ಕನ್ನಡಿಯ ಸೂರ್ಯ-ಎಚ್ಚೆಸ್ವಿ ಹೊಸ ಕವಿತೆಗಳು

 

ಎಚ್.ಎಸ್.ವೆಂಕಟೇಶಮೂರ್ತಿ avara ಹೊಸ ಸಂಕಲನ ಸಜ್ಜಾಗಿದೆ. ಕನ್ನಡಿಯ ಸೂರ್ಯ ಸಂಕಲನದ ಹೆಸರು.

ಅಪಾರ ರಚಿಸಿದ ಮುಖಪುಟದೊಂದಿಗೆ ಬರುತ್ತಿರುವ ಈ ಸಂಕಲನದ ಎರಡು ಸ್ಯಾಂಪಲ್ ಕವಿತೆಗಳು ನಿಮಗಾಗಿ.

ಇನ್ನಷ್ಟು ಕವಿತೆ ಹಾದಿಯಲ್ಲಿವೆ..

ಒಂದಕ್ಕೆ ಒಂದು ಸೇರಿದರೆ…

ಕೇರಳದ, ವೈಕಂ ಎಂಬ ಮುಸ್ಲಿಮ್ ಲೇಖಕನ

ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ನಮ್ಮ

ಮಾಸ್ತಿಯನ್ನ ನೆನಪಿಸುವಂಥ ಮಾಹೋನ್ನತ

ಕತೆಗಾರ ಆತ. ಅವರು ಬರೆದ ಪಾತುಮಳ ಆಡು,

ಬಾಲ್ಯದ ಸಖಿ, ನೆನಪಿನ ಕೋಣೆಗಳು ಮೊದಲಾದ-

ವನ್ನ ನೀವು ಓದಿಯೂ ಇರುತ್ತೀರಿ. ಹಿಂದು ಮುಸ್ಲಿಮ್

ಏಕತೆಗೆ ಬಾಳಿನುದ್ದಕ್ಕೂ ದುಡಿದ ಈ ಮಹಾತ್ಮ

ಗಾಂಧೀಜೀಯ ಪರಮಾನುಯಾಯಿ. ಎರಡಾದ

ನದಿ ಒಂದಾಗುವ ಸಂಗಮ ಸ್ಥಳ ಇವರಿಗೆ

ಬಾಲ್ಯ ಕಾಲದಲ್ಲಿ ಬಹಳ ಪ್ರಿಯವಾದ ಜಾಗ.

ಒಮ್ಮೆ ಶಾಲೆಯಲ್ಲಿ ಮಾಸ್ತರರು ಹುಡುಗ ವೈಕಂ ಅನ್ನು

ಕೇಳುತ್ತಾರೆ: ಏ ಬಷೀರಾ, ಒಂದಕ್ಕೆ ಒಂದು ಸೇರಿದರೆ

 

ಎಷ್ಟಾಗುತ್ತೋ? ವೈಕಂ ಥಟ್ಟನೆ ಉತ್ತರಿಸುತ್ತಾರೆ:

ಒಂದಕ್ಕೊಂದು ಸೇರಿದರೆ ದೊಡ್ಡ ಒಂದಾಗುತ್ತೆ ಮಾಸ್ತರೆ.

ಪುನರಾಗಮನ

ಎಚ್ಚೆಸ್ವಿ

 

ಮೂಡುತ್ತೆ ನಿರ್ವಾತದಲ್ಲಿ ನಿನ್ನುಸಿರಾಟ

ನೀರಲ್ಲಿ ಮೈತೊಳೆದ ವರ್ಣಚಿತ್ರ.

ಒತ್ತುತ್ತೆ ಭಾರವಿಲ್ಲದ ನಿನ್ನ ಎದೆಭಾರ

ಹಗಲು ಕೈಸೇರಿ ನಕ್ಷತ್ರಪತ್ರ.

 

ಮಳೆನಿಂತಮೇಲೆ ಎಲೆಯಿಂದ ತೊಟ್ಟಿಕ್ಕುತ್ತಿವೆ

ನಿಶ್ಶಬ್ದ ನೀರ ಹನಿ ನಿನ್ನ ಮಾತು.

ಹಕ್ಕಿಗೊರಳಿನ ಗೂಢದಲ್ಲಿ ಮುಳುಗಿದೆ ನೋಡು

ಕೂಸಿರದ ತೊಟ್ಟಿಲಲಿ ಜೋಲಿಹಾಡು.

 

ಉಪ್ಪುಗಡಲಿಗೆ ಸಾಕೆ ಜೋಡಿಗಣ್ಣಿನ ತೂಬು?

ಸಂಜೆ ಮುಳುಗುತ್ತ ಇದೆ ಸೂರ್ಯಬಿಂಬ.

ಇಜ್ಜಿಲಾಯಿತು ಹೊಳೆವ ಕೆಂಡ ಹಿಸ್ಸೆನ್ನುತ್ತ.

ದೀಪಕ್ಕೆ ಆಧಾರ ಮೇಣಗಂಬ.

 

ಮಲಗಿರುವ ನಾಲಗೆಯ ಮೇಲೆ ನಾಲಗೆ ಮಲಗಿ

ನಿದ್ದೆಗಿಳಿದಿವೆ ಆಡದಿರುವ ಮಾತು.

ಕಣ್ಣೀರಿನಲ್ಲೊದ್ದೆ ಮುದ್ದೆ ಸೀರೆಯ ಸೆರಗು

ಬಯಲು ಬಂದಿದೆ ಬಳಿಗೆ ಬಟ್ಟೆ ಮರೆತು.

 

ತಬ್ಬಿಕೊಂಡಿತು ಗಾಳಿ ಬೆಳ್ದಿಂಗಳಿನ ಕಂಭ

ಇರುಳ ಮಲ್ಲಿಗೆ ಮರುಕ ಗಾಳಿತುಂಬ

ಇಡಿಯಾಗಿ ನುಂಗಿ ಸಂತೃಪ್ತ ಬಾನಿನ ಯೋನಿ

ಮನೆ, ನುಂಗಿದಂತೆ ನಡುಮನೆಯ ಕಂಭ.

 

 

‍ಲೇಖಕರು G

April 2, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sudha ChidanandaGowda.

    kavitvavu nadumaneya kambadante.iddare addi, illadiddare bolu. chennagideyendare enu andantaguvudilla sir. pustaka purta odabekeniside. Apara mukhaputa sdbhuta.

    ಪ್ರತಿಕ್ರಿಯೆ
  2. hsv

    ಇದೀಗ ಪುಸ್ತಕ ಸಿದ್ಧವಾಗಿದೆ. ಆಸಕ್ತರು ೨೬ರ ನಂತರ ಅಂಕಿತ ಪುಸ್ತಕದಂಗಡಿಯನ್ನು ಸಂಪರ್ಕಿಸಬಹುದು.
    ಪ್ರೀತಿಯಿಂದ-ಎಚ್ಚೆಸ್ವಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: