸ್ಪಿತಿ ಮೇ ಬಾರೀಶ್, ಹಿಮಾಲಾಯ್ ಕೆ ಯಾತ್ರಾ, ನಯೆ ಜಿವನ್ ದರ್ಶನ್ ಕೀ ಸಂಭಾವನಾ… ಅವುಗಳಲ್ಲಿ ಪ್ರಮುಖವಾದುವು.
ಕೆಲವು ಚುಟುಕು ಪ್ರಶ್ನೆಗೆ ಚುಟುಕು ಉತ್ತರಗಳು:
೧) ಇಂದಿನ ಯುವ ಪೀಳಿಗೆಗೆ ನಿಮ್ಮ ಹಿತ ನುಡಿ ?
ವಿದ್ಯೆಯುಳ್ಳವರಾಗಿ, ಉತ್ತಮ ಆಚರಣೆಯನ್ನು ಆಚರಿಸುವವರಾಗಿ.
೨) ಇಂದಿನ ರಾಜಕೀಯದ ಬಗ್ಗೆ ನಿಮ್ಮ ಅಭಿಪ್ರಾಯ ?
ಸಮಾಜವಾದ, ಸ್ವಾತಂತ್ರವಾಡದ ಕನಸು ನುಚ್ಚು ನೂರಾಗಿದೆ. ನಿತೀಶ್ ಕುಮಾರ್ ಬಗ್ಗೆ ಕೊಂಚ ಭರವಸೆ ಇದೆ. ಇದೊಂದು ‘ಪರಿವಾರದ ದೇಶ’. ಪಾರಂಪರ್ಯವನ್ನು ವಿರೋಧಿಸುತ್ತಿದ್ದರೂ, ಉತ್ತರ ಪ್ರದೇಶದಲ್ಲಿ ವಿದ್ಯಾವಂತ ಯುವಕನೊಬ್ಬನಿಗೆ ನಾಯಕನ ಪಟ್ಟ ದೊರಕಿದ್ದು ಸಮಾಧಾನಕರ ವಿಷಯ.
೩) ಕರ್ನಾಟಕದ ರಾಜಕೀಯದಲ್ಲಿ ಸಮಾಜವಾದ, ಸಮಾಜವಾದಿಗಳು ನಿಮ್ಮ ದೃಷ್ಟಿಯಲ್ಲಿ ಇದ್ದಾರೆಯೇ..?
ಪ್ರಸಕ್ತ ರಾಜಕೀಯದಲ್ಲಿ ಸಮಾಜವಾದವಿಲ್ಲ, ರಾಜಕೀಯದಲ್ಲಿ ಹೇಳಿಕೊಳ್ಳುವಂತಹ ಸಮಾಜವಾದಿಗಳೂ ಈಗ ಇಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲವು ಸಮಾಜವಾದಿಗಳಿದ್ದಾರೆ. ಇಲ್ಲಿನ ರಾಜಕೀಯದಲ್ಲಿ ಸಾಕಷ್ಟು ಹೆಸರು ಗಳಿಸಿದ ಸಮಾಜವಾದಿಗಳಿದ್ದರು. ಶಾಂತವೇರಿ ಗೋಪಾಲ್ ಗೌಡ, ಜೆ,ಎಚ್.ಪಟೆಲ್, ರಾಮಕೃಷ್ಣ ಹೆಗ್ಡೆ, ಜಾರ್ಜ್ ಫೇರ್‌ನಾಂಡಿಸ್ ಮುಂತಾದವರು. ಆದರೆ ಕರ್ನಾಟಕದ ಸಮಾಜವಾದವನ್ನು, ಸಮಾಜವಾದಿ ಪಕ್ಷವನ್ನು ‘ಸಾರಾಯಿ’ ಕುಡಿದು ಹಾಕಿತು ಎಂಬುದು ಮಾತ್ರ ಅತೀ ಖೇದದ ವಿಷಯ.
೪) ಮತ್ತೆ ಈ ದೇಶದಲ್ಲಿ ಸಮಾಜವಾದದ ಭವಿಷ್ಯ..?
ಸಮಾಜವಾದವು ಮತ್ತೆ ಫೀನಿಕ್ಸ್‌ನಂತೆ ಎದ್ದು ಬರಲಿದೆ. ಸಮತಾ/ ಸ್ವಾತಂತ್ರತಾ/ ಜನ ತಂತ್ರ / ಆಹಿಂಸಿಕ್ ಪ್ರತಿಕಾರ್ ಗಳು ಈ ದೇಶದ ಮಣ್ಣಲ್ಲಿ ಮತ್ತೆ ಜನ್ಮ ತಾಳಿ ಬರಲಿದೆ ಮತ್ತು ಬರಲಿ ಎನ್ನುವುದೇ ನನ್ನ ಕನಸು “.







Wonderful article Santosh
uttama mahithipurna lekhana.