ಕಮಲಾಕಾರ ಕಡವೆ ಅವರು ಅನುವಾದಿಸಿದ ಅಶೋಕ ವಾಜಪೇಯಿ ಕವಿತೆಗಳ ಸಂಗ್ರಹ ‘ಈ ಲೋಕದೊಳಗಿನ ಅನಂತ ಲೋಕಗಳು’
‘ಅಕ್ಷರ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಸಂಕಲನಕ್ಕೆ ಎಚ್ ಎಸ್ ಶಿವಪ್ರಕಾಶ್ ಅವರ ಮುನ್ನುಡಿ ಮತ್ತು ಕೆಲವು ಆಯ್ದ ಕವನಗಳು ಇಲ್ಲಿವೆ.
-ಎಚ್ ಎಸ್ ಶಿವಪ್ರಕಾಶ್
ಈ ಪುಸ್ತಕದಲ್ಲಿ ಅನುವಾದಿತವಾಗಿರುವ ಕವಿತೆಗಳ ರಚನಾಕಾರರಾದ ಅಶೋಕ ವಾಜಪೇಯಿ ಅವರು ನನಗೆ ತೀರಾ ಆತ್ಮೀಯರು. ನನ್ನ ಮತ್ತು ಅವರ ಸ್ನೇಹ ಸಂಬಂಧ ಸುಮಾರು ನಾಲ್ಕು ದಶಕಗಳಷ್ಟು ಹಳೆಯದು. ಈ ಕವಿತೆಗಳ ಅನುವಾದಕರಾದ ಕಮಲಾಕರ ಕಡವೆ ಅವರು ಸಹ ನನಗೆ ಬಹಳ ಆತ್ಮೀಯರು. ಮೂಲ ಕವಿ ಮತ್ತು ಅನುವಾದಕರು ನನಗೆ ಅತ್ಯಂತ ಪ್ರಿಯರೆಂಬ ವಿಷಯವನ್ನು ಬದಿಗಿಟ್ಟು ಈ ಕವಿತೆಗಳ ಮತ್ತು ಅವುಗಳ ಅನುವಾದದ ಬಗ್ಗೆ ನನ್ನ ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.
ಅಶೋಕ ವಾಜಪೇಯಿ ಅವರು ಕೇವಲ ಕವಿಗಳಲ್ಲ. ಒಂದು ಅರ್ಥದಲ್ಲಿ ಅವರು ಕಾವ್ಯಸಂಸ್ಕೃತಿಯ ನಿರ್ಮಾತೃರು. ಭಾರತದಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬೃಹತ್ ಕವಿಸಮ್ಮೇಳನಗಳನ್ನು ಏರ್ಪಾಟು ಮಾಡಿದವರು. ಅವರು ಭೋಪಾಲಿನ ಭಾರತಭವನದ ನಿರ್ದೇಶಕರಾಗಿದ್ದಾಗ ಕಾವ್ಯವನ್ನು ಪ್ರೋತ್ಸಾಹಿಸಲು ಹಲವು ಹನ್ನೊಂದು ಸಮ್ಮೇಳನಗಳನ್ನು, ಅನುವಾದ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ಏರ್ಪಡಿಸಿ ಭಾರತೀಯ ಭಾಷಾ ಕಾವ್ಯಗಳನ್ನು ಮತ್ತು ವಿಶ್ವದ ಪ್ರಮುಖ ಭಾಷೆಗಳ ಕಾವ್ಯವನ್ನು ಒಟ್ಟಿಗೆ ತಂದು ಸಹೃದಯರಿಗೆ ಅನುಪಮವಾದ ರಸಾನುಭವವನ್ನು ನೀಡಿದವರು. ಅಶೋಕ ವಾಜಪೇಯಿ ಅವರ ಪ್ರತಿಭೆ ಪಾಂಡಿತ್ಯಗಳು ಕಾವ್ಯದ ಎಲ್ಲೆಗಳನ್ನು ದಾಟಿ ಎಲ್ಲ ಕಲೆಗಳಿಗೂ ವ್ಯಾಪಿಸಿವೆ. ಸಂಗೀತ ಚಿತ್ರಕಲೆ ನಾಟಕ ಇತ್ಯಾದಿ ಕಲೆಗಳನ್ನೂ ಕಾವ್ಯದ ಜತೆಜತೆಗೆ ಮುನ್ನೆಲೆಗೆ ತರುತ್ತಾ ಬಂದಿದ್ದಾರೆ. ನನ್ನ ಪ್ರಕಾರ ಭೋಪಾಲಿನಲ್ಲಿ ಅವರ ಭಾರತಭವನದ ದಿನಗಳು ಕಳೆದ ಶತಮಾನದ ಭಾರತೀಯ ಕಾವ್ಯ ಮತ್ತು ಸಂಸ್ಕೃತಿಗಳ ಸುವರ್ಣ ಯುಗವಾಗಿತ್ತು. ಈ ಎಲ್ಲ ಕಲೆಗಳ ಅಂಶಗಳು ಅವರ ಕಾವ್ಯದಲ್ಲಿ ಹಾಸುಹೊಕ್ಕಾಗಿರುವುದು ಸಹೃದಯರಿಗೆ ಗೋಚರವಾಗದೇ ಇರದು.

ವಾಜಪೇಯಿ ಅವರು ಹಿಂದಿಯ ಬಹುಪ್ರಶಂಸಿತ ಕವಿಗಳಾಗಿರುವಂತೆಯೇ ಬಹುನಿಂದಿತ ಕವಿಗಳೂ ಆಗಿದ್ದಾರೆ. ವಿಶೇಷವಾಗಿ ಹಿಂದಿಯ ಪ್ರಧಾನ ಧಾರೆಯಾಗಿದ್ದ ವಾಮಪಂಥೀಯ ಕಾವ್ಯದ ಪ್ರಭೃತಿಗಳು ವಾಜಪೇಯಿ ಅವರನ್ನು ಕಠೋರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಹಾಗೆ ನೋಡಿದರೆ, ಹಿಂದಿಯ ಅತ್ಯಂತ ಶ್ರೇಷ್ಠ ವಾಮಪಂಥೀಯ ಕವಿ ಗಜಾನನ ಮಾಧವ ಮುಕ್ತಿಬೋಧರನ್ನು ಗುರುತಿಸಿ ಅವರ ಕಾವ್ಯದ ಮಹತ್ವಪೂರ್ಣತೆಯನ್ನು ಸಾರಿದವರು ವಾಜಪೇಯಿ ಅವರೇ. ಆದರೆ, ವಾಮಪಂಥೀಯ ಕಾವ್ಯ ಏಕತಾನತೆಯೆಡೆಗೆ ತಿರುಗಿದಾಗ ಕಾವ್ಯದ ಇತರ ಸತ್ವಗಳನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನು ಅವರು ಮಾಡಬೇಕಾಯಿತು. ಒಂದಷ್ಟು ಕಾಲ ತಮ್ಮ ಅನುಯಾಯಿಗಳ ಜೊತೆಗೆ ಸೇರಿಕೊಂಡು ತಮ್ಮದೇ ಆದ ಕಾವ್ಯ ಪಂಥವನ್ನು ಸ್ಥಾಪಿಸಿದರು. ಕಾವ್ಯವನ್ನು ಸರಳ ರೇಖಾತ್ಮಕವಾದ, ಬೌದ್ಧಿಕವಾದಿ ಇತಿಹಾಸ ದೃಷ್ಟಿಯಿಂದ ಬಿಡಿಸಲು ಆ ಮೂಲಕ ಸಾಧ್ಯವಾಯಿತು. ವಾಮಪಂಥೀಯ ಕಾವ್ಯ ಮುಕ್ತಿಬೋಧರಂತಹ ಮಹಾನ್ ಕವಿಗಳನ್ನು ಬಿಟ್ಟರೆ ಕೇವಲ ಶೋಷಣೆಯ ಮೇಲೆ ಕಣ್ಣುನೆಟ್ಟು ಜಗತ್ತಿನ ಸೋಜಿಗಗಳನ್ನು, ಕೌತುಕಗಳನ್ನು, ನಿತ್ಯದ ಪವಾಡಗಳನ್ನು ದೂರಮಾಡಿ ಕಾವ್ಯವನ್ನು ರಸಹೀನವಾಗಿಸಿತ್ತು. ಈ ಸಂಧರ್ಭದಲ್ಲಿ ವಾಜಪೇಯಿ ಅವರು ತಮ್ಮ ಕಾವ್ಯ ಪ್ರಯೋಗದ ಮೂಲಕ ಕಾವ್ಯಲೋಕಕ್ಕೆ ವೈವಿಧ್ಯತೆಯನ್ನು, ಬಹುಮುಖತೆಯನ್ನು ತಮ್ಮ ಪ್ರಯೋಗದಲ್ಲಿ ತಂದಿರುವುದು ಇಲ್ಲಿ ಅನುವಾದಿಸಿರುವ ಕವಿತೆಗಳ ಪ್ರಧಾನ ಲಕ್ಷಣವಾಗಿದೆ. ನಾನು ಈ ಸಂಕಲನದಲ್ಲಿ ಬಹುವಾಗಿ ಮೆಚ್ಚಿದ ಕಿರುಕವಿತೆ “ಬಾ” ಹೀಗಿದೆ:
ಬಾ
ಕತ್ತಲೊಳಗೆ ಕತ್ತಲೆ ಬಂದಂತೆ
ನೀರೊಳಗೆ ನೀರು ಸೇರುವಂತೆ
ಬೆಳಕಿನಲ್ಲಿ ಬೆಳಕು ಕರಗಿದಂತೆ
ಬಾ
ನನ್ನನ್ನು ಧರಿಸು
ಮರವು ಧರಿಸುವಂತದರ ತೊಗಟೆ
ಜಾಡು ಧರಿಸುವಂತೆ ಹಸಿರು ಹುಲ್ಲನ್ನು.
ಸ್ವೀಕರಿಸು ನನ್ನ
ಕತ್ತಲೆಯು ಬೇರೂರಿದಂತೆ
ನೀರು ಚಂದ್ರನತ್ತ ತುಡಿಯುವಂತೆ
ಶಾಶ್ವತತೆ ಕಾಲವನ್ನು ಕಬಳಿಸುವಂತೆ
ಇದನ್ನು ಮತ್ತು ಈ ಸಂಕಲನದಲ್ಲಿರುವ ಹಲವು ಶ್ರೇಷ್ಠ ಕವಿತೆಗಳನ್ನು ಓದಿದಾಗ, ನನಗೆ ಬಸವಣ್ಣನವರ ವಚನದ ಒಂದು ಸಾಲು ನೆನಪಾಯಿತು: “ಈ ಲೋಕದಲ್ಲೇ ಅನಂತ ಲೋಕಗಳು.” ಈ ಸಾಲನ್ನು ಇಲ್ಲಿರುವ ಎಲ್ಲ ಕವಿತೆಗಳ ನಿಗೂಢತೆಯನ್ನು ತೆರೆಯಬಲ್ಲ ಕೀಲಿಯನ್ನಾಗಿ ಬಳಸಬಹುದು ಎಂದು ನನಗನಿಸುತ್ತದೆ.
ಭಾರತೀಯ ಕಾವ್ಯ ಮೀಮಾಂಸೆಯ ಪ್ರಕಾರ ಕಾವ್ಯ ಲೋಕಾನುಭವವೂ ಅಲ್ಲ ಬ್ರಹ್ಮಾನುಭವವೂ ಅಲ್ಲ. ಅದು ಬರೀ ಲೌಕಿಕವಾದಾಗ ಕಾವ್ಯ ದೂರವಾಗಿ ಶಾಸ್ತ್ರ ಸಮೀಪವಾಗುತ್ತದೆ. ಇನ್ನು ಬ್ರಹ್ಮಾನುಭವದ ಕಡೆಗೆ ಹೊರಳಿದರೆ ಅಲ್ಲಿ ಕಾವ್ಯಕ್ಕೆ ಜಾಗವೇ ಇಲ್ಲ. ಸಾಮಾನ್ಯ ಸಂಗತಿಗಳಲ್ಲಿ ಅಡಗಿ ಕೂತಿರುವ ಕೌತುಕಗಳನ್ನು ಇಲ್ಲಿನ ಕವಿತೆಗಳು ಅನಾವರಣಗೊಳಿಸುತ್ತವೆ. ತೀರಾ ಸಾಮಾನ್ಯವಾದುದರಲ್ಲಿ ಅಸಾಮಾನ್ಯವಾಗಿರುವುದನ್ನು ದರ್ಶಿಸುತ್ತದೆ. ಇಲ್ಲಿ ಎರಡು ರೀತಿಯ ಕವಿತೆಗಳನ್ನು ನಾನು ಕಾಣುತ್ತೇನೆ. ಮೊದಲ ಗುಂಪಿನ ಕವಿತೆಗಳು ಅನುಭವ ಜನ್ಯವಾಗಿ ಅತ್ಯಂತ ವಿಶಿಷ್ಟವೂ ಅನನ್ಯವೂ ಆಗಿವೆ. ಅವು ಪ್ರಧಾನವಾಗಿ ನೇರ ಅನುಭವದತ್ತ ಗಮನ ಹರಿಸುವುದರಿಂದ ಅತಿ ಕಾವ್ಯಾತ್ಮಕತೆಯಿಂದ ದೂರ ಉಳಿಯುತ್ತವೆ. ಎರಡನೆಯ ಗುಂಪಿನ ಕವಿತೆಗಳು ಪ್ರಜ್ನಾಪೂರ್ವಕವಾಗಿ ಕಾವ್ಯ-ಕಲೆ-ಕಲಾಕಾರರನ್ನು ಕುರಿತಾಗಿರುವವು. ಉದಾಹರಣೆಗೆ ಮಲ್ಲಿಕಾರ್ಜುನ ಮನ್ಸೂರ್, ಕುಮಾರ ಗಂಧರ್ವ, ಸ್ವಾಮಿನಾಥನ್, ರಜಾ ಮುಂತಾದವರನ್ನು ಚಿತ್ರಿಸುವ ಕವಿತೆಗಳು. ಸ್ವಾಮಿನಾಥನ್ ಅವರ ಹಾರುವ ಕಲ್ಲಿನ ಕುರಿತ ಕವಿತೆ ಒಂದು ಅನನ್ಯ ಸೃಷ್ಟಿಯಾಗಿದೆ. ಆದರೆ, ಈ ಗುಂಪಿನಲ್ಲಿರುವ ಬಹುತೇಕ ಕವಿತೆಗಳು ಪ್ರಜ್ನಾಪೂರ್ವಕವಾಗಿ ಅತಿಕಲಾತ್ಮಕತೆಯ ಕಡೆಗೆ ವಾಲುವುದರಿಂದ ಮೊದಲ ಗುಂಪಿನ ಕವಿತೆಗಳ ಹಾಗೆ ಅಪೂರ್ವವಾದ ಆಹ್ಲಾದವನ್ನು ಉಂಟು ಮಾಡುವುದಿಲ್ಲ ಎಂಬ ತಕರಾರು ನನಗಿದೆ.
ಒಟ್ಟಿನಲ್ಲಿ ಕೇವಲ ಹಿಂದಿ ಮಾತ್ರವಲ್ಲದೇ ಇಡೀ ಭಾರತದ ವಿಶಿಷ್ಟ ಕವಿಗಳಾದ ಅಶೋಕ ವಾಜಪೇಯಿ ಅವರ ಕವಿತೆಗಳನ್ನು ಕನ್ನಡಕ್ಕೆ ತಂದು ಕಮಲಾಕರ ಕಡವೆ ಅವರು ನಮಗೆಲ್ಲ ದೊಡ್ದ ಉಪಕಾರ ಮಾಡಿದ್ದಾರೆ. ಅವರ ಅನುವಾದ ಮೂಲ ಕವಿತೆಗಳ ಹೃದ್ಯತೆಯನ್ನು, ಆಹ್ಲಾದವನ್ನು ಉಳಿಸಿಕೊಂಡಿವೆ. ಕವಿಯೊಬ್ಬ ಕಾವ್ಯದಲ್ಲಿ ಮರೆಯಾಗುವಂತೆ ಇಲ್ಲಿ ಅನುವಾದಕರು ಮೂಲಕವಿತೆಯಲ್ಲಿ ಮರೆಯಾಗಿ, ಆ ಮೂಲ ನೇರವಾಗಿ ನಮ್ಮನ್ನು ಮುಟ್ಟುವಂತೆ, ತಟ್ಟುವಂತೆ, ತಡವುವಂತೆ ಮಾಡಿದ್ದಾರೆ. ಯಾಕೆಂದರೆ ಕಮಲಾಕರ ಕಡವೆ ಅವರು ಸೂಕ್ಷ್ಮ ಅನುವಾದಕರು ಮಾತ್ರವಲ್ಲ ಇಂದಿನ ಕನ್ನಡದ ಅತ್ಯಂತ ಅಪರೂಪದ ಮತ್ತು ಅನನ್ಯ ಕವಿಗಳೂ ಆಗಿದ್ದಾರೆ. ಈ ಸಂಕಲನ ಕಾವ್ಯದ ಅತ್ಯಂತ ಸಮರ್ಥ ಅನುವಾದಕರು ಕವಿಗಳೇ ಆಗಿರುತ್ತಾರೆಂಬುದನ್ನು ಸಾಬೀತು ಮಾಡುತ್ತದೆ.
ಅಶೋಕ ವಾಜಪೇಯಿ ಅವರನ್ನು ಕನ್ನಡ ಭಾಷೆಗೆ ಸ್ವಾಗತಿಸುತ್ತೇನೆ. ಇಲ್ಲಿರುವ ಕಾವ್ಯ ರಚನಾ ಮಾದರಿಗಳು ಕನ್ನಡದಲ್ಲಿ ಪ್ರಚಲಿತ ಇರುವ ಎಲ್ಲ ಮಾದರಿಗಳಿಂದ ಭಿನ್ನವಾಗಿರುವುದರಿಂದ ಕನ್ನಡ ಭಾಷೆಗೆ ಇದುವರೆಗೂ ಕಂಡರಿಯದ ಕಾವ್ಯದ ಸಾಧ್ಯತೆಗಳನ್ನು ಇವು ಪರಿಚಯಿಸುತ್ತವೆ. ನಾನು ನನ್ನ ಸನ್ಮಿತ್ರರಾದ ಅಶೋಕ ವಾಜಪೇಯಿ ಅವರನ್ನೂ, ಕಮಲಾಕರ ಕಡವೆ ಅವರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
**
ಅಶೋಕ ವಾಜಪೇಯಿ ಅವರ ಕೆಲವು ಕವನಗಳು
ಅನುವಾದ: ಕಮಲಾಕರ ಕಡವೆ
ಕೇಳಿಬರುತಿರುವ ಈ ಸದ್ದು
ಕೇಳಿಬರುತಿರುವ ಈ ಸದ್ದು
ಮಂಜಿನಲ್ಲಿ ಇದ್ದಕ್ಕಿದ್ದಂತೆ ಸ್ಥಗಿತವಾದ ಚಂದ್ರೋದಯದ ನಿಟ್ಟುಸಿರಿನಂತೆ,
ಬಿರುಗಾಳಿಯ ನಂತರ ಮರಗಳ ಮೇಲೆ ಉಳಿದ ಎಲೆಗಳ ನರಳುವಿಕೆಯಂತೆ,
ಒಂದು ಪಾತ್ರೆಯಲ್ಲಿ ಸುರಿದ ದ್ರವವು ಕುದಿಯುತ್ತಿದ್ದಂತೆ—
ನಾನು ಕವಿತೆಯಲ್ಲಿ ಒಂದು ಕಿಟಕಿಯನ್ನು ತೆರೆಯುತ್ತೇನೆ
ಬಹಳ ಮೃದುವಾಗಿ ಕೇಳಿ ಬರುತ್ತದೆ
ಮರೆತುಹೋದ ದೇವರ ರೋದನದ ಧ್ವನಿ
ಯಾವುದೋ ಪಾಳುಬಿದ್ದ ದೇವಾಲಯದಲ್ಲಿ.
ಕೇಳಿಬರುತಿರುವ ಈ ಸದ್ದು—
ಯಾವುದೋ ಅಜ್ಞಾತ ನದಿಯ ಆಳದಲ್ಲಿನ ಹಸಿರು
ಒಂದು ಸ್ವರವಾಗಿ ತೇಲುತ್ತದೆ ಗಾಳಿಯಲ್ಲಿ,
ಯಾವುದೋ ಪರ್ವತದ ಗುಹೆಯಲ್ಲಿ ಮಲಗಿರುವ ಸನ್ಯಾಸಿಯ ಮೂಳೆಗಳು ನಡುಗುತ್ತಿವೆ
ಕೇಳಿಬರುತಿರುವ ಈ ಸದ್ದು—
ಯಾರಾದರೂ ನನ್ನನ್ನು ಏಕೆ ಕರೆಯುತ್ತಾರೆ?
ಯಾರಿಗೆ ಗೊತ್ತು ನನಗೆ ಸದ್ದು ಕೇಳುತ್ತಿದೆಯೆಂದು,
ಯಾರದಿರಬಹುದು ಈ ಧ್ವನಿ ಬೆಳಗಿನ ಮಂಜಿನಂತೆ ನನ್ನನ್ನು
ಆವರಿಸಿರುವುದು?
ಕೇಳಿಬರುತಿರುವ ಈ ಸದ್ದು—
ಮತ್ತೆ ಬೇರೆಲ್ಲಿಯೂ ಹೋಗುವುದಿಲ್ಲ.
**
ಬದುಕು ಎಲ್ಲೆಡೆ ಮಾಗುತ್ತಿದೆ
ಬಾಗಿಲು, ಕನ್ನಡಿ, ಗೋಡೆ, ಗೂಡುಗಳನ್ನು ಮೀರಿ
ಅಂಗಳದಂತೆ ಪ್ರಕಾಶಮಾನವಾಗಿರುವ ಉಜ್ವಲತೆಯಿದೆ
ಅದನ್ನು ತಲುಪಲು ಚಪ್ಪಲಿಗಳು ಸಾಕು-
ನಾನು ದೇವತೆಗಳಿಗೆ ಏನೋ ಹೇಳುವ ಮೊದಲೇ
ಪೂರ್ವಜರೆಂದರು ಅವರ ಬಗ್ಗೆ ಚಿಂತಿಸದಿರಲು;
ಏಕೆಂದರೆ ಇದು ಬದುಕುವ ಸಮಯ
ಅದರ ಮೇಲಿರಲಿ ಗಮನ
ದೇವತೆಗಳು ಕರೆದು ತರಬಹುದು ಮತ್ತೆ,
ಅವರ ಬಗ್ಗೆ ಚಿಂತಿಸದಿರು.
ಮಾವು ಮರದ ಮೇಲೆ ತನ್ನದೇ ಬೆಂಕಿಯಿಂದ ಮಾಗುವಂತೆ,
ದೇಹ, ಆತ್ಮ ತಮ್ಮದೇ ಬೆಂಕಿಯಲ್ಲಿ ಮಾಗುವಂತೆ,
ಹಾಗೆಯೇ ಮಾಗಲಿ ಬದುಕು.
ಚಿಂತಿಸದೆ ಸಾವಿನ ಕುರಿತು:
ಸಾವಿನಲ್ಲಿ ಕೊನೆಯಾಗದು ಬದುಕು,
ಅದರಗ್ನಿ ಮುಂದುವರಿಯುತ್ತದೆ,
ಅದರ ಹಿಂಬಾಲಿಸು.
ಮಾಗುವಿಕೆ ಮರಣವನ್ನು ಮೀರಬಲ್ಲದು.
ಗಾಳಿಯಲ್ಲಿ ಇನ್ನೂ ಇದೆ ತೇವಾಂಶ,
ಚಿತೆಯ ಬೆಂಕಿ, ಹೊಗೆ ನೆರೆಹೊರೆಯನ್ನಿನ್ನೂ ಕವಿದಿಲ್ಲ.
ಸಾಕು ಕುರ್ತಾ ಮತ್ತು ಪೈಜಾಮ
ನಿನ್ನದೇ ಆದ ಶಾಖ ಇರಿಸಿಕೊಳ್ಳಲು
ಮತ್ತು ಇತರರಿಗೂ ಹಂಚಲು.
ಬದುಕುಳಿಯುವುದು
ಯಾವುದೇ ಪ್ರಾರ್ಥನೆಗಿಂತ ಮಿಗಿಲಾದದ್ದು
ಮತ್ತು ಬದುಕು ಎಲ್ಲೆಡೆ ಮಾಗುತ್ತಿದೆ.
**
ನಮ್ಮ ಸಮಯದ ಕುರಿತು ಬರೆಯಲಾಗದು ನಮಗೆ
ಈ ಏಕಾಂಗಿ ನಿರ್ಜನ ಸಮಯ
ಇದರಲ್ಲಿ ಹಕ್ಕಿಗಳು, ಗುಬ್ಬಚ್ಚಿಗಳು ಸಹ ಮೌನವಾಗಿರುತ್ತವೆ,
ಇದರಲ್ಲಿ ದಿನನಿತ್ಯದ ಸದ್ದುಗಳಿಲ್ಲ, ಕೇವಲ ಪ್ರತಿಧ್ವನಿಗಳಿರುತ್ತವೆ,
ಇದರಲ್ಲಿ ಪ್ರಾರ್ಥನೆಗಳು, ಆಕ್ರಂದನಗಳು, ಪ್ರಲಾಪಗಳು ಮೌನದಲ್ಲಿ ಲೀನವಾಗುತ್ತವೆ,
ಇದರಲ್ಲಿ ಒಡನಾಟವನ್ನು ಎಲ್ಲೋ ಅಡಗಿಸಲಾಗಿದೆ,
ಇದರಲ್ಲಿ ಮೌನವು ಕಾಲದಂತೆ ಎಲ್ಲೆಡೆ ಹರಡಿದೆ,
ಅಂತಹ ಸಮಯದ ಬಗ್ಗೆ ನಾವು ಹೇಗೆ ಬರೆಯಬಹುದು?
ಇದು ನಮ್ಮ ಸಮಯವೋ ತಿಳಿಯದು ನನಗೆ.
ಇಲ್ಲಿ ನಾವು ಮತ್ತೊಂದು ಸಮಯದೊಳಗೆ ಒತ್ತಾಯದಿಂದ ಹೊಕ್ಕಿದ್ದೇವೆ
ಅದರಲ್ಲಿ ಸಮಯ ಸಮತಟ್ಟಾಗಿದೆ.
ಅದರಲ್ಲಿ ಯಾವುದೇ ಸುಕ್ಕುಗಳು, ಪದರಗಳು, ಬಿರುಕುಗಳು ಗೋಚರಿಸುವುದಿಲ್ಲ
ಇದರಿಂದ ತಪ್ಪಿಸಿಕೊಳ್ಳುವ ಮಾರ್ಗವೂ ತಿಳಿದಿಲ್ಲ.
ನಮ್ಮ ಸಮಯದ ಕುರಿತು ಬರೆಯಲಾಗದು ನಮಗೆ.
ಈ ಸಮಯ ನಿಧಾನವಾಗಿ ಸಾಗುತ್ತಿದೆ.
ಗಡಿಯಾರಗಳೆಲ್ಲ ತಡವಾಗಲು ನಿರ್ಧರಿಸಿದಂತೆ ತೋರುತ್ತದೆ;
ಅಕಾಲಿಕ ಗಾಳಿ ತಂಪಾಗಿರುತ್ತದೆ;
ಇದು ವಸಂತಕಾಲ ಮತ್ತು ಹೂವುಗಳು ಅರಳುತ್ತಿವೆ
ನಮ್ಮ ದುರದೃಷ್ಟವನ್ನು ನೋಡಿ ನಗುತ್ತಿರುವಂತೆ
ಅಳಿಲುಗಳು ವೇಗವಾಗಿ ಓಡಿ
ಮರ, ಕಂಬಗಳನ್ನು ಹತ್ತುತ್ತಿವೆ, ನಮ್ಮನ್ನು ಅಣಕಿಸಿ;
ಇದ್ದಕ್ಕಿದ್ದಂತೆ ಪಾರಿವಾಳಗಳು ಕಡಿಮೆಯಾಗಿವೆ
ದಿನಗೂಲಿ ಕಾರ್ಮಿಕರಂತೆ ತಂತಮ್ಮ ಊರು, ಮನೆಗಳಿಗೆ ಹಿಂತಿರುಗಿ
ಹೊರಡುವ ದುಃಖದ ಪ್ರಯಾಣ ಪ್ರಾರಂಭಿಸಿವೆಯೋ ಎಂಬಂತೆ;
ನಮಗಿರುವ ಸಮಾಧಾನವೆಂದರೆ,
ನಾವು ನಮ್ಮ ಕಾಲದಲ್ಲಿ ಇಲ್ಲದಿದ್ದರೂ, ನಾವು ನಮ್ಮ ಮನೆಯಲ್ಲಿದ್ದೇವೆ.
ಭರವಸೆ ಎಂಬುದು ಎಸೆಯಲ್ಪಟ್ಟ ಕಸದಂತೆ
ಒಂದು ಮೂಲೆಯಲ್ಲಿ ಅಡಗಿಕೊಂಡಿರಬೇಕು,
ಇವತ್ತಲ್ಲ ನಾಳೆ ಗುಡಿಸಿ ಎಸೆಯುವತನಕ.
ನಮ್ಮ ಸಮಯದ ಕುರಿತು ಬರೆಯಲಾಗದು ನಮಗೆ.
**






0 Comments