ಡಾ. ಪಾರ್ವತಿ ಜಿ.ಐತಾಳ್ / ಕುಂದಾಪುರ
‘ಕಸೂತಿಯಾದ ನೆನಪು’ ಪ್ರಸಿದ್ಧ ಲೇಖಕಿ ಎಂ.ಆರ್. ಕಮಲಾ ಅವರ ಲಘು ಪ್ರಬಂಧಗಳ ಸಂಕಲನ. ಪ್ರಬಂಧಗಳೆಂದು ಅವರೇ ಹೇಳಿಕೊಂಡಿದ್ದಾರಾದರೂ ಇಲ್ಲಿರುವುದು ಅವರ ಸಮೃದ್ಧ ಜೀವನಾನುಭವದ ಮೂಸೆಯಲ್ಲಿ ಎರಕಗೊಂಡಿರುವ ಹದಪಾಕದ ಸ್ವಗತಗಳು. ಇದನ್ನು ಬರೆದಿದ್ದು ಒಬ್ಬ ಹೆಣ್ಣು ಅನ್ನುವುದಕ್ಕೆ ಒಳಪುಟಗಳಲ್ಲಿ ಅಡಿಗಡಿಗೂ ಸಾಕ್ಷಿಗಳಿವೆಯಾದರೂ ಅವೆಲ್ಲವನ್ನೂ ಮೀರಿದ ಶೀರ್ಷಿಕೆ ಇಲ್ಲಿದೆ. ಕಸೂತಿಯ ಕಲಾತ್ಮಕತೆ ಲಾಗಾಯ್ತಿನಿಂದಲೂ ಹೆಣ್ಣಿನ ಹೆಸರಿನೊಂದಿಗೆ ಸೇರಿಕೊಂಡದ್ದು. ಬಹಳ ಎಚ್ಚರಿಕೆಯಿಂದ ಹೆಣ್ಣಿನ ಮೃದುವಾದ ಕೈಗಳಲ್ಲಷ್ಟೇ ಮೂಡುವ ಸುಂದರ ಕಲೆ ಕಸೂತಿ. ಈ ಸಂಕಲನದಲ್ಲಿ ಲೇಖಕಿ ತಮ್ಮ ಇದುವರೆಗಿನ ಅನುಭವ, ಅನ್ನಿಸಿಕೆ, ಆಲೋಚನೆಗಳ ಎಳೆಗಳನ್ನು ಬಳಸಿ ವಿವಿಧ ವಿನ್ಯಾಸಗಳಲ್ಲಿ ಕಸೂತಿ ಬಿಡಿಸಿದ್ದಾರೆ.
‘ಕಸೂತಿಯಾದ ನೆನಪಿ’ನಲ್ಲಿ ಒಟ್ಟು 51 ಲೇಖನಗಳಿವೆ. ಪ್ರತಿಯೊಂದದು ಲೇಖನದಲ್ಲೂ ಲೇಖಕಿ ಕಾಲಗತಿಯಲ್ಲಿ ಹಿಂದಕ್ಕೆ ಚಲಿಸುತ್ತ ನಿಧಾನವಾಗಿ ವರ್ತಮಾನಕ್ಕೆ ಬರುತ್ತಾರೆ. ಇಳಿವಯಸ್ಸಿನೊಂದಿಗೆ ಪಕ್ವಗೊಂಡಿರುವ ಅವರ ಚಿಂತನೆಗಳು ಗತ ಚರಿತ್ರೆಯ ಘಟನೆಗಳನ್ನು ಹೊಸ ದೃಷ್ಟಿಯಿಂದ ನೋಡುತ್ತ ಹೊಸ ಅರ್ಥಸಾಧ್ಯತೆಗಳ ಹುಡುಕಾಟದಲ್ಲಿ ತೊಡಗುತ್ತವೆ. ಮೊದಲ ಲೇಖನದಲ್ಲಿ ‘ಮನೆಯೆಂದರೆ ಯಾವುದು?’ ಎಂಬ ಜಿಜ್ಞಾಸೆಯೊಂದಿಗೆ ಅದಕ್ಕೆ ಹೊಂದುವ ಸನ್ನಿವೇಶವನ್ನು ಸೃಷ್ಟಿಸುತ್ತ ತಮ್ಮ ಹುಟ್ಟೂರ ಮನೆಯ ಒಳ-ಹೊರಗುಗಳು, ಬಾಲ್ಯದಲ್ಲಿ ಆಡಿ ಬೆಳೆದ ಅಂಗಣ, ಮತ್ತು ಒಡನಾಡಿಗಳ ಕಡೆಗೆ ಹೊರಳಿ ಕ್ರಮೇಣ ತವರು ಮನೆಯ ಸೆಳೆತದಿಂದ ಬಿಡಿಸಿಕೊಳ್ಳಲಾಗದ ಹೆಣ್ಣುಮಕ್ಕಳ ಮನಸ್ಥಿತಿಯತ್ತ ಹೋಗಿ, ಕೊನೆಯಲ್ಲಿ ಕುವೆಂಪು ಅವರ ‘ಆಗು ನೀ ಅನಿಕೇತನ’ವೆಂಬ ಆಧ್ಯಾತ್ಮಿಕ ಚಿಂತನೆಯ ಶಿಖರವನ್ನೇರುತ್ತದೆ.
’ಗೋಡೆಗಳಿಲ್ಲದ ಬದುಕು’ ಹಳ್ಳಿಯ ಜನಪದರ ಮುಗ್ಧ ಜೀವನ ಕ್ರಮದ ತೆರೆದ ಮನಸ್ಸುಗಳನ್ನು ಲೇಖಕಿ ತಮ್ಮದೇ ಮನೆಯ ವಾತಾವರಣದ ಮೂಲಕ ಚಿತ್ರಿಸುತ್ತಾರೆ. ಇಂತಹ ಪಾರದರ್ಶಕ ಬದುಕು ಮನುಷ್ಯ ಜಗತ್ತಿನ ಸ್ವಾಸ್ಥ್ಯವನ್ನು ಉಳಿಸಬಲ್ಲದು ಎಂದು ಪ್ರತಿಪಾದಿಸುವ ಲೇಖನವು ಇಂಗ್ಲಿಷ್ ಕವಿ ರಾಬರ್ಟ್ ಫ್ರಾಸ್ಟನ ‘ಮೆಂಡಿಂಗ್ ವಾಲೆ’ ಎಂಬ ಕವನವನ್ನು ನೆನಪಿಸುತ್ತದೆ. ಚಿಕ್ಕದೊಂದು ಕೋಣೆಯಾಗಿದ್ದರೂ ಚಿಕ್ಕಮನೆಯೆಂದೇ ಕರೆಯಲ್ಪಡುತ್ತಿದ್ದ ಒಂದು ಕೋಣೆಯು ಹಳ್ಳಿಯ ಮನೆಯೊಂದರಲ್ಲಿನ ಬದುಕಿನ ವಿಶ್ವರೂಪವನ್ನು ತೋರಿಸುತ್ತದೆ. ‘ಕಿಟಿಕಿಯಗಲದಾಕಾಶ’ ಫ್ರಾನ್ಸ್ ದೇಶದ ಹಳ್ಳಿಯೊಂದರ ಮನೆಗಳ ಕಿಟಿಕಿಗಳ ಅಂದ ಚಂದ ವಿನ್ಯಾಸ ವೈವಿಧ್ಯಗಳನ್ನು ಚಿತ್ರಿಸುವ ಮೂಲಕ ಆರಂಭವಾಗಿ ಮತ್ತೆ ಹುಟ್ಟೂರ ಮನೆಗಳ ಕಿಟಿಕಿಗಳತ್ತ ಜಾರಿ ಮೂಲ ಉದ್ದೇಶವಾದ ಗಾಳಿ ಬೆಳಕುಗಳು ಮಾತ್ರವಲ್ಲದೆ ನೂರಾರು ವಿಭಿನ್ನ ರೀತಿಗಳಲ್ಲಿ ಕಿಟಿಕಿಗಳು ಹೇಗೆ ಉಪಯೋಗವಾಗುತ್ತವೆ ಎಂಬುದನ್ನು ನವಿರಾದ ಹಾಸ್ಯದ ಮೂಲಕ ವರ್ಣಿಸುತ್ತ ಆಫ್ರಿಕನ್-ಅಮೆರಿಕನ್ ಹೆಣ್ಣು ಮಕ್ಕಳ ಅಸಹಾಯಕ ಸ್ಥಿತಿಯಲ್ಲಿ ಕಿಟಿಕಿಗಳು ಹೇಗೆ ಸಾಂತ್ವನವೀಯುವ ರೂಪಕಳಾಗಿ ಬರಬಹುದು ಎಂಬುದನ್ನು ಸೂಚಿಸುತ್ತದೆ.

ಹಿಂದೆ ‘ಗೋಕುಲಾಷ್ಟಮಿ’ ಎಂದು ಜನಪದರು ಕರೆಯುತ್ತಿದ್ದ, ಆದರೆ ಇವತ್ತಿನ ಆಧುನಿಕ ಜಗತ್ತಿನಲ್ಲಿ ‘ಕೃಷ್ಣ ಜನ್ಮಾಷ್ಟಮಿ’ ಎಂದು ರೂಪಾಂತರ ಹೊಂದಿರುವ ಹಬ್ಬದ ಬಗ್ಗೆ ಇಲ್ಲಿ ಒಂದು ಲೇಖನವಿದೆ. ಹಳ್ಳಿಯಲ್ಲಿ ಆ ಹಬ್ಬವನ್ನು ಹೇಗೆ ಆಚರಿಸುತ್ತಿದ್ದರೆಂದು ಹೇಳುತ್ತ ಕೃಷ್ಣನ ಅಸೀಮ ವ್ಯಕ್ತಿತ್ವವನ್ನು ವರ್ಣಿಸುತ್ತ, ಜೀವನದಲ್ಲಿ ನಿರಂತರವಾಗಿ ಬರುವ ಕಷ್ಟ-ಸಂಕಟಗಳನ್ನು ಎದುರಿಸುವ ಸ್ತ್ರೀಕುಲಕೋಟಿಗೆ ಸಾಂತ್ವನದ ತಂಗಾಳಿಯಾಗಿ ಬರುವ ‘ಕೃಷ್ಣಶಕ್ತಿಗೆ ‘ ತಲೆಬಾಗುತ್ತಾರೆ. ಹಾಗೆಯೇ ನಿಸರ್ಗದ ಬಗ್ಗೆ ಮೃದು ಧೋರಣೆಯನ್ನು ತಾಳಿದ ಲೇಖಕಿ ಹೂವು-ಹಣ್ಣು-ಗಿಡ-ಮರಗಳನ್ನು ಕಡೆಗಣಿಸುವ ಸಂವೇದನಾ ಶೂನ್ಯ ಮನಸ್ಸುಗಳ ಬಗ್ಗೆ ನೊಂದುಕೊಳ್ಳುತ್ತ ರೊಮ್ಯಾಂಟಿಕ್ ಕವಿ ವರ್ಡ್ಸ್ ವರ್ತ್ ನ ಥದೇ ಧ್ವಿನಿಯುಳ್ಳ ಕವಿತೆಗಳ ಸಾಲುಗಳನ್ನು ನೆನಪಿಸಿಕೊಳ್ಳುತ್ತಾರೆ.
ಲೇಖಕಿಯ ಭಾವುಕತೆಗೆ ಇನ್ನೊಂದು ಉದಾಹರಣೆಯೆಂದರೆ ಹಲವು ಲೇಖನಗಳಲ್ಲಿ ಹಲವು ಸನ್ನಿವೇಶಗಳಲ್ಲಿ ಅವರು ನೆನಪಿಸಿಕೊಳ್ಳುವ ಚಿತ್ರಗೀತೆಯ ಸಾಲುಗಳು. ಹಿಂದೆ ರೇಡಿಯೋದಲ್ಲಿ ಬರುವ ಸಿನಿಮಾಗಳಲ್ಲಿ ನೋಡುವ ಹಾಡುಗಳಷಗಟೇ ಮನರಂಜನೆಯ ಸಾಧನಗಳಾಗಿದ್ದ ಕಾಲದಲ್ಲಿ ಜನಪ್ರಿಯ ಚಿತ್ರಗೀತೆಗಳನ್ನು ಸದಾ ಗುನುಗುವ ಹುಚ್ಚಿದ್ದ ಹದಿಹರೆಯದ ಮನಸ್ಸುಗಳ ಮನಸ್ಸುಗಳನ್ನು ಚಿತ್ರಿಸುವುದರೊಂದಿಗೆ ಇಷ್ಟು ದೀರ್ಘಕಾಲ ಹಸಿರಾಗಿ ಉಳಿದ ನೆನಪುಗಳನ್ನು ಲೇಖಕಿ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಒಂದು ರೀತಿಯಿಂದ ನೋಡಿದರೆ ಈ ಇಡೀ ಕೃತಿಯಲ್ಲಿ ರೊಮ್ಯಾಂಟಿಕ್ ಕಾವ್ಯದ ಗುಣ ಬಹಳಷ್ಟು ಇದೆ. ನಿಸರ್ಗ ಪ್ರೀತಿ ಮಾತ್ರವಲ್ಲದೆ ಹಳೆಯ, ಅದರಲ್ಲೂ ಮುಖ್ಯವಾಗಿ ಬಾಲ್ಯದ ನೆನಪುಗಳನ್ನು ಪ್ರೀತಿಯಿಂದ ತಂದುಕೊಳ್ಳುವುದು.
ಕೃತಿಯುದ್ದಕ್ಕೂ ಎದ್ದು ಕಾಣುವ ಅಂಶವೆಂದರೆ ಲೇಖಕಿಯ ಸ್ತ್ರೀಪರ ಕಾಳಜಿ. ಆದರೆ ಯಾವುದೇ ಸ್ತ್ರೀವಾದಿ ಸಿದ್ಧಾಂತಗಳಿಗೆ ಅವರು ಆತುಕೊಳ್ಳದೆ ತಮ್ಮದೇ ಆದ ನಿಲುವುಗಳನ್ನು ತಾಳುವುದು ಇಲ್ಲಿನ ವೈಶಿಷ್ಟ್ಯ. ಬಾಲ್ಯದ ದಿನಗಳಲ್ಲಿ ಅಮ್ಮ ಪಡುತ್ತಿದ್ದ ಕಷ್ಟಗಳ ಅರಿವಾಗದಿದ್ದರೂ ಇಂದಿನ ಪ್ರೌಢ ಮನಸ್ಸಿಗೆ ಅಂದು ಹನ್ನೊಂದು ಮಕ್ಕಳನ್ನು ಇಂದಿನ ಯಾವುದೇ ಸೌಕರ್ಯ-ಸೌಲಭ್ಯಗಳಿಲ್ಲದ ದಿನಗಳಲ್ಲಿ ಸಾಕಿ ದೊಡ್ಡವರನ್ನಾಗಿ ಮಾಡಲು ಅಮ್ಮ ಹೇಗೆ ಕಷ್ಟಪಟ್ಟಿರಬಹುದು ಎಂಬುದರ ಅರಿವಾದ ಲೇಖಕಿ ಇಲ್ಲಿನ ಹಲವು ಲೇಖನಗಳಲ್ಲಿ ಅದನ್ನು ವಿಷಾದದೊಂದಿಗೆ ನೆನಪಿಸಿಕೊಳ್ಳುತ್ತಾರೆ, ಅಡುಗೆಮನೆಯ ಉಸಿರುಗಟ್ಟಿಸುವ ವಾತಾವರಣದಲ್ಲಿ ಸದಾ ಬೇಯುವ ಹೆಂಗಸರು ಮತ್ತು ಹಜಾರದಲ್ಲಿ ಆರಾಮವಾಗಿ ಕುಳಿತುಕೊಂಡು ಹರಟೆಹೊಡೆಯುತ್ತ ಕಾಲ ಕಳೆಯುವ ಗಂಡಸರ ಬಗ್ಗೆ ಅಲ್ಲಲ್ಲಿ ಅಸಮಾಧಾನ ವ್ಯಕ್ತವಾಗುತ್ತದೆ. ಹೆಣ್ಣುಮಕ್ಕಳಿಗೂ ಅಮ್ಮ ಅನುಭವಿಸಿದ ಕಷ್ಟಗಳ ಅರಿವಾಗುವುದು ಮದುವೆಯಾಗಿ ಜವಾಬ್ದಾರಿಗಳು ಹೆಗಲ ಮೇಲೆ ಬಿದ್ದಾಗಲೇ ಅನ್ನವುದು ಬದುಕಿನ ದೊಡ್ಡ ವ್ಯಂಗ್ಯವೂ ಹೌದು.
ಸಾಹಿತ್ಯದಲ್ಲಿ ಮನೆ-ಸಂಸಾರಗಳನ್ನು ತ್ಯಜಿಸಿ ಬೆಟ್ಟ ಹತ್ತಿದ ಸ್ತ್ರೀಯರನ್ನು ದಿಟ್ಟೆಯರೆಂದು ಹಾಡಿ ಹೊಗಳುತ್ತೇವೆ. ಪ್ರಾಯಶಃ ಇವತ್ತು ಕೂಡಾ ಗಂಡಿನ ಅಡಿಯಾಳಾಗದೆ ಸ್ವತಂತ್ರರಾಗಿರುತ್ತೇವೆಂದು ಸಾಂಸಾರಿಕ ಜೀವನದಿಂದ ಹೊರಬಂದು ಸಾಧನೆಯ ಮೇರುಶಿಖರವನ್ನು ಹತ್ತಿ ‘ಗ್ರೇಟ್’ ಎಂದು ಹೊಗಳಿಸಿಕೊಳ್ಳುವವರು ಸಾಕಷ್ಟು ಮಂದಿ ನಮ್ಮ ಮುಂದೆ ಇದ್ದಾರೆ. ಆದರೆ ಸಂಸಾರವನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಿಯೂ ಸಾಧನೆ ಮಾಡುವ ಹೆಣ್ಣಿನ ಶಕ್ತಿ-ಸಾಮರ್ಥ್ಯಗಳ ಬಗ್ಗೆ ಯಾರೂ ಎಣಿಸುವುದಿಲ್ಲ. ಶಿವರಾಮ ಕಾರಂತರು ಹೇಳುವಂತೆ ಸನ್ಯಾಸ ಸ್ವೀಕರಿಸುವುದೆಂದರೆ ಸಂಸಾರದ ಜಂಜಾಟಗಳಿಂದ ಪಲಾಯನ ಮಾಡುವುದು. ಇದೇ ದೃಷ್ಟಿ ಇಲ್ಲಿ ರುವ ‘ ಬೆಟ್ಟ ಹತ್ತಿದ ಗಟ್ಟಿಗಿತ್ತಿಯರು’ ಎಂಬ ಲೇಖನದಲ್ಲಿದೆ.
ದೊಡ್ಡ ಮಟ್ಟದಲ್ಲಿ ಸಮಾಜದ ಮುಂದೆ ತೋರಿಸಿಕೊಳ್ಳುವ ಪ್ರತಿಭೆಯಿಲ್ಲದ ಹಲವಾರು ಹೆಣ್ಣುಮಕ್ಕಳು ಫೇಸ್ ಬುಕ್ಕಿನಲ್ಲಿ ತಾವು ನೆಟ್ಟ ಗಿಡಗಳನ್ನೋ ತಾವು ಮಾಡಿದ ಕರಕುಶಲ ವಸ್ತುಗಳನ್ನೋ ತಾವು ಮಾಡಿದ ಅಡುಗೆಯನ್ನೋ ಹಾಕಿ ತಮ್ಮನ್ನು ಅಭಿವ್ಯಕ್ತಿಸಿಕೊಳ್ಳುತ್ತಾರೆ. ತಾವು ಕೊಂಡುಕೊಂಡ ಉಡುಪುಗಳನ್ನು ತೊಟ್ಟು ತೋರಿಸಿ ಸಣ್ಣ ಪುಟ್ಟ ಸಂತೋಷಗಳಲ್ಲಿ ಸಂಭ್ರಮಿಸಿಕೊಳ್ಳುತ್ತಾರೆ. ಆದರೆ ಅಂಥವರ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಿ ಅವರನ್ನು ದಮನಿಸಲು ಪ್ರಯತ್ನಿಸುವ ಪುರುಷಾಹಂಕಾರವನ್ನು ಕಮಲಾ ಅವರು ಇಲ್ಲಿ ಕಟುವಾಗಿ ಟೀಕಿಸಿದ್ದಾರೆ. ಅದೇ ರೀತಿ ಯೌವನವನ್ನೆಲ್ಲ ಜವಾಬ್ದಾರಿಯ ಕಡು ಕಷ್ಟದಲ್ಲಿ ಕಳೆದು ನಡುವಯಸ್ಸಿನಲ್ಲೋ ಇಳಿವಯಸ್ಸಿನಲ್ಲೋ ಹೆಂಗಸರು ಜೀವನಾಸಕ್ತಿಯನ್ನು ತೋರಿಸಿ ಹೊಸ ರೀತಿಯ ಜೀವನಕ್ರಮವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ಅವರಿನ್ನು ಕೆಲಸಕ್ಕೆ ಬಾರದವರೆಂದು ಮೂಲೆಯಲ್ಲಿ ಕೂರಿಸಲೆತ್ನಿಸುವ ಯುವಜನಾಂಗಕ್ಕೂ ಚಾಟಿಯೇಟು ನೀಡುತ್ತಾರೆ. ವಯಸ್ಸು ಅರುವತ್ತಾದರೇನು, ತೊಂಬತ್ತಾದರೇನು ಅವರವರ ಆಸಕ್ತಿಗೆ ತಕ್ಕಂತೆ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲವೆಂದು ತಮ್ಮ ಕೊನೆಯ ಲೇಖನ ‘ಅರವತ್ತರ ಚೆಲುವೆ’ಯಲ್ಲಿ ಹೇಳುತ್ತ ಪರೋಕ್ಷವಾಗಿ ಹಾಗೆ ಮಾಡುವುದು ತಪ್ಪು ಎಂಬ ಸಂದೇಶವನ್ನೂ ಕೊಡುತ್ತಾರೆ. ಆದರೆ ಎಲ್ಲೂ ಅವರು ‘ಪೆಡಗೋಜಿಕ್ ಟೋನ್ ( ಬೋಧನಾತ್ಮಕ ಧ್ವನಿ) ಬಳಸಿ ತಮ್ಮ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುವುದಿಲ್ಲ.

ತಾನೊಬ್ಬ ಮನೆಮೂಳಿ, ಮನೆಯೊಂದಿಗಿನ ತನ್ನ ಅಗಾಧವಾದ ಬಂಧವು ತನ್ನನ್ನು ಎಲ್ಲಿಗೂ ಹೋಗಲು ಬಿಡುವುದಿಲ್ಲ ಎನ್ನುವ ಲೇಖಕಿ ಮನೆಯ ಕಿಟಿಕಿಯೊಳಗಿಂದಲೇ ವಿಶಾಲವಾದ ಆಕಾಶವನ್ನು ಅರ್ಥ ಮಾಡಿಕೊಳ್ಳುತ್ತಾರೆ. ದೇಶ ಸುತ್ತದೆಯೇ ಕೋಶ ಓದುವ ಕೆಲಸದ ಮೂಲಕ, ತಮ್ಮ ಎಚ್ಚರದ ಕಣ್ಣುಗಳಿಂದ ಸುತ್ತಮುತ್ತಲ ಬದುಕನ್ನು ವೀಕ್ಷಿಸಿ ಮಸ್ತಿಷ್ಕದೊಳಗೆ ದಾಖಲಿಸುವುದರ ಮೂಲಕ ಮತ್ತು ಮನೆಯ ಸುತ್ತ ತಾವೇ ಹೆಣೆದುಕೊಂಡ ಭಾವುಕ ಸಂಬಂಧಗಳ ಮೂಲಕ ತಮ್ಮ ಅನುಭವ ಜಗತ್ತನ್ನು ವಿಸ್ತರಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಕೃತಿ ಸಾಕ್ಷಿಯಾಗಿ ನಿಲ್ಲುತ್ತದೆ.
ಲೇಖಕಿಯ ಬಹುಮುಖಿ ಆಸಕ್ತಿ ಮತ್ತು ಅನುಭವಗಳ ಬಗ್ಗೆ ಒಂದು ಮಾತು ಹೇಳಲೇ ಬೇಕು. ಇಲ್ಲಿನ ಕೆಲವು ಲೇಖನಗಳಲ್ಲಿ ನೃತ್ಯ-ಸಂಗೀತಗಳಲ್ಲಿ ಅವರಿಗಿರುವ ನೈಪುಣ್ಯ ವ್ಯಕ್ತವಾದರೆ ಹಲವಾರು ಲೇಖನಗಳಲ್ಲಿ ಅವರ ಸಾಹಿತ್ಯ ಪ್ರೇಮವು ಉದಾಹರಣೆಗಳ ಸಮೇತ ಚಿಮ್ಮುತ್ತಿರುತ್ತದೆ. ಮಹಾಭಾರತ, ವಚನ ಸಾಹಿತ್ಯ, ಹರಿದಾಸ ಸಾಹಿತ್ಯಗಳಿಂದ ಹಿಡಿದು ಡಿ.ವಿ.ಜಿ., ಕುವೆಂಪು, ಪು.ತಿ.ನ., ಜಿ.ಎಸ್.ಶಿವರುದ್ರಪ್ಪ-ಹೀಗೆ ಹಲವಾರು ಶ್ರೇಷ್ಠ ಕವಿಗಳ ಕವಿತೆಗಳ ಸಾಲುಗಳು ಅವರ ನಾಲಿಗೆಯ ತುದಿಯಲ್ಲೇ ಇವೆ ಮತ್ತು ಸನ್ನಿವೇಶಗಳಿಗೆ ತಕ್ಕಂತೆ ಅವು ನೆನಪಾಗುತ್ತವೆ. ಅದಕ್ಕೆ ಸರಿಯಾಗಿ ನೆನಪುಗಳ ಆಳಕ್ಕಿಳಿಯುವಾಗೆಲ್ಲ ಅವರ ಗದ್ಯವೂ ಕಾವ್ಯಾತ್ಮಕವಾಗುವುದನ್ನು ನೋಡಬಹುದು.
ಕಮಲಾ ಅವರ ಕೃತಿಯನ್ನು ಓದುವಾಗ ನನಗೆ ನೆನಪಾಗಿದ್ದು ನಾನೇ ಅನುವಾದಿಸಿದ ಪ್ರಸಿದ್ಧ ಮಲೆಯಾಳ/ಇಂಗ್ಲಿಷ್ ಲೇಖಕಿ ಕಮಲಾ ದಾಸ್ ಅವರ ಆತ್ಮಕಥೆ ‘ನೀರ್ ಮಾದಳ ಹೂ ಬಿಟ್ಟ ಕಾಲ’. ಕಮಲಾ ದಾಸ್ ಅವರ ಹಳ್ಳಿಮನೆಯ ನೆನಪುಗಳಿಗೂ ಎಂ.ಆರ್ ಕಮಲಾ ಅವರ ನೆನಪುಗಳಿಗೂ ಬಹಳಷ್ಟು ಸಾಮ್ಯವಿದೆ. ಕಮಲಾ ಅವರು ತಮ್ಮ ಕಸೂತಿ ಕೆಲಸವನ್ನು ಇನ್ನೊಂದಷ್ಟು ಮುಂದುವರೆಸಿದರೆ ಇದು ಅವರ ಆತ್ಮಕಥೆಯೂ ಆಗಬಲ್ಲುದು.
ಸರಳ ಸುಂದರ ವಾಕ್ಯಗಳು ಮತ್ತು ನಮ್ಮದೇ ಅನುಭವ ಜಗತ್ತಿನ ಪರಿಧಿಯೊಳಗಿನ ಪರಿಚಿತ ವಸ್ತುಗಳು ಇಡೀ ಕೃತಿಯನ್ನು ಖುಷಿಯಿಂದ ಓದಿಸಿಕೊಂಡು ಹೋಗುತ್ತವೆ. ಎಲ್ಲ ಸ್ತ್ರೀಯರ ಮನಸ್ಸಿನಾಳದಲ್ಲಿ ಕುಳಿತು, ಯಾರು ಏನು ಹೇಳುತ್ತಾರೋ ಎಂಬ ಭಯದಿಂದ ಪ್ರಕಟ ಮಾಡಲಾರದ ಅನೇಕ ವಿಚಾರಗಳನ್ನು ಕಮಲಾ ಅವರು ಮುಕ್ತವಾಗಿ ಧೈರ್ಯದಿಂದ ಅನಾವರಣಗೊಳಿಸುತ್ತಾರೆ. ಹೇಳುವಾಗ ಅವರು ತಮ್ಮದೇ ಅನುಭವಗಳನ್ನು ಉದಾಹರಣೆಯಾಗಿ ಕೊಡುತ್ತಾರಾದರೂ ಅವರಿಗೆ ಅವೆಲ್ಲವೂ ಇತರ ಸ್ತ್ರೀಯರ ಅನುಭವಗಳೂ ಆಗಿರಬಹುದೆಂಬ ಖಚಿತತೆಯಿದೆ. ಯಾವುದೇ ಸಿದ್ಧಾಂತಗಳಿಗೆ ಪಕ್ಕಾಗದೆ ಭಾರತೀಯ ಸ್ತ್ರೀಯರು ನಡೆದು ಬಂದ ದಾರಿ ಹಾಗೂ ಅವರು ಇಂದೂ ಕೂಡಾ ಎದುರಿಸುತ್ತಿರುವ ನೂರಾರು ಸಮಸ್ಯೆಗಳ ಸುತ್ತ ತಮ್ಮ ಕ್ರಿಯಾಶೀಲ ಚಿಂತನೆಗಳನ್ನು ಲೇಖಕಿ ಇಲ್ಲಿ ಹರಿಯ ಬಿಟ್ಟಿದ್ದಾರೆ. ಸೂಕ್ಷ್ಮ ಹೆಣ್ಣುಮನಸ್ಸುಳ್ಳವರನ್ನು (ಅಂಥ ಮನಸ್ಸು ಪುರುಷರಲ್ಲೂ ಇರಬಹುದು) ತನ್ನೊಂದಿಗೆ ಕರೆದೊಯ್ಯುವಂತಹ ಶಕ್ತಿ ಈ ಕೃತಿಗಿದೆ.
ಕಮಲ ಹೆಣೆದ 'ಕಸೂತಿ'ಯ ಚೆಲುವು
ನಿಮಗೆ ಇವೂ ಇಷ್ಟವಾಗಬಹುದು…




ನನ್ನ ಪುಸ್ತಕದ ಬಗ್ಗೆ ಅದೆಷ್ಟು ವಿವರವಾಗಿ, ಸೂಕ್ಷ್ಮವಾಗಿ, ಪ್ರೀತಿಯಿಂದ ಬರೆದಿದ್ದೀರಿ. ನನ್ನ ಒಳಗನ್ನು ಸಂಪೂರ್ಣವಾಗಿ ಗ್ರಹಿಸಿದಂತಿದೆ ಈ ಲೇಖನ. ಅನಂತ ಧನ್ಯವಾದ ನಿಮಗೆ ಮೇಡಂ