ವಿದ್ವಾಂಸ ಎಂ.ಎಂ.ಕಲಬುರ್ಗಿ ಹತ್ಯೆ ನಡೆದು ಎರಡು ವಾರಗಳು ಕಳೆದಿವೆ. ಈ ಹತ್ಯೆ ಕರ್ನಾಟಕದ ಜನತೆಯನ್ನು ತಲ್ಲಣಗೊಳಿಸಿದೆ. ನೇರ ಹಣೆಗೆ ಗುಂಡಿಕ್ಕಿ ಹಾಡು ಹಗಲೇ ಕೊಲೆಮಾಡಿದ ಹಂತಕರು ಯಾರ ಕೈಗೂ ಸಿಕ್ಕದೆ ಪರಾರಿಯಾಗಿದ್ದಾರೆ. ಸರ್ಕಾರ, ಕಾನೂನು, ಆಡಳಿತಯಂತ್ರ ಯಾವ ಬಾಹುಗಳಿಗೂ ಸಿಕ್ಕದಂತೆ ಈ ಹಂತಕರು ಸುರಕ್ಷಿತವಾಗಿರುವಂತೆ ಕಾಣಿಸುತ್ತಿದೆ. ಈ ಎಲ್ಲ ಸಂಗತಿಗಳು ನಾವು ಪ್ರಜಾಪ್ರಭುತ್ವದೊಂದಿಗೆ ಈ ಆರೇಳು ದಶಕಗಳಲ್ಲಿ ನಡೆಸಿದ ಪ್ರಯೋಗಗಳ ಬಗ್ಗೆ ಮೌನವಾಗಿಯೇ ಮಾತನಾಡುತ್ತಿವೆ. ಪ್ರಜಾಪ್ರಭುತ್ವ ಎನ್ನುವುದು ಒಂದು ಮೌಲ್ಯವಾಗಿ ಉಳಿಯದೆ ಕೇವಲ ತೋರುಗಾಣಿಕೆಯ ಆಡಳಿತ ವ್ಯವಸ್ಥೆಯಾಗಿ ಉಳಿದಿರುವುದು ಒಳ್ಳೆಯ ಸೂಚನೆಯಲ್ಲ. ಗಾಂಧಿ ಮಾದರಿಯನ್ನು ಬಿಟ್ಟುಕೊಟ್ಟ ನಾವು ನೆಹರೂ ಮಾದರಿಗೆ ಅಂಟಿಕೊಂಡು, ಅಮೆರಿಕ ಮಾದರಿಗೆ ಕನಸಿದ್ದರ ದುರಂತವನ್ನೂ ಈ ಬೆಳವಣಿಗೆಗಳು ಹೇಳುತ್ತಿವೆ. ಪ್ರಜಾಪ್ರಭುತ್ವ ಎನ್ನುವುದು ಮನುಷ್ಯ ನೆಮ್ಮದಿಯಿಂದ, ಸ್ವತಂತ್ರವಾಗಿ ಬದುಕುವ ವ್ಯವಸ್ಥೆ.
ತಿಳಿವಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತ, ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತ, ಪ್ರಜಾಪ್ರಭುತ್ವವನ್ನು ಬಲಪಡಿಸಿಕೊಳ್ಳುತ್ತ ಮುನ್ನಡೆಯಬೇಕಾದ ಮಹತ್ವದ ಸವಾಲನ್ನು ಎದುರಿಸಿಯೂ ನಾವು ಇವತ್ತಿಗೂ ಈ ದಿಕ್ಕಿನಲ್ಲಿ ಬಹಳ ದೂರ ಸಾಗಿಲ್ಲ ಎಂಬುದನ್ನು ದಾಬೋಲ್ಕರ್, ಕಲಬುರ್ಗಿ ಮುಂತಾದವರ ಹತ್ಯೆಗಳು ಹೇಳುತ್ತಿವೆ.
ಪ್ರಜಾಪ್ರಭುತ್ವ ಎನ್ನುವುದು 125 ಕೋಟಿ ಭಾರತೀಯರ ಬದುಕಿಗೆ ಸಂಬಂಧಿಸಿದ ವ್ಯವಸ್ಥೆ. ಇದು ಕೇವಲ ಅರ್ಥಿಕ ಸ್ಥಿತಿಗತಿಯ ಪ್ರಶ್ನೆಯ ಸುತ್ತ ತಿರುಗುವ, ತಲಾವಾರು ಆದಾಯವನ್ನು ತೋರಿಸಿ ಹೆಮ್ಮೆಪಡುವ ಸಂಗತಿ ಮಾತ್ರವಲ್ಲ. ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗಳನ್ನು ಪ್ರಪಂಚದ ಮುಂದೆ ಮಂಡಿಸಿ ತಲೆ ಎತ್ತಿ ಹುಸಿ ಹೆಮ್ಮೆಯನ್ನು ಪ್ರದರ್ಶಿಸುವ ಸಂಗತಿಯೂ ಅಲ್ಲ. ವಿಜ್ಞಾನ, ತಂತ್ರಜ್ಞಾನ, ತಲಾವಾರು ಆದಾಯ ಮುಖ್ಯವಾದರೂ, ಇವುಗಳ ಆಚೆಗೆ ಮನುಷ್ಯ ಸಂಬಂಧಗಳಿವೆ; ಮಾನವ ಪ್ರೀತಿ ಇದೆ. ಮೌಲ್ಯಗಳಿವೆ. ಸಾಮಾನ್ಯ ಎಂದು ಉಡಾಫೆಯಲ್ಲಿ ನೋಡುವ ‘ಸಾಮಾನ್ಯ ವ್ಯಕ್ತಿ’ಯೂ ಈ ವ್ಯವಸ್ಥೆಯಲ್ಲಿ ಧೈರ್ಯದಿಂದ, ನೆಮ್ಮದಿಯಿಂದ ಬದುಕಬೇಕಾಗಿದೆ. ಯಾವುದು ಸರಿ, ಯಾವುದು ಅಷ್ಟೊಂದು ಸಮರ್ಪಕವಲ್ಲ, ಯಾವುದು ಸತ್ಯ, ಯಾವುದು ಪೊಳ್ಳು ಇತ್ಯಾದಿ ಹಲವು ಸಂಗತಿಗಳನ್ನು ವಿದ್ವಾಂಸನೊಬ್ಬ ತಾನು ಕಂಡುಕೊಂಡ ಸತ್ಯದ ಬೆಳಕಿನಲ್ಲಿ ಹೇಳುವ, ಮುಕ್ತವಾಗಿ ಚರ್ಚಿಸುವ ಮತ್ತು ಆ ಮೂಲಕ ‘ಸತ್ಯ’ದ ಹಾದಿಯಲ್ಲಿ ಹೆಜ್ಜೆ ಹಾಕುವ ವಾತಾವರಣ ಇದ್ದದ್ದೇ ಆದರೆ ಅದು ಪ್ರಜಾಪ್ರಭುತ್ವ ರಾಷ್ಟ್ರದ ಲಕ್ಷಣವಾಗುತ್ತದೆ. ಇಲ್ಲವಾದರೆ ಹಿಟ್ಲರ್ ಮನೋಭಾವಕ್ಕೆ, ಮೂಲಭೂತವಾದಕ್ಕೆ ಕುಮ್ಮಕ್ಕು ಸಿಕ್ಕು ಪ್ರಜಾಪ್ರಭುತ್ವ ಎನ್ನುವುದು ಕೇವಲ ಕನಸಾಗುತ್ತದೆ.
ಮಾರ್ಟಿನ್ ಲೂಥರ್ ಕಿಂಗ್, ‘ನನಗೊಂದು ಕನಸಿದೆ’ ಎಂದು ಹೇಳಿದ. ಇದೇನೂ ಬಹಳ ದೊಡ್ಡ ಕನಸಲ್ಲ. ಆದರೆ ಆಗಿನ ಅಮೆರಿಕ ಸಂದರ್ಭದಲ್ಲಿ ಬಹುದೊಡ್ಡ ಕನಸು; ಮನುಷ್ಯರನ್ನೆಲ್ಲ ಒಂದಾಗಿ ಬೆಸೆಯುವ ಕನಸು; ಬಣ್ಣಗಳ ಆಚೆ ಮನುಷ್ಯ ಮನುಷ್ಯನನ್ನು ಮುಟ್ಟುವ, ಪ್ರೀತಿಸುವ, ಸೋದರ ಸೋದರಿಯರಾಗಿ ಬದುಕುವ, ಸಮಾನ ಹಕ್ಕುಗಳನ್ನು ಪಡೆಯುವ, ಮಾನವ ಸಂಬಂಧಗಳ ಮೇಲೆ ಒಂದು ರಾಷ್ಟ್ರವನ್ನು, ಸಮಾಜವನ್ನು ಕಟ್ಟುವ ಮುನ್ನಡೆಸುವ ಕನಸು. ಈ ಕನಸು ಕರಿಯರಲ್ಲಿ ಪ್ರಚಂಡ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಿದರೆ, ಬಿಳಿಯರಲ್ಲಿ ತಮ್ಮ ತಪ್ಪಿನ ಅರಿವನ್ನು ತಂದುಕೊಟ್ಟಿತು. ಕರಿಯರು, ಬಿಳಿಯರು ಎಲ್ಲರಿಗೂ ಸೇರಿದ್ದು ಅಮೆರಿಕ; ಎಲ್ಲರೂ ಕೂಡಿ ಕಟ್ಟಬೇಕಾದದ್ದು ರಾಷ್ಟ್ರ; ಎಲ್ಲರ ಸಹಬಾಳ್ವೆಯಲ್ಲಿ ಮುನ್ನಡೆಯಬೇಕಾದದ್ದು ಈ ಸಮಾಜ-ಇದು ಕಿಂಗ್ ಕಂಡ ಬಹುದೊಡ್ಡ ಕನಸು. ಇದು ಮೂರ್ಖರಿಗೆ ಅರ್ಥವಾಗದ ಕನಸು. ಒಬ್ಬ ಮೂರ್ಖ ಈ ಕನಸಿಗೇ ಗುಂಡಿಟ್ಟಂತೆ ಮಾರ್ಟಿನ್ ಲೂಥರ್ ಕಿಂಗ್ಗೆ ಗುಂಡಿಟ್ಟ. ನಿಜ, ಮಾರ್ಟಿನ್ ಉಳಿಯಲಿಲ್ಲ. ಆದರೆ ಆತ ಕಟ್ಟಿದ ಕನಸು ಉಳಿಯಿತು; ಅಮೆರಿಕ ಉಳಿಯಿತು. ಅಲ್ಲಿ ಮನುಷ್ಯರು ಬಣ್ಣಗಳನ್ನು ಮೀರಿ ಹೃದಯಗಳನ್ನು ಕಂಡುಕೊಂಡರು.
ಈ ಹತ್ಯೆ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ. ಮಾಟರ್ಿನ್ ಲೂಥರ್ ಕಿಂಗ್ಗಿಂತ ಮೊದಲು ಅಬ್ರಾಹಂ ಲಿಂಕನ್ ಇಂಥದೇ ಕನಸು ಕಂಡಿದ್ದ. ಅಮೆರಿಕದ ಅಧ್ಯಕ್ಷನಾಗಿ ಗುಲಾಮಗಿರಿಯನ್ನು ಆತ ಕೊನೆಗಾಣಿಸಿದ. ಯಜಮಾನ-ಗುಲಾಮ ಸಂಸ್ಕೃತಿ ಕಾರಣವಾಗಿ ಒಡೆದು ತುಂಡಾಗಬೇಕಾಗಿದ್ದ ಅಮೆರಿಕ ಒಂದಾಗಿ ಉಳಿಯಿತು. ಸಮಾನಹಕ್ಕುಗಳು, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಈ ಮೌಲ್ಯಗಳ ಮೇಲೆ ತನ್ನ ರಾಷ್ಟ್ರವನ್ನು, ಜನರನ್ನು, ಸಮಾಜವನ್ನು ಕಟ್ಟಬೇಕೆಂದು ಲಿಂಕನ್ ಕಂಡ ಕನಸು ಆತನನ್ನು ಬಲಿತೆಗೆದುಕೊಂಡಿತು. ಅಮೆರಿಕದಂಥ ‘ಮುಂದುವರಿದ’ ರಾಷ್ಟ್ರದಲ್ಲಿ ಎಂಥ ಕನಸುಗಾರನನ್ನೂ ಕೊಲ್ಲಲು ಹೆಚ್ಚು ಗುಂಡುಗಳು ಬೇಕಾಗುವುದಿಲ್ಲ. ಒಂದೇ ಒಂದು ಗುಂಡು ಸಾಕಾಗುತ್ತದೆ. ಆದರೆ ಲಿಂಕನ್ ಕನಸು ಅಲ್ಲಿಗೇ ಕೊನೆಗೊಳ್ಳಲಿಲ್ಲ. ಮಾರ್ಟಿನ್ ಲೂಥರ್ನಲ್ಲಿ ಮತ್ತೆ ಆ ಕನಸು ಚಿಗುರೊಡೆಯಿತು. ಇದು ಮನುಕುಲದ ಶಕ್ತಿ. ಎಷ್ಟು ಗುಂಡುಗಳೂ ಈ ಶಕ್ತಿಯನ್ನು ಕೊನೆಗೊಣಿಸಲಾರವು.
ನಮ್ಮ ಗಾಂಧೀಜಿಯನ್ನೇ ನೋಡಿ. ಅವರ ಹೃದಯವನ್ನು ಭೇದಿಸಿದ್ದು ಒಂದೇ ಗುಂಡು. ಆದರೆ ಗಾಂಧೀಜಿಯ ಕನಸುಗಳು ಕೊನೆಗೊಂಡವೇ. ಗಾಂಧೀಜಿಯ ಕನಸು, ‘ಸತ್ಯ ಶಿವ ಸುಂದರ’ದ ಕನಸು. ಹಿಂದೂ ಮುಸ್ಲಿಮರೆನ್ನದೆ, ಬೌದ್ಧ, ಶಿಖ್ಖರೆನ್ನದೆ ಎಲ್ಲ ಭಾರತೀಯರೂ ಒಂದು ರಾಷ್ಟ್ರದ ಅಡಿಯಲ್ಲಿ ನೆಮ್ಮದಿಯಲ್ಲಿ ಬದುಕಬೇಕೆಂದು ಕಂಡ ಕನಸು ಅದು. ಆ ಕನಸು ಎಂಥದಾಗಿತ್ತು ಎಂದು ನೋಡುವಷ್ಟೂ ಸಹನೆ ಇಲ್ಲದಂಥ ಬಾಳನ್ನು ಕಟ್ಟಿಕೊಂಡಿರುವ ಈ ರಾಷ್ಟ್ರ, ಇನ್ನೆಷ್ಟು ಗುಂಡುಗಳನ್ನು, ಹತ್ಯೆಗಳನ್ನು ಅಪೇಕ್ಷಿಸುತ್ತದೆ? ಯಾವ ಕನಸೂ ಎಲ್ಲಿಯೂ ಮುಗಿಯುವುದಿಲ್ಲ. ಎಳೆಯ ಜೀವಗಳು ಕನಸನ್ನು ಕಾಣುತ್ತಲೇ ಇರುತ್ತವೆ. ಕನಸು ಒಂದು ರಾಷ್ಟ್ರವನ್ನು ಕಟ್ಟಲು, ಒಂದು ಸಮಾಜವನ್ನು ಕಟ್ಟಲು ಅತ್ಯಗತ್ಯ.
ಯಾವ ಹತ್ಯೆಯೂ ಸರಳವಾಗಿರುವುದಿಲ್ಲ. ಇಡೀ ಜಗತ್ತನ್ನು ನಡುಗಿಸಿದ ಅಮೆರಿಕದ ಅಧ್ಯಕ್ಷ ಜಾನ್ ಎಫ್.ಕೆನಡಿಯ ಹತ್ಯೆ ನಡೆದು (1963 ನವೆಂಬರ್ 22) ಅರ್ಧ ಶತಮಾನ ಕಳೆದುಹೋಗಿದೆ. ಈ ಹತ್ಯೆಯ ವಿಚಾರಣೆ ನಡೆಸಿದ ವಾರ್ನರ್ ಆಯೋಗದ ತೀರ್ಪು ಕೂಡಾ ಹೊರಬಿದ್ದಿದೆ. ಆರನೇ ಮಹಡಿಯಲ್ಲಿ ಕುಳಿತು ಕೆನಡಿಗೆ ಗುಂಡಿಟ್ಟನೆಂದು ಲೀ ಹಾವರ್ೆ ಓಸ್ವಾಲ್ಡ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಈ ಆಯೋಗ ಕೈತೊಳೆದುಕೊಂಡಿತು. ಇಷ್ಟಾದರೂ ಕೆನಡಿಯ ಹತ್ಯೆಗೆ ಸಂಬಂಧಿಸಿದ ದಾಖಲೆಗಳನ್ನು ಅಮೆರಿಕದಂಥ ಮುಕ್ತ ರಾಷ್ಟ್ರದಲ್ಲಿಯೂ ಮುಕ್ತವಾಗಿ ನೋಡುವ ಅವಕಾಶ ಇವತ್ತಿಗೂ ಇಲ್ಲ. ಈಗ ಇನ್ನಷ್ಟು ಸತ್ಯಗಳು ಹೊರಬೀಳುತ್ತಲೇ ಇವೆ. ಹಲವಾರು ವ್ಯಕ್ತಿಗಳ ವಿಚಾರಣೆಯನ್ನು ನಡೆಸಿದ ಈ ಆಯೋಗ ಅಬ್ರಾಹಂ ಜಾಪ್ರೂಡರ್ನನ್ನು ( ಈತ ಕೆನಡಿಗೆ ಗುಂಡುಬಿದ್ದಾಗ ಹತ್ತಿರದಲ್ಲಿಯೇ ನಿಂತು ಚಿತ್ರೀಕರಿಸಿಕೊಳ್ಳುತ್ತಿದ್ದ) ವಿಚಾರಣೆಗೆ ಗುರಿಪಡಿಸಲೇ ಇಲ್ಲ ಎಂಬ ಕೌತುಕದ ಸಂಗತಿ ಹೊರಬಿದ್ದಿದೆ. ಅಮೆರಿಕದ ಬೇಹುಗಾರಿಕಾ ಸಂಸ್ಥೆ-ಸಿಐಎ-ಈ ಕೊಲೆಯ ಹಿಂದೆ ಕ್ರಿಯಾಶೀಲವಾಗಿತ್ತು ಎಂಬ ಸತ್ಯವೂ ಈಗ ಬಹಿರಂಗಗೊಂಡಿದೆ. ಆಯೋಗ ತೋರಿಸಿದ ಓಸ್ವಾಲ್ಡ್ ಅಲ್ಲದೆ ಸುಮಾರು 74ಜನ ಈ ಹತ್ಯೆಯ ಹಿಂದಿದ್ದರು, ಕೆನಡಿಯ ಬಲಗೈ ಎಂದು ಬಿಂಬಿಸುತ್ತಿದ್ದ ಅಮೆರಿಕದ ಉಪಾಧ್ಯಕ್ಷನೂ ಈ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ; ಈ ಹತ್ಯೆಯ ಚೂರು ಪಾರು ಸತ್ಯ ತಮಗೆ ತಿಳಿದಿದೆ ಎಂದು ಹೇಳಿದವರೆಲ್ಲ ಮರುದಿನವೇ ‘ಇಲ್ಲವಾಗಿರುವ’ ವಾಸ್ತವವೂ ಅಮೆರಿಕದ ಒಡಲಲ್ಲಿ ಇನ್ನೂ ಜೀವಂತವಾಗಿದೆ.
ಕೆನಡಿಯನ್ನು ಕೊಲ್ಲಲು ಅನೇಕರಿಗೆ ಅನೇಕ ಕಾರಣಗಳಿದ್ದವು. ವಿಯೆಟ್ನಾಂ ಯುದ್ಧವನ್ನು ನಿಲ್ಲಿಸುತ್ತೇನೆ, 1965ರ ಹೊತ್ತಿಗೆ ಅಲ್ಲಿಂದ ಅಮೆರಿಕನ್ ಸೇನೆಯನ್ನು ವಾಪಸ್ಸು ಕರೆಸಿಕೊಳ್ಳುತ್ತೇನೆ ಎಂದು ಕೆನಡಿ ಬಹಿರಂಗವಾಗಿ ಸಾರಿದ್ದರು. ಅಮೆರಿಕದ ಅಧ್ಯಕ್ಷರ ಅನುಮತಿಯನ್ನೂ ಪಡೆಯದೆ ಸಿಐಎ ವಿಯೆಟ್ನಾಂನಲ್ಲಿ ಯುದ್ಧ ನಡೆಸುತ್ತಿದೆ; ಈ ಸಿಐಎ ಸಂಸ್ಥೆಯನ್ನು ಸಹಸ್ರ ಚೂರು ಮಾಡಿ ಅದನ್ನು ಇಲ್ಲವಾಗಿಸುತ್ತೇನೆ ಎಂದು ಕೆನಡಿ ಹೇಳಿದ್ದರು. ಕ್ಯಾಸ್ಟ್ರೋವನ್ನು ಮುಗಿಸಬೇಕೇಂದು ಕಾಯುತ್ತಿದ್ದ ಕ್ಯಾಸ್ಟ್ರೊ ವಿರೋಧಿ ಕ್ಯೂಬನ್ನರ ಒಂದು ಸಣ್ಣ ಗುಂಪು ಅಮೆರಿಕದಲ್ಲಿ ನೆಲೆನಿಂತು, ಸಿಐಎ ಜೊತೆಗೆ ಕೈಜೋಡಿಸಿತ್ತು. ಯುದ್ಧ ನಡೆದರೆ ತಮ್ಮ ಶಸ್ತ್ರಾಸ್ತ್ರಗಳಿಗೆ ಮಾರುಕಟ್ಟೆ ಎಂದುಕೊಂಡಿದ್ದ ವ್ಯಾಪಾರಿಗಳು ಅಮೆರಿಕದ ಆಯಕಟ್ಟಿನ ಜಾಗದಲ್ಲಿದ್ದರು. ಅಮೆರಿಕದ ಜನತೆ ಡ್ರಗ್ ಮಾರುತ್ತಿದ್ದ ಕಳ್ಳಸಾಗಣೆದಾರರಿದ್ದರು. ಇವರಿಗೆಲ್ಲ ಕೆನಡಿ ದೊಡ್ಡ ತಲೆನೋವಾಗಿದ್ದರು. ಕೆನಡಿಯನ್ನು ಕೊಲ್ಲಲು ಇವರು ಸಂಚುಗಳನ್ನು ಹೂಡುತ್ತಲೇ ಇದ್ದರು.
ಒಂದು ಸಮಾಜವನ್ನು ಮುನ್ನಡೆಸಬೇಕಾದವರು, ಒಂದು ರಾಷ್ಟ್ರವನ್ನು ಕಟ್ಟಬೇಕಾದವರು ಇತಿಹಾಸದಿಂದ ಪಾಠಗಳನ್ನು ಕಲಿಯಬೇಕು. ಅಕ್ಷರದ ಜೊತೆಗೆ ವೈಚಾರಿಕತೆ, ಅನ್ನದ ಜೊತೆಗೆ ಮಾನವ ಸಂಬಂಧಗಳು, ಆಡಳಿತದ ಜೊತೆ ಸೇರಿಕೊಳ್ಳಲು ಹವಣಿಸುವ ದುಷ್ಟಶಕ್ತಿಗಳ ನಿಗ್ರಹ ಇವೆಲ್ಲ ಅತ್ಯಗತ್ಯ. ಇದನ್ನು ಸರಿಯಾಗಿ ಗುರುತಿಸಿಕೊಂಡ ರಾಷ್ಟ್ರ ಬಾಳುತ್ತದೆ; ಬೆಳೆಯುತ್ತದೆ. ಇಲ್ಲವಾದರೆ ಯಾರು ಯಾರನ್ನೊ ಮುಗಿಸುತ್ತಾರೆ; ಸಮಾಜವನ್ನು, ರಾಷ್ಟ್ರವನ್ನು ಮುಗಿಸುತ್ತಾರೆ.
ಸೌಜನ್ಯ : ಸಂಯುಕ್ತ ಕರ್ನಾಟಕ







Will all these great thinkers wait until the investigation is over and the killers found? Why is everyone making assumptions and trying to make everyone believe their theories??? Sounds like people from Kesaruru of Chidambara rahasya.