ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡ ನಾಡಿನ ಮೊದಲ ವಿಶ್ವಕೋಶ 'ಮಾನಸೋಲ್ಲಾಸ'

ಪಿ ಎಸ್ ಗುರುರಾಜ್

ಕರ್ನಾಟಕವು ಸಂಸ್ಕೃತ ಸಾಹಿತ್ಯದ ಆಡುಂಬೊಲ. ಪ್ರಾಚೀನ ಕಾಲದಿಂದಲೂ ಕನ್ನಡ ಮತ್ತು ಸಂಸ್ಕೃತ ಭಾಷಾಸಾಹಿತ್ಯಗಳೆರಡೂ ಪರಸ್ಪರ ಕೈಹಿಡಿದು ನಡೆದಿವೆ. ಕನ್ನಡ ಕವಿಗಳು ಸಂಸ್ಕೃತ ಭಾಷೆಯ ಅಂತಃಸತ್ವವನ್ನು ತಮ್ಮದಾಗಿಸಿಕೊಂಡಿರುವುದನ್ನು ನಾವು ಕಂಡಿದ್ದೇವೆ. ಕಳೆದ ಒಂದೂವರೆ ಸಾವಿರ ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸಂಸ್ಕೃತಕ್ಕೆ ಅಂತಃಸಾಕ್ಷಿಯ ಮತ್ತು ಅಂತರ್ಪ್ರವಾಹವು ಅವಿಚ್ಛಿನ್ನವಾಗಿ ಹರಿದುಕೊಂಡು ಬಂದಿದೆ.
ಸಂಸ್ಕೃತದಲ್ಲಿ ರಚನೆಗೊಂಡಿರುವ ಎರಡು ವಿಶ್ವಕೋಶಗಳು ಕನ್ನಡದ ನೆಲಕ್ಕೆ ಸೇರಿದವು ಎಂಬ ಹೆಮ್ಮೆ ಕನ್ನಡಿಗರದ್ದು. ಹನ್ನೆರಡನೆಯ ಶತಮಾನದ ಪೂರ್ವಾರ್ಧದಲ್ಲಿ ರಚನೆಗೊಂಡ ಚಾಲುಕ್ಯ ಚಕ್ರವರ್ತಿ ಸರ್ವಜ್ಞ ಮೂರನೆಯ ಸೋಮೇಶ್ವರನ ಅಭಿಲಷಿತಾರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ ಮೊದಲನೆಯದಾದರೆ, ಹದಿನಾರನೆಯ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಯ ಕೆಳದಿ ಸಂಸ್ಥಾನದ ರಾಣಿ ಚೆನ್ನಮ್ಮಾಜಿಯ ದತ್ತುಪುತ್ರ ಬಸವಭೂಪಾಲನಿಂದ ರಚಿತಗೊಂಡ ಶ್ರೀಶಿವತತ್ತ್ವರತ್ನಾಕರವು ಎರಡನೆಯ ವಿಶ್ವಕೋಶವಾಗಿದೆ.
ಮೊದಲನೆಯ ವಿಶ್ವಕೋಶವು ಸುಮಾರು ಎಂಟು ಸಾವಿರದ ಇಪ್ಪತ್ತೆರಡು ಶ್ಲೋಕಗಳನ್ನು ಹೊಂದಿದ್ದರೆ, ಎರಡನೆಯ ವಿಶ್ವಕೋಶವು ಹದಿಮೂರು ಸಾವಿರ ಶ್ಲೋಕಗಳಿಂದ ಕೂಡಿದ ಬೃಹತ್ ವಿಶ್ವಕೋಶವಾಗಿದೆ. ಮಾನಸೋಲ್ಲಾಸವು ಐದು ಪ್ರಕರಣಗಳಿಂದ, ನೂರು ಅಧ್ಯಾಯಗಳಿಂದ ಕೂಡಿದ್ದರೆ, ಶ್ರೀಶಿವತತ್ತ್ವರತ್ನಾಕರವು ಒಂಭತ್ತು ಕಲ್ಲೋಲ, ನೂರ ಎಂಟು ತರಂಗಗಳಿಂದ ಕೂಡಿದೆ. ಮೊದಲನೆಯದಾದ ಮಾನಸೋಲ್ಲಾಸವನ್ನು ತನ್ನ ವಿಶ್ವಕೋಶದಲ್ಲಿ ಅಡಗಿಸಿಕೊಂಡು ಬೆಳೆದ ಶ್ರೀಶಿವತತ್ತ್ವರತ್ನಾಕರವು ನೂರಾರು ಜ್ಞಾನಶಾಖೆಗಳನ್ನು ಒಳಗೊಂಡ ಮಹಾವೃಕ್ಷವಾಗಿದೆ.
ಕರ್ನಾಟಕದ ಹತ್ತು ಮತ್ತು ಹನ್ನೆರಡನೆಯ ಶತಮಾನಗಳು ಪ್ರಭಾವಶಾಲಿ ಸೃಜನಸಾಹಿತ್ಯವನ್ನು ರೂಪಿಸಿದ ಸಂದರ್ಭಗಳೆನಿಸಿವೆ. ಹತ್ತನೆಯ ಶತಮಾನವು ವೀರಯುಗವಾದರೆ, ಹನ್ನೆರಡನೆಯ ಶತಮಾನವು ಭಕ್ತಿಯುಗವಾಗಿದೆ. ಇವುಗಳ ಮಧ್ಯದ ಅವಧಿಯನ್ನು ಸಾಹಿತ್ಯಚರಿತ್ರಕಾರರು ಬರಡುಯುಗವೆಂದು ಕರೆದಿದ್ದಾರೆ. ಆದರೆ, ಆ ಕಾಲದ ಸಂದರ್ಭವನ್ನು ಸೂಕ್ಷ್ಮವಾಗಿ ನೋಡಿದರೆ ಪ್ರಯೋಗಯುಗವೆಂದೇ ನಾವು ತಿಳಿಯಬೇಕು. ಹತ್ತು ಮತ್ತು ಹನ್ನೆರಡನೆಯ ಶತಮಾನದ ನಡುವಣ ಕಾಲದಲ್ಲಿ ಸೃಜನಸಾಹಿತ್ಯದ ಜೊತೆ ಶಾಸ್ತ್ರಸಾಹಿತ್ಯವು ವಿಫುಲ ಪ್ರಮಾಣದಲ್ಲಿ ಹುಟ್ಟಿಕೊಂಡಿತು. ಇದಕ್ಕೆ ಕಾರಣ, ರಾಷ್ಟ್ರಕೂಟರ ಅವನತಿ, ಕಲ್ಯಾಣ ಚಾಲುಕ್ಯರ ಉದಯದಿಂದಾಗಿ ಜೈನಧರ್ಮವು ದುರ್ಬಲಗೊಂಡಿತು.
ಹೀಗೆ ದುರ್ಬಲಗೊಂಡ ಜೈನಧರ್ಮದ ಅಡಿಯಲ್ಲಿ ವೈದಿಕ ಧರ್ಮವು ಪ್ರಬಲಗೊಂಡಿತು. ಇದರಿಂದಾಗಿ ಅಗ್ರಹಾರ ಸಂಸ್ಕೃತಿ ಸಂಖ್ಯಾತ್ಮಕವಾಗಿ ವರ್ಧನೆಗೊಂಡಿತು. ಇದನ್ನು ಕನ್ನಡದ ವಿದ್ವಾಂಸರು ಬಹುಸೂಕ್ಷ್ಮವಾಗಿ ಗುರುತಿಸಿದ್ದಾರೆ. ಹನ್ನೆರಡನೆಯ ಶತಮಾನದ ಪೂರ್ವಾರ್ಧವು ಕರ್ನಾಟಕ ಕಾವ್ಯವೈಭವದಿಂದ ಶಾಸ್ತ್ರವೈಭವಕ್ಕೆ ಸರಿಯತೊಡಗಿತು. ಇದರ ಫಲವಾಗಿ ಕಾವ್ಯಶಾಸ್ತ್ರಗಳಾದ ಕಾವ್ಯಾವಲೋಕನ, ಕರ್ನಾಟಕ ಭಾಷಾಭೂಷಣ, ಛಂದೋವಿಚಿತಿ ಮತ್ತು ವಸ್ತುಕೋಶಗಳೆಂಬ ಅಲಂಕಾರ, ವ್ಯಾಕರಣ, ಛಂದಸ್ಸು, ನಿಘಂಟು ಕೃತಿಗಳು ಅವತರಣಗೊಂಡವು. ಕಾವ್ಯೇತರ ಶಾಸ್ತ್ರಕೃತಿಗಳಾದ ಜಾತಕ ತಿಲಕ, ಮದನ ತಿಲಕ, ಗೋವೈದ್ಯ, ಕಲ್ಯಾಣಕಾರಕ, ವೀರಾವಳಿ, ಲೋಕೋಪಕಾರ, ವ್ಯವಹಾರ ಗಣಿತಗಳು ಹುಟ್ಟಿಕೊಂಡವು. ಹೀಗೆ, ಕನರ್ಾಟಕದ ಮನಸ್ಸು ಸಾಹಿತ್ಯ ಸಮೃದ್ಧಿಯಿಂದ ಶಾಸ್ತ್ರಸಮೃದ್ಧಿಗೆ ಅವತರಣಗೊಳ್ಳುತ್ತಿದ್ದ ಸಂಕ್ರಮಣ ಕಾಲದಲ್ಲಿ ಮಾನಸೋಲ್ಲಾಸದ ಮಹಾಕೃತಿಸೃಷ್ಟಿಯು ಸಂಭವಿಸಿತು.

ಕನರ್ಾಟಕದಲ್ಲಿ ಅನೇಕ ರಾಜರು ಸಾಹಿತ್ಯ ಸೃಷ್ಟಿಗೆ ಆಶ್ರಯವನ್ನು ಕೊಡುವುದಲ್ಲದೆ, ಸ್ವತಃ ಸಾಹಿತ್ಯವನ್ನು ಸೃಷ್ಟಿಸುತ್ತಾ ಬಂದಿರುವುದನ್ನು ನಾವು ಕಾಣುತ್ತೇವೆ. ಬಾದಾಮಿ ಚಾಲುಕ್ಯರಲ್ಲಿ ವಿಜಯಾಂಬಿಕೆ, ಗಂಗರಲ್ಲಿ ಭೂವಿಕ್ರಮ, ದುರ್ವಿನೀತ, ಸೈಗೊಟ್ಟ ಶಿವಮಾರ ಮತ್ತು ರಾಷ್ಟ್ರಕೂಟರಲ್ಲಿ ಶ್ರೀನೃಪತುಂಗ -ಇವರನ್ನು ನಾವು ಹೆಸರಿಸಬಹುದು. ರಾಷ್ಟ್ರಕೂಟರನ್ನು ಸೋಲಿಸಿ ಕನರ್ಾಟಕವನ್ನು ಆಳಿದ ಅರಸರಲ್ಲಿ ಪ್ರಸಿದ್ಧರಾದವರು ಕಲ್ಯಾಣ ಚಾಲುಕ್ಯರು. ಈ ರಾಜವಂಶದ ಆದ್ಯಪುರುಷನೇ ಇಮ್ಮಡಿ ತೈಲಪ(973-977). ಇವನ ಮಗ ಇರಿವ ಬೆಡಂಗ (997-1008). ಇವನ ತಮ್ಮ ದಶವರ್ಮ. ಅವನ ಮಗ ವಿಕ್ರಮಾದಿತ್ಯ ಗಿ (1008-1015). ಇವನ ತಮ್ಮ ಜಯಸಿಂಹ (1015-1044). ಕಾವ್ಯಸೃಷ್ಟಿಯ ಜೊತೆಗೆ ಶಾಸ್ತ್ರದ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟ ಕೀತರ್ಿ ಈ ಜಯಸಿಂಹನಿಗೆ ಸೇರುತ್ತದೆ. ಪಂಪ ರಾಮಾಯಣ, ಮಲ್ಲಿನಾಥ ಪುರಾಣಗಳ ನಾಗಚಂದ್ರ ಹಾಗೂ ಸುಕುಮಾರ ಚರಿತೆಯ ಶಾಂತಿನಾಥ -ಇವರಂಥ ಸ್ವತಂತ್ರ ಕವಿಗಳು ಇವನ ಆಸ್ಥಾನದಲ್ಲಿದ್ದರು. ದುರ್ಗಸಿಂಹನ ಪಂಚತಂತ್ರ, ಇಮ್ಮಡಿ ನಾಗವರ್ಮನ ಕಾವ್ಯಾವಲೋಕನ, ಕನರ್ಾಟಕ ಭಾಷಾಭೂಷಣ, ವಸ್ತುಕೋಶ ಮತ್ತು ಛಂದೋವಿಚಿತಿ -ಈ ಕೃತಿಗಳು ರಚನೆಗೊಂಡದ್ದು ಇವರ ಕಾಲದಲ್ಲೇ. ಜಗದ್ಧಳ ಸೋಮನಾಥ ಬರೆದ ಕಲ್ಯಾಣಕಾರಕ, ಕೀತರ್ಿವರ್ಮ ಬರೆದ ಗೋವೈದ್ಯ, ವಜ್ರಭಟ್ಟ ರಚಿಸಿದ ವೀರಾವಳಿ, ರಾಜಾದಿತ್ಯ ರಚಿಸಿದ ವ್ಯವಹಾರಗಣಿತ -ಇವೇ ಮುಂತಾದ ಸಾಹಿತ್ಯೇತರ ಲೋಕಶಾಸ್ತ್ರಕೃತಿಗಳು ರಚನೆಗೊಂಡದ್ದು ಕಲ್ಯಾಣ ಚಾಲುಕ್ಯರ ವೈಭವದಲ್ಲೇ. ಲೋಕೋಪಕಾರದ ಚಾವುಂಡರಾಯನ ಕನ್ನಡ ವಿಶ್ವಕೋಶವು ಜಯಸಿಂಹನ ಆಶ್ರಯದಲ್ಲಿಯೇ ರಚಿತವಾಯಿತು. ಹೀಗಾಗಿ, ಜಯಸಿಂಹನ ಕಾವ್ಯ-ಶಾಸ್ತ್ರ-ಅನುವಾದ ಸಾಹಿತ್ಯಪೋಷಣೆ ಅಪಾರವೆನಿಸುತ್ತದೆ. ಪ್ರಯೋಗದೃಷ್ಟಿಯಿಂದ ಇವನ ಆಸ್ಥಾನವು ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ಆಸ್ಥಾನವನ್ನು ನಮ್ಮ ನೆನಪಿಗೆ ತರುತ್ತದೆ.
ಎರಡನೆಯ ಜಯಸಿಂಹನ ಮಗ ಸೋಮೇಶ್ವರ (1042-1068). ಇವನ ಮಗ ಸೋಮೇಶ್ವರ (1068-1076). ಇವನ ತಮ್ಮ ಆರನೆಯ ವಿಕ್ರಮಾದಿತ್ಯ (1076-1127). ಈತನು ತುಂಬಾ ಪ್ರಸಿದ್ಧನಾದ ರಾಜ. ‘ಕಲ್ಯಾಣದಂಥ ರಾಜಧಾನಿ ಹಿಂದೆಯೂ ಇರಲಿಲ್ಲ, ಮುಂದೂ ಇರುವುದಿಲ್ಲ’ವೆಂಬ ಖ್ಯಾತಿ ಇವನಿಂದಾಗಿ ಪಡೆದಿತ್ತು. ಈತ ಅರುವತ್ತು ವರ್ಷಗಳ ಕಾಲ ವೈಭವದಿಂದ ರಾಜ್ಯವನ್ನು ಆಳ್ವಿಕೆಯನ್ನು ಮಾಡಿದ. ಈತನ ಆಸ್ಥಾನದಲ್ಲಿಯೇ ಬಿಲ್ಹಣ ತನ್ನ ವಿಕ್ರಮಾಂಕದೇವ ಚರಿತೆಯನ್ನೂ ವಿಜ್ಞಾನೇಶ್ವರ ತನ್ನ ಮಿತಾಕ್ಷರವನ್ನೂ ಬರೆದು ಕೀತರ್ಿಶಾಲಿಗಳಾದುದು.
ಆರನೆಯ ವಿಕ್ರಮಾದಿತ್ಯನ ಮಗ ಮೂರನೆಯ ಸೋಮೇಶ್ವರ(1126-1139). ಇವನ ತಾಯಿ ಚಂದಲದೇವಿ. ಈಕೆ ಗುಲಬಗರ್ಾ ಜಿಲ್ಲೆಯ ಇಂದಿನ ಆಳಂದ ರಾಜಧಾನಿಯಿಂದ ಸಾವಿರಹಳ್ಳಿಗಳ ರಾಜ್ಯವನ್ನು ಆಳುತ್ತಿದ್ದಳು. ಕಲ್ಯಾಣ ಚಾಲುಕ್ಯರ ರಾಜಧಾನಿ ಆಳಂದ. ಇಲ್ಲಿಯ ಸುಪ್ರಸಿದ್ಧ ದೇವಾಲಯ ಸೋಮೇಶ್ವರ. ಈ ದೇವರ ಹೆಸರನ್ನೇ ಚಂದಲದೇವಿ ತನ್ನ ಮಗನಿಗಿಟ್ಟಿರುವ ಸಾಧ್ಯತೆ ಇದೆ. ಮೂರನೆಯ ಸೋಮೇಶ್ವರನ ತಂದೆ ಅರುವತ್ತು ವರ್ಷಗಳಷ್ಟು ಕಾಲ ಸುದೀರ್ಘವಾಗಿ ರಾಜ್ಯಭಾರವನ್ನು ಮಾಡಿದ. ಈ ಕಾಲದಲ್ಲಿ ಮೂರನೆಯ ಸೋಮೇಶ್ವರ ಶಾಸ್ತ್ರವ್ಯಾಸಂಗದಲ್ಲಿಯೂ ವಿದ್ಯಾವಿನೋದದಲ್ಲಿಯೂ ಕಳೆದನೆಂದು ತೋರುತ್ತದೆ. ಇದರ ಫಲವಾಗಿ ಮಾನಸೋಲ್ಲಾಸ ನಾಮಪ್ರಸಿದ್ಧಿಯ ಅಭಿಲಷಿತಾರ್ಥ ಚಿಂತಾಮಣಿ ಅವತರಿಸಿತು.
ಅತ್ಯಪೂರ್ವ ಸಂಸ್ಕೃತ ವಿಶ್ವಕೋಶ ಇದೀಗ ಸವಿಗನ್ನಡದಲ್ಲಿ
ಇಂಥ ಮಹಾಕೃತಿಯು ನಾನಾ ವಿಷಯ ಸಂಪತ್ತಿನಿಂದ ಪ್ರಕಾಶಮಾನವಾಗುತ್ತಿದೆ. ಈ ಕೃತಿಯು ತನಗಿಂತಲೂ ಹಿಂದಿದ್ದ ಅನೇಕ ಸಂಸ್ಕೃತ ಕೃತಿಗಳಿಂದ ವಿಶೇಷವಾದ ನೆರವನ್ನು ಪಡೆದಂತೆ ಕಾಣುತ್ತದೆ. ಇದಕ್ಕೆ ಉದಾಹರಣೆಯಾಗಿ, ಆಯುವರ್ೇದ ವಿಷಯಕ್ಕೆ ಸಂಬಂಧಿಸಿದಂತೆ ಬಂದಿರುವ ವಿವರಗಳು ಚರಕ, ಸುಶ್ರುತ ಮತ್ತು ವಾಗ್ಭಟರ ಕೃತಿಗಳಿಗೆ ಋಣಿಯಾಗಿರುವುದನ್ನು ನಾವು ಮರೆಯುವಂತಿಲ್ಲ. ಅದೇ ರೀತಿ, ಸಂಗೀತ-ನೃತ್ಯ-ನಾಟ್ಯಕ್ಕೆ ಸಂಬಂಧಿಸಿದಂತೆ ಸಾಮವೇದ, ಮತಂಗನ ಬೃಹದೇಶೀ, ಭರತನ ನಾಟ್ಯಶಾಸ್ತ್ರ, ಮುಂತಾದ ಕೃತಿಗಳಿಗೆ ಋಣಿಯಾಗಿದೆ. ರಾಜ್ಯ ವಿಷಯಕ್ಕೆ ಸಂಬಂಧಿಸಿದಂತೆ ಗುರು ಶುಕ್ರ ಮತ್ತು ಚಾಣಕ್ಯರ ಗ್ರಂಥಗಳನ್ನು ಅನುಸರಿಸಿರುವಂತೆ ತೋರುತ್ತದೆ. ಷೋಡಶ ಸಂಸ್ಕಾರಗಳಿಗೆ ಸಂಬಂಧಿಸಿದಂತೆ ಪ್ರಾಚೀನ ಗೃಹ್ಯಸೂತ್ರವನ್ನು ಅನುಸರಿಸಿರುವಂತೆ ತೋರುತ್ತಿದೆ. ಪ್ರತಿಮಾ ನಿಮರ್ಾಣಕ್ಕೆ ಸಂಬಂಧಿಸಿದಂತೆ ಬಂದಿರುವ ವಿವರಗಳು ಮಯಮತ, ವಿಷ್ಣುಧಮರ್ೋತ್ತರಪುರಾಣ, ಮುಂತಾದ ಗ್ರಂಥಗಳನ್ನು ಪರಿಶೀಲಿಸಿ ಅಲ್ಲಿಂದ ಅಭಿಪ್ರಾಯವನ್ನು ತೆಗೆದುಕೊಂಡಿದೆ. ಇಲ್ಲಿರುವ ಸ್ತ್ರೀಭೋಗ, ಶಯ್ಯಾಭೋಗ, ಪ್ರೇಮಕ್ರೀಡೆ, ಸುರತಕ್ರೀಡೆ -ಇವುಗಳನ್ನು ವಿವರಿಸುವಾಗ ವಾತ್ಸ್ಯಾಯನನ ಕಾಮಶಾಸ್ತ್ರಕ್ಕೆ ಋಣಿಯಾಗಿರುವುದನ್ನು ಮರೆಯುವಂತಿಲ್ಲ. ಮೂರನೆಯ ಸೋಮೇಶ್ವರನು ಅನೇಕ ವಸ್ತುವಿಚಾರಗಳನ್ನು ಒಂದು ಸ್ವರೂಪದಲ್ಲಿ ಅಥವಾ ಒಂದು ಕ್ರಮದಲ್ಲಿ ರೂಪಿಸುವಾಗ ತನ್ನ ಸಮಕಾಲೀನ ಮತ್ತು ಪ್ರಾಚೀನ ಜ್ಞಾನ-ವಿಜ್ಞಾನಗಳಿಗೆ ಪ್ರಾಶಸ್ತ್ಯ ನೀಡಿರುವುದನ್ನು ಈ ಗ್ರಂಥದಿಂದ ತಿಳಿಯಬಹುದು.
ಈ ಗ್ರಂಥದ ವಿಷಯ ಸಂಪತ್ತು ಯಾರನ್ನಾದರೂ ದಿಕ್ಕೆಡಿಸಬಲ್ಲುದು. ನೂರೆಂಟು ಜ್ಞಾನ-ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳು ಗ್ರಂಥದ ತುಂಬಾ ಇಡಿಕಿರಿದಿವೆ. ಸ್ಮೃತಿ, ಪುರಾಣ, ಕಾವ್ಯ, ನಾಟ್ಯ, ನೃತ್ಯ, ಸಂಗೀತ, ವಾದ್ಯ, ವಾದನ, ಔಷಧಿ, ಜ್ಯೋತಿಷ್ಯ, ಪೂಜನ, ಶುಶ್ರೂಷಣ, ರಕ್ಷಣ, ಗೃಹ, ಸ್ನಾನ, ಪಾದುಕಾ, ತಾಂಬೂಲ, ವಿಲೇಪನ, ಆಸನ, ಪುತ್ರ, ಅನ್ನ, ಪಾನೀಯ, ಧೂಪ, ಶಯ್ಯಾ, ಸ್ತ್ರೀ, ಶಸ್ತ್ರ, ಶಾಸ್ತ್ರ, ತುರಗ, ಅಂಕ, ಮಲ್ಲ, ಕುಕ್ಕುಟ, ಲಾವಕ, ಮೃಗಯಾ, ಕಥಾ,…. ಈ ಪಟ್ಟಿ ಬೆಳೆಯುತ್ತದೆ. ಹೀಗೆ ಮನುಷ್ಯ ಸಮುದಾಯಕ್ಕೆ ಬೇಕಾಗುವ ಎಲ್ಲ ಪರಿಕರಗಳನ್ನು ಒಂದು ಬಗೆಯ ಕ್ರಮಬದ್ಧತೆಯಲ್ಲಿ ಸೋಮೇಶ್ವರನು ಜೋಡಿಸಿಟ್ಟಿದ್ದಾನೆ. ಒಂದು ಸಾವಿರ ವರ್ಷಗಳ ಹಿಂದೆ ಈ ಬಗೆಯ ವಿನ್ಯಾಸವನ್ನು ರೂಪಿಸಿದ ಮೂರನೆಯ ಸೋಮೇಶ್ವರನ ವಿದ್ವತ್ಪ್ರತಿಭೆ ಬೆಕ್ಕಸಬೆರಗನ್ನು ನಮ್ಮಲ್ಲಿ ಉಂಟುಮಾಡುತ್ತದೆ. ಗ್ರಂಥದಲ್ಲಿರುವ ವಿಷಯಗಳನ್ನು ಪರಿಚಯಿಸುವಾಗ ಸಂಕ್ಷಿಪ್ತತೆ ಮತ್ತು ಸಮಗ್ರತೆಯ ಕಡೆಗೆ ಅವನ ಗಮನವಿರುವುದನ್ನು ಕಾಣಬಹುದು. ಯಾವುದೇ ಲೋಕೋಪಕಾರವಾದ ಕೃತಿಯು ಸಂಕ್ಷಿಪ್ತತೆ ಮತ್ತು ಸಮಗ್ರತೆಯನ್ನು ಪಡೆಯುವುದು ಸುಲಭಸಾಧ್ಯವಾದುದಲ್ಲ. ಒಂದು ಕಾವ್ಯದಲ್ಲಿ ಸಂಕ್ಷಿಪ್ತತೆ ಮತ್ತು ಸಮಗ್ರತೆಯನ್ನು ಕಾವ್ಯಭಾಷೆಯ ಆವರಣದಲ್ಲಿ ತರಬಹುದು. ಆದರೆ, ಶಾಸ್ತ್ರಕ್ಕೆ ಸಂಬಂಧಿಸಿದಂತೆ ಈ ಮಾತನ್ನು ಆಡುವುದು ಅಷ್ಟು ಸುಲಭವಲ್ಲ. ಇಂಥ ಸುಲಭವಲ್ಲದ, ಕಷ್ಟಸಾಧ್ಯವಾದ ಶಾಸ್ತ್ರಪರಿಕರಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವುದು ಪರಮಾಶ್ಚರ್ಯವೆನಿಸುತ್ತದೆ.
ಈ ಗ್ರಂಥದ ಅಚ್ಚುಕಟ್ಟುತನದ ಮಹತ್ವವಿರುವುದು ಅದು ಗಭರ್ೀಕರಿಸಿ ಕೊಂಡಿರುವ ಸಮಕಾಲೀನ ಆವರಣದಲ್ಲಿ. ಮಧ್ಯಕಾಲೀನ ಭಾರತ ಅಥವಾ ಕನರ್ಾಟಕದ ಸಮಕಾಲೀನ ಆಚಾರ-ವಿಚಾರಗಳ ಪರಿಪ್ರೇಕ್ಷ್ಯವನ್ನು ನಾವಿಲ್ಲಿ ಕಾಣಬಹುದಾಗಿದೆ. ಪ್ರತಿಯೊಂದು ಅಧ್ಯಾಯದಲ್ಲೂ ಸಮಕಾಲೀನ ಭೌಗೋಳಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಈ ಕೃತಿಯು ತನ್ನಲ್ಲಿ ಗರ್ಭೀಕರಿಸಿಕೊಂಡಿದೆ. ಈಗಾಗಲೇ ವಿದ್ವಾಂಸರು ಗುರುತಿಸಿರುವಂತೆ ತೀರ್ಥಸ್ನಾನಾಧ್ಯಾಯದಲ್ಲಿ ಗಂಗೆ, ನರ್ಮದೆ, ಮೊದಲಾದ ಭಾರತದ ಸುಪ್ರಸಿದ್ಧ ನದಿಗಳನ್ನು ಹೆಸರಿಸುತ್ತಾ, ಕನರ್ಾಟಕದ ಮಾಂಜರಾ, ಭೀಮ, ಕೃಷ್ಣ ಮತ್ತು ಮಲಪ್ರಭಾ ನದಿಗಳನ್ನು ಹೆಸರಿಸಿದೆ.
ಯೋಗಿನೀ ಪೀಠಗಳಲ್ಲಿ ಮೊದಲನೆಯದು ಜಾಲಂಧರ ಪೀಠ, ಎರಡನೆಯದು ಕಾಮರೂಪ, ಮೂರನೆಯದು ಉಡ್ಡಿಯಾನ, ನಾಲ್ಕನೆಯದು ಉಜ್ಜಯಿನಿ. ಈ ಹೆಸರುಗಳನ್ನು ಉಲ್ಲೇಖಿಸುತ್ತಾ, ಕೊಲ್ಹಾಪುರವು ಯೋಗಿನೀ ಪೀಠಗಳಲ್ಲಿ ಒಂದೆಂದು ಹೇಳಿರುವುದು ಗಮನಿಸಬೇಕಾದ ಸಂಗತಿ. ಅದರ ಜೊತೆ, ಕರಹಾಟ, ವಿರಾಟಪುರ, ಪೂರ್ಣಗಿರಿ, ಶ್ರೀಗಿರಿ, ಮುಕೋಟಕ, ಶಂಭುಶಿಖರ, ವಿಂಧ್ಯಾ, ಚಿತ್ರಕೂಟ, ಏಕಾಮ್ರಕ, ಮಹಾಚೀನ, ಪ್ರಯಾಗ, ಮಲಯ, ಕೋಲಾರಪುರ ಮೊದಲಾದ ಯೋಗಿನೀ ಕ್ಷೇತ್ರಗಳನ್ನು ಹೆಸರಿಸಿರುವುದು ಸಾಂಸ್ಕೃತಿಕ ಮತ್ತು ಧಾಮರ್ಿಕ ಅಧ್ಯಯನದ ದೃಷ್ಟಿಯಿಂದ ತುಂಬ ಉಪಕಾರಕವಾಗಿದೆ. ಪ್ರಾಚೀನ ಕನರ್ಾಟಕದ ಯೋಗಿನೀ ಪೀಠಗಳ ಒಂದು ಭೌಗೋಳಿಕ ಕಕ್ಷೆಯ ಮಹಾದರ್ಶನ ನಮಗಿಲ್ಲಿ ಆಗುತ್ತದೆ. ಈ ಕ್ಷೇತ್ರದ ವಿದ್ವಾಂಸರು ಇಲ್ಲಿರುವ ವಿವರಗಳನ್ನು ಗಮನಿಸಿ ತಂತ್ರಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ವಿವರಗಳನ್ನು ಈ ಗ್ರಂಥದಿಂದ ಪಡೆಯಬಹುದಾಗಿದೆ.
ಸೋಮೇಶ್ವರನ ಮಾನಸೋಲ್ಲಾಸವು ಜಗದಾಚಾರ್ಯ ಕೃತಿಯೆಂಬ ಮಾತು ಮೇಲ್ಕಂಡ ಅನೇಕ ವಿವರಗಳನ್ನು ಗಮನಿಸಿದರೆ ಸತ್ಯವೆಂದು ಮನವರಿಕೆಯಾಗದೇ ಇರದು. ಈ ವಿಶ್ವಕೋಶವು ಕೇವಲ ತಾತ್ವಿಕ ವಿವರಗಳನ್ನು ಮಾತ್ರ ಹೇಳದೆ, ಆನ್ವಯಿಕ ವಿವರಗಳಿಗೆ ಒತ್ತು ಕೊಟ್ಟು ಹೇಳಿರುವುದನ್ನು ಗಮನಿಸುವುದು ಅಗತ್ಯವಿದೆ. ಮೊದಲನೆ ಮತ್ತು ಎರಡನೆಯ ಪ್ರಕರಣವು ತಾತ್ವಿಕ ಭಾಗಗಳಾದರೆ, ಮೂರು, ನಾಲ್ಕು ಮತ್ತು ಐದನೆಯ ಪ್ರಕರಣಗಳು ಆನ್ವಯಿಕತೆಯ ಭಾಗಗಳಾಗಿವೆ. ಸಾಮಾನ್ಯವಾಗಿ ಶಾಸ್ತ್ರವು ಮಾರ್ಗವಿಷಯನಿಷ್ಠವಾಗಿರುತ್ತದೆ. ಆದರೆ, ಈ ವಿಶ್ವಕೋಶದಲ್ಲಿ ಆ ಮಾತಿಗೆ ಅವಕಾಶವಿದ್ದರೂ ಅಲ್ಲಲ್ಲಿ ದೇಶೀ ಅಂಶಗಳನ್ನು ಅಳವಡಿಸಿಕೊಂಡಿರುವುದು ಗಮನೀಯವಾದುದೇ ಸರಿ. ಇಲ್ಲಿ ಗೀತವಿನೋದ, ನೃತ್ಯವಿನೋದಗಳಂಥ ಮಾಗರ್ೀಯ ವಿಷಯಗಳ ಜೊತೆಗೆ, ಕುಕ್ಕುಟ ಮತ್ತು ಮೇಷವಿನೋದಗಳಂಥ ದೇಶೀಯ ವಿಷಯಗಳಿಗೂ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಇಂತಹ ಅಮೂಲ್ಯ ಜ್ಞಾನ ಭಂಢಾರವನ್ನು ಮೂಲಪಠ್ಯ, ವಿಸ್ತ್ರೃತ ಅನುವಾದ , ಟಿಪ್ಪಣಿಯೊಡನೆ ಅಂದಾಜು 2000 ಪುಟಗಳ ಐದು ಸಂಪುಟಗಳಲ್ಲಿ ದರೇಸ ಪಬ್ಲಿಕೇಷನ್ಸ್ ಮೂಲಕ ಕನರ್ಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಕನ್ನಡಿಗರ ಮಡಿಲಿಗಿಡುತ್ತಿದೆ. ವಿಶ್ವವಿದ್ಯಾಲಯವು ಸದರಿ ಗ್ರಂಥದ ಅನುವಾದ ಹಾಗೂ ಪ್ರಕಟಣಾ ಯೋಜನೆಯನ್ನು ಕೈಗೆತ್ತಿಕೊಂಡು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 18 ವಿದ್ವಾಂಸರ ಪ್ರಯತ್ನದೊಂದಿಗೆ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳು ಬಹುಶ್ರುತ ಪಂಡಿತರಾದ ಪ್ರೋ ಮಲ್ಲೇಪುರಂ ಜಿ ವೆಂಕಟೇಶರವರ ಸಮರ್ಥ ಸಂಪಾದಕತ್ವದಲ್ಲಿ ಹೊರತಂದಿದೆ. ಈ ಹೆಬ್ಬೊತ್ತಿಗೆಯು ಕನ್ನಡ ನೆಲದಲ್ಲಿ ಸಂಸ್ಕೃತ -ಕನ್ನಡ ಭಾಂಧವ್ಯವನ್ನು ಗಟ್ಟಿಗೊಳಿಸುವತ್ತ ಇದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. (ಐದು ಸಂಪುಟಗಳ ಬೆಲೆ : ರೂ 2100/-) ವಿವರಗಳಿಗೆ : 9741134160
 

‍ಲೇಖಕರು G

12 April, 2015

1 Comment

  1. Vijaya

    ಅಮಿತ ಶ್ಲಾಘನಾರ್ಹ ಶಕ್ತಿಲೇಖನ. ಚೆನ್ನಾಗಿ ಒದಗಿರುವ ಭಾಷಾಜ್ಞಾನ ಪ್ರಬಂಧ. ಶುಭಾಶಯಗಳರ್ಪಣೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading