“ಕತ್ಲ ಕಿ ರಾತ್” ಕಿ ಬಾತ್ ಭಯ್ಯಾ 

ಲಕ್ಷ್ಮಣ್ ವಿ ಎ

ಕವಿತೆಗಳಿಗಿದು ಕಾಲವಲ್ಲ ಎಂಬುದು ಕನ್ನಡ ಸಾಹಿತಿಗಳ ಕವಿಗಳ ನಿತ್ಯ ಹಳ ಹಳಿಕೆಯಾಗಿದೆ.

ಕವಿತೆ ಯಾರೂ ಓದುವುದಿಲ್ಲ. ಬರೆಯುವರು ಹೆಚ್ಚಾಗಿದ್ದಾರೆಯೆ ಹೊರತು ಓದುವವರಲ್ಲ ಎಂಬಿತ್ಯಾದಿ ಆಪಾದನೆಗಳ ನಡುವೆಯೇ ಕನ್ನಡ ಸಾಹಿತ್ಯದ ಕೆಲ ಸಾಲುಗಳು ನಮ್ಮ ನಾಯಕರುಗಳ ಬಾಯಿಯಲ್ಲಿ ಕೇಳಿದಾಗ ಕನ್ನಡ ಕವಿತೆಗಳ ಬಗೆಗಿನ ಈ ಹಳಹಳಿಕೆ ದೂರವಾಗುವ ಲಕ್ಷಣಗಳು ಗೋಚರಿಸುತ್ತವೆ.

ಆ ಮಟ್ಟಿಗೆ ಕನ್ನಡ ತಾಯಿ ಈಗ ಜೈ ಭುವನೇಶ್ವರಿ ಪಾವನ.

‘ಕಾಯುವುದಿಲ್ಲ ಕವಿತೆಗೆ ಕವಿಯೊಬ್ಬನಲ್ಲದೆ’ ಅಂತ ಕವಿ ತಿರುಮಲೇಶ ಒಂದು ಕಡೆ ಹೇಳುತ್ತಾರೆ. ಕುರಿತೋದಯಂ ಕಾವ್ಯ ಮತಿ ಪರಿಣಿತರಾದ ಕನ್ನಡ ಜನತೆ ಈ ” ಹುಸಿಗನ್ನಡದ “ಹಿಂದಿನ ಸ್ವಾರ್ಥ ಮಿತಿಯನ್ನೆಲ್ಲ ಅರ್ಥ ಮಾಡಿಕೊಳ್ಳುವಷ್ಟು ದಡ್ಡರೇನಲ್ಲ ಬಿಡಿ.

ಕನ್ನಡದ ವಚನ ,ಕವಿತೆ , ಉಧ್ದರಿಸುವ ನಾಯಕಮಣಿಗಳು ಒಮ್ಮೆ ಕನ್ನಡ ಭಾಷೆಗಾಗುತ್ತಿರುವ ಮಲತಾಯಿ ಧೋರಣೆ, ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಕೊಟ್ಟು ಆ ಫಲಕವನ್ನು ಕೇವಲ ಶೋಕೇಷಿನಲ್ಲಿಟ್ಟು ಅಳುವ ಮಗುವಿನ ಕೈಗೆ ಆಟಿಗೆ ಕೊಟ್ಟಂತೆ ಮೂಗಿಗೆ ತುಪ್ಪ ಸವರಿರುವ ಧೋರಣೆ, ಕೇಂದ್ರ ಸರಕಾರದ ಉದ್ಯೋಗ ನೀಡಿಕೆಯಲ್ಲಿ ಕನ್ನಡಿಗರಗಾಗುತ್ತಿರುವ ನಿರಂತರ ಅನ್ಯಾಯದ ಬಗ್ಗೆ ಮಾತನಾಡಿದ್ದರೆ ಅರ್ಥವಿರುತ್ತಿತ್ತು ಬದಲಾಗಿ ಓಟ್ ಬ್ಯಾಂಕಿನ ಸಲುವಾಗಿ ಅಣ್ಣ ಬಸವಣ್ಣ ಬೇಂದ್ರೆ ಯವರನ್ನು ಬಳಸುತ್ತಿರುವುದೊಂದು ಓಟ್ ಬ್ಯಾಂಕಿನ ಗಿಮಿಕ್ ಅಲ್ಲದೆ ಮತ್ತೇನು ?

ಚುನಾವಣೆಯ ಸಂಧರ್ಭಗಳಲ್ಲಿ ಮತದಾರರನ್ನು ಓಲೈಸಲು ನಾಯಕರು ಸ್ಥಳೀಯ ಮತದಾರರ ಓಟು ಸೆಳೆಯುವ ತಂತ್ರಗಾರಿಕೆಯ ಭಾಗವಾಗಿ ಆಯಾ ಪ್ರಾಂತದ ಭಾಷೆಯೊಂದಿಗೆ ನಮಸ್ಕಾರ ಹೇಳಿ ತಮ್ಮ ಭಾಷಣ ಶುರುವಿಟ್ಟುಕೊಳ್ಳುವ ವಿದ್ಯಮಾನ ಹೊಸದೇನಲ್ಲ ಮತ್ತು ಇಷ್ಟಕ್ಕೆ ನಿಂತಿದ್ದರೆ ತಪ್ಪೇನೂ ಇಲ್ಲ.

ಆದರೆ ಈ ಸಲದ ಕರ್ನಾಟಕದ ಚುನಾವಣೆಯಲ್ಲಿ ಕವಿಗಳ ಮನೆಯನ್ನು ಮತ್ತು ಕನ್ನಡದ ಕವಿತೆಗಳನ್ನೇ ಹೈಜಾಕ್ ಮಾಡುವ ಹೊಸ ಟ್ರೆಂಡಿಗೆ ನಾಂದಿ ಹಾಡಿದ್ದಾರೆ. ನಮ್ಮ ಕವಿಗಳ ಕೈಗಳಲ್ಲಿ ಪಕ್ಷದ ಧ್ವಜ ನೀಡಿ ಸಮಾಜ ಸುಧಾರಕ ರ ಆಯ್ದ ಕವನದ ಸಾಲುಗಳನ್ನು ತಂದು ತಪ್ಪು ತಪ್ಪಾಗಿ ಉಚ್ಚರಿಸಿ ಆಯಾ ಪಕ್ಷಗಳ ವಿರೋಧಿಗಳ ಗೇಲಿಗೆ ಕುಹಕಕ್ಕೆ ಈಡಾಗಿರುವುದು ಇದೆ ಮೊದಲಬಾರಿ ಎನಿಸುತ್ತದೆ.

ರಾಹುಲ್ ಗಾಂಧಿಯವರು ಉದ್ಧರಿಸಿದ ‘ಇವನಾರವ ಇವನಾರವ’ ಎಂಬ ವಚನ ಅಪಭ್ರಂಶ ವಾಗಿ ‘ಇವನರ್ವ ಇವನರ್ವ’ ಆಯಿತು. ಈ ಬಸವಣ್ಣನವರ ವಚನ ಬೆಳಕು ಹರಿಯುದರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಒಂದು ವಾರ ತಿಂಗಳು ಗಟ್ಟಲೆ ಚರ್ಚೆಯಾಗುತ್ತಲೆ ಇದೆ. ಮೊನ್ಮೆ ಮೋದಿಯವರು ಕೂಡ ಬೇಂದ್ರೆಯವರ ‘ಕುರುಡು ಕಾಂಚಾಣ’ ಎಂಬ ಕವಿತೆಯ ಅಪಭ್ರಂಶದ ಟ್ರೋಲಿಂಗ್ ಕೂಡಾ ಚಾಲ್ತಿಯಲ್ಲಿದೆ.

ಮಾನ್ಯ ಸಿ ಎಂ ಇಬ್ರಾಹಿಂ ಕೂಡ ಸ್ನಾತಕೋತ್ತರ ಎನ್ನುವುದರ ಬದಲಿಗೆ ಸ್ನಾನಕೋತ್ತರ ಎಂಬುದನ್ನೇ, ಯಡಿಯೂರಪ್ಪನವರು ಕಾಲಿಗೆ ಕಟ್ಟಿ ಮತ ಕೇಳಿ ಎಂಬ ಮಾತನ್ನೇ ದೊಡ್ಡ ವಿಷಯ ಮಾಡಿ ಇಲಿ ಹೋದರೆ ಹುಲಿಯೇ ಹೋಯ್ತು ಎಂದು ದೊಡ್ಡ ದನಿಯಲ್ಲಿ ಹುಯಿಲೆಬ್ಬಿಸಿ ಎರಡೂ ಪಕ್ಷಗಳ ಬದಿಯಲ್ಲಿ ಸಾಕಷ್ಟು ಕೆಸರೆರಚಾಟ ಸಾಮಾಜಿಕ ಮಾಧ್ಯಮದಲ್ಲಿ ನಿತ್ಯ ಕಣ್ಣಿಗೆ ರಾಚುವ ಸತ್ಯ .

ರಾಷ್ಟ್ರೀಯ ನಾಯಕರಿಗೆ ನಿಜವಾಗಿಯೂ ಕನ್ನಡ ದ ಜನರ ಮೇಲೆ ಪ್ರೀತಿಯಿದ್ದಿದ್ದರೆ ಕನ್ನಡದ ಜ್ವಲಂತ ವಿಷಯಗಳಿದ್ದವು.

ದಶಕಗಳೇ ಕಳೆದರೂ ಕುಡಿಯುವ ನೀರಿನ ವಿಚಾರವಾಗಿ ಬಗೆಹರಿಯದ ಅಥವ ಬಗೆಹರಿಸಲು ಮನಸು ಮಾಡದ ಮಹದಾಯಿ ಸಮಸ್ಯೆ, ಕಳಸಾ ಬಂಡೂರಿ ನೀರಾವರಿ ಯೋಜನೆ, ಪದೆ ಪದೇ ಬರಗಾಲ ಕ್ಕೆ ತುತ್ತಾಗುತ್ತಿರುವ ಉತ್ತರ ಕರ್ನಾಟಕದ ಕಾರ್ಮಿಕರ ನಿರಂತರ ವಲಸೆ, ಮೂಲಭೂತ ಸೌಕರ್ಯಗಳಾದ ರಸ್ತೆ ಕುಡಿಯುವ ನೀರು, ವಿದ್ಯುತ್, ಕಾವೇರಿ ಜಲವಿವಾದ, ಗೋವಾ ಸರಕಾರ ಕನ್ನಡಿಗರನ್ನು ನಿರ್ದಯವಾಗಿ ಗಡೀಪಾರು ಮಾಡುತ್ತಿರುವ ವಿದ್ಯಮಾನ ಹೀಗೆ ಎಷ್ಟೆಲ್ಲ ಪಟ್ಟಿ ಮಾಡಬಹುದು.

ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು ಕೇವಲ ರಾಜಕಾರಣಿಗಳು ಅಪಭ್ರಂಶಗೊಂಡ ವಚನ ಬೇಂದ್ರೆಯವರ ಕುರುಡು ಕಾಂಚಾಣ ಕವಿತೆಯ ಸಾಲುಗಳು. ಅಲ್ಲಿಗೆ ನೈಜ ಸಮಸ್ಯೆ ಗಳು ತೆರೆಮರೆಗೆ ಸರಿದು ನಮ್ಮ ಕೈಗೆ ಕಾಗದದ ಹಾವನ್ನು ಆಡಿಸಲು ಈ ಕನ್ನಡ ಕವಿತೆಗಳ ಅಸ್ತ್ರ ಗಳನ್ನು ಬಳಸಲು ಕೊಟ್ಟರು. ನಾಯಕರುಗಳಿಗೆ ಬೇಕಾಗಿದ್ದೂ ಕೂಡ ಇದೇ ಅಲ್ಲವೆ ? ಜನರ ಗಮನ ಬೇರೆಡೆಗೆ ಸೆಳೆದು ಅಸಲೀ ಸಮಸ್ಯೆಗಳನ್ನು ಮರೆಮಾಚುವ ಕುಟಿಲ ತಂತ್ರೋಪಾಯಗಳು.

ಚುನಾವಣಾ ಪ್ರಚಾರವೆಂಬುದು ಮತದಾರನ ಪಾಲಿಗೆ ತನ್ನ ಕುಂದು ಕೊರತೆಗಳನ್ನು ಹೇಳಲು ಮತ್ತು ಹಿಂದಿನ ಚುನಾವಣೆಯಲ್ಲಿ ಕೊಟ್ಟ ಭರವಸೆಗಳ ಫಲಿತಾಂಶವನ್ನು ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಒಂದು ಸುವರ್ಣ ಅವಕಾಶ. ಈ ಜನಪ್ರತಿನಿಧಿಗಳು ಬಲು ಬುದ್ದಿವಂತರು, ವಿವಾದಾಸ್ಪದವಾಗುವಂತಹ ಒಂದು ಹೇಳಿಕೆ ಕೊಟ್ಟು ಅಥವಾ ಅವಾಚ್ಯವಾಗಿ ಯಾರನ್ನೊ ನಿಂದಿಸಿ, ಅಥವಾ ಇನ್ಯಾವುದೋ ಚಿಲ್ಲರೆ ಗಿಮಿಕ್ ಗಳಿಂದ ಜನರ ಗಮನವನ್ನು ಇನ್ನೆತ್ತಲೊ ತಿರುಗಿಸಿ ತಮ್ಮ ಓಟು ಪಡೆದುಕೊಂಡು ಮತ್ತೆ ಪ್ರತ್ಯಕ್ಷವಾಗುವುದು ಇಂತಹುದೇ ಚುನಾವಣೆಯಲ್ಲಿ.

ಅಲ್ಲಿಂದ ಇಲ್ಲೀಯವರೆಗೆ ಸಾಕಷ್ಟು ಕಾಲ ಸರಿದಿರುತ್ತದೆ.ನಮ್ಮ ರಸ್ತೆಯ ಟಾರು ಕಿತ್ತು ಹೋಗಿರುತ್ತದೆ,ಕುಡಿಯುವ ನೀರಿಗೆ ಪರದಾಡಬೇಕಾಗುತ್ತದೆ.ರೈತ ಬೆಳೆದ ಬೆಳೆಗೆ ಸೂಕ್ತ ಬೆಂಬಲ ಸಿಗದೆ ರೈತ ನ ಆತ್ಮಹತ್ಯೆ ಗಳಾಗಿರುತ್ತವೆ.ಗೆದ್ದ ನಾಯಕ ಮಾತ್ರ ಗೂಟದ ಕಾರಿನಲ್ಲಿ ಓಡಾಡುತ್ತ ಐದು ವರ್ಷಕ್ಕೆ ತನ್ನ ಆದಾಯವನ್ನು ಹತ್ತು ಇಪ್ಪತ್ತು ಪಟ್ಟು ಹೆಚ್ಚಿಸಿಕೊಳ್ಳುತ್ತ ಕುರುಡು ಕಾಂಚಾಣವ ಕುಣಿಯುತ್ತ ಕಾಲಿಗೆ ಬಿದ್ದವರ ತುಳಿಯುತ್ತ ಜನಸಾಮಾನ್ಯರ ತಲೆಯನ್ನು ನುಣ್ಣಗೆ ಬೋಳಿಸುತ್ತಲೇ ಇರುತ್ತಾನೆ .

‘ಕತ್ಲ ಕಿ ರಾತ್ “ಎನ್ನುವುದು ಹಿಂದಿಯಲ್ಲಿ ಪ್ರಚಲಿತವಿರುವ ಗಾದೆ.  ಹಾಗೆಯೇ ಕನ್ನಡ ಕವಿತೆಗಳೂ ವಚನಗಳೂ ಇವರ ತಂತ್ರದ ಒಂದು ಭಾಗ. ಇಲ್ಲಿ ಕನ್ನಡ ಕವಿತೆಗೂ ಕವಿಗೂ ಮತ್ತು ಕನ್ನಡಿಗರಿಗೂ ಇದರಿಂದ ಒಂದು ನೈಯಾ ಪೈಸೆಯ ಲಾಭವೂ ಇಲ್ಲ.

ಮೋದಿ, ರಾಹುಲ್ ಹಿಂದಿಯವರು ಅವರು ಬರೆದು ಕೊಟ್ಟಿದ್ದನ್ನು ಓದುತ್ತಾರೆ ಎನ್ನುವುದನ್ನು ಒಪ್ಪೋಣ. ಆದರೆ ಬರೆದುಕೊಡುವವರು ಕನ್ನಡಿಗರೇ ಅಲ್ಲವೆ ? ಅವರಿಗಾದರೂ ಈ “ಹುಸಿಗನ್ನಡ ” ದ ಅನಾಹುತದ ಅರಿವು ಇರಬಾರದಿತ್ತೆ? ಈ ಕತ್ಲ ಕಿ ರಾತ್ ನಲ್ಲಿ ಇನ್ನಷ್ಟು ಕವಿತೆಗಳು ಬಲಿಯಾಗದಿರಲಿ.

‍ಲೇಖಕರು avadhi

May 15, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: