ನಾಗರಾಜ ಹರಪನಹಳ್ಳಿ
**
ಸಮುದ್ರ
ಮೊದಲ ಸ್ನಾನ ಮಾಡಿದೆ
ಥೇಟ್ ನೀ ಮಿಂದು ಬಂದ ಕ್ಷಣದ ಹಾಗೆ
ಇಡೀ ನಗರ ನಿನ್ನೆ ಮೊದಲ ಮಳೆಗೆ ಮಿಂದೆದ್ದಿತು;
ಈಗ
ತೊಳೆದಿಟ್ಟ ಹಣ್ಣಿನಂತೆ ಹೊಳೆಯುತ್ತಿದೆ
ಬಿಸಿಲ ಬೇಗೆ ಝಳಕ್ಕೆ
ಭೂಮಿ ಬಿಟ್ಟ ನಿಟ್ಟುಸಿರು
ಬೆವರ ಸ್ನಾನ ಮಾಡಿತು;
ಇನ್ನು ತಡೆಯಲಾಗದು ಎಂದ ಘಳಿಗೆ
ಕಾದು ಕಾದು ಬಯಸಿದ್ದ ಮಳೆ
ಅಂತೂ ಬಂತು
ಕಡಲು ಮುಗಿಲು ಒಂದಾದ ಹಾಗೆ
ಇಳೆಯಲ್ಲಾ ಮಕ್ಕಳ ಕೇಕೆ ತುಂಬಿ ಹೋಗಿದೆ
ಮಳೆಯ ಮಿಂದು
ನೀ ಹೊಸ ಸೀರೆಯುಟ್ಟು
ನವ ಉಲ್ಲಾಸದಿ ನಡೆದು ಬಂದೆ;
ಭೂಮಿ ತೃಪ್ತಿಯಿಂದ ಪುಟಿದ್ದೆದ್ದ ಹಾಗೆ
ಚೈತನ್ಯ ಹಸಿರಾಗಿ ಸೆರಗು ಹೊದ್ದು ಮಲಗಿರಲು;
ಕನಸುಗಳು ಮೆರವಣಿಗೆ ಹೊರಟಿವೆ
ದಂಡೆಯಲ್ಲಿ ಕೈ ಕೈ ಹಿಡಿದು ನಡೆದ ಪ್ರೇಮಿಗಳಂತೆ
ಮುಂಗಾರು ಕುಣಿಯುತ್ತಿದೆ
ಕಡಲು ಅಬ್ಬರಿಸುತ್ತಿದೆ
ನದಿ ವೈಯಾರದಿ ಮುಗುಳ್ನಗುತ್ತಿದೆ
ದಂಡೆ ತುಂಬಾ ಮಳೆಯ ಚಿತ್ರ ಹೊದ್ದಿದೆ






0 Comments