'ಕನ್ನಡ : ಭಾಷೆಯೋ ಅಥವಾ ಶಿಕ್ಷಣ ಮಾಧ್ಯಮವೋ?', ಕಿರಣ್ ಕೇಳ್ತಾರೆ

’ಅವಧಿ’ಯಲ್ಲಿ ಮೊನ್ನೆ ಬಿ ಆರ್ ಸತ್ಯನಾರಾಯಣ ಅವರು ಬರೆದ ’ಕನ್ನಡ : ಭಾಷೆ ಅಥವಾ ಶಿಕ್ಷಣ ಮಾಧ್ಯಮ’ ಎನ್ನುವ ಲೇಖನವನ್ನು ಪ್ರಕಟಿಸಿದ್ದೆವು. ಅದಕ್ಕೆ ಪ್ರತಿಕ್ರಿಯೆಯಾಗಿ ಬಂದ ಕಿರಣ್ ಅವರ ಲೇಖನ ನಿಮಗಾಗಿ. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ಬರೆಯಿರಿ :

***


– ಕಿರಣ್
ಸತ್ಯನಾರಾಯಣರವರ ಅಭಿಪ್ರಾಯವನ್ನು ಒಪ್ಪುತ್ತೇನೆ. ನಾವು ಸಾಮಾನ್ಯವಾಗಿ ವ್ಯಕ್ತಗೊಳಿಸಲಾಗದ ಭಾವಗಳಿಗೆ ಅವರು ಪದಸ್ವರೂಪ ನೀಡಿದ್ದಾರೆ.
ಇಲ್ಲಿ ಎರಡು ವಿಷಯಗಳಿವೆ.
೧. ಇಂಗ್ಲಿಷ್ ಅನ್ನು ಭಾಷೆಯಾಗಿ ಕಲಿಯುವುದು ಇಲ್ಲವೇ ಇಂಗ್ಲೀಷನ್ನು ಕಲಿಕೆಯ ಮಾಧ್ಯಮವಾಗಿ ಕಲಿಯುವುದು.
೨. ಸುಪ್ರೀಂ ಕೋರ್ಟ್ ನಲ್ಲಿ ಸರ್ಕಾರದ ವಕೀಲರ ವಾದದ ಪರಿಣಾಮಕಾರಿತ್ವ.
ಮೊದಲನೆಯ ವಿಷಯವನ್ನು ವಿವೇಚಿಸೋಣ:
ನಾವು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದೆವೆ ವಿನಃ ಬ್ರಿಟಿಷ್ ವ್ಯವಸ್ಥೆಯಿಂದಲ್ಲ! ಸ್ವತಂತ್ರ ಭಾರತದ ೬೭ ವರ್ಷಗಳಲ್ಲಿ ಹಲವಾರು ರಂಗಗಳ ನಿರ್ವಹಣೆಯಲ್ಲಿ ನಮ್ಮ ಅಸಮರ್ಥತೆಯನ್ನು ಸಾಬೀತುಪಡಿಸಿದ್ದೇವೆ! ಶಿಕ್ಷಣ ಕ್ಷೇತ್ರ ಅದರಲ್ಲಿ ಪ್ರಮುಖವಾದುದು ಎನಿಸುತ್ತದೆ. ಹಲವಾರು ಭಾಷೆಗಳ ಮಿಳಿತವಾದ ಈ ದೇಶದಲ್ಲಿ ಇಂಗ್ಲಿಷ್ ಭಾಷೆಯೇ ಇನ್ನೂ ಸಾಮಾನ್ಯ ಮಾಧ್ಯಮ (lingua-franca). ತಳಮಟ್ಟದಿಂದ ಹಿಡಿದು ಮೇಲ್ಮಟ್ಟದವರೆಗಿನ ಕಲಿಕೆಗೆ ಸಾಮಾನ್ಯ ಮಾಧ್ಯಮವೊಂದನ್ನು ದೇಶವ್ಯಾಪಿಯಾಗಿ ನಿರ್ಮಿಸಲು ನಮಗೆ ಸಾಧ್ಯವಾಗಿಲ್ಲದಿರುವಾಗ, ಆ ಜಾಗವನ್ನು ಇಂಗ್ಲಿಷ್ ಭಾಷೆ ಅನಾಯಾಸವಾಗಿ, ಸ್ಪರ್ಧೆಯೇ ಇಲ್ಲದೆ ಆಕ್ರಮಿಸಿದೆ. ಪ್ರಾಥಮಿಕ ಶಿಕ್ಷಣವೇನೋ ಸರಿ; ಉನ್ನತ ಶಿಕ್ಷಣವನ್ನು (ಹಲವಾರು ಯುರೋಪಿಯನ್ ದೇಶಗಳಲ್ಲಿ ಇರುವಂತೆ) ದೇಶೀ ಭಾಷೆಗಳಲ್ಲಿ ನೀಡುವಷ್ಟು ಸಾಮರ್ಥ್ಯವನ್ನು ನಾವು ಈ ೬೭ ವರ್ಷಗಳಲ್ಲಿ ಪಡೆದುಕೊಂಡಿದ್ದೆವೆಯೇ? ಎಲ್ಲಿಯವರೆಗೆ ದೇಶೀ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ನಮ್ಮಲ್ಲಿ ವೈಜ್ಞಾನಿಕವಾದ ನೀತಿ-ನಿಯಮಾವಳಿಗಳನ್ನು ರೂಪಿಸಿದ್ದೆವೆಯೇ? ಉನ್ನತ ಶಿಕ್ಷಣಕ್ಕೆ ಸ್ತಿತ್ಯಂತರಗೊಳ್ಳುವ ಇಂತಹ ವಿದ್ಯಾರ್ಥಿಗಳ ಬೆಂಬಲಕ್ಕೆ ನಮ್ಮಲ್ಲಿ ಪರಿಹಾರಗಳಿವೆಯೇ? ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪೂರ್ವಸಿದ್ಧತೆ ಇಲ್ಲದೆ ಹೋಗಬೇಕಾದ ವಿದ್ಯಾರ್ಥಿಗಳ ಪಾಡಿನ ಬಗ್ಗೆ ನಮ್ಮ ನೀತಿಯೇನಾಗಿರಬೇಕು?
ಪ್ರೌಢಶಾಲೆಯ ವಿಜ್ಞಾನ ಪುಸ್ತಕವನ್ನು ಓದಿನೋಡಿದರೆ ಕನ್ನಡದಲ್ಲಿ ಕಲಿಸುವ ನಮ್ಮ ಮಿತಿಗಳ ಪರಿಚಯವಾದೀತು. ಪಾರಿಭಾಷಿಕ ಪದಗಳೆಲ್ಲವೂ ಸಂಸ್ಕೃತಮಯ! ಕೆಲವು ಪದಗಳ ಅರ್ಥ ಶಿಕ್ಷಕರಿಗೆ ಆಗಲಿಕ್ಕಿಲ್ಲ! ಕಠಿಣ ಸಂಸ್ಕೃತ ಸಮಾಸಗಳನ್ನು ಒಡೆದು ಅದರ ವೈಜ್ಞಾನಿಕ ಅರ್ಥಗಳನ್ನು ತಿಳಿಸಬಲ್ಲ ಸಂಸ್ಕೃತ ಜ್ಞಾನವುಳ್ಳ ವಿಜ್ಞಾನ ಶಿಕ್ಷಕರನ್ನು ಎಲ್ಲಿ ಕಂಡೀರಿ? ವರ್ತಮಾನದಲ್ಲಿ ವೈಜ್ಞಾನಿಕ ಅರ್ಥವನ್ನೂ ನೀಡದ, ಭವಿಷ್ಯದಲ್ಲಿ ಬೇರೆ ಮಾಧ್ಯಮದಲ್ಲಿ ಪ್ರವೇಶಿಸಿದಾಗ ಪೂರ್ವ ಕಲಿಕೆಯ ನೆರವನ್ನೂ ನೀಡದ ದೇಶೀ ಭಾಷೆಗಳಿಂದ ಏನು ಸಾಧಿಸಿದಂತಾಯಿತು? ಬೆರಳೆಣಿಕೆಯಷ್ಟು ಅಸಾಮಾನ್ಯ ವಿದ್ಯಾರ್ಥಿಗಳ ಕಥೆಗಳನ್ನು ಬದಿಗಿಡಿ; ಕಳೆದ ೨೦ ವರ್ಷಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಇಂಜಿನಿಯರಿಂಗ್ ಅಥವಾ ವೈದ್ಯಕೀಯದಂತಹ ಉನ್ನತ ಶಿಕ್ಷಣದ ರಂಗವನ್ನು ಪ್ರವೇಶಿಸಿದ ವಿದ್ಯಾರ್ಥಿಗಳು ಅನುಭವಿಸಿದ ಕಷ್ಟಗಳ ಬಗ್ಗೆ ನಮಗೆ ಯಾವುದಾದರೂ ವೈಜ್ಞಾನಿಕ ಮಾಹಿತಿ ಇದೆಯೇ? ಯಾರಾದರೂ ಈ ಬಗ್ಗೆ ಕಾಳಜಿ ತೋರಿ ಅಧ್ಯಯನ ಮಾಡಿದ್ದಾರೆಯೇ? ಈ ಸ್ಥಿತ್ಯಂತರದ ಕಷ್ಟಗಳನ್ನು ತಡೆಯಲಾರದೆ ಓದನ್ನು ಅರ್ಧಕ್ಕೆ ಬಿಟ್ಟ ವಿದ್ಯಾರ್ಥಿಗಳ ಮಾಹಿತಿ ಸರ್ಕಾರದ ಬಳಿ ಇದೆಯೇ? ಅವರ ಈ ಸಂಕಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಏನಾದರೂ ಕೆಲಸ ನಡೆದಿದೆಯೇ?
“ನೀವು ಮಾತೃಭಾಷೆಯಲ್ಲಿ ಓದಿ; ನಿಮ್ಮ ನೆರವಿಗೆ ನಾವಿದ್ದೇವೆ” ಎಂದು ಸರ್ಕಾರವಾಗಲಿ, ಶಿಕ್ಷಣ ತಜ್ಞರಾಗಲಿ ಭರವಸೆ ಕೊಡಬಲ್ಲರೆ? ಕೊಟ್ಟ ಭರವಸೆಯನ್ನು ಉಳಿಸಿಕೊಂಡಾರೆಂಬ ನಂಬಿಕೆ ಜನರಲ್ಲಿ ಮೂಡಿಸಬಲ್ಲರೆ? ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸದ ಹೊರತು ಹೆಚ್ಚಿನ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ. “ನೂರರಲ್ಲಿ ಇಬ್ಬರು ಮಾತ್ರ ಉನ್ನತ ಶಿಕ್ಷಣದಲ್ಲಿ ಈ ರೀತಿಯ ಕಷ್ಟ ಅನುಭವಿಸಬಹುದು; ಅದಕ್ಕಾಗಿ ಉಳಿದ ೯೮ ಮಂದಿಗೆ ದೇಶೀ ಭಾಷೆಗಳಲ್ಲಿ ಶಿಕ್ಷಣ ನೀಡದಿರುವುದು ತಪ್ಪು” ಎನ್ನುವವರನ್ನು ಕೇಳಿದ್ದೇನೆ. ಆ ಇಬ್ಬರನ್ನು ಇಂತಹ ಮಹಾಶಯರು ಶಾಲೆಗೇ ಸೇರುವ ಮೊದಲೇ ಪ್ರತ್ಯೇಕಿಸಿ ನೀಡಿದರೆ, ಉಳಿದವರಿಗೆ ಅವರು ನುಡಿದಂತೆಯೇ ನಡೆಯಬಹುದು!
ಇಂಗ್ಲೀಷನ್ನು ಮಾಧ್ಯಮವಾಗಿ ಅಲ್ಲದೆ ಒಂದು ಭಾಷೆಯಾಗಿ ಕಲಿಸುವತ್ತ ಸರ್ಕಾರದೆ ಚಿತ್ತ ಹರಿಯುವುದಿಲ್ಲವೇಕೆ? ಇಲ್ಲಿ ನಾವು ಸಂವಹನದ ಬಗ್ಗೆ ಮಾತನಾಡುತ್ತಿದ್ದೇವೆ. ಕನಿಷ್ಟ ಎರಡು ಭಾಷೆಗಳಲ್ಲಿ ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಪ್ರತಿ ಮಗುವಿಗೆ ಹೇಳಿಕೊಡಬೇಕು. ಅದರಲ್ಲಿ ಒಂದು ಭಾಷೆ ಇಂಗ್ಲಿಷ್ ಆಗಿರಲಿ. ಆಗ ಕಲಿಕೆಯ ಮಾಧ್ಯಮ ಯಾವುದಾದರೂ ತೊಂದರೆಯಿಲ್ಲ. ದೇಶೀ ಭಾಷೆಯಲ್ಲಿ ಕಲಿತರೂ ಇಂಗ್ಲಿಷ್ ಭಾಷೆಯಲ್ಲಿ ತನ್ನ ಕಲಿಕೆಯ ಸಾರವನ್ನು ನಿರರ್ಗಳವಾಗಿ ಹೇಳುವಂತೆ ನಮ್ಮ ಮಕ್ಕಳನ್ನು ತಯಾರಿಗೊಳಿಸಲು ಸಾಧ್ಯವಿಲ್ಲವೇ? ಇದು ಸಾಧ್ಯವಾದಾಗ ಕಲಿಕೆಯ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೆ ಬಿಡಬಹುದು. ಆಗ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವ ಮಂದಿ ಹೆಚ್ಚಾದಾರು! ದೇಶೀ ಭಾಷೆಯಲ್ಲಿ ಕಲಿತು ಉನ್ನತ ಶಿಕ್ಷಣಕ್ಕೆ ತೆರಳುವ ವಿದ್ಯಾರ್ಥಿಗಳು ಆಗ ಹೆಚ್ಚಾಗಿ ಕಲಿಯಬೇಕಾದ್ದು ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಗಳನ್ನು ಮಾತ್ರವೇ. ಅದಕ್ಕೆ ಬೇಕಾದ ತುಸು ಬೆಂಬಲವನ್ನು ನೀಡಲು ಸರ್ಕಾರ ನೀಡಬಹುದು. ಸರ್ಕಾರೇತರ ಸಂಸ್ಥೆಗಳೂ ಮುಂದೆ ಬರಬಹುದು. ಇದು ಹೊಸ ಪದ್ದತಿಯೇನಲ್ಲ. ಮಾತೃ ಭಾಷೆಯಲ್ಲಿ ಕಲಿತ ಯುರೋಪ್ ಮತ್ತು ದಕ್ಷಿಣ ಅಮೇರಿಕಾದ ಹಲವಾರು ವಿಜ್ಞಾನಿಗಳು ಅವರ ಸಂಶೋಧನೆಗಳನ್ನು ನಿರರ್ಗಳ ಇಂಗ್ಲಿಷ್ ನಲ್ಲಿ ಅನಾಯಾಸವಾಗಿ ವಿವರಿಸುವುದನ್ನು ನಾವೆಲ್ಲರೂ ಒಪ್ಪುತ್ತೇವಷ್ಟೇ?
ಎರಡನೆಯ ವಿಷಯ:
ಹಲವಾರು ವರದಿಗಳ ಪ್ರಕಾರ ಸರ್ಕಾರಿ ವಕೀಲರ ವಾದ ಬಹಳ ನಿರ್ಬಲವಾಗಿತ್ತು. ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳೇ “ನಿಮ್ಮ ವಾದವನ್ನು ಪುಷ್ಟೀಕರಿಸಿ, ಚೆನ್ನಾಗಿ ಮಂಡಿಸಿ” ಎಂದೆಲ್ಲಾ ಸಲಹೆ ನೀಡಿದರೆಂದೂ, ಅದು ಫಲಕಾರಿಯಾಗದಾಗ ನೊಂದುಕೊಂಡರೆಂದೂ ವರದಿಯಾಗಿದೆ. ನಮ್ಮ ಸರ್ಕಾರಿ ವಕೀಲರು ವಿಕಿಪೀಡಿಯ ದಿಂದ ಉಲ್ಲೇಖಿಸಿದರೆಂದೂ, ಅದನ್ನು ಯಾವ ನ್ಯಾಯಾಸ್ಥಾನವೂ ಮಾನ್ಯ ಮಾಡುವುದಿಲ್ಲವೆಂದು ನ್ಯಾಯಮೂರ್ತಿಗಳು ತಿಳಿಸಿಕೊಟ್ಟರೆಂದೂ ಸಹ ಹೇಳಲಾಗಿದೆ. ಇಂತಹ ಅತಿಮುಖ್ಯವಾದ ವಿಷಯಗಳನ್ನು ನ್ಯಾಯಾಸ್ಥಾನದಲ್ಲಿ ಮಂಡಿಸುವಾಗ ಸರ್ಕಾರ ತಮ್ಮ ಅತ್ಯಂತ ಸಮರ್ಥ ವಕೀಲರ ತಂಡವನ್ನು ನಿಯಮಿಸುವುದು ಮುಖ್ಯ. ಇಲ್ಲಿ ಜನತೆಯ ಹಿತ ಮುಖ್ಯವಾಗಬೇಕೇ ಹೊರತು ರಾಜಕೀಯವಲ್ಲ. ಪ್ರಯತ್ನರಾಹಿತ್ಯದಿಂದ ಸೋತು ನಂತರ ದುಃಖಿಸುವುದರಲ್ಲಿ ಅರ್ಥವಿಲ್ಲ.
ಏನಾದರಾಗಲಿ, ಇದು ಬಹಳ ಮಹತ್ವದ ತೀರ್ಪು. ಸೋಲಿಗೆ ಸಮರ್ಥನೆಗಳನ್ನು ಹುಡುಕುವುದು ಬೇಡ. ಈಗ ರಚನಾತ್ಮಕ ಪರ್ಯಾಯಗಳನ್ನು ಶೋಧಿಸುವ ಕಾಲ. ಕನ್ನಡ ಭಾಷೆ ಅನನ್ಯ. ಕನ್ನಡವನ್ನು ಉಳಿಸುವುದು, ಮುಂದಿನ ಪೀಳಿಗೆಗೆ ಅದನ್ನು ಇನ್ನೂ ಶ್ರೀಮಂತವಾಗಿ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಕನ್ನಡವನ್ನು ನಾವೂ ಎಂದಿಗೂ ಕಳೆದುಕೊಳ್ಳಬಾರದು. ಅದೇ ರೀತಿ, ಮತ್ತೊಬ್ಬರ ಪೂರ್ವಾಗ್ರಹಗಳಿಗೆ ಬಲಿಯಾಗಿ ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಅಪಾಯಕ್ಕೂ ಸಿಲುಕಬಾರದು. ಮಕ್ಕಳ ಭವಿಷ್ಯ ಮತ್ತು ಭಾಷೆಯ ಉಳಿವನ್ನು ಸಮತೂಕವಾಗಿ ಪರಿಷ್ಕರಿಸಿ ಒಂದು ಸುವರ್ಣ ಮಧ್ಯಮ ಮಾರ್ಗವನ್ನು ನಿರ್ಮಿಸುವುದು ಈ ಘಳಿಗೆಯ ಅವಶ್ಯಕತೆ. ಇದರ ಬಗ್ಗೆ ನಿರ್ವಿಕಾರದ, ನಿರ್ಮಮಕಾರದ ಚರ್ಚೆ ಆಗಬೇಕು. ಚಿಂತನೆಯಾಗಬೇಕು.

‍ಲೇಖಕರು G

May 10, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಸತ್ಯನಾರಾಯಣ

    * ಸುಪ್ರೀಮ್ ತೀರ್ಪು ಕನ್ನಡಕ್ಕಷ್ಟೇ ಅಲ್ಲ ಎಲ್ಲಾ ಪ್ರದೇಶಿಕ ಭಾಷೆಗಳಿಗೂ ಮಾರಕ – ಈ ಅಭಿಪ್ರಾಯ ಅಲ್ಲಲ್ಲಿ ವ್ಯಕ್ತವಾಗಿದೆ. ಇದು ಅರ್ಧ ಸತ್ಯ. ಈ ತೀರ್ಪಿನಿಂದ ಕನ್ನಡ-ಕರ್ನಾಟಕದಲ್ಲಿ ಆಗುವ ಪಲ್ಲಟಗಳಿಗೆ ಹೋಲಿಸಿದರೆ ತಮಿಳುನಾಡಿನಲ್ಲಿ ಕಡಿಮೆ. ಏಕೆಂದರೆ ಅಲ್ಲಿ ತಮಿಳು ಮಾಧ್ಯಮದಲ್ಲಿ ಓದಿದವರಿಗೆ ಭವಿಷ್ಯದ ಬಗ್ಗೆ ಅಭದ್ರತೆ ಕಾಡುವುದಿಲ್ಲ. ಅಂತಹ ಒಂದು ವಾತಾವರಣವನ್ನು ಅಲ್ಲಿಯ ಸರ್ಕಾರಗಳು ಸೃಷ್ಟಿಸಿವೆ. ಅದು ಒಂದೇ ದಿನದ ಅಥವಾ ವರ್ಷದ ಸಾಧನೆಯಲ್ಲ. ಅದಕ್ಕೆ ಸುಧೀರ್ಘ ಇತಿಹಾಸವಿದೆ. ನೆನ್ನೆ ನನ್ನ ಹಿರಿಯ ಸ್ನೇಹಿತರೊಬ್ಬರು ಹೇಳಿದ್ದು: ತಮಿಳು ಇಂತಹ ದಿವಸದಿಂದ ಆಡಳಿತಭಾಷೆ ಎಂದು ನಿರ್ಧಾರವಾದ ತಕ್ಷಣ ಅಲ್ಲಿಯ ಸರ್ಕಾರ ಮೊದಲು ಮಾಡಿದ್ದು ಎಲ್ಲಾ ಸರ್ಕಾರಿ ಕಛೆರಿಗಳಲ್ಲಿದ್ದ ಇಂಗ್ಲಿಷ್ ಟೈಪರೇಟರುಗಳನ್ನು (ಕೇಂದ್ರ ಸರ್ಕಾರದೊಂದಿಗೆ ಮಡೆಸುವ ಪತ್ರವ್ಯವಹಾರಕ್ಕೆ ಬೇಕಾದಷ್ಟನ್ನು ಮಾತ್ರ ಉಳಿಸಿಕೊಂಡು) ತೆಗೆಸಿದ್ದು. ನಮ್ಮಲ್ಲಿ ಇಂತಹ ಇಚ್ಛಾಶಕ್ತಿ ಯಾವಾಗಲಾದರೂ ಪ್ರದರ್ಶಿತವಾಗಿದೆಯೇ? ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಭವಿಷ್ಯದ ಬಗ್ಗೆ ನಿಶ್ಚಿಂತೆಯಿದೆಯೆ? ಅಂತಹ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಇಲ್ಲಿನ ಸರ್ಕಾರ ಸೋತಿಲ್ಲ! ಏಕೆಂದರೆ ಆ ನಿಟ್ಟಿನಲ್ಲಿ ಅವು ಪ್ರಯತ್ನವನ್ನೇ ಮಾಡಿಲ್ಲ. ಪ್ರಯತ್ನ ಮಾಡಿದ್ದರಲ್ಲವೆ ಸೋಲು ಗೆಲುವಿನ ಪ್ರಶ್ನೆ!
    * ಸೆನ್ಸಿಬಲ್ ಆದ ಹೇಳಿಕೆː ಸಿ.ಎನ್.ಆರ್. ಅವರು ಸೆನ್ಸಿಬಲ್ ಆದ ಹೇಳಿಕೆಯೊಂದನ್ನು ನೀಡಿದ್ದಾರೆ. ತತ್ತಕ್ಷಣದ ಪರಿಹಾರವಾಗಿ ಕನ್ನಡೇತರ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿಯೂ, ಕನ್ನಡ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯನ್ನಾಗಿಯೂ ಒಂದನೆ ತರಗತಿಯಿಂದಲೇ ಕಲಿಸಬೇಕು ಎಂದು. ಬಹುತೇಕ ಪತ್ರಿಕೆಗಳು ಈ ಹೇಳಿಕೆಯ ಮಹತ್ವವನ್ನು ಮನಗಂಡಿವೆ. ಒಂದು ಪತ್ರಿಕೆಯಂತೂ ಅದನ್ನು ಮುಖಪಟದಲ್ಲೇ ಪ್ರಕಟಿಸಿರುವುದು ಅಭಿನಂದನಾರ್ಹ
    * ಜ್ಞಾನಪೀಠ ನಾನ್ಸೆನ್ಸ್ ಎಂದು ಕುಂ.ವೀ. ಹೇಳಿಕೆ ಹೆಚ್ಚು ಪರಿಣಾಮಕಾರಿಯೆನ್ನಿಸುವುದು ಇಂತಹ ಸಂದರ್ಭದಲ್ಲಿ. ಸಾಹಿತಿ-ಚಿಂತಕ(?)ರ ಸಭೆ ನಡೆಸಿದ ಮೇಲೆ ಹಲವಾರು ಸಾ-ಚಿಂ’ರ ಅಭಿಪ್ರಾಯಗಳನ್ನು ಪಡೆದು ಕೆಲವು ಪತ್ರಿಕೆಗಳು ಪ್ರಕಟಿಸಿವೆ. ಒಂದು ಪತ್ರಿಕೆ ಕೇವಲ ಮೂರು ಜ್ಞಾನಪೀಠಿಗಳ ಹೇಳಿಕೆಯನ್ನು ಮಾತ್ರ ಪ್ರಕಟಿಸಿ ಉಳಿದವರಿಗೆ ಟಾಂಗ್ ನೀಡಿದೆǃ ಇನ್ನೂ ಕೆಲವು ಪತ್ರಿಕೆಗಳು ಜ್ಞಾನಪೀಠೀಗಳ ಹೆಸರಿನ ಮುಂದೆ ‘ಜ್ಞಾನಪೀಠ ಪುರಸ್ಕೃತ ಸಾಹಿತಿ’ ಎಂಬ ಲೇಬಲ್ ಹಾಕಿದ್ದರೆ, ಉಳಿದವರ ಮುಂದೆ ಖಾಲಿǃ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರ ಹೆಸರಿನ ಮುಂದೆಯೂ ಖಾಲಿ ಖಾಲಿǃ ಅಂದರೆ ಉಳಿದವರೆಲ್ಲಾ ‘ಖಾಲಿ ಸಾಹಿತಿಗಳು’ ಅಥವಾ ‘ಖಾಲಿ ಚಿಂತಕರು’ ಎಂದೆ?
    ಪರಿಸರದ ಭಾಷೆಗೆ ಗೇಟ್ ಪಾಸ್ǃ ಮೊನ್ನೆ ತೀರ್ಪು ಪ್ರಕಟವಾದಾಗ ಒಬ್ಬರು ‘ಕನ್ನಡವನ್ನು ಮಾತೃಭಾಷೆ ಎನ್ನುವದಕ್ಕೆ ನನ್ನ ಆಕ್ಷೇಪವಿದೆ. ಪರಿಸರದ ಭಾಷೆ ಎನ್ನುವುದು ಸೂಕ್ತ. ಪರಿಸರಭಾಷೆಯ ಮಾಧ್ಯಮದಲ್ಲೇ ಶಿಕ್ಷಣ ಮಗುವಿಗೆ ದೊರೆಯಬೇಕು’ ಎನ್ನುವ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದರು. ಮೊನ್ನೆ (8/5) ಪ್ರಜಾವಾಣಿ, ಕನ್ನಡಪ್ರಭ ಮತ್ತು ಅವಧಿ ಹಾಗೂ ನೆನ್ನೆ (9/5) ವಿಜಯವಾಣಿಯಲ್ಲಿ ಪ್ರಕಟಗೊಂಡ ನನ್ನ ಬರಹದಲ್ಲಿ ‘ಕನ್ನಡವನ್ನು ವೈಯಕ್ತಿಕ ನೆಲೆಯಾದ ಮಾತೃಭಾಷೆಯಲ್ಲಿ ನೋಡುವುದಕ್ಕಿಂತ ಸಾರ್ವತ್ರಿಕವಾದ ರಾಜ್ಯಭಾಷೆಯ ನೆಲೆಯಲ್ಲಿ ನೋಡಬೇಕು ಹಾಗೂ ರಾಜ್ಯಭಾಷೆಯ ಅಭಿವೃದ್ಧಿಗೆ ಕೆಲಸವಾಗಬೇಕು’ ಎಂದು ಪ್ರತಿಪ್ರಾದಿಸಿದ್ದೆ. ಇಂದಿನ ಪತ್ರಿಕೆಯೊಂದರಲ್ಲಿ, ಮೊನ್ನೆಯಷ್ಟೇ ಪ್ರತಿಪಾದಿಸಿದ್ದ ‘ಪರಿಸರಭಾಷೆ’ ಪದಪುಂಜಕ್ಕೆ ಗೇಟ್ ಪಾಸ್ ನೀಡಿರುವ ಮಹನೀಯರು ಇಂದು ‘ಮಾತೃಭಾಷೆ ಎಂಬ ಬಳಕೆ ಸರಿಯಲ್ಲ. ರಾಜ್ಯಭಾಷೆ ಎಂದು ಬಳಸುವುದು ಸೂಕ್ತ’ ಎಂದು ಫಾರ್ಮಾನು ಹೊರಡಿಸಿದ್ದಾರೆǃ
    * ಕೊನೆಯಲ್ಲಿ ಒಂದು ಚುಟುಕುː
    ಕರ್ನಾಟಕದ ಸರ್ಕಾರಿ ಶಾಲೆಯಲ್ಲಿ
    ಸೈಕಲ್, ಮೊಟ್ಟೆ, ಹಾಲು,
    ಎರಡು ರೂಪಾಯಿ, ಬಿಸಿಯೂಟ
    ಜೊತೆಗೆ ರಾಜಕೀಯ ಜಾಸ್ತಿ.
    ಒಳ್ಳೆ ಕಟ್ಟಡ, ವಾತಾವರಣ,
    ಒಳ್ಳೆ ವಿದ್ಯೆ ಇವೆಲ್ಲಾ ನಾಸ್ತಿǃ

    ಪ್ರತಿಕ್ರಿಯೆ
  2. M.A.Sriranga

    “ಮಾತೃ ಭಾಷೆಯಲ್ಲಿ ಶಿಕ್ಷಣ” ಎಂದು ವಿಧೇಯಕ ಮಾಡಿದ್ದೇ ಗೊಂದಲಗಳಿಗೆ ಕಾರಣವಾಯಿತೇನೋ?! ಭಾರತದಂತಹ ಬಹು ಭಾಷೆಯ ದೇಶದಲ್ಲಿ, ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಗಣತಂತ್ರ ಹಾಗು ಪ್ರಜಾಪ್ರಭುತ್ವ ಸರ್ಕಾರದ ವ್ಯವಸ್ಥೆಯಲ್ಲಿ ಪ್ರಜೆಗಳು ಭಾರತದ ಯಾವ ಭಾಗದಲ್ಲಿ ಬೇಕಾದರೂ ವಾಸಿಸಬಹುದಾಗಿದೆ. ಇದರಿಂದ ಸಹಜವಾಗಿ ಭಾಷೆ,ಸಂಸ್ಕೃತಿಯ ದೃಷ್ಟಿಯಿಂದ ಸಾಮಾನ್ಯವಾಗಿ ಪ್ರತಿಯೊಂದು ರಾಜ್ಯವೂ ಒಂದೊಂದು ಮಿನಿ ಭಾರತವೇ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ “ಒಂದು ಸಾಮಾನ್ಯ ಕಲಿಕಾ ಮಾಧ್ಯಮದ ಭಾಷೆ”ಯಾಗಿ ಮತ್ತು ನಂತರದಲ್ಲಿ ವ್ಯಾವಹಾರಿಕವಾಗಿ ಇಂಗ್ಲಿಷ್ ಹೊರಹೊಮ್ಮಿದ್ದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಅದೇ ಸಮಯದಲ್ಲಿ ಆಯಾ ರಾಜ್ಯಗಳ ಭಾಷೆಯ ಅಭಿವೃದ್ಧಿಯೂ ಆಯಾ ರಾಜ್ಯಸರ್ಕಾರಗಳ ಕರ್ತವ್ಯ. ಹೀಗಾಗಿ ಇತರ ರಾಜ್ಯಗಳಿಗೆ ಹೋಲಿಸಿದರೆ ಸ್ವಲ್ಪ ತಡವಾಗಿಯಾದರೂ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಹಾಗೂ ಹೀಗೂ ತನ್ನ ನೆಲೆ ಕಂಡುಕೊಳ್ಳುತ್ತಿದೆ. ಕರ್ನಾಟಕದ ಪ್ರಮುಖ ರಾಜ್ಯ ಭಾಷೆಯಾದ ಕನ್ನಡವನ್ನು( ಇತರ ಉಪಭಾಷೆಗಳೂ ಕರ್ನಾಟಕದಲ್ಲಿವೆ. ಉದಾ:ತುಳು,ಕೊಂಕಣಿ,ಇತ್ಯಾದಿಗಳು) ಶಿಕ್ಷಣದ ಮಾಧ್ಯಮದ ವಿಷಯ ಬಂದಾಗ “ಮಾತೃ ಭಾಷೆ” ಎಂದು ಯಾವ ಐ ಎ ಎಸ್ ಮಹಾಶಯ ನಿರ್ಧರಿಸಿದನೋ ಕಾಣೆ. ಹೋಗಲಿ ಆತ ಬೇರೆ ಯಾವುದೋ ರಾಜ್ಯದವನಿರಬೇಕು ಆತನಿಗೆ ಭಾಷೆಯ ಈ ಒಳ ಸುಳಿಗಳು ಗೊತ್ತಿಲ್ಲ ಎಂದು ಮಾರ್ಜಿನ್ ಕೊಡಬಹುದಾದರೂ ಆ ಕಡತಕ್ಕೆ ಸಹಿ ಹಾಕಿದ ಮಂತ್ರಿ/ಮುಖ್ಯ ಮಂತ್ರಿ ಯವರು ಅನುಕಂಪಕ್ಕೆ ಅರ್ಹರಲ್ಲ. ಅಥವಾ ಈ ತಾಂತ್ರಿಕ ದೋಷ (ಕನ್ನಡ=ಕರ್ನಾಟಕದಲ್ಲಿ ವಾಸಿಸುವ ಎಲ್ಲರ ಮಾತೃ ಭಾಷೆ) ಬೇಕೆಂದೇ ಮಾಡಿದ ಸಂಚೋ? ಎಂಬ ಅನುಮಾನವೂ ಬರಬಹುದು. ಸತ್ಯನಾರಾಯಣ ಅವರು ತಮಿಳುನಾಡಿನ ಉದಾಹರಣೆ ಕೊಟ್ಟಿದ್ದಾರೆ. ಕೇಂದ್ರದ ಹಿಂದಿ ಹೇರಿಕೆಯನ್ನು ಅವರು ಬೀದಿಗಿಳಿದು ಪ್ರತಿಭಟಿಸಿ ಕೇಂದ್ರವನ್ನು ಬಗ್ಗಿಸಿ ದ್ವಿಭಾಷಾ ಸೂತ್ರಕ್ಕೆ ಈಗಲೂ ಬದ್ಧರಾಗಿದ್ದಾರೆ. ಆದರೆ ಇಡೀ ವಿಶ್ವವೇ ನಮ್ಮನ್ನು ನೋಡಿ ಮೆಚ್ಚಬೇಕೆಂಬ “ವಿಶ್ವ ಮಾನವತಾವಾದಿಗಳಾದ ಕನ್ನಡಿಗರು” ಕೇಂದ್ರ ಸರ್ಕಾರಕ್ಕೆ ನಡು ಬಗ್ಗಿಸಿ ಪರಾಕು ಹೇಳಿ ತ್ರಿ ಭಾಷಾ ಸೂತ್ರಕ್ಕೆ ಒಪ್ಪಿ ಕನ್ನಡಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇಲ್ಲಿ ಇನ್ನೊಂದು ವಿಷಯವನ್ನೂ ನಾವು ಗಮನಿಸಬೇಕು. ಸ್ವಾತಂತ್ರ್ಯಾನಂತರ ಈ ಅರವತ್ತೇಳು ವರ್ಷಗಳು ನಾವು ಒಂದಲ್ಲ ಒಂದು “ರಾಷ್ಟ್ರೀಯ ಪಕ್ಷಗಳ”ಸರ್ಕಾರವನ್ನೇ ಆರಿಸುತ್ತಿದ್ದೇವೆ; ಅವರ ಹೈ ಕಮಾಂಡ್ ನ ಆಶ್ರಯದಲ್ಲೇ ಬದುಕುತ್ತಿದ್ದೇವೆ. ನಮ್ಮಲ್ಲಿ ಒಂದು ಪ್ರಾದೇಶಿಕ ಪಕ್ಷ at least ವಿರೋಧಪಕ್ಷವಾಗಿಯಾದರೂ ಇದೆಯೇ?. ಯಾರಾದರೂ ಆ ಮಾತು ಆಡಿ ಸಂಘಟನೆಗೆ ಹೊರಟರೆ ನಮ್ಮವರೇ ಅವರ ಕಾಲು ಎಳೆಯುತ್ತಾರೆ; ಅದು ಭಾಷಾ ದುರಾಭಿಮಾನವಾಗುತ್ತದೆ. ಹಾಗೆ ಮಾಡಬಾರದು. ನಮ್ಮ ಆದಿ ಕವಿ ಪಂಪ ಏನು ಹೇಳಿದ್ದಾನೆ ಗೊತ್ತಿಲ್ಲವೇ ನಿಮಗೆ? ‘ಮನುಷ್ಯ ಜಾತಿ ತಾನೊಂದೇ ವಲಂ’ ಬನ್ನಿ ಬನ್ನಿ ಹೋಗೋಣ ಎಂದು ಕರೆದೊಯ್ಯುತ್ತಾರೆ . ಈಗ ನಮ್ಮ ತಪ್ಪಿಗೆ ಬೇರೆಯವರನ್ನು ದೂರಿ ಏನೂ ಪ್ರಯೋಜನವಿಲ್ಲ. ಈಗಲಾದರೂ ನಮ್ಮೀ ಸರ್ಕಾರ ಕಾನೂನಿನ ಕುಣಿಕೆಯನ್ನು ಇನ್ನಷ್ಟು ಭದ್ರವಾಗಿಸುವಂತಹ ಕಾರ್ಯ ಮಾಡದೆ ಈ ಕುತ್ತಿನಿಂದ ಪಾರಾಗುವ ದಾರಿ ಹುಡುಕಬೇಕಾಗಿದೆ.

    ಪ್ರತಿಕ್ರಿಯೆ
  3. devanand

    kiran sir , nice & valuable points are being mentioned here. of-course this matter has to be discussed from all the angles & from everyone’s perspective. during the era of ‘global village’… things r getting too tough to clearly say..” this is a absolutely right”. let the thoughts flow from all sides & the in the due course”time” will decide..the best ‘solution’. hopefully !!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: