ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡ ಡಿಂಡಿಮ ಬಾರಿಸಿದವರು ಇನ್ನಿಲ್ಲ

ಶ್ರೀನಿವಾಸ ಜೋಕಟ್ಟೆ

‘ಸಂಕಲ್ಪ ಸರಿ ಇದ್ದಾಗ  ಪರಿಣಾಮ ಒಳ್ಳೆಯದಾಗಿರುತ್ತದೆ’  ಎನ್ನುವಂತಹ  ಸಾವಿರಾರು ಲೇಖನಗಳನ್ನು ಬರೆದು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾ, ಎಂದೂ ಕೂಡಾ ಸಂಭಾವನೆಯನ್ನು ನಿರೀಕ್ಷಿಸದ 85ರ ಇಳಿ ವಯಸ್ಸಿನ  ಅಜಾತಶತ್ರು ಕನ್ನಡಿಗ ಸಾಹಿತಿ ಒಬ್ಬರು ಬರೋಡದಲ್ಲಿದ್ದರು ಎಂದರೆ ಕರ್ನಾಟಕದಲ್ಲಿ ಹಲವರಿಗೆ ತಿಳಿಯದೇ ಇರಬಹುದು.

ಬದುಕಿನ ಉತ್ತರಾರ್ಧದಲ್ಲಿ ಹೆಚ್ಚು ಸಕ್ರಿಯವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡು  ‘ಸುಖದ ಗುಟ್ಟು’, ‘ಓ ಮನಸೇ ತಲ್ಲಣಿಸದಿರು’…. ಇಂತಹ ಲೇಖನಗಳ ಕೃತಿ ಸಹಿತ ಮೂರು ಕೃತಿಗಳನ್ನು ಪ್ರಕಟಿಸುವ ಮೂಲಕ ಎಲ್ಲರ ಗಮನ ಸೆಳೆದಿರುವ  ಬರೋಡದಲ್ಲಿ ನೆಲೆಸಿದ್ದ 85ರ ಹಿರಿಯ ಸಾಹಿತಿ ಎಸ್ಕೆ. ಹಳೆಯಂಗಡಿಯವರು ಸೆಪ್ಟೆಂಬರ್ ಒಂದರಂದು (2020) ನಮ್ಮನ್ನು ಅಗಲಿದರು. ಮುಂಬೈಯ ಮಾಸಿಕ ‘ಅಕ್ಷಯ’ದಲ್ಲಿ ಅವರು ಆತ್ಮಕಥನವನ್ನು ಬರೆಯುತ್ತಿದ್ದರು.  ಅದರಲ್ಲಿ ಬರೆಯುತ್ತಾ “ನನ್ನ ಬಾಲ್ಯದ ಬದುಕು ಮಾತ್ರ ಕತ್ತಲೆಯ ಅಂಧಕಾರದಲ್ಲಿ ತೇಲಾಡುತ್ತಿತ್ತು” ಎಂಬ ಮಾತನ್ನು ಹೇಳಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಿಂದ ತನ್ನ ಹದಿನೆಂಟರ ಹರೆಯದಲ್ಲಿ ಮುಂಬೈಗೆ ಬಂದು ಇಲ್ಲಿನ ರಾತ್ರಿ ಶಾಲೆಯಲ್ಲಿ ಓದಿ ಮುಂದೆ ಗುಜರಾತಿಗೆ ತೆರಳಿ ಉದ್ಯಮಿಯಾಗಿ ಬೆಳೆದವರು ಎಸ್ಕೆ. ಅವರು ಕನ್ನಡ ನಾಡು-ನುಡಿ-ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಇರಿಸಿಕೊಂಡು ಆಗಾಗ ಲೇಖನಗಳನ್ನು ಬರೆಯುತ್ತಿದ್ದರು. ನಡುವೆ ಸ್ವಲ್ಪ ಕಾಲ ಉದ್ಯಮದ ಕಡೆಗೆ ಗಮನ ನೀಡಿದ್ದರು. ಆದರೆ ಇತ್ತೀಚಿನ ಒಂದು ದಶಕದಲ್ಲಿ ಅವರ ಬರವಣಿಗೆಯ ವೇಗ ಕಂಡರೆ ನಾವೆಲ್ಲಾ ಆಶ್ಚರ್ಯಪಟ್ಟಿದ್ದೆವು.

ಅಭಿಜಿತ್ ಪ್ರಕಾಶನವು (ಮುಂಬೈ) ಅವರ ‘ಸುಖದ ಗುಟ್ಟು ‘ ಮತ್ತು  ‘ಓ ಮನಸೇ ತಲ್ಲಣಿಸದಿರು’ ಎಂಬ ಸಂಕಲನಗಳನ್ನು ಪ್ರಕಟಿಸಿದೆ. ಎಸ್ಕೆ ಹಳೆಯಂಗಡಿ ಅವರೇ ಕೃತಿಯಲ್ಲಿ ಹೇಳಿಕೊಂಡಂತೆ “ದಶಕಗಳಿಂದ ಕನ್ನಡ ಸಾಹಿತ್ಯದೊಂದಿಗೆ ಸರಸವಾಡಿಕೊಂಡು ಬರುತ್ತಿದ್ದ ನಾನು ಇಪ್ಪತ್ತೊಂದರ ಆರಂಭಿಕ ವರ್ಷದಿಂದ ನನ್ನ ಬರೆಯುವ ತುಡಿತಕ್ಕೆ ವಿದಾಯ ಹೇಳಿ ಆಧ್ಯಾತ್ಮದತ್ತ ಗಮನಹರಿಸಿದ್ದ ನನ್ನನ್ನು ಮತ್ತೆ ಬರೆಯುವಂತೆ ಪ್ರೋತ್ಸಾಹಿಸಿದವರು ಅಕ್ಷಯ ಮಾಸಿಕದ ಸಂಪಾದಕ ಡಾ. ಈಶ್ವರ ಅಲೆವೂರು ಮತ್ತು ಮುಂಬೈ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ ಎನ್ ಉಪಾಧ್ಯ” ಎಂದಿದ್ದರು .

ಅವರು ಐವತ್ತರ ದಶಕದಿಂದ ವಿವಿಧ ಪತ್ರಿಕೆಗಳಿಗೆ ಈತನಕ ಸಾವಿರಾರು ಲೇಖನಗಳನ್ನು ಬರೆದಿದ್ದರು. ಹೆಚ್ಚಿನವು ಅವರ ಸಂಗ್ರಹದಲ್ಲಿಲ್ಲ. ಹಾಗಾಗಿ ಅವರು ಇತ್ತೀಚಿನ ದಶಕದಲ್ಲಿ ಬರೆದ ಲೇಖನಗಳು ಮಾತ್ರ ಸಂಕಲನದಲ್ಲಿ ಬರಲು ಸಾಧ್ಯವಾಗಿದೆ. ಯಾಕೆಂದರೆ ಲೇಖನಗಳನ್ನು ಸಂಗ್ರಹಿಸಿಟ್ಟು ಕೃತಿಯನ್ನು ತರಬೇಕೆನ್ನುವ ಯಾವ ಕಲ್ಪನೆಯೂ ಆ ದಿನಗಳಲ್ಲಿ ಅವರಲ್ಲಿ ಬಂದಿರಲಿಲ್ಲ. 

ನನಗೆ ಎಸ್ಕೆ ಹಳೆಯಂಗಡಿ ಅವರ ಪರಿಚಯವಾದುದು ಮುಂಬಯಿಯ ನಿರ್ಭೀತಿಯ ಪತ್ರಿಕೆ ತಾಯಿನುಡಿಯ ಸಂಪಾದಕರಾದ ಡಿ ಕೆ ಮೆಂಡನ್ ರ ಮೂಲಕ . ಎಂಬತ್ತರ ದಶಕದಲ್ಲಿ ತಾಯಿನುಡಿಯಲ್ಲಿ ಬಂದ ನನ್ನ ಲೇಖನವೊಂದಕ್ಕೆ ಅವರು ಪ್ರತಿಕ್ರಿಯಿಸಿದ್ದರು. ಅಂದಿನಿಂದ ನನಗೆ ಅವರು ಪರಿಚಯ. ಎಲ್ಲಿಯತನಕ ಅಂದರೆ ಬರೋಡದಿಂದ ಮುಂಬೈಗೆ ಬಂದಿದ್ದಾಗ ಯಾವುದೇ ಪೂರ್ವ ಸೂಚನೆ ಇಲ್ಲದೆ (ಮೊಬೈಲ್  ಕಾಲ ಅಲ್ಲವಲ್ಲ) ನಾನಿದ್ದ  ಜೆರಿಮೆರಿಯ ಶ್ರೀ ಉಮಾಮಹೇಶ್ವರೀ ಮಂದಿರಕ್ಕೆ ನನ್ನನ್ನು ಹುಡುಕಿಕೊಂಡು ಬಂದಿದ್ದರು. ಆ ಭೇಟಿ ನನಗೆ ಆಶ್ಚರ್ಯ ಉಂಟು ಮಾಡಿತ್ತು. ಮುಂಬೈ ಯುನಿವರ್ಸಿಟಿ ಕನ್ನಡ ವಿಭಾಗವು ಡಾ.ಜಿ.ಎನ್ ಉಪಾಧ್ಯ ರಚಿತ ‘ಕ್ರಿಯಾಶೀಲ ಪತ್ರಕರ್ತ ಸಾಹಿತಿ ಶ್ರೀನಿವಾಸ ಜೋಕಟ್ಟೆ ‘  ಕೃತಿಯನ್ನು ಎಸ್ಕೆ ಅವರು ವಿಮರ್ಶಿಸುತ್ತಾ (ಓ ಮನಸ್ಸೇ ತಲ್ಲಣಿಸದಿರು ಸಂಕಲನದಲ್ಲಿದೆ ಆ ಬರಹ .ಪುಟ 245)  ಬರೆದಿದ್ದರು.

“ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಮತ್ತು ನನ್ನ ಪರಿಚಯ ಮೂರು ದಶಕಗಳಷ್ಟು ಹಿಂದಿನದು. ಮುಂಬೈಯ ಏಕಮಾತ್ರ ಸ್ವತಂತ್ರ ಪತ್ರಿಕೆ ತಾಯಿನುಡಿಯಲ್ಲಿ ಅವರ ಪ್ರಬುದ್ಧ ಪ್ರಖರವಾದ ಲೇಖನಗಳು ಆವಾಗ ನಿಯಮಿತವಾಗಿ ಪ್ರಕಟವಾಗುತ್ತಿತ್ತು. ನಾನೂ ತಾಯಿನುಡಿಗೆ ಆಗಾಗ ಬರೆಯುತ್ತಿದ್ದೆ .ಆಗಲೇ ಜೋಕಟ್ಟೆಯ ಬರಹಗಳಿಗೆ ನಾನು ಮಾರುಹೋಗಿದ್ದೆ. ಅವರನ್ನು ಮುಖತಃ ಕಂಡಿರಲಿಲ್ಲ .ಆ ವ್ಯಕ್ತಿ ಬಹಳ ಹಿರಿಯ ಪಳಗಿದ ಸಾಹಿತಿಯಾಗಿರಬೇಕು ಎಂದು ಮನಸ್ಸಿನಲ್ಲೇ ಕಲ್ಪಿಸಿಕೊಂಡಿದ್ದೆ . ಒಮ್ಮೆ ಮುಂಬಯಿಗೆ ಹೋದಾಗ ಅವರನ್ನು ಹುಡುಕಿ ಭೇಟಿಯಾದೆ. ಆಗ ಅವರು ಆರೆಸ್ಸೆಸ್ ಕಾರ್ಯಕರ್ತ ಹುಡುಗರಂತೆ ಅರ್ಧ ಚಡ್ಡಿದಾರಿಯಾಗಿ ನನ್ನ ಮುಂದೆ ಪ್ರತ್ಯಕ್ಷಗೊಂಡಾಗ ನಾನು ಚಕಿತನಾದೆ. ಅವರು ನನ್ನ ಹಿರಿ ಮಗನ ಪ್ರಾಯದ ಹುಡುಗನಾಗಿದ್ದರು. ನಾನು ನನಗೆ ಅರಿವಿಲ್ಲದಂತೆ ಅವರನ್ನು ತಬ್ಬಿಕೊಂಡು ಅವರ ನೆತ್ತಿಯನ್ನು ಚುಂಬಿಸಿ ತುಂಬು ಹೃದಯದಿಂದ ಆಶೀರ್ವದಿಸಿದೆ. ಇಬ್ಬರ ಪಾಲಿಗೂ ಅದೊಂದು ಮರೆಯಲಾಗದ ಅನುಭವ. ಅದು ಹೃದಯಾಂತರಾಳದಲ್ಲಿ ಇನ್ನೂ ಸುಪ್ತವಾಗಿ ನೆಲೆನಿಂತಿದೆ” ಎಂದು.

ನನ್ನನ್ನು ಎರಡು ಸಲ ಅವರು ಬರೋಡ ತುಳು ಸಂಘದ ಕಾರ್ಯಕ್ರಮಕ್ಕೆ ಕರೆದಿದ್ದರು. ಒಮ್ಮೆ ಸಂಘದ  ಬೆಳ್ಳಿಹಬ್ಬದ ಸಮಾರಂಭಕ್ಕೆ ಕರೆದು ಗೌರವಿಸಿದರು. ಮತ್ತೊಮ್ಮೆ ಅವರ ‘ಸುಖದ ಗುಟ್ಟು’ ಕೃತಿಯ  ಬರೋಡ ಬಿಡುಗಡೆಯ ಸಂದರ್ಭದಲ್ಲಿ ಕೃತಿ ಪರಿಚಯವನ್ನು ನನ್ನಿಂದ ಮಾಡಿಸಿದ್ದರು. ತುಳು ಸಂಘದ ಕಾರ್ಯಕ್ರಮ. ಹಾಗಾಗಿ ಅವರಿಗೆ ನಾನು ಹೇಳಿದ್ದೆ-” ನನಗೆ ತುಳು ಮಾತೃಭಾಷೆಯಾದರೂ ವೇದಿಕೆಯಲ್ಲಿ ಮಾತನಾಡಲು ಸ್ವಲ್ಪ ಕಷ್ಟವಾಗುತ್ತದೆ. ಮಾತಿನ ನಡುವೆ  ನನಗೆ ಕನ್ನಡ ಬರುವ ಸಾಧ್ಯತೆ ಇದೆ “ಅಂದಿದ್ದೆ. ಅದಕ್ಕೆ ಅವರು “ಇಲ್ಲ, ನೀವು ಬರಲೇಬೇಕು. ಇದು ಕನ್ನಡ ಕೃತಿಯಾಗಿದ್ದರಿಂದ ನೀವು ಆರಂಭದಲ್ಲಿ ಸ್ವಲ್ಪ ತುಳುವಿನಲ್ಲಿ ಮಾತಾಡಿ. ಮತ್ತು ಕೃತಿ ಪರಿಚಯ ಕನ್ನಡದಲ್ಲಿ ಹೇಳಿ” ಅಂದಿದ್ದರು. ಅವರು ಕನ್ನಡ ಸಂಘ , ತುಳು ಸಂಘಗಳಲ್ಲಿ ಸಕ್ರಿಯರಾಗಿದ್ದು ಗುಜರಾತ್ ನಲ್ಲಿ ತಾನು ಬದುಕಿದ್ದಷ್ಟು ದಿನಗಳಲ್ಲಿ ಕನ್ನಡ ಡಿಂಡಿಮವ ಬಾರಿಸಿದವರು. 

ಮುಂಬೈಯ ‘ದೈನಿಕ ಕರ್ನಾಟಕ ಮಲ್ಲ’ಕ್ಕೆ  ಅವರು ಸಾಪ್ತಾಹಿಕಕ್ಕೆ ಹಲವಾರು ಲೇಖನಗಳನ್ನು ನೀಡಿದ್ದರು. ಅವರ ಅಕ್ಷರಗಳು ದೊಡ್ಡದಿದ್ದರೂ ಕೆಲವೊಮ್ಮೆ ಅದನ್ನು ಓದಲು  ಕಷ್ಟವಾಗುತ್ತಿತ್ತು. ಆಮೇಲೆ ಅವರಿಗೆ ಫೋನ್ ಮಾಡಿ  ಅಕ್ಷರ ಗೊಂದಲವನ್ನು ಕೇಳಿ ಸರಿಮಾಡುತ್ತಿದ್ದೆ. ಬರೋಡದ ಹಲವಾರು ಕನ್ನಡ ತುಳು  ಕಾರ್ಯಕ್ರಮಗಳನ್ನು ಅವರು ಈ ಇಳಿ ವಯಸ್ಸಿನಲ್ಲೂ ತಾವೇ ಬರೆದು ಇಮೇಲ್ ಮೂಲಕ ಪತ್ರಿಕೆಗೆ ಕಳುಹಿಸುತ್ತಿದ್ದರು.ಅವರ ಕನ್ನಡ ನಾಡು ನುಡಿಯ ಪ್ರೀತಿಗೆ ಅಭಿಮಾನ ಪಡುತ್ತೇನೆ. ಅವರಿಗೆ ಲೇಖನದ ಮೂಲಕ ಶ್ರದ್ಧಾಂಜಲಿ.

‍ಲೇಖಕರು Avadhi

2 September, 2020

1 Comment

  1. Shyamala Madhav

    ಆಪ್ತ ಸ್ಮರಣೆ, ಜೋಕಟ್ಟೆ. ನಿಜಕ್ಕೂ ಹಿರಿಜೀವ ಅವರು. ಬರೋಡಾ ದಿಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದವರು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading