ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕತ್ತಲ ಕೋಟೆಯ ಹೂವು

ವಿಶ್ವನಾಥ ಎನ್. ನೇರಳಕಟ್ಟೆ

ಮುಂಬಯಿಯ ಕೆಂಪುದೀಪದ ಆ ಪುಟ್ಟ ಮನೆಯೊಳಗಣ ಮಗು ಕಥೆಗಾಗಿ ಅಮ್ಮನನ್ನು ಪೀಡಿಸತೊಡಗಿತ್ತು. ಕ್ಷಣ ಮೊದಲು ಗಿರಾಕಿಯೊಬ್ಬನ ವಿಕೃತತೆಗಳಿಗೀಡಾಗಿದ್ದ ಅವಳು ಮಗುವಿಗಾಗಿ ಕಥೆ ಹೇಳತೊಡಗಿದಳು-

“ಸುಂದರವಾದ ಉದ್ಯಾನದಲ್ಲಿ ಅರಳಿದ್ದ ಆ ಹೂವಿನಲ್ಲಿ ಎಂದಿಗೂ ಬತ್ತದ ಸೌಂದರ್ಯ, ಪರಿಮಳಗಳಿದ್ದವು. ಕಾಲವುರುಳಿದರೂ ಬಾಡದೇ ಉಳಿಯುವ ಶಕ್ತಿಯಿತ್ತು. ಭಗವಂತನ ಮುಡಿಯನ್ನಲಂಕರಿಸುವ ಆಸೆಯದಕ್ಕೆ. ಆದರೆ ಉದ್ಯಾನದ ಮಾಲೀಕನಿಗೆ ಹಣದಾಹ. ಹೂವಿನ ಕನಸು ಅವನಿಗೆ ಮುಖ್ಯವಾಗಿರಲಿಲ್ಲ. ತುಂಬಿದ ಜೇಬಿನ ಮುದಿ ರಾಕ್ಷಸನೊಬ್ಬನಿಗೆ ಆ ಹೂವನ್ನು ಮಾರಿಬಿಟ್ಟ. ಎರಡು ತಿಂಗಳು ಆ ಹೂವಿನ ಸೌಂದರ್ಯವನ್ನು ಇನ್ನಿಲ್ಲವೆಂಬಂತೆ ಆಸ್ವಾದಿಸಿದ ಆ ರಾಕ್ಷಸ ಕತ್ತಲ ಕೋಟೆಯೊಂದರ ದಪ್ಪ ತಲೆಯ ರಾಕ್ಷಸಿಗೆ ಆ ಹೂವನ್ನು ಮಾರಿ, ಹಣವೆಣಿಸಿಕೊಂಡು ಹೊರಟುಹೋದ….” ಒತ್ತರಿಸಿ ಬಂದ ದುಃಖ ಕಥೆಯ ಓಘಕ್ಕೆ ತಡೆಯೊಡ್ಡಿತು. ಮಗು ಮುಗ್ಧವಾಗಿ ಅಮ್ಮನ ಮುಖವನ್ನೇ ನೋಡುತ್ತಿತ್ತು. ಸೆರಗಲ್ಲಿ ಮುಖವೊರೆಸಿಕೊಂಡವಳು ಕಥೆ ಮುಂದುವರಿಸಿದಳು-

“…ಆ ಕತ್ತಲ ಕೋಟೆಗೆ ಕಿಟಕಿ- ಬಾಗಿಲುಗಳಿರಲಿಲ್ಲ. ಹಸಿದ ರಣಹದ್ದುಗಳು ಹಗಲಿರುಳೆನ್ನದೆ ಅಲ್ಲಿಗೆ ಬರುತ್ತಿದ್ದವು. ಆ ಹೂವಿನ ಅಂಗಾಂಗಗಳ ಮೇಲೆ ಕುಳಿತು, ಮಲಗಿ ಮನಬಂದಂತೆ ಕುಕ್ಕುತ್ತಿದ್ದವು. ಹೂವಿನ ಅಳುವಿಗೆ ಅಲ್ಲಿ ಬೆಲೆಯಿರಲಿಲ್ಲ. ಹೂವು ಅತ್ತಂತೆಲ್ಲಾ ಕುಕ್ಕಿತಿನ್ನುವ ಹಂಬಲ ಆ ರಣಹದ್ದುಗಳಲ್ಲಿ ಜಾಸ್ತಿಯಾಗುತ್ತಿತ್ತು. ಅದೊಂದು ದಿನ ಆ ಹೂವು ಇನ್ನೊಂದು ಹೂವಿಗೆ ಜನ್ಮವಿತ್ತಿತು. ಅದಾದ ಬಳಿಕವೂ ರಣಹದ್ದುಗಳು ಆ ಹೂವನ್ನು ಕುಕ್ಕುವುದನ್ನು ನಿಲ್ಲಿಸಿಲ್ಲ…” ಮಗು ಮಲಗಿರುವುದನ್ನು ಗಮನಿಸಿದ ಅವಳು ಗುಟ್ಟಾಗಿ ಹೇಳಿದಳು- “ಈಗ ಆ ತಾಯಿ ಹೂವಿಗಿರುವ ಹಂಬಲ ಒಂದೇ- ಮರಿ ಹೂವನ್ನು ರಣಹದ್ದುಗಳು ಕುಕ್ಕಿ ತಿನ್ನದಂತೆ ಕಾಪಾಡಿಕೊಳ್ಳಬೇಕು.

” ಕಥೆ ಕೇಳಿ ಮಲಗಿದ್ದ ಮಗುವಿನ ಕಣ್ಣತುಂಬಾ ಕನಸು. ಕುಕ್ಕಿತಿನ್ನಲು ಬಂದ ರಣಹದ್ದುಗಳನ್ನೇ ಕಟ್ಟಿಹಾಕಿದಂತೆ… ತಾಯಿ ಹೂವು- ಮರಿ ಹೂವುಗಳೆರಡೂ ಆ ಕತ್ತಲ ಕೋಟೆಯಿಂದ ಬೆಳಕಿನ ಕಡೆಗೆ ಓಡಿದಂತೆ… ಮಗುವಿನ ಮುಖದಲ್ಲೀಗ ಹೊಸ ಹೊಳಪಿನ ನಗು ತುಂಬಿತ್ತು.

‍ಲೇಖಕರು Avadhi

3 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading