ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡಿಗ ಎಂದರೆ ಯಾರು?

ಜಗದೀಶ ಡಿ

ಇಂದು ಕರ್ನಾಟಕದ ಸಂಪತ್ತು ಅನ್ಯರ ಕೈಯಲ್ಲಿ ಶೇಖರಣೆಯಾಗುತ್ತಿದೆ. ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಿ ಇಂಗ್ಲಿಷ್ ಶಾಲೆಗಳನ್ನು ತೆರೆಯುತ್ತಿದೆ. ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ. ಕಾರ್ಪೊರೇಟ್ ಕಂಪನಿಗಳು ಕನ್ನಡವನ್ನು ನುಂಗಿ ನೀರು ಕುಡಿಯುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಹಾಗಾಗಿ ಕನ್ನಡಿಗರಾದ ನಾವೆಲ್ಲ ಒಂದುಗೂಡಿ ನಮ್ಮ ಅಮ್ಮ, ಕನ್ನಡಮ್ಮನ ಉಳಿವಿಗಾಗಿ ಹೋರಾಟ ಮಾಡಬೇಕಾಗಿದೆ.
ಹೀಗೆ ಒಬ್ಬ ನವೆಂಬರ್ ಕನ್ನಡಿಗ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದರು. ಇದು ಸಾಮಾನ್ಯವಾಗಿ ಎಲ್ಲರೂ ಮಾತನಾಡುವ ವಿಷಯಗಳೇ ಆಗಿವೆ. ಇವು ಸತ್ಯ ಕೂಡ. ಆದರೆ ನನ್ನದು ಕೆಲವು ಪ್ರಶ್ನೆಗಳಿವೆ.
ಭೂತಾಯಿ, ಭಾರತಾಂಬೆ, ಕನ್ನಡಾಂಬೆ, ನನ್ನ ಎತ್ತಿ ಬೆಳೆಸಿದ ನನ್ನವ್ವ, ಇವರಲ್ಲಿ ನಿಜವಾದ ತಾಯಿ ಯಾರು?
ನಮ್ಮ ಹೋರಾಟ ಯಾರ ವಿರುದ್ದವಾಗಿ ಅಥವಾ ಯಾವುದರ ವಿರುದ್ದವಾಗಿ?
ಕನ್ನಡಿಗ ಎಂದರೆ ಯಾರು?
ಕನ್ನಡಭಿಮಾನಿಗಳಾಗಿ ನಮ್ಮ ಕೆಲಸಗಳೇನು? ಸಹೋದರ ರಾಜ್ಯ ಮತ್ತು ಭಾಷೆಗಳನ್ನು ದ್ವೇಷಿಸುವುದು ಸರಿಯೇ?

ನನ್ನ ಅರಿವಿಗೆ ತಕ್ಕಂತೆ ಹೇಳುವುದಾದರೆ ನಮಗೆ ಅದಮ್ಯವಾದ ಕನ್ನಡಾಭಿಮಾನವಿದೆ. ಆದರೆ ಅದನ್ನು ಹೇಗೆ ತೋರ್ಪಡಿಸಬೇಕು ಎಂಬುವ ಗೊಂದಲಗಳು ಇವೆ. ಯಾವುದಕ್ಕೆ ದೇವರ ಅಮೂರ್ತವನ್ನು ಕಲ್ಪಿಸುತ್ತೆವೆಯೋ ಆಗ ಅವರ ನಿಜ ತತ್ವಗಳನ್ನು ಮರೆಯುತ್ತೇವೆ ಎಂದೆನುಸುತ್ತದೆ. ಹಾಗಂತ ಅಂಬೆಡ್ಕರ್ ಜಯಂತಿ, ಗಾಂಧಿಜಯಂತಿ, ಕನ್ನಡ ರಾಜ್ಯೋತ್ಸವ, ಇತ್ಯಾದಿ ದಿನಗಳನ್ನು ಮಾಡಬಾರದು ಎಂದು ಅಲ್ಲ. ಅವು ತೋರಿಕೆಗೊಸ್ಕರ ಆಗಿರಬಾರದು. ಅದರ ಹಿಂದಿರುವ ತಾತ್ವಿಕತೆಯನ್ನು ಅರ್ಥ ಮಾಡಿಸುವಂತಿರಬೇಕು. ಆಗ ಮಾತ್ರ ಅದು ಯಶಸ್ವಿಯಾಗುತ್ತದೆ. ನನ್ನಲಿರುವ ಕನ್ನಡಾಭಿಮಾನವನ್ನು ತೋರಿಸಲು ನನಗೆ ಕನ್ನಡಾಂಬೆಯ ಭಾವಚಿತ್ರಗಳು, ಕನ್ನಡದ ಬಾವುಟಗಳು ಅವಶ್ಯಕವಾಗಿವೆ. ಆದರೆ ಅಷ್ಟಕ್ಕೆ ಸೀಮಿತವಾಗಬಾರದು. ಭೂತಾಯಿ, ಭಾರತಾಂಬೆ, ಕನ್ನಡಾಂಬೆ ಇವೆಲ್ಲವು ನಮ್ಮ ಮನಸ್ಥಿತಿಗಳಷ್ಟೆ. ಕನ್ನಡಾಂಬೆಯನ್ನು ಹೇಳುವಾಗ ಸೋದರ ರಾಜ್ಯಗಳನ್ನು ಮರೆಯುತ್ತೇವೆ. ಭಾರತಾಂಬೆಯನ್ನು ಹೇಳುವಾಗ ಸೋದರ ರಾಷ್ಟ್ರಗಳನ್ನು ಮರೆಯುತ್ತೇವೆ. ಆದರೆ ಭೂತಾಯಿ ವಿಶ್ವ ಮಾನವ ಸಂದೇಶವನ್ನ ಸಾರುತ್ತದೆ. ಆದರಿಂದ ನಾವು ವಿಶಾಲ ದೃಷ್ಠಿಕೋನವನ್ನು ಬೆಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಗಲ್ಲಿಗೊಂದು ಕನ್ನಡ ಸಂಘಗಳಿವೆ. ಅವುಗಳು ತಮ್ಮ ವ್ಯಾಪ್ತಿಗೆ ತಕ್ಕಂತೆ ಕನ್ನಡದ ಕೆಲಸ ಮಾಡುತ್ತಲೇ ಬಂದಿವೆ. ಕನ್ನಡ ಚಳುವಳಿಯು ದಿಕ್ಕುತಪ್ಪುತ್ತಲಿದೆ. ಕನ್ನಡ ನಿಜವಾದ ಶತ್ರುಗಳು ಯಾರು ಎಂದು ಗುರುತಿಸುವುದು ಸಹ ಕಷ್ಟವಾಗಿದೆ. ಸರ್ಕಾರ ನಡೆಸುತ್ತಿರುವವರು ನಮ್ಮ ಶತ್ರುಗಳಾದರೆ, ಅವರು ಕನ್ನಡಿಗರಲ್ಲವೆ! ಕಾರ್ಪೊರೆಟ್ ಕಂಪನಿಗಳು ನಮ್ಮ ವಿರೋದಿಗಳಾದರೆ, ನಮ್ಮ ಹೋರಾಟವಿರುವುದು ವ್ಯಕ್ತಿಗತವಾಗಿದೆಯಾ ಅಥವಾ ಕಂಪನಿಯ ಕನ್ನಡ ವಿರೋದಿ ಉತ್ಪಾದಕತೆಯ ವಿರುದ್ದವಾಗಿದೆಯಾ! ಎನ್ನುವುದು ಕೂಡ ಮುಖ್ಯವಾಗುತ್ತದೆ. ನಾವು ವೈಯಕ್ತಿಕ ದ್ವೇಷದ ಬದಲು ಕನ್ನಡ ವಿರೋದಿ ಚಟುವಟಿಕೆಯ ವಿರುದ್ದವಾಗಿ ಚಳುವಳಿ ರೂಪಿಸುವ ಅವಶ್ಯಕತೆ ಇದೆ ಎಂದೆಸುತ್ತದೆ.
ಎದ್ದೇಳು ನೀ ಕನ್ನಡಿಗ, ಕ್ರಾಂತಿಯ ಕಹಳೆ ಮೊಳಗುತ್ತಿದೆ……. ! ನಿಜ, ಆದರೆ ಕನ್ನಡಿಗ ಎಂದರೆ ಯಾರು?. ಕನ್ನಡ ಮಾತನಾಡುವವರು ಕನ್ನಡಿಗರು ಎನ್ನುವುದಾದರೆ ಕನ್ನಡೇತರ ಭಾಷೆ ಮಾತನಾಡುವವರು ಕನ್ನಡಿಗರು ಅಲ್ಲ ಎಂದು ಹೇಳುವುದು ಹೇಗೆ! ಕನರ್ಾಟಕದಲ್ಲಿ ವಾಸಮಾಡುವವರು ಕನ್ನಡಿಗರು ಎನ್ನುವುದಾದರೆ ಉದ್ಯೋಗಕ್ಕಾಗಿ ಅಥವಾ ಬೇರೆ ಯಾವುದೆ ಉದ್ದೇಶಕ್ಕಾಗಿ ಕರ್ನಾಟಕ ಗಡಿಯಾಚೆ ಇರುವ ಕನ್ನಡ ಮಾತನಾಡುವವರನ್ನು ಕನ್ನಡಿಗರೆಂದು ನೀವು ಕರೆಯಲು ಸಾದ್ಯವಿಲ್ಲವೆ! ಯಾವುದೇ ಭಾಷೆಗೆ ತನ್ನದೇ ಆದ ಸಂಸ್ಕೃತಿ ಇರುತ್ತದೆ. ಅದೇ ರೀತಿ ಕನ್ನಡ ಸಂಸ್ಕೃತಿ ಇರುವವರನ್ನು ಕನ್ನಡಿಗರೆಂದು ಕರೆಯಬಹುದು. ಆದರೆ ಮತ್ತೆ ತುಳು, ಕೊಂಕಣಿ, ಇತ್ಯಾದಿ ಭಾಷಾ ಸಂಸ್ಕೃತಿಗಳ ಕಥೆ ಏನು! ನೇಪಾಳದಲ್ಲಿ, ದಿಲ್ಲಿಯಲ್ಲಿ, ಅಮೇರಿಕಾದಲ್ಲಿ, ಶ್ರೀಲಂಕಾದಲ್ಲಿ ಹೀಗೆ ವಿಶ್ವದ ಹಲವಾರು ಭಾಗಗಳಲ್ಲಿ ವಾಸವಾಗಿರುವ ಕನ್ನಡಾಭಿಮಾನಿಗಳನ್ನು ನೀವು ಕನ್ನಡಿಗರೆಂದು ಒಪ್ಪಿಕೊಳ್ಳಲು ನಿರಾಕರಿಸುವುದರೆ ನನಗೆ ಅಸಮಾಧಾನವಿದೆ. ಯಾರು ಯಾರು ಕನ್ನಡ ಪರ ಮನಸ್ಸು ಹೊಂದಿದ್ದಾರೋ ಅವರೆಲ್ಲರು ಕನ್ನಡಿಗರೆ ಎಂದೆಸುತ್ತದೆ. ನಾವು ಸೀಮಿತರಾದಷ್ಟು ನಮ್ಮ ಶಕ್ತಿ ಕುಂದುತ್ತದೆ. ಜೊತೆಯಲ್ಲಿಯೇ ನಮ್ಮ ಹಿತ ಶತ್ರುಗಳನ್ನು ಗುರುತಿಸಿಕೊಳ್ಳಬೇಕಾಗಿದೆ.
ಕನ್ನಡಾಭಿಮಾನಿಗಳಾಗಿ ನಮಗೆ ತುಂಬಾ ಜವಾಬ್ದಾರಿಗಳಿವೆ. ಕನ್ನಡ ವಿರೋದಿ ಚಟುವಟಿಕೆ ಮೂಲ ಬೇರುಗಳನ್ನು ಬುಡಮೇಲು ಮಾಡಲು ಕಂಕಣಬದ್ದರಾಗಿ ನಿಲ್ಲಬೇಕಾಗಿದೆ. ಕನ್ನಡ ಅಂಧಭಿಮಾನವನ್ನು ಬಿಟ್ಟು ಆತ್ಮಭಿಮಾನದೊಂದಿಗೆ ಮುನ್ನುಗ್ಗಬೇಕಾಗಿದೆ. ಸೀಮಿತವಾಗಿ ಆಲೋಚಿಸದೆ ವಿಶಾಲ ದೃಷ್ಠಿಕೋನಗಳನ್ನು ಬೆಳಸಿಕೊಳ್ಳಬೇಕಾಗಿದೆ. ನಮ್ಮ ಸಹೋದರ ರಾಜ್ಯ, ಭಾಷೆ, ಯಾವುದನ್ನು ದ್ವೇಷಿಸದೇ ಅವುಗಳ ಚಟುವಟಿಕೆಯಿಂದ ಕನ್ನಡದ ಮೇಲೆ ಆಗುತ್ತಿರುವ ಆಪಾಯಗಳಿಂದ ರಕ್ಷಣೆ ಮಾಡುತ್ತಲೇ ಅದಕ್ಕೆ ವಿರುದ್ದ ದಿಕ್ಕಿನೆಡೆಗೆ ಮುನ್ನಡಿಸಿಕೊಂಡು ಹೋಗಬೇಕಾಗಿದೆ.
 

‍ಲೇಖಕರು G

7 November, 2013

1 Comment

  1. Jagadisha D

    thanks for publishing…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading