ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕರ್ನಾಟಕದಲ್ಲೆಷ್ಟು ಕರ್ನಾಟಕಗಳು…’ – ಜಯಶ್ರೀ ಬಿ

ಹೀಗೆ ಒಂದು ಲಹರಿ

ಜಯಶ್ರೀ ಬಿ ಕದ್ರಿ

ಅದೋ ಅಲ್ಲಿ ಗಾಳಿಗೆ ಕಂಪಿಸುತ್ತಿರುವ ಚಿಗುರೆಲೆಗಳು, ವಿಶಾಲವಾದ ಅರಳಿ ಮರ. ಬೀದಿಯಲ್ಲಿ ಬುಟ್ಟಿಗಳಲ್ಲಿ ಅರಳುತ್ತಿರುವ ದುಂಡುಮಲ್ಲಿಗೆ ಮೊಗ್ಗುಗಳು. ಅಲ್ಲಲ್ಲಿ ಕಾಣುವ ಹೊಲಗಳಲ್ಲಿ ಕೆಂಪಗೆ ತೊನೆಯುವ ಟೊಮೆಟೊ ಗಿಡಗಳು, ಹಸಿರುಮೆಣಸಿನಕಾಯಿ ಗಿಡಗಳು. ದಾರಿಗಡ್ಡಲಾಗಿ ಬರುವ ರಾಸುಗಳು. ಕುರಿಮಂದೆಯನ್ನು ಹೊಡೆದುಕೊಂಡು ಹೋಗುವ ಹಳ್ಳಿಗರು. ಗಗನದಲ್ಲಿ ಎತ್ತರೆತ್ತರಕ್ಕೆ ಹಾರುತ್ತಿರುವ ಬೆಳ್ಳಕ್ಕಿಗಳು. ಹಸಿರು ಹೊಲಗಳ ನಡುವೆ ನಗುವ ಚೆಂಡು ಹೂಗಳು. ಹಸಿನೆಲಗಡಲೆ, ಪಪ್ಪಾಯಿ, ಹಲಸಿನ ಹಣ್ಣು ಮಾರುವ ತಳ್ಳು ಗಾಡಿಗಳು. ಮರುಗ, ಪಚ್ಚೆತೆನೆ, ಮೊಲ್ಲೆ ಹೂ ಮುಡಿದ ಹೆಣ್ಣು ಮಕ್ಕಳು. ಮೈಸೂರಿಗಷ್ಟೇ ವಿಶಿಷ್ಟವಾದ ಕರಿಮಣ್ಣಿನ ವಾಸನೆ, ಶಾಂತವಾದ ಜೀವನ ಶೈಲಿ, ಅಷ್ಟೇ ನಿಧಾನವಾಗಿ ಮಾತನಾಡುವ ಗತಿ. ಬೆಳಗಿನ ಜಾವದಲ್ಲಿ ಚುರುಕು ಮುಟ್ಟಿಸುವ ಕುಳಿರ್ಗಾಳಿ. ದಾರಿಯುದ್ದಕ್ಕೂ ಹೊಲದಿಂದ ನೇರವಾಗಿ ತಂದು ಹುರುಳಿಕಾಯಿ, ಮೂಲಂಗಿ , ಬೀಟ್ ರೂಟ್ ಎಂದೆಲ್ಲ ಮಾರುವ ಹಳ್ಳಿಗರು. ಇವೆಲ್ಲ ಮೈಸೂರೆಂಬ ತಣ್ಣನೆಯ ನಗರ ಮಂಗಳೂರೆಂಬ ಬಿಸಿ ನಗರದಿಂದ ಬಂದ ನನ್ನಲ್ಲಿ ಸ್ಫುರಿಸುವ ಭಾವಗಳು.

ಕರಾವಳಿಯೆಂಬ ಮಳೆಗಾಲ, ಸೆಕೆಗಾಲವೆಂಬ ಎರಡೇ ಕಾಲಗಳಿರುವ ಊರಿನಿಂದ ಬಂದ ನನಗೆ ಮೈಸೂರಿನ ತಣ್ಣನೆ ಹವೆ, ನಿಧಾನವಾಗಿ ಮೈ ಮುರಿದು ಆರಂಭವಾಗುವ ದಿನ ವಿಶೇಷವೇ. ಇಲ್ಲೇ ಇದ್ದುಬಿಡೋಣ ಎನಿಸುವಂತೆ ಕರೆಯುವ ಎತ್ತರದ ಮರಗಳು, ಉದುರಿಬಿದ್ದ ಹೂವುಗಳು, ಪಾರಿಜಾತದ ಮೊಗ್ಗುಗಳು. ಬಹುಶ ಇಂಡಿಯಾ ಬಿಟ್ಟು ಅಮೆರಿಕಾಕ್ಕೋ ಇಂಗ್ಲೆಂಡಿಗೋ ಹೋದವರಿಗೂ ಹೀಗೆಯೇ ಅನ್ನಿಸುತ್ತಿರಬೇಕು. ಭಾರತದ ಕೊಳಕು, ಭ್ರಷ್ಟಾಚಾರ, ಬಡತನ ಇಲ್ಲದ ಸಂಪನ್ನ ಜೀವನ ಯಾರಿಗೆ ಬೇಡ? ಅದಕ್ಕೇ ಫéಾರಿನ್ ನಲ್ಲಿರುವವರು ಬಂದಾಗ ಅವರ ಲಕಲಕಿಸುವ ಬೆಳ್ಳನೆಯ ಚರ್ಮ, ಉಚ್ಛಾರ ನೋಡಿ ನಾವು ಬೆರಗಾಗುವುದು.
ಒಂದು ದೇಶದೊಳಗೆಯೇ ಇಷ್ಟು ವಿಭಿನ್ನತೆಗಳಿರುವಾಗ ಖಂಡಾಂತರಗಳಲ್ಲಿ ವ್ಯತ್ಯಾಸವಿಲ್ಲದಿದ್ದೀತೆ? ಈ ವ್ಯತ್ಯಾಸ ಮೊನ್ನೆ ತಾನೇ ನನಗೆ ಢಾಳಾಗಿ ಗೋಚರವಾಯಿತು. ಮಂಗಳೂರಿನವರೆಂದು ಗೊತ್ತಾದ ಕೂಡಲೇ ಶಿವರಾಮ ಕಾರಂತರ ಭಾಷೆಯಲ್ಲಿಯೇ ನಮ್ಮೊಂದಿಗೆ ವ್ಯವಹರಿಸುವಾಗ, ನಿಮ್ಮ ಊರಿನಲ್ಲಿ ಅದೆಷ್ಟು ದೈವಗಳು, ನಿಜವಾಗಿಯೂ ಭೂತಕ್ಕೆ ‘ದರ್ಶನ’ ಬರುತ್ತದೆಯೇ ಎಂದು ಕೇಳುವಾಗ, ಅತ್ಯಂತ ಸಜ್ಜನ ಪ್ರೊಫೆಸರ್ ಕೂಡ ‘ಟೆಕ್ಸ್ಟ್ ಬುಕ್ ಹಂಗೆ ಮಾತಾಡ್ತಿ ಕಣಮ್ಮ’ ಎಂದು ಹೇಳುವಾಗ ‘ಬೇರೆ’ ಎಂದೆನ್ಸಿಕೊಳ್ಳುವ ಭಾವ ಛಳಕ್ಕೆನಿಸುತ್ತದೆ. ಇದೇ ಸಂಧರ್ಭ ಮಣಿಪುರದ ಹುಡುಗ ಹುಡುಗಿಯರನ್ನು ‘ಚಿಂಕಿಸ್’ ಎಂದೂ, ಕೇರಳದ ಹುಡುಗ ಹುಡುಗಿಯರನ್ನು ‘ಮಲ್ಲೂಸ್’ ಎಂದೂ ಬ್ರಾಂಡ್ ಮಾಡಿದವರು ನಾವೇ ಅಲ್ಲವೇ ಎಂಬ ಜ್ನಾನೋದಯ. ಒಟ್ಟಿನ ಮೇಲೆ ಭಾಷೆ, ದೇಶ, ಬಣ್ಣ, ಪ್ರದೇಶ ಇವುಗಳ ಮಿತಿಯನ್ನು ಮೀರುವುದು ಸುಲಭವಿಲ್ಲ ಎಂದು ಖಚಿತ.
 

‍ಲೇಖಕರು G

27 March, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading