ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡತನ ಮತ್ತು ಕಾಸರವಳ್ಳಿ : ಜಿ ಶಿವಶಂಕರ್

 

~ ಶಿವಶಂಕರ್ ಜಿ

ಬೆಂಗಳೂರಿನ ಹೊರವಲಯದಲ್ಲಿ ಒಮ್ಮೆ ಗಿರೀಶ್ ಕಾಸರವಳ್ಳಿ ಅವರ ‘ಗುಲಾಬಿ ಟಾಕೀಸ್’
ಚಿತ್ರದ ಪ್ರದರ್ಶನ ಮತ್ತು ಸಂವಾದವಿತ್ತು.
ನಾನು ಮತ್ತು ನನ್ನೊಂದಿಗಿದ್ದ ಗೆಳೆಯನ ಹೊರತಾಗಿ ಆಯೋಜಕರು ಮತ್ತು ವೀಕ್ಷಕರೆಲ್ಲ
ಕನ್ನಡೇತರರೇ ಆಗಿದ್ದ ಅಲ್ಲಿ, ಚಿತ್ರ ವೀಕ್ಷಣೆಯ ನಂತರದ ಸಂವಾದದಲ್ಲಿ ಒಬ್ಬರು
ಕಾಸರವಳ್ಳಿಯವರನ್ನು
ಕೇಳಿದರು :
‘ಸರ್, ಇಷ್ಟು ಅದ್ಭುತವಾದ ಒಳನೋಟಗಳುಳ್ಳ ನೀವು ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಸಿನಿಮಾ
ಮಾಡಿದರೆ ಹೆಚ್ಚು ಜನರನ್ನು ತಲುಪಬಹುದಲ್ಲವೇ ?’

ಅದಕ್ಕೆ ಕಾಸರವಳ್ಳಿಯವರು ಪ್ರತಿಕ್ರಿಯಿಸಿದ್ದು ಹೀಗೆ ;
“ಹೌದು ನೀವು ಹೇಳಿದ ಭಾಷೆಗಳಲ್ಲಿ ನಾನು ಸಿನಿಮಾ ಮಾಡಿದರೆ ಹೆಚ್ಚು ಜನರನ್ನು
ತಲುಪಬಹುದು, ಹೆಚ್ಚು ಹಣವನ್ನೂ ಗಳಿಸಬಹುದು
ಆದರೆ ನಿಮಗೊಂದು ವಿಷಯ ಗೊತ್ತೇ? ಜಗತ್ತಿನ ಯಾವ ಭಾಷೆಯ best sellerಗಳ ಪಟ್ಟಿಯಲ್ಲೂ
classic ಕೃತಿಗಳು ಇರುವ ಉದಾಹರಣೆಯಿಲ್ಲ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳಾಗಲಿ,
ರಾವ್ ಬಹದ್ದೂರರ ಗ್ರಾಮಾಯಣವಾಗಲಿ ಬೆಸ್ಟ್ ಸೆಲ್ಲರ್ ಗಳಾಗಿಲ್ಲ.
ಇದಕ್ಕೆ ಸಿನಿಮಾ ಕೂಡ ಹೊರತಲ್ಲ. ಕನ್ನಡ ಎಂದರೆ ಒಂದು ವಿಶಿಷ್ಟ ಸಂಸ್ಕೃತಿಯ
ಅಭಿವ್ಯಕ್ತಿ. ಕನ್ನಡವನ್ನು ಬಿಟ್ಟುಕೊಡುವುದೆಂದರೆ ಒಂದು ಸಂಸ್ಕೃತಿಯನ್ನೇ
ಬಿಟ್ಟುಕೊಟ್ಟಂತೆ. ಕರ್ನಾಟಕದ ಒಂದೊಂದು ಪ್ರದೇಶದಲ್ಲೂ ಕನ್ನಡ ಭಾಷೆಯ ಒಂದೊಂದು ವಿಶೇಷ
ಶೈಲಿಯಿದೆ. ಮತ್ತು
ಈ ಸೂಕ್ಷ್ಮಗಳನ್ನೆಲ್ಲ ಬೇರೊಂದು ಭಾಷೆಯಲ್ಲಿ ಕಟ್ಟಿಕೊಡಲು ಸಾಧ್ಯವೇ ಇಲ್ಲ.
ಹೀಗಿರುವಾಗ ಕನ್ನಡದಲ್ಲಷ್ಟೇ ಮಾಡಲು ಸಾಧ್ಯವಿರುವ
ಚಿತ್ರಗಳನ್ನು ಬೇರೆ ಭಾಷೆಯಲ್ಲಿ ಹೇಗೆ ಬಿಂಬಿಸಲಾದೀತು?
ಅಥವಾ ನಾನು ಇದನ್ನೆಲ್ಲಾ ಬಿಟ್ಟು ಜನಪ್ರಿಯತೆಗಾಗಿ, ಹಣಕ್ಕಾಗಿ ಬೇರೆ ಭಾಷೆಯಲ್ಲಿ
ಸಿನೆಮಾ ಮಾಡಲು ನಿಂತರೆ
ನನ್ನ ಭಾಷೆಯ ನನ್ನ ಸಂಸ್ಕೃತಿಯ ಚಿತ್ರಣವನ್ನು ಜಗತ್ತಿಗೆ ತಲುಪಿಸುವವರಾರು?”
ಕೇಳಿದವರು ಮರುಮಾತಿಲ್ಲದಾದರು.
ಅಂದು ಕಾಸರವಳ್ಳಿಯವರು ಆಡಿದ ಮಾತುಗಳು ಎಲ್ಲೂ ವರದಿಯಾಗಲಿಲ್ಲ, ಕಾರಣ
ಅಲ್ಲಿ ಯಾವ ಸುದ್ದಿ ಮಾಧ್ಯಮದವರೂ ಇರಲಿಲ್ಲ. ಮತ್ತೆ ಯಾರನ್ನಾದರೂ ಓಲೈಸುವುದು
ಕಾಸರವಳ್ಳಿಯವರ ಜಾಯಮಾನವೂ ಅಲ್ಲ.
ಇಂದಿಗೂ ಜಾಗತಿಕ ಮಟ್ಟದಲ್ಲಿ ಕನ್ನಡದ ಪತಾಕೆಯನ್ನು ಎತ್ತಿ ಹಿಡಿದಿರುವವರು ಗಿರೀಶ್
ಕಾಸರವಳ್ಳಿಯವರು ಮಾತ್ರವೇ.
ಹಣೆಯಲ್ಲಿ ತಿಲಕವಿಡದೆ, ಕೈಯಲ್ಲಿ ಬಾವುಟ ಹಿಡಿಯದೆ, ಸದ್ದಿಲ್ಲದೆ ನುಡಿಯ ಸೇವೆ
ಮಾಡುವುದೆಂದರೆ ಇದಲ್ಲವೇ?
ಇದಲ್ಲವೇ ಕನ್ನಡತನ ?!!
 

‍ಲೇಖಕರು G

2 August, 2015

2 Comments

  1. Venkataswamy

    ತಾಯಿನೆಲದ ಘಮವಿಲ್ಲದ ಕಲಾಕೃತಿಗಳು ಕೊರಡಾಗಿರುತ್ತವೆ.
    ಗಿರೀಶರ ಚಿತ್ರಗಳಲ್ಲಿ ಕನ್ನಡದ ಘಮವಿದೆ.

  2. Raj

    This is the kind of commitment one should have towards their mother-language & mother-land. No show offs, but a silent and solid belief.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading