ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡದ ದಾಸಯ್ಯಗಳ ನೆನಹು

gpr.jpg 

 

 

 

ಜಿ ಪಿ ರಾಜರತ್ನಂ

ದಾಸರೊಬ್ಬರು ಯಾರ ಮನೆಗೋ ಭಿಕ್ಷಕ್ಕೆ ಹೋದರಂತೆ. ಅವರ ಪದವನ್ನು ಕೇಳಿದ ಮನೆಯಾಕೆ, ಇಕ್ಕಲಾರದ ಕಾರ್ಪಣ್ಯದಿಂದ ದಾಸರನ್ನು ಹಾಗೇ ಸಾಗಹಾಕಲು ಏನೇನೋ ಸಬೂಬು ಹೇಳಿದಳಂತೆ.

ಕೈ ಎಂಜಲು ಎಂದಳಂತೆ. ಚಿಕ್ಕಮಕ್ಕಳು ಅಳುತಾರೆ, ಬಿಟ್ಟು ಬರಲಾರೆ ಎಂದಳಂತೆ. ಮಡಕೆ ತೊಳೀತಾ ಇದೇನೆ, ಮನೆ ಸಾರಿಸುತಾ ಇದೇನೆ, ಭಿಕ್ಷೆ ಹಾಕೋಕೆ ಹುಡುಗರು ಯಾರೂ ಇಲ್ಲ, ತೊಡೆಯ ಮೇಲಿನ ಕೂಸು ಮೊಲೆಯ ಉಣ್ಣುತಲಿದೆ ಎಂದಳಂತೆ.

ಮಾತುಮಾತಿಗೂ “ಹೋಗೋ ದಾಸಯ್ಯ, ಹೋಗೋ ದಾಸಯ್ಯ” ಅಂದರೂ ಆ ದಸರು ಹೋಗಲಿಲ್ಲವಂತೆ.

ಅಟ್ಟದ ಮೇಲಿನ ಅಕ್ಕಿ ತೆಗೆಯಬೇಕು, ಹತ್ತೋಣವೆಂದರೆ ಹೊಟ್ಟೆ ನೋಯುತಲಿದೆ ಎಂದಳಂತೆ. ಮುಟ್ಟಾಗಿ ಇದ್ದೇನೆ, ಮನೆಯೊಳಗೆ ಯಾರೂ ಇಲ್ಲ ಎಂದಳಂತೆ.

ಮಾತುಮಾತಿಗೂ “ಹೋಗೋ ದಾಸಯ್ಯ, ಹೋಗೋ ದಾಸಯ್ಯ” ಅಂದರೂ ಆ ದಸರು ಹೋಗಲಿಲ್ಲವಂತೆ.

ವೀಸದ ಕಾಸಿಗೆ ದವಸವ ನಾ ತಂದೆ, ಕೂಸಿಗೆ ಸಾಲದು ಹೋಗೋ ದಾಸಯ್ಯ ಅಂದಳಂತೆ. ಹುಡುಗಾಟ ಮಾಡದೆ ಹೋಗೋ ದಾಸಯ್ಯ, ನಿಷ್ಠೂರ ಮಾಡದೆ ಹೋಗೋ ದಾಸಯ್ಯ ಎಂದು ಆ ಮನೆಯಾಕೆ ಏನೇನು ಹೇಳಿದರೂ ದಾಸರು ಹೋಗಲಿಲ್ಲವಂತೆ.

ಕೊನೆಗೆ “ಆಸೆಕಾರ ನೀನು, ದೋಷಕಾರಿ ನಾನು” ಎಂದುಕೊಂಡು ಆಕೆ ದಾಸರಿಗೆ ಭಿಕ್ಷೆ ನೀಡಿದಳಂತೆ. “ತಾಳಿದವನು ಬಾಳಿಯಾನು” ಎಂಬುದು ಸುಳ್ಳಲ್ಲ.

ನಮ್ಮ ಕನ್ನಡವಾದರೂ ಎಷ್ಟು “ಇಕ್ಕಲಾರದ ಕೈ”ಗಳಿಂದ ಅನ್ನವನ್ನು ಈಸಿಕೊಂಡು ಬೆಳೆದಿದೆಯೊ!

ಈ ಶತಮಾನದ ಆದಿಯಲ್ಲಿ ಶ್ರೀ ಶಾಂತಕವಿಗಳು “ಕನ್ನಡ ದಾಸಯ್ಯ”ನಾಗಿ ಮನೆಮನೆಗೂ ಹೋದರು. “ಬೇಡಲು ಕನ್ನಡ ದಾಸಯ್ಯ ಬಂದಿಹ, ನೀಡಿರಮ್ಮಾ ತಡ ಮಾಡದಲೆ” ಎಂದರು. “ಕನ್ನಡ ದೇಶದೆ ದೊಡ್ಡವರಾದಿರಿ, ಕನ್ನಡ ವಿದ್ಯೆಯ ಗಳಿಸಿದಿರಿ. ಕನ್ನಡದಿಂದಲೆ ಸಿರಿವಂತರಾದಿರಿ, ಕನ್ನಡ ದೇಶದೆ ಹೆಸರಾದಿರಿ, ನೀಡಿರಮ್ಮಾ!” ಎಂದರು. “ಹೊಟ್ಟೆಗಿಲ್ಲದೆ ಬಂದ ದಾಸಯ್ಯ ಇವನಲ್ಲ, ಕೊಟ್ಟುದ ಬಿಟ್ಟು ಹೋಗುವನಲ್ಲವು. ಕೊಟ್ಟರೆ ಹಿಗ್ಗುವ, ಕೊಡದಿರೆ ಕುಗ್ಗುವ, ಕೆಟ್ಟಮನದ ಗುರುತು ಇವಗಿಲ್ಲವು. ಕಾಸಿಗಲ್ಲವು ನಿಮ್ಮ ಸೋಸಿಗೆ (ವಿಶ್ವಾಸಕ್ಕೆ) ಬೆಲೆಯಿದೆ, ನೀಡಿರಮ್ಮಾ!” ಎಂದರು.

ಶಾಂತಕವಿಗಳಂಥ ಕನ್ನಡ ದಾಸಯ್ಯಗಳಿಂದ ಎಷ್ಟೋ ಇಕ್ಕಲಾರದ ಕೈಗಳಿಗೆ ಔದಾರ್ಯ ಬಂತು.

ದಾಸರ ಮಾರ್ಗ ದೊಡ್ಡ ಮಾರ್ಗ.

‍ಲೇಖಕರು avadhi

1 November, 2007

3 Comments

  1. brahmanand

    ನೀವು ಹೇಳಿರುವ ವಿಷಯ ಮಾಲಿಕೆ ಹಾಗೂ ನಿರೂಪಣಾ ಶೈಲಿ ಮೆಚ್ಚುಗೆಯಾಗಿದೆ.

    ಧನ್ಯವಾದಗಳೊಂದಿಗೆ
    ಬ್ರಹ್ಮಾನಂದ.ಎಚ್.ಎನ್

  2. jeevadani

    bahala chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading