ಕೇಶವರೆಡ್ಡಿ ಹಂದ್ರಾಳ
ಸರಿ ಸುಮಾರು ಮುವತ್ತೇಳು ವರ್ಷಗಳ ನಂತರ ಆತನ ಮನೆಯ ಮುಂದೆ ನಿಂತಿದ್ದೆ ನಾನು. ವಾರದ ಹಿಂದೆ ಉಪನ್ಯಾಸಕ ಮಿತ್ರ ನಾರಾಯಣ ಸ್ವಾಮಿ ಆಫೀಸಿಗೆ ಬಂದಿದ್ದ. ಈತ ಸಾಹಿತ್ಯ ವಿದ್ಯಾರ್ಥಿ ಮತ್ತು ವಿಮರ್ಶಕ ಕೂಡ. ಅಂತೂ ಹದಿನೈದು ವರ್ಷ ತಗೋತು ನೋಡು ನೀನು ಬೆಂಗಳೂರಿಗೆ ಟ್ರಾನ್ಸ್ಪರ್ ಆಗಿ ಬರೋದಕ್ಕೆ ಇಲ್ಲೆ ರಿಟೈರ್ಮೆಂಟ್ ತಗೊಬಿಡು…. ಎಂದು ತಮಾಷೆ ಮಾಡಿದ್ದ. ಎಂ.ಎ ತರಗತಿಯಲ್ಲಿ ನನ್ನ ಸಹಪಾಠಿಯಾಗಿದ್ದ ನಾರಾಯಣಸ್ವಾಮಿ ತುಂಬಾ ಸಾಧು ಸ್ವಭಾವದವನು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ನಾನು ಪೊಲೀಸ್ ಡಿಪಾರ್ಟ್ಮೆಂಟ್ಗೆ ಸೆಲೆಕ್ಟ್ ಆದಾಗ ಪೋಲಿಸ್ ಡಿಪಾರ್ಟ್ಮೆಂಟ್ಗೆ ನೀನು ನಾಲಾಯಕ್…. ಎಂದಿದ್ದ ಅನೇಕ ಜನರಲ್ಲಿ ಈತನೂ ಒಬ್ಬ. ಇಲಾಖೆಗೆ ಸೇರಿ ಅನೇಕ ವರ್ಷಗಳ ಕಾಲ ರಾಜಧಾನಿಯಿಂದ ಹೊರಗೆ ಕೆಲಸ ಮಾಡಿದ್ದ ನನಗೆ ತಿಂಗಳ ಹಿಂದೆ ಬೆಂಗಳೂರಿಗೆ ಟ್ರಾನ್ಸ್ಫರ್ ಆಗಿತ್ತು.
ಒಂದಿಷ್ಟು ಕತೆಗಿತೆ, ಲೇಖನಗಳನ್ನು ಬರೆಯುತ್ತಿದ್ದುದ್ದರಿಂದ ನನಗೆ ಡಿಪಾರ್ಟ್ಮೆಂಟ್ನಲ್ಲಿ ತುಂಬಾನೇ ಐಡೆಂಟಿಟಿ ಇತ್ತು. ಸೀನಿಯರ್ ಆಫೀಸರ್ಗಳು ಪ್ರೀತಿಯಿಂದ ಮಾತನಾಡುತ್ತಿದ್ದರು. ಜೂನಿಯರ್ಗಳು ತುಂಬಾ ಮಯರ್ಾದೆ ತೋರಿಸುತ್ತಿದ್ದರೂ ಪಾಪ, ಸಾಹೇಬ್ರು ಪ್ರಯೋಜನ ಇಲ್ಲ. ನ್ಯಾಯ, ನೀತಿ, ಧರ್ಮ ಅಂಥ ಇದ್ರೆ ಡಿಪಾರ್ಟ್ಮೆಂಟ್ನಲ್ಲಿ ಮಣ್ಣು ಹೊರೋದೆಂಗೆ. ಮೇಷ್ಟ್ರ ಗೀಷ್ಟ್ರ ಕೆಲ್ಸ ಆಗಿದ್ರೆ ಸರೋಗ್ತಿತ್ತು ಇವುರ್ಗೆ…. ಎಂದು ಮರೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು.
ಅದಿರಲಿ, ನಾರಾಯಣಸ್ವಾಮಿ ಬಂದಾಗ ಕಾಫಿ ಕುಡಿಯುತ್ತಾ ಹಳೆಯ ನೆನಪುಗಳಿಗೆ ಜೋತು ಬಿದ್ದಿದ್ದೆವು. ವಿದ್ಯಾರ್ಥಿ ಜೀವನದ ಅನೇಕ ಘಟನೆಗಳು ಮುದ ನೀಡಿದ್ದವು. ನನಗೆ ಥಟ್ಟನೆ ಚಂದ್ರಪ್ರಸಾದ್ ನೆನಪಾದ. ಅಂಥ ಅದ್ಭುತ ಪರ್ಸನಾಲಿಟಿ ಅವನದು. ಅಂದ ಹಾಗೆ ನಮ್ಮ ಪ್ರೊಫೆಸರ್ ಚಂದ್ರಪ್ರಸಾದ್ ಹೇಗಿದ್ದಾನೆ…. ಕುತೂಹಲದಿಂದ ಕೇಳಿದ್ದೆ. ಪಾಪ, ಆತನ ಸ್ಥಿತಿ ನೋಡಿದ್ರೆ ಬೇಜಾರಾಗ್ತದೆ. ಎಂಥ ಮನುಷ್ಯ ಹೇಗಾಗ್ಬಿಟ್ಟ ಅಂಥ ಆಶ್ವರ್ಯ ಆಗ್ತದೆ. ಆರು ತಿಂಗಳ ಹಿಂದೆ ನಾನೂ ನೋಡಿಕೊಂಡು ಬರಲು ಹೋಗಿದ್ದದ್ದು. ಆರೇಳು ವರ್ಷಗಳ ಹಿಂದೆ ಬಲಗೈಗೆ ಸ್ಟ್ರೋಕ್ ಆಗಿ ತುಂಬಾ ವೀಕ್ ಆಗಿದ್ದಾನೆ. ಆದ್ರೆ ಮಾತುಗ್ಳು ತೀಕ್ಷ್ಣತೇನೆ ಕಳೆದುಕೊಂಡಿಲ್ಲ. ಒಬ್ಬೊಬ್ರೆ ಹೋದ್ರೆ ಮಾತ್ರ ಮಾತನಾಡೋದು. ಹೆಂಡತಿಗೆ ಯೂನಿವರ್ಸಿಟೀಲಿ ಸೀನಿಯರ್ ಅಸಿಸ್ಟೆಂಟ್ ಕೆಲಸ ಕೊಟ್ಟಿದ್ದಾರೆ. ಹೋಗಿ ನೋಡ್ಕಂಡ್ ಬಾ. ನೀವಿಬ್ರು ಸ್ವಲ್ಪ ಕ್ಲೋಸ್ ಆಗಿದ್ದೋರು ಎಂದು ಅಡ್ರಸ್ಸು ಕೊಟ್ಟಿದ್ದು. ಚಂದ್ರಪ್ರಸಾದ್ನ ನೆನಪು ತುಂಬಾ ಕಾಡತೊಡಗಿದ್ದರಿಂದ ತಡೆಯಲಾರದೆ ಬಂದು ಆತನ ಮನೆಯ ಮುಂದೆ ನಿಂತಿದ್ದೆ.

ಮೂರ್ನಾಲ್ಕು ಬಾರಿ ಬೆಲ್ ಮಾಡಿ ಪ್ರಯೋಜನವಾಗದೆ ಬಾಗಿಲನ್ನು ತಟ್ಟಿದ್ದೆ. ಐದಾರು ನಿಮಿಷಗಳಾದರೂ ಬಾಗಿಲು ತೆರೆದಿರಲಿಲ್ಲ. ಬಹುಶಃ ಮನೆಯಲ್ಲಿ ಯಾರೂ ಇಲ್ಲವೇನೋ ಎಂದು ಹೊರಡಲನುವಾದವನು ಬಾಗಿಲು ಕಿರುಗುಟ್ಟಿದ್ದರಿಂದ ನಿಂತುಕೊಂಡೆ. ತೆರೆದ ಬಾಗಿಲಿನೊಂದಿಗೆ ಗಾಲಿ ಕುರ್ಚಿಯ ಮೇಲೆ ವ್ಯಕ್ತಿಯೊಂದು ಗೋಚರಿಸಿತ್ತು. ನೆರೆತ ಕೂದಲು. ಅಲ್ಲಲ್ಲಿ ಕೂದಲು ಉದುರಿ ಹೋಗಿ ತಲೆಯಹೊಟ್ಟು ಎದ್ದು ಕಾಣುತ್ತಿತ್ತು. ಬೇಕಾಬಿಟ್ಟಿ ಬೆಳೆದು ನಿಂತ ಗಡ್ಡ, ಮೀಸೆ. ದಪ್ಪಗ್ಲಾಸಿನ ಕನ್ನಡಕದಲ್ಲಿ ಅತ್ತಿತ್ತ ಹೊರಳಾಡುತ್ತಿದ್ದ ಕಣ್ಣುಗುಡ್ಡೆಗಳು. ಎಡಗೈನಲ್ಲಿ ಕುರ್ಚಿಯ ಚಕ್ರವನ್ನು ಹಿಡಿದಿದ್ದ. ಪ್ರೊಫೆಸರ್ ಚಂದ್ರಪ್ರಸಾದ್ ಬೇಕಿತ್ತು ಕೇಳಿದ್ದೆ ನಾನು. ಆತ ಕನ್ನಡಕದೊಳಗಿನಿಂದ ನನ್ನನ್ನು ಅಡಿಯಿಂದ ಮುಡಿಯವರೆಗೂ ನೋಡಿ ನಾನೇ ಚಂದ್ರಪ್ರಸಾದ್, ನೀವು…. ಎಂದಿದ್ದ. ಆತನ ಧ್ವನಿಯನ್ನು ಗುರುತು ಹಿಡಿದಿದ್ದೆ. ಆತ ನಿಜವಾಗಿಯೂ ಚಂದ್ರಪ್ರಸಾದನೆ ಎನ್ನುವ ವಾಸ್ತವವನ್ನು ನಂಬಲಾರದಷ್ಟು ಗೊಂದಲದಲ್ಲಿ ಬಿದ್ದಿದ್ದೆ. ವಾರದ ಹಿಂದೆ ಈತನ ಬಗ್ಗೆ ನಾರಾಯಣಸ್ವಾಮಿ ಹೇಳಿದ್ದ ಸ್ಥಿತಿಗಿಂತಲೂ ಅದ್ವಾನವಾಗಿರುವಂತೆ ಕಂಡಿತ್ತು ನನಗೆ. ನನ್ನ ಪರಿಚಯವನ್ನು ಹೇಳಿಕೊಂಡಿದ್ದೆ. ಮೆದುಳಿನ ಪದರುಗಳಿಗೆ ಬೆರಳು ಹಾಕಿ ನೆನಪುಗಳ ರಾಶಿಯಿಂದ ನನ್ನನ್ನು ಮೇಲೆತ್ತಲು ತಿಣುಕಾಡುತ್ತಿರುವಂತೆ ಆತನು ನೆರೆತ ತಲೆಯನ್ನು ಕೆರೆದುಕೊಳ್ಳುತ್ತಿದ್ದ. ಮತ್ತೊಮ್ಮೆ ನನ್ನ ಪರಿಚಯವನ್ನು ಹೇಳುತ್ತಾ ಯೂನಿವರ್ಸಿಟಿ ಹಾಸ್ಟೆಲ್ನಲ್ಲಿ ಆರು ತಿಂಗಳು ರೂಂಮೇಟ್ ಆಗಿದ್ದನ್ನು ನೆನಪಿಸಿದ್ದೆ.
ಓಹ್, ಬನ್ನಿ ಬನ್ನಿ ಕಾಮ್ರೇಡ್…. ಎಂದು ಮುಖದಲ್ಲಿ ಅಚ್ಚರಿಯನ್ನು, ಒಂದಿಷ್ಟು ಕಿರುನಗೆಯನ್ನು ತುಂಬಿಕೊಂಡು, ಗಾಲಿಕುರ್ಚಿಯನ್ನು ಎಡಗೈಲಿ ತಳ್ಳಿಕೊಂಡು ನಡುಮನೆಯ ಕೊನೆಯಲ್ಲಿ ಹಾಕಿದ್ದ ಮಂಚದ ಕಡೆ ಹೋಗಿದ್ದ. ನಾನು ಬಾಗಿಲು ಮುಚ್ಚಲು ಹೋದಾಗ ಬೇಡ, ಇರಲಿ ಬನ್ನಿ ಇನ್ನೊಂದರ್ಧ ಮುಕ್ಕಾಲು ಗಂಟೆಗೆ ಮಗಳು ಲಂಚ್ಗೆ ಬರ್ತಾಳೆ… ಎಂದಿದ್ದ ಆತ. ಗೋಡೆಯ ಪಕ್ಕ ಹಾಕಿದ್ದ ಪ್ಲಾಸ್ಟಿಕ್ ಚೇರ್ ಮೇಲೆ ಕುಳಿತಿದ್ದೆ. ಎಡಗೈ ಮತ್ತು ಕಾಲುಗಳ ಆಧಾರದಿಂದ ಗಾಲಿ ಕುರ್ಚಿಯಿಂದ ಆತ ಹಾಸಿಗೆಗೆ ಶಿಫ್ಟ್ ಆಗಿದ್ದ. ದಿಂಬಿನ ಪಕ್ಕ ಅಯ್ಯಪ್ಪ ಸ್ವಾಮಿಯ ಮತ್ತು ಶಿರಡಿಸಾಯಿ ಬಾಬನ ಪೋಟೋಗಳು. ಆತ ನನ್ನನ್ನು ‘ಕಾಮ್ರೇಡ್’ ಎಂದು ಕರೆದಾಗ ಮೈ ಜುಂ ಎಂದಿತ್ತು. ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಕಾಮ್ರೇಡ್ ಎನ್ನುವ ಪದ ಕಿವಿಗೆ ಬಿದ್ದರೆ ರೋಮಾಂಚನವಾಗುತ್ತಿತ್ತು.
ಅದರಲ್ಲೂ ಕಾಲೇಜು, ಯೂನಿವರ್ಸಿಟಿಗಳಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಕಾಮ್ರೇಡ್ ಎಂದೇ ಸಂಭೋದಿಸುತ್ತ್ತಿದ್ದರು. ನನ್ನ ದೃಷ್ಠಿ ದಿಂಬಿನ ಪಕ್ಕ ಇದ್ದ ಅಯ್ಯಪ್ಪಸ್ವಾಮಿ ಮತ್ತು ಸಾಯಿಬಾಬಾ ಪೋಟೋಗಳ ಕಡೆ ಹೋಗಿದ್ದನ್ನು ಆತ ಗಮನಿಸಿ ಹೇಳಿದ್ದ: ಇದೆಲ್ಲ ನನ್ನ ಹೆಂಡ್ತಿ ಕೆಲ್ಸ. ನನ್ನ ಕೈ ಸರಿ ಹೋಗ್ಲಿ ಅಂತ ದೇವರುಗಳಿಗೆ ಹರ್ಕೆ ಕಟ್ಕೊಂಡವ್ಳೆ. ಏಳು ವರ್ಷ ಆಯ್ತು ನೋಡಿ ಆ ದೇವ್ರುಗ್ಳು ಇನ್ನೂ ನನ್ನ ಮನೆ ಕಡೆ ತಲೆ ಹಾಕಿಲ್ಲ. ಪಾಪ, ಅವರಿಗೆ ತಾನೆ ಬಿಡುವೆಲ್ಲಿ ಬರ್ಬೇಕು ಹೇಳಿ. ಅವ್ರೂ ಒಂಥರಾ ನಮ್ಮ ಪೊಲಿಟಿಷಿಯನ್ಸ್ ಇದ್ದಂಗೇನೆ. ಮಹಾನ್ ಸೋಮಾರಿಗ್ಳು. ಈ ದೇವ್ರುಗ್ಳು ಸಾವಿರಾರು ವರ್ಷಗಳಿಂದ್ಲೂ ಕುಂತಲ್ಲೆ ಕುಂತವ್ರೆ ರೋಗಿಷ್ಠರಂತೆ ನನ್ನ ಥರಾನೆ. ಇದೆಲ್ಲ ಈ ಹೆಂಗಸರಿಗೆ ಅರ್ಥ ಆಗ್ಬೇಕಲ್ಲ. ವೃಥಾ ಚರ್ಚೆ ಏಕೆ ಅಂತ ಸುಮ್ಮನಾಗಿದ್ದೀನಿ…. ಯೂನಿವರ್ಸಿಟಿಯ ದಿನಗಳಲ್ಲಿ ಆತ ಅಪ್ಪಟ ನಾಸ್ತಿಕನಾಗಿದ್ದ. ಅದರ ನೆರಳು ಇನ್ನೂ ಆತನನ್ನು ಬಿಟ್ಟು ಹೋಗಿರಲಿಲ್ಲ.
ಏನು ಮಾಡಿಕೊಂಡಿದ್ದೀರಿ….? ಕೇಳಿದ್ದ. ನಾನು ಹೇಳಿದ್ದೆ. ಒಡನೆಯೇ ಆತನ ಕಣ್ಣುಗಳು ಕಿರಿದಾಗಿದ್ದವು. ಮುಖದಲ್ಲಿ ಒಂದಿಷ್ಟು ಕಸಿವಿಸಿ ಹುಟ್ಟಿಕೊಂಡಿದ್ದನ್ನು ಗಮನಿಸಿದ್ದೆ.
ಬ್ಲಡಿ ಕ್ರೂಯಲ್ ಬ್ಯುರೋಕ್ರೆಸಿ ಆಫ್ ಇಂಡಿಯಾ…. ವ್ಯಂಗ್ಯ, ವಿಷಾದಗಳು ಧ್ವನಿಯಲ್ಲಿ ವ್ಯಕ್ತವಾಗುವುದರೊಂದಿಗೆ ಆತನ ಹಣೆಯಲ್ಲಿ ನೆನಪಿನ ಗೆರೆಗಳು ಮೂಡಿದಂತೆ ಕಾಣಿಸಿತ್ತು. ನನ್ನ ವೃತ್ತಿಯನ್ನು ಕೇಳಿ ಆತನಿಗೆ ನೆನಪಾಗಿರಬಹುದಾದ ಘಟನೆ ನನಗೂ ನೆನಪಾಗಿತ್ತು.

ನಾನು ಆದಾಗ ತಾನೆ ಡಿಗ್ರಿ ಮುಗಿಸಿ ಎಂ.ಎ.ಗೆ ಸೇರಿಕೊಂಡಿದ್ದೆ. ದೇಶದ ತುಂಬಾ ಎಮರ್ಜನ್ಸಿಯ ವಿರುದ್ಧ ಹೋರಾಟಗಳು ಸಕ್ರಿಯವಾಗಿದ್ದವು. ಅಂಥ ದಿನಗಳಲ್ಲೆ ಈ ಚಂದ್ರಪ್ರಸಾದ್ ಯೂನಿವರ್ಸಿಟಿ ಹಾಸ್ಟೆಲ್ನಲ್ಲಿ ಆರು ತಿಂಗಳ ಮಟ್ಟಿಗೆ ನನ್ನ ರೂಂ ಮೇಟ್ ಆಗಿ ಸೇರಿದ್ದ. ಆತ ನನಗಿಂತಲೂ ಒಂದು ವರ್ಷ ಸೀನಿಯರ್. ಇಂಗ್ಲೀಷ್ ಲಿಟರೇಚರ್ ಸ್ಟೂಡೆಂಟ್. ಎಮರ್ಜೆನ್ಸಿ ವಿರುದ್ಧದ ಚಳುವಳಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದವನು. ತುಂಬಾ ಬುದ್ಧಿವಂತನಾಗಿದ್ದವನು ಓದುವುದರಲ್ಲೂ ಕ್ಲಾಸ್ನಲ್ಲಿ ಎಲ್ಲರಿಗಿಂತಲೂ ಮುಂದಿದ್ದ. ಅದ್ಭುತ ವಾಕ್ಚಾತುರ್ಯವನ್ನು ಹೊಂದಿದ್ದನಲ್ಲದೆ ಒಳ್ಳೆಯ ಸಂಘಟನಾಕಾರನಾಗಿದ್ದ. ವಿದ್ಯಾರ್ಥಿ ಸಂಘದ ಸೆಕ್ರೇಟರಿಯಾಗಿದ್ದ.
ಲಿಟರೇಚರ್ ಸ್ಟೂಡೆಂಟ್ ಆಗಿದ್ದರೂ ಇತಿಹಾಸ ಮತ್ತು ರಾಜಕೀಯ ಶಾಸ್ತ್ರಗಳನ್ನು ಆಳವಾಗಿ ಓದಿಕೊಂಡಿದ್ದ. ಆತನ ಸಹವಾಸದಿಂದಾಗಿಯೇ ನನಗೂ ಕಾರ್ಲ್ ಮಾರ್ಕ್ಸ್ , ಲೆನಿನ್, ಲೋಹಿಯಾ ಮುಂತಾದವರು ಹೆಗಲೇರಿದ್ದರು. ಕಾಫ್ಕಾ, ದಸ್ತೋವಸ್ಕಿ, ಚೆಗುವಾರ ಮುಂತಾದವರ ಪುಸ್ತಕಗಳನ್ನು ನಾನೂ ಓದುವಂತೆ ಮಾಡಿದ್ದ. ಆತನ ಮಾತುಗಳಿಗೆ ಯೂನಿವರ್ಸಿಟಿಯ ವಿದ್ಯಾರ್ಥಿಗಳೇ ಅಲ್ಲದೆ ಅಧ್ಯಾಪಕರು ಕೂಡ ತಲೆದೂಗುತ್ತಿದ್ದರು. ಅನೇಕ ಸಂಘಟನಾ ಸಭೆಗಳಿಗೆ ಅವನೊಂದಿಗೆ ನಾನು ಹೋಗುತ್ತಿದ್ದೆ. ಅಂಥ ದಿನಗಳಲ್ಲಿ ಯೂನಿವರ್ಸಿಟಿಯ ಸಮಾರಂಭವೊಂದಕ್ಕೆ ಜ್ಯೋತಿಬಸುವನ್ನ ಕರೆಸಲಾಗಿತ್ತು. ಆ ಸಮಾರಂಭದಲ್ಲಿ ಚಂದ್ರಪ್ರಸಾದ್ ಒಂದು ಪುಟ್ಟ ಭಾಷಣವನ್ನು ಮಾಡಿದ್ದ: ನಾವಿಂದು ವಿಚಿತ್ರ ಗೊಂದಲಮಯ ರಾಜಕೀಯ ಮತ್ತು ಸಮಾಜಿಕ ಸ್ಥಿತಿಯಲ್ಲಿದ್ದೇವೆ. ನಮ್ಮ ದೇಶದ ಜನಸಾಮಾನ್ಯರನ್ನು, ಕೂಲಿಕಾರರನ್ನು, ಮಧ್ಯಮವರ್ಗದವರನ್ನು ಅಷ್ಟೇಕೆ ಅಕಾಡೆಮಿಕ್ ಕಮ್ಯುನಿಟಿಯನ್ನೆ ತೆಗೆದುಕೊಳ್ಳಿ. ಏನೆಲ್ಲ ಅನ್ಯಾಯ, ಶೋಷಣೆ, ದಬ್ಬಾಳಿಕೆಗಳು ನಡೆಯುತ್ತಿದ್ದರೂ ಪ್ರತಿರೋಧವಿಲ್ಲದೆ ಜಡತ್ವದಿಂದ ಬದುಕುತ್ತಿದ್ದಾರೆ. ಇವರನ್ನೆಲ್ಲ ಎಚ್ಚರಿಸುವ ಸರ್ವ ಪ್ರಯತ್ನಗಳೂ ವಿಫಲವಾಗುತ್ತಿರುವುದರ ಬಗ್ಗೆ ಯೋಚಿಸಬೇಕಾಗಿದೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಬಂಡವಾಳಶಾಹಿಗಳು ಬಲಾಢ್ಯರಾದಾಗ ಜನರು ಭಿಕ್ಷುಕರಂತೆ ಬಾಳಬೇಕಾಗುತ್ತದೆ. ಬರ್ನಾಡ್ ಷಾ ಹೇಳಿದಂತೆ ಪ್ರಜಾಪ್ರಭುತ್ವ ಗಾಳಿ ತುಂಬಿದ ದೊಡ್ಡ ಬಲೂನು. ಜನ ತಲೆ ಎತ್ತಿ ಬಲೂನು ಕಡೆ ನೋಡುತ್ತಿದ್ದರೆ, ಆಳುವವರು ಜನರ ಜೇಬುಗಳನ್ನು ಕತ್ತರಿಸುತ್ತಾರೆ. ಇಂದು ನಮ್ಮ ಸಂವಿಧಾನದ ಕೊಲೆಯಾಗಿದ್ದರೂ ನಾವು ನರಸತ್ತವರಂತೆ ಬದುಕ್ತಾ ಇದ್ದೇವೆ. ಈ ಪೊಲೀಸರು ಬಂಡವಾಳಶಾಹಿಗಳು ಸಾಕಿದ ರೌಡಿಗಳಂತೆ ವರ್ತಿಸುತ್ತಾರೆ…. ಆಡಿಟೋರಿಯಂನಲ್ಲಿ ಪಿನ್ಡ್ರಾಪ್ ಸೈಲೆನ್ಸ್. ಸಮಾರಂಭ ಮುಗಿದಾಗ ಜ್ಯೋತಿಬಸು ಚಂದ್ರಪ್ರಸಾದ್ನನ್ನು ಅಪ್ಪಿಕೊಂಡಿದ್ದರು. ಅವರನ್ನು ಬೀಳ್ಕೊಡಲು ಅವನೂ ಸಿಟಿಗೆ ಹೋಗಿದ್ದ.
ಅಂದು ರಾತ್ರಿ ಸುಮಾರು ಹೊತ್ತಾದರೂ ಚಂದ್ರಪ್ರಾಸದ್ ಹಾಸ್ಟೆಲ್ ರೂಮಿಗೆ ವಾಪಸ್ಸಾಗಿರಲಿಲ್ಲ. ಆತ ಅನೇಕ ಬಾರಿ ಹಾಗೆ ಗೈರು ಹಾಜರಾಗುತ್ತಿದ್ದದ್ದುಂಟು. ಒಮ್ಮೊಮ್ಮೆ ಸಿಟಿಯ ಜನರಲ್ ಹಾಸ್ಟಲಿನಲ್ಲೆ ಉಳಿದುಕೊಂಡುಬಿಡುತ್ತಿದ್ದ. ಪರಿಚಯವಾದ ಯಾರನ್ನೆ ಆಗಲಿ ಎರಡೇ ದಿನದಲ್ಲಿ ಏಕವಚನದಲ್ಲಿ ಮಾತನಾಡಿ ಆತ್ಮೀಯವಾಗಿಬಿಡುತ್ತಿದ್ದ. ನಾನು ಊಟ ಮಾಡಿ ಹನ್ನೊಂದು ಗಂಟೆಯವರೆವಿಗೂ ಓದಿಕೊಂಡು ಮಲಗಿ ಬಿಟ್ಟಿದ್ದೆ. ಒಂದು ಹೊತ್ತಿನಲ್ಲಿ ಬಾಗಿಲು ಬಡಿಯುವ ಸದ್ದು ಕೇಳಿ ಎಚ್ಚರವಾಗಿತ್ತು. ಸಮಯ ಹನ್ನೆರಡೂವರೆಯಾಗಿತ್ತು. ಹೋಗಿ ಬಾಗಿಲು ತೆರೆದಿದ್ದೆ. ಚಂದ್ರಪ್ರಸಾದ್ ನಿಂತಿದ್ದ. ಮುಖ ಬಾತುಕೊಂಡಿತ್ತು. ಕಣ್ಣು ಕೆಂಪಗಾಗಿದ್ದವು. ಕೂದಲು ಕೆದರಿತ್ತು. ಕೈಗಳು ತರಚಿಕೊಂಡಿದ್ದವು. ತುಂಬಾ ಸುಸ್ತಾದಂತೆ ಕಾಣುತ್ತಿದ್ದವನು ಬಾಗಿಲನ್ನು ಹಿಡಿದುಕೊಂಡ. ಗಾಬರಿಯಾಗಿತ್ತು ನನಗೆ.
ಏಕೆ ಏನಾಯ್ತು…. ಎಂದು ನನ್ನ ಬಾಯಿಂದ ಮಾತು ಹೊರಡುವುದಕ್ಕೂ ಚಂದ್ರಪ್ರಸಾದ್ನ ಹಿಂದೆ ಇಬ್ಬರು ಪೊಲೀಸರು ಕಾಣಿಸಿಕೊಳ್ಳುವುದಕ್ಕೂ ಒಂದೇ ಆಗಿತ್ತು. ನಿಜವಾಗಿಯೂ ಅಂಥ ಭಯ ಜೀವಮಾನದಲ್ಲಿ ನನಗೆಂದೂ ಆಗಿರಲಿಲ್ಲ.
ನೀನೇನಾ ಇವನ ರೂಂಮೇಟ್…. ಎಂದಿದ್ದ ಒಬ್ಬ ನಗುತ್ತಾ. ಅವನ ನಗುವಿನಲ್ಲಿ ಥಣ್ಣನೆಯ ಕ್ರೌರ್ಯ ಎದ್ದು ಕಾಣುತ್ತಿತ್ತು. ನನ್ನ ಬಾಯಿ ಒಣಗಿಹೋಗಿತ್ತು.
ಹೂಂ…. ಎಂದೆ. ನನ್ನ ಧ್ವನಿ ನಡುಗುತ್ತಿತ್ತು.
ಇವ್ನು ಮಹಾತ್ಮಗಾಂಧಿ ಅಂತ ತಿಳ್ಕೊಂಡವ್ನೆ. ಸುಮ್ನೆ ತಿಕ ಮುಚ್ಕೊಂಡು ಓದ್ಕಂಡು ಇರೋಕೆ ಹೇಳು. ಗೌರ್ಮೆಂಟ್ ವಿರುದ್ಧ ಏನೇನೋ ಪಾಂಪ್ಲೆಟ್ ಹಂಚ್ತಿದ್ದ. ಸ್ಟೇಷನ್ನಿನಲ್ಲಿ ಎಸ್.ಪಿ. ಸಾಹೇಬ್ರುನ ಯರ್ರಬಿರ್ರಿ ಮಾತಾಡ್ದ. ಅದಕ್ಕೆ ಸ್ಪಲ್ಪ ರುಚಿ ತೋರ್ಸಿದ್ದೀವಿ. ಮತ್ತೆ ಬಾಲಗೀಲ ಬಿಚ್ಚಿದ್ರೆ ಮೊಣಕಾಲು ಚಿಪ್ಪು ಎಗರಿಸ್ತಾರಂತೆ ಸಾಹೇಬ್ರು. ಯೂನಿವರ್ಸಿಟಿ ಹಾಸ್ಟಲ್ ಅಂದಿದ್ದಕ್ಕೆ ಸ್ವಲ್ಪನೇ ಸ್ವಲ್ಪ ಬೆಂಡೆತ್ತಿದ್ರು ಸಾಹೇಬ್ರು. ಇಲ್ಲ ಅಂದಿದ್ರೆ ಅದರ ಕಥೆನೇ ಬೇರೆ ಆಗೋದು. ಗೌರ್ಮೆಂಟ್ ಈಗ ನಮ್ಗೆ ಫುಲ್ ಪವರ್ ಕೊಟೈತೆ. ಇವ್ನು ಮಾತಾಡಿದ ಮಾತುಗಳ್ಗೆ ಸಾಯ್ಸಿ ಹೆಣಾನ ರೈಲ್ವೆ ಟ್ರ್ಯಾಕ್ ಮೇಲೆ ಬಿಸಾಕ್ಬೇಕಾಗಿತ್ತು. ನಮ್ಗೂ ದಯೆ ದಾಕ್ಷಿಣ್ಯ ಐತೆ, ಹೆಂಡ್ತಿ ಮಕ್ಳು ಆವ್ರೆ. ಅದ್ರಿಂದ್ಲೆ ಇಲ್ಲಿಗಂಟ ಕರ್ಕಂಡ್ ಬಂದ್ವಿ. ಚನ್ನಾಗಿ ಓದ್ಕಂಡು ತಂದೆ ತಾಯಿಗಳಿಗೆ ಹೆಸರು ತಗಂಡ್ ಬನ್ನಿ…. ಇನ್ನೊಬ್ಬ ಪೇದೆ ಗಡಸು ಧ್ವನಿಯಲ್ಲಿ ಮಾತನಾಡಿದ್ದ. ನಂತರ ಅವರು ಬಿರಬಿರನೆ ಹೊರಟು ಹೋಗಿದ್ದರು.
ಚಂದ್ರಪ್ರಸಾದನನ್ನು ಹಿಡಿದುಕೊಂಡು ಬಂದು ಹಾಸಿಗೆಯ ಮೇಲೆ ಮಲಗಿಸಿದ್ದೆ. ಮೊದಲ ಮಹಡಿಯಲ್ಲಿದ್ದ ಕಬ್ಬಡಿ ಆಟಗಾರ ರಂಗಸ್ವಾಮಿಯ ರೂಮಿಗೆ ಓಡಿ ಹೋಗಿ ಗ್ಲೂಕೋಸ್ ಪೌಡರ್ ಇಸಿದುಕೊಂಡು ಬಂದು ನೀರಿಗೆ ಬೆರೆಸಿ ಕೊಟ್ಟಿದ್ದೆ. ಎದ್ದು ಕುಳಿತವನು ಗಟಗಟ ಅಂತ ಎರಡು ಗ್ಲಾಸುಗಳನ್ನು ಕುಡಿದು ಹಾಕಿದ್ದ. ಆತನ ಮುಖದಲ್ಲಿ ರೋಷ, ಅಸಹಾಯಕತೆ ಒಟ್ಟಿಗೆ ಮನೆ ಮಾಡಿದ್ದವು. ಕಣ್ಣಲ್ಲಿ ನೀರು ಹನಿಗೂಡಿದ್ದವು. ನನ್ನ ಕೈ ಅದುಮುತ್ತಾ ರಾಕ್ಷಸರು, ಬೆಳಿಗ್ಗೆಯಿಂದ್ಲೂ ಉಪವಾಸ ಕೆಡವಿ ರಾತ್ರಿ ಏರೋಪ್ಲೇನ್ ಎತ್ತಿದರು…
ಸದ್ಯ ದೇವರ ದಯೆ, ಬದುಕಿ ಬಂದಿದ್ದೀಯ ಬಿಡು…. ನಾನು ಸಮಾಧಾನ ಮಾಡಿದ್ದೆ.
ದೇವರ ಸುದ್ಧಿ ಎತ್ಬೇಡ. ದೇವ್ರುಗ್ಳೇ ಇದ್ದಿದ್ರೆ ಈ ದೇಶಕ್ಕೆ ಈ ಗತಿ ಬರ್ತಿರ್ಲಿಲ್ಲ…. ಕನವರಿಸಿದ್ದ ಆತ.
ಅಂಥ ರಾತ್ರಿಯಲ್ಲೆ ಸುದ್ದಿ ತಿಳಿದು ಹಾಸ್ಟೆಲಿನ ಎಲ್ಲಾ ವಿದ್ಯಾರ್ಥಿಗಳು ಎದ್ದು ಬಂದು ವಿಚಾರಿಸಿಕೊಂಡಿದ್ದರು. ಮಾರನೆಯ ದಿನವಂತೂ ಈ ಸುದ್ಧಿ ಇಡೀ ಕ್ಯಾಂಪಸ್ನಲ್ಲಿ ಬಿರುಗಾಳಿಯಂತೆ ಹಬ್ಬಿತು. ಅಧ್ಯಾಪಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಬೋಧಕೇತರ ವರ್ಗದವರು ಬೀದಿಗಿಳಿದಿದ್ದರು. ಎರಡು ದಿನ ಯೂನಿವರ್ಸಿಟಿಯನ್ನು ಬಂದ್ ಮಾಡಲಾಯಿತು. ಚಂದ್ರಪ್ರಸಾದ್ನನ್ನು ಅರೆಸ್ಟ್ ಮಾಡಿ ಥಳಿಸಿದ್ದ ಸಬ್ ಇನ್ಸ್ಪೆಕ್ಟರ್ ವಿ ಸಿ ಹತ್ತಿರ ಬಂದು ಕ್ಷಮೆ ಕೋರಿದ್ದ. ಇಂಥ ಅಭೂತ ಪೂರ್ವ ಬೆಂಬಲದಿಂದ ಚಂದ್ರಪ್ರಸಾದ್ ಭಾವುಕನಾಗಿ ಚಹ ಕುಡಿಯುತ್ತಾ ಯೂನಿವರ್ಸಿಟಿ ಕ್ಯಾಂಟಿನ್ನಲ್ಲಿ ಗಾಂಧಿ ಚಳುವಳಿಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ. ಅಂಥವೇ ಚಳುವಳಿಗಳ ಮೂಲಕ ಈ ದೇಶವನ್ನು ಶುದ್ಧಿಗೊಳಿಸಲು ನಾವು ಹೋರಾಡಬೇಕಾಗಿದೆ. ನಮ್ಮ ಹೋರಾಟಗಳಿಗೆ ಆರ್ಥಿಕ ಭದ್ರತೆ, ರಾಜಕೀಯ ಒಳಸಂಚು ಮತ್ತು ಅಧಿಕಾರಶಾಹಿಯ ಸಹಕಾರಗಳನ್ನು ಗಿಟ್ಟಿಸಿಕೊಳ್ಳಬೇಕಾಗಿದೆ. ಕೆಲವೊಮ್ಮೆ ವಾಮಮಾರ್ಗಗಳನ್ನೂ ನಾವು ಕಂಡುಕೊಳ್ಳಬೇಕು. ಮಾರ್ಕ್ಸ್ ತನ್ನ ಕೊನೆಗಾಲದಲ್ಲಿ ಈ ಸತ್ಯಗಳನ್ನು ಮನಗಂಡಿದ್ದ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಬಂಡವಾಳಶಾಹಿಗಳು ಬಲಾಢ್ಯರಾದಾಗ ಇಂತಹ ಪಿತೂರಿಗಳು ಅನಿವಾರ್ಯವಾಗಿಬಿಡುತ್ತವೆ. ಇದಕ್ಕೆಲ್ಲ ಅಗತ್ಯವಾದ ಆತ್ಮಶ್ರದ್ಧೆ ಮತ್ತು ಧೈರ್ಯ ಬಲವಾಗಿ ಬೇರೂರಿದಾಗ ಮಾತ್ರ ನಮ್ಮ ಹೋರಾಟಗಳು ಸಫಲವಾಗಬಹುದು…. ಎಂದು ಹೇಳಿದ್ದ. ಆತನ ಮಾತುಗಳಲ್ಲಿ ನಿಖರತೆಯಿತ್ತು, ದೃಢತೆಯಿತ್ತು.
ಇದಾದ ಮೂರು ತಿಂಗಳಲ್ಲಿ ಎಮರ್ಜನ್ಸಿ ಎತ್ತಂಗಡಿಯಾಗಿತ್ತು. ಚಂದ್ರಪ್ರಸಾದ್ ಆ ವರ್ಷ ತರಗತಿಗೆ ಮೊದಲನೆಯ ರ್ಯಾಂಕ ಪಡೆದು ಪಾಸಾಗಿದ್ದ. ದೇಶದ ತುಂಬಾ ಬದಲಾವಣೆಯ ಗಾಳಿ ಬೀಸತೊಡಗಿತ್ತು. ಇಂಗ್ಲಿಷ್ ಡಿಪಾರ್ಟ್ಮೆಂಟ್ನಲ್ಲಿ ಚಂದ್ರಪ್ರಸಾದ್ ಸಂಶೋಧನ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದು. ನಾನು ಡಿಗ್ರಿ ಪಡೆದುಕೊಂಡ ನಂತರ ಒಂದೆರಡು ವರ್ಷ ಬೇಸಾಯ ಮಾಡಿಕೊಂಡಿದ್ದು, ನಂತರ ಉಪನ್ಯಾಸಕ ಹುದ್ದೆಗೆ ಸೇರಿ ಕಡೆಗೆ ಸ್ಪರ್ಧಾತ್ಮಕ ಪರಿಕ್ಷೇಯಲ್ಲಿ ಪಾಸಾಗಿ ಬದುಕಿನ ಕವಲು ದಾರಿಗಳಲ್ಲಿ ಬಹುದೂರ ಸಾಗಿಬಿಟ್ಟಿದ್ದಾಗಿತ್ತು. ಯೂನಿವರ್ಸಿಟಿ ಬಿಟ್ಟ ಮೊದ ಮೊದಲು ಒಂದೆರಡು ಸಾರಿ ಸಾಹಿತ್ಯ ಸಭೆಗಳಲ್ಲಿ ಚಂದ್ರಪ್ರಸಾದನನ್ನು ಭೇಟಿ ಮಾಡಿದ್ದೆ. ಅದಾದ ಅನೇಕ ವರ್ಷಗಳ ಮೇಲೆ ಆತನ ಮನೆಯಲ್ಲಿ ಕುಳಿತು ಅತಂತ್ರ ಸ್ಥಿತಿಯಲ್ಲಿ ಆತನನ್ನು ಕಾಣುವ ಸಂದರ್ಭ ಒದಗಿಬಂದಿತ್ತು. ಆತ ಕೆಮ್ಮುವುದರೊಂದಿಗೆ ನಾನು ನೆನಪಿನಾಳದಿಂದ ಮೇಲಕ್ಕೆ ಬಂದಿದ್ದೆ.

ಆತ ಮಾತನಾಡತೊಡಗಿದ: ಎಮರ್ಜೆನ್ಸಿ ಏನೇನೂ ಅಲ್ಲ ಅನ್ನಿಸ್ತಿದೆ ಈಗ. ಸಾಮಾನ್ಯ ಜನ ಏನನ್ನೂ ಪ್ರಶ್ನಿಸದೆ ಷಂಢರಾಗಿ ಬಿಟ್ಟಿದ್ದಾರೆ. ಇಡೀ ವ್ಯವಸ್ಥೆಗೆ ಮಲ್ಟಿಪಲ್ ಫ್ರಾಕ್ಚರ್ ಆಗಿ ಬಿಟ್ಟಿದೆ. ರಿಪೇರಿ ಮಾಡೋದಕ್ಕೆ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ. ಅಧಿಕಾರ ಇರುವ ಪ್ರತಿಯೊಬ್ಬನೂ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾನೆ. ಜನಪ್ರತಿನಿಧಿಗಳ, ಅಧಿಕಾರಿಗಳ, ವ್ಯಾಪಾರಿಗಳ, ಚಿಂತಕರ, ಬುದ್ಧಿಜೀವಿಗಳ, ಪತ್ರಕರ್ತರ ವೇಷದಲ್ಲಿ ದರೋಡೆಕೋರರು ತುಂಬಿ ತುಳುಕಾಡುತ್ತಿದ್ದಾರೆ. ಭ್ರಷ್ಟಾಚಾರ ನಮ್ಮ ಎದೆ, ಕರುಳುಗಳಿಗೆ ಇಳಿದು ಬಿಟ್ಟಿದೆ. ನನಗೆ ಯೂನಿವರ್ಸಿಟಿಯಲ್ಲಿ ಇನ್ನಿಲ್ಲದ ಟಾರ್ಚರ್ ಕೊಟ್ರು. ವಿಲ ವಿಲ ಅಂತ ಒದ್ದಾಡಿ ಹೋದೆ. ಟೆನ್ಷನ್ ತಡಿಲಾರ್ದೆ ಬಲಗೈಗೆ ಸ್ಟ್ರೋಕ್ ಹೊಡೆದುಬಿಡ್ತು. ಡಿಪಾರ್ಟ್ಮೆಂಟ್ನಿಂದ ರಿಲೀವ್ ಮಾಡ್ಬಿಟ್ರು. ನನ್ನ ಹೆಂಡ್ತಿಗೆ ಕ್ಲರ್ಕ್ ಕೆಲ್ಸ ಕೊಟ್ರು. ಭಯದಿಂದ ಜನ ಏನನ್ನೂ ಪ್ರಶ್ನೆ ಮಾಡ್ತ ಇಲ್ಲ ಅನ್ನಿಸ್ತಿದೆ. ಗಾಂಧೀನ ಮರೆತ ಈ ದೇಶಕ್ಕೆ ಖಂಡಿತಾ ಭವಿಷ್ಯವಿಲ್ಲ…. ಆತನ ನೋವು ನನಗೆ ಅರ್ಥವಾಗಿತ್ತು.
ಕಾಲ ಬದಲಾದಂತೆ ಎಲ್ಲಾ ವಿಷಯಗಳೂ ಬದಲಾಗ್ತ ಹೋಗ್ತವೆ. ಚಾಲ್ತಿಯಲ್ಲಿದ್ದ ಅನೇಕ ಸಂಗತಿಗಳು ಅಪ್ರಸ್ತುತವಾಗಿಬಿಡುತ್ತವೆ. ಅನೈತಿಕ ಅನ್ನಿಸುವ ಅಂಶಗಳು ನೈತಿಕ ಸ್ವರೂಪ ಪಡೆದುಕೊಳ್ಳುತ್ತವೆ. ಈ ವೇಗದ ಪ್ರಪಂಚದಲ್ಲಿ ಯಾರಿಗೆ ಯಾರೂ ಅರ್ಥವಾಗುವುದಿಲ್ಲ…. ಆತನನ್ನು ಹಳೆಯ ವಿಚಾರಗಳಿಂದ ಹೊರಕ್ಕೆ ತೆಗೆಯಲು ಪ್ರಯತ್ನಿಸುತ್ತಾ ಸಮಾಧಾನದ ಮಾತುಗಳನ್ನಾಡಿದ್ದೆ.
ನಿಜ, ನಿಜ. ಎಲ್ಲದಕ್ಕೂ ಈಗ ಜಾಗತೀಕರಣಾನ ಅಡ್ಡ ಇಟ್ಕೊಂಡು ಮಾತನಾಡೋದನ್ನ ಎಲ್ರೂ ಕಲ್ತು ಬಿಟ್ಟವ್ರೆ. ಅದಿರ್ಲಿ ನೀವೂ ಏನಾದ್ರೂ ಚನ್ನಾಗಿ ಮಾಡ್ಕೊಂಡಿದ್ದೀರೋ ಹೇಗೆ….? ಹುಸಿ ನಗೆ ಸೂಸುತ್ತಾ ಕೇಳಿದ್ದ. ಆತನ ಮಾತಿನಿಂದ ಸ್ವಲ್ಪ ಮುಜುಗರವಾದರೂ ಸಾವರಿಸಿಕೊಂಡು ಹೇಳಿದ್ದೆ: ತೀರಾ ಆಸೆ ಬಿದ್ದಿಲ್ಲ. ಡಿಪಾರ್ಟ್ಮೆಂಟ್ನಲ್ಲಿ ಕೈಲಾಗ್ದೋನು ಅಂತ ನನ್ನ ಬಗ್ಗೆ ಮಾತಾಡ್ಕೊತಾರೆ. ಮಾರ್ಕ್ಸ್, ಲೋಹಿಯಾ ಇನ್ನೂ ಸ್ವಲ್ಪ ಸ್ವಲ್ಪ ಮನಸ್ಸಲ್ಲಿ ಉಳ್ಕೊಂಡವ್ರೆ. ಆದ್ರೂ ಸತ್ಯ ಹರಿಶ್ಚಂದ್ರ ಅಂತ ಮಾತ್ರ ಹೇಳ್ಕೊಳ್ಳೋದುಕ್ಕೆ ಆಗೋದಿಲ್ಲ….
ವೆರಿಗುಡ್, ಸೀದಾಸಾದ ಮಾತಾಡ್ತೀರಿ. ಒಂದಿಷ್ಟಾದ್ರೂ ಎಥಿಕ್ಸ್ ಇಟ್ಕೊಬೇಕು. ಕೆಲವರಿಗೆ curruption ಕೂಡ ಒಂದು natural instinct ಥರ ಆಗ್ಬಿಟ್ಟಿದೆ ಎರಡು ತಿಂಗಳು ಹಿಂದೆ ಪ್ರಭು ಬಂದಿದ್ದ….
ಯಾವ ಪ್ರಭು…? ಕೇಳಿದ್ದೆ.
ಅದೇ ನಮ್ಮ ಕಾಮ್ರೇಡ್ ಮೋಹನ ಪ್ರಭು. ಅನ್ಯಾಯದ ವಿರುದ್ಧ ಎಷ್ಟು ಉಗ್ರವಾಗಿ ಮಾತಾಡ್ತಿದ್ದ, ಬರಿತಿದ್ದ. ಈಗ್ಲೂ ಬರಿತಿದ್ದಾನೆ ತನ್ನದೆ ಪತ್ರ್ರಿಕೇಲಿ. ದೊಡ್ಡ ಪ್ರಗತಿಪರ ಚಿಂತಕ ಬೇರೆ. ಇವೊತ್ತಿನ ದಿನ ತುಂಬಾ ದೊಡ್ಡ ಮನುಷ್ಯ ಸಮಾಜದಲ್ಲಿನ ಚಿತ್ರಾನ್ನಕ್ಕೆ ಗತಿ ಇರ್ಲಿಲ್ಲ. ಅಂಥೋನಿಗೆ ಇವೊತ್ತು ಕೋಟಿಗಳು ಲೆಕ್ಕ ಇಲ್ಲ. ಸುಮಾರು ಪೊಲಿಟಿಷಿಯನ್ಸ್ಗೆ ದೇಶದಲ್ಲಿ ಅಡ್ವೈಸರ್ ಅಂತೆ. ಎಲ್ಲಾ ಬರಿ ಸೆಟ್ಲ್ಮೆಂಟ್ಸ್ ಮತ್ತು ಡೀಲಿಂಗ್ಸ್. ತುಂಬಾನೇ ಅಕ್ಷರ ವ್ಯಭಿಚಾರಿಗ್ಳು ಹುಟ್ಕೊಂಡಿದ್ದಾರೆ. ಈಗೀಗ ಹೋರಾಟಗಾರರೆಲ್ಲ ಆರ್.ಸಿ. ಗಳಾಗಿದ್ದಾರೆ. ಆರ್.ಸಿ. ಅಂದ್ರೆ ವಿಸ್ಕಿ ಅಲ್ಲ.. ರೋಲ್ಕಾಲ್. ಮಾತಾಡ್ತ ಮಾತಾಡ್ತ ಗಾಂಧೀನ ಬ್ರಿಟೀಷರ ಏಜೆಂಟ್ ಅಂದ. ನಂಗೆ ತಡ್ಕೊಳೋಕ್ಕಾಗ್ಲಿಲ್ಲ. ನಾನು ಚನ್ನಾಗಿ ಉಗಿದೆ. ನನ್ನ ಸಂದರ್ಶನಕ್ಕೆ ಅಂತ ಬಂದಿದ್ನಂತೆ. ಕಡೆಗೆ ಅವನ ಪತ್ರಿಕೇಲಿ ನನಗೆ ತಲೆ ಕೆಟ್ಟಿದೆ ಅಂತ ಬರ್ದಿದ್ನಂತೆ. ಹೇಲು, ಹೇಲು ಮನಷ್ಯರು. ನಿಜಕ್ಕೂ ಗಾಂಧಿ ಈ ದೇಶದ ಮಿಥ್. He was the only real naxalite… ಅಷ್ಟರಲ್ಲಿ ಸುಮಾರು ಮುವತ್ತು ವರ್ಷದ ಯುವತಿ ಒಳ ಬಂದಿದ್ದರಿಂದ ಆತ ಮಾತು ನಿಲ್ಲಿಸಿದ್ದ. ಅಪರಿಚಿತನಾದ ನನ್ನನ್ನು ನೋಡಿ ಆಕೆ ಅಚ್ಚರಿ ಪಟ್ಟಂತಿತ್ತು.
ನನ ಮಗಳು. ಆಗ್ಲೆ ಹೇಳಿದ್ನಲ್ಲ. ಇಲ್ಲೆ ಪಿ.ಯು ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದಾಳೆ. ಲಂಚ್ ಬ್ರೇಕ್ನಲ್ಲಿ ಬರ್ತಾಳೆ. ಸಂಘರ್ಷ ಅಂತ ಹೆಸರು. ನಾನೇ ಇಟ್ಟಿದ್ದು… ಮಗಳನ್ನು ಪರಿಚಯಿಸಿದವನು ಇವರು ನನ್ನ ರೂಂ ಮೇಟ್ ಆಗಿದ್ದವರು ಎಂ.ಎ ಓದುವಾಗ. ದೊಡ್ಡ ಪೊಲೀಸ್ ಆಫೀಸರ್ ಈಗ. ಹಿಂದಿನ ಸ್ನೇಹದ ಅಭಿಮಾನದಿಂದ ನೋಡಲು ಬಂದಿದ್ದಾರೆ… ಎಂದು ಮಗಳಿಗೆ ನನ್ನನ್ನು ಪರಿಚಯಿಸಿದ್ದ. ನನ್ನ ಪರಿಚಯದಿಂದ ಆಕೆ ಖುಷಿಯಾದಂತೆ ಕಂಡಿದ್ದಳು. ಊಟ ಮಾಡಲು ಹೇಳಿದ್ದಳು. ಊಟಕ್ಕೆ ಮತ್ತೊಮ್ಮೆ ಬರುತ್ತೇನೆಂದು ಬೇಡವೆಂದೆ. ಚಹ ಮಾಡಿದ್ದಳು. ಆತನಿಗೆ ಚಪಾತಿ ಪಲ್ಯ ಹಾಕಿಕೊಟ್ಟಿದ್ದಳು. ಆಕೆಯೂ ಅಡುಗೆ ಮನೆಯಲ್ಲಿ ಊಟ ಮುಗಿಸಿ ಹತ್ತು ನಿಮಿಷದಲ್ಲಿ ಮತ್ತೆ ಕಾಲೇಜಿಗೆ ಹೊರಟು ಹೋದಳು. ನಂಗೆ ಶುಗರ್ ಇದೆ ಅಂತ ತುಂಬಾ ಕಟ್ಟುನಿಟ್ಟಿನ ಡಯಟ್ನಲ್ಲಿ ಇಟ್ಟಿದ್ದಾರೆ. ಕಾಫಿ ಟೀ ಕೊಡಲ್ಲ. ಇವಳಿಗೆ ಮದ್ವೆ ಮಾಡ್ಬೇಕು. ಒಳ್ಳೆ ಗಂಡು ಸಿಕ್ತ ಇಲ್ಲ. ಪಿಎಚ್ಡಿ ಮಾಡಿ ಎರಡು ವರ್ಷ ಆಯ್ತು. ಯೂನಿವರ್ಸಿಟಿಯೋರು ಕೆಲಸ ಕೊಡೋಕೆ ಹಿಂದು ಮುಂದು ನೋಡ್ತಾರೆ, ನನ್ನ ಮಗಳು ಅಂತ. Dirty politics.
ಇವಳಿಗೆ ಪಿಎಚ್ಡಿ ಗೈಡು ನನ್ನ ಶಿಷ್ಯಾನೇ. ಪಿಎಚ್ಡಿ ಮುಗಿಸೋ ಹೊತ್ಗೆ ನಂಗೆ ತಿಳಿದ ಹಾಗೇನೆ ಮೂರು ಸಾರಿ ಅಭಾರ್ಷನ್ ಮಾಡಿಸಿಕೊಂಡ್ಳು. ಶಿಷ್ಯ ಎಂಥ ಗುರುಕಾಣಿಕೆ ಕೊಟ್ಟ ನೋಡಿ. ಈ ಸುದ್ದಿಯಿಂದ ಅರ್ಧ ಇವಳನ್ನು ಮದುವೆ ಆಗೋಕೆ ಯಾರೂ ಮುಂದೆ ಬರ್ತ ಇಲ್ಲ. ಆದ್ರೆ ಇವಳಿಗೆ ಮದುವೆ ಆಗದೆ ಇರೋದಕ್ಕೆ ನಾನು ಕಾರಣ ಅಂತ ಹೊರಗಡೆ ಜನ ಮಾತಾಡ್ಕೊತಾರಂತೆ. ಅಂದ ಹಾಗೆ ಈ fool ನನ್ನ ಶಿಷ್ಯ ಯಾರು ಗೊತ್ತಾ, ಅದೇ ಆ ಲಾಲ್ಬಹದ್ದೂರ್ ಶಾಸ್ತ್ರಿ ಇದ್ನಲ್ಲ…. ಅವನ ತಮ್ಮನ ಮಗ…. ಆತ ನಿಜವಾಗಿಯೂ ಕಷ್ಟಗಳಲ್ಲಿ ಸಿಲುಕಿ ನಲುಗುತ್ತಿದ್ದಾನೆನಿಸಿತ್ತು ನನಗೆ.
ನಮ್ಮ ಕವಿ ಲಾಲ್ಬಹುದ್ದೂರ್ ಶಾಸ್ತ್ರಿನಾ… ಕೇಳಿದ್ದೆ ನಾನು. ಯೂನಿವರ್ಸಿಟಿಯಲ್ಲಿ ಪ್ರಸಿದ್ಧಿ ಕವಿ ಸಂಶೋಧಕರೊಬ್ಬನಿಗೆ ತುಂಬಾ ಕುಳ್ಳಗೆ, ತೆಳ್ಳಗೆ ಇದ್ದುದ್ದರಿಂದ ಲಾಲ್ಬಹದ್ದೂರ್ ಶಾಸ್ತ್ರಿ ಉರೂಫ್ ಎಲ್.ಬಿ. ಶಾಸ್ತ್ರಿ ಎಂಬ ಅಡ್ಡ ಹೆಸರು ಬಿದ್ದಿತ್ತು. ಚಂದ್ರಪ್ರಸಾದ ಕ್ಷಣಕಾಲ ಭೂತ ಕಾಲಕ್ಕೆ ಹೋಗಿ ಬಂದು ವರ್ತಮಾನದಲ್ಲಿ ಮಾತನಾಡಿದ್ದ: ಎಂತೆಂಥ ಕವಿತೆಗಳನ್ನು ಬರ್ದ ಅಲ್ವ? ಇಡೀ ಸಾಹಿತ್ಯ ಲೋಕ ಒಮ್ಮೆಗೆ ಬೆಚ್ಚಿಬಿದ್ಬಿಡ್ತು. ನಮ್ಮ ಆ ಕಾಲದ ಚಳುವಳಿಗ್ಳು ಸುಮಾರು ಜನ ಸಾಹಿತಿಗಳಿಗೆ ಜನ್ಮ ಕೊಟ್ಟವು. ಆದ್ರೆ ಇವ್ರೆಲ್ಲ ತಲೆ ತುಂಬಾ ರಾಜಕೀಯ ಅಮೇದ್ಯನಾ ತುಂಬಿಕೊಂಡು ಬಿಟ್ರು. ಪೊಲಿಟಿಷಿಯನ್ಗಳಿಗಿಂತ್ಲೂ ಇವ್ರು ತುಂಬಾ ಡೇಂಜರ್ ಆಗ್ಬಿಟ್ರು. ಈ ಎಲ್.ಬಿ. ಶಾಸ್ತ್ರಿ ನೋಡಿ ಹದಿನೈದು ವರ್ಷಗಳಿಂದ್ಲೂ ಒಂದಲ್ಲ ಒಂದು ಅಧಿಕಾರನ ಅನುಭವಿಸ್ತ ಅವ್ನೆ ಸದಾ ತಲೆ ಮೇಲೆ ಕೈ ಹೊತ್ತು ಕುಳಿತಿರ್ತಾನೆ. ಇದರಿಂದ ಅರ್ಥ ಆಗೋದಂದ್ರೆ ಯಾವುದೇ ಆದರ್ಶ, ಸಿದ್ಧಾಂತ ಸುಳ್ಳು ಅಂತ. ಯಾವೋನ್ಗೆ ಅವಕಾಶ ಸಿಕ್ತದೋ ಅವ್ನು ದೋಚ್ತ ಹೋಗ್ತಾನೆ. ಅವಕಾಶ ಸಿಗದಿದ್ದೋನು ಟೀಕಿಸ್ತಾ ಹೋಗ್ತಾನೆ. ಎಲ್ಲೆಲ್ಲೂ ಸ್ವಾರ್ಥ, ಜಾತೀಯತೆ. ನಮ್ಮ ಹೋರಾಟಗಳು ಛಿದ್ರ ಛಿದ್ರ ಆಗಿದ್ದು ಇದರಿಂದ್ಲೆ. ಏನು ಮಾಡೋದು, ಎಲ್ಲರ ಮನಸ್ಸುಗಳೂ ಅಂಥ ಭ್ರಮೆಯ ಗೀಳಿಗೆ ಬಿದ್ದು ಬಿಟ್ಟಿವೆ.
A poet can be completely polluted but not a single word of a poem. ಸುಖ ಸಂಪತ್ತು ಹೋರಾಟದ ಕಿಚ್ಚನ್ನು ನುಂಗಿ ನೀರು ಕುಡ್ದು ಬಿಡ್ತದೆ. ಗಾಂಧಿ ಹೇಳ್ತಾನೆ ದೈಹಿಕ ವ್ಯಭಿಚಾರಕ್ಕಿಂತ್ಲೂ ಮಾನಸಿಕ ವ್ಯಭಿಚಾರ ಅತ್ಯಂತ ಕ್ರೂರವಾದದ್ದು ಅಂತ. ನಿಜವಾಗಿಯು ಆತನ ವಿಚಾರಗಳು, ಮಾತುಗಳು ನನ್ನನ್ನು ದಂಗು ಬಡಿಸಿದ್ದವು. ಸತ್ಯವನ್ನು ನಾವೆಲ್ಲ ಸಾರ್ವತ್ರಿಕವಾಗಿ ತಿರಸ್ಕರಿಸುತ್ತಿರುವ ವಾಸ್ತವವನ್ನು ಮರೆತುಬಿಟ್ಟಿದ್ದೇವೆ ಅನ್ನಿಸಿತು. ನಾನು ವಾಚ್ ನೋಡಿಕೊಂಡೆ.
ಬೇಸರ ಆಯ್ತಾ….? ಕೇಳಿದ್ದ ಆತ.
ಇಲ್ಲ, ನೀವು ತುಂಬಾನೆ ನಮ್ಮ ವ್ಯವಸ್ಥೆಯ ಅಸಹ್ಯ ಮುಖಗಳ ಬಗ್ಗೆ ಮಾತನಾಡಿದಿರಿ. ಮತ್ತೊಮ್ಮೆ ಬರುತ್ತೇನೆ… ಎಂದೆ. ಮುಂದಿನ ಶುಕ್ರವಾರ ಬರ್ತೀರಾ…. ನನ್ನ ಹೆಂಡ್ತಿ ಮತ್ತು ಮಗಳು ತಿರುಪತಿಗೆ ಹೋಗ್ತಿದಾರೆ. ನಾನೊಬ್ಬನೆ ಇರ್ತೀನಿ. ನೀವು ಆಫೀಸು ಮುಗಿಸಿಕೊಂಡು ಸಂಜೆ ಆರೇಳು ಗಂಟೆಗೆ ಬಂದರಾಯ್ತು. ಮತ್ತಷ್ಟು ವಿಚಾರಗಳನ್ನು ಮಾತನಾಡಬಹುದು…
ಕೆಲಸದ ಒತ್ತಡವಿಲ್ಲದಿದ್ದರೆ ಖಂಡಿತಾ ಬರ್ತೀನಿ. ನಿಮ್ಮೊಂದಿಗೆ ಮಾತನಾಡುವುದು ನನಗೆ ಖಂಡಿತವಾಗಿಯೂ ಖುಷಿಯ ವಿಚಾರ….
ಡ್ರಿಂಕ್ಸ್ ತಗೋತಿರಾ… ನಿಮ್ಮ ಇಲಾಖೆಯಲ್ಲಿ ತುಂಬಾ ಕಾಮನ್ ಅನ್ಸುತ್ತೆ ನಗುಮಿಶ್ರಿತ ಧ್ವನಿಯಲ್ಲಿ ಕೇಳಿದ್ದ.
ಯಾವಾಗ್ಲೂ ಇಲ್ಲ. ವಾರಕ್ಕೊಮ್ಮೆಯೋ, ಹದಿನೈದು ದಿನಗಳಿಗೊಮ್ಮೆಯೋ ಒಮ್ಮೆ….
ಬರುವಾಗ ಒಂದರ್ಧ ಬಾಟ್ಳು ಒಳ್ಳೆ ವಿಸ್ಕಿ ತನ್ನಿ. ನನ್ನ ಹೆಂಡ್ತಿ ಮಗ್ಳು ಗೋಗರೆದ್ರೂ ಡ್ರಿಂಕ್ಸ್ ಕೊಡಲ್ಲ. ಮೂರು ತಿಂಗಳಿಗೋ ಆರು ತಿಂಗಳಿಗೋ ಒಮ್ಮೆ ಒಂದೊಂದು ಪೆಗ್ ಕೊಡ್ತಾರೆ. ನನ್ನ ಪೆನ್ಷನ್ನು, ಅವರಿಬ್ಬರ ಸಂಬಳ…. ದುಡ್ಡಿಗೇನೂ ಕೊರತೆಯಿಲ್ಲ. ಬೇಡ ಬೇಡ ಅಂದ್ರೂ ಇನ್ನೊಂದು ಸೈಟು ತೆಗೆದುಕೊಳ್ಳೋಕೆ ಯೋಚಿಸ್ತಿದಾರೆ….
ಖಂಡಿತಾ ತರ್ತೀನಿ… ಎಂದು ನಾನು ಹೊರಟು ನಿಂತೆ. ನನ್ನನ್ನು ಬೀಳ್ಕೊಡಲು ಗಾಲಿ ಕುರ್ಚಿಯನ್ನು ತಳ್ಳಿಕೊಂಡು ಬಾಗಲಿನವರೆಗೂ ಬಂದಿದ್ದ.
ಮರಿಬೇಡಿ, ನಿಮ್ಮ ಬಿಡುವಿಲ್ಲದ ಕೆಲಸದ ಮಧ್ಯೆ…ಆತ ಮತ್ತೊಮ್ಮೆ ನೆನಪಿಸಿದ್ದ. ನಾನು ಹೊರಟ ಕೂಡಲೇ ಬಾಗಿಲಿನ ಚಿಲಕ ಹಾಕಿಕೊಂಡಿದ್ದು ಕೇಳಿಸಿತು.
ಶುಕ್ರವಾರದ ಸಂಜೆ ನಾನು ಮಾತು ಕೊಟ್ಟಂತೆ ಅರ್ಧಬಾಟಲ್ ಒಳ್ಳೆ ವಿಸ್ಕಿಯನ್ನು, ಸೋಡಾವನ್ನು, ಒಂದಿಷ್ಟು ಖಾರವನ್ನು ಬ್ಯಾಗಿನಲ್ಲಿ ಹಾಕಿಕೊಂಡು ಆತನ ಮನೆಯ ಕಡೆ ನಡೆದಿದ್ದೆ. ಬಾಗಿಲು ತಟ್ಟಿದಾಗ ಮಾಮೂಲಿಯಾಗಿ ನಿಧಾನವಾಗಿ ಬಾಗಿಲು ತೆರೆದುಕೊಂಡಿತ್ತು. ನನ್ನನ್ನು ನೋಡಿ ಸಂಭ್ರಮಗೊಂಡಿದ್ದ ಆತ. ನೀವು ಬರ್ತೀರ ಅಂತ ಫಿಫ್ಟಿ ಫಿಫ್ಟಿ ನಂಬಿಕೆ ಇತ್ತು…. ಬಾಯಲ್ಲಿ ಜೊಲ್ಲು ಊರಿಸಿಕೊಂಡು ತಡೆತಡೆದು ಮಾತನಾಡಿದ್ದ. ಎರಡು ಗ್ಲಾಸುಗಳಿಗೆ ವಿಸ್ಕಿಯನ್ನು ಸೋಡಾ ಮತ್ತು ನೀರಿನೊಂದಿಗೆ ಹದವಾಗಿ ಬೆರೆಸಿ ಆತನಿಗೆ ಒಂದನ್ನ ಕೊಟ್ಟಿದ್ದೆ. ಚಿಯರ್ಸ್… ಅಂದವನು ಬಾಯಾರಿದವನಂತೆ ಅರ್ಧಗ್ಲಾಸು ಒಮ್ಮೆಗೆ ಮುಗಿಸಿದ್ದ. ನೀವು ದೊಡ್ಡ ಆಫೀಸರ್ ಈಗ. ಈ ಥರ ಡ್ರಿಂಕ್ಸ್ ಸರ್ವ್ ಮಾಡ್ತಿರೋದು ನಿಜಕ್ಕೂ ನನ್ನ ಪುಣ್ಯ. ಆವೊತ್ತು ಪೊಲೀಸರು ಸ್ಟೇಷನ್ನಲ್ಲಿ ಏರೋಪ್ಲೆನ್ ಎತ್ತಿ ಹಾಸ್ಟೆಲ್ ರೂಂಗೆ ತಂದು ಬಿಟ್ಟಾಗ ಗ್ಲೂಕೋಸ್ ಕೊಟ್ಟು ಪ್ರಾಣ ಉಳಿಸಿದ್ದು ನೆನಪಾಗ್ತಿದೆ…. ಆತನ ಹಣೆಯಲ್ಲಿ ಕೃತಜ್ಞತೆಯ ನೆನಪಿನ ಗೆರೆಗಳು ಮೂಡುವುದರೊಂದಿಗೆ ಕಣ್ಣಲ್ಲಿ ಸಣ್ಣಗೆ ನೀರು ಇಣುಕಿತ್ತು. ಅಂಥ ego ನನ್ನಲ್ಲಿ ಇಲ್ಲ. ಅದೂ ಅಲ್ದೆ ಯೂನಿವರ್ಸಿಟೀಲಿ ನೀವು ನಂಗೆ ಎಕ್ಸಾಂ ಫೀಜು ಕಟ್ಟಿದ್ದು, ಕ್ಯಾಂಟಿನ್ ಕೂಪನ್ ಕೊಡ್ಸಿದು, ಹೊಸ ವಿಚಾರಗಳನ್ನು ತಲೆಯಲ್ಲಿ ತುಂಬಿದ್ದು ಮರೆಯೋಕೆ ಸಾಧ್ಯವಿಲ್ಲ…. ಆತ ಮಾಡಿದ್ದ ಉಪಕಾರವನ್ನು ನಾನೂ ಸ್ಮರಿಸಿದ್ದೆ. ಆತ ಗ್ಲಾಸು ಖಾಲಿ ಮಾಡಿದ್ದ. ಇನ್ನೊಂದು ಪೆಗ್ ಬೆರೆಸಿಕೊಟ್ಟಿದ್ದೆ.
ಕೆಲವು ವಿಚಾರಗಳನ್ನ ನಿಮ್ಮತ್ರ ಮಾತ್ರ ಹೇಳ್ತೀನಿ ಬೇಸರ ಮಾಡ್ಕೋಬೇಡಿ. ಬಲಗೈಗೆ ಸ್ಟ್ರೋಕ್ ಹೊಡೆದ್ರೂ ಒಂದಾರು ತಿಂಗ್ಳು ಚನ್ನಾಗಿ ಓಡಾಡ್ಕೊಂಡೆ ಇದ್ದೆ. ಆದ್ರೆ ಕ್ರಮೇಣ ಕಾಲುಗ್ಳು ಬಲಹೀನ ಆಗಿ ಒಡಾಡೋಕೆ ಸಾಧ್ಯ ಇಲ್ದಂಗೆ ಆಗೋಯ್ತು. ಯಾರೋ ಮಾಟ ಮಾಡ್ಸಿದಾರೆ ಅನ್ನೊ ಅನುಮಾನ ನನಗೆ. ನಂಗೇನೋ ನನ್ನ ಹೆಂಡ್ತಿ ಮೆಲೆ ಗುಮಾನಿ. ಯೂನಿವರ್ಸಿಟಿಯೋರು ನಂಗೆ ಕಂಪಲ್ಸರಿ ರಿಟೈರ್ಮೆಂಟ್ ಕೊಟ್ಟು ಇವಳಿಗೆ ಕ್ಲರ್ಕ್ ಕೆಲ್ಸ್ ಕೊಟ್ಬಿಟ್ರು. ಮನುಷ್ಯ ಅಸಹಾಯಕನಾಗಿ ಉಸಿರಿಟ್ಕೊಬಾರ್ದು. ನನ್ನ ಹೆಂಡ್ತಿ ನನ್ನ ಜೊತೆ ಮಲಗಿ ಆರು ವರ್ಷ ಆಯ್ತು ನೋಡಿ. ಅವುಳ್ಗೆ ಯಾರೋ ಸೂಪರಿಂಟೆಂಡ್ ಜೊತೆ ಅಫೇರ್ ಇದೆಯಂತೆ. ಹಾಳಾಗೋಗ್ಲಿ ನನ್ನ ಪರಿಸ್ಥಿತೀನೂ ಅರ್ಥ ಮಾಡ್ಕೊಬೇಕಲ್ವ. ಇವ್ಳೂ ದಸ್ತೋವಸ್ಕಿನ ಓದಿಕೊಂಡೋಳು… ನನ್ನ ವಿಚಾರಗಳಿಗೆ ಮನಸೋತು ಅಭಿಮಾನಿಯಾಗಿ ಮದುವೆ ಮಾಡಿಕೊಂಡೋಳು. ಈ ಹಸಿವು ಮತ್ತು ಕಾಮ ಎರಡೂ ಒಂದೆ. ಆದ್ರೆ ಕಾಮ ಹಸಿವಿಗಿಂತ್ಲೂ ಮೋಸ್ಟ್ ಡೇಂಜರಸ್. ಅದಕ್ಕೊಂದು ನಿರ್ಧಿಷ್ಟ definition ಆಗ್ಲಿ, ಒಂದು ಪರಿಧಿಯಾಗ್ಲಿ ಇಲ್ಲ. ಹಸಿವು ಮತ್ತು ಕಾಮ ಎರಡೂ ಇಲ್ಲದ ಮನುಷ್ಯ ಶವಕ್ಕೆ ಸಮಾನ. ಆದ್ರೆ ವಿಪರ್ಯಾಸ ನೋಡಿ, ನನ್ನಲ್ಲಿ ಎರಡೂ ಇದ್ರು ಶವ ಆಗ್ಬಿಟ್ಟಿದ್ದೀನಿ…. ಆತ ತುಂಬಾ ಎಮೋಶನಲ್ ಆಗ್ತಿದ್ದಾನೆ ಎನ್ನುವ ಅರಿವಾಗಿತ್ತು ನನಗೆ. ತುಂಬಾ ಭಾವುಕರಾಗ್ತಿದ್ದೀರಿ, ಸಮಾಧಾನ ಮಾಡ್ಕೊಳಿ. ಮತ್ತೆ ಬದುಕನ್ನು ಬಂದಂತೆ ಸ್ವೀಕರಿಸಬೇಕು ಅನ್ನೋದು ಕೂಡ ಒಂದು ಸಿದ್ಧಾಂತ…. ಸಮಾಧಾನ ಮಾಡಿದ್ದೆ.
ಹೌದು ಹೌದು, ಇಂಥ ಸಂದರ್ಭಗಳಲ್ಲೆ ಮನುಷ್ಯ ನಾಸ್ತಿಕತೆಯಿಂದ ಆಸ್ತಿಕತೆಗೆ ಜಿಗಿಯೋದು ಮತ್ತು ಅದೃಷ್ಟ-ದುರಾದೃಷ್ಟಗಳಲ್ಲಿ ನಂಬಿಕೆ ಹುಟ್ಟಿಕೊಳ್ಳೋದು…. ಆತ ಎರಡು ಪೆಗ್ ಸಾಕೆಂದ. ನಾನು ಒಂದು ಪೆಗ್ ಮುಗಿಸಿದ್ದೆ. ಒಂಬತ್ತು ಗಂಟೆಯಾಗುತ್ತಾ ಬಂದಿತ್ತು. ನಾನು ಹೊರಟು ನಿಂತೆ. ರಾತ್ರಿ ಆತನೊಂದಿಗೆ ಮನೆಯಲ್ಲಿರಲು ಆತನ ಹೆಂಡಿತಿಯ ಅಕ್ಕನ ಮಗ ಬರುವವನಿದ್ದ.
ಸಾಧ್ಯವಾದರೆ ಆಗಾಗ ಬಂದು ಹೋಗಿ ನನ್ನ ಸುತ್ತಮುತ್ತಲಿರುವ ಜನಕ್ಕೆ ಭಯಾನಾದ್ರೂ ಇರುತ್ತೆ. ನಿಮ್ಗೆ ಇನ್ನೂ ಗೊತ್ತಿಲ್ಲ… ನಂಗೇನಾದ್ರೂ ಇಪ್ಪತ್ತು ಸಾವಿರ ಪೆನ್ಷನ್ ಬರದೆ ಹೋಗಿದ್ದಿದ್ರೆ ನಾನು ಸತ್ತು ಮೂರ್ನಾಲ್ಕು ವರ್ಷ ಆಗಿರ್ತಿತ್ತೋ ಏನೋ….
ಅಲ್ಲಿರಲು ಸಾಧ್ಯವಾಗದೆ ನಾನು ಹೊರಟು ಬಿಟ್ಟೆ. ಆತ ಬಾಗಿಲು ಹಾಕಿಕೊಂಡಿದ್ದ. ಮಿಕ್ಕಿದ್ದ ವಿಸ್ಕಿ, ಸೋಡಾ ಬಾಟ್ಲು ಮತ್ತು ಖಾರ ಇದ್ದ ಬ್ಯಾಗನ್ನು ಅಲ್ಲೆ ಚರಂಡಿಗೆ ಎಸೆದಿದ್ದೆ. ಒಂದೆರಡು ದಿನ ಚಂದ್ರಪ್ರಸಾದ್ ಕಾಡಿದರೂ ಕೆಲಸದ ಒತ್ತಡಗಳಲ್ಲಿ ಕ್ರಮೇಣ ಮರೆತುಬಿಟ್ಟಿದ್ದೆ. ಇದಾದ ಹದಿನೈದು ದಿನಗಳ ನಂತರದ ಒಂದು ಶನಿವಾರ ಸಂಜೆ ಹೆಂಗಸೊಬ್ಬರು ನನ್ನನ್ನು ಕಾಣಲು ಬಂದಿರುವರೆಂದು ಪಿ ಎ ತಿಳಿಸಿದಾಗ ಒಳ ಕಳುಹಿಸಲು ಹೇಳಿದ್ದೆ. ಹತ್ತಿರ ಹತ್ತಿರ ಐವತ್ತು ವರ್ಷ ಮುಟ್ಟಿರಬಹುದಾದ ಹೆಂಗಸು. ಆರೋಗ್ಯಪೂರ್ಣ ಶರೀರ. ಕುಳಿತುಕೊಳ್ಳಲು ಹೇಳಿದ್ದೆ. ನಾನು ನಿಮ್ಮ ಸ್ನೇಹಿತರಾದ ಚಂದ್ರಪ್ರಸಾದ್ರವರ ಮಿಸೆಸ್… ಆಕೆ ಪರಿಚಯಮಾಡಿಕೊಳ್ಳುತ್ತಾ ಕುಳಿತುಕೊಂಡಿದ್ದಳು.
ಹೌದು, ಎರಡು ಸಾರಿ ಮನೆಗೆ ಬಂದಾಗಲೂ ನೀವು ಇರಲಿಲ್ಲ… ಕಾಫಿ ಹೇಳಿದ್ದೆ.
ಎಂಥ ಮನುಷ್ಯ ಹೇಗಾಗಿ ಬಿಟ್ಟ. ತುಂಬಾ ಬೇಸರವಾಗ್ತದೆ ಅವರನ್ನು ಆ ಸ್ಥಿತಿಯಲ್ಲಿ ನೋಡಲು…. ನಾನು ಮಾತನಾಡಿದ್ದೆ.
ಏಳು ವರ್ಷಗಳಿಂದ ನನಗೆ ಬದುಕೇ ಬೇಡವೆನಿಸಿಬಿಟ್ಟಿದೆ. ದೂರು ಹೇಳುತ್ತಿದ್ದೇನೆಂದು ಭಾವಿಸಬೇಡಿ. ಒಮ್ಮೊಮ್ಮೆ ಅವರು ಮನುಷ್ಯರೇ ಅಲ್ಲವೇನೋ ಎಂಬ ಅನುಮಾನ ಮೂಡುತ್ತದೆ. ನಮ್ಮ ಮನೆಗೆ ಯಾರೇ ಒಂದು ಸಾರಿ ಬಂದರೂ ಮತ್ತೊಮ್ಮೆ ಬರುವುದಿಲ್ಲ. ಬಂದವರೊಂದಿಗೆ ನನ್ನನ್ನು ನನ್ನ ಮಗಳನ್ನು ಕಟ್ಟಿ ಬಿಡ್ತಾರೆ. ನಂಗೂ ಗೊತ್ತು, ಅಸಹಾಯಕರಿಗೆ ಅನುಮಾನ ಜಾಸ್ತಿ ಅನ್ನೋದು. ಎಷ್ಟೋ ರಾತ್ರಿಗಳಲ್ಲಿ ನಿದ್ದೆ ಮಾಡೋಕೂ ಬಿಡೋದಿಲ್ಲ. ಬದುಕಿಗಿಲ್ಲದ ಆದರ್ಶ, ಸಿದ್ಧಾಂತಗಳು ಯಾರಿಗೆ ಬೇಕು? ಅವರ ಆ ಸ್ಥಿತಿಗೆ ನಾನು ನನ್ನ ಮಗಳು ಕೂಡ ಕಾರಣ ಅಂತ ಅನುಮಾನಪಡ್ತಾರೆ. ಅವರನ್ನ ಸಾಯಿಸಲು ಪ್ಲಾನ್ ಮಾಡ್ತಿದ್ದೀವಿ ಅಂತ ಗೊಣಗುತ್ತಾರೆ. ನಿಜವಾಗಿಯೂ ಅವರೊಂದಿಗೆ ಸತ್ತು ಬದುಕ್ತಿರೋರು ನಾವು…. ಕಾಫಿ ಬಂದಿತ್ತು. ನನಗೆ ಏನು ಮಾತನಾಡಲೂ ತೋಚಿರಲಿಲ್ಲ. ಕಾಫಿ ಗುಟುಕರಿಸುತ್ತಾ ಹೇಳಿ, ನನ್ನಿಂದ ಏನಾದರೂ ಸಹಾಯ ಆಗ್ಬೇಕಿತ್ತಾ…? ಕೇಳಿದ್ದೆ.
ನೀವು ಬಂದು ಹೋದ ನಂತರ ಮನಸ್ಸಿಗೆ ಬಂದಂತೆ ಮಾತಾಡ್ತಾರೆ. ಕಪ್ಲೇಂಟ್ ಲಾಡ್ಜ್ ಮಾಡಿ ನನಗೆ ಏರೋಪ್ಲೇನ್ ಎತ್ತಿಸ್ತೀನಿ ಅಂತ ಕಿರುಚಾಡ್ತಾರೆ. ದಯವಿಟ್ಟು ನಾನು, ನನ್ನ ಮಗಳು ಮನೆಯಲ್ಲಿರುವಾಗ ಒಮ್ಮೆ ಬಂದು ಹೋಗಿ. ಪೊಲೀಸರೆಂದರೆ ಭಯಪಡ್ತಾರೆ. ನಿಮ್ಮಿಂದ ಬೇರ್ಯಾವ ಸಹಾಯವೂ ನನಗೆ ಬೇಡ… ಆಕೆ ಎದ್ದು ನಿಂತಳು. ಆಕೆಯ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ನನ್ನ ಮಾತುಗಳಿಗೂ ಕಾಯದೆ ಆಕೆ ಬಾಗಿಲು ತೆರೆದುಕೊಂಡು ಚೇಂಬರ್ನಿಂದ ಹೊರಗೆ ಹೋಗಿದ್ದಳು. ನನಗೆ ಒಂದು ರೀತಿಯ ಸುಸ್ತು ಆವರಿಸಿ ಪುಶ್ಬ್ಯಾಕ್ ಸೀಟಿಗೆ ಒರಗಿಕೊಂಡಿದ್ದೆ.
ಉಪಸಂಹಾರ: ಆದರ್ಶ, ಸಿದ್ಧಾಂತ, ಹೋರಾಟ ಎಲ್ಲವೂ ಸತ್ಯ; ಎಲ್ಲವೂ ಮಿಥ್ಯ. ನಾನು, ಚಂದ್ರಪ್ರಸಾದ್ ಇಬ್ಬರೂ ನಿಜ, ಇಬ್ಬರೂ ಸುಳ್ಳು. ನಿಜವಾಗಿಯೂ ಭೂಮಿ ತಿರುಗುತ್ತಿಲ್ಲ. ಖಂಡಿತವಾಗಿಯೂ ಭೂಮಿ ತಿರುಗುತ್ತಿದೆ. ದೇವರಿದ್ದಾನೆಂಬುದು ಒಂದು ಭ್ರಮೆ. ದೇವರೇ ಇಲ್ಲದಿದ್ದರೆ ಜಗತ್ತು ಹೇಗೆ ಸೃಷ್ಠಿಯಾಯಿತೆಂಬುದೂ ಒಂದು ಭ್ರಮೆ ಮತ್ತು ಸತ್ಯ ಮಿಥ್ಯ ಎಂಬ ಪದಗಳ ಕೂಡ; ಅವರವರ ಭಾವಕ್ಕೆ ಅವರವರ ಭಕ್ತಿ!






ಗೌಡ್ರೆ, ನಿಮ್ಮ ಕತೆ ಓದಿದೊಡನೆ ತುರ್ತುಪರಿಸ್ತಿಯ ದಿವಸಗಳು ಹಾಗೂ ಆ ಕಾಲದ ನನ್ನ ವಾರಿಗೆಯ ಎಡಪಂತೀಯ ಲೇಖಕರು ನೆನಪಾದರು,
ತುಂಬಾ ಒಳ್ಳೆಯ ಸರಳ ಕತೆ, ಮನಮುಟ್ಟುವಂತಿದೆ, ಅಭಿನಂದನೆಗಳು,
Sanabagundi sir Nvenkatesh.D.O.LIC.ARSIKERE
Grate.
I do not know why, It touched me.
ಉತ್ತಮವಾದ ಕಥೆ….ಹೋರಾಟಗಳು,ಸಿದ್ದಾಂತಗಳು ಮನುಷ್ಯನನ್ನು ಹೇಗೆ ಸಿನಿಕನನ್ನಾಗಿ ಮಾಡುತ್ತವೆ.ಸುತ್ತಲಿನ ಪರಿಸರಕ್ಕೂ ನಮ್ಮ ಸಿದ್ದಾಂತಗಳಿಗೂ ಒಳ್ಳೆಯ ಲಿಂಕ್ ಇಲ್ಲದಿದ್ದರೆ ಹೇಗಾಗುತ್ತದೆ ಎಂಬುದನ್ನು ಕಥೆ ಚೆನ್ನಾಗಿ ವಿವರಿಸುತ್ತದೆ.ನಾವೂ ಕೂಡ ಒಂದು ರೀತಿಯ ಎಮರ್ಜೆನ್ಸಿಯಲ್ಲೇ ಬದುಕುತ್ತಿರುವುದರಿಂದ ಕಥೆ ನಮ್ಮದಾಗಿದೆ.ಧನ್ಯವಾಧಗಳು ಸರ್.
ಒಳ್ಳೆಯ ಕತೆ. ನಮ್ಮೊಳಗನ್ನು ನೋಡಿಕೊಳ್ಳುವಂತೆ ಮಾಡಿತು. ಧನ್ಯವಾದಗಳು ಸರ್
ನಿಜಕ್ಕೂ ಕಥೆ ಅಲುಗಾಡಿಸಿಬೀಟ್ಟಿತು ಸರ್. ವಾರಾಂತ್ಯದಲ್ಲಿ ಒಂದೊಳ್ಳೆಯ ಆದರೆ, ಮನಸ್ಸು ಅಲುಗಾಡಿಸುವ ಕಥೆ ಓದಿಸಿದ್ದಿರಿ, ಧನ್ಯವಾದಗಳು